Homeಮುಖಪುಟಗುರುತುಧಾರಣೆಯ ವಿರುದ್ಧ; ನಾಗರಾಜ್ ಮಂಜುಳೆಯವರ ಕಲಾ ಮೀಮಾಂಸೆ

ಗುರುತುಧಾರಣೆಯ ವಿರುದ್ಧ; ನಾಗರಾಜ್ ಮಂಜುಳೆಯವರ ಕಲಾ ಮೀಮಾಂಸೆ

- Advertisement -
- Advertisement -

-1-

ಕಲೆಗೆ ಲೋಕದ ಬದುಕಿನ ಅರ್ಥ ವ್ಯಾಖ್ಯಾನವೇ ಆಧಾರ. ಹಾಗಾಗಿ ಒಂದು ಪರಿಚಿತ ಕಥನ ನೋಡೋಣ:
ತಂದೆ ಸಂಸಾರ ತ್ಯಜಿಸಿದ್ದಾನೆ. ದಲಿತ ಜಾತಿಯವಳೆಂದು ಗುರುತಿಸಲ್ಪಡುವ ತಾಯಿಯು ದುಡಿದು ತನ್ನ ಮಕ್ಕಳನ್ನು ವಿದ್ಯಾವಂತರಾಗಿ ಬೆಳೆಸುತ್ತಿದ್ದಾಳೆ. ಬಡತನದಲ್ಲೂ, ಅವಳ ಒಬ್ಬ ಮಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಖಗೋಳ ವಿಜ್ಞಾನದಲ್ಲಿ ಸಂಶೋಧನೆ ನಡೆಸಲು ಖ್ಯಾತ ವಿಶ್ವವಿದ್ಯಾಲಯ ಸೇರುತ್ತಾನೆ. ಅಲ್ಲಿ, ಅಧಿಕಾರದಲ್ಲಿರುವವರನ್ನು ಓಲೈಸುವ ಪರಿಪಾಠವಿದೆ; ಅಲ್ಲಿ ದಲಿತರಿಗೆ ಅವರ ಜಾತಿ ಸ್ಥಾನಮಾನ ತೋರುವ ಅದೃಶ್ಯ ಜಾತಿವ್ಯವಸ್ಥೆ ಇದೆ. ಆ ಯುವಕನಿಗೆ ಇವೆರಡು ಸರಿ ಬರುವುದಿಲ್ಲ. ತನ್ನ ಗುರಿ ತಲುಪಲು ಅವನಿಗೆ ಇರುವ ಒಂದು ದಾರಿ, ಎರಡೂ ಬಗೆಯ ಒತ್ತಡ ಸಹಿಸಿಕೊಂಡು, ತನ್ನ ಗುರಿ ಮುಟ್ಟುವುದು; ಎರಡನೆಯದು ಎರಡು ಬಗೆಯ ಅಧಿಕಾರ ವಿರೋಧಿಸುತ್ತಾ ತನ್ನ ಗುರಿ ಮುಟ್ಟುವುದು. ಯುವಕ ಎರಡನೇ ದಾರಿ ಆಯ್ದುಕೊಳ್ಳುತ್ತಾನೆ. ಆ ಕಾರಣಕ್ಕಾಗಿ ವಿಶ್ವವಿದ್ಯಾಲಯದ ಆಡಳಿತವು, ಅಧಿಕಾರಸ್ಥರ ಒತ್ತಡಕ್ಕೆ ಮಣಿದು ಅವನನ್ನು ವಿಶ್ವವಿದ್ಯಾಲಯದಿಂದ ಹೊರಹಾಕುತ್ತದೆ; ಆತನ ವಿರೋಧ-ಅಹವಾಲುಗಳನ್ನು ಅಸಡ್ಡೆ ಮಾಡುತ್ತದೆ. ಆ ಯುವಕ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾನೆ; ಅವನ ವಿದ್ಯೆಯ ಗುರಿ, ವ್ಯವಸ್ಥೆ ಎದುರು ಬಗ್ಗದೆ ಈಡೇರದು ಎಂದು ಗೊತ್ತಾಗುತ್ತದೆ; ಬಗ್ಗುವ ಬದಲು ಆತ, ತಾನು ನಿಗೂಢ ವಿಶ್ವಕ್ಕೆ ಪಯಣಿಸುವ ಪತ್ರ ಬರೆದು ನೇಣಿನ ಕುಣಿಕೆಗೆ ತಲೆಗೊಡುತ್ತಾನೆ.

ಈ ಕಥನದಲ್ಲಿ ’ಇರುವಿಕೆ’, ’ಸ್ವಾತಂತ್ರ್ಯ’, ’ಸಾಧನೆ’ಗಳ ಅರ್ಥವೇನು? ಜಾತಿಯ ಗುರುತು, ಬಂಡಾಯದ ಗುರುತು, ಜ್ಞಾನಿಯ ಗುರುತು-ಇವುಗಳಲ್ಲಿ ಮೊದಲನೆಯದು ಮತ್ತೆರಡರ ಇರುವಿಕೆಯ ಸ್ವಾತಂತ್ರ್ಯ ಕಸಿಯಬಲ್ಲ ಸಮಾಜವಿದ್ದರೆ, ಅಲ್ಲಿ ಇರುವಿಕೆಗೆ ಅರ್ಥವಾದರೂ ಇದೆಯ? ಕಲಾಕಾರ ಈ ಸಮಸ್ಯೆಯನ್ನು ಎದುರಿಸಿ, ಅದರ ಭಾವವನ್ನು ಅಭಿವ್ಯಕ್ತಿಸುವುದೇ ಕಲಾಭಿವ್ಯಕ್ತಿ

-2-

ಯಾವುದೇ ಕಲೆಯ ಉದ್ದೇಶ: ದೈಹಿಕವಾದ ಐದು ಅನುಭವಗಳ ಮೂಲಕ ಹೇಳಲಾಗದ ಮನೋಭಾವವನ್ನು ಪ್ರಕಟಿಸುವುದು ಹೇಗೆ- ಸ್ಪರ್ಶ-ನಾಲಿಗೆಯ ರುಚಿ-ಮೂಗಿನ ವಾಸನೆ-ಕಣ್ಣ ನೋಟ-ಕಿವಿಗೆ ಬೀಳುವ ಶಬ್ದ-ಇವುಗಳ ಮೂಲಕ ಚೋದಿತವಾಗುವ ದೈಹಿಕ ಪ್ರತಿಕ್ರಿಯೆಗಳ ಹಿಂದಿರುವ ಮನೋಭಾವಗಳ ಅರ್ಥವೇನು- ಎಂಬ ಹುಡುಕಾಟ ಎನ್ನುವುದು ಸುಲಭ ಸೂತ್ರ.

ದೈಹಿಕ ಅನುಭವ-ಪ್ರಚೋದಿತವಾಗುವ ಮನೋಭಾವಗಳ ಪರಿಣಾಮವಾದ ದೈಹಿಕ ಪ್ರತಿಕ್ರಿಯೆಗಳ ನಡುವೆ ಒಂದು ಮನುಷ್ಯ ಸಮಾಜ ಹಾಗು ಅದರ ಸಂಹಿತೆಗಳು ಇವೆ. ಹೀಗಾಗಿ ಪ್ರಚೋದಿತವಾಗುವ ಮನೋಭಾವ ಹಾಗು ದೈಹಿಕ ಪ್ರತಿಕ್ರಿಯೆಗಳ ನಡುವೆ ದೇಶ-ಕಾಲಗಳು ನಿಯಂತ್ರಿಸುವ ಸಂಹಿತೆಗಳ ಕಗ್ಗಂಟು ಇದೆ. ಈ ಕಗ್ಗಂಟನ್ನು ಬಿಡಿಸುವಾಗ ಪ್ರಕಟವಾಗುವ ಭಾವವನ್ನು ಹೇಳುವುದು ಮನುಷ್ಯ ಪ್ರಪಂಚದಲ್ಲಿ ಕಲೆಯ ಉದ್ದೇಶವಾಗುವುದು ಅನಿವಾರ್ಯವಾಗಿದೆ; ಅಥವ ಕಲಾಕಾರ-ಕಲಾನುಭವಿಗಳ ನಡುವೆ ಕೊಂಡಿಯಾದ ಕಲಾ ಮೀಮಾಂಸೆಯ ಜವಾಬ್ದಾರಿಯೂ ಆಗಿದೆ. ಜಾತಿ, ಮತ, ಲಿಂಗ ಭೇದಗಳ ಸಂಹಿತೆಗಳು ಕಿಕ್ಕಿರಿದಿರುವ ನಮ್ಮ ನಾಡಲ್ಲಿ ಕಲೆಯೂ ಕಲಾನುಭವವೂ ತನಗೆತಾನೇ ಮನುಷ್ಯ ಪ್ರಪಂಚದಲ್ಲಿ ಬದುಕನ್ನು ಅರ್ಥ ಮಾಡಿಕೊಳ್ಳುವ ಸಾಮಾಜಿಕ ಅಭಿವ್ಯಕ್ತಿಯೂ ಆಗಿದೆ. ಪ್ರತಿರೋಧಿ ಕಲಾ ಮೀಮಾಂಸೆಯ ಕುರಿತ ಈ ವಿಚಾರಗಳಲ್ಲಿ ಹೊಸತೇನು ಇಲ್ಲ; ಆದರೆ, ಮಂಜುಳೆಯವರ ಪದ್ಯ ಸಂಕಲನದ ಕುರಿತು ಈ ಮಾತನ್ನು ಮತ್ತೊಮ್ಮೆ ಹೇಳುವುದಕ್ಕೆ ಕಾರಣವಿಷ್ಟೇ: ಅವರ ಕಾವ್ಯವು ನಮಗೆ ಪರಿಚಿತವಿರುವ ಪ್ರತಿರೋಧಿ ಕವಿ ಸಮಯಗಳಿಗಿಂತ ಭಿನ್ನವಾದ ಭಾವಾಭಿವ್ಯಕ್ತಿಯಾಗಿದೆ.

“ಹಿಂದುಗಳಲ್ಲಿ ಸಾರ್ವಜನಿಕ ಸದಾಚಾರ, ಸಮಾಜ ಸೇವಾಮನೋಭಾವ, ಸಮುದಾಯ ಸಹೋದರತ್ವ ಭಾವ – ಎಲ್ಲವೂ ಜಾತಿಯೊಳಗೆ ಶುರುವಾಗಿ, ಜಾತಿಯೊಳಗೇ ಮುಗಿಯುತ್ತವೆ. ಜಾತಿಯು ಸಾರ್ವಜನಿಕ ಭಾವ ಸ್ಪೂರ್ತಿಯನ್ನು ಕೊಲ್ಲುತ್ತದೆ” ಎಂದು ಅಂಬೇಡ್ಕರ್ ಹೇಳುತ್ತಾರೆ (ಅನಿಹಿಲೇಷನ್ ಆಫ್ ಕ್ಯಾಸ್ಟ್, 13-1). ಸಾರ್ವಜನಿಕ ಸ್ಥಳಗಳಾದ ಹಾದಿ-ಬೀದಿ, ಕೆರೆ-ನದಿಗಳ ನೀರು, ಆಹಾರ ಸೇವನೆಯ ಸ್ಥಳ, ಬಾಡಿಗೆ ಮನೆ, ದೇವಸ್ಥಾನ, ಜಾತ್ರೆ-ಹಬ್ಬ ಆಚರಣೆ, ಶಾಲೆ-ಕಾಲೇಜುಗಳು-ಎಲ್ಲವೂ ಸಮುದಾಯ ಸಮ್ಮಿಲನದ ಅವಕಾಶಗಳು ಎನ್ನುತ್ತೇವೆ; ಯಾವೆಲ್ಲಾ ’ಸೋದರತ್ವ’ವನ್ನು ಬೆಸೆಯಬಲ್ಲ ಸಾರ್ವಜನಿಕ ಅವಕಾಶಗಳೋ, ಅವು ಎಲ್ಲ ಜಾತಿ ಸೋಂಕಿನಿಂದ ರೋಗಗ್ರಸ್ತವಾಗಿವೆ ಎಂದು ಅವರು ವಿವರಿಸುತ್ತಾರೆ. ’ಅಸ್ಪರ್ಷ ಜಾತಿ’ಗೆ ಸೇರಿದ ವ್ಯಕ್ತಿಗಳು ಸಾರ್ವಜನಿಕ ಬದುಕಿನಲ್ಲಿ ’ಸ್ವಂತ ವ್ಯಕ್ತಿತ್ವವುಳ್ಳ ಸಮಾನ ನಾಗರಿಕ’ ಎಂದು ಪರಿಗಣಿತವಾಗದೆ, ಅವರ ಜಾತಿ ಗುರುತಿಸಿ ಕೀಳಾಗಿ ವರ್ತಿಸುವ ಹಿಂಸೆಯ ಬಗೆಗಳನ್ನು ಅವರು ತಮ್ಮ ಬದುಕಿನ ಅನುಭವ ಕಥನ ’ವೇಟಿಂಗ್ ಫಾರ್ ವೀಸಾ’ದಲ್ಲಿ ನಿರೂಪಿಸುತ್ತಾರೆ. ತನ್ನ ಸ್ವಂತ ವ್ಯಕ್ತಿತ್ವ ಪ್ರಕಟಿಸಲು ಎಳ್ಳುಕಾಳಿನಷ್ಟೂ ಅವಕಾಶವಿರದ ಸಮಾಜದಲ್ಲಿ, ವ್ಯಕ್ತಿ ಅನುಭವಿಸುವ ಜೀವಜಿಗುಪ್ಸೆಯು ಈ ಕಥನಗಳಲ್ಲಿ ಸ್ಥಾಯಿ ಭಾವವಾಗಿದೆ. ’ಸ್ವಂತಿಕೆಯ
ಇರುವಿನ ಗುರುತ’ನ್ನು (ಇಂಡಿವಿಜ್ಯುವಲ್ ಐಡೆಂಟಿಟಿ) ನಿರಾಕರಿಸುವ ರಿವಾಜುಗಳ ಸಮಾಜದಲ್ಲಿ, ’ಸ್ವಂತದ ಇರುವಿಕೆಯ ಎಲ್ಲ ಗುರುತುಗಳನ್ನೂ ಅರ್ಥಹೀನವೆಂದು ನಿರಾಕರಿಸುವ ತತ್ವವು (ನಿಹಿಲಿಸಂ) ಭಾವಾಭಿವ್ಯಕ್ತಿಯ ಸಂವೇದನೆ ಆಗಿಬಿಡುತ್ತದೆ. ಈ ಸನ್ನಿವೇಶದಲ್ಲಿ, ದೈಹಿಕ ಅನುಭವದಿಂದ ಚೋದಿತವಾಗುವ ಪ್ರತಿಕ್ರಿಯೆಗಳ ಅರ್ಥಹೀನ ಭಾವರೂಪಗಳನ್ನು ಪ್ರಕಟಿಸುವ ಕಲಾಭಿವ್ಯಕ್ತಿ ಮಾರ್ಗವು- ’ನಿಹಿಲಿಸ್ಟ್ ಎಕ್ಸ್‌ಪ್ರೆಷನಿಸಂ’ – ಸಾಮಾಜಿಕ ಹಿಂಸೆಯ ಕಡು ವ್ಯಾಖ್ಯಾನವೇ ಆಗಿರುತ್ತದೆ. ಮಂಜುಳೆಯವರ ಕಲಾಭಿವ್ಯಕ್ತಿಯು ಈ ಬಗೆಯದು; ಅವರ ಪದ್ಯಗಳಲ್ಲೂ, ಸಿನೆಮಾಗಳಲ್ಲೂ ನಿಹಿಲಿಸ್ಟ್ ಎಕ್ಸ್‌ಪ್ರೆಷನಿಸಂನ ಭಾವರೂಪಗಳನ್ನು, ಮಂಜುಳೆತನ ಎಂದು ಹೇಳಬಹುದಾದಷ್ಟು ಶಕ್ತಿಶಾಲಿಯಾಗಿ, ನಾವು ಕಾಣಬಹುದು.

-3-

ಮಂಜುಳೆ ಕನ್ನಡದ ಓದುಗರಿಗೆ, ಕಾವ್ಯಕ್ಕಿಂತ ಮೊದಲಾಗಿ ಅವರ ಎರಡು ಪ್ರಭಾವಶಾಲಿ ಸಿನೆಮಾಗಳಾದ ’ಫಂಡ್ರಿ’ ಹಾಗು ’ಸೈರಾಟ್’ ಮೂಲಕ ಚಿರಪರಿಚಿತರು. ಸಿನೆಮಾ ರಚನೆಯ ವಿಧಾನದಲ್ಲಿ ಮಂಜುಳೆ ’ಎಕ್ಸ್‌ಪ್ರೆನಿಸ್ಟ್’ ಅಭಿವ್ಯಕ್ತಿ ವಿಧಾನವನ್ನು ಬಳಸದೇ, ಸ್ಥಾಪಿತ ’ಮೂರು ಅಂಕಗಳ ಕಥಾ ಕಮಾನು’ ವಿಧಾನವನ್ನೇ ಬಳಸುತ್ತಾರೆ. ಆದರೆ, ಕೊನೆಯ ಅಂಕದ ’ಸಂಘರ್ಷ ಇತ್ಯರ್ಥ’ (ಡಿನೋಮೆಂಟ್) ಹಂತದಲ್ಲಿ, ಇಡೀ ರಚನೆಯನ್ನೇ ಒಡೆಯುವ ಒಂದು ’ನಿಹಿಲಿಸ್ಟ್ ಎಕ್ಸಪ್ರೆಶನ್’ನ ಒಂದು ದೃಶ್ಯ ರೂಪಕವನ್ನು ಕಟ್ಟಿ ಸಿನೆಮಾದ ಅರ್ಥವನ್ನೇ ಬದಲಾಯಿಸಿಬಿಡುತ್ತಾರೆ.

’ಫಂಡ್ರಿ’ಯ ನಾಯಕ ಜಬ್ಯಾ ಹಂದಿ ಹಿಡಿಯುವ ಕೈಕಡಿ ಎಂಬ ಜಾತಿಗೆ ಸೇರಿದ ಹದಿಹರೆಯಕ್ಕೆ ಕಾಲಿಟ್ಟ ಹುಡುಗ. ಅವನಿಗೆ ತನ್ನ ಸಹಪಾಠಿ ಮೇಲ್ಜಾತಿಯ ಹುಡುಗಿ ಶಾಲು ಮೇಲೆ ಪ್ರೀತಿ ಉಂಟಾಗಿದೆ. ಅವರು ವಾಸಿಸುವ ಹಳ್ಳಿಯಲ್ಲಿ ಜಾತಿನಿಂದನೆ ನಿತ್ಯ ವ್ಯವಹಾರ; ಆದರೆ ಜಬ್ಯಾನಿಗೆ ತನ್ನ ವ್ಯಕ್ತಿತ್ವದ ಗುರುತನ್ನು ತೋರಿ ಶಾಲುವಿನ ಪ್ರೀತಿ ಗೆಲ್ಲುವ ಸಾಹಸವೇ ಜಾತಿ ಅಸಮಾನತೆಯ ನೋವನ್ನು ಕಡೆಗಾಣಿಸುವಂತೆ ಮಾಡುತ್ತಿದೆ- ತಾನು ಪ್ರಿಯಕರನಾಗಿರುವ ಗುರುತನ್ನು ಮುಂದೊತ್ತಲು ಅವನು ತನ್ನ ಜಾತಿ ಗುರುತನ್ನು ಹಲ್ಲುಕಚ್ಚಿ ಸಹಿಸಬಲ್ಲ. ಅಪಶಕುನದ ಸಂಕೇತವಾದ ಕಪ್ಪು ಗುಬ್ಬಿಯನ್ನು ಹಿಡಿದು ಸುಟ್ಟು, ಅದರ ಬೂದಿಯನ್ನು ಶಾಲುಳ ಮೇಲೆ ಎರಚಿದರೆ, ಅವಳು ನಿನ್ನ ಪ್ರೀತಿಗೆ ವಶವಾಗುತ್ತಾಳೆ ಎಂಬ ಮಾಂತ್ರಿಕ ವಿಧಾನವನ್ನು ಅವನ ಗುರು ಚಂಕ್ಯ ಅವನಿಗೆ ಬೋಧಿಸಿಬಿಟ್ಟಿದ್ದಾನೆ-ಜಬ್ಯಾನ ಜೀವನದ ಗುರಿ ಅದೇ ಆಗಿಬಿಟ್ಟಿದೆ. ಸಿನೆಮಾದ ಕೊನೆಯ ಅಂಕದಲ್ಲಿ, ಊರಿನ ಪವಿತ್ರ ಆಚರಣೆಗೆ ಅಡಚಣೆಯಾಗುತ್ತಿರುವ ಹಂದಿಗಳನ್ನು ಹಿಡಿಯುವುದಕ್ಕೆ ಜಬ್ಯಾನೂ ಸೇರಿದಂತೆ ಈಡಿ ಕುಟುಂಬವೇ ಕಣಕ್ಕೆ ಇಳಿದಾಗ, ಶಾಲುವೂ ಸೇರಿದಂತೆ ಇಡೀ ಊರ ಜನವೇ ಪ್ರೇಕ್ಷಕ ಗಣವಾಗಿದೆ. ತನ್ನ ಈ ಕೀಳು ವೃತ್ತಿಯ ಕಾರಣ ಶಾಲುಳ ಕಣ್ಣಲ್ಲಿ ಅಲ್ಪನಾಗಿ ಪ್ರಿಯಕರನ ಗುರುತು ನಾಶವಾಗುವ ಆತಂಕದ ನಡುವೆಯೂ, ಜಬ್ಯಾ ಕಪ್ಪು ಗುಬ್ಬಿಯನ್ನು ಹೊಡೆದು ಕೊಲ್ಲಲು ಹವಣಿಸುತ್ತಿದ್ದಾನೆ.

ಆದರೆ, ಆಗಬೇಕಾದ ದುರಂತ ಆಗಿಯೇಬಿಡುತ್ತದೆ; ಶಾಲುಳ ಕಣ್ಣಲ್ಲಿ ಇವನೊಬ್ಬ ಕೈಕಡಿಯಾಗಿ, ಅವನ ಪ್ರಿಯಕರನ ಗುರುತು ಛಿದ್ರ ಚೂರಾಗಿದೆ. ಈ ಅವಮಾನದಲ್ಲಿ ಕುಟುಂಬವು ಹಿಡಿದ ಹಂದಿಗಳನ್ನು ಹೊತ್ತು ಹೊರಟದ್ದನ್ನು ಊರು ಮೆರವಣಿಗೆಯಂತೆ ನೋಡುವಾಗ, ಗೋಡೆಗಳ ಮೇಲೆ ಚಿತ್ರಿತವಾಗಿರುವ ಜಾತಿಯತೆಯ ವಿರುದ್ಧ ಸೆಣೆಸಿದ ಮಹಾನ್ ವ್ಯಕ್ತಿಗಳ ಚಿತ್ರಗಳು ದುರಂತದ ಗಾಢತೆಯನ್ನು ಹೆಚ್ಚಿಸುವಂತೆ ಕಾಣುತ್ತವೆ. ಇಲ್ಲಿಗೆ ಸಿನೆಮಾ ಮುಗಿದು, ಒಂದು ಪರಿಣಾಮಕಾರಿ ದುರಂತ ಸಿನೆಮಾ ನೋಡಿದೆವು ಎಂದು ಭಾವಿಸಿಕೊಳ್ಳುತ್ತಿರುವಾಗಲೇ, ಮಂಜುಳೆ ದಂಗು ಹೊಡಿಸುವ ದೃಶ್ಯವೊಂದನ್ನು ಕಟ್ಟಿಬಿಡುತ್ತಾರೆ: ಒಬ್ಬ ಮೇಲ್ಜಾತಿಯ ತುಡುಗ ತರುಣ, ಜಬ್ಯಾನ ಅಕ್ಕನ ಬಗ್ಗೆ ಕೊಳಕು ಮಾತಾಡಿದ್ದೇ, ಜಬ್ಯಾನಲ್ಲಿ, ಹಿಂದೆಂದೂ ಇರದ ಸಿಟ್ಟು ಬಡಿದೆದ್ದು, ಆತ ಕಲ್ಲೊಂದನ್ನು ಎತ್ತಿಕೊಂಡು ಆ ಯುವಕನ ಕಡೆ ಎಸೆಯುವ ಸಮೀಪ ದೃಶ್ಯವನ್ನು ಕಡಿದು ಇಡಿ ಪರದೆಯ ಮೇಲೆ ಕಪ್ಪು ಆವರಿಸಿಕೊಳ್ಳುತ್ತದೆ. ಜಬ್ಯಾ ನೆಚ್ಚಿಕೊಂಡಿದ್ದ, ಮಾಂತ್ರಿಕವಾಗಿ ಪ್ರಿಯಕರನ ಗುರುತು ಪಡೆಯುವ ಉದ್ದೇಶವೂ ನುಚ್ಚುನೂರಾದಾಗ, ಆ ಮಾರ್ಗವೂ ಅರ್ಥಹೀನವಾಗಿ ಜಬ್ಯಾನಲ್ಲಿ ಹುಟ್ಟುವ ಆಕ್ರೋಶಕ್ಕೆ ಮಂಜುಳೆ ಕಟ್ಟುವ ಎಕ್ಸ್‌ಪ್ರೆಶನಿಸ್ಟ್ ದೃಶ್ಯರೂಪಕವು, ಜಬ್ಯಾನಂತಹ ದಲಿತ ಹುಡುಗನಲ್ಲಿ ಹುಟ್ಟುವ, ತನ್ನ ಇರುವೇ ಅರ್ಥಹೀನವಾಗುದ ನಿಹಿಲಿಸ್ಟ್ ಭಾವಕ್ಕೆ ರೂಪಕವು ಹೇಗೋ ಹಾಗೇ, ತೆರೆ ಎದಿರು ಇರುವ ಜಾತಿ ಸಮುದಾಯದ ಸಂವೇದನಾಹೀನವಾದ ಕಪ್ಪು ರಂಧ್ರಕ್ಕೂ ರೂಪಕವಾಗಿಬಿಡುತ್ತದೆ.

ನಾಗರಾಜ್ ಮಂಜುಳೆ

’ಸೈರಾಟ್’ ಸಿನೆಮಾದ ಪರ್ಶ್ಯಾ ಮತ್ತು ಆರ್ಚಿ, ತಮ್ಮ ನಡುವಿನ ಪ್ರೀತಿಯನ್ನೇ ತಮ್ಮ ಇರುವಿಕೆಯ ಗುರುತಾಗಿಸಿಕೊಂಡು, ಆ ಸಂಕಲ್ಪದಲ್ಲಿ ಜಾತಿ ಸಂಕೋಲೆಗಳನ್ನೂ, ಸಾಮಾನ್ಯ ಬದುಕಿನ ಬವಣೆಗಳನ್ನೂ ಮೀರುವಾಗ, ತಮ್ಮ ಸುತ್ತ ನಡೆಯುತ್ತಿರುವ ಹಿಂಸೆಗಳಿಗೆ ಮನಗೊಡದೆ, ಪ್ರೀತಿಯ ಗುರುತಿನ ತಮ್ಮ ಇರುವಿಕೆಯನ್ನು ಕಾಪಾಡಿಕೊಳ್ಳುವಲ್ಲಿ ಸಫಲರಾಗಿರುತ್ತಾರೆ. ಸಫಲತೆ ಎಷ್ಟೆಂದರೆ, ಆ ಇರುವಿಕೆಗೆ ಅರ್ಥ ಕೊಡುವ ಗೋಡೆಯ ಮೇಲಿನ ಸಂಸಾರದ ಫೋಟೋಗಳು ಹಾಗು ಪ್ರೀತಿಯ ಫಲವಾದ ಪುಟ್ಟ ಮಗುವಿನ ಸಹಿತವಾಗಿರುವಷ್ಟು. ’ಪ್ರತಿ ರೋಮಿಯೋ ಜೂಲಿಯೆಟ್’ ಕಥನವಾಗಿ ಸಿನೆಮಾ ಮುಗಿಯುತ್ತದೆ ಎನಿಸುವಾಗ, ಮಂಜುಳೆ ಒಂದು ಘನವಾದ ಎಕ್ಸ್‌ಪ್ರೆಶನಿಸ್ಟ್ ದೃಶ್ಯ ರೂಪಕ ಕಟ್ಟುತ್ತಾರೆ: ವಿಶಾಲ ಬಾಂದಳದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಗಳ ಗುಂಪು- ಕೆಳಗೆ ನೆಲದಲ್ಲಿ, ಕೊಲೆಯಾದ ಪರ್ಶ್ಯಾ-ಆರ್ಚಿಯರ ರಕ್ತದಲ್ಲಿ ನೆಂದ ಪಾದದ ಗುರುತು ಮೂಡಿಸುತ್ತಾ ಅಳುತ್ತಾ ಬೀದಿಗೆ ಬಿದ್ದ ಅವರ ಮಗು. ಸಮಾಜದ ಜಾತಿಯತೆಯು, ಬೇರೆಲ್ಲಾ ಆಸರೆಗಳನ್ನು ತ್ಯಜಿಸಿದ ತಂದೆ ತಾಯಿಯರಿಂದ, ಪ್ರೀತಿಯೆಂಬ ಇರುವಿಕೆಯ ಗುರುತನ್ನು ಪಡೆದ ಮಗುವಿನ ಪಾಲಿಗೆ, ಆ ಗುರುತನ್ನು ಅರ್ಥಹೀನಗೊಳಿಸುವಷ್ಟು ಕ್ರೂರ. ಈ ಕ್ರೌರ್ಯಕ್ಕೆ ಮಂಜುಳೆ ಕಟ್ಟಿದ ದೃಶ್ಯ ರೂಪಕವು, ಜಗತ್ತಿನ ಖ್ಯಾತ ಎಕ್ಸ್‌ಪ್ರೆಶನಿಸ್ಟ್ ಕಲಾಭಿವ್ಯಕ್ತಿಗಳಿಗೆ ಸಮನಾಗಿ ನಿಲ್ಲುವಂತಿದೆ.

-4-

ಮಂಜುಳೆಯವರ ಕವನಸಂಕಲನದ ಬಗ್ಗೆ ಬರೆಯುವಾಗ, ಅವರ ಸಿನೆಮಾದ ಬಗ್ಗೆ ಮಾತನಾಡುವುದಕ್ಕೆ ಕಾರಣವಿಷ್ಟೇ: ಅವರ ಎರಡು ಸಿನೆಮಾಗಳಿಗೆ ವಿಶಿಷ್ಟತೆ ತಂದುಕೊಟ್ಟ, ನಿಹಿಲಿಸ್ಟ್ ಎಕ್ಸ್‌ಪ್ರೆಶನಿಸಂ, ಅವರ ಕಾವ್ಯ ರಚನೆಯ ಭಾವಾಭಿವ್ಯಕ್ತಿಯ ಕಲಾ ಮಾರ್ಗವೂ ಆಗಿದೆ. ಈ ಸಂಕಲನದ ಪ್ರತಿ ಪದ್ಯವೂ ಆ ಬಗೆಯ ಭಾವಾಭಿವ್ಯಕ್ತಿಯ ರೂಪಕ ಶಕ್ತಿಯನ್ನೂ, ಅಂತಹ ರೂಪಕದಿಂದ ಹೊಮ್ಮುವ ಸಾಮಾಜಿಕ ವ್ಯಾಖ್ಯಾನವನ್ನೂ ಪ್ರಕಟಿಸುತ್ತವೆ. ನಿಹಿಲಿಸಂ, ಒಂದು ತತ್ವವಾಗಿ, ವ್ಯಕ್ತಿ ವಿಶಿಷ್ಟತೆ (ಇಂಡಿವಿಜ್ಯುಯಲಿಸ್ಟ್) ಕಣ್ಣೋಟದಿಂದ ಮನುಷ್ಯ ಬದುಕಿನ ಇರುವಿಕೆಗೆ ಹಚ್ಚಿಕೊಂಡಿರುವ ಹಲವು ನಮೂನೆಯ ಗುರುತುಗಳ ಅರ್ಥಹೀನತೆಯನ್ನು ಎತ್ತಿತೋರುತ್ತದೆ; ಈ ಕಾರಣವಾಗಿ ಅದು ಸಮಾಜ ವಿಮುಖವಾದ ವ್ಯಕ್ತಿವಾದಿ ನಿರಾಶವಾದವೆಂದು ಮೇಲ್ನೋಟಕ್ಕೆ ತಳ್ಳಿಹಾಕಿಬಿಡುವುದು ಸಾಮಾನ್ಯವಾಗಿದೆ.

ಆದರೆ, ಅದು ಮನುಷ್ಯರು ತಮ್ಮ ಇರುವಿಕೆಯನ್ನು ಸಾರ್ಥಕಗೊಳಿಸಿಕೊಳ್ಳಲು ಧರಿಸುವ ಗುರುತುಗಳ ಠಕ್ಕುತನವನ್ನು ತೀಕ್ಷ್ಣವಾಗಿ ಛೇದಿಸುತ್ತದೆ ಮತ್ತೂ ಅಂತಹ ಠಕ್ಕುತನದಿಂದ ಸಮಾಜದಲ್ಲಿ ನೆಲೆಸಿರುವ ಇತರರನ್ನು ಪ್ರತಿನಿಧಿಸುವ ಅಧಿಕಾರ ಚಲಾವಣೆಯನ್ನು ವಿರೋಧಿಸುತ್ತದೆ. ಸಮಾಜದಲ್ಲಿ ಬದುಕುವ ಮನುಷ್ಯನೊಬ್ಬ ’ಇಂಥಾ ಲಿಂಗ/ ಜಾತಿ/ ಮತ/ ಭಾಷೆ/ ಜನಾಂಗ/ ರಾಷ್ಟ್ರೀಯತೆ/ ವಿಚಾರಧಾರೆ’ಯನ್ನು ತನ್ನ ಸಾಮಾಜಿಕ ಇರುವಿಕೆಯ ಗುರುತಾಗಿ ಇಟ್ಟುಕೊಂಡಿದ್ದರೆ, ಅದು ಅವರವರ ವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಪೂರ್ಣ ಸತ್ಯವಲ್ಲ. ಈ ಗುರುತನ್ನು ಪ್ರಮಾಣವಾಗಿಟ್ಟುಕೊಂಡು, ವ್ಯಕ್ತಿಯು ತನ್ನ ಗುರುತಿನ ಮೇಲ್ಲೈಯನ್ನು ಸ್ಥಾಪಿಸುವ, ಸಮ ಗುರುತಿನವರನ್ನು ಪ್ರತಿನಿಧಿಸುವ, ಇತರ ಗುರುತಿನವರನ್ನು ನಿಯಂತ್ರಿಸುವ ಅಧಿಕಾರವಿದೆ ಎನ್ನುವಂತೆ ವರ್ತಿಸತೊಡಗುವುದು ಇತರರ ಇರುವಿಕೆಯ ಸ್ವಾತಂತ್ರ್ಯಹರಣವಾಗುವುದು ಒಂದು; ಆ ಠಕ್ಕು ನಂಬಿಕೆಯಲ್ಲಿ, ತನ್ನ ಇರುವಿಕೆಯು ತನ್ನ ಗುರುತಿನಿಂದಲೇ ಬಂಧಿತವಾಗಿ, ಬಂಧನದಿಂದ ಬಿಡುಗಡೆ ಪಡೆಯುವ ಅಂತರಂಗ ಶೋಧದ ಗುಣವನ್ನೇ ಕಳೆದುಕೊಳ್ಳುವುದು ಮತ್ತೊಂದು. ಮೊದಲ ಬಗೆಯ ದುರ್ಜನರ ಉದಾಹರಣೆಗಳನ್ನು ಈ ನಾಡಿನ ಓದುಗರಿಗೆ ವಿವರಿಸುವುದು ಅನಗತ್ಯ; ಎರಡನೇ ಬಗೆಯ ಅಂತರಂಗ ಬಂಧನದ ತಳಮಳವನ್ನು ’ಇಷ್ಟ ದೈವದ ಭಕ್ತಿ’ಯನ್ನು ಇರುವಿಕೆಯ ಅಡಿಪಾಯವಾಗಿಸಿಕೊಂಡ ಸಜ್ಜನರಲ್ಲಿ ನಾವು ಕಾಣಬಹುದು. ಸ್ವೀಡನ್ನಿನ ಸಿನೆಮಾ ನಿರ್ದೇಶಕ ರಾಯ್ ಯಾಂಡರ್ಸನ್ ತನ್ನ 2019ರ ’ಅಬೌಟ್ ಎಂಡ್‌ಲೆಸ್‌ನೆಸ್ಸ್’ ಎಂಬ ಕಲಾಕೃತಿಯಲ್ಲಿ ಈ ಎರಡೂ ಬಗೆಯ ಗುರುತುಧಾರಿ ಇರುವಿಕೆಯ ಅರ್ಥಹೀನತೆಯನ್ನು ಘನವಾಗಿ ಶೋಧಿಸಿದ್ದಾನೆ. ಈ ಸಿನೆಮಾದಲ್ಲಿ, ಕ್ರೈಸ್ತ ಮತದಲ್ಲಿ ಶ್ರದ್ಧೆ ಇಟ್ಟುಕೊಂಡು, ಬಹುಕಾಲ ಪಾದ್ರಿಯಾಗಿ ಇರುವ ವ್ಯಕ್ತಿಯೊಬ್ಬನಿಗೆ, ಒಂದು ಹಂತದಲ್ಲಿ ತನಗೆ ಮತ ನಂಬಿಕೆ ಕಳೆದುಹೋಗಿದೆ ಅನ್ನಿಸಿದ್ದೇ, ಪಾದ್ರಿ ಎಂಬ ಗುರುತುಧಾರಣೆ ಠಕ್ಕುತನದ್ದು ಎನ್ನುವ ತಳಮಳ ಶುರುವಾಗಿ, ಮನೋವೈದ್ಯರ ಬಳಿ ’ನಾನು ನಂಬಿಕೆ ಕಳೆದುಕೊಂಡಿರುವೆ, ನನ್ನನ್ನು ಬಿಡುಗಡೆಗೊಳಿಸಿ’ ಗೋಗರೆಯತೊಡಗುತ್ತಾನೆ; ’ವೈದ್ಯ’ನೆಂಬ ಅಧಿಕಾರಸ್ಥ ಗುರುತುಧಾರಿಯು ಈ ಸಮಸ್ಯೆಗೆ ತನ್ನಲ್ಲಿ ಉತ್ತರವಿಲ್ಲವೆಂದು ಗೊತ್ತಾಗಿ, ಪಾದ್ರಿಯಿಂದ ಮುಖ ತಪ್ಪಿಸಿಕೊಳ್ಳುವ ಸಬೂಬುಗಳ ಠಕ್ಕಿನಲ್ಲಿ ಬೀಳುತ್ತಾನೆ. ಇಂತು ನಿಹಿಲಿಸ್ಟ್ ತತ್ವವು ಇರುವಿಗೆ ಗುರುತುಧಾರಣೆ ಮಾಡಿಕೊಳ್ಳುವ ಮನುಷ್ಯರ ಸಾಚಾತನವನ್ನು ಶೋಧಿಸುತ್ತದೆ.

ಸಾವು ಮಾತ್ರವೇ ಸತ್ಯವಾದ ದೇಹಧಾರಿಯಾಗಿ ಇರುವುದು ಮನುಷ್ಯನ ವಿಧಿ; ದೇಹಧಾರಿಗೆ ನಮ್ಮ ನಾಡಲ್ಲಿ ಅಮರಿಕೊಳ್ಳುವ ಎಲ್ಲಾ ಗುರುತುಧಾರಣೆಗಳ ಅರ್ಥಹೀನತೆಯನ್ನು ಭಾವಚಿತ್ರಗಳಾಗಿ ಕಟ್ಟುವುದು ಮಂಜುಳೆಯವರ ಕಾವ್ಯದ ಕಲಾಕಸುಬು. ಇಲ್ಲಿನ ಪ್ರತಿ ಪದ್ಯವೂ ರೂಢಿಗತವಾಗಿ ಸಹಜವೆಂದು ಪರಿಗಣಿತವಾಗುವ ಗುರುತುಧಾರಣೆಗಳ ಸಾರ್ಥಕತೆಯನ್ನು ಪ್ರಶ್ನಿಸುತ್ತವೆ. ಇಲ್ಲಿನ ಬಹಳಷ್ಟು ಪದ್ಯಗಳಲ್ಲಿ ಪ್ರಿಯಕರನ ಗುರುತುಧಾರಣೆಯೂ ಅರ್ಥಹೀನವೆನಿಸುವ ಭಾವಚಿತ್ರಗಳಾಗಿವೆ. ದೇಹಧಾರಣೆ ಭೂಮಿಯ ಸಕಲ ಜೀವಜಂತುಗಳಿಗೂ, ಮನುಷ್ಯರಿಗೂ ಸಾಮಾನ್ಯವಾಗಿ ಇರುವಂತಹುದು; ಇತರ ಜೀವಜಂತುಗಳಿಗೆ ದೇಹಧಾರಣೆಯೇ ಅವುಗಳ ಗುರುತುಧಾರಣೆ-ಕಾಮ ಅಲ್ಲಿ ನಿಸರ್ಗ ಸಹಜ; ಆದರೆ ಸಾಮಾಜಿಕ ಸಂಹಿತೆಯಲ್ಲಿ ಸಿಕ್ಕಿಬಿದ್ದಿರುವ ಮನುಷ್ಯ ದೇಹಕ್ಕೆ ಮಾತ್ರ ಕಾಮವು ನಿಸರ್ಗ ಸಹಜವಾಗಿರುವ ಸಾಧ್ಯತೆ ಇಲ್ಲ: ಪುರುಷ ಪ್ರಾಬಲ್ಯದ ಒಪ್ಪಿತ ಮದುವೆ ಸಂಬಂಧ, ಅತ್ಯಾಚಾರ, ವೇಶ್ಯಾವಾಟಿಕೆ-ಕಾಮಕ್ಕೆ ಲಿಂಗಾಧಿಕಾರದ ಗುರುತುಧಾರಣೆಯಾಗಿದ್ದು ಕಾಮವೂ ಸಹ ದೇಹಾಧಾರಿತ ಇರುವಿಕೆಯ ನಿಷ್ಕಳಂಕ ಗುರುತಲ್ಲ. ’ಪ್ರೀತಿ’ ಎಂಬ ಸಹಮತದ ದೇಹ-ಭಾವ
ಸಮ್ಮಿಲನವು ಮಾತ್ರವೇ ದೇಹಧಾರಣೆಗೆ ಹತ್ತಿರ ಬರುವ ಗುರುತುಧಾರಣೆ ಎಂದುಕೊಳ್ಳಲು ಹೋದರೆ, ಸಾಮಾಜಿಕ ಸಂಹಿತೆಗಳಿಂದ ಅದು ಕೂಡ ಮುಕ್ತವಲ್ಲ. ಹಾಗಾಗಿ ಕವಿಗೆ ಆ ಗುರುತುಧಾರಣೆಯೂ ನಿಸ್ಸಂಧಿಗ್ದವಲ್ಲ.

ಈ ಪಕ್ಷಪಾತಿ ಧರ್ಮ ಸಂಸ್ಕೃತಿ
ಕಾಡ್ಗಿಚ್ಚಿನ ಭಯ ಹುಟ್ಟಿಸಿ
ಭೀತಿಯನ್ನೇ ಸಹಜಗೊಳಿಸಿತು
ಸಹ್ಯಗೊಳಿಸಿತು
ಸಖಿ, ನನ್ನ ನಿನ್ನ ಕನಸುಗಳು
ಸಣ್ಣಪುಟ್ಟದ್ದಾಗಿದ್ದವು
ಈ ಧೂರ್ತ ವ್ಯವಸ್ಥೆ
ಅವುಗಳನ್ನೂ ಭಸ್ಮ ಮಾಡಿತಲ್ಲ!

(ಪಕ್ಷಪಾತಿ)

ಎಂಬಂತಹ ಪರಿಚಿತ ಭಾವಚಿತ್ರದಿಂದ ಹಿಡಿದು
ನಿನ್ನ ಪ್ರೀತಿಯ ಒಂದು ಸ್ಪರ್ಶಕ್ಕೆ
ನನ್ನ ಚರ್ಮ ಕುರುಡಾಯಿತು
ನೀ ಕಾಪಾಡಿಕೊಂಡ
ಆ ಒಂದು ಅಂತರದಲ್ಲಿ
ನನ್ನ ಮುಗ್ಧ ಲೋಕ
ಅದೃಶ್ಯವಾಯಿತು

………

ವಿಲಾಸ್ ಘೋಗ್ರೆ

ನನ್ನ ಮನಸ್ಸು
ನನ್ನ ಮಿದುಳು
ನನ್ನ ವಿಚಾರಗಳು
ಎಲ್ಲಾ ಹೂವುಗಳು ಎಲ್ಲಾ ದಿಕ್ಕುಗಳು
ನಿನ್ನ ಕನಸಿನಿಂದ ಆಕ್ರಮಿತವಾಗಿದೆ
ನನ್ನ ಲೋಕದ ಅಣುರೇಣುತಾಷ್ಟವನ್ನು
ನೀನು ವ್ಯಾಪಿಸಿರಲು
ನಾನೇನು ಮಾಡಬೇಕು?
(ನಿನ್ನ ನಾಲಿಗೆಯ ತುದಿಯಲ್ಲಿ ಕರಗಿತು)
’ಪ್ರೀತಿ ಭಕ್ತ’ನ ತಳಮಳ ಭಾವದವರೆಗೆ ಪ್ರೀತಿಯ ಗುರುತುಧಾರಣೆಯು ಕವಿಗೆ ಅನುಮಾನಾಸ್ಪದ.

’ಕವಿ’ ಎಂಬ ಗುರುತುಧಾರಣೆಯಾದರೂ ಸ್ವಂತಿಕೆಯ ಇರುವಿಕೆ ಕೊಟ್ಟಿದೆ ಎಂಬ ಆಶಾಭಾವದ ರಚನೆಗಳನ್ನು ಮಂಜುಳೆ ಒಡೆದುಕೊಳ್ಳುವುದು ಹೀಗೆ:

ಈ ಕವಿತೆ
ಶವವಸ್ತ್ರದಂಥಾ
ಶುಭ್ರ ಕಾಗದಕ್ಕೆ.

(ಈ ಕವಿತೆ)

ಈಗೀಗ ಅನ್ನಿಸುತ್ತದೆ
ಕವಿತೆಯ ಬದಲು
ಎಲ್ಲವನ್ನು ಅಳಿಸಿಹಾಕುವ
ಈ ಭೂಮಿಯ ಮೈಮೇಲೆ
ಸುಮ್ಮನೆ ಗೆರೆಗಳನ್ನು
ಗೀಚಬೇಕು.

(ಆತ್ಮಹತ್ಯೆಯ ಬದಲಿಗೆ)

ದೇಹಾಧಾರಿತ ಇರುವಿಕೆಗೆ ಸಹಜ ಗುರುತುಧಾರಣೆ ಪ್ರಾಣಿಗಳಿಗೂ ಮನುಷ್ಯರಿಗೂ
ತಾಯಿ. ಕವಿ ಅದನ್ನು ಅರ್ಥವಂತವಾಗಿ ಇಟ್ಟುಕೊಳ್ಳುವ ಭಾವರೂಪ ಕಟ್ಟುತ್ತಾರೆ:
ನುಗ್ಗಿಬರುತ್ತಿರುವ ಕಗ್ಗತ್ತಲನ್ನು
ನನ್ನಮ್ಮ
ನಂದಿಹೋಗುತ್ತಿರುವ ಕೆಂಡದಂತಹ
ಕಂಗಳಿಂದ ದಿಟ್ಟಿಸುತ್ತಾಳೆ

(ಅಮ್ಮನ ಕಂಗಳು)

ಆದರೆ ವ್ಯವಸ್ಥೆ ಹೇರಿದ ಬಡತನದಿಂದಾಗಿ,
ಇಲಾಜಿಲ್ಲದೆ
ಅಮ್ಮನ ಕಂಗಳು
ನಂದಿಹೋಗುತ್ತಿವೆ

(ಸಮಾನ ದುಃಖಿ)

ತನಗೇನೂ ಮಾಡಲಾಗದೇ, ಅ ಗುರುತೂ ಅರ್ಥಹೀನವಾಗುತ್ತಿದೆ.

-5-

ಅರ್ಥವಂತಿಕೆ ಸಾಧ್ಯವಿರುವ ಗುರುತುಧಾರಣೆಗಳ ಹುಡುಕಾಟ ಮತ್ತು ಸಾಮಾಜಿಕ ಸ್ಥಿತಿಯಿಂದ ಅವು
ಅರ್ಥಹೀನವಾಗುತ್ತಿರುವುದು-ಎರಡೂ ಮಂಜುಳೆಯವರ ಪದ್ಯಗಳ ಭಾವಲೋಕದಲ್ಲಿವೆ. ಹಾಗಾಗಿ ನಿಹಿಲಿಸಂ ಬರಿ ಒಳಗಿನ ಕೊರಗಲ್ಲ, ಮಾನಸಿಕವಾಗಿ ಕುಗ್ಗಿದ ಸ್ಥಿತಿಯೂ ಅಲ್ಲ. ಅದು ವ್ಯಕ್ತಿ ಸ್ವಾತಂತ್ರ್ಯವನ್ನು ಸುತ್ತಿರುವ ಅದೃಶ್ಯ ರೂಪದ ಸಂಕೋಲೆಗಳನ್ನು ಭಾವ ರೂಪಕಗಳಲ್ಲಿ ಕಾಣಿಸುವ ತತ್ವಶೋಧ; ವ್ಯವಸ್ಥೆ ಸಿದ್ಧಪಡಿಸಿಕೊಟ್ಟ ಗುರುತುಗಳನ್ನು ಧರಿಸುವುದು ಎಂದರೆ, ತನ್ನ ಇರುವಿಕೆಗೆ ಅರ್ಥಕೊಡುವ, ತನ್ನ ಸಹಜೀವಿಗಳ ಜೊತೆ ಸ್ವತಂತ್ರ ಸಂಬಂಧ ಹೊಂದಲು ಅವಕಾಶವಿರುವ ಗುರುತುಗಳನ್ನು ಕಳೆದುಕೊಂಡಂತೆ ಎಂಬ ಅರಿವು. ಈ ಅರಿವು ಮಂಜುಳೆಗೆ ಗುರುತುಧಾರಣೆ-ನಿರಾಕರಣೆಗಳ ದುರಂತ, ಅವರು ಮೆಚ್ಚುವ ಇಬ್ಬರು ದಲಿತ ಕ್ರಾಂತಿಕಾರಿಗಳೂ, ಮರಾಠಿ ಕವಿಗಳೂ ಆದ ವಿಲಾಸ್ ಘೋಗ್ರೆ ಮತ್ತು ನಾಮ್‌ದೇವ್ ಧಸಾಲ್ ಅವರ ಸಾವು ಹಾಗು ಬದುಕಿನಿಂದ ಬಂದದ್ದು. ವಿಲಾಸ್ ಘೋಗ್ರೆ ವಿಮೋಚನಾವಾದಿ ಕವಿ ಹಾಗು ಹಾಡುಗಾರ; ಮಹಾರಾಷ್ಟ್ರದ ದಲಿತ ಯುವಕರಲ್ಲಿ ಬಂಡಾಯದ ಕಿಡಿ ಹಚ್ಚಿದ ’ದಲಿತ್ ಪ್ಯಾಂಥರ್ಸ್’ ಹಾಗು ಎಡಪಂಥದ ಸಂಘಟನೆಗಳ ಕಾರ್ಯಕರ್ತರಾಗಿದ್ದವರು; ಆದರೆ, ಬಡತನ ಅವರನ್ನು ಎಷ್ಟು ಮುತ್ತಿಕೊಂಡಿತೆಂದರೆ, ಅವರು ತಮ್ಮ ಕವಿತ್ವ ಹಾಗು ಹಾಡುಗಾರಿಕೆಯ ಪ್ರತಿಭೆಗಳನ್ನು ಅವಕಾಶವಾದಿ ಸಭೆಗಳಲ್ಲಿ ಪ್ರದರ್ಶಿಸಿ ಹೊಟ್ಟೆ ಹೊರೆಯುವ ಮಟ್ಟಕ್ಕೆ ನೂಕಿತು; 1997ರಲ್ಲಿ ಮುಂಬೈನ ರಮಾಬಾಯ್ ಚಾಳ್‌ನಲ್ಲಿ ಮಹಾರಾಷ್ಟ್ರದ ಪೋಲಿಸರಿಂದ ನಡೆದ ದಲಿತ ಹತ್ಯೆ ಕಂಡು, ಅವರ ಜೊತೆ ಕರುಳುಬಳ್ಳಿ ಹೊಂದಿದ್ದ ಘೋಗ್ರೆಗೆ ತನ್ನ ಇರುವಿಕೆಯೇ ಅರ್ಥಹೀನವೆನಿಸಿ ನೇಣು ಹಾಕಿಕೊಂಡರು. ’ದಲಿತ ಪ್ಯಾಂಥರ್ಸ್’ ಸ್ಥಾಪಕರೂ, ಕ್ರಾಂತಿಕಾರಿ ದಲಿತ ದನಿಯ ಮೂಲಕ ಸ್ಥಾಪಿತ ಕಾವ್ಯ ಮೀಮಾಂಸೆಯನ್ನು ಬುಡಮೇಲು ಮಾಡಿದ ಕವಿಯೂ ಆದ ನಾಮ್‌ದೇವ್ ಧಸಾಲ್ ’ಮುಂಬೈಯ ಗತಿಹೀನ ಅಧೋಲೋಕದ ಪ್ರವಾದಿ’ ಎಂದೇ ಖ್ಯಾತರಾದವರು; ಅವರು ತಮ್ಮ ಜೀವಿತದ ಕೊನೆಗಾಲದಲ್ಲಿ, ತಮ್ಮ ಕ್ರಾಂತಿಕಾರಿ ವೈಚಾರಿಕತೆಗಳಿಗೆ ವಿರುದ್ಧವಾಗಿದ್ದ ’ಹಿಂದುತ್ವವಾದಿ’ ರಾಜಕೀಯ ಸಂಘಟನೆ ಶಿವಸೇನೆ ಜೊತೆ
ಸೇರಿಕೊಂಡರು. ಘೋಗ್ರೆಯವರ ದುರಂತ ಹಾಗು ಧಸಾಲರ ಗುರುತು ಪಲ್ಲಟಗಳ ಬಗ್ಗೆ ಮಂಜುಳೆ ಬರೆದಿರುವ ಎರಡು ಪದ್ಯಗಳು ಈ ಸಂಕಲದಲ್ಲಿವೆ- ’ಗೆಳೆಯ’ ಮತ್ತು ’ಆತ ಬರೆಯುತ್ತಿದ್ದಾಗ’. ಈ ಪದ್ಯಗಳು ಅನುಕ್ರಮವಾಗಿ ’ಸೈರಾಟ್’ ಹಾಗು ’ಫಂಡ್ರಿ’ಯ ಎಕ್ಸ್‌ಪ್ರೆಶನಿಸ್ಟ್ ದೃಶ್ಯರೂಪಗಳಿಗೆ ಸಮನಾದ ಎಕ್ಸ್‌ಪ್ರೆಶನಿಸ್ಟ್ ಭಾವರೂಪಗಳಾಗಿವೆ.

ಮಂಜುಳೆಯವರ ಪದ್ಯಗಳ ಓದು ನಮ್ಮ ನಾಡಿನಲ್ಲಿ ವ್ಯಕ್ತಿ ಸ್ವಾತಂತ್ರ್ಯ-ಸಮಾನತೆಗಳಿಗೆ ಬಿಗಿದುಕೊಂಡಿರುವ ಅದೃಶ್ಯ (ಎರಿಕ್ ಫ್ರಾಮ್ ಹೇಳಿದಂತಹ) ’ಭ್ರಮೆಯ ಸರಪಳಿಗಳ’ ಅರಿವು ಮೂಡಿಸುತ್ತದೆ. ಈ ಅರಿವು ಇರದ ಸಮಾಜದಲ್ಲಿ ಜನ ರೋಹಿತ್ ವೇಮುಲನ ಸಾವಿಗೆ, ಆತನ ಜಾತಿ ಪ್ರಮಾಣ ಪತ್ರ ತಡಕಾಡುವಷ್ಟು ಸಂವೇದನಾಹೀನರಾಗುತ್ತಾರೆ. ಇಂಥಲ್ಲಿ ’ಸಹಬಾಳ್ವೆ’ ಸಾಧ್ಯವೇ ಎಂದು ಚೀರುವುದರ ಅರ್ಥ
ಯಾರಿಗಾದರೂ ಆದೀತಾ?

-6-

ಸಂವರ್ತ ಸಾಹಿತ್ಯ-ಸಿನೆಮಾಗಳ ಅಧ್ಯಯನಿ ಆಗಿರುವಹಾಗೆಯೇ, ಕನ್ನಡಕ್ಕೆ ಅಷ್ಟೇನೂ ಪರಿಚಿತವಲ್ಲದ ಭಾಷೆಗಳಲ್ಲಿನ ಸಂವೇದನಾಶೀಲತೆಯನ್ನು ಕನ್ನಡದ ಓದುಗರಿಗೆ ತಂದುಕೊಡುವ ಉಮೇದು ಇಟ್ಟುಕೊಂಡಿರುವ ಅನುವಾದಕರೂ ಹೌದು. ಮಂಜುಳೆಯವರ ಸಿನೆಮಾಗಳ ಸಂವೇದನೆಗೆ ಒಲಿದ ಸಂವರ್ತ, ಅವರ ಪದ್ಯಗಳನ್ನು ಮೂಲ ಮರಾಠಿ ಭಾಷೆಯಲ್ಲಿ ಓದಿಕೊಂಡು, ಅವುಗಳಲ್ಲಿ ವ್ಯಕ್ತವಾಗಿರುವ ಸಂವೇದನೆಯನ್ನು ಕನ್ನಡಕ್ಕೆ ಪರಿಚಯಿಸುವ ಪ್ರೀತಿಯಲ್ಲಿ, ಈ ಅನುವಾದದ ಕೆಲಸವನ್ನು ಮನಸಾರೆ ಪೂರೈಸಿದ್ದಾರೆ.

ಒಂದು ಭಾಷೆಯಲ್ಲಿ ಕಟ್ಟಿರುವ ಭಾವ ಸಂವೇದನೆಗಳನ್ನು, ಮೂಲ ಭಾಷೆಯ ಲಯ-ದನಿ ಶಕ್ತಿಯ ಸಹಿತ ಮತ್ತೊಂದು ಭಾಷೆಗೆ ತರುವ ಕಷ್ಟವೂ ಅವರಿಗೆ ಪರಿಚಿತ. ಲಯ ಮುರಿದು ಮೂಲದ ದನಿಗೆ ಪ್ರಾಧಾನ್ಯತೆ ಕೊಡುವುದೋ? ಅನುವಾದಿತ ಭಾಷೆಯ ಲಯ ಕಟ್ಟಿನಲ್ಲಿ ಮೂಲದ ದನಿಗೆ ಹೊಸರೂಪ ನೀಡುವುದೋ? ಇದು ಅನುವಾದಕರನ್ನು ಯಾವತ್ತೂ ಕಾಡುವ ಸಮಸ್ಯೆ. ಅಂತೆಯೇ, ಭಾಷಾಂತರದಲ್ಲಿ ಮೂಲ ಸಂವೇದನೆಯನ್ನು ತಿರುಚುವ ಕೆಲಸವೂ ನಡೆಯುತ್ತದೆ ಎನ್ನುವ ವಾಗ್ವಾದವಿದೆ. ಹೀಗಾಗಿ ಮೂಲ ಕೃತಿಯನ್ನು ಅನುವಾದಿತ ಭಾಷೆಯ ವ್ಯಾಕರಣಕ್ಕೆ ಒಗ್ಗುವಷ್ಟರ ಮಟ್ಟಿಗೆ ಮಾತ್ರ ತಿದ್ದಿಕೊಂಡು, ಮೂಲ ಭಾಷೆಯ ಕಟ್ಟಿಗೆ ಬದ್ಧತೆ ತೋರುವ ’ಭಾಷಾನುವಾದ’ವೇ ಅರ್ಥಪೂರ್ಣ ಎನ್ನುವ ನಿಲುವೂ ಇದೆ. ಈ ಹಿನ್ನೆಲೆಯಲ್ಲಿ, ಮೂಲ ಕೃತಿಯ ಸಂವೇದನೆಯನ್ನು ಮುಕ್ಕಾಗಿಸದೆ, ಅನುವಾದಿತ ಭಾಷೆಯಲ್ಲಿ ಓದಿಸಿಕೊಳ್ಳಬಲ್ಲಂತಹ ಅನುವಾದ ಮಾರ್ಗವನ್ನು ಸಂವರ್ತ ಅನುಸರಿಸಿದ್ದಾರೆ.

ಈ ಮೂಲಕವಾಗಿ, ಮಂಜುಳೆಯವರ ವಿಶಿಷ್ಟವಾದ ಸಂವೇದನೆ ಹಾಗು ಅದರ ಅಭಿವ್ಯಕ್ತಿಗೆ ಆಯ್ದುಕೊಂಡಿರುವ ಕಲಾಭಿವ್ಯಕ್ತಿ ಮಾರ್ಗಗಳ ಮಹತ್ವವನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಅವರ ಈ ಪ್ರಾಮಾಣಿಕ ಕೆಲಸದ ಕಾರಣವಾಗಿ, ನನ್ನ ಅರಿವು ಹಿಗ್ಗಿದೆ. ಕನ್ನಡದ ಓದುಗರು ಈ ಅರಿವಿನ ಸಂವಾದವನ್ನು ವಿವೇಚನಾಶೀಲವಾಗಿ ಸ್ವಾಗತಿಸಲಿ ಎಂದು ಹಾರೈಸುತ್ತೇನೆ.

(ಮಹಾರಾಷ್ಟ್ರದ ಸಿನಿಮಾ ನಿರ್ದೇಶಕ ಮತ್ತು ಕವಿ ನಾಗರಾಜ್ ಮಂಜುಳೆ ಅವರ ಕವನಗಳನ್ನು ’ಬಿಸಿಲಿನ ಷಡ್ಯಂತ್ರದ ವಿರುದ್ಧ’ ಎಂಬ ಹೆಸರಿನಲ್ಲಿ ಸಂವರ್ತ ಸಾಹಿಲ್ ಅನುವಾದಿಸಿದ್ದಾರೆ. ಕವನ ಸಂಕಲನದ ಕರಡು ಓದಿ ಬರೆದ ಟಿಪ್ಪಣಿ ಇದು)

ಕೆ.ಫಣಿರಾಜ್

ಕೆ.ಫಣಿರಾಜ್
ಕೋಮು ಸೌಹಾರ್ದ ಚಳವಳಿಯಲ್ಲಿ ತಳಮಟ್ಟದ ಆಕ್ಟಿವಿಸ್ಟ್ ಆಗಿ ಕೆಲಸ ಮಾಡುತ್ತಾ, ಅದರ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಕೆ.ಫಣಿರಾಜ್ ಅವರ ಆಸಕ್ತಿ ಮತ್ತು ಕಾಳಜಿಯ ಕ್ಷೇತ್ರಗಳು ಹಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಮಾತು ಮರೆತ ಭಾರತ; ಅರೆಊಳಿಗಮಾನ್ಯ ಸಮಾಜದಲ್ಲಿ ಅಸ್ಪೃಶ್ಯರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಫಣಿರಾಜ್ ಅವರೇ, ಬಹಳ ದಿನಗಳ ನಂತರ ಒಂದು ಒಳ್ಳೆಯ ವಿಶ್ಲೇಷಣಾತ್ಮಕ ಲೇಖನ ಓದಿದೆ. ಅಭಿನಂದನೆಗಳು. ನೀವು ಸಂವರ್ತ ಅವರಿಗೆ ಹೇಳಿದ ಮಾತನ್ನು ನಾನು ನಿಮಗೆ ಹೇಳಲು ಇಚ್ಛಿಸುತ್ತೇನೆ – ನನ್ನ ಅರಿವು ಹಿಗ್ಗಿದೆ. ಈ ಒಂದು ಲೇಖನದಲ್ಲಿ ನೀವು ಒಳಗೊಂಡ ವಿಷಯ ವಿಸ್ತಾರ ಬೆರಗುಗೊಳಿಸಿದೆ.
    ಕನ್ನಡದಲ್ಲಿ ಅಷ್ಟಾಗಿ ಜನಪ್ರಿಯವಾಗದ ತಮಿಳಿನ ಕೆಲವು ಅದ್ಭುತ ದಲಿತ ಚಲನಚಿತ್ರಗಳ (ಕರ್ಣನ್ ಮಾತ್ರ ಅಲ್ಲ) ವಿಶ್ಲೇಷಣೆಯನ್ನೂ ನೀವು ಮಾಡಬಲ್ಲಿರಿ.
    ಧನ್ಯವಾದಗಳು.
    ಪ್ರತಿಭಾ ನಂದಕುಮಾರ್

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧದ ದೂರಿಗೆ ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ಕಳುಹಿಸಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...