Homeಕರ್ನಾಟಕಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಕಾಪು: ಮಲ್ಲಿಗೆಯ ಕಂಪು ಕೆಡಿಸುತ್ತಿರವ ಧರ್ಮೋನ್ಮಾದದ ಘಾಟು!

ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಕಾಪು: ಮಲ್ಲಿಗೆಯ ಕಂಪು ಕೆಡಿಸುತ್ತಿರವ ಧರ್ಮೋನ್ಮಾದದ ಘಾಟು!

- Advertisement -
- Advertisement -

ದೇಶವಿದೇಶದಲ್ಲಿ ಘಮಘಮಿಸುತ್ತಿರುವ ’ಶಂಕರಪುರ ಮಲ್ಲಿಗೆ’ಯ ಕಂಪಿನ ಕಾಪುನಲ್ಲಿ ಧರ್ಮಕಾರಣದ ಘಾಟು ನೆಮ್ಮದಿ, ಬಂಧುತ್ವ ಬಯಸಿರುವ ಮಂದಿಯ ಉಸಿರುಗಟ್ಟಿಸುತ್ತಿದೆ. ಉಡುಪಿಯಿಂದ ಕೇವಲ 13 ಕಿ.ಮೀ. ದೂರಲ್ಲಿದರುವ ಕಾಪು ಕ್ಷೇತ್ರದ ಬೌಗೋಳಿಕ ಗುಣಲಕ್ಷಣ, ಭಾಷೆ, ಸಂಸ್ಕೃತಿ, ಜಾತಿ ಸಮೀಕರಣ, ಧರ್ಮಕಾರಣ ಹೆಚ್ಚುಕಡಿಮೆ ಉಡುಪಿ ವಿಧಾನಸಭಾ ಕ್ಷೇತ್ರದಂತೆಯೇ ಇದೆ. ಉಡುಪಿಯಲ್ಲಿ ನಗರ ಪರಿಸರ ಜಾಸ್ತಿಯಾದರೆ ಕಾಪು ಗ್ರಾಮೀಣ ಪ್ರದೇಶ. ವ್ಯವಸಾಯ, ಮಲ್ಲಿಗೆ ಕೃಷಿ, ಮೀನುಗಾರಿಕೆ, ಮುಂಬೈ ಮತ್ತಿತರೆಡೆ ಇಲ್ಲಿಯ ಮಂದಿ ಮಾಡುತ್ತಿರುವ ಹೊಟೇಲ್ ಉದ್ಯಮಗಳ ಹಣ ಮತ್ತು ದುಬೈ, ಕತಾರ್ ಮುಂತಾದ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯಮ-ಉದ್ಯೋಗ ಕಂಡುಕೊಂಡಿರುವ ಸ್ಥಳೀಯರ ವಹಿವಾಟು ಕಾಪುದ ಆರ್ಥಿಕ ಚಟುವಟಿಕೆಯನ್ನು ನಿಭಾಯಿಸುತ್ತಿದೆ.

ಕಾಪು ತಾಲೂಕಿನ ದೈನಂದಿನ ವ್ಯವಹಾರ-ಮಾತುಕತೆ ನಡೆಯುವುದು ತುಳು ಭಾಷೆಯಲ್ಲಿ. ಶುದ್ಧ ತುಳು ನಾಡಿನ ಸೀಮೆಯಾದ ಕಾಪುವಿನಲ್ಲಿ ಕನ್ನಡ, ಮರಾಠಿ, ಕೊರಗ, ಕೊಂಕಣಿ, ಬ್ಯಾರಿ, ಉರ್ದು ಮಾತಾಡುವ ಮಂದಿ ಇದ್ದಾರಾದರೂ ಹೆಚ್ಚಿನವರು ತುಳು ಭಾಷಿಕರು. ಕಾಪುನಲ್ಲಿ ಮಾತ್ರ ಕಂಡು ಬರುವ ಬದನೆಕಾಯಿ ’ಮಟ್ಟುಗುಳ್ಳ’ ಪ್ರಸಿದ್ಧವಾಗಿದ್ದು ಪೇಟೆಂಟ್ ಪಡೆದಿದೆ. ಪಡುಬಿದ್ರಿಯ ಆಕರ್ಷಕ ಕಡಲತೀರ ಇಕೋ ಬೀಚ್ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾಪು ಕಡಲಲ್ಲಿರುವ ದೀಪಸ್ಥಂಭ ಮತ್ತು ಕಾಪು ಕೋಟೆ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. 1901ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಕಾಪುನಲ್ಲಿ ಲೈಟ್ ಹೌಸ್ ನಿರ್ಮಿಸಿದ್ದರೆ, ಕೋಟೆ ಕಟ್ಟಿಸಿದ್ದು ಟಿಪ್ಪು ಸುಲ್ತಾನ್.

ಮೀನು ಮತ್ತು ಮಲ್ಲಿಗೆ

ಕಾಪು ತಾಲೂಕಿನ ಸಾವಿರಾರು ಕುಟುಂಬಗಳು ಮೀನು ಮತ್ತು ಮಲ್ಲಿಗೆಯಿಂದ ಬದುಕು ಕಟ್ಟಿಕೊಂಡಿವೆ. ಸಾಂಪ್ರದಾಯಿಕ ಮೀನುಗಾರಿಕೆ (ರಂಪಣಿ) ಹಾಗು ಮಲ್ಲಿಗೆ ವ್ಯವಸಾಯ-ಮಾರಾಟದಿಂದ ಲಕ್ಷಾಂತರ ರೂ. ವಹಿವಾಟಾಗುತ್ತಿದೆ. ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಶಂಕರಪುರ ಮಲ್ಲಿಗೆ ಹೂವನ್ನು ಎಲ್ಲ ಸಮುದಾಯದವರು ಬೆಳೆಸುತ್ತಾರಾದರೂ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಈ ಪುಷ್ಪ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಭೌಗೋಳಿಕ ಮಾನ್ಯತೆ (ಜಿಐ) ಪಡೆದಿರುವ ಈ ಮಲ್ಲಿಗೆಗೆ ದೇಶವಿದೇಶಗಳಲ್ಲಿ ಮಾರುಕಟ್ಟೆ ವ್ಯವಸ್ಥೆಯನ್ನು ಬ್ಯಾರಿಗಳು ಮಾಡುತ್ತಾರೆ. ಈ ಸೌಹಾರ್ದದ ಮಲ್ಲಿಗೆ ವಹಿವಾಟಿನ ಮೇಲೇಕೆ ಇನ್ನು ಹಿಂದುತ್ವದ ಕೆಂಗಣ್ಣು ಬಿದ್ದಿಲ್ಲವೆಂಬ ಕ್ರೂರ ಜೋಕ್ ಕರಾವಳಿಯಲ್ಲಿದೆ. ಮೂರು ಮಾರಿಯಮ್ಮನ ಗುಡಿ ಇರುವ ಕಾಪುನಲ್ಲಿ ಕೆಲ ದಿನಗಳ ಹಿಂದಾದ ’ಸುಗ್ಗಿ ಮಾರಿ ಪೂಜೆ’ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಭಯಾನಕ ನಿರ್ಬಂಧ ಹೇರಲ್ಪಟ್ಟಿದ್ದ ಹಿನ್ನೆಲೆಯಲ್ಲಿ ಸದ್ರಿ ಈ ವ್ಯಂಗ್ಯದ ಮಾತು ಹುಟ್ಟಿಕೊಂಡಿದೆ.

ಸಾಂಬಾರಿಗೆ ಬಳಸುವ ವಿಶಿಷ್ಟ ರುಚಿಯ ’ಮಟ್ಟುಗುಳ್ಳ’ ಕಾಪುವಿನ ಮಟ್ಟು ಪ್ರದೇಶದಲ್ಲಿ ವಿಫುಲವಾಗಿ ಬೆಳೆಯಲಾಗುತ್ತಿದೆ. ದೇಶವಿದೇಶಕ್ಕೆ ಕಳಿಸಲಾಗುತ್ತಿರುವ ಈ ಅಪರೂಪದ ಬದನೆ ತಳಿ ಆ ಭಾಗದ ರೈತರಿಗೆ ಆರ್ಥಿಕ ಬಲ ನೀಡಿದೆ. ಉಡುಪಿ ಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಉತ್ಸವಕ್ಕೆ ಮಟ್ಟುಗುಳ್ಳದ ಸಾಂಬಾರು ಆಗಲೆಬೇಕು. ಮಟ್ಟು ಪ್ರದೇಶದ ಮಣ್ಣಲ್ಲಷ್ಟೆ ಬೆಳೆಯುವ ಗುಳ್ಳ ಮತ್ತು ಅಷ್ಟ ಮಠದ ಅವಿನಾಭಾವ ಸಂಬಂಧದ ಕುರಿತು ’ಜನಪದ’ ಕತೆಗಳಿವೆ. ಹೊಟೇಲ್ ಉದ್ಯಮ ಕಾಪು ಕ್ಷೇತ್ರದ ಆರ್ಥಿಕ ಚಟುವಟಿಕೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಕೃಷಿಯೇತರ ಕಸುಬಿನಿಂದ ಶೇ.50ಕ್ಕಿಂತ ಹೆಚ್ಚು ಮಂದಿ ಬದುಕು ಸಾಗಿಸುತ್ತಿದ್ದಾರೆ. ಯುವಜನರ ಕೈಗೆ ಕೆಲಸ ಕೊಡುವ ಕೈಗಾರಿಕಾ ಯೋಜನೆ ಯಾವುದೂ ಕ್ಷೇತ್ರದಲ್ಲಿಲ್ಲ. ಹೀಗಾಗಿ ಪ್ರತಿ ಮನೆಯ ಒಬ್ಬರು ಇಲ್ಲವೆ ಇಬ್ಬರು ಮುಂಬೈ, ಬೆಂಗಳೂರು ಮತ್ತು ವಿದೇಶಕ್ಕೆ ವಲಸೆ ಹೋಗಿದ್ದಾರೆ. ಯುವ ಸಮುದಾಯ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿರುವುದರಿಂದ ವ್ಯವಸಾಯದ ಭೂಮಿ ಬೀಳುಬಿದ್ದಿದೆ.

ಅಷ್ಟ ಮಠದ ಪ್ರಭಾವಳಿ

ಕಾಪು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅಷ್ಟ ಮಠಗಳ ಪ್ರಭಾವವಿದೆ. ಹಳ್ಳಿಗಳಲ್ಲಿ ಜನರು ನೆಲೆಸಿರುವ ಬಹುತೇಕ ಜಾಗ ಹಿಂದೆ ಮಠಕ್ಕೆ ಸೇರಿತ್ತೆಂದು ಹೇಳಲಾಗಿದೆ. ಈಗಲೂ ಕೆಲವು ದೇವಸ್ಥಾನಗಳು ಅಷ್ಟ ಯತಿಗಳ ಪಾರುಪತ್ಯಕ್ಕೆ ಒಳಪಟ್ಟಿದೆ. ಫಲಿಮಾರು ಮತ್ತು ಅದಮಾರು ಮಠಗಳ ಮೂಲ ಮಠ ಕಾಪು ತಾಲೂಕಲ್ಲಿದೆ. ಎರಡು ವರ್ಷಕ್ಕೊಮ್ಮೆ ಉಡುಪಿ ಕೃಷ್ಣನ ಪೂಜಾಧಿಕಾರ ವಹಿಸಿಕೊಳ್ಳುವ ’ಪರ್ಯಾಯ ಯತಿ’ ಅಧಿಕಾರ ವಹಿಸಿಕೊಳ್ಳುವ ಮೊದಲು ಇಲ್ಲಿಯ ದಂಡತೀರ್ಥದಲ್ಲಿ ಸ್ನಾನ ಮಾಡಿ ಹೋಗಬೇಕೆಂಬ ನಿಯಮವಿದೆ.

ಅಷ್ಟ ಮಠದ ಕೆಲವು ಯತಿಗಳು ಕಾಪು ಕ್ಷೇತ್ರದ ಬೇರೆಬೇರೆ ಕಡೆ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಹಾಗಂತ ವೃತ್ತಿಪರ ಕೋರ್ಸ್‌ಗಳ ಕಾಲೇಜುಗಳೇನು ಕಾಪುವಿನಲ್ಲಿಲ್ಲ. ಸೋದೆ ಮಠದ ಇಂಜಿನಿಯರಿಂಗ್
ಕಾಲೇಜೊಂದು ಬಿಟ್ಟರೆ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಉಡುಪಿಯನ್ನು ಅವಲಂಬಿಸಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದ ರಾಜಕೀಯದ ಮೇಲೂ ಅಷ್ಟ ಮಠದ ಯತಿಗಳು ಹಿಡಿತ ಸಾಧಿಸಿದ್ದಾರೆ. ಇಲ್ಲಿಂದ ಸ್ಪರ್ಧಿಸುವ ಎಲ್ಲ ಪಕ್ಷದ ಅಭ್ಯರ್ಥಿ ಅಷ್ಟ ಯತಿಗಳಿಗೆ ಅಡ್ಡಬಿದ್ದು ಬರುತ್ತಾರೆ. ಬಿಜೆಪಿ ಅಭ್ಯರ್ಥಿ ಯಾರಾಗಬೇಕೆಂಬ ನಿರ್ಧಾರದಲ್ಲಿ ಮಠದ ಮಾತು ನಿರ್ಣಾಯಕವಾಗಿರುತ್ತದೆ!

ರಾಜಕಾರಣದ ಮೈಲಿಗಲ್ಲುಗಳು

2008ರಲ್ಲಾದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಸಂದರ್ಭದಲ್ಲಿ ರದ್ದಾಗಿರುವ ಬ್ರಹ್ಮಾವರ ಕ್ಷೇತ್ರದ ಕೆಲವು ಹಳ್ಳಿಗಳನ್ನು ಕಾಪುಗೆ ಸೇರಿಸಲಾಗಿದೆ. ಹಿಗ್ಗಿರುವ ಕಾಪು ಕ್ಷೇತ್ರದಲ್ಲಿ 1,79,828 ಮತದಾರರು ಹಿಂದಿನ ಇಲೆಕ್ಷನ್ ಹೊತ್ತಲ್ಲಿದ್ದರು. ಪಕ್ಕದ ಉಡುಪಿ ಕ್ಷೇತ್ರದಂತೆ ಕಾಪುದಲ್ಲೂ ಪ್ರಬಲ ಬಿಲ್ಲವ, ಬಂಟ ಮತ್ತು ಮೊಗವೀರ ಸಮುದಾಯದ ಮತದಾರರು ಶೇ.70ರಷ್ಟಿದ್ದಾರೆ. ಒಂದು ಅಂದಾಜಿನಂತೆ 45,000 ಬಿಲ್ಲವರು, 38,000 ಬಂಟರು, 35,000 ಮೊಗವೀರರು, 40,000 ಅಲ್ಪಸಂಖ್ಯಾತ ಧಾರ್ಮಿಕರು (ಕ್ರಿಶ್ಚಿಯನ್ ಮತ್ತು ಮುಸ್ಲಿಮ್), ಕುಡುಬಿ, ಮರಾಠಿ, ದಲಿತರು ಸೇರಿದಂತೆ ಮುಂತಾದ ಸಣ್ಣ ಸಂಖ್ಯೆಯ ಜಾತಿಯ ಮತದಾರರಿದ್ದಾರೆ. ಕಾಪು ಕ್ಷೇತ್ರದ ಶಾಸಕರಾಗಿದ್ದವರ ಪಟ್ಟಿಯ ಮೇಲೊಮ್ಮೆ ಕಣ್ಣು ಹಾಯಿಸಿದರೆ ಇಲ್ಲಿ ಕುತೂಹಲಕರ
ರಾಜಕಾರಣ ನಡೆದಿರುವುದು ಕಂಡುಬರುತ್ತದೆ.

ರತ್ನವರ್ಮ ಹೆಗ್ಗಡೆ

ಕಾಪುವಿನಲ್ಲಿ 1957ರಲ್ಲಿ ಪಿಂಟೋ ಡೆನಿಸ್ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಧರ್ಮಸ್ಥಳ ದೇವಾಲಯದ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ (ಈಗಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಂದೆ) 1957ರಿಂದ 1962ರ ತನಕ ಕಾಂಗ್ರೆಸ್ ಶಾಸಕರಾಗಿದ್ದರು (ಬೆಳ್ತಂಗಡಿ ಕ್ಷೇತ್ರದಿಂದ). 1967ರಲ್ಲಿ ಕಾಪು ಕಾಂಗ್ರೆಸ್ ಹುರಿಯಾಳಾಗಿದ್ದ ರತ್ನವರ್ಮ ಹೆಗ್ಗಡೆ ಪಿಎಸ್‌ಪಿಯ ಭಾಸ್ಕರ ಶೆಟ್ಟಿ ಕೈಯಲ್ಲಿ ಸೋತರು. ಆನಂತರ ಕಾಂಗ್ರೆಸ್ ಸೇರಿದ್ದ ಭಾಸ್ಕರ ಶೆಟ್ಟರು ಎರಡು ಬಾರಿ ಎಮ್ಮೆಲ್ಲೆಯಾಗಿದ್ದರು. ಇಂದಿರಾ ಗಾಂಧಿ ಮತ್ತು ದೇವರಾಜ ಅರಸ್ ನಡುವೆ ಭಿನ್ನಾಭಿಪ್ರಾಯ ಬಂದಾಗ ಶೆಟ್ಟರು ಅರಸ್ ಸಂಗಡ ನಿಂತರು. ಅದೇ ಹೊತ್ತಿಗೆ ಕಾಪು ಯೂತ್ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದ ಸುಧಾಕರ ಸಾಲಿಯಾನ್ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಅವರ ಅಣ್ಣ ವಸಂತ ಸಾಲಿಯಾನ್ ಮುಂಬೈನ ನೌಕರಿ ಬಿಟ್ಟು ಊರಿಗೆ ಬಂದು ಸಣ್ಣದೊಂದು ಐಸ್ ಪ್ಲಾಂಟ್ ಹಾಕಿಕೊಂಡಿರುತ್ತಾರೆ. ಜತೆಗೆ ಕಾಂಗ್ರೆಸ್ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಾರೆ.

1983ರ ಅಸೆಂಬ್ಲಿ ಚುನಾವಣೆ ಎದುರಾದಾಗ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಕಾಂಗ್ರೆಸ್‌ನ ಹೈಕಮಾಂಡ್ ಎನಿಸಿದ್ದ ಆಸ್ಕರ್-ಪೂಜಾರಿ-ಮೊಯ್ಲಿ ಕಾಪು ಕ್ಷೇತ್ರಕ್ಕೆ ಹೊಸ ಮುಖದ ಹುಡುಕಾಟ ನಡೆಸಿದ್ದರು. ಶಾಸಕ ಭಾಸ್ಕರ ಶೆಟ್ಟಿ ಬಂಟ ಸಮುದಾಯದವರು ಆಗಿದ್ದರಿಂದ ಕ್ಷೇತ್ರದ ಪ್ರಥಮ ಬಹುಸಂಖ್ಯಾತರಾದ ಬಿಲ್ಲವ ಜಾತಿಯ ವಸಂತ ಸಾಲಿಯಾನ್‌ಗೆ ಅಭ್ಯರ್ಥಿ ಮಾಡಿದರೆ ಸುಲಭವಾಗಿ ಗೆಲ್ಲಬಹುದೆಂದು ಕಾಂಗ್ರೆಸ್ ನಾಯಕರು ಅಂದಾಜಿಸಿದ್ದರು; ಸುಧಾಕರ ಸಾಲಿಯಾನ್ ಸಾವಿನ ಸಿಂಪತಿಯ ಲಾಭ ಪಡೆಯಬಹುದೆಂಬ ಲೆಕ್ಕಾಚಾರ ಹಾಕಿದ್ದರು. ಅನಿರೀಕ್ಷಿತವಾಗಿ ವಸಂತ ಸಾಲಿಯನ್ ಕಾಂಗ್ರೆಸ್ ಅಭ್ಯರ್ಥಿಯಾದರಷ್ಟೇ ಅಲ್ಲ, ಶಾಸಕರಾಗಿ ಆಯ್ಕೆಯೂ ಆಗಿಬಿಟ್ಟರು! 1985ರ ಚುನಾವಣೆಯಲ್ಲಿ ಮಾಜಿ ಶಾಸಕ ಭಾಸ್ಕರ ಶೆಟ್ಟರು ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದರಾದರೂ ಸಾಲಿಯಾನರನ್ನ ಸೋಲಿಸಲಾಗಲಿಲ್ಲ.

ಕಾಂಗ್ರೆಸ್ ಕೋಟೆ

ಕ್ರಿಶ್ಚಿಯನ್ ಮತ್ತು ಮುಸ್ಲಿಮರು ನಿರ್ಣಾಯಕರಾಗಿರುವ ಕಾಪು ಕಾಂಗ್ರೆಸ್‌ನ ಭದ್ರ ಕೋಟೆಯೆಂಬ ಭಾವನೆ ಕರಾವಳಿಯಲ್ಲಿದೆ. ಹಿಂದುತ್ವದ ಗಾಳಿಗಿಂತಲೂ ಜೋರಾಗಿರುವ ಕಾಂಗ್ರೆಸಿಗರ ಮನೆಮುರುಕು ತಂತ್ರಗಾರಿಕೆಯಿಂದ ಕೆಲವು ಬಾರಿ ಕಾಪು ಬಿಜೆಪಿ ಪಾಲಾಗಿತ್ತೆಂದು ವಿಶ್ಲೇಷಿಸಲಾಗುತ್ತಿದೆ. 1983ರಿಂದ 1999ರ ತನಕ ಸತತ ಐದು ಸಲ ಸಾಲಿಯಾನ್ ಚುನಾಯಿತರಾಗಿದ್ದರು. 1994ರಲ್ಲಿ ಅವರು ಪಡೆದ ಒಟ್ಟು ಮತಗಳು 17,152. ಆದರೂ ಬಿಜೆಪಿಯ ಲಾಲಾಜಿ ಮೆಂಡನ್ (15,578), ಜೆಡಿಎಸ್‌ನ (ಈಗಿನ ಕಾಂಗ್ರೆಸ್ ಮಾಜಿ ಎಮ್ಮೆಲ್ಸಿ) ಐವಾನ್ ಡಿಸೋಜಾ (12,440), ಬಂಗಾರಪ್ಪರ ಕೆಸಿಪಿ ಅಭ್ಯರ್ಥಿ ಅಶೋಕ ಸುವರ್ಣರಂಥ (8,275) ಗಟ್ಟಿಗರ ಎದುರು ಕೂದಲೆಳೆ ಅಂತರದಲ್ಲಿ (1,574) ಬಚಾವಾಗಿದ್ದರು. ಸಾಲಿಯಾನ್ ವಿರುದ್ಧ ಆಂಟಿ ಇನ್ಕಂಬನ್ಸ್ ಕೆಲಸ ಮಾಡಿದ್ದರೂ ಕಾಂಗ್ರೆಸ್ ಕ್ಯಾಂಡಿಡೇಟೆಂಬ ಕಾರಣಕ್ಕೆ ಗೆದ್ದಿದ್ದರೆಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವೀರಪ್ಪ ಮೊಯ್ಲಿ ಮತ್ತು ಎಸ್.ಎಂ.ಕೃಷ್ಣ ಸರಕಾರದಲ್ಲಿ ಸಚಿವರಾಗಿದ್ದ ಸಾಲಿಯಾನ್‌ರ ಸಿಡಿಮಿಡಿ ಸ್ವಭಾವ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸದ ಉದಾಸೀನದಿಂದ ಕ್ಷೇತ್ರದ ಜನರಿಗೆ ಬೇರೆಸಬಂದಿತ್ತು. ಕಾಂಗ್ರೆಸ್ ಕಾರ್ಯಕರ್ತರಿಂದಲೂ ದೂರವಾಗಿದ್ದ ಸಾಲಿಯಾನ್ ಬಗ್ಗೆ 2000ದ ದಶಕಾರಂಭದಲ್ಲಿ ಪಾರ್ಟಿಯಲ್ಲಿ ದೊಡ್ಡಮಟ್ಟದ ಅಸಮಾಧಾನ ಮಡುಗಟ್ಟಿತ್ತು. ಸಾಲಿಯಾನ್‌ರ ಅಧಿಕಾರ ಅವರ ಅಳಿಯ ಚಲಾಯಿಸುತ್ತಾರೆಂಬ ಆಕ್ಷೇಪ ಕೇಳಿಬರಲಾರಂಭಿಸಿತ್ತು. 2004ರ ಇಲೆಕ್ಷನ್‌ನಲ್ಲಿ ಸಾಲಿಯಾನ್‌ರಿಗೆ ಟಿಕೆಟ್ ಕೊಡಬಾರದೆಂಬ ಕೂಗೆದ್ದಿತ್ತು. ಟಿಕೆಟ್ ಪಡೆಯಲು ಸಫಲರಾದ ಸಾಲಿಯಾನ್‌ರಿಗೆ ಕಾಂಗ್ರೆಸ್ ಕಾರ್ಯಕರ್ತರು ತಿರುಗಿಬಿದ್ದಿದ್ದರು. ಬಿಜೆಪಿಯ ಲಾಲಾಜಿ ಮೆಂಡನ್ ಎದುರು 1,390 ಮತಗಳ ಅಂತರದಿಂದ ಸಾಲಿಯಾನ್ ಸೋತರು. ಕಾಂಗ್ರೆಸ್ ಬಂಡಾಯಗಾರ್ತಿ ಗ್ಲಾಡಿಸ್ ಅಲ್ಮೆಡಾ ಪಡೆದ ಕ್ರಿಶ್ಚಿಯನ್ ಸಮುದಾಯದ 2,848 ಮತಗಳೇ ಸಾಲಿಯಾನ್ ರಾಜಕಾರಣಕ್ಕೆ ಅಂತ್ಯ ಹಾಡಿದ್ದವು! ಕಾಂಗ್ರೆಸ್‌ನಲ್ಲಿ ವ್ಯಾಪಕ ವಿರೋಧವಿದ್ದರೂ 2008ರಲ್ಲಿ ಮತ್ತೆ ಕಾಂಗ್ರೆಸ್ ಕ್ಯಾಂಡಿಡೇಟಾದ ಸಾಲಿಯಾನ್‌ಗೆ ಗೆಲ್ಲಲಾಗಲಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿದ್ದರೂ ಸಾಲಿಯಾನ್ ಮೇಲಿನ ಅಸಮಾಧಾನ ಬಿಜೆಪಿಯ ಲಾಲಾಜಿ ಮೆಂಡನ್‌ಗೆ ವರವಾಯಿತು. ಮೊಗವೀರ ಸಮುದಾಯದ ಮೆಂಡನ್ 967 ಮತದಂತರದಿಂದ ಎರಡನೆ ಬಾರಿ ಗೆದ್ದು ಶಾಸಕನಾಗುವ ಯೋಗ ಖುಲಾಯಿಸಿತು.

ಸೊರಕೆ ಆಗಮನ

2013ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ- ಅಂದರೆ- ಆಸ್ಕರ್ ಫರ್ನಾಂಡಿಸ್‌ಗೆ ಸಾಲಿಯಾನ್‌ರ ಬದಲಿಗೆ ಬೇರೆ ಬಿಲ್ಲವ ಕ್ಯಾಂಡಿಡೇಟ್ ತಯಾರು ಮಾಡಿದರೆ ಗೆಲ್ಲುವುದು ಕಷ್ಟವೇನಲ್ಲ ಎಂಬುದು ಮನದಟ್ಟಾಗಿತ್ತು. ಬಿಲ್ಲವ ಸಮುದಾಯದ ಮಾಜಿ ಸಂಸದ ವಿನಯ್‌ಕುಮಾರ್ ಸೊರಕೆ ಸಮರ್ಥ ಹುರಿಯಾಳಾಗಬಹುದೆಂಬ ಲೆಕ್ಕಾಚಾರ ಆಸ್ಕರ್ ಫರ್ನಾಂಡಿಸ್ ಅವರದಾಗಿತ್ತು. ಬಿಜೆಪಿಯ ಐ.ಎಂ.ಜಯರಾ ಶೆಟ್ಟಿ ಎದುರು ಸೋತ ನಂತರ ಆಸ್ಕರ್ ಪಾರ್ಲಿಮೆಂಟಿಗೆ ಸ್ಫರ್ದಿಸುವ ಧೈರ್ಯ ಮಾಡಲಿಲ್ಲ. ಪುತ್ತೂರಲ್ಲಿ ಒಮ್ಮೆ ಶಾಸಕನಾಗಿ ಎರಡನೇ ಪ್ರಯತ್ನದಲ್ಲಿ ಮಾಜಿ ಸಿಎಂ ಸದಾನಂದ ಗೌಡರ ಕೈಲಿ ಸೋಲು ಅನುಭವಿಸಿದ್ದ ಸೊರಕೆ ಸುಮ್ಮನಾಗಿದ್ದರು.

ವಿನಯ್‌ಕುಮಾರ್ ಸೊರಕೆ

ಪ್ರಬಲ ಬಿಲ್ಲವ ನಾಯಕನಾಗಿ ರೂಪುಗೊಂಡಿದ್ದ ಜನಾರ್ದನ ಪೂಜಾರಿಗೆ ಸಮಾನಾಂತರವಾಗಿ ಸೊರಕೆಯನ್ನು ಬೆಳೆಸುವ ಪ್ಲಾನು ಆಸ್ಕರ್ ಹಾಕಿಕೊಂಡಿದ್ದರು. ಸೊರಕೆಯನ್ನು ಪುತ್ತೂರಿಂದ ಕರೆಸಿಕೊಂಡ ಆಸ್ಕರ್ ಉಡುಪಿ-ಚಿಕ್ಕಮಗಳೂರು ಪಾರ್ಲಿಮೆಂಟ್ ಅಖಾಡಕ್ಕಿಳಿಸಿದ್ದರು. ಮೊದಲ ಪ್ರಯತ್ನದಲ್ಲೆನೋ ಸಫಲರಾದ ಸೊರಕೆ ಮುಂದಿನ ಎರಡು ಹೋರಾಟದಲ್ಲಿ ವಿಫಲರಾದರು. ಒಮ್ಮೆ ಮನೋರಮಾ ಮಧ್ವರಾಜ್, ಮತ್ತೊಮ್ಮೆ ಸದಾನಂದ ಗೌಡರ ಎದುರು ಸೋತರು. ಆದರೂ ತವರು ಪುತ್ತೂರಿಗೆ ಮರಳದೆ ಉಡುಪಿಯನ್ನು ಕಾರ್ಯಕ್ಷೇತ್ರ ಮಾಡಿಕೊಂಡಿದ್ದ ಸೊರಕೆಗೆ 2013ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಕಾಪು ಕ್ಯಾಂಡಿಡೇಟ್ ಮಾಡಿತು. ಆ ವೇಳೆಗೆ ಲಾಲಾಜಿ ಮೆಂಡನ್ ಸತತ ಎರಡು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಬೇರುಬಿಟ್ಟಿದ್ದರು. ಜತೆಗೆ ಹಿಂದುತ್ವದ ಗಾಳಿಯೂ ಮೋಡಿಮಾಡತೊಡಗಿತ್ತು. ಆದರೂ ಸೊರಕೆ ಸಣ್ಣ ಅಂತರದಲ್ಲಿ ಬಿಜೆಪಿಯನ್ನು ಮಣಿಸಿ ಶಾಸನಸಭೆಗೆ ಹೋದರು; ಸಿದ್ದರಾಮಯ್ಯ ಸರಕಾರದಲ್ಲಿ ಮಂತ್ರಿಯಾಗುವ ಭಾಗ್ಯವೂ ಬಂತು. ಕಾಂಗ್ರೆಸ್ ಅವಕಾಶ ನಿರಾಕರಿಸಿದ ಸಿಟ್ಟಿಂದ ಜೆಡಿಎಸ್ ಉಮೇದುವಾರರಾಗಿದ್ದ ಮಾಜಿ ಮಂತ್ರಿ ಸಾಲಿಯಾನ್‌ಗೆ ಠೇವಣಿಯೂ ಉಳಿಯಲಿಲ್ಲ.

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ, ಶಾಸಕನಾಗಿ ಕಾಪು ಅಭಿವೃದ್ಧಿಗೆ ಸೊರಕೆ ಸಾಕಷ್ಟು ಶ್ರಮಿಸಿದ್ದರು. ಜನಸಾಮಾನ್ಯರ ಕೈಗೆ ಎಟುಕುತ್ತಿದ್ದರು; ಕೇತ್ರದ ಕಷ್ಟಸುಖಕ್ಕೆ ಸ್ಪಂದಿಸುತ್ತಿದ್ದರು. ಕ್ಷೇತ್ರದಲ್ಲಾದ ಅಭಿವೃದ್ಧಿ ಸೊರಕೆಯನ್ನು ಮತ್ತೆ ಗೆಲ್ಲಿಸುತ್ತದೆಂದು ಭಾವಿಸಲಾಗಿತ್ತು. ಆದರೆ ದ್ವೇಷದ ರಾಜಕಾರಣಕ್ಕೆ ಅಭಿವೃದ್ಧಿಯ ಹಂಗಿಲ್ಲವೆಂಬುದನ್ನು 2018 ಅಸೆಂಬ್ಲಿ ಇಲೆಕ್ಷನ್ ಸಾಬೀತುಪಡಿಸಿತ್ತು. ಕೋಮುಗಲಭೆಯ ಹೊತ್ತಲ್ಲಿ ಪೊಲೀಸರ ಲಾಠಿಯಿಂದ ತಪ್ಪಿಸಿಕೊಳ್ಳಲು ಹೊನ್ನಾವರದ ಮೀನುಗಾರರ ಹುಡುಗ ಕತ್ತಲೆಯಲ್ಲಿ ಓಡುವಾಗ ಕಾಲುಜಾರಿ ಕೆರೆಯಲ್ಲಿ ಬಿದ್ದು ಸತ್ತಿದ್ದನ್ನು ಮುಸ್ಲಿಮರು ಕೊಂದರೆಂಬ ಭಾವನೆ ಮೂಡುವಂತೆ ಬಿಂಬಿಸಲಾಗಿತ್ತು. ಈ ದ್ವೇಷದ ಕಿಚ್ಚು ಇಡೀ ಕರಾವಳಿಯನ್ನು ವ್ಯಾಪಿಸಿ ಜೊಳ್ಳುಪೊಳ್ಳುಗಳೆಲ್ಲ ಶಾಸಕ ಸೌಭಾಗ್ಯ ಕಂಡರೆಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ. ಈ ಮತ ಧ್ರುವೀಕರಣದ ಸಂಚಿಗೆ ಸೊರಕೆಯೂ ಬಲಿಯಾದರು; ಬಿಜೆಪಿಯ ಮೆಂಡನ್ ಮೂರನೆ ಸಲ ಎಮ್ಮೆಲ್ಲೆಯಾದರು. ಆದರೆ ಸೋತ ಸೊರಕೆ ಕ್ಷೇತ್ರಕ್ಕೆ ಬೆನ್ನುಹಾಕಿ ಕೂರದೆ ಜನರೊಂದಿಗೆ ಬೆರೆಯುತ್ತ ಅವರ ಬೇಕುಬೇಡಗಳಿಗೆ ಧ್ವನಿಯಾಗಿದ್ದಾರೆಂಬ ಅಭಿಪ್ರಾಯವಿದೆ.

ಸ್ವಂತ ಪಕ್ಷ (ಭಾರತೀಯ ಜನಶಕ್ತಿ ಕಾಂಗ್ರೆಸ್) ಸ್ಥಾಪಿಸಿ ಚುನಾವಣೆಗೆ ಸ್ಫರ್ಧಿಸಿದ್ದ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ 1,634 ಮತ ಪಡೆದಿದ್ದರು. ಬಳ್ಳಾರಿಯ ಕೂಡ್ಲಿಗಿಯಲ್ಲಿ ಡಿವೈಎಸ್‌ಪಿ ಆಗಿದ್ದ ಅನುಪಮಾ ಅಂದಿನ ಸಚಿವ ಪರಮೇಶ್ವರ ನಾಯ್ಕ್ ಕಾನೂನುಬಾಹಿರ ಕೆಲಸ ಮಾಡಲು ಒತ್ತಡ ಹೇರುತ್ತಾರೆಂದು ಆರೋಪಿಸಿ ಉದ್ಯೋಗಕ್ಕೆ ರಾಜೀನಾಮೇಕೊಟ್ಟಿದ್ದರು. ಕಾಪುದ ಫಣಿಯೂರಿನ ಕೊಂಕಣಿ (ಜಿಎಸ್‌ಬಿ) ಕುಟುಂಬದ ಅನುಪಮಾರಿಗೆ ಬಿಜೆಪಿಯ ಮುಂದಾಳುಗಳು ಮೋಸ ಮಾಡಿದರೆಂಬ ಮಾತು ಕೇಳಿಬಂದಿತ್ತು. ಶೋಭಾ ಕರಂದ್ಲಾಜೆ ಕಾಪುವಿನಲ್ಲಿ ಅವರನ್ನು ಬಿಜೆಪಿ ಕ್ಯಾಂಡಿಡೇಟ್ ಮಾಡುವ ಭರವಸೆ ನೀಡಿದ್ದರಿಂದ ಅನುಪಮಾ ಅಂದಿನ ಕಾಂಗ್ರೆಸ್ ಸರಕಾರವನ್ನು ದೂಷಿಸುತ್ತ ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ ಕೊಟ್ಟು ಅತಂತ್ರರಾದರೆಂದು ಜನ ಮಾತಾಡಿಕೊಂಡಿದ್ದರು.

ಕ್ಷೇತ್ರದ ಕಷ್ಟ-ಇಷ್ಟ

ಉಡುಪಿ ತಾಲೂಕಲ್ಲಿದ್ದ ಕಾಪು ಮತ್ತದರ ಸುತ್ತಲಿನ ಹಳ್ಳಿಗಳನ್ನು ಸೇರಿಸಿ 2018ರಲ್ಲಿ ಪ್ರತ್ಯೇಕ ಕಾಪು ತಾಲೂಕು ರಚನೆ ಮಾಡಲಾಗಿದೆ. ಅಂದು ಶಾಸಕರಾಗಿದ್ದ ವಿನಯಕುಮಾರ್ ಸೊರಕೆ ಪ್ರಯತ್ನದಿಂದ ಕಾಪುಗೆ ತಾಲೂಕಿನ ಸ್ಥಾನಮಾನ ಸಿಕ್ಕಿದೆಯಾದರೂ ಅದಿನ್ನೂ ಪೂರ್ಣಪ್ರಮಾಣದ ತಾಲೂಕಾಗಿಲ್ಲವೆಂದು ಜನರು ಬೇಸರಿಸುತ್ತಾರೆ. ತಾಲೂಕ್ ಕೇಂದ್ರದಲ್ಲಿರಬೇಕಾದ ಸರಕಾರಿ ಕಚೇರಿಗಳು ಮತ್ತಿತರ ಸೌಲಭ್ಯ ಕಲ್ಪಿಸುವ ಸ್ಪಷ್ಟ ಕಲ್ಪನೆ ಹೊಂದಿದ್ದ ಶಾಸಕ ಸೊರಕೆ, ಕಾಪು ತಾಲೂಕಾದ 2-3 ತಿಂಗಳಲ್ಲಿ ಮಾಜಿಯಾದರು. ಆನಂತರ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ತಾಲೂಕು ಕಚೇರಿ-ಪುರಸಭೆ-ಡಬ್ಬಲ್ ರೋಡ್ ಮಂಜೂರಿ ಮತ್ತಿತರ ಸೌಕರ್ಯಕ್ಕಾಗಿ ಪ್ರಯತ್ನಿಸಿದ್ದರು. ಆದರೆ ಸೊರಕೆ ನಂತರ ಶಾಸಕರಾದ ಬಿಜೆಪಿಯ ಲಾಲಾಜಿ ಮೆಂಡನ್ ಕಾಪುವನ್ನು ಪೂರ್ಣಪ್ರಮಾಣದ ತಾಲೂಕನ್ನಾಗಿ ಸಿದ್ಧಪಡಿಸಲು ಬದ್ಧತೆಯಿಂದ ಕೆಲಸ ಮಾಡುತ್ತಿಲ್ಲವೆಂದು ಜನರು ಆರೋಪಿಸುತ್ತಾರೆ.

ಕಾಪುನಲ್ಲಿ ಆದಷ್ಟು ಬೇಗ ಬಡವರಿಗೆ ಅನುಕೂಲವಾಗುವ ಸರಕಾರಿ ಆಸ್ಪತ್ರೆ ಆಗಬೇಕೆಂಬ ಕೂಗೆದ್ದಿದೆ. ಕಾಪು ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ನಿತ್ಯ ಒಂದಲ್ಲ ಒಂದು ಅಪಘಾತ ಆಗುತ್ತಿರುವುದರಿಂದ ಸರಕಾರಿ ಆಸ್ಪತ್ರೆ ತೀರಾ ಅವಶ್ಯವೆಂದು ಜನರು ಹೇಳುತ್ತಾರೆ. ಸಬ್ ರಿಜಿಸ್ಟಾರ್ ಕೆಲಸಕ್ಕೆ ದಕ್ಷಿಣಕನ್ನಡದ ಮೂಲ್ಕಿ ತಾಲೂಕಿಗೆ ಹೋಗಬೇಕಾಗಿದೆ. ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರ ಬೇಕೆಂದು ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಬಿಇಓ ಆಫೀಸ್ ಅವಶ್ಯವಾಗಿದೆ. ಇದ್ಯಾವುದರ ಬಗ್ಗೆಯೂ ಶಾಸಕ ಮೆಂಡನ್ ತಲೆಕೆಡಿಸಿಕೊಳ್ಳುತ್ತಿಲ್ಲವೆಂಬ ಆಕ್ರೋಶ ಕ್ಷೇತ್ರದಲ್ಲಿ ಹೆಪ್ಪುಗಟ್ಟಿದೆ. ಕಾಂಗ್ರೆಸ್ ಕಾಲದಲ್ಲಾದ ಪುರಸಭೆಯನ್ನು ಬಿಜೆಪಿ ಬೇಡವೆಂದು ಹೇಳುತ್ತಿರುವುದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾದ ಹಿತಾಸಕ್ತಿ ಅಡಗಿದೆಯೆನ್ನಲಾಗಿದೆ. ಗ್ರಾಮ ಪಂಚಾಯತ್ ಆಡಳಿತವಿದ್ದರೆ ರಿಯಲ್ ಎಸ್ಟೇಟ್ ದಂಧೆದಾರರಿಗ ಲೇಔಟ್ ಮತ್ತಿತರ ಸೌಲಭ್ಯ ಒದಗಿಸುವ ’ಹಾನಿ’ ಕಮ್ಮಿಯಂತೆ.

ವಸಂತ ಸಾಲಿಯನ್

ಕುಡಿಯುವ ನೀರು, ರಸ್ತೆ ಸಂಪರ್ಕದಂಥ ಮೂಲಸೌಕರ್ಯ ಅವಶ್ಯವಿರುವ ಕಾಪುವಿನಲ್ಲಿ ಸಾಮಾನ್ಯ ಬಜೆಟ್ ಕಾಮಗಾರಿಗಳು ಬರುತ್ತಿವೆಯೆ ಹೊರತು ಯುವ ಜನಾಂಗಕ್ಕೆ, ರೈತ, ಮೀನುಗಾರರಿಗೆ ಜೀವನ ನಿರ್ವಹಿಸಲು ಅನುಕೂಲವಾಗುವಂಥ ಮುಂದಾಲೋಚನೆಯ ಯೋಜನೆಗಳ್ಯಾವುದು ಬರುತ್ತಿಲ್ಲ. ಶಾಸಕ ಲಾಲಾಜಿ ಮೆಂಡನ್ ಸಮಗ್ರ ಕಾಪು ಅಭಿವೃದ್ಧಿಯ ನೀಲನಕ್ಷೆ ಹಾಕಿಕೊಂಡು ಬದ್ಧತೆಯಿಂದ ಕೆಲಸ ಮಾಡುವುದುಬಿಟ್ಟು, ಬ್ರಹ್ಮ ಕಲಶೋತ್ಸವ, ದೇವಸ್ಥಾನ ನವೀಕರಣದಂಥ ಭಾವನಾತ್ಮಕ ತುಡಿತದ ಓಟ್ ಬ್ಯಾಂಕ್ ಚಟುವಟಿಕೆ
ಮತ್ತು ಸ್ವಲಾಭದ ಸಿವಿಲ್ ಕಾಮಗಾರಿಯಲ್ಲಿ ಮಗ್ನರಾಗಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಲಾಲಾಜಿ ಮೆಂಡನ್‌ರ ಈ ನಾಲ್ಕು ವರ್ಷದ ಶಾಸಕತ್ವದ ಅವಧಿಯಲ್ಲಿ ಒಂದೇಒಂದು ನಿವೇಶನ ಬಡವರಿಗೆ ಹಂಚಲಾಗಿಲ್ಲ; ಗುಡಿಸಲು ವಾಸಿಗಳಿಗೆ ಹಕ್ಕುಪತ್ರ ಸಿಗುತ್ತಿಲ್ಲ; ಸರಕಾರಿ ಕಚೇರಿಗಳಲ್ಲಿ ಲಂಚದ ಹಾವಳಿ ಮಿತಿಮೀರಿ ಹೋಗಿದೆಯೆಂಬ ಆಕ್ಷೇಪ ಸಾಮಾನ್ಯವಾಗಿದೆ.

ಕಾಪು ಮೀನುಗಾರರು ಮಲ್ಪೆ ಬಂದರನ್ನೇ ಅವಲಂಬಿಸಬೇಕಾಗಿದೆ. ಹೆಜಮಾಡಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣದ ಕನಸಿನ್ನೂ ಈಡೇರಿಲ್ಲ. ಬೃಹತ್ ಖಾಸಗಿ ವಾಣಿಜ್ಯ ಬಂದರು ಹೆಜಮಾಡಿಯಲ್ಲಿ ಕಟ್ಟುವ ಪ್ರಸ್ತಾಪ ಆಗುತ್ತಿದೆಯಾದರೂ ಇದರಿಂದ ಮೀನುಗಾರರಿಗೆ ತೊಂದರೆಯಾಗುತ್ತದೆಂಬ ಆತಂಕ ಆರಂಭವಾಗಿದೆ. ಗಾಳಿ ವಿದ್ಯುತ್ ತಯಾರಿಕಾ ಘಟಕಕ್ಕೆ ಬಿಡಿ ಭಾಗ ಒದಗಿಸುವ ಸುಜ್ಲಾನ್ ಕಂಪನಿಯಿಂದ ಸ್ಥಳೀಯರಿಗೆ ಪ್ರಯೋಜನವೇನಾಗಿಲ್ಲ.

ಇನ್ನೊಂದೆಡೆ ನಾಗಾರ್ಜುನ ಕಂಪನಿಯಿಂದ ಆದಾನಿ ಒಡೆತನಕ್ಕೆ ಜಾರಿರುವ ನಂದಿಕೂರಿನ ಉಷ್ಣ ವಿದ್ಯುತ್ ಸ್ಥಾವರ ಜೀವಜಗತ್ತನ್ನು ಕಂಗೆಡಿಸಿಬಿಟ್ಟಿದೆ. ಹಾರು ಬೂದಿ ಜೀವರಾಶಿಯ ಸ್ವಾಸ್ಥ್ಯ ಕೆಡಿಸುತ್ತಿದ್ದರೆ, ಸಮುದ್ರಕ್ಕೆ ಬಿಡಲಾಗತ್ತಿರುವ ಕಲುಷಿತ ನೀರು ಜಲಚರಗಳಿಗೆ ಮತ್ತು ಮೀನುಗಾರರಿಗೆ ಗಂಡಾಂತರಕಾರಿಯಾಗಿದೆ. ಈ ಸಮಸ್ಯೆ ಬಗೆಹರಿಸಲು ಸಂಸದೆ ಶೋಭಾ ಕರಂದ್ಲಾಜೆಯಾಗಲಿ, ಶಾಸಕ ಮೆಂಡನ್ ಆಗಲಿ ಪ್ರಯತ್ನಿಸುತ್ತಿಲ್ಲವೆಂಬ ಅಸಮಾಧಾನ ಜನರಲ್ಲಿದೆ.

ಲಾಲಾಜಿಯನ್ನು ಸಂಘ ವಿಶ್ರಾಂತಿಗೆ ಕಳಿಸಲಿದೆಯೆ?

ಮಾಜಿ ಶಾಸಕ ವಿನಯ್‌ಕುಮಾರ್ ಸೊರಕೆಗೆ ಹೋಲಿಸಿದರೆ ಹಾಲಿ ಶಾಸಕ ಲಾಲಾಜಿ ಮೆಂಡನ್ ಕ್ಷೇತ್ರದ ಬೇಕುಬೇಡಗಳ ಅರಿವಿಲ್ಲದ, ಮುನ್ನುಗ್ಗಿ ಸಮಷ್ಟಿಯ ಕೆಲಸಕಾರ್ಯ ಮಾಡಲಾಗದ, ಆಡಳಿತ ಯಂತ್ರವನ್ನು ಜನಪರವಾಗಿ ಪಳಗಿಸಲಾಗದ ನಿಧಾನಗತಿಯ ರಾಜಕಾರಣಿಯೆಂದು ಪಕ್ಷಪಂಗಡದ ಹಂಗಿಲ್ಲದ ಅಭಿಪ್ರಾಯ ಕಾಪುದಲ್ಲಿದೆ. ಮೆಲ್ಲಗೆ-ಮೆತ್ತಗೆ ಮಾತಾಡುವ ಮೆಂಡನ್ ಧರ್ಮಕಾರಣದ ಅಜೆಂಡಾ ಮೂಲಕ ಹಳ್ಳಿಗಳ ಸಂಪರ್ಕ ಸಾಧಿಸಿದ್ದಾರಾದರೂ ಶಾಸಕರ ಧೋರಣೆಯ ಬಗ್ಗೆ ಅಸಮಧಾನವೂ ವ್ಯಾಪಕವಾಗಿದೆ. ಶಾಸಕರ ಕುಟುಂಬ ಗ್ಲಾಸ್ ತಯಾರಿಕೆಗೆ ಬಳಕೆಯಾಗುವ ಸಿಲಿಕಾ ಸ್ಯಾಂಡ್ ಅಕ್ರಮವಾಗಿ ಸಾಗಾಟ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಯಶಪಾಲ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ

ಇದೆಲ್ಲ ಕರಾವಳಿ ಬಿಜೆಪಿ ಟಿಕೆಟ್ ಹಂಚಿಕೆ ಮಾಡುವ ಸಂಘಪರಿವಾರದ ತಂಡದ ಸರ್ವೋಚ್ಚ ನಾಯಕನ ಕಿವಿಗೂ ತಲುಪಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿ ಮೆಂಡನ್‌ಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಸದಿರಲು ಯೋಚಿಸಲಾಗುತ್ತಿದೆಯೆಂಬ ಪಿಸುಮಾತು ಬಿಜೆಪಿ ಬಿಡಾರದಿಂದ ಹೊರಬರುತ್ತಿದೆ. ಕಾಂಗ್ರೆಸ್ ಕಾಪುವಿನಲ್ಲಿ ಬಿಲ್ಲವರಿಗೆ ಅಭ್ಯರ್ಥಿ ಮಾಡುತ್ತ ಬಂದಂತೆ ಬಿಜೆಪಿಯಲ್ಲಿ ಮೊಗವೀರರಿಗೆ ಟಿಕೆಟ್ ಕೊಡುವ ಪರಿಪಾಠವಿದೆ. ಆದರೆ ಈ ಬಾರಿ ಕಾಪುವಿನಲ್ಲಿ ಬಂಟರಿಗೆ ಅವಕಾಶ ಕೊಟ್ಟು ಉಡುಪಿಯಲ್ಲಿ ಮೊಗವೀರ ಹುರಿಯಾಳನ್ನು ಕಣಕ್ಕಿಳಿಸುವ ಪ್ರಯೋಗ ನಡೆದಸಿದರೆ ಏನಾಗಬಬಹುದೆಂಬ ಲೆಕ್ಕಾಚಾರ ಆರ್‌ಎಸ್‌ಎಸ್‌ನಲ್ಲಿ ನಡೆದಿದೆಯೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮೂರು ಹೆಸರುಗಳು ಬಿಜೆಪಿಯಲ್ಲಿ ಜೋರಾಗಿ ಓಡಲಾರಂಭಿಸಿದೆ. ಮೊಗವೀರ ಸಮುದಾಯದ ಯಶಪಾಲ ಸುವರ್ಣ ಮತ್ತು ಒಂದು ಕಾಲು ಈಗಾಗಲೆ ಬಿಜೆಪಿಯಲ್ಲಿಟ್ಟಿರುವ ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್, ಬಂಟ ಜಾತಿಯ ಗುರ್ಮೆ ಸುರೇಶ್ ಶೆಟ್ಟಿ ಪೈಕಿ ಒಬ್ಬರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಯಶಪಾಲ್ ಸುವರ್ಣ ಬಗ್ಗೆ ಕರಾವಳಿಯ ಸಂಘ ಪರಿವಾರದ ಪ್ರಶ್ನಾತೀತ ಮುಖಂಡನಿಗೆ ಒಲವು ಜಾಸ್ತಿಯಿದೆಯೆಂಬುದು ಸಂಘಿಗಳ ಅನಿಸಿಕೆ. ಹಾಜಬ್ಬ-ಹಸನಬ್ಬ ಎಂಬ ಜಾನುವಾರು ವ್ಯಾಪಾರಿ ತಂದೆ-ಮಗನ ಬೆತ್ತಲೆ ಮಾಡಿ ಬಡಿದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಈ ಯಶಪಾಲ್, ಈಚೆಗೆ ಉಡುಪಿಯಲ್ಲಿ ಭುಗಿಲೆದ್ದಿದ್ದ ಹಿಜಾಬ್ ವಿವಾದದಲ್ಲಿ ಮುಂಚೂಣಿಯಲ್ಲಿದ್ದದ್ದು ’ಗುರು’ವನ್ನು ಸಂಪ್ರೀತಗೊಳಿಸಿದ್ದಾರೆನ್ನಲಾಗಿದೆ. ಬಿಜೆಪಿ ಸೇರಿಸಿಕೊಳ್ಳಿಯೆಂದು ಸಂಘ ಸರದಾರರಿಗೆ ದುಂಬಾಲು ಬಿದ್ದಿದ್ದಾರೆನ್ನಲಾಗಿರುವ ಪ್ರಮೋದ್ ಮಧ್ವರಾಜ್‌ಗೆ ಉಡುಪಿ ಅಥವಾ ಕಾಪುವಿನಲ್ಲಿ ಟಿಕೆಟ್ ಕೊಟ್ಟರೆ ಆಗುವ ಲಾಭನಷ್ಟದ ಪರಾಮರ್ಶೆ ಸಂಘದಲ್ಲಿ ನಡೆಯುತ್ತಿದೆಯಂತೆ. ಪ್ರಮೋದ್‌ರ ತಾಯಿ ಮನೋರಮಾ ಮಧ್ವರಾಜರನ್ನು ಬಿಜೆಪಿಗೆ ಕರೆತಂದು ಎಂಪಿ ಮಾಡಿದರೂ ಅವರು ನಿಷ್ಠರಾಗಿ ಉಳಿಯಲಿಲ್ಲ; ಕರಾವಳಿ ಮೊಗವೀರ ಸಮುದಾಯ ಬಿಜೆಪಿ ಕಡೆಗಿದೆ. ಹಾಗಾಗಿ ಪ್ರಮೋದ್‌ರಿಂದ ವಿಶೇಷ ಅನುಕೂಲವೇನಿಲ್ಲ ಎಂಬ ಅಭಿಪ್ರಾಯ ಸಂಘದಲ್ಲಿ ವ್ಯಕ್ತವಾಗಿದೆಯೆನ್ನಲಾಗಿದೆ.

ಕಾಂಗ್ರೆಸ್‌ನಲ್ಲಿದ್ದ ಗಣಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಕಳೆದ ಚುನಾವಣೆ ಸಂದರ್ಭದಲ್ಲಿ ತನ್ನನ್ನು ಅಭ್ಯರ್ಥಿ ಮಾಡುತ್ತಾರೆಂಬ ಭರವಸೆಯಿಂದ ಬಿಜೆಪಿ ಸೇರಿದ್ದರು. ಈ ಬಾರಿಯೂ ಗುರ್ಮೆ ಶೆಟ್ಟರಿಗೆ ಅವಕಾಶ ಕೊಡದಿದ್ದರೆ ಅದರ ಪರಿಣಾಮವನ್ನು ಬಂಟ ಸಮುದಾಯದಿಂದ ಎದುರಿಸಬೇಕಾಗಬಹುದೆಂಬ ಭಯ ಬಿಜೆಪಿಯಲ್ಲಿದೆ. ಕಾಂಗ್ರೆಸ್‌ನಲ್ಲಿ ಸೊರಕೆಗೆ ಪ್ರತಿಸ್ಪರ್ಧಿಗಳಿಲ್ಲ. ಸಂಘ ಪರಿವಾರದ ’ಧರ್ಮಯುದ್ಧ’ದ ಕಾಲಾಳುಗಳಾಗಿ ಬಲಿಬೀಳುತ್ತಿರವ ಸ್ವಜಾತಿ ಬಿಲ್ಲವ ಯುವಕರನ್ನು ಸೆಳೆಯುವ ಶಕ್ತಿಯಿರುವ ಸೊರಕೆ ಕಾಂಗ್ರೆಸ್‌ಗೆ ಪ್ರಬಲ ಹುರಿಯಾಳು. ಆದರೆ ಕಾಂಗ್ರೆಸ್‌ಗೆ ಎಸ್‌ಡಿಪಿಐ ತೊಡಕಾಗಿದೆ. ಪುರಸಭೆ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲಿದ್ದ ಕಾಂಗ್ರೆಸ್ ಸೋತಿದ್ದೇ ಎಸ್‌ಡಿಪಿಐ ಮತ ವಿಭಜಿಸಿದ್ದರಿಂದ ಎನ್ನಲಾಗುತ್ತಿದೆ. ಹೀಗಾಗಿ ಕಾಪುನಲ್ಲಿ ಎಸ್‌ಡಿಪಿಐ ಸಂಘಪರಿವಾರದ ’ಬಿ’ಟೀಮ್ ಎಂಬ ಅನುಮಾನ ಕರಾವಳಿಯಲ್ಲಿ ಹುಟ್ಟಿಕೊಂಡಿದೆ. ಹಿಜಾಬ್-ಆಜಾನ್-ಹಲಾಲ್ ಏನೇ ತಂದರೂ ಕಾಪು ಸುಲಭದ ತುತ್ತಲ್ಲ ಎಂಬುದು ಬಿಜೆಪಿಗೂ ಗೊತ್ತಿದೆ. ಕಾಪು ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ 2023ರ ಅಸೆಂಬ್ಲಿ ಚುನಾವಣೆ ಕದನ ಕುತೂಹಲ ಕೆರಳಿಸುವ ಸಕಲ ಸಂಕೇತಗಳು ಗೋಚರಿಸುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಉಡುಪಿ: ಸಮಸ್ಯೆ ಹೆಚ್ಚಿಲ್ಲದಿದ್ದರೂ ಸಾಮರಸ್ಯಕ್ಕೆ ಸಂಕಟ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...