Homeಮುಖಪುಟಸಿಎಂ ಬೊಮ್ಮಾಯಿಗೆ ತವರು ಜಿಲ್ಲೆಯಲ್ಲಿಯೇ ಮುಖಭಂಗ: ಹಾನಗಲ್‌ನಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್

ಸಿಎಂ ಬೊಮ್ಮಾಯಿಗೆ ತವರು ಜಿಲ್ಲೆಯಲ್ಲಿಯೇ ಮುಖಭಂಗ: ಹಾನಗಲ್‌ನಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್

ಇದು 2023ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನಲೆಗೆ ತರಲಿದೆ.

- Advertisement -
- Advertisement -

ಭಾರೀ ಕೂತುಹಲ ಕೆರಳಿಸಿದ್ದ ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸಿವೆ. ಸಿಂದಗಿಯಲ್ಲಿ ಬಿಜೆಪಿ ಗೆದ್ದು ಬೀಗಿದರೆ, ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಆದರೆ ಎರಡೂ ಕಡೆ ಠೇವಣಿ ಕಳೆದುಕೊಂಡಿರುವ ಜೆಡಿಎಸ್ ಹೀನಾಯ ಸೋಲು ಕಂಡಿದೆ. ಈ ಉಪ ಚುನಾವಣೆ ಫಲಿತಾಂಶ ಹಾಲಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನುಂಗಲಾರದ ತುತ್ತಾಗಿದೆ. ಏಕೆಂದರೆ ಅವರ ತವರು ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲುಂಡಿದೆ.

ಮಾಜಿ ಸಚಿವ ಸಿ.ಎಂ.ಉದಾಸಿಯವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರದಲ್ಲಿ, ಕಾಂಗ್ರೆಸ್ ಪಕ್ಷವು ಕ್ಷತ್ರಿಯ ಮರಾಠ ಸಮುದಾಯದ ಶ್ರೀನಿವಾಸ ಮಾನೆಯವರಿಗೆ ಟಿಕೆಟ್ ನೀಡಿತ್ತು. ಬಿಜೆಪಿಯಿಂದ ಗಾಣಿಗ ಸಮುದಾಯದ ಶಿವರಾಜ್ ಸಜ್ಜನರ ಕಣಕ್ಕಿಳಿದಿದ್ದರು. ಸಿ.ಎಂ. ಉದಾಸಿಯವರ ಭದ್ರಕೋಟೆಯಾಗಿದ್ದ ಹಾನಗಲ್‌ನಲ್ಲಿ ಅನೇಕ ಸಲ ಕಾಂಗ್ರೆಸ್ ಅಭ್ಯರ್ಥಿಗಳೂ ಮೇಲುಗೈ ಸಾಧಿಸಿದ್ದಿದೆ. ಜೆಡಿಎಸ್ ಇಲ್ಲಿ ಮುಸ್ಲಿಂ ವ್ಯಕ್ತಿ ನಿಯಾಜ್ ಶೇಖ್ ಅವರನ್ನು ಈ ಬಾರಿ ಕಣಕ್ಕಿಳಿಸಿತ್ತು.

ಮತ ಎಣಿಕೆಯ 18ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯವರು 83,324 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರರವರು 75,999 ಮತಗಳಿಗೆ ಸೀಮಿತವಾದರು. ಇನ್ನು ಜೆಡಿಎಸ್‌ನ ನಿಯಾಜ್ ಶೇಖ್ ಕೇವಲ 566 ಮತಗಳನ್ನು ಪಡೆದರು.

ಹಾನಗಲ್‌ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪ್ರತಿಷ್ಠೆಯ ಕಣವಾಗಿತ್ತು. ತವರು ಜಿಲ್ಲೆ ಎಂಬುದು ಒಂದು ಕಾರಣವಾದರೆ ಅವರು ಸಿಎಂ ಆದ ಬಳಿಕ ನಡೆಯುತ್ತಿರುವ ಮಹತ್ವದ ಉಪಚುನಾವಣೆ ಇದಾಗಿದೆ. ಆದರೆ ತವರು ಕ್ಷೇತ್ರದಲ್ಲಿಯೇ ಅವರು ಮುಖಭಂಗ ಅನುಭವಿಸಿದ್ದಾರೆ. ಇದು 2023ರಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನಲೆಗೆ ತರಲಿದೆ.

ಈ ಫಲಿತಾಂಶ ಬೊಮ್ಮಾಯಿ ಪಾಲಿಗೆ ದುಸ್ವಪ್ನವಾಗಲಿದೆ. ಬೆನ್ನಿಗೆ ದೊಡ್ಡ ಬೆಂಬಲಿಗ ಶಾಸಕರ ಪಡೆಯಿಲ್ಲದೆಯೂ ಮುಖ್ಯಮಂತ್ರಿಯಾಗಿರುವ ಅವರ ನಾಯಕತ್ವದ ಪರೀಕ್ಷೆಯಲ್ಲಿ ಅವರು ಶೇ.50 ಮಾತ್ರ ಪಡೆದಿದ್ದಾರೆ. ಸಿಂದಗಿಯಲ್ಲಿ ಬಿಜೆಪಿಗೆ ಗೆಲುವಿಗೆ ಪಕ್ಷಕ್ಕಿಂತ ಮುಖ್ಯವಾಗಿ ರಮೇಶ್ ಭೂಸನೂರರವರ ವರ್ಚಸ್ಸು ಕಾರಣ ಎಂಬ ವಿಶ್ಲೇಷಣೆಗಳು ಸಹ ಕೇಳಿ ಬರುತ್ತಿವೆ. ಹೀಗಿರುವಾಗ ಹಿಂದೆ ಬಿಜೆಪಿ ಗೆದ್ದಿದ್ದ ತವರು ಕ್ಷೇತ್ರದಲ್ಲಿ ಬಿಜೆಪಿ ಸೋತಿರುವುದಕ್ಕೆ ಸಿಎಂ ಸಹ ಹೊಣೆ ಹೊರಬೇಕಿದೆ.


ಇದನ್ನೂ ಓದಿ: ರಾಜ್ಯ ಉಪಚುನಾವಣೆ ಫಲಿತಾಂಶ: ಸಿಂದಗಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...