ಕನ್ನಡ ವಿರೋಧಿಯು ಪರಿಷ್ಕರಣೆ ಮಾಡಿರುವ ಪಠ್ಯದಲ್ಲಿ ನೂರೆಂಟು ಹುಳುಕುಗಳಿವೆ. ಅವುಗಳನ್ನು ಕನ್ನಡದ ಮಕ್ಕಳು ಓದುವ ಅವಶ್ಯಕತೆ ಇಲ್ಲ. ಹಾಗಾಗಿ ಹಳೇ ಪಠ್ಯಗಳನ್ನೆ ಮಕ್ಕಳಿಗೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಗೌಡ ಒತ್ತಾಯಿಸಿದ್ದಾರೆ.
ಸರ್ಕಾರ ಕೆಲವು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡುವ ಭರವಸೆ ನೀಡಿದೆ. ಆದರೆ ಇಡೀ ಪರಿಷ್ಕರಣೆಯೇ ವಿಕೃತವಾಗಿದೆ. ಕನ್ನಡ ಬಾವುಟವಿದ್ದ ಚಿತ್ರವನ್ನು ತೆಗೆಯಲಾಗಿದೆ, ಕುವೆಂಪು, ದೇವನೂರು ಅವರ ಭಾವಚಿತ್ರಗಳನ್ನು ಕುತ್ಸಿತ ಮನಸ್ಥಿತಿಯಿಂದ ತೆಗೆಯಲಾಗಿದೆ. ಕನ್ನಡ ರಾಜ್ಯೋತ್ಸವದ ಪಾಠವನ್ನೇ ಕಿತ್ತುಹಾಕಲಾಗಿದೆ ಎಂದು ಅವರು ದೂರಿದ್ದಾರೆ.
ಕನ್ನಡ ನೆಲದ ವೀರರಾಣಿ ಅಬ್ಬಕ್ಕನ ಚರಿತ್ರೆಯನ್ನು ತೆಗೆದು ಹಾಕಲಾಗಿದೆ. ಕನಕದಾಸರು, ಪುರಂದರ ದಾಸರು, ಶಿಶುನಾಳ ಶರೀಫರ ಮತ್ತು ಇತರ ಭಕ್ತಪಂಥದ ಮಹಾನುಭಾವರ ಪರಿಚಯವಿದ್ದ ಲೇಖನ ತೆಗೆಯಲಾಗಿದೆ. ಬಸವಣ್ಣನವರ ಚರಿತ್ರೆ ವಿರೂಪಗೊಳಿಸಲಾಗಿದೆ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಬಳಸಿದ್ದ ಸಂವಿಧಾನಶಿಲ್ಪಿ ಎಂಬ ಪದವನ್ನು ಕಿತ್ತುಹಾಕಲಾಗಿದೆ. ಇಂತಹ ಪಠ್ಯಗಳನ್ನು ನಮ್ಮ ಮಕ್ಕಳು ಓದಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಆಡಿಸು ನೋಡು ಬೀಳಿಸಿ ನೋಡು ಎಂಬ ಚಿ.ಉದಯಶಂಕರ್ ಅವರ ಕವಿತೆಯನ್ನು ಬಳಸಿ, ಆರ್.ಎನ್.ಜಯಗೋಪಾಲ್ ಅವರ ಹೆಸರನ್ನು ಬಳಸಲಾಗಿದೆ. ಪರಿಷ್ಕರಣಾ ಸಮಿತಿಯವರ ಸ್ನೇಹಿತರೆಂಬ ಕಾರಣಕ್ಕೆ ವಿರೂಪಗೊಂಡ ಕೃತಿಚೌರ್ಯದ ಪದ್ಯ ಬಳಸಲಾಗಿದೆ. ಪಿ.ಲಂಕೇಶ್, ಸಾ.ರಾ.ಅಬೂಬಕರ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ನಾಡಿನ ಪ್ರಖ್ಯಾತ ಸಾಹಿತಿಗಳು, ಕವಿಗಳ ಲೇಖನ, ಪದ್ಯಗಳನ್ನು ಯಾವ ಕಾರಣವನ್ನೂ ಒದಗಿಸದೆ ಕಿತ್ತುಹಾಕಲಾಗಿದೆ. ಕನ್ನಡಿಗರಿಗೆ, ಕನ್ನಡ ಸಂಸ್ಕೃತಿಗೆ ಯಾವ ಸಂಬಂಧವೂ ಇಲ್ಲದ ಲೇಖಕರಿಗೆ ಮಣೆ ಹಾಕಲಾಗಿದೆ. ಕನ್ನಡಿಗರ ಇತಿಹಾಸವನ್ನು ಕುಬ್ಜಗೊಳಿಸುವ ಪ್ರಯತ್ನ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲ ಇದ್ದ ಮೇಲೆ, ಈ ಪರಿಷ್ಕರಣೆಗಳನ್ನು ಇಟ್ಟುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಎಷ್ಟು ತೇಪೆ ಹಾಕಿದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ತೇಪೆ ಕೆಲಸ ಕೈಬಿಟ್ಟು ಇಡಿಯಾಗಿ ಪರಿಷ್ಕರಣೆಯನ್ನು ಸರ್ಕಾರ ತಿರಸ್ಕರಿಸಬೇಕು. ತಡಮಾಡದೇ ಈ ವರ್ಷ ವಿದ್ಯಾರ್ಥಿಗಳಿಗೆ ಹಳೆಯ ಪಠ್ಯವನ್ನೇ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪಿಯುಸಿ ಪಠ್ಯ ಪರಿಷ್ಕರಣೆಯ ‘ಚಕ್ರತೀರ್ಥ ವರದಿ’ ಪಡೆಯಲ್ಲ ಎಂದ ಸಚಿವ ಬಿಸಿ ನಾಗೇಶ್; ಜನಾಕ್ರೋಶಕ್ಕೆ ಮಣಿದ ಸರ್ಕಾರ


