ಆರ್‌ಎಸ್‌ಎಸ್ ಈ ದೇಶದ್ದಾ? ಅವರೇನು ದ್ರಾವಿಡರಾ? ದ್ರಾವಿಡರು ಈ ದೇಶದವರು. ಇದನ್ನೆಲ್ಲಾ ಪ್ರಶ್ನಿಸುತ್ತಾ ಹೋದರೆ ಏನಾಗುತ್ತದೆ ಗೊತ್ತಾ? ಅದಕ್ಕೆ ಚರಿತ್ರೆಯನ್ನು ಕೆದಕಲು ಹೋಗಬಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಮಾಜಿ ಪ್ರಧಾನಿ ದಿವಂಗತ ಜವಾಹರ್‌ಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು, “ಚರಿತ್ರೆ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು” ಎಂದು ಹೇಳಿದ್ದರು. ಯುವಕರು, ದ್ರಾವಿಡರು, ದುಡಿಯುವ ಜನ ಸಮುದಾಯಗಳು ಈ ದೇಶದ ನಿಜವಾದ ಚರಿತ್ರೆ ಓದಬೇಕು. ನಿಜವಾದ ಚರಿತ್ರೆಯನ್ನು ಅರಿತುಕೊಂಡರೆ ಏನಾಗಬಹುದು ಎನ್ನುವುದು ಆರ್ ಎಸ್‌ಎಸ್ ನವರಿಗೆ ಗೊತ್ತಿದೆ ಮತ್ತು ನಿಜವಾದ ಚರಿತ್ರೆ ಬಗ್ಗೆ ಅವರಿಗೆ ಭಯವಿದೆ. ಈ ಕಾರಣಕ್ಕೇ ಇತಿಹಾಸವನ್ನು ತಿರುಚುತ್ತಾರೆ. ಪಠ್ಯ ಪುಸ್ತಕಗಳ ಸಮಿತಿಗೆ ಚಕ್ರತೀರ್ಥನಂತವರನ್ನು ಹಾಕುವುದೇ ಈ ಉದ್ದೇಶಗಳಿಗೆ ಎಂದು ಅಭಿಪ್ರಾಯಪಟ್ಟರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರೋಹಿತ್ ಚಕ್ರತೀರ್ಥ ಎನ್ನುವ ಒಬ್ಬನಿಗೆ ಮಕ್ಕಳ ಪಠ್ಯ ಪುಸ್ತಕ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಿಂತ ಮೂರ್ಖತನವನ್ನು ನಾನು ನೋಡಿಲ್ಲ. ಈತ ಹೆಡಗೇವಾರ್‌ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಅಪ್ರತಿಮ ದೇಶಭಕ್ತ ಭಗತ್‌ಸಿಂಗ್ ಪಠ್ಯವನ್ನು ತೆಗೆದು ಹೆಡಗೇವಾರ್ ಭಾಷಣ ಹಾಕಿದ್ದಾನೆ. ಭಗತ್‌ಸಿಂಗ್ ಗಿಂತ ದೇಶಭಕ್ತ ಬೇಕಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿರಿ: ಬ್ರಾಹ್ಮಣ್ಯ ಯಾಜಮಾನ್ಯ ಉಳಿಸಿಕೊಳ್ಳುವ ಹುನ್ನಾರ; ಸುಳ್ಳು ಸಮರ್ಥನೆಗಿಳಿದ ಸಚಿವ ಬಿ.ಸಿ ನಾಗೇಶ್
ಪಂಡಿತ್ ಜವಾಹರಲಾಲ್ ನೆಹರೂ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪ್ರಜಾತಂತ್ರದ ಆಧಾರದಲ್ಲಿ ದೇಶವನ್ನು ಕಟ್ಟಿ ನಿಲ್ಲಿಸಿದ್ದು ಮಾತ್ರವಲ್ಲದೆ, ಪ್ರಜಾಪ್ರಭುತ್ವದ ಬೇರುಗಳು ದೇಶದಲ್ಲಿ ಆಳವಾಗಿ ಬೇರೂರಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡರು. ಸಂವಿಧಾನ ಬದ್ದವಾದ ಸಂಸ್ಥೆಗಳನ್ನು ರೂಪಿಸಿ ಅವುಗಳಿಗೆ ಶಕ್ತಿ ತುಂಬಿದರು. ಹೀಗಾಗಿ ದೇಶ ಈ ಮಟ್ಟದ ಪ್ರಗತಿ ಪಥದಲ್ಲಿ ಮುನ್ನಡೆದು ಬರಲು ಸಾಧ್ಯವಾಯಿತು ಎಂದು ತಿಳಿಸಿದರು.
ಬ್ರಿಟಿಷರು ಭಾರತ ಬಿಟ್ಟು ಹೊರಟಾಗ ಇಲ್ಲಿ ಏನಿತ್ತು? ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ, ತಂತ್ರಜ್ಞಾನ, ವಿಜ್ಞಾನ ಸೇರಿ ಪ್ರತಿ ಕ್ಷೇತ್ರವನ್ನೂ ಸೊನ್ನೆಯಿಂದ ಆರಂಭಿಸಿ ಹೊಸದಾಗಿ ನಿರ್ಮಿಸಿದರು. ಆಗ ದೇಶದ ಸಾಕ್ಷರತಾ ಪ್ರಮಾಣ ಶೇ 15-18 ಇತ್ತು. ಇಂದು ಸಾಕ್ಷರತಾ ಪ್ರಮಾಣ ಶೇ 75-80 ನ್ನು ತಲುಪಲು ಅಂದು ನೆಹರೂ ಅವರು ಹಾಕಿಕೊಟ್ಟ ಅಡಿಪಾಯಗಳೇ ಮುಖ್ಯ ಕಾರಣ. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಇದಕ್ಕೆಲ್ಲಾ ತದ್ವಿರುದ್ಧ. ಇವರು ಪ್ರಧಾನಿ ಆದ ಬಳಿಕ ಒಂದೇ ಒಂದು ಸಂಸ್ಥೆಯನ್ನೂ ಕಟ್ಟಿ ಬೆಳೆಸಿಲ್ಲ. ನೆಹರೂ ಅವರು ಕಟ್ಟಿದ ತಾಂತ್ರಿಕ-ವೈಜ್ಞಾನಿಕ-ಶೈಕ್ಷಣಿಕ ಸಂಸ್ಥೆಗಳ ಹೆಸರನ್ನು ಹಾಳು ಮಾಡಲು ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ಸಂವಿಧಾನ ಬದ್ದವಾದ ಸಂಸ್ಥೆಗಳ ಕುತ್ತಿಗೆ ಹಿಚುಕಿ ಎಲ್ಲವನ್ನೂ ಸರ್ಕಾರದ ಕೈಗೊಂಬೆ ಮಾಡಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನೆಹರೂ ಅವರು ದೇಶವನ್ನು ಮುನ್ನಡೆಸಲು ಬೇಕಾದ ಅರ್ಹತೆ ದೂರದೃಷ್ಟಿ ಹೊಂದಿದ್ದರು. ಇಂದು ದೇಶದಲ್ಲಿರುವ ವಿಶ್ವ ದರ್ಜೆಯ ವಿಜ್ಞಾನ, ಸಂಶೋಧನಾ ಸಂಸ್ಥೆಗಳು ನೆಹರೂ ಅವರ ಸಾಧನೆ. ಪಂಚವಾರ್ಷಿಕ ಯೋಜನೆಗಳು ನೆಹರೂ ಅವರ ಕೊಡುಗೆ. ಆದರೆ ಈಗಿನ ಪ್ರಧಾನಿ ನೆಹರೂ ಅವರಿಗೆ ದೇಶವನ್ನು ಮುನ್ನಡೆಸುವುದು ಗೊತ್ತಿಲ್ಲ. ಐದು ಸಾವಿರ ವರ್ಷಗಳಷ್ಟು ಹಿಂದಕ್ಕೆ ದೇಶವನ್ನು ಎಳೆದೊಯ್ಯುವ ಅಪಾಯಕಾರಿ ಬೆಳವಣಿಗೆಗಳು ಈಗ ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ನೆಹರೂ ಅವರು ಪ್ರಧಾನಿ ಆದ ಮೇಲೂ ವಿರೋಧ ಪಕ್ಷಗಳಿಗೆ ಮನ್ನಣೆ ನೀಡುತ್ತಿದ್ದರು. ವಿರೋಧ ಪಕ್ಷದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷದ ನಾಯಕರು ಮಾತನಾಡುತ್ತಾರೆ ಎಂದು ಪ್ರಧಾನಿ ನೆಹರೂ ಅವರು ಪಾರ್ಲಿಮೆಂಟ್‌ಗೆ ಗೈರು ಹಾಜರಾಗುತ್ತಿರಲಿಲ್ಲ. ಸದನದಲ್ಲೇ ಕುಳಿತು ವಿರೋಧ ಪಕ್ಷದವರ ಮಾತು ಮತ್ತು ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳುವ ಎದೆಗಾರಿಕೆ ಇತ್ತು. ಈ ಎದೆಗಾರಿಕೆ ಈಗಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಏಕಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿರಿ: ತಮಿಳುನಾಡಿಗೆ ಅನ್ಯಾಯ; ಮೋದಿ ಇದ್ದ ವೇದಿಕೆಯಲ್ಲೇ ಸ್ಟಾಲಿನ್ ಹೇಳಿಕೆ; ಅಣ್ಣಾಮಲೈಗೆ ಬೇಸರ
ದೇಶದ ನಿರುದ್ಯೋಗ, ಕೃಷಿ, ಆರ್ಥಿಕತೆ ಪ್ರತಿಯೊಂದನ್ನೂ ಸಮೀಕ್ಷೆ ನಡೆಸಿ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲ ಆಗುವಂತಹ ಸಂಸ್ಥೆಗಳನ್ನು ನೆಹರೂ ಮತ್ತು ನಂತರದವರು ರೂಪಿಸಿದ್ದರು. ಆದರೆ ಮೋದಿ ಅವರು ಎಲ್ಲಾ ಸಂಸ್ಥೆಗಳ ಕುತ್ತಿಗೆ ಹಿಚುಕುತ್ತಿದ್ದಾರೆ. ಸಮೀಕ್ಷೆಗಳೇ ನಡೆಯದಂತೆ, ಖಾಸಗಿ ಸಂಸ್ಥೆಗಳು ನಡೆಸುವ ಸಮೀಕ್ಷೆಗಳೂ ಬಹಿರಂಗಗೊಳ್ಳದಂತೆ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮ ನೆಹರೂ ಅವರ ಆಲೋಚನೆಯಾಗಿತ್ತು. ಕಂದಾಚಾರ-ಮೌಢ್ಯಕ್ಕೆ ದೇಶದ ಯುವ ಸಮೂಹವನ್ನು ಬಲಿ ಕೊಡದೆ ಅವರನ್ನು ವೈಜ್ಞಾನಿಕ ಮಾರ್ಗದಲ್ಲಿ ಶಿಕ್ಷಿತರನ್ನಾಗಿ ಮಾಡುವ ಮೂಲಕ ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಬೇಕು ಎನ್ನುವುದನ್ನು ನೆಹರೂ ಅವರು ಸಾಧಿಸಿ ತೋರಿಸಿದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಜ್ಞಾನಿಕ ಮನೋಧರ್ಮ ಎಂದರೆ ಏನು ಎನ್ನುವುದೇ ಗೊತ್ತಿಲ್ಲ. ಹೀಗಾಗಿ ಈ ದೇಶದ ಯುವ ಸಮೂಹ ಮತ್ತು ವಿದ್ಯಾರ್ಥಿ ಸಮೂಹಕ್ಕೆ ಅಗತ್ಯವಾದ ಶಿಕ್ಷಣ, ಉದ್ಯೋಗ, ಪ್ರಗತಿ ಇದ್ಯಾವುದರ ಬಗ್ಗೆಯೂ ಅವರು ಮಾತನಾಡುವುದಿಲ್ಲ. ಈ ಕ್ಷೇತ್ರಗಳಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅವರು ಧರ್ಮ ಮತ್ತು ಜಾತಿ ಸಂಘರ್ಷಗಳ ಬಗ್ಗೆಯೇ ಮಾತನಾಡುತ್ತಾ ದೇಶದ ದಾರಿ ತಪ್ಪಿಸುತ್ತಾರೆ.
ಈ ಸತ್ಯವನ್ನು ದೇಶದ ಯುವಕರು, ಪ್ರಜೆಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮತ್ತು ನಿಮ್ಮ ಮಕ್ಕಳು ಐದು ಸಾವಿರ ವರ್ಷದ ಹಿಂದಕ್ಕೆ ಜಾರಬೇಕೋ, ಅಭಿವೃದ್ಧಿ ಪಥದಲ್ಲಿ ವಿಶ್ವ ಸಮುದಾಯದೊಂದಿಗೆ ಮುನ್ನಡೆಯಬೇಕೋ ಎನ್ನುವುದನ್ನು ಯುವಕರು ನಿರ್ಧರಿಸಬೇಕು ಎಂದು ಮನವಿ ಮಾಡಿದರು.



ಸಿದ್ದರಾಮಯ್ಯ ಸರಿಯಾಗಿ ಹೇಳಿದ್ದಾರೆ.
ಹೌದು ಸ್ವಾಮಿ, ಆರ್ ಎಸ್ ಎಸ್ ಈ ದೇಶದ ಮೂಲದ್ದಲ್ಲ, ಸೋನಿಯಾ ಗಾಂಧಿ ಈ ದೇಶದಲ್ಲೇ ಹುಟ್ಟಿದವರು. ಭಲೇ, ಭೇಷ್.