Homeಮುಖಪುಟಪಠ್ಯ ಬದಲಾಗದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಬಸವಲಿಂಗ ಪಟ್ಟದ್ದೇವರು ಎಚ್ಚರಿಕೆ

ಪಠ್ಯ ಬದಲಾಗದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಬಸವಲಿಂಗ ಪಟ್ಟದ್ದೇವರು ಎಚ್ಚರಿಕೆ

ವಚನ ಕ್ರಾಂತಿ ಮೂಲಕ ಸಮಾನತೆಯ ಕನಸು ಕಂಡ ಬಸವಣ್ಣನವರ ಚರಿತ್ರೆಯನ್ನು ತಿರುಚುವುದು ಮಕ್ಕಳಿಗೆ ಅಷ್ಟೇ ಅಲ್ಲದೇ, ಇಡೀ ಸಮಾಜಕ್ಕೆ ಮಾಡಿದ ಮೋಸ.

- Advertisement -
- Advertisement -

ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಮುಗ್ಧ ಮಕ್ಕಳ ಹಾಗೂ ಪೋಷಕರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯ ಬಿತ್ತಿ, ತಪ್ಪು ಭಾವನೆಗಳು ಮೂಡಿಸಿರುವುದು ಖಂಡನೀಯ. ಕೂಡಲೇ ಪಠ್ಯಪುಸ್ತಕ ಬದಲಾವಣೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು ಎಚ್ಚರಿಕೆ ನೀಡಿದ್ದಾರೆ.

ಬೀದರ್‌ನಲ್ಲಿ ಜಿಲ್ಲಾ ಕಸಾಪ ಹಾಗೂ ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಒಂದಲ್ಲ ಎರಡಲ್ಲ ಬಹಳಷ್ಟು ಬದಲಾವಣೆ ಮಾಡಿದ್ದಾರೆ, ಬಸವಣ್ಣನವರ ವಿಚಾರಧಾರೆಯಲ್ಲಿ ಅನೇಕ ತಪ್ಪು ಮಾಡಿದ್ದಾರೆ, ಅದೇ ರಾಷ್ಟ್ರಕವಿ ಕುವೆಂಪು ಅವರಿಗೂ ಅಪಚಾರ ಆಗಿದೆ. ಹೀಗಾಗಿ ಈ ಬಗ್ಗೆ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಕೂಡಲೇ ತಪ್ಪನ್ನು ಸರಿಪಡಿಸಬೇಕು. ತಪ್ಪು ಮಾಡಿರುವುದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡು ತಿದ್ದಿಕೊಳ್ಳಬೇಕು. ಒಂದು ವೇಳೆ ತಿದ್ದಿಕೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಿರಂತರವಾಗಿ ನಡೆಸಲಾಗುವುದು ಎಂದರು.

ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಚನ್ನಶೆಟ್ಟಿ ಮಾತನಾಡಿ, ‘ಕನ್ನಡದ ದಿಗ್ಗಜ ಸಾಹಿತಿ ಕುವೆಂಪು ರಚನೆಯ ನಾಡಗೀತೆಗೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ಎಂಬುವನನ್ನು ಗಡಿಪಾರು ಮಾಡಬೇಕು. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕ ಪರಿಷ್ಕರಣೆ ಹಿಂಪಡೆಯುವುದಿಲ್ಲ ಎಂದು ಹೇಳುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ. ಅವರಿಗೆ ನೈತಿಕತೆ ಇದ್ರೆ ರಾಜಿನಾಮೆ ಕೊಡಬೇಕು, ಇಲ್ಲದಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸನಾತನ ಧರ್ಮ, ಶೈವ ಪರಂಪರೆ ಜಾರಿಗೊಳಿಸಿದರೂ ಲಿಂಗಾಯತರು ಏನು ಅನ್ನುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮತ್ತೆ ಬಿಜೆಪಿಗೆ ಮತ ಹಾಕುತ್ತಾರೆ ಎಂಬ ಭಾವನೆ ಈಗಿನ ರಾಜ್ಯ ಸರ್ಕಾರಕ್ಕಿದೆ. ಲಿಂಗಾಯತರು ಎಚ್ಚರಗೊಂಡು ಮೂಲ ಇತಿಹಾಸ ತಿರುಚಲು ಹೊರಟಿದವರಿಗೆ ಪಾಠ ಕಲಿಸಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಆನಂದ ದೇವಪ್ಪ ಹೇಳಿದರು.

ಸಾಹಿತಿಗಳು, ಕಲಾವಿದರು ನಾಡಿನ ಅನಭಿಷಿಕ್ತ ಶಾಸಕರು ಇದ್ದಂತೆ, ಅವರನ್ನು ಅಪಮಾನಗೊಳಿಸುವುದು ಅಥವಾ ಅವರ ಚರಿತ್ರೆಯನ್ನು ತಿರುಚಿ ಬರೆಯುವುದು ಅಕ್ಷಮ್ಯ ಅಪರಾಧವಾಗುತ್ತದೆ. ಆದರೆ ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ಸಾಹಿತಿಗಳನ್ನು ಅಪಮಾನಗೊಳಿಸಿರುವುದು ಮತ್ತು ಅವರ ಚರಿತ್ರೆಯನ್ನು ತಿರುಚಿ ಬರೆಸುವ ಮೂಲಕ ನಾಡಿನಲ್ಲಿ ಅರಾಜಕತೆ ಹುಟ್ಟು ಹಾಕಿದಂತಾಗಿದೆ. ನಾಡಗೀತೆ ತಿರುಚಿ ಬರೆದವರ ವಿರುದ್ಧ ಸರ್ಕಾರ ವಾರದೊಳಗೆ ಕ್ರಮಕೈಗೊಳ್ಳಬೇಕು ಎಂದು ಯುವ ಹೋರಾಟಗಾರ ವಿರುಪಾಕ್ಷ ಗಾದಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರೋಹಿತ್‌‌ ಚಕ್ರತೀರ್ಥ ‘ಶೈಕ್ಷಣಿಕ ಅರ್ಹತೆ’ ಬಗ್ಗೆ ಪ್ರಶ್ನಿಸಿ ಆರ್‌‌ಟಿಐ ಅರ್ಜಿ

ವಚನ ಕ್ರಾಂತಿ ಮೂಲಕ ಸಮಾನತೆಯ ಸಮಾಜದ ಕನಸು ಕಂಡ ಬಸವಣ್ಣನವರ ಚರಿತ್ರೆಯನ್ನು ತಿರುಚುವುದು ಮಕ್ಕಳಿಗೆ ಅಷ್ಟೇ ಅಲ್ಲದೇ, ಇಡೀ ಸಮಾಜಕ್ಕೆ ಮಾಡಿದ ಮೋಸ. ಪಠ್ಯ ಪುಸ್ತಕ ಸಮಿತಿ ಕಾರ್ಯ ಅಕ್ಷಮ್ಯ ಅಪರಾಧ. ಇದು ರಾಜ್ಯ ಸರ್ಕಾರ ಪೋಷಿತ ಕೆಲಸವೇ ಆಗಿದೆ. ಇದಕ್ಕೆ ದಿಕ್ಕಾರ ಹೇಳಲೇಬೇಕು ಎಂದು ಹುಲಸೂರು ಶ್ರೀಗಳು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಶ್ರೀಕಾಂತ ಸ್ವಾಮಿ, ಶರಣಪ್ಪಾ ಮಿಠಾರೆ, ವಿಜಯಕುಮಾರ್ ಸೋನಾರೆ, ಎಂ.ಎಸ್.ಮನೋಹರ್, ವಿದ್ಯಾವತಿ ಬಲ್ಲೂರು, ರಜಿಯಾ ಬಳಬಟ್ಟಿ, ರೂಪಾ ಪಾಟೀಲ್, ಸುನೀಲ್ ಭಾವಿಕಟ್ಟಿ, ಮಹೇಶ್ ಗೊರನಾಳಕರ್ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು, ಬಸವಪರ ವಿವಿಧ ಸಂಘಟನೆಗಳ ಅನುಯಾಯಿಗಳು ಇದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...