ಪಬ್‌ಗೆ ತೆರಳಿದ್ದ ಬಾಲಕಿಗೆ ಡ್ರಾಪ್ ಕೊಡುವ ನೆಪದಲ್ಲಿ ಐವರು ಅಪ್ರಾಪ್ತ ಶಾಲಾ ಬಾಲಕರು ಕಾರಿನೊಳಗೆ ಕೂಡಿಹಾಕಿ ಸಾಮೂಹಿಕ ಅತ್ಯಾಚಾರಗೈದಿದ್ದಾರೆ ಎಂಬ ಆರೋಪದ ಮೇಲೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿರುವ ಆತಂಕಕಾರಿ ಘಟನೆ ಜರುಗಿದೆ.
ಶನಿವಾರ ಸಂಜೆ ಈ ಅಮಾನವೀಯ ಕೃತ್ಯ ಜರುಗಿದ್ದು, ಆರೋಪಿಗಳೆಲ್ಲರು ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿದ್ದು, ರಾಜಕೀಯ ಪ್ರಭಾವಿಗಳ ಕುಟುಂಬಕ್ಕೆ ಸೇರಿದ್ದಾರೆ. ಬಾಲಕಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ 17 ವರ್ಷದ ಬಾಲಕಿಯೊಬ್ಬಳು ತನ್ನ ಸ್ನೇಹಿತನ ಜೊತೆ ಪಬ್ ಒಂದಕ್ಕೆ ತೆರಳಿದ್ದಾಳೆ. ಆದರೆ ಆತ ಬೇಗನೇ ಪಬ್‌ನಿಂದ ತೆರಳಿದ್ದಾನೆ. ಅಲ್ಲಿಂದ ಆರೋಪಿ ಬಾಲಕರು ಡ್ರಾಪ್ ಕೊಡುವುದಾಗಿ ಹೇಳಿ ಬಾಲಕಿಯೊಂದಿಗೆ ಸ್ನೇಹ ಸಾಧಿಸಿದ್ದು ಕಾರ್‌ನಲ್ಲಿ ತೆರಳಿದ್ದಾರೆ. ದಾರಿ ಮಧ್ಯೆ ಬೇಕರಿಗೂ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಆ ಐದು ಬಾಲಕರು ಕಾರನ್ನು ಪ್ರತಿಷ್ಟಿತ ಜ್ಯುಬಿಲಿ ಹಿಲ್ಸ್ ಎಂಬಲ್ಲಿ ನಿಲ್ಲಿಸಿ, ಕಾರಿನೊಳಗೆ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ. ಈ ಸಂದರ್ಭದಲ್ಲಿ ಕೆಲವರು ಹೊರಗೆ ನಿಂತು ಕಾವಲು ಕಾದಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಶಾಸಕನ ಮಗನೂ ಸಹ ಭಾಗಿಯಾಗಿದ್ದು, ಆದರೆ ಅತ್ಯಾಚಾರ ನಡೆಯುವ ಮುನ್ನವೇ ಕಾರಿನಿಂದ ಇಳಿದು ಹೋಗಿದ್ದಾನೆ ಎನ್ನಲಾಗಿದೆ. ಸಂಪೂರ್ಣ ವಿಚಾರಣೆಯ ಬಳಿಕವಷ್ಟೇ ಸತ್ಯ ಹೊರಬೀಳಲಿದೆ.
ಇದನ್ನೂ ಓದಿ: ಹೈದರಾಬಾದ್ ದಿಶಾ ಪ್ರಕರಣ; ಆರೋಪಿಗಳ ಕೊಲೆ ಮಾಡಲೆಂದೇ ಪೊಲೀಸರಿಂದ ‘ನಕಲಿ ಎನ್‌ಕೌಂಟರ್’: ತನಿಖಾ ಆಯೋಗ ವರದಿ
ಬಾಲಕಿಯ ತಂದೆಯ ದೂರಿನ ಮೇಲೆ ಮೊದಲು ಪೊಲೀಸರು ‘ಘನತೆಗೆ ಕುಂದು’ ಪ್ರಕರಣ ದಾಖಲಿಸಿದ್ದರು. ಆದರೆ ಬಾಲಕಿಯು ಮಹಿಳಾ ಪೊಲೀಸರ ಬಳಿ ಸಾಮೂಹಿಕ ಅತ್ಯಾಚಾರ ನಡೆದುದರ ಕುರಿತು ಮಾಹಿತಿ ನೀಡಿದ ನಂತರ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಬಾಲಕಿ ಸದ್ಯ ಶಾಕ್‌ನಲ್ಲಿದ್ದಾಳೆ. ಪೂರ್ತಿ ವಿವರ ನೀಡುವ ಪರಿಸ್ಥಿತಿಯಲ್ಲಿಲ್ಲ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಆಧಾರದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳು ಸೇರಿ ಇನ್ನಿತರ ತಾಂತ್ರಿಕ ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದೇವೆ. ಅಪ್ರಾಪ್ತರಿಗೆ ಕ್ಲಬ್‌ನಲ್ಲಿ ಹೇಗೆ ಪ್ರವೇಶ ನೀಡಲಾಯಿತು ಎನ್ನುವುದರ ಕುರಿತೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಜೋಲ್ ಡೇವಿಸ್ ತಿಳಿಸಿದ್ದಾರೆ.
ಅತ್ಯಾಚಾರವೆಂಬದು ಹೀನ ಕುಕೃತ್ಯ. ವಿಕೃತ ಮನಸ್ಸಗಳು ಮಾಡುವ ಘೋರ ಅಪರಾಧ. ಇಂತಹ ಹೀನ ಕೃತ್ಯಕ್ಕೆ ಹೈದರಾಬಾದ್‌ನಲ್ಲಿ ಶಾಲಾ ಬಾಲಕರೂ ಇಳಿದಿರುವುದು ದುರಂತವಾಗಿದೆ. ಈ ಕುರಿತು ಸರ್ಕಾರಗಳು ಗಂಭೀರವಾಗಿ ಚಿಂತಿಸಿ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಅರಿವು ಮೂಡಿಸಬೇಕಿದೆ. ಅತ್ಯಾಚಾರಗಳನ್ನು ತಡೆಯಲು ಗಂಭೀರ ಪ್ರಯತ್ನ ಹಾಕಬೇಕಿದೆ. ಅದು ಘೋರ ಅಪರಾಧ ಎಂದು ಎಲ್ಲರ ಮನಸ್ಸಿನಲ್ಲಿ ಮೂಡುವಂತೆ ಒತ್ತಡ ಹಾಕಬೇಕಿದೆ.


