ಹೋದವಾರದ ಸಂಚಿಕೆಯಲ್ಲಿ ದೊರೆಸ್ವಾಮಿ 38 ದಿನ ಸಂಪಾದಕನಾಗಿದ್ದ ಅಪ್ರಬುದ್ಧ ಪತ್ರಕರ್ತ ಎಂದು ಹೇಳಿರುವ ಬಾಬು ಕೃಷ್ಣಮೂರ್ತಿಯ ಬಾಯಿ ಮುಚ್ಚಿಸಿದ್ದೇನೆ.

ಈ ಲೇಖನದಲ್ಲಿ ಗಾಂಧಿ ಹಂತಕ ಗೋಡ್ಸೆ ವಿಚಾರದಲ್ಲಿ ಎರಡು ಮಾತು ಹೇಳಲು ಬಯಸುತ್ತೇನೆ. ಗೋಡ್ಸೆ ಗಾಂಧೀಜಿ ಹತ್ಯೆಗೆ ಮೊದಲು ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ರ‍್ಯಾಲಿಗೆ ಬಂದಿದ್ದ. ರ‍್ಯಾಲಿಯ ಸ್ವಾಗತ ಸಮಿತಿಯ ಅಧ್ಯಕ್ಷನಾಗಿದ್ದ ಸುಪ್ರಸಿದ್ದ ನ್ಯಾಯವಾದಿ ಬೇಲಿ ವಾಸುದೇವಮೂರ್ತಿಯವರ ಅತಿಥಿಯಾಗಿದ್ದ ಎಂದು ಪೌರವಾಣಿಯಲ್ಲಿ ವರದಿಯಾಗಿತ್ತು. ಅದನ್ನು ಪ್ರಶ್ನಿಸಿ ಬಾಬು ಕೃಷ್ಣಮೂರ್ತಿಯವರು ಗಾಂಧಿ ಹತ್ಯೆ ಸಂಬಂಧದಲ್ಲಿ ಬಂಧಿಗಳಾಗಿದ್ದ ಗೋಡ್ಸೆ ಮತ್ತು ನಾರಾಯಣ ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆಯಲ್ಲಿ ತಾವು ಆ ದಿನಗಳಲ್ಲಿ ದೆಹಲಿಯ ಹೋಟೆಲ್‌ಗಳಲ್ಲಿ ಸುಳ್ಳು ಹೆಸರು ಬರೆಸಿ ವಾಸ್ತವ್ಯ ಮಾಡಿರುವುದಾಗಿ ಹೇಳಿದ್ದಾರೆ. ಆದ್ದರಿಂದ ಗೋಡ್ಸೆ ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಇದ್ದಿದ್ದು ಸುಳ್ಳು ಎಂದು ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಡುತ್ತಾರೆ.


ಇದನ್ನು ಓದಿ: ನಾನು ಪೌರವಾಣಿ ಪತ್ರಿಕೆಯ ಸಂಪಾದಕನಾಗಿದ್ದು ಹೇಗೆ? ದೊರೆಸ್ವಾಮಿಯವರ ನೆನಪುಗಳು…


 

ಗಾಂಧಿ ಹತ್ಯೆಗೆ ಎಷ್ಟೋ ಮೊದಲು ವರದಿಯಾಗಿರುವ ಸುದ್ದಿ ಇದು. ಈ ಸುದ್ದಿಯನ್ನು ಸೃಷ್ಟಿಸಿದ್ದೇವೆಂಬುದು ಬಾಬುವಿನ ಆಪಾದನೆ. ಈ ಸುದ್ದಿಯನ್ನು ಆ ದಿನ ಪೌರವಾಣಿ ಪತ್ರಿಕೆಯಲ್ಲಿ ಹಾಕುವುದಕ್ಕೆ ಮೊದಲೇ ನ್ಯಾಯಾಲಯದ ಕಡತಗಳನ್ನು ನಾನು ನೋಡಬೇಕಾಗಿತ್ತು ಎಂದು ಅವರು ಅಭಿಪ್ರಾಯಪಡುವಂತಿದೆ. ನಾವು ಈ ಸುದ್ದಿಯನ್ನು ಸೃಷ್ಟಿಸಿದ್ದೇವೆಂದು ಅವರು ಹೇಳುವುದು ತಪ್ಪು. ಗಾಂಧೀಜಿಯನ್ನು ಮುಂದೆ ಗೋಡ್ಸೆ ಕೊಲ್ಲುತ್ತಾನೆ ಅದರಿಂದ ಅವನ ಹೆಸರನ್ನು ಈಗಲೇ Expose ಮಾಡಿಬಿಡೋಣ ಎಂದು ನಾವು ಈ ಸುದ್ದಿಯನ್ನು ಹರಿಯಬಿಟ್ಟೆವು ಎಂಬುದು ಕೃಷ್ಣಮೂರ್ತಿಗಳ ಗ್ರಹಿಕೆ ಇರಬಹುದು. ಇದು ವಿತಂಡವಾದ. ಆರ್‌ಎಸ್‌ಎಸ್ ರ‍್ಯಾಲಿಗೆ ಬರೆದೆ ಇದ್ದ, ಸ್ವಾಗತ ಸಮಿತಿ ಅಧ್ಯಕ್ಷರ ಅತಿಥಿಯಾಗಿ ಇರದೇ ಇದ್ದ ಗೋಡ್ಸೆ ಬಗೆಗೆ ಸುಳ್ಳು ಸುದ್ದಿ ಹಾಕುವ ಅಗತ್ಯವಾದರೂ ನನಗಾಗಲಿ, ನಮ್ಮ ಹಿರಿಯ ಭಾತ್ಮೀದಾರ ಎಚ್.ಎನ್ ನಾರಾಯಣರಾಯರಿಗಾಗಲಿ ಏನಿತ್ತು?

ನಾನು ಭಾರತ ಮಾತೆಯ ಆಣೆಮಾಡಿ ಹೇಳುತ್ತೇನೆ. ಈ ಸುದ್ದಿಯನ್ನು ಎಲ್ಲ ಇತರ ಸುದ್ದಿಗಳನ್ನು ಹಾಕುವಂತೆ ಸಹಜವಾಗಿ ಹಾಕಿದ್ದೇನೆ. News is sacred ಎಂಬುದು ಪತ್ರಿಕಾ ಧರ್ಮ. ಈ ಸುದ್ದಿಯನ್ನು ಹಾಕುವಾಗಲೂ ಅದೇ ಭಾವನೆಯಿಂದ ಹಾಕಿದ್ದೇವೆ. ಈ ಸುದ್ದಿಯನ್ನು ನಾವು ಸೃಷ್ಟಿಸಿಲ್ಲ. ಇದ್ದದ್ದನ್ನು ಇದ್ದಹಾಗೆ ಮುದ್ರಿಸಿದ್ದೆವು.


ಇದನ್ನು ಓದಿ: ಸುಳ್ಳು ಮತ್ತು ಸತ್ಯದ ಸಂಘರ್ಷ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಕುರಿತು ‘ನ್ಯಾಯಪಥ’ ವಿಶೇಷ ಸಂಚಿಕೆ


ಇನ್ನು ಗೋಡ್ಸೆ ಮತ್ತು ಇತರರು ನ್ಯಾಯಾಲಯದ ಮುಂದೆ ನುಡಿದಿರುವ ವಿಷಯ ಅವರು ಯಾವುದೋ ಕೃತ್ಯಗಳನ್ನು ಮುಚ್ಚಿಡಲು ಆ ತಾರೀಕುಗಳಲ್ಲಿ ದಿಲ್ಲಿಯ ಹೋಟೆಲ್‌ಗಳಲ್ಲಿ ಇದ್ದುದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಎರಡು ದಿನ ಬೇರೆ ಬೇರೆ ಹೋಟೆಲ್‌ಗಳಲ್ಲಿ ಇದ್ದುದ್ದಾಗಿಯೂ ಎರಡು ಕಡೆ ಹೆಸರು ಬದಲಿಸಿಕೊಂಡು ಒಂದೊಂದು ಹೋಟೆಲ್‌ನಲ್ಲಿ ಬೇರೆ-ಬೇರೆ ಹೆಸರುಗಳನ್ನು ನಮೂದಿಸಿರುವುದಾಗಿ ಹೇಳಿದ್ದಾರೆ. ಈ ಹುಟ್ಟು ಸುಳ್ಳುಗಾರರ ಮಾತನ್ನು ಹೇಗೆ ನಂಬುವುದು? ಇವರು ಹೇಳಿರುವುದೆಲ್ಲ ಸುಳ್ಳು ಎಂಬುದನ್ನು ನಮ್ಮ ಪತ್ರಿಕೆಯಲ್ಲಿನ ವರದಿ ಖಚಿತಪಡಿಸುತ್ತದೆ.

ನೀವು ಕೊಲೆಗಡುಕರ ಮಾತನ್ನೇ ನಂಬಬೇಕೆನ್ನುತ್ತೀರಿ. ನಿಸ್ಪೃಹರಾಗಿ ಪೌರವಾಣಿ ಪತ್ರಿಕೆ ನಡೆಸಿದವರನ್ನು ನಂಬುವುದಿಲ್ಲ ಅನ್ನುತ್ತೀರಿ. ನಿಮಗೆ ನಿಮ್ಮ ದೇವರು ಸದ್ಬುದ್ಧಿ ಕೊಡಲಿ ಎಂದು ಆಶಿಸುತ್ತೇನೆ. ರುಮಾಲೆ ಚನ್ನಬಸಯ್ಯನವರು ಗಾಂಧಿಯನ್ನು ಕೊಂದ ಗೋಡ್ಸೆ ಆರ್‌ಎಸ್‌ಎಸ್ ಎಂದು ತಾಯಿನಾಡು ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಅಂದಿನ ನಗರ ಬಿಜೆಪಿ ಅಧ್ಯಕ್ಷರಾಗಿದ್ದ ಭೀಮಾಚಾರ್ಯರು ಮಾನನಷ್ಟ ಮೊಕದ್ದಮೆಯನ್ನು ಸಿ.ಒ ಮ್ಯಾಜಿಸ್ಟ್ರೇಟ್‌ ಕೋರ್ಟ್‌‌ನಲ್ಲಿ ಹಾಕಿದ್ದರು. ತುಮಕೂರಿನ ಕೆ.ರಂಗಯ್ಯಗಾರ್ ರುಮಾಲೆ ಪರವಾಗಿ ವಕೀಲಿಕೆ ವಹಿಸಿದ್ದರು. ನಾನು ಪೌರವಾಣಿ ಸಂಪಾದಕನಾಗಿ ಗೋಡ್ಸೆ ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ರ‍್ಯಾಲಿಗೆ ಬಂದಿದ್ದು, ಸ್ವಾಗತ ಸಮಿತಿಯ ಅಧ್ಯಕ್ಷರಾದ ಸುಪ್ರಸಿದ್ಧ ವಕೀಲರು ಆದ ಬೇಲಿವಾಸುದೇವಮೂರ್ತಿಯವರ ಆತಿಥ್ಯದಲ್ಲಿದ್ದ ಎಂಬುದನ್ನು ಪ್ರಕಟಿಸಿದ್ದೆ. ಆದ್ದರಿಂದ ಆ ಸುದ್ದಿಯಿದ್ದ ಪತ್ರಿಕೆಯ ಸಂಪುಟವನ್ನು ನ್ಯಾಯಾಲಯಕ್ಕೆ ಒಪ್ಪಿಸಿ, ನನ್ನ ಸಾಕ್ಷ್ಯ ನುಡಿದೆ. ನಾಲ್ಕಾರು ಹಿಯರಿಂಗ್‌ಗಳು ಆದವು. ಅಷ್ಟರಲ್ಲಿ ಬೆಂಗಳೂರಿನ ಮತ್ತೊಬ್ಬ ಸುಪ್ರಸಿದ್ಧ ವಕೀಲರಾದ ಎಸ್.ಕೆ. ವೆಂಕಟರಂಗಯ್ಯಗಾರರು ಮಧ್ಯಪ್ರವೇಶಿಸಿ ಭೀಮಾಚಾರ್ಯರಿಗೂ, ರುಮಾಲೆ ಚೆನ್ನಬಸವಯ್ಯನವರಿಗೂ ರಾಜಿ ಮಾಡಿಸಿ ಕೇಸನ್ನು ವಾಪಸ್ ತೆಗೆಸಿದ್ದರು. ನನ್ನ ಪೌರವಾಣಿ ಪತ್ರಿಕೆಯ ಸಂಪುಟ ನ್ಯಾಯಾಲಯದಲ್ಲಿಯೇ ಉಳಿಯಿತು. ಅಂದಿನ ಪೌರವಾಣಿ ಪತ್ರಿಕೆಯ ಪ್ರತಿ Information Department ನಲ್ಲಿ ಸಿಗಬಹುದು.

ಬೇಲಿ ವಾಸುದೇವಮೂರ್ತಿಯವರು ಭೀಮಾಚಾರ್ಯರ ಬೀಗರು ಎಂಬುದನ್ನೂ ನಾನು ತಿಳಿಸಬಯಸುತ್ತೇನೆ.

LEAVE A REPLY

Please enter your comment!
Please enter your name here