ಬಲಪಂಥೀಯ ಟ್ರೋಲರ್, ಶಾಲಾ ಪಠ್ಯ ಪುಸ್ತಕ ಪುನರ್ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ‘ಶೈಕ್ಷಣಿಕ ಅರ್ಹತೆ’ ಏನು ಎಂದು ಪ್ರಶ್ನಿಸಿ ಆರ್‌ಟಿಐ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಅವರನ್ನು ಯಾವ ಮಾನದಂಡಗಳ ಮೇಲೆ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಕೂಡಾ ಪ್ರಶ್ನಿಸಲಾಗಿದೆ.
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಪ್ರಾರಂಭವಾದ ನಂತರ ರೋಹಿತ್ ಚಕ್ರತೀರ್ಥ ಅವರ ಅರ್ಹತೆಯ ಬಗ್ಗೆ ಕೂಡಾ ಪ್ರಶ್ನೆಗಳೆದ್ದಿದ್ದವು. ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ರೋಹಿತ್ ಚಕ್ರತೀರ್ಥ ಅವರು ಗಣಿತ ಟ್ಯೂಷನ್ ನೀಡುವ ಶಿಕ್ಷಕನಾಗಿದ್ದು, ಮೂರು ಕಾಲೇಜುಗಳಲ್ಲಿ ಉಪನ್ಯಾಸಕನಾಗಿ ಪಾಠ ಮಾಡಿದ್ದರು ಎಂದು ವರದಿಯಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಚಕ್ರತೀರ್ಥ ಅವರ ಅರ್ಹತೆಯ ಬಗ್ಗೆ ಪ್ರಶ್ನಿಸಿದ್ದ ಪತ್ರಕರ್ತರಿಗೆ ಉತ್ತರಿಸಿದ್ದ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು, “ಅವರು ಐಐಟಿ ಮತ್ತು ಸಿಇಟಿ ಪ್ರೊಫೆಸರ್’’ ಎಂದು ಹೇಳಿದ್ದರು. ಆದರೆ ಚಕ್ರತೀರ್ಥ ಅವರು ಅದನ್ನು ನಿರಾಕರಿಸಿದ್ದರು. ಅದಾಗಿಯೂ ಅವರು ತಮ್ಮ ಶೈಕ್ಷಣಿಕ ಅರ್ಹತೆಗಳೇನು ಎಂಬ ಬಗ್ಗೆ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ.
‘‘ಸಮಿತಿಗೆ ಆಯ್ಕೆಯಾಗಲು ನಿಮ್ಮ ಅರ್ಹತೆಯೇನು’’ ಎಂಬ ಪ್ರಶ್ನೆಗೆ ಅವರು, “ನನ್ನನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಲು ಸರ್ಕಾರ ನನ್ನ ಯಾವು ಅರ್ಹತೆ ನೋಡಿತು ಎಂಬ ವಿಚಾರವನ್ನು ಸರ್ಕಾರದ ಜೊತೆಗೆ ಕೇಳಬೇಕು” ಎಂದು ಹೇಳಿಕೊಂಡಿದ್ದರು.
ಇದೀಗ ಮಾಹಿತಿ ಹಕ್ಕು ಕಾಯಿದೆ-2005ರ ಅಡಿಯಲ್ಲಿ ಚಕ್ರತೀರ್ಥ ಅವರ ಅರ್ಹತೆ, ಅವರ ಆಯ್ಕೆಗೆ ಪಾಲಿಸಿರುವ ಮಾನದಂಡಗಳು ಸೇರಿದಂತೆ ಸಮಿತಿಯ ಹಲವು ವಿಚಾಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.
ಪ್ರಸ್ತುತ ಸಲ್ಲಿಸಲಾಗಿರುವ ಅರ್ಜಿಯಲ್ಲಿ, “ಶಾಲಾ ಪಠ್ಯ ಪುಸ್ತಕಗಳ ಪುನರ್ ಪರಿಷ್ಕರಣ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ ಯಾವುದಾದರೂ ಮಾನದಂಡಗಳು ಇವೆಯೆ? ಇದ್ದರೆ ಯಾವುವು?” ಎಂದು ಪ್ರಶ್ನಿಸಲಾಗಿದೆ.
ಇದನ್ನೂ ಓದಿ: ‘ತಾತ್ವಿಕತೆಗೆ ವಿರುದ್ಧ’: ಪಠ್ಯ ಪುಸ್ತಕದಿಂದ ಡಾ.ಆರ್.ವಿ. ಭಂಡಾರಿ ಕವನ ವಾಪಾಸು ಪಡೆದ ಕುಟುಂಬ
“ಈ ಹಿಂದೆ ಡಾ.ಜಿ.ಎಸ್. ಮೂಡಂಬಡಿತತಾಯ ಅವರು ಮುಖ್ಯ ಸಂಯೋಜಕರಾಗಿ ಹಾಗೂ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಸರ್ವಾಧ್ಯಕ್ಷರಾಗಿ ರಚಿಸಲಾಗಿದ್ದ ಪಠ್ಯ ಪುಸ್ತಕ ಸಮಿತಿಗಳಿಗೆ ಅವರನ್ನೂ, ಇತರ ಸದಸ್ಯರನ್ನೂ ನೇಮಿಸುವಾಗ ಬಳಸಲಾಗಿದ್ದ ಮಾನದಂಡಗಳು ಯಾವುವು?” ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
“ಇದೀಗ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಗೆ ಈ ಅಧ್ಯಕ್ಷರನ್ನೂ, ಇತರ ಸಮಿತಿ ಸದಸ್ಯರನ್ನೂ ನೇಮಿಸುವಾಗ ಬಳಸಿರುವ ಮಾನದಂಡಗಳು ಯಾವುವು?” ಎಂಬ ಪ್ರಶ್ನೆಯನ್ನೂ ಅರ್ಜಿಯಲ್ಲಿ ಕೇಳಲಾಗಿದೆ.
ಅಷ್ಟೇ ಅಲ್ಲದೆ, ಹೊಸದಾಗಿ ಪರಿಷ್ಕರಿಸಿ ಪ್ರಕಟಿಸಲಾಗಿರುವ ಪುಸ್ತಕಗಳಲ್ಲಿ ರೋಹಿತ್ ಚಕ್ರತೀರ್ಥ ಅವರ ಹೆಸರಿನ ಮುಂದೆ ಸದಸ್ಯರು ಕನ್ನಡ ಅಭಿವೃದ್ಧ ಪ್ರಾಧಿಕಾರ ಎಂದಷ್ಟೇ ಹೇಳಲಾಗಿದ್ದು, ಬೇರೆ ವಿವರಗಳು ಲಭ್ಯವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದು, “ರೋಹಿತ್ ಚಕ್ರತೀರ್ಥ ಅವರ ಶೈಕ್ಷಣಿಕ ಅರ್ಹತೆಗಳೇನು? ಅದರು ಯಾವ ಕಾಲೇಜಿನಲ್ಲಿ ಅಥವಾ ವಿಶ್ವವಿದ್ಯಾಲಯದಿಂದ ಯಾವಾಗ, ಯಾವ ಪದವಿ ಪಡೆದಿದ್ದಾರೆ? ಯಾವ ಸಂಸ್ಥೆಗಳಲ್ಲಿ ಶಿಕ್ಷಕರಾಗಿ/ಉಪನ್ಯಾಸಕರಾಗಿ/ಪ್ರಾಧ್ಯಾಪಕರಾಗಿ/ಸಂಶೋಧಕರಾಗಿ ಕೆಲಸ ಮಾಡಿದ್ದಾರೆ?” ಎಂದು ಆರ್‌ಟಿಐಯಲ್ಲಿ ಪ್ರಶ್ನಿಸಲಾಗಿದೆ.
ಇದನ್ನೂ ಓದಿ: ಮಹಿಳಾ ಹೋರಾಟಗಾರ್ತಿಯರಿಗೆ ಅವಮಾನ: ವೀರ ರಾಣಿ ಅಬ್ಬಕ್ಕ ದೇವಿ ಪಾಠ ಕೈಬಿಟ್ಟ ಚಕ್ರತೀರ್ಥ ಸಮಿತಿ
ಜೊತೆಗೆ, ರೋಹಿತ್ ಚಕ್ರತೀರ್ಥ ಆವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ ಸಭೆಯ ನಡಾವಳಿಗಳ ಪ್ರತಿಯನ್ನು ಒದಗಿಸುವಂತೆ ಆರ್‌ಟಿಐ ಅರ್ಜಿಯಲ್ಲಿ ಕೋರಲಾಗಿದೆ.


