Homeಅಂಕಣಗಳುಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

ಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

- Advertisement -
- Advertisement -

ಭಾರತ ದೇಶವು ಬ್ರಿಟಿಷರಿಂದ ಸ್ವಾತಂತ್ರ್ಯಗೊಳ್ಳುವ ಹತ್ತು ತಿಂಗಳ ಮುಂಚೆ 1946ರಲ್ಲಿ ಕರ್ನಾಟಕದಲ್ಲಿ ಒಂದು ಭೀಕರ ದಲಿತರ ಹತ್ಯಾಕಾಂಡವಾಗುತ್ತದೆ. ಈ ಹತ್ಯಾಕಾಂಡ ನಡೆದ ವಲಯದ ಪೊಲೀಸ್ ಸ್ಟೇಷನ್ನಿಗೆ ಡಾ. ಬಿ. ಆರ್. ಅಂಬೇಡ್ಕರ್ ಅವರು ಖುದ್ದು ಭೇಟಿಕೊಟ್ಟು ಪ್ರಕರಣದ ಬಗ್ಗೆ ವಿಚಾರಿಸಿಕೊಂಡು ಹೋಗಿದ್ದಾರೆ. ಅಂತಹ ಭೀಕರ ಘಟನೆಯನ್ನು ಕರ್ನಾಟಕದ ದಲಿತರೂ ಸಹ ಮರೆತುಬಿಟ್ಟಿದ್ದಾರೆ. ಸಂವಿಧಾನ ಸಭೆಯಲ್ಲಿ ದಲಿತರಿಗೆ ರಕ್ಷಣೆ ಹಾಗೂ ಘನತೆ ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ ದಲಿತೇತರರೂ ಸಹ ತಮ್ಮ ಮಾತನ್ನು ಮರೆತುಬಿಟ್ಟಿದ್ದಾರೆ. ಈ ಸಾಸನೂರು ಘಟನೆಯನ್ನು ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಅವರು ’ದಲಿತರ ಬದುಕು-ಮೆಲುಕು’ ಕೃತಿಯಲ್ಲಿ ನಮೂದಿಸಿದ್ದಾರೆ.

ವಿಜಾಪುರ ಜಿಲ್ಲೆಯಲ್ಲಿನ ಬಸವನ ಬಾಗೇವಾಡಿ ತಾಲ್ಲೂಕಿನ ಸಾಸನೂರ ಗ್ರಾಮವು ವಿಜಾಪುರದಿಂದ ಸುಮಾರು 65 ಕಿ.ಮೀ. ಅಂತರದಲ್ಲಿದೆ. ಈ ಗ್ರಾಮದಲ್ಲಿ ದಲಿತರ ಒಂದು ಜಾತಿಯ ಮೇಲೆ ನಡೆಸಿದ ದೌರ್ಜನ್ಯ ಪ್ರಕರಣ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ದೌರ್ಜನ್ಯ ನಡೆಸಿದವರು ರೆಡ್ಡಿ ಜನಾಂಗದವರು. 22ನೇ ಅಕ್ಟೋಬರ್ 1946ರ ಮುಂಜಾನೆಯಂದು ದಲಿತರ ಮೇಲೆ ರೆಡ್ಡಿ ಜನಾಂಗದವರು ದೌರ್ಜನ್ಯವೆಸಗಿದರೆಂದು ದಾಖಲಾಗಿದೆ. ದಲಿತರು ಮೇಲ್ಜಾತಿಯ ರೆಡ್ಡಿಗಳಿಗೆ ಅಣ್ಣಾ, ಅಪ್ಪಾ, ಅವ್ವಾ ಎಂದು ಕರೆಯದೆ ಸ್ವಾಭಿಮಾನದ ಬದುಕು ನಡೆಸುತ್ತಿದ್ದದ್ದೇ ಈ ಘಟನೆ ನಡೆಯಲು ಬಹುಮುಖ್ಯ ಕಾರಣವಾಗಿದೆ. ಇದನ್ನು ಸಹಿಸದ ಮೇಲ್ಜಾತಿಯವರು ದಲಿತರ ಮೇಲೆ ದಬ್ಬಾಳಿಕೆಯನ್ನು ಮಾಡತೊಡಗಿದರು.
ಇದರಿಂದ ಜಗ್ಗದ ದಲಿತರು ದೌರ್ಜನ್ಯಕ್ಕೆ ಎದುರಾಗಿ ತಿರುಗಿಬಿದ್ದರು.

ಆದರೆ ಹೀಗೆ ತಿರುಗಿಬಿದ್ದ ದಲಿತರನ್ನು ವಿರುದ್ಧ ಬೀಳುವ ಅಲ್ಲಿನ ಮೇಲ್ಜಾತಿಗಳ ಜನರು, ತಮ್ಮ ಹೊಲದಲ್ಲಿ ಬೆಳೆದ ದವಸಗಳನ್ನು ರಾಶಿ ಮಾಡಿಕೊಂಡು ಬರುತ್ತಿದ್ದಾಗ ಅವರ ಹಾದಿಯಲ್ಲಿಯೇ ಗಾಡಿಯನ್ನು ನಿಲ್ಲಿಸಿ ತಮಗೆ ಬೇಕಾದಷ್ಟು ಆಹಾರ ಧಾನ್ಯವನ್ನು ದಬ್ಬಾಳಿಕೆಯಿಂದ ದಲಿತರು ಕಸಿದುಕೊಂಡು ಹೋಗುತ್ತಿದ್ದರೆಂದು ಆಪಾದಿಸುತ್ತಾರೆ. ಜೊತೆಗೆ ಆಯುಧ ಪೂಜಾ ಸಂದರ್ಭದಲ್ಲಿ ಎತ್ತುಗಳನ್ನು ಶೃಂಗರಿಸಿ ಊರಿನ ಕೇರಿಗಳಲ್ಲಿ ಮೆರವಣಿಗೆ ಮಾಡಲು ದಲಿತರು ಸಿದ್ಧರಾಗಿದ್ದರು. ಆದರೆ ಈ ಎತ್ತುಗಳ ಮೆರವಣಿಗೆಯನ್ನು ತಡೆಗಟ್ಟುವುದು ಮೇಲ್ಜಾತಿಯವರ ಪ್ರತಿಷ್ಠೆಯ ವಿಷಯವಾಗಿತ್ತು.

ಇದರ ಜೊತೆಜೊತೆಗೆ ನಡೆದ ಮತ್ತೊಂದು ಘಟನೆ ಇದು. ಸಾಸನೂರ ಗ್ರಾಮದ ದಲಿತರಾದ ಹೊನ್ನಪ್ಪ ಸಾಸನೂರ ಮತ್ತು ಯಲ್ಲಪ್ಪ ಸಾಸನೂರ ಎಂಬ ಇಬ್ಬರು ಸಹೋದರರು ಕುಸ್ತಿಪಟುಗಳಾಗಿದ್ದರು. ಈ ಇಬ್ಬರು ಪಕ್ಕದ ತುಂಬಗಿ ಗ್ರಾಮಕ್ಕೆ ಕುಸ್ತಿ ಆಡಲು ಹೋಗಿದ್ದರು. ಅಲ್ಲಿಗೆ ಹೋದಾಗ ಮೇಲ್ಜಾತಿಯವರಿಗೆ ಹೊನ್ನಪ್ಪನ ಕಾಲು ತಾಕಿದ್ದನ್ನು ನೆಪ ಮಾಡಲಾಯಿತು. ಹೊಲೆಯನ ಕಾಲು ತಾಕಿತೆಂದು ತುಂಬಗಿಯ ಮೇಲ್ಜಾತಿಯವರು ಹೊನ್ನಪ್ಪನಿಗೆ ಜೀವ ಹೋಗುವ ಹಾಗೆ ಬಡಿದರು. ಇದರಿಂದ ಜೀವಕ್ಕೆ ಹೆದರಿ ಯಲ್ಲಪ್ಪ ಅಲ್ಲಿಂದ ಓಡಿಹೋದ. ತದನಂತರ ಹೊನ್ನಪ್ಪನಿಗೂ ಎಚ್ಚರವಾಯ್ತು; ಇಬ್ಬರೂ ತಮ್ಮ ಊರಾದ ಸಾಸನೂರಿಗೆ ಬಂದರು.

ಇನ್ನೊಂದು ದಿನ ತುಂಬಗಿಯ ಮೇಲ್ಜಾತಿಯ ಜನರು ಬೀಗರ ಊರಾದ ಸಾಸನೂರಿಗೆ ಬರುವ ಸುದ್ದಿಯನ್ನು ತಿಳಿದು ಹೊನ್ನಪ್ಪ ಮತ್ತು ಯಲ್ಲಪ್ಪ ತಮ್ಮ ಸೇಡನ್ನು ತೀರಿಸಿಕೊಳ್ಳಲು ಡೋಣಿಯಲ್ಲಿ ಕಾದು ಕುಳಿತುಕೊಂಡಿದ್ದರು. ಈ ಸುದ್ದಿಯು ಮೇಲ್ಜಾತಿಯವರಿಗೆ ಗೊತ್ತಾದಾಗ ಎರಡೂ ಗುಂಪುಗಳ ಮಧ್ಯೆ ವೈರತ್ವ ಮತ್ತಷ್ಟು ಉಲ್ಬಣಗೊಂಡಿತು. ಉರಿಯುವ ಬೆಂಕಿಗೆ ತುಪ್ಪ ಹಾಕಿದ ಹಾಗಾಯಿತು ಎಂಬಂತೆ ಮತ್ತಷ್ಟು ವಿಕೋಪಕ್ಕೇರಿತು.

ಇದೇ ಸಮಯದಲ್ಲಿ ಒಬ್ಬ ಮೇಲ್ಜಾತಿಯ ಹೆಣ್ಣುಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಈ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅಲ್ಲಿನ ಜನರು ಹೇಳುವುದೇನೆಂದರೆ, ಅವಳಿಗೆ ದಲಿತ ವ್ಯಕ್ತಿಯೊಬ್ಬನೊಂದಿಗೆ ಅನೈತಿಕ ಸಂಬಂಧವಿತ್ತು ಮತ್ತು ಆ ಅನೈತಿಕ ವಿಷಯ ಎಲ್ಲ ಮೇಲ್ಜಾತಿಯವರಿಗೆ ಗೊತ್ತಾಗಿದ್ದರಿಂದ ಅವಳು ಆತ್ಮಹತ್ಯೆ ಮಾಡಿಕೊಂಡಳೆಂದು. ಆದರೆ ಇನ್ನೊಂದು ಕಡೆ ಮೇಲ್ಜಾತಿಯವರು ಈ ಸಂಬಂಧಕ್ಕೆ ಬಣ್ಣ ಕೊಟ್ಟು ದಲಿತರು ಮೇಲ್ಜಾತಿಯ ಹೆಣ್ಣುಮಕ್ಕಳನ್ನು ಪೀಡಿಸುವುದು, ಅತ್ಯಾಚಾರವೆಸಗುವುದು, ಅನೈತಿಕ ಚಟುವಟಿಕೆ
ಗಳಿಗೆ ಒತ್ತಾಯ ಮಾಡುವುದು ಮುಂತಾದ ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆಂದು ಹಬ್ಬಿಸಿದರು. ಹಾಗೆಯೇ ಈ ಹೆಣ್ಣುಮಗಳೊಂದಿಗೂ ನಡೆದುಕೊಂಡಿರುವ ಕಾರಣ ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಕತೆಕಟ್ಟಿದರು. ಈ ಮೇಲ್ವರ್ಗದವರ ಮಾತನ್ನು ಅಂದಿನ ಘಟನೆಯನ್ನು ನೋಡಿರುವ ಸಂಗಪ್ಪನವರು ತಳ್ಳಿಹಾಕುತ್ತಾರೆ.

ದಲಿತರು ಹೀಗೆ ತಿರುಗಿಬಿದ್ದದ್ದರಿಂದಾಗಿ ಮೇಲ್ಜಾತಿಯ ರೆಡ್ಡಿಗಳು ದಲಿತರ ಮೇಲೆ ಮಾಟ-ಮಂತ್ರಗಳನ್ನು ಮಾಡಿಸಲು ಒಬ್ಬ ಮಾಂತ್ರಿಕನ ಬಳಿ ಹೋದರಂತೆ. ಮಾಟಗಾರನು ದೀಪಾವಳಿ ಬಲಿಪಾಡ್ಯದ ದಿನದಂದು ದಲಿತರನ್ನು ಬಲಿ ತೆಗೆದುಕೊಂಡರೆ ಯಾವ ಸಮಸ್ಯೆಯೂ ನಿಮಗೆ ಬರುವುದಿಲ್ಲ ಎಂದು ಹೇಳಿದನಂತೆ. ಅದರ ಪ್ರಕಾರ ಮೇಲ್ಜಾತಿಯವರು ದಲಿತರನ್ನು ಹೊಡೆಯಲು ತಯಾರಿ ಮಾಡಿಕೊಂಡು ದಾಸಪ್ಪನೆಂಬ ಸವರ್ಣೀಯನನ್ನು ಹೊಲಗೇರಿಯಲ್ಲಿ ಹಾಯ್ದು ಕಸ ಚೆಲ್ಲಲು ಕಳುಹಿಸಿಕೊಟ್ಟರು. ಆಗ ಅಲ್ಲಿನ ದಲಿತರು ದಾಸಪ್ಪನನ್ನು ವಿಚಾರಿಸಲಾಗಿ ಅವನು ಕಸ ಚೆಲ್ಲಲು ಬಂದಿರುವುದಾಗಿ ತಿಳಿಸಿದನು. ’ಹಿಡಕೋರಲೆ ಅವನನ್ನು’ ಅಂದ ತಕ್ಷಣ ಅವನು ಸಾರ್ವಜನಿಕವಾಗಿ ಕೂಗುತ್ತಾ, ’ನನ್ನನ್ನು ಹೊಲೆಯರು ಹೊಡೆದರೆಂದು’ ಹೇಳಿದಾಗ ಮನೆಯ ಮೇಲೆ ನಿಂತ ಸವರ್ಣೀಯರು ಹೊಲೆಯರತ್ತ ಕಲ್ಲುಗಳನ್ನು ಬಿಸಾಡಿದರು. ಅದಕ್ಕೆ ಪ್ರತಿಯಾಗಿ ಹೊಲೆಯರು ಸವರ್ಣೀಯರನ್ನು ಹೊಡೆದು ಊರೊಳಕ್ಕೆ ಓಡಿಸಿದರು. ತದನಂತರ ಹೊಲೆಯರೆಲ್ಲ ಒಟ್ಟಾಗಿ ಒಂದು ಮನೆಯಲ್ಲಿ ಸೇಂದಿಯನ್ನು ಕುಡಿಯುತ್ತಾ ಈ ಜಗಳದ ಕುರಿತು ಮಾತನಾಡುತ್ತಿದ್ದರು. ಇದನ್ನು ಸಾಸನೂರಿನ ವ್ಯಕ್ತಿಯು ನೋಡಿ ರೆಡ್ಡಿ ಜನಾಂಗಕ್ಕೆ ಈ ವಿಷಯವನ್ನು ತಿಳಿಸಿದನು. ಇದನ್ನು ತಿಳಿದ ಊರಿನ ಜನರು ಹೊಲೆಯರ ಕೇರಿಗೆ ಬಂದು, ಅಮಲಿನಲ್ಲಿ ಒಟ್ಟಿಗೆ ಸೇರಿದ್ದ ಹೊಲೆಯರ ಕೋಣೆಯ ಬಾಗಿಲನ್ನು ಹೊರಗಿನಿಂದಲೇ ಮುಚ್ಚಿದರು ಮತ್ತು ಕಿಟಕಿ ಮುಖಾಂತರ ಬೆಂಕಿಯಲ್ಲಿ ಮೆಣಸಿನಕಾಯಿಯನ್ನು ಎಸೆದು ಘಾಟು ಎಬ್ಬಿಸಿ ಆ ಮನೆಗೆ ಬೆಂಕಿಯನ್ನು ಹಚ್ಚಿದರು.

ಇದರಿಂದ ವಿಚಲಿತಗೊಂಡ ದಲಿತರು ಮನೆಯೊಳಗೆ ಚೀರಾಡತೊಡಗಿದ್ದರು. ಜಾಗ ಮಾಡಿಕೊಂಡು ಹೊರಬಂದ ದಲಿತರನ್ನು ಒಬ್ಬೊಬ್ಬರಾಗಿ ಕೊಂದರು. ಹೀಗೆ ಒಟ್ಟು 14 ಜನರಲ್ಲಿ 13 ಜನರನ್ನು ಕಡಿದು ಕೊಂದಿರುವ ಪ್ರಕರಣ ಬಸವನ ಬಾಗೇವಾಡಿ ತಾಲ್ಲೂಕಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ಮೇಲ್ಜಾತಿಯ ರೆಡ್ಡಿಗಳಿಗೆ ಹೆದರಿ ಶಾಮೀಲಾದ ದಲಿತರ ಮತ್ತೊಂದು ಜಾತಿಯವರು ಆಸೆ ಆಮಿಷಗಳಿಗೆ ಬಲಿಯಾದರು. ಅವರ ಕುಟುಂಬಗಳ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳುವುದಾಗಿ ಸವರ್ಣೀಯರು ತಿಳಿಸಿದಾಗ ಆ ಕೊಲೆಯನ್ನು ತಾವೇ ಮಾಡಿದ್ದೇವೆಂದು ಮತ್ತೊಂದು ದಲಿತ ಜಾತಿಯವರು ತಮ್ಮ ಮೇಲೆ ಹಾಕಿಕೊಂಡರು. ಭಯಗೊಂಡ ಕೊಲೆ ಬೆದರಿಕೆಗೊಳಗಾದ ದಲಿತರು ಊರು ಬಿಟ್ಟು ಬೇರೆಬೇರೆ ಊರುಗಳಿಗೆ ಹೋಗಿ ನೆಲೆಸಿದರು. ಇದರಿಂದಾಗಿ ದೌರ್ಜನ್ಯ ಮಾಡಿದ ಸವರ್ಣೀಯರು ಕುತಂತ್ರದಿಂದ ಪಾರಾದರಲ್ಲದೆ ಈ ಪ್ರಕರಣ ಸಂಬಂಧ ಮತ್ತೊಂದು ದಲಿತ ಜಾತಿಯವರಿಗೆ ಶಿಕ್ಷೆಯಾಯಿತು. ದಲಿತರನ್ನು ಕೊಂದದ್ದಕ್ಕೆ ದಲಿತರೇ ಶಿಕ್ಷೆ ಅನುಭವಿಸುವಂತಾಯಿತು. ಈ ದೌರ್ಜನ್ಯ ಘಟನೆಯ ಸಲುವಾಗಿ ಡಾ. ಅಂಬೇಡ್ಕರ್ ಅವರು ಬಸವನಬಾಗೇವಾಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು ಎಂದು 1946ರ ಬೀಟ್ ಡೈರಿಯಲ್ಲಿ ದಾಖಲಾಗಿದೆ.

ಇದೇ ಸಾಸನೂರಿಗೆ ಸಂಬಂಧಿಸಿದಂತೆ ಇಂತಹ ಹಲವು ಘಟನೆಗಳ ರಹಸ್ಯಗಳೇ ತುಂಬಿಹೋಗಿವೆ. ಸಾಸನೂರಿನಿಂದ ಬೇರೆಡೆಗೆ ಬಂದು ನೆಲೆಸಿರುವ ದಲಿತರು 1930ರ ದಶಕದಲ್ಲಿ ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹದ ಪ್ರಭಾವಕ್ಕೆ ಒಳಗಾಗಿ ಸಾಸನೂರಿನ ದಲಿತರನ್ನೂ ಕೆರೆನೀರು ಮುಟ್ಟುವ ಸಾಹಸಕ್ಕೆ ಕೈ ಹಾಕಿದ್ದರೆಂಬ ಕತೆಯೂ ಇದೆ. ಆ ಘಟನೆಯಲ್ಲಿಯೂ ಮರಗದಮ್ಮ ಜಾತ್ರೆಯಲ್ಲಿ ಮರಗದಮ್ಮನಿಗೆ ಸತ್ಯಾಗ್ರಹ ಮಾಡಿದ ದಲಿತರನ್ನೇ ಬಲಿ ನೀಡಲಾಯಿತೆಂದೂ ಹೇಳಲಾಗುತ್ತದೆ. ಇದರ ಸತ್ಯಾಸತ್ಯತೆಯನ್ನು ಸಂಶೋಧನೆಗಳೇ ಬಯಲುಗೊಳಿಸಬೇಕಿದೆ.

ಅದೇನೇ ಇರಲಿ ಬ್ರಿಟಿಷರಿಂದ ಭಾರತೀಯರಿಗೆ ಸ್ವತಂತ್ರ ಬಂದಿದೆಯಾದರೂ ದಲಿತೇತರ ಮೇಲ್ಜಾತಿಗಳಿಂದ ದಲಿತರಿಗೆ ಸ್ವಾತಂತ್ರ್ಯ ದೊರಕಿಲ್ಲ. ಇದಕ್ಕೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮವೇ ಆಗಬೇಕಿದೆ ಎನಿಸುತ್ತದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಸ್ವತಂತ್ರ ಪೂರ್ವ ಭಾರತದ ಕೆಲವು ದಲಿತ್ ಫೈಲ್ಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...