| ಮಲ್ಲನಗೌಡರ್ |
ಈ ಸಮ್ಮಿಶ್ರ ಸರ್ಕಾರದ ಪ್ರತಿ ಹೆಜ್ಜೆಯಲ್ಲೂ ಬಿಕ್ಕಟ್ಟುಗಳೇ ಇವೆ. ನೇರವಾದ, ಸುಲಲಿತವಾಗಿ ಯಾವುದೂ ಆಗುತ್ತಿಲ್ಲ. ಮೈತ್ರಿ ಪಕ್ಷಗಳ ನಾಯಕರು ದಿನವೂ ರಾಜಕೀಯದ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಂಡಿರುವುದರಿಂದ ಇಬ್ಬರು ಹೊಸ ಸಚಿವರಿಗೆ ಖಾತೆ ನೀಡುವುದು ಒಂದು ಸಣ್ಣ ಬಿಕ್ಕಟ್ಟೇ ಆಗಿರುವಂತಿದೆ.
ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸೇರಿದ ಇಬ್ಬರು ಪಕ್ಷೇತರರಿಗೆ 11-12 ದಿನವಾದರೂ ಖಾತೆ ಹಂಚಿಕೆ ಆಗಿಲ್ಲ. ಈಗ ವಿ. ಶಂಕರ್ ಕಾಂಗ್ರೆಸ್ ಸದಸ್ಯರು. ಅವರಿಗೆ ಕಾಂಗ್ರೆಸ್ ಪಾಲಿನ ಖಾತೆಯನ್ನೇ ಕೊಡದೇ ಬೇರೆ ದಾರಿಯೇ ಇಲ್ಲದಂತಾಗಿದೆ. ಮುಳಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯೇ ಬೇಕೆಂದು ಎಂದು ಪಟ್ಟು ಹಿಡಿದಿದ್ದಾರೆ.

ಆರಂಭದಲ್ಲಿ ತಾವು ನಿಭಾಯಿಸಿದ್ದ ಅರಣ್ಯ ಖಾತೆಯೇ ಬೇಕು ಎಂದು ಶಂಕರ್ ಪಟ್ಟು ಹಿಡಿದಿದ್ದಾರೆ. ರಮೇಶ ಜಾರಕಿಹೊಳಿ ನಿಭಾಯಿಸಿದ್ದ ಪೌರಾಡಳಿತ ಖಾತೆಯನ್ನು ನಂತರ ಕಾಗ್ರೆಸ್‍ನ ಸಿ.ಎಸ್ ಶಿವಳ್ಳಿ ನಿರ್ವಹಿಸಿದ್ದರು. ಅವರ ನಿಧನದ ನಂತರ ಖಾಲಿ ಇರುವ ಆ ಸ್ಥಾನವನ್ನು ಒಪ್ಪಲು ಶಂಕರ್ ಸಿದ್ದರಿಲ್ಲ. ಈಗ ಅರಣ್ಯ ಖಾತೆಗೆ ಪ್ರಬಲ ನಾಯಕ ಕಾಂಗ್ರೆಸ್‍ನ ಸತೀಶ ಜಾರಕಿಹೊಳಿ ಸಚಿವರಿದ್ದು ಅವರಿಂದ ಈ ಖಾತೆ ಕಿತ್ತು ಕೊಡಲೂ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‍ನ ಹಿರಿಯ ನಾಯಕರೂ ಒಪ್ಪುವುದಿಲ್ಲ. ಶಂಕರ್‍ಗೆ ಅರಣ್ಯ ಸಚಿವ ಖಾತೆ ನೀಡಲು ಒಂದು ಮಟ್ಟಿನ ಪುನರಾರಚನೆ ಮಾಡಬೇಕು ಇದರಿಂದ ಸಚಿವರಲ್ಲಿ ಖಾತೆಗಾಗಿ ಮತ್ತೆ ಸ್ಪರ್ಧೆ ಏರ್ಪಡಬಹುದು. ಅದರಿಂದಾಗಿ ಶಂಕರ್ ಅವರು ಪೌರಾಡಳಿತ ಖಾತೆ ಒಪ್ಪದೇ ಬೇರೆ ದಾರಿಯೇ ಇಲ್ಲ. ಇಂಥದ್ದೇ ಖಾತೆ ಎಂದು ಒತ್ತಾಯಿಸುತ್ತಾ ಕೂತರೆ ಇನ್ನಷ್ಟು ದಿನ ಖಾತೆ ರಹಿತ ಸಚಿವರಾಗಿಯೇ ಮುಂದುವರೆಯಬೇಕಾಗುತ್ತೆ ಎಂದು ಸಿಎಂ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಬಿಎಸ್‍ಪಿಯ ಎನ್. ಮಹೇಶ್ ಸಚಿನ ಸ್ಥಾನಕ್ಕೆ ರಾಜಿನಾಮೆ ನೀಡಿದಾಗಿನಿಂದಲೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಖಾಲಿಯೇ ಇದೆ. ಸದ್ಯ ಅದನ್ನೇ ತಮಗೆ ನೀಡಲಿ ಎಂದು ನಾಗೇಶ ಪಟ್ಟು ಹಿಡಿದಿದ್ದಾರೆ. ಜೆಡಿಎಸ್ ಪಾಲಿನ ಖಾತೆಗಳಲ್ಲಿಯೇ ಮಹೇಶರಿಗೆ ನೀಡಲಾಗಿತ್ತು. ಈಗ ನಾಗೇಶರಿಗೆ ಕೊಡಲು ಹೋದರೆ, ಜೆಡಿಎಸ್‍ನ ಯಾವುದಾದರೂ ಸಚಿವರು ತಮಗೆ ಅದನ್ನು ಕೊಡಿ ಎಂದು ಬೇಡಿಕೆ ಇಡಬಹುದೇನೋ. ಬಹಳಷ್ಟು ಸಮಯದಿಂದ ಖಾಲಿಯೇ ಇರುವ ಶಿಕ್ಷಣ ಖಾತೆಯ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಯೇ ಇಲ್ಲ. ಶಾಲೆಗಳು ಪುನರಾರಂಭವಾದರೂ ಅಧಿಕಾರಿಗಳ ನಿರ್ದೇಶನದಂತೆ ಎಲ್ಲವೂ ನಡೆಯುತ್ತಿದೆ. ನಾಗೇಶರಿಗೆ ಶಿಕ್ಷಣ ಖಾತೆ ಕೊಡದಿದ್ದರೆ, ಕುಮಾರಸ್ವಾಮಿ ತಮ್ಮಲ್ಲೇ ಇರವ ಹಲವು ಖಾತೆಗಳ ಪೈಕಿ ಒಂದನ್ನು ನೀಡಬೇಕಾಗುತ್ತದೆ.
ಶಂಕರ್ ಮತ್ತು ನಾಗೇಶರನ್ನು ಸಚಿವರನ್ನಾಗಿ ಮಾಡಿದ ಕಾಂಗ್ರೆಸ್‍ನ ನಾಯಕರಿಗೆ ಖಾತೆಗಳ ಬಗ್ಗೆ ಗಮನ ಹರಿಸಲು ಪೂರೈಸುತ್ತಿಲ್ಲ. ಅತೃಪ್ತ ಶಾಸಕರನ್ನು ಓಲೈಸುವ ಯತ್ನದಲ್ಲೂ ಕಾಂಗ್ರೆಸ್‍ಗೆ ಆಸಕ್ತಿ ಹೋದಂತಿದೆ. ಚಿಂಚೋಳಿಯ ಗೆಲುವಿನಿಂದ ಒಂದು ಸೀಟು ಹೆಚ್ಚು ಕಡಿಮೆ ಮಾಡಿಕೊಂಡಿರುವ ಬಿಜೆಪಿ ಸದಕ್ಕೆ ಶಂಕರ್, ನಾಗೇಶರ ಮೇಲೆ ಅಶೆ ಬಿಟ್ಟಿದೆ ಎಂಬುದು ಸತ್ಯ. ರೋಶನ್ ಬೇಗ್‍ರಿಂದ ಖಾಲಿಯಾದ ಸ್ಥಾನವನ್ನು ಶಂಕರ್ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಸಮಾಧಾನ ಹೊಂದಿದೆ.

ಅರಣ್ಯ ಇಲಾಖೆಯ ನೇಮಕಾತಿಗಳಲ್ಲಿ ಶೇ 30ರಷ್ಟನ್ನು ಅರಣ್ಯವಾಸಿಗಳಿಗೆ ಮೀಸಲು ಇರುವಂತೆ ಕ್ರಮ ಕೈಗೊಂಡ ಸತೀಶ ಜಾರಕಿಹೊಳಿ ಆ ಖಾತೆಯನ್ನು ಬಿಟ್ಟು ಕೊಡಲಾರರು. ಹೀಗಾಗಿ ಶಂಕರ್ ಅನಿವಾರ್ಯವಾಗಿ ಪೌರಾಡಳಿತ ಖಾತೆ ಒಪ್ಪಿಕೊಳ್ಳಲೇ ಬೇಕಾಗಬಹುದು. ಸದ್ಯಕ್ಕೆ ಮೈತ್ರಿಯ ನಾಯಕರಿಗೆ ಶಂಕರ್ ಮತ್ತು ನಾಗೇಶರ ಖಾತೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಇನ್ನಷ್ಟು ಅವಧಿಗೆ ಶಂಕರ್ ಮತ್ತು ನಾಗೇಶ ಖಾತೆರಹಿತ ಸಚಿವರಾಗಿಯೇ ಮುಂದುವರೆಯಬೇಕು ಅಥವಾ ಈಗ ಸೂಚಿಸಿದ ಖಾತೆಗಳನ್ನು ಒಪ್ಪಿಕೊಳ್ಳಬೇಕು.


