1.
ಲೇಖನಿ ಇಲ್ಲದೆ ಹೋಗಿದ್ದಲ್ಲಿ
ಒಂದು ವೇಳೆ
ನನ್ನ ಕೈಯಲ್ಲಿ
ಲೇಖನಿ ಇಲ್ಲದೆ ಹೋಗಿದ್ದರೆ
ಬಹುಶಃ
ಉಳಿ ಇರುತ್ತಿತ್ತು
ಇಲ್ಲ
ಸಿತಾರ್, ಕೊಳಲು,
ಕುಂಚ ಇರುತ್ತಿತ್ತೋ ಏನೋ.
ಏನಿರುತ್ತಿತ್ತೋ ಅದನ್ನು ಬಳಸಿ
ನನ್ನೊಳಗಿನ ಅತೀವ ಕೋಲಾಹಲವನ್ನು
ಅಗೆದು ಹೊರಹಾಕುತಿದ್ದೆ.
2.
ಪೋಣಿಸು
ಅದೆಲ್ಲಿಯ ತನಕ
ಒಳಗಿನ ಕೂಗನ್ನು
ತುಟಿಗಳೊಳಗೆ ಒತ್ತಿಟ್ಟಿರಲಿ
ಕವಿತೆಯ ಸೂಜಿ ಹಿಡಿದು
ಅದೆಷ್ಟು ಹೊಲಿಗೆ ಹಾಕಲಿ
ಸೂಜಿಗಣ್ಣಿನೊಳಕ್ಕೆ ಅದ್ಯಾರು
ಆಕಾಶವನ್ನೇ ಪೋಣಿಸುತ್ತಾರೆ
ಹಾಕಿದ ಹೊಲಿಗೆಗಳಿಂದಲೇ
ಕಿತ್ತು ಬರುತ್ತಿದೆ ಗಾಯ.
3.
ಅ ಮತ್ತು ಆ
ಅ
ಕಾಣೆಯಾದವರ ಮನೆಯಲ್ಲಿ
ಜಾಹಿರಾತಿಗೆ ನೀಡಲು
ಇರುವುದೇ ಇಲ್ಲ
ಒಂದೇ ಒಂದು ಒಳ್ಳೆಯ ಭಾವಚಿತ್ರ
ಆ
ಜಾಹಿರಾತಿಗೆ ನೀಡಲು
ಯಾರ ಒಂದೊಳ್ಳೆ
ಭಾವಚಿತ್ರವೂ ಇರುವುದಿಲ್ಲವೋ
ಅಂಥವರೇ ಮತ್ತೆ ಮತ್ತೆ
ಕಾಣೆಯಾಗುತ್ತಾರೆ.

೪.
ಆನೆ ಮತ್ತು ಮಾವುತ
ಸಾಧು ಆನೆಯೊಂದು
ಭಿಕ್ಷೆ ಬೇಡುತ್ತಾ
ಬಾಗಿಲಿನಿಂದ ಬಾಗಿಲಿಗೆ
ಸಾಗುತ್ತಿದೆ
ವಿಕ್ಷಿಪ್ತ ಮಾವುತನನ್ನು
ಬೆನ್ನ ಮೇಲೆ ಹೊತ್ತು
ಮಾವುತ ಮಾನವ
ಮತ್ತು ಆನೆ ಒಂದು ಪ್ರಾಣಿ
ಆ ಆನೆಗೆ ನಾವು ಕ್ರೂರ ಮೃಗಗಳು
ಅದರ ಮಟ್ಟಿಗೆ ನಮ್ಮ ಶಹರವೂ ಕಾಡೇ
ಇಂಬಳದಂತೆ ಮಾವುತ
ಆನೆಯ ಮೇಲೆ ಕೂತಿದ್ದಾನೆ
ಮತ್ತು ಗುಡ್ಡದಂತಹ ಆನೆ
ತನ್ನದೇ ಪ್ರತಿಭೆಯಿಂದ
ನಾಣ್ಯ ಮತ್ತು ಕಲ್ಲಿನ ನಡುವೆ
ವ್ಯತ್ಯಾಸ ತಿಳಿದುಕೊಂಡಿದೆ
ಅನಾಥನಂತೆ ಆನೆ
ಮಾವುತನಿಗಾಗಿ ಭಿಕ್ಷೆ ಬೇಡುತ್ತಾ
ಬೀದಿ ಬೀದಿ ಅಲೆದಾಡುತ್ತಿದೆ
ಮಾವುತನೋ
ತನ್ನ ನಸೀಬನ್ನು
ಆನೆಯ ವಿಶಾಲ ಹಣೆಯ ಮೇಲೆ
ಬರೆದಿದ್ದಾನೆ: ಓಂ ಶ್ರೀ ಗಣೇಶಾಯ ನಮಃ!
ಮರಾಠಿ ಮೂಲ: ನಾಗರಾಜ್ ಮಂಜುಳೆ
ಕನ್ನಡಕ್ಕೆ: ಸಂವರ್ಥ ಸಾಹಿಲ್
(’ಬಿಸಿಲಿನ ಷಡ್ಯಂತ್ರದ ವಿರುದ್ಧ’ ಕವನ ಸಂಕಲನ ಏಪ್ರಿಲ್ 16ರಂದು ’ತಲ್ಲೂರು ನುಡಿಮಾಲೆ-2022’ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿದೆ.)
ಇದನ್ನೂ ಓದಿ: ಗುರುತುಧಾರಣೆಯ ವಿರುದ್ಧ; ನಾಗರಾಜ್ ಮಂಜುಳೆಯವರ ಕಲಾ ಮೀಮಾಂಸೆ


