Homeಕರ್ನಾಟಕಅಪ್ಪು ನಿಧನ: ಹೃದಯಾಘಾತದ ಬಗ್ಗೆ ಪ್ಯಾನಿಕ್‌ ಆಗುವ ಅಗತ್ಯವಿಲ್ಲ- ವೈದ್ಯರು

ಅಪ್ಪು ನಿಧನ: ಹೃದಯಾಘಾತದ ಬಗ್ಗೆ ಪ್ಯಾನಿಕ್‌ ಆಗುವ ಅಗತ್ಯವಿಲ್ಲ- ವೈದ್ಯರು

- Advertisement -
- Advertisement -

ನಟ ಪುನೀತ್‌ ರಾಜ್‌ಕುಮಾರ್‌ ಅವರು ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಜನರು ಹೃದಯದ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಿದ್ದಾರೆ. ಹೃದಯ ಪರೀಕ್ಷೆಗೆಂದು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ.

ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹಲವು ಜನರು ಮೊದಲ ಬಾರಿಗೆ ಹೃದ್ರೋಗ ಸಂಬಂಧಿ ಹೊರರೋಗಿಗಳಾಗಿ ಧಾವಿಸಿದ್ದಾರೆ. CT ಆಂಜಿಯೋಗ್ರಾಮ್‌ ಮಾಡಿಸಿಕೊಂಡಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

“ಸಾಮಾನ್ಯವಾಗಿ ದಿನಕ್ಕೆ ಸುಮಾರು 1,200 ರೋಗಿಗಳು ಬರುತ್ತಾರೆ. ರಜೆ ದಿನಗಳಲ್ಲಿ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಕಡಿಮೆ ಹೊರರೋಗಿಗಳು ದಾಖಲಾಗುತ್ತಿದ್ದರು. ಆದರೆ ಆಸ್ಪತ್ರೆಯು ಸೋಮವಾರ ಒಂದೇ ದಿನ ಸುಮಾರು 1,600 ಜನರನ್ನು ಪರೀಕ್ಷಿಸಿದೆ. ಇದು ವೈದ್ಯರು, ದಾದಿಯರು ಮತ್ತು ಸಹಾಯಕ ಸಿಬ್ಬಂದಿಗೆ ಒತ್ತಡ ಉಂಟು ಮಾಡಿದೆ” ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

ಸೋಮವಾರ ಹೆಚ್ಚಿನ ಸಂಖ್ಯೆಯ ಜನರು ಆಸ್ಪತ್ರೆಗೆ ಆಗಮಿಸಿದ್ದರಿಂದ ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದೂ ಕಷ್ಟವಾಯಿತು.

ಇದನ್ನೂ ಓದಿರಿ: ಪುನೀತ್‌ ರಾಜ್‌ಕುಮಾರ್‌ಗೆ ಅಪಮಾನ: ಆರೋಪಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರು

“ಹೊರರೋಗಿಗಳಾಗಿ ಬಂದವರ ಸಂಖ್ಯೆ ಶೇ. 30ರಷ್ಟು ಹೆಚ್ಚಾಗಿದೆ. ಅದರಲ್ಲಿ ಮೂರನೇ ಒಂದರಷ್ಟು ಮಂದಿಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆಗಳು ಇರಲಿಲ್ಲ. ಶೇ.10ರಿಂದ ಶೇ.20ರಷ್ಟು ಮಂದಿ ಆತಂಕಕ್ಕೆ ಒಳಗಾಗಿ ಆಸ್ಪತ್ರೆಗೆ ಬಂದಿದ್ದರು” ಎಂದು ಹಿರಿಯ ಹೃದ್ರೋಗತಜ್ಞ ಡಾ.ಕೆ.ಎಸ್‌.ರವೀಂದ್ರನಾಥ್‌ ಹೇಳಿದ್ದಾರೆ.

ಡಾ.ಮಂಜುನಾಥ್ ಅವರ ಪ್ರಕಾರ, “ಆಸ್ಪತ್ರೆಗೆ ಭೇಟಿ ನೀಡಿದ ಅನೇಕ ರೋಗಿಗಳು ಪುನೀತ್‌‌ ಸಾವಿನ ಸುದ್ದಿಯಿಂದ ಘಾಸಿಯಾಗಿದ್ದು, ಅದರ ಪರಿಣಾಮವಾಗಿ ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲ. ಜೊತೆಗೆ ಎದೆ ನೋವು ಅನುಭವಿಸಿದ್ದಾರೆ”.

ಎಚ್‌ಎಎಲ್‌ ಏರ್‌ಪೋರ್ಟ್ ರಸ್ತೆಯಲ್ಲಿನ ಮಣಿಪಾಲ್‌ ಆಸ್ಪತ್ರೆಯ ವೈದ್ಯರಾದ ಡಾ.ರಂಜನ್‌ ಶೆಟ್ಟಿ ಅವರ ಪ್ರಕಾರ, ಡಜನ್‌ಗಟ್ಟಲೆ ರೋಗಿಗಳು 20-45 ವರ್ಷ ವಯಸ್ಸಿನವರಾಗಿದ್ದರು. ಸಕ್ರ ವರ್ಡ್ ಆಸ್ಪತ್ರೆಯ ಡಾ.ಶ್ರೀಕಂಠ ಬಿ.ಶೆಟ್ಟಿ ಅವರು, “30 ವರ್ಷ ವಯೋಮಾನದ ಹೆಚ್ಚು ಮಂದಿ ಆಸ್ಪತ್ರೆಗೆ ಧಾವಿಸಿದ್ದರು” ಎಂದು ತಿಳಿಸಿದ್ದಾರೆ.

“ತಮ್ಮ ಜೀವನದಲ್ಲಿ ಎಂದಿಗೂ ವರ್ಕ್‌‌ಔಟ್‌ ಮಾಡದ, ಇತ್ತೀಚೆಗೆ ಜಿಮ್‌ಗೆ ಸೇರಿದವರು ಕಠಿಣ ವ್ಯಾಯಾಮದ ಕಾರಣ ಎದೆನೋವು ಎಂದು ಆಸ್ಪತ್ರೆಗೆ ಬರುತ್ತಿದ್ದಾರೆ. ಹೃದಯವನ್ನು ಸುಸ್ಥಿತಿಯಲ್ಲಿ ಇಡಲು ಜೀವನಕ್ರಮವನ್ನು ಅನುಸರಿಸಬೇಕು. ನಾವು ಆರೋಗ್ಯಕರ ಆಯ್ಕೆಗಳನ್ನು ಮಾಡಿಕೊಳ್ಳಬೇಕಾಗಿದೆ” ಎಂದಿದ್ದಾರೆ ಡಾ.ಶೆಟ್ಟಿ.

‘ನಾನುಗೌರಿ.ಕಾಂ’ ಜೊತೆ ಮಾತಾಡಿದ ಆಸ್ಟರ್‌ ಸಿಎಂಐ ಆಸ್ಪತ್ರೆಯ ಡಾ.ಸಂಜಯ್‌ ಭಟ್‌ ಅವರು, “ಜನ ಪ್ಯಾನಿಕ್ ಆಗುತ್ತಿರುವುದು ನಿಜ. ಹೃದಯ ಸಂಬಂಧಿ ಕಾಯಿಲೆಗಳು ಇದ್ದೇ ಇರುತ್ತವೆ. ವಾಸ್ತವದಲ್ಲಿ ಕಾಲಕಾಲಕ್ಕೆ ಹೃದಯವನ್ನು ಪರೀಕ್ಷಿಸಿಕೊಳ್ಳುವುದು ಅಗತ್ಯ. ಕೊಲಸ್ಟ್ರಾಲ್‌, ಸಕ್ಕರೆ ಅಂಶವನ್ನು ಪರೀಕ್ಷಿಸಿಕೊಳ್ಳಬೇಕು. 40 ವರ್ಷ ದಾಟಿದ ಮೇಲೆ ವರ್ಷಕ್ಕೊಮ್ಮೆ ಇಸಿಜಿ ಮಾಡಿಸಿಕೊಳ್ಳಬೇಕು. ಜನ ಕಾಳಜಿ ವಹಿಸಬೇಕು. ಆದರೆ ಪ್ಯಾನಿಕ್ ಆಗುವ ಅಗತ್ಯವೇನೂ ಇಲ್ಲ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ಹೃದಯಾಘಾತವಾಯಿತು ಎಂದ ಮಾತ್ರಕ್ಕೆ ಎಲ್ಲರಿಗೂ ಆಗುತ್ತೆ ಎಂದೇನಿಲ್ಲ” ಎಂದರು.

 ಇದನ್ನೂ ಓದಿರಿ: ಪುನೀತ್‌ ಫಿಟ್‌ನೆಟ್‌‌: ಡಾ.ದೇವಿ ಶೆಟ್ಟಿ ಹೆಸರಲ್ಲಿ ಫೇಕ್‌ ನ್ಯೂಸ್‌ ಹರಿದಾಟ

“ವ್ಯಾಯಾಮವನ್ನು ಮಿತಿಮೀರಿಯೂ ಮಾಡಬಾರದು. ವ್ಯಾಯಾಮ ಮಾಡದೆ ಒಂದೇ ಕಡೆ ಕೂತರೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಮಧ್ಯಮ ಪ್ರಮಾಣದಲ್ಲಿ ವ್ಯಾಯಾಮವನ್ನು ಮಾಡಬೇಕು. ದಿನಕ್ಕೆ ಒಂದು ಗಂಟೆಯಂತೆ, ವಾರದಲ್ಲಿ ಕನಿಷ್ಠ ಐದು ಗಂಟೆ ಮಾಡಬಹುದು. ದಿನಕ್ಕೆ ಎರಡು ಅಥವಾ ಮೂರು ಗಂಟೆ ವ್ಯಾಯಾಮ ಮಾಡುವವರಿಗೂ, ಮ್ಯಾರಾಥಾನ್‌ ಓಡುವವರಿಗೂ ಹೃದಯ ಸಂಬಂಧಿ ಕಾಯಿಲೆ ಉಂಟಾಗಬಹುದು” ಎನ್ನುತ್ತಾರೆ ಡಾ.ಸಂಜಯ್‌.

“ಮೊದಲೇ ಹೃದಯ ಸಮಸ್ಯೆ ಇರುವವರು ನಿಗದಿತವಾಗಿ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಆದರೆ ಹೆದರಿಕೊಂಡು ಎಲ್ಲರೂ ದಿಢೀರನೇ ಡಾಕ್ಟರ್‌ ಬಳಿ ಹೋಗುವ ಅಗತ್ಯವಿಲ್ಲ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಪ್ಯಾನಿಕ್‌ ಆಗುತ್ತಿದ್ದಾರೆ. ಯುವಜನರು ಧೂಮಪಾನ ಬಿಟ್ಟರೆ ಸಾಕು. ಗಾಬರಿಯಾಗುವ ಅಗತ್ಯವಿಲ್ಲ. ಅತಿಯಾದ ತೂಕ ಇರಬಾರದು. ಮಧುಮೇಹ ಇರುವವರು ನಿಯಂತ್ರಣಕ್ಕೆ ಆದ್ಯತೆ ನೀಡಬೇಕು. ಫ್ಯಾಟ್‌ ಫುಡ್‌, ಕರಿದ ಪದಾರ್ಥ ಸೇವಿಸುವುದು ಕಡಿಮೆ ಮಾಡಬೇಕು” ಎಂದು ತಿಳಿಸಿದರು.

ಪುನೀತ್‌ ನಿಧನ: ಜನರಲ್ಲಿ ಭೀತಿ ಹುಟ್ಟಿಸಿ ದುಡ್ಡು ಕೀಳಲು ಯತ್ನ

ಪುನೀತ್ ರಾಜ್‌ಕುಮಾರ್‌ ಅವರು ಹೃದಯಾಘಾತದಿಂದ ನಿಧನರಾಗಿರುವುದನ್ನೇ ಬಂಡವಾಳ ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆಗಳು ಹೊರಟಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಕ್ರೆಡೆನ್‌ ಡಯಗ್ನಾಟಿಕ್ಸ್‌ ಎಂಬ ಸಂಸ್ಥೆಯ ಹೆಸರಿನ ಬ್ಯಾನರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಪುನೀತ್ ರಾಜ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿರುವ ಸದರಿ ಸಂಸ್ಥೆಯು, “ಇಸಿಜಿ, ಆರ್‌ಬಿಎಸ್‌, ಕ್ರಿಟಿನೈನ್‌‌, ಬಿಪಿ, ಕೊಲಸ್ಟ್ರಾಲ್‌ ಪರೀಕ್ಷೆ ಮಾಡಿಸಿಕೊಳ್ಳಿ. ಆಫರ್‌ ಫ್ರೈಸ್‌ 300 ರೂ.” ಹೇಳಿದೆ. ಅಕ್ಟೋಬರ್‌ 31ರಂದು ತಪಾಸಣೆ ಶಿಬಿರವನ್ನು ಕೈಗೊಂಡಿರುವುದಾಗಿ ತಿಳಿಸಿರುವ ಈ ಬ್ಯಾನರ್‌‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಬರಹಗಾರ ಧನಂಜಯ್ ಎನ್. ಅವರು ಫೇಸ್‌ಬುಕ್‌ ಪೋಸ್ಟ್ ಹಾಕಿ ಕಟುವಾಗಿ ಟೀಕಿಸಿದ್ದಾರೆ.

ಹೃದಯ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದ್ದು ತಪ್ಪಲ್ಲ, ಆದರೆ ನಮ್ಮತ್ರ ಚೆಕ್ ಮಾಡಿಸಿಕೊಳ್ಳಿ ಅಂತ ಆಫರ್ ಇಟ್ಟು ಬಂಡವಾಳ ಮಾಡಿಕೊಳ್ಳುತ್ತಿರುವುದು ದೊಡ್ಡ ತಪ್ಪು” ಎಂದು ಶಿವರಾಜ್‌ ಮೋತಿ ಅಭಿಪ್ರಾಯಟ್ಟಿದ್ದಾರೆ.


ಇದನ್ನೂ ಓದಿರಿ: ಅಪ್ಪು ಒಡನಾಟದ ನೆನಪುಗಳನ್ನು ಹಂಚಿಕೊಂಡ ಮಿಲನ ಸಿನಿಮಾ ನಟಿ ಪಾರ್ವತಿ ತಿರುವೊತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...