ಒಕ್ಕೂಟ ಸರ್ಕಾರ ಘೋಷಿಸಿರುವ ‘ಅಗ್ನಿಪಥ’ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ತೆಲಂಗಾಣದ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಹಲವಾರು ರೈಲುಗಳಿಗೆ ಬೆಂಕಿ ಹಚ್ಚಿದ ಹಿಂಸಾಚಾರದ ಹಿಂದಿನ ಮಾಸ್ಟರ್‌ಮೈಂಡ್ ಆವುಲಾ ಸುಬ್ಬಾ ರಾವ್ (Avula Subba Rao) ಎಂದು ಹೇಳಲಾಗಿದೆ. ಇದರ ಜೊತೆಗೆ ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದಾಗ 19 ವರ್ಷದ ರಾಜೇಶ್ ಎಂಬ ಪ್ರತಿಭಟನಾಕಾರ ಸಾವನ್ನಪ್ಪಿದ್ದಾರೆ ಮತ್ತು ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಪಥ ವಿರುದ್ಧದ ಪ್ರತಿಭಟನೆಯಲ್ಲಿ ಜನಸಮೂಹವನ್ನು ಸಜ್ಜುಗೊಳಿಸಲು ಅವರು ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದಾರೆ. ಅಲ್ಲದೆ ಸಿಕಂದರಾಬಾದ್‌ನಲ್ಲಿ ಬೆಂಕಿ ಹಚ್ಚುವಿಕೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆವುಲಾ ಸುಬ್ಬಾ ರಾವ್ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವರು. ಕಳೆದ ಕೆಲವು ವರ್ಷಗಳಿಂದ ನರಸರಾವ್‌ಪೇಟೆ, ಹೈದರಾಬಾದ್ ಮತ್ತು ಕನಿಷ್ಠ ಏಳು ಸ್ಥಳಗಳಲ್ಲಿ ಸೇನಾ ಆಕಾಂಕ್ಷಿಗಳಿಗಾಗಿ ತರಬೇತಿ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಶನಿವಾರ ವಿಚಾರಣೆಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಯಾರಿಗೂ ಯಾರ ಜೀವವನ್ನು ತೆಗೆಯುವ ಹಕ್ಕು ಇಲ್ಲ- ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ
ಶುಕ್ರವಾರ ಸಾವಿರಾರು ಪ್ರತಿಭಟನಾಕಾರರು ರೈಲ್ವೇ ನಿಲ್ದಾಣದಲ್ಲಿ ಹಲವಾರು ಪ್ರಯಾಣಿಕರ ರೈಲುಗಳ ಮೇಲೆ ದಾಳಿ ಮಾಡಿ, ಕೋಚ್‌ಗಳನ್ನು ಸುಟ್ಟುಹಾಕಿ ಮತ್ತು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ್ದರಿಂದ ವಾರಂಗಲ್‌ನ 19 ವರ್ಷದ ರಾಜೇಶ್ ಕೊಲ್ಲಲ್ಪಟ್ಟರು ಮತ್ತು ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡರು.
ಅದೋನಿ, ಕರ್ನೂಲ್, ಗುಂಟೂರು, ನೆಲ್ಲೂರು, ಅಮದಾಲವಲಸ, ವಿಶಾಖಪಟ್ಟಣ ಮತ್ತು ಯಲಮಂಚಿಲಿಯಿಂದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ಕು ವರ್ಷಗಳ ಅಲ್ಪಾವಧಿ ಒಪ್ಪಂದದ ಆಧಾರದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ ಸೈನಿಕರ ನೇಮಕಾತಿಗಾಗಿ ಸರ್ಕಾರ ‘ಅಗ್ನಿಪಥ’ ಯೋಜನೆಯನ್ನು ಘೋಷಿಸಿದ ನಂತರ ಹಲವಾರು ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ಭುಗಿಲೆದ್ದಿದೆ.
ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ತೆಲಂಗಾಣ, ಮಧ್ಯಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಅಷ್ಟರಮಟ್ಟಿಗೆ ಯುವಜನರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೇ ಕೊಡಗಿನ ವೀರ ಯೋಧರೂ ಈ ಯೋಜನೆಯ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಅಗ್ನಿಪಥ ಯೋಜನೆ: ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ ಕೇಂದ್ರಕ್ಕೆ ಸಿದ್ದರಾಮಯ್ಯ ಪ್ರಶ್ನೆ


