Homeಕರ್ನಾಟಕಬ್ರಾಹ್ಮಣ್ಯ ಯಾಜಮಾನ್ಯ ಉಳಿಸಿಕೊಳ್ಳುವ ಹುನ್ನಾರ; ಸುಳ್ಳು ಸಮರ್ಥನೆಗಿಳಿದ ಸಚಿವ ಬಿ.ಸಿ ನಾಗೇಶ್

ಬ್ರಾಹ್ಮಣ್ಯ ಯಾಜಮಾನ್ಯ ಉಳಿಸಿಕೊಳ್ಳುವ ಹುನ್ನಾರ; ಸುಳ್ಳು ಸಮರ್ಥನೆಗಿಳಿದ ಸಚಿವ ಬಿ.ಸಿ ನಾಗೇಶ್

- Advertisement -
- Advertisement -

ಬಸವರಾಜ ಬೊಮ್ಮಾಯಿಯವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆದ ನಂತರ ದಿನಕ್ಕೊಂದು ವಿವಾದಗಳು ರೂಪು ತಳೆಯುತ್ತಿವೆ. ಮತೀಯ ಗೂಂಡಾಗಿರಿ ಪ್ರಕರಣಗಳು ವರದಿಯಾಗುತ್ತಿದ್ದಾಗಲೇ ಅವರು ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳಿಕೆ ನೀಡಿ ಅವುಗಳನ್ನು ಬೆಂಬಲಿಸಿದ್ದರು. ಆ ನಂತರ ಅವು ತೀವ್ರ ರೂಪ ಪಡೆದವು. ನಂತರ ಹಿಜಾಬ್, ಹಲಾಲ್, ಮುಸ್ಲಿಂ ವರ್ತಕರಿಗೆ ನಿಷೇಧ, ಆಜಾನ್ ವಿವಾದಗಳನ್ನು ಹುಟ್ಟುಹಾಕಲಾಯಿತು. ಇವುಗಳಿಗೆ ಸರ್ಕಾರ ಸಕ್ರಿಯ ಬೆಂಬಲ ನೀಡಿತು. ಇದೀಗ ಬಿಜೆಪಿ ಸರ್ಕಾರ ಮಾಡಿರುವ ಪಠ್ಯ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇವೆಲ್ಲವುಗಳಿಂದ ಕರ್ನಾಟಕ ಸರ್ಕಾರ ಮತ್ತು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾಗುತ್ತಿದೆ. ಆದರೆ

ಬೊಮ್ಮಾಯಿಯವರಿಗೆ ಇವು ಯಾವುದು ಮುಖ್ಯವಾಗುತ್ತಿಲ್ಲ, ಬದಲಿಗೆ ತಮ್ಮ ಸಿಎಂ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಸಂಘಪರಿವಾರವನ್ನು ಮೆಚ್ಚಿಸಲು ಯಾವ ಹಂತಕ್ಕೂ ಇಳಿಯಬಲ್ಲೆ ಎಂಬುದನ್ನು ಅವರು ಸಾಬೀತು ಮಾಡುತ್ತಿದ್ದಾರೆ. ಬೊಮ್ಮಾಯಿಯವರ ತಂದೆ ಎಸ್.ಆರ್ ಬೊಮ್ಮಾಯಿಯವರು ಸಮಾಜವಾದಿಯ ಹಿನ್ನೆಲೆಯ ಜನತಾ ಪರಿವಾರದಿಂದ ಬಂದವರು. ಅಂತಹ ಪರಂಪರೆಯ ಕುಡಿಯಾಗಿ ಈ ರೀತಿ ಕೋಮುದ್ವೇಷ ಹರಡಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ ಎಂದು ಹಲವರು ಪ್ರಶ್ನಿಸಿದ್ದರು. ಜನತಾ ಪರಿವಾರದಿಂದಲೇ ಶಾಸಕರಾಗಿದ್ದ ಬಿ.ಎಸ್ ಚಂದ್ರಶೇಖರಯ್ಯನವರ ಪುತ್ರರಾದ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರದು ಕೂಡ ಅದೇ ಕಥೆಯಾಗಿದೆ. ಶಾಸಕನಾಗಿರುವವರೆಗೂ ಜನರ ಕೈಗೆ ಸಿಗುತ್ತಿದ್ದ, ಸರಳವಾಗಿ ನಡೆದುಕೊಳ್ಳುತ್ತಿದ್ದ ಅವರು ಸಚಿವರಾದ ಕೂಡಲೇ ತಮ್ಮ ವರಸೆ ಬದಲಿಸಿದ್ದಾರೆ. ಜಾತಿ ಪ್ರತಿಷ್ಠೆ, ಅಹಂ ಪ್ರದರ್ಶಿಸುತ್ತಾ ಸಂಘಪರಿವಾರದ ಅಜೆಂಡಾ ಜಾರಿ ಮಾಡಲು ಯಾವ ಹಂತಕ್ಕೂ ಇಳಿಯಬಲ್ಲೆ ಎಂದು
ತೋರಿಸುತ್ತಿದ್ದಾರೆ. ಇವರಿಬ್ಬರಲ್ಲಿನ ಒಂದು ಪ್ರಮುಖ ವ್ಯತ್ಯಾಸವೆಂದರೆ ಬೊಮ್ಮಾಯಿಯವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಂಘಕ್ಕೆ ನಿಷ್ಠರಾಗಿ ನಡೆದುಕೊಳ್ಳುತ್ತಿದ್ದರೆ, ನಾಗೇಶ್‌ರವರು ಸಂಘದ ರಹಸ್ಯ ಅಜೆಂಡಾಗಳನ್ನು ಜಾರಿ ಮಾಡಲು, ಜಾತಿ ಶ್ರೇಷ್ಠತೆಯನ್ನು ಪ್ರತಿಪಾದಿಸಲು ಕೆಲಸ ಮಾಡುತ್ತಿದ್ದಾರೆ ಎಂಬುದಾಗಿದೆ.

2019ರಲ್ಲಿ ಆಪರೇಷನ್ ಕಮಲ ನಡೆಸಿ ಯಡಿಯೂರಪ್ಪನವರು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದು ಸಿಎಂ ಆಗಿದ್ದರು. ಅವರು ಸಂಘಪರಿವಾರದ ಸೂತ್ರದ ಬೊಂಬೆಯಾಗಿರಲಿಲ್ಲ. ಆದರೆ ಅವರ ಅವಧಿಯಲ್ಲಿ ಭಾರೀ ಭ್ರಷ್ಟಾಚಾರ, ಆಡಳಿತ ಕೆಲಸಗಳಲ್ಲಿ ಅವರ ಮಗನ ಹಸ್ತಕ್ಷೇಪದ ಆರೋಪಗಳು ಕೇಳಿಬಂದಿದ್ದವು. ಇದನ್ನೆ ನೆಪವಾಗಿಟ್ಟುಕೊಂಡು ಅವರನ್ನು ಸಿಎಂ ಸ್ಥಾನದಿಂದ ಇಳಿಸಿ, ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಲಾಯಿತು. ಈಗ ಅವರ ಮೇಲೂ ಬಿಟ್‌ಕಾಯಿನ್, 40% ಕಮಿಷನ್, ಪಿಎಸ್‌ಐ ಅಕ್ರಮ ನೇಮಕಾತಿ ಸೇರಿ ಹಲವು ಭ್ರಷ್ಟಾಚಾರ-ಹಗರಣಗಳ ಆರೋಪಗಳು ಕೇಳಿಬರುತ್ತಿವೆ. ಅವನ್ನು ಮುಚ್ಚಿಕೊಳ್ಳಲು ಅವರೀಗ ಹಸಿಹಸಿ ಕೋಮುವಾದದ ಬೆನ್ನುಬಿದ್ದಿದ್ದಾರೆ. ಶಿಕ್ಷಣ ಸಚಿವ ನಾಗೇಶ್‌ರವರ ಅವರಿಗೆ ತಕ್ಕ ಸಾಥ್ ಕೊಡುತ್ತಿದ್ದಾರೆ.

ಸ್ವಂತ ಬಲದ ಮೇಲೆ ಬಿಜೆಪಿ ಸರ್ಕಾರ ರಚಿಸಿದಾಗಲೆಲ್ಲ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿಗಳು ಬ್ರಾಹ್ಮಣ ಸಮುದಾಯದ ಮತ್ತು ಸಂಘಪರಿವಾರದ ಕಟ್ಟಾಳುಗಳೇ ಆಗಿರುವುದನ್ನು ಗಮನಿಸಬೇಕು. 2008ರಿಂದ 2013ರ ವರೆಗಿನ ಬಿಜೆಪಿ ಸರ್ಕಾರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, 2019ರ ಯಡಿಯೂರಪ್ಪನವರ ಸರ್ಕಾರದಲ್ಲಿ ಸುರೇಶ್ ಕುಮಾರ್ ಮತ್ತು ಬೊಮ್ಮಾಯಿ ಆಡಳಿತದಲ್ಲಿ ಬಿ.ಸಿ ನಾಗೇಶ್‌ರವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಲಾಗಿದೆ. ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷಣದ ಮೂಲಕ ಎಳೆಯ ಮಕ್ಕಳ ಮನಸ್ಸಿನಲ್ಲಿ ಪರೋಕ್ಷವಾಗಿ ಕೋಮುವಾದ, ಆರ್‌ಎಸ್‌ಎಸ್ ಚಿಂತನೆಗಳನ್ನು ತುಂಬಲು ಯತ್ನಿಸಿದವರೆ. ಬಿ.ಸಿ ನಾಗೇಶ್‌ರವರು ಒಂದು ಹೆಜ್ಜೆ ಮುಂದೆ ಹೋಗಿ ಹಸಿಹಸಿಯಾಗಿ ಆರ್‌ಎಸ್‌ಎಸ್ ಅಜೆಂಡಾಗಳನ್ನು
ಜಾರಿಗೊಳಿಸುತ್ತಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ಬಿ.ಸಿ ನಾಗೇಶ್ ವಿದ್ಯಾರ್ಥಿ ದಿಸೆಯಿಂದಲೇ ಆರ್‌ಎಸ್‌ಎಸ್ ವಿಚಾರಗಳೆಡೆ ಪ್ರಭಾವಿತರಾದವರು. ಇಂಜಿನಿಯರಿಂಗ್ ಓದುವಾಗ ಮತ್ತು ನಂತರ ಎಬಿವಿಪಿ ಮುಖಂಡರಾಗಿದ್ದ ಅವರು ನಂತರ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಉದ್ಯೋಗ ಕೃಷಿ ಎಂದು ಬರೆದುಕೊಂಡರೂ ಸಹ ಅವರ ನಿಜವಾದ ಕಾಯಕ ಆರ್‌ಎಸ್‌ಎಸ್ ಫುಲ್‌ಟೈಮರ್. ಬಿಜೆಪಿ ಸೇರಿದ ಅವರು ತಿಪಟೂರು ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬ್ರಾಹ್ಮಣರಾದರೂ ಸಹ ಲಿಂಗಾಯತ ಮತದಾರರು ಹೆಚ್ಚಿರುವ ತಿಪಟೂರಿನಲ್ಲಿ ಅವರು ಎರಡು ಬಾರಿ ಶಾಸಕರಾಗಲು ಕಾರಣ ಅವರಿಗಿರುವ ಜನಬಳಕೆ. ಭ್ರಷ್ಟ ಎನಿಸಿಕೊಳ್ಳದೆ, ಜನರ ಕೈಗೆ ಸಿಗುತ್ತಾ ಉತ್ತಮ ಸಂಪರ್ಕ ಹೊಂದಿದ್ದರು. ಅಷ್ಟು ಮಾತ್ರವಲ್ಲದೆ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸಂದರ್ಭದಲ್ಲಿ ಶಿಕ್ಷಣ ವಿಚಾರದಲ್ಲಿ ಹಲವು ವರ್ಷಗಳಿಂದ ಹೋರಾಡುತ್ತಿರುವ ಪ್ರಗತಿಪರ ಚಿಂತಕರನ್ನು ಚರ್ಚಿಸಲು ಆಹ್ವಾನಿಸಿದ್ದರು. ಆದರೆ ಈಗ ಅದೇ ಪ್ರಗತಿಪರ ಚಿಂತಕರು ಇಂದು ಪಠ್ಯ ಪರಿಷ್ಕರಣೆಯನ್ನು ವಿರೋಧಿಸಿದ್ದಕ್ಕೆ ಅವರನ್ನು ಚಿಲ್ರೆ ಜನ ಎಂದು ಕರೆಯುವ ಮಟ್ಟಕ್ಕೆ ಇಳಿದಿದ್ದಾರೆ ನಾಗೇಶ್.

ಕಟ್ಟಾ ಆರ್‌ಎಸ್‌ಎಸ್‌ನವರಾದ ನಾಗೇಶ್‌ರವರು ಕೆಲವೊಮ್ಮೆ ’ನಮ್ಮ ಆರ್‌ಎಸ್‌ಎಸ್ ಮುಖಂಡರು, ಕಾರ್ಯಕರ್ತರು ಸಂಘದ ವಿಚಾರಗಳಿಂದ ವಿಮುಖರಾಗುತ್ತಿದ್ದಾರೆ. ಅರ್ಹತೆ ಇಲ್ಲದವರನ್ನು ಹೊತ್ತಿ ಮೆರೆಸುತ್ತಿದ್ದಾರೆ’ ಎಂದು ಬೇಸರಿಸಿಕೊಳ್ಳುತ್ತಿದ್ದರು. ’ವಿದ್ವತ್ತು, ಬೌದ್ಧಿಕ ಪಾಂಡಿತ್ಯ ಇಲ್ಲದವರನ್ನು ಮುನ್ನೆಲೆಗೆ ತರಲಾಗುತ್ತಿದೆ’ ಎಂದು ಹಲುಬುತ್ತಿದ್ದರು. ಆದರೆ ದುರಂತವೆಂದರೆ ಅಂತಹ ನಾಗೇಶ್‌ರವರೆ ಇಂದು ಸುಳ್ಳು ಹೇಳಿಕೊಂಡು, ಟ್ರೋಲ್ ಮಾಡಿಕೊಂಡು ತಿರುಗುತ್ತಿರುವ ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥನಂತಹವರನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ತಲುಪಿದ್ದಾರೆ! ಅವರನ್ನು ಸಮರ್ಥಿಸಿಕೊಳ್ಳಲು ತಾವೂ ಹಸಿ ಸುಳ್ಳು ಹೇಳುವ ಪರಿಸ್ಥಿತಿಗೆ ಸಿಲುಕಿದ್ದಾರೆ.

ರೋಹಿತ್ ಚಕ್ರತೀರ್ಥ

ಮೊದಲನೆಯದಾಗಿ ಪಠ್ಯ ಪರಿಷ್ಕರಣೆಯಂತಹ ಮಹತ್ವದ ಕೆಲಸ ಮಾಡಲು ಅವರಿಗೆ ಸೂಕ್ತ ಅರ್ಹತೆಯುಳ್ಳ ವಿಚಾರವಂತರ್‍ಯಾರು ಸಿಕ್ಕಿಲ್ಲ. ನಾಡಗೀತೆಯನ್ನು ಅವಮಾನಿಸಿದ್ದ, ಕನ್ನಡ ಧ್ವಜವನ್ನು ಒಳ ಉಡುಪುಗಳಿಗೆ ಹೋಲಿಸಿದ್ದ, ಕೆಟ್ಟ ಕೊಳಕು ಭಾಷೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಕೈಗೆ ಅಂತಹ ಜವಾಬ್ದಾರಿ ವಹಿಸಲಾಗಿದೆ. ಆತನಿಗಿರುವ ಏಕೈಕ ಅರ್ಹತೆಯೆಂದರೆ ಆತನೂ ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವುದು. ಆತ ತನ್ನೊಡನೆ ಇತರ 6 ಜನ ಬ್ರಾಹ್ಮಣರನ್ನೆ ಸಮಿತಿಗೆ ಸೇರಿಸಿಕೊಂಡು, ಅತಿ ಹೆಚ್ಚು ಬ್ರಾಹ್ಮಣರ ಪಠ್ಯಗಳನ್ನು ಸೇರಿಸಿ, ಶೂದ್ರರ, ದಲಿತರ, ಅಲ್ಪ ಸಂಖ್ಯಾತರರ ಪಠ್ಯ ಕೈಬಿಟ್ಟಿದ್ದಾರೆ. ಮಹಿಳೆಯರನ್ನು ಕೀಳಾಗಿ ಕಾಣುವ, ಬ್ರಾಹ್ಮಣರನ್ನು ಹೊಗಳುವ ಪಠ್ಯಗಳನ್ನು ಕೇವಲ ಒಂದೂವರೆ ತಿಂಗಳ ಸಮಯದಲ್ಲಿ ಪರಿಷ್ಕರಣೆಯ ಹೆಸರಿನಲ್ಲಿ ಸೇರಿಸಲಾಗಿದೆ. ಬುದ್ಧ, ಬಸವಣ್ಣ, ನಾರಾಯಣ ಗುರು, ಪೆರಿಯಾರ್, ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್‌ರವರ ಪಠ್ಯ ಕೈಬಿಟ್ಟು ಆರ್‌ಎಸ್‌ಎಸ್ ಸ್ಥಾಪಕ ಹೆಡಗೇವಾರ್, ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಪಾಠ ಸೇರಿಸಲಾಗಿದೆ. ಇದಕ್ಕೆ ತೀವ್ರ ವಿರೋಧ ಬಂದಾಗ ಅದನ್ನು ಬಿ.ಸಿ ನಾಗೇಶ್ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುತ್ತಿದ್ದಾರೆ! (ಬಿಡಲಾಗಿದೆ ಎಂದು ಆರೋಪಿಸಿರುವ ಕೆಲವನ್ನು ಮತ್ತೆ ಸೇರಿಸಿ, ಪುಸ್ತಕವನ್ನು ಮರುಮುದ್ರಣ ಮಾಡುವ ಮಾತನ್ನೂ ಆಡುತ್ತಿದ್ದಾರೆ. ಅದಿನ್ನೂ ಲಭ್ಯವಾಗಬೇಕಿದೆ).

ನಾಗೇಶ್‌ರವರು ಆ ತಿಳಿಗೇಡಿಗಳು ರಚಿಸಿದ ಪಠ್ಯವನ್ನು ಸಮರ್ಥಿಸಿಕೊಂಡಿದ್ದು ಏಕೆಂದರೆ ಅವು ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಅನುಗುಣವಾಗಿವೆ. ದಲಿತರನ್ನು, ಮಹಿಳೆಯರನ್ನು ಕೀಳಾಗಿ ಕಂಡು ಬ್ರಾಹ್ಮಣ್ಯವನ್ನು ಪೋಷಿಸುತ್ತವೆ. ಅದೇ ಅವರ ಉದ್ದೇಶವಲ್ಲವೇ? ಈ ಕಾರಣಕ್ಕಾಗಿಯೇ ಸಂಘ ಪರಿವಾರ ಅವರನ್ನು ಶಿಕ್ಷಣ ಮಂತ್ರಿ ಮಾಡಿರುವುದು. ಆದರೆ ಆ ಉದ್ದೇಶ ಸಾಧನೆಗಾಗಿ ನಾಗೇಶ್‌ರವರು ರೋಹಿತ್ ಚಕ್ರತೀರ್ಥನನ್ನು ಐಐಟಿ, ಸಿಇಟಿ ಪ್ರೊಫೆಸರ್ ಆಗಿದ್ದರು ಎಂದು ಮತ್ತು ಚಕ್ರವರ್ತಿ ಸೂಲಿಬೆಲೆ ಮೇಧಾವಿ ಎಂದು ಸುಳ್ಳು ಹೇಳಿ ಸಮರ್ಥಿಸಿಕೊಳ್ಳುವ ತೀರಾ ಕೆಳಮಟ್ಟಕ್ಕೆ ಇಳಿದಿದ್ದಾರೆ. ತಮ್ಮ ತಂದೆ ಶಾಸಕರಾಗಿದ್ದರೂ ಸಹ ನೇರವಾಗಿ ರಾಜಕೀಯಕ್ಕೆ ಬಾರದೆ ಹಲವು ವರ್ಷಗಳ ಕಾಲ ಎಬಿವಿಪಿ, ಆರ್‌ಎಸ್‌ಎಸ್‌ನಲ್ಲಿ ಫುಲ್ ಟೈಮರ್ ಆಗಿ ದುಡಿದು, ಕ್ಷೇತ್ರದ ಜನರ ವಿಶ್ವಾಸ ಗಳಿಸಿ ಎರಡು ಬಾರಿ ಶಾಸಕರಾಗಿ, 61ನೇ ವಯಸ್ಸಿನಲ್ಲಿ ಸಚಿವರಾಗಿರುವ ಬಿ.ಸಿ ನಾಗೇಶ್‌ರವರು ಯಾವ ಶ್ರಮವೂ ಪಡದ, ಓದು, ತಿಳಿವಳಿಕೆ ಇಲ್ಲದ ಈ ಎಳೆವಯಸ್ಸಿನ ತಿಳಿಗೇಡಿಗಳನ್ನು ಸಮರ್ಥಿಸಿಕೊಳ್ಳುವ ಅಧೋಗತಿಗೆ ಇಳಿದಿದ್ದಾರೆ. ಏಕೆಂದರೆ ಈಶ್ವರಪ್ಪನವರು ಹಿಂದೆ ಹೇಳಿದಂತೆ, ’ಸುಳ್ಳೋಪಳ್ಳೋ ಹೇಳಿ ಜನರನ್ನು ನಂಬಿಸಬೇಕು, ಶೇ.3ರಷ್ಟಿರುವ ಸಮುದಾಯ ಕೈಯಲ್ಲಿ ಅಧಿಕಾರ ಸದಾ ಮುಂದುವರೆಯಬೇಕು’ ಎನ್ನುವ ಉದ್ದೇಶ ಅವರಿಗಿದೆ.

ಪಠ್ಯ ಮರುಪರಿಷ್ಕರಣೆಗೆ ತರಾತುರಿಯೇಕೆ?

ಇನ್ನೊಂದು ವರ್ಷದಲ್ಲಿ ಕರ್ನಾಟಕದಲ್ಲಿ ಚುನಾವಣೆ ಬರಲಿದೆ. ಆದರೆ ಬಿಜೆಪಿಗೆ ಮರಳಿ ಅಧಿಕಾರಕ್ಕೆ ಬರುವ ವಿಶ್ವಾಸ ಕಾಣುತ್ತಿಲ್ಲ. ಈ ಮೂರು ವರ್ಷಗಳಲ್ಲಿ ಅದು ಅಭಿವೃದ್ಧಿಗೆ ಬದಲಾಗಿ ಕರ್ನಾಟಕವನ್ನು ಮತ್ತಷ್ಟು ವಿನಾಶಕ್ಕೆ ತಳ್ಳಿದೆ. 40% ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರನ ಸಾವು, ಸಾಲುಸಾಲು ಹಗರಣಗಳು ಬಿಜೆಪಿಯನ್ನು ಹೈರಾಣಾಗಿಸಿವೆ. ಉಪಚುನಾವಣೆಯಲ್ಲಿ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಆದ ಸೋಲು ಬಿಜೆಪಿಯನ್ನು ಇನ್ನೂ ಕಾಡುತ್ತಿದೆ. ಹಾಗಾಗಿ ಇರುವ ಒಂದು ವರ್ಷದಲ್ಲಿ ತಮ್ಮ ಅಜೆಂಡಾಗಳನ್ನು ಆದಷ್ಟು ತುರುಕಲು ಸಂಘ ಪರಿವಾರ ಯೋಚಿಸುತ್ತಿದೆ. ಅದರ ಭಾಗವಾಗಿ ಇವೆಲ್ಲ ಸರ್ಕಸ್‌ಗಳು ನಡೆಯುತ್ತಿವೆ. ಬಿ.ಸಿ ನಾಗೇಶ್‌ರವರು ಈ ಹಿಂದೆಯೂ ತಮ್ಮ ಸಂಘದ ಪ್ರಕಾರ ನಡೆದುಕೊಂಡಿದ್ದಾರೆ. ಅವುಗಳನ್ನು ಗಮನಿಸುವುದಾದರೆ:

ಹಿಜಾಬ್ ವಿವಾದ

’ಚಿಟಿಕೆಯಲ್ಲಿ ಹೋಗಬಹುದಾಗಿದ್ದಕ್ಕೆ ಕೊಡಲಿ ತೆಗೆದುಕೊಂಡರು’ ಎಂಬ ಗಾದೆ ಮಾತಿದೆ. ಅಂತೆಯೇ ತಮ್ಮ ಪಾಡಿಗೆ ತಾವು ಹಿಜಾಬ್ ಧರಿಸಿ ಬರುತ್ತಿದ್ದ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಗದಾಪ್ರಹಾರ ಮಾಡಲಾಯ್ತು. ಉಡುಪಿಯಲ್ಲಿಯೇ ಬಗೆಹರಿಯಬಹುದಾಗಿದ್ದ ಪ್ರಕರಣವನ್ನು ರಾಜ್ಯ ಮಟ್ಟದಲ್ಲಿ ಕೊನೆಗೆ ದೇಶ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡುವಲ್ಲಿ, ಅದನ್ನೊಂದು ವಿವಾದವನ್ನಾಗಿಸುವಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರ ಪಾಲು ಅಪಾರ.

ಚಕ್ರವರ್ತಿ ಸೂಲಿಬೆಲೆ

ಮೊದಲಿಗೆ ಸಮವಸ್ತ್ರ ನಿಯಮ ಪಾಲಿಸಬೇಕು ಎಂದು ಪಿಯುಸಿ ತರಗತಿಗಳಿಗೂ ಸಮವಸ್ತ್ರ ಹೇರಲಾಯಿತು. ಆನಂತರ ಹಿಜಾಬ್ ಧರಿಸುವುದು ಅಶಿಸ್ತು ಎಂದು ಸಚಿವರು ಹೇಳಿಕೆ ನೀಡಿದರು. ಹಠಕ್ಕೆ ಬಿದ್ದಂತೆ ಹೈಕೋರ್ಟ್‌ನಲ್ಲಿ ವಾದಿಸಿದ ಸರ್ಕಾರ ಮಧ್ಯಂತರ ಆದೇಶವನ್ನು ತಿರುಚಿತು. ಹಿಜಾಬ್ ಧರಿಸಿ ಬಂದವರಿಗೆ ಶಾಲಾ-ಕಾಲೇಜುಗಳಿಗೆ ಪ್ರವೇಶವಿಲ್ಲ ಎಂದು ಅಮಾನವೀಯತೆ ಮೆರೆದರು. ಕಡೆಪಕ್ಷ ಪರೀಕ್ಷೆಗೂ ಕೂಡ ಅವಕಾಶ ನೀಡಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣಕ್ಕೆ ತೆರೆದುಕೊಂಡಿದ್ದ ಕೆಲವು ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕಲ್ಲು ಹಾಕುವಲ್ಲಿ ಅವರು ಯಶಸ್ವಿಯಾದರು.

ಶಾಲೆಗಳಲ್ಲಿ ಭಗವದ್ಗೀತೆ ಬೋಧನೆಗೆ ಪ್ರೋತ್ಸಾಹ

ಧಾರ್ಮಿಕ ಸಂಕೇತ ಎಂಬ ಕಾರಣದಿಂದ ಹಿಜಾಬ್ ವಿರೋಧಿಸಿದ ಅದೇ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ಭಗವದ್ಗೀತೆ ಬೋಧನೆಗೆ ಅತ್ಯುತ್ಸಾಹ ತೋರಿಸಿದರು. ಅದು ಧಾರ್ಮಿಕ ವಿಷಯವಲ್ಲ ಎಂದು ಭಂಡತನದ ಸಮರ್ಥನೆ ಮಾಡಿಕೊಂಡರು.

ದಲಿತರ ಹತ್ಯೆ ತಿಳಿಯದ ಬೇಜಾಬ್ದಾರಿ ಮಂತ್ರಿ

ಸಚಿವರಾಗುವ ಮುನ್ನ ಜನರೊಟ್ಟಿಗೆ ಇದ್ದ ನಾಗೇಶ್‌ರವರು ಸಚಿವರಾಗುತ್ತಲೇ ಕೇಶವಕೃಪಾದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ತನ್ನ ಕ್ಷೇತ್ರದ ಪಕ್ಕದಲ್ಲಿಯೇ ಇರುವ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತರನ್ನು ರಾತ್ರೋರಾತ್ರಿ ಅಮಾನುಷವಾಗಿ ಕೊಲ್ಲಲಾಯ್ತು. ಈ ಅಮಾನವೀಯ ಘಟನೆಗೆ ಎಲ್ಲರೂ ಖಂಡನೆ ವ್ಯಕ್ತಪಡಿಸಿದರೆ ಬಿ.ಸಿ ನಾಗೇಶ್ ಮೌನ ವಹಿಸಿದ್ದರು. ಕೊಲೆ ಸಂಭವಿಸಿ 10 ದಿನದ ನಂತರ ಪತ್ರಕರ್ತರು ಈ ಕುರಿತು ಪ್ರಶ್ನಿಸಿದರೆ ಅದು ನನ್ನ ಗಮನಕ್ಕೆ ಬಂದಿಲ್ಲ ಎಂಬ ಬೇಜವಾಬ್ದಾರಿಯ ಮಾತುಗಳನ್ನಾಡಿದರು. ತನ್ನದೇ ಜಿಲ್ಲೆಯ ಇಬ್ಬರು ದಲಿತರ ಹತ್ಯೆಯ ವಿವರಗಳನ್ನು ತಿಳಿದು ಕ್ರಮಕ್ಕೆ ಆಗ್ರಹಿಸಿದ ನಾಗೇಶ್‌ರವರು, ತನ್ನ ಜಾತಿಯ ಅನರ್ಹನೊಬ್ಬ ಸಿದ್ದಪಡಿಸಿದ ಪಠ್ಯಗಳನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಮತ್ತು ಹಸಿ ಸುಳ್ಳು ಹೇಳುತ್ತಿದ್ದಾರೆ.

ಆದರೆ ಈ ಎಲ್ಲಾ ಪ್ರಕರಣಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವ ಜನಸಾಮಾನ್ಯರಿಗೆ ಬಿಜೆಪಿ ಸರ್ಕಾರ ಅತಿ ಮಾಡುತ್ತಿದೆ ಅನಿಸುತ್ತಿದೆ. ಹಿಜಾಬ್‌ನಿಂದ ಹಿಡಿದು ಪಠ್ಯಪುಸ್ತಕದವರೆಗೂ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ, ಮಕ್ಕಳಿಗೆ ನೀಡಿದ ಸಶಸ್ತ್ರ ತರಬೇತಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು, ಶಾಲೆ ಶುರುವಾಗಿ ವಾರ ಕಳೆದರೂ ಸರ್ಕಾರದ ಅಸಮರ್ಥತೆಯಿಂದಾಗಿ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ತಲುಪಿಲ್ಲದಿರುವುದು ಪೋಷಕರು ಮತ್ತು ಸಾಮಾನ್ಯ ಜನರು ಆತಂಕಿತರಾಗುವಂತೆ ಮಾಡಿದೆ. ಹಾಗಾಗಿ ಇವೆಲ್ಲವೂ ಬಿಜೆಪಿಗೆ ತಿರುಗುಬಾಣವಾಗುವ ಅಪಾಯವಿದೆ. ಆದರೆ ಅದನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಬಿಜೆಪಿಯಿಲ್ಲ ಎಂಬುದು ಎದ್ದುಕಾಣುವ ಸಂಗತಿ.


ಇದನ್ನೂ ಓದಿ: ಪಠ್ಯ ವಿವಾದ: ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ 4 ಸುಳ್ಳುಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...