ದೇಶದಲ್ಲಿ ಭಾರಿ ಆಕ್ರೋಶಕ್ಕೆ ಮತ್ತು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಒಬ್ಬ ವಯಸ್ಕ ಮತ್ತು ಐವರು ಅಪ್ರಾಪ್ತರು ಸೇರಿದಂತೆ ಎಲ್ಲ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಶಾಸಕನ ಅಪ್ರಾಪ್ತ ಪುತ್ರನನ್ನು ಆರೋಪಿ ಎಂದು ಹೆಸರಿಸಲಾಗಿದ್ದು, ಆತನನ್ನು ಆರನೇ ಆರೋಪಿಯಾಗಿ ಬಂಧಿಸಲಾಗಿದೆ.
18 ವರ್ಷದ ವಯಸ್ಕ ಆರೋಪಿ ಸದುದ್ದೀನ್ ಮಲಿಕ್ ಸೇರಿದಂತೆ ಮೊದಲ ಐವರು ಆರೋಪಿಗಳ ಮೇಲೆ ಸಾಮೂಹಿಕ ಅತ್ಯಾಚಾರ, ಅಪಹರಣ, ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು ಮತ್ತು POCSO ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕನಿಷ್ಠವೆಂದರೂ 20 ವರ್ಷಗಳ ಜೈಲು ಅಥವಾ ಜೀವಮಾನದ ಜೈಲು ಶಿಕ್ಷೆ ವಿಧಿಸಬಹುದು.
ಆರನೇ ಆರೋಪಿ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ ಆದರೂ ಲೈಂಗಿಕ ದೌರ್ಜನ್ಯ ನಡೆಸಿರುವುದರಿಂದ ಆತನ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ವಿರುದ್ಧ ಅಪರಾಧ ಪ್ರಕರಣ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ. ಆತನಿಗೂ 5–7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಹೇಳಿದ್ದಾರೆ.
ಇದನ್ನೂ ಓದಿ: ಹೈದರಾಬಾದ್: ಬಾಲಕಿ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಬೆಳಕಿಗೆ ಬಂದ ಮತ್ತಷ್ಟು ಕೇಸ್‌ಗಳು
ಕಳೆದ ವಾರ, ಬಿಜೆಪಿ ಶಾಸಕ ರಘುನಂದನ್ ರಾವ್, ಎಐಎಂಐಎಂ ಶಾಸಕರ ಮಗ ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಸಂತ್ರಸ್ತ ಬಾಲಕಿಯ ಜೊತೆಗಿರುವ ವಿಡಿಯೋ ಕ್ಲಿಪ್ ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಶಾಸಕರ ಮಗ ಕಾರಿನಲ್ಲಿ ಇದ್ದರೂ, ಪೊಲೀಸರು ಮರೆ ಮಾಚುತ್ತಿದ್ದಾರೆ ಎಂದು ಆರೋಪಿಸಿದರು.
ಈಗ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ರಘುನಂದನ್ ರಾವ್ ವಿರುದ್ಧ ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಕೂಡ ಆರಂಭದಲ್ಲಿ, ಸ್ಥಳೀಯ ಪೇಸ್ಟ್ರಿ ಅಂಗಡಿಯಲ್ಲಿ ಇವರನ್ನು ಬಿಟ್ಟು ಶಾಸಕರ ಮಗ ಹೊರಟು ಹೋಗಿದ್ದರಿಂದ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.”ಆರನೇ ಆರೋಪಿ ಇನ್ನೋವಾದಲ್ಲಿ (ಕಾರು) ಸ್ವಲ್ಪ ದೂರ ಪ್ರಯಾಣಿಸಿದ್ದಾರೆ. ನಂತರ ಫೋನ್ ಕರೆ ಬಂದಿದ್ದರಿಂದ ಹಿಂತಿರುಗಿದ ಬಳಿಕ ಐದು ಜನರು ಅತ್ಯಾಚಾರ ಎಸಗಿದ್ದಾರೆ” ಎಂದು ಕಮಿಷನರ್ ತಿಳಿಸಿದ್ದಾರೆ.
“ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಬ್‌ನಲ್ಲಿಯೇ ಬಾಲಕಿಗೆ ಕಿರುಕುಳ ನೀಡಲು ಆರಂಭವಾಗಿದೆ. ಆಕೆಯ ಸ್ನೇಹಿತ ಹೋದ ನಂತರ ಸಂಜೆ 5:40 ರ ಸುಮಾರಿಗೆ ಆರೋಪಿಗಳು ಪಬ್‌ನ ಹೊರಗೆ ಇವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, “ರಾಜಕೀಯವಾಗಿ ಪ್ರಭಾವಿ” ಕುಟುಂಬಕ್ಕೆ ಸೇರಿದವರು” ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಹೇಳಿದ್ದಾರೆ.
ಪೊಲೀಸರ ಕೈಗೆ ಸಿಕ್ಕಿಬಿದ್ದ ಅಪ್ರಾಪ್ತರಲ್ಲಿ ಒಬ್ಬರು ರಾಜ್ಯದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಸ್ಥಳೀಯ ನಾಯಕರೊಬ್ಬರ ಪುತ್ರ. ಇನ್ನೋರ್ವ ಅಪ್ರಾಪ್ತ ಸಂಗ ರೆಡ್ಡಿಯ ಟಿಆರ್‌ಎಸ್ ಮುಖಂಡರೊಬ್ಬರ ಪುತ್ರರಾಗಿದ್ದಾರೆ.
ಮೇ 28 ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದಾಗ 17 ವರ್ಷದ ಬಾಲಕಿಯ ಮೇಲೆ ರಾಜಕೀಯ ಕುಟುಂಬಗಳ ಅಪ್ರಾಪ್ತ ವಯಸ್ಕರು ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ : ಸಂತ್ರಸ್ತೆಯ ವಿಡಿಯೋ ಹಂಚಿಕೊಂಡಿದ್ದ ಬಿಜೆಪಿ ಶಾಸಕನ ಮೇಲೆ FIR



Life long should be punishment all of rapist