ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಆಗ್ರಹಿಸಿ ಕಳೆದ ವಾರ ಪ್ರತಿಭಟನೆ ನಡೆಸಿದ್ದ 23 ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ಅಮಾನತುಗೊಳಿಸಿದೆ.
“ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ಸೋಮವಾರ ಅಮಾನತುಗೊಳಿಸಲಾಗಿದೆ,” ಎಂದು ಪುತ್ತೂರು ಬಿಜೆಪಿ ಶಾಸಕ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಧ್ಯಕ್ಷ ಸಂಜೀವ ಮಠಂದೂರು ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ.
ಕಳೆದ ವಾರ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದು, ಸ್ಕಾರ್ಫ್ ಧರಿಸಲು ತಮಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿ, ಪ್ರತಿಭಟಿಸಿದ್ದರು. ಈ ಬಗ್ಗೆ ಸೋಮವಾರ ಸಿಡಿಸಿ ಸಭೆ ನಡೆಸಿ ಅವರನ್ನು ಅಮಾನತುಗೊಳಿಸಿದೆ.
ಇದನ್ನೂ ಓದಿ: ಹಿಜಾಬ್ ವಿಚಾರದಲ್ಲಿ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ‘ಮಿಸ್ ಯುನಿವರ್ಸ್’ ಹರ್ನಾಜ್ ಸಂಧು
ಈ ಹಿಂದೆಯೂ ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದ ಏಳು ವಿದ್ಯಾರ್ಥಿನಿಯರನ್ನು ಸಮಿತಿ ಅಮಾನತುಗೊಳಿಸಿತ್ತು.
ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಬಟ್ಟೆಯನ್ನು ನಿಷೇಧಿಸಿರುವ ಕರ್ನಾಟಕ ಸರ್ಕಾರದ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಇಸ್ಲಾಂ ಧರ್ಮದಲ್ಲಿ ಸ್ಕಾರ್ಫ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಸಮವಸ್ತ್ರ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲರೂ ಏಕರೂಪದ ಉಡುಗೆ ನಿಯಮವನ್ನು ಪಾಲಿಸಬೇಕು ಎಂದು ಈ ವರ್ಷದ ಮಾರ್ಚ್‌ನಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು.
ಹಿಜಾಬ್ ಕುರಿತ ಕರ್ನಾಟಕ ಹೈಕೋರ್ಟ್ ತೀರ್ಪು ತನ್ನ ಮುಂದಿರುವ ಅಗತ್ಯ ಪ್ರಶ್ನೆಗಳನ್ನು ಬದಿಗಿಟ್ಟಿದೆ ಎಂದು ಬೆಂಗಳೂರಿನ ವಿದ್ಯಾರ್ಥಿ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿತ್ತು.
ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್), ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ (ಎಸ್‌ಐಒ), ಸ್ಟೂಡೆಂಟ್ಸ್ ಕಲೆಕ್ಟೀವ್ ಬೆಂಗಳೂರು, ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ), ಸ್ಟೂಡೆಂಟ್ಸ್ ಕ್ರಿಶ್ಚಿಯನ್ ಮೂವ್‌ಮೆಂಟ್ ಆಫ್ ಇಂಡಿಯಾ (ಎಸ್‌ಸಿಎಂಐ), ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ (ಜಿಐಒ) ಸಂಘಟನೆಗಳು ಈ ಒಕ್ಕೂಟದಲ್ಲಿದ್ದು, ಹೈಕೋರ್ಟ್ ತೀರ್ಪಿನ ಕುರಿತು ಆಕ್ಷೇಪಗಳನ್ನು ಎತ್ತಿವೆ.
ಇದನ್ನೂ ಓದಿ: ಉಡುಪಿ: ಹಿಜಾಬ್ ತೀರ್ಪಿನ ಬಳಿಕ 400ಕ್ಕೂ ಹೆಚ್ಚು ಮುಸ್ಲಿಂ ಹೆಣ್ಣುಮಕ್ಕಳು ತರಗತಿಯಿಂದ ಹೊರಕ್ಕೆ!


