Homeಕರ್ನಾಟಕ40% ಕಮಿಷನ್‌ ಸರ್ಕಾರದ ವಿರುದ್ಧ ಜನಜಾಗೃತಿಗೆ ರಾಜ್ಯ ಪ್ರವಾಸ: ಸಿದ್ದರಾಮಯ್ಯ ಘೋಷಣೆ

40% ಕಮಿಷನ್‌ ಸರ್ಕಾರದ ವಿರುದ್ಧ ಜನಜಾಗೃತಿಗೆ ರಾಜ್ಯ ಪ್ರವಾಸ: ಸಿದ್ದರಾಮಯ್ಯ ಘೋಷಣೆ

‘40% ಕಮಿಷನ್ ದಂಧೆಯ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘವು ಪ್ರಧಾನಿಯವರಿಗೆ ಪತ್ರ ಬರೆದಿತ್ತು. ನರೇಂದ್ರ ಮೋದಿಯವರು ಸುಮ್ಮನಿರುವುದು ಏಕೆ? 40% ಕಮಿಷನ್ ನಲ್ಲಿ ಮೋದಿಯವರಿಗೂ ಪಾಲಿದೆಯಾ?’

- Advertisement -
- Advertisement -

ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರನ ಬಲಿ ಪಡೆದ ಭ್ರಷ್ಟ 40% ಕಮಿಷನ್ ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸಲು ನಾವು 5 ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದ ಪ್ರತಿ ಜಿಲ್ಲೆಗೂ ನಮ್ಮ ಪಕ್ಷದ ನಾಯಕರ ನೇತೃತ್ವದಲ್ಲಿ ತಂಡಗಳಾಗಿ ತೆರಳಿ, ಜನರ ಜೀವ ಮತ್ತು ರಾಜ್ಯದ ಮಾನ ಕಾಪಾಡಲು ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವಂತೆ ಮನವಿ ಮಾಡುತ್ತೇವೆ ಎಂದು ಅವರು ಘೋಷಿಸಿದ್ದಾರೆ.

ನಾಳೆ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿಗಳಿಗೆ ಘೇರಾವ್ ಹಾಕುತ್ತೇವೆ. ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ನಂಬರ್ 2 ಸ್ಥಾನಕ್ಕೇರಿಸಿದ್ದ ಮುಖ್ಯಮಂತ್ರಿಯೂ ಸೇರಿದಂತೆ ಸಾಲು ಸಾಲು ಸಚಿವರು ಜೈಲು ಸೇರಿದ್ದನ್ನು ದೇಶ ಕಂಡಿದೆ. ಈಗ ಈ ಭ್ರಷ್ಟರ ಎರಡನೇ‌ ಅಂಕ ಶುರುವಾಗಿದೆ. ಮತ್ತೆ ದೇಶದ ಮುಂದೆ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ.

ಜಬಾಬ್ದಾರಿಯುತ ವಿರೋಧ ಪಕ್ಷವಾಗಿ ಸಂತೋಷ್ ಪಾಟೀಲ್ ಅವರ ಸಾವಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತೇವೆ. ಇದು ನಮ್ಮ ಕರ್ತವ್ಯ. ಬಿಜೆಪಿ ಸರ್ಕಾರದ ಕಮಿಷನ್ ಕಿರುಕುಳಕ್ಕೆ ಇನ್ನಷ್ಟು ಜೀವಗಳು ಬಲಿಯಾಗಬಾರದು ಎಂದು ಎಚ್ಚರಿಸಿದ್ದಾರೆ.

ಇದು ಕೇವಲ ಕಾಂಗ್ರೆಸ್ ಪಕ್ಷದ ರಾಜಕೀಯ ಪ್ರತಿಭಟನೆಯಾಗಬಾರದು. ಜನರ ಬೆವರ ಗಳಿಕೆಯ ತೆರಿಗೆ ಹಣವನ್ನು ಲೂಟಿ‌ ಮಾಡುತ್ತಿರುವ ಮತ್ತು ರಾಷ್ಟಮಟ್ಟದಲ್ಲಿ ರಾಜ್ಯದ ಮಾನ ಹರಾಜು ಹಾಕುತ್ತಿರುವ ಭ್ರಷ್ಟ ಬಿಜೆಪಿ‌ ಸರ್ಕಾರದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನೂ ಬೀದಿಗಿಳಿಯಬೇಕಾಗಿದೆ ಎಂದು ಆಶಿಸಿದ್ದಾರೆ.

ಇದನ್ನೂ ಓದಿರಿ: 40% ಕಮಿಷನ್‌ ನಿಜ; 25,000 ಕೋಟಿ ರೂ. ಪೆಂಡಿಂಗ್ ಬಿಲ್ ಇದೆ: ಗುತ್ತಿಗೆದಾರರ ಸಂಘದ ಅಧ್ಯಕ್ಷರ ಗಂಭೀರ ಆರೋಪ

ಸಚಿವ ಈಶ್ವರಪ್ಪ ಮೇಲೆ ನಿನ್ನೆಯೇ ಎಫ್.ಐ.ಆರ್ ದಾಖಲಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮುನ್ನ ವಾಟ್ಸ್ ಆ್ಯಪ್ ಮೂಲಕ ಕಳುಹಿಸಿರುವ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ನೇರ ಕಾರಣ ಎಂದು ಬರೆದಿದ್ದಾರೆ. ರಾಜೀನಾಮೆ ಕೊಡುವುದಿಲ್ಲ ಎಂದು ಹಟ ಹಿಡಿದಿರುವ ಈಶ್ವರಪ್ಪನವರಿಗೆ ನರೇಂದ್ರ ಮೋದಿಯಾದಿಯಾಗಿ ಎಲ್ಲಾ ನಾಯಕರು ಮತ್ತು ಸರ್ಕಾರ ಹೆದರುತ್ತಿರುವುದು ಯಾಕೆ? 40% ಕಮಿಷನ್ ನಲ್ಲಿ ಪಾಲು‌ಪಡೆದವರೆಲ್ಲರ ಹೆಸರು ಬಯಲು ಮಾಡುತ್ತೇನೆ ಎಂದು ಈಶ್ವರಪ್ಪ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ 40% ಕಮಿಷನ್ ದಂಧೆಯ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಸುಮ್ಮನಿರುವುದು ಏಕೆ? 40% ಕಮಿಷನ್ ನಲ್ಲಿ ಮೋದಿಯವರಿಗೂ ಪಾಲಿದೆಯಾ? ಎಂದು ಕೇಳಿದ್ದಾರೆ.

ಸಚಿವ ಈಶ್ವರಪ್ಪ ಅವರ ಮೇಲೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದ ಜೊತೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ -13 ರಡಿ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಬೇಕು. ಇದೊಂದು ಗಂಭೀರ ಸ್ವರೂಪದ ಅಪರಾಧ, ಕೂಡಲೇ ಅವರ ಬಂಧನವಾಗಬೇಕು ಎಂದು ಒತ್ತಾಯಿಸುತ್ತೇನೆ. ಈಶ್ವರಪ್ಪ ಅವರನ್ನು ಅನೇಕ ಬಾರಿ ಭೇಟಿ ಮಾಡಿದರೂ ಪ್ರಯೋಜನವಾಗದ ಕಾರಣಕ್ಕೆ ಸಂತೋಷ್ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಮಾಡಿ ಮನವಿ ಮಾಡಿದ್ದರು. ಇವರ ಪ್ರತಿಕ್ರಿಯೆ ಏನು? ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಉದ್ದೇಶದಿಂದ ಸಂತೋಷ್ ಪಾಟೀಲ್ ಉಡುಪಿಗೆ ಹೋಗಿದ್ದರು. ತಮ್ಮ ಕೊನೆ ಪ್ರಯತ್ನವೂ ಫಲ ನೀಡದೆ ಇರುವುದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.‌‌ ಇದರಿಂದ ಕಮಿಷನ್ ಗಾಗಿ ಕಿರುಕುಳ ನೀಡಿದ ಸಚಿವರು ಮಾತ್ರವಲ್ಲ‌ ಮುಖ್ಯಮಂತ್ರಿಗಳೂ ಈ ಸಾವಿಗೆ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿಮಾಡಿ ಮನವಿ ಪತ್ರ ಕೊಟ್ಟಿದೆ. ರಾಜ್ಯಪಾಲರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮತ್ತು ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡುತ್ತಾರೆ ಎಂಬ ಭರವಸೆ ನಮಗಿದೆ ಎಂದಿದ್ದಾರೆ.


ಇದನ್ನೂ ಓದಿರಿ: ಸಂತೋಷ್‌ ಸಾವು ಪ್ರಕರಣ: ಇಂತಹ ನೂರು ಕೇಸ್‌ ನೋಡಿದ್ದೇನೆ; ರಾಜೀನಾಮೆ ನೀಡುವ ಪ್ರಶ್ನೆಯೆ ಇಲ್ಲ: ಕೆ.ಎಸ್‌. ಈಶ್ವರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಆಲ್ ಐಸ್ ಆನ್ ರಫಾ’: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಂಡ ಪೋಸ್ಟ್‌ನ ಅರ್ಥವೇನು?

0
ಇಸ್ರೇಲ್‌ ರಫಾ ಮೇಲಿನ ಆಕ್ರಮಣದ ಮಧ್ಯೆ 'ಆಲ್ ಐಸ್ ಆನ್ ರಫಾ' ಎಂಬ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡಿದೆ. ಭಾರತೀಯ ಸೆಲೆಬ್ರಿಟಿಗಳು ಹೆಚ್ಚಾಗಿ ಈ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಟ ದುಲ್ಕರ್...