ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ನಾಳೆ ತೆರೆ ಬೀಳುವ ಸಾಧ್ಯತೆಯಿದೆ. ಗುರುವಾರ (ಜೂನ್ 30) ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು ಬಹುಮತ ಸಾಬೀತುಪಡಿಸುವಂತೆ ಮಹಾರಾಷ್ಟ್ರ ರಾಜ್ಯಪಾಲರು ಸೂಚಿಸಿದ್ದಾರೆ.
ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರಿಗೆ ಪತ್ರ ಬರೆದು ಬೆಳಗ್ಗೆ 11 ಗಂಟೆಗೆ ವಿಶೇಷ ಅಧಿವೇಶನ ಕರೆದು, ಬಹುಮತ ಸಾಬೀತು ಪಡಿಸುವಂತೆ ಮನವಿ ಮಾಡಿದ್ದಾರೆ.
ಬಹುಮತ ಸಾಬೀತುಪಡಿಸಬೇಕೆಂಬ ಸೂಚನೆ ಬೆನ್ನಲ್ಲೇ, 16 ಬಂಡಾಯ ಶಾಸಕರು ಸಂಭವನೀಯ ಅನರ್ಹತೆಗೆ ಇನ್ನೂ ಪ್ರತಿಕ್ರಿಯಿಸದ ಕಾರಣ ರಾಜ್ಯಪಾಲರ ಕೋರಿಕೆ ಕಾನೂನುಬಾಹಿರ ಎಂದು ಆರೋಪಿಸಿ ಸಿಎಂ ಉದ್ಧವ್ ಠಾಕ್ರೆ ತಂಡವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ: ಗುವಾಹಟಿಯಿಂದ ಮುಂಬೈಗೆ ತೆರಳಲಿರುವ ಬಂಡಾಯ ನಾಯಕ ಏಕನಾಥ್ ಶಿಂಧೆ
Maharashtra Governor Bhagat Singh Koshyari has written to state Assembly secretary to convene a special session of the State Assembly on June 30, with the only agenda of a trust vote against CM Uddhav Thackeray pic.twitter.com/9M5htIIE9R
— ANI (@ANI) June 29, 2022
“16 ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಜುಲೈ 11 ರವರೆಗೆ ಮುಂದೂಡಿರುವಾಗ ಬಹುಮತ ಸಾಬೀತು ಪಡಿಸಲು ಹೇಗೆ ಸೂಚಿಸಬಹುದು? ಈ ಶಾಸಕರು ತಮ್ಮ ಅನರ್ಹತೆಯ ಸ್ಥಿತಿಯನ್ನು ನಿರ್ಧರಿಸುವವರೆಗೆ ಮತ್ತು ನೋಟಿಸ್ ಕಳುಹಿಸಿದ ಇತರ ವಿಷಯಗಳು ನಿರ್ಧಾರವಾಗುವರೆಗೂ ವಿಶ್ವಾಸಮತ ಯಾಚನೆಯಲ್ಲಿ ಹೇಗೆ ಭಾಗವಹಿಸುತ್ತಾರೆ?. “ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯದ ಅಂತಿಮ ವಿಚಾರಣೆ ನಡೆಯದಿದ್ದರೂ ಬಹುಮತ ಯಾಚನೆ ನಡೆಸಿದರೆ ಇದು ನ್ಯಾಯಾಲಯದ ನಿಂದನೆ ಪ್ರಕ್ರಿಯೆಯಾಗುತ್ತದೆ” ಎಂದು ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
ಅಸ್ಸಾಂನ ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿರುವ ಏಕನಾಥ್ ಶಿಂಧೆ ನೇತೃತ್ವದ ಸುಮಾರು 40 ಬಂಡಾಯ ಶಿವಸೇನಾ ಶಾಸಕರು ಬಹುಮತ ಪರೀಕ್ಷೆಯಲ್ಲಿ ಭಾಗವಹಿಸಲು ಮುಂಬೈಗೆ ಹಿಂದಿರುಗುವ ಮೊದಲು ಗೋವಾಕ್ಕೆ ತೆರಳಲಿದ್ದಾರೆ.
ಏಕನಾಥ್ ಶಿಂಧೆ ಮತ್ತು ಕೆಲವು ಬಂಡಾಯ ಶಾಸಕರು ಇಂದು ಬೆಳಿಗ್ಗೆ ಅಸ್ಸಾಂನ ಮುಖ್ಯ ನಗರದಲ್ಲಿರುವ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ನಾಳೆ (ಗುರುವಾರ) ಮುಂಬೈಗೆ ಹಿಂತಿರುಗುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಂಡಾಯ ಬಣದ ನಾಯಕ ಏಕನಾಥ್ ಶಿಂಧೆ ಸೇರಿದಂತೆ 16 ಶಾಸಕರನ್ನು ಅನರ್ಹಗೊಳಿಸುವಂತೆ ಉದ್ಧವ್ ಠಾಕ್ರೆ ತಂಡ ಡೆಪ್ಯುಟಿ ಸ್ಪೀಕರ್‌ಗೆ ಮನವಿ ಮಾಡಿತ್ತು, ನಂತರ ಬಂಡಾಯ ಪಾಳಯವು ಈ ಕ್ರಮವನ್ನು ಕಾನೂನುಬಾಹಿರ ಎಂದು ಕರೆದು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು.
ತಮ್ಮ ಸಂಭಾವ್ಯ ಅನರ್ಹತೆಯ ನೋಟಿಸ್‌ಗೆ ಪ್ರತಿಕ್ರಿಯಿಸಲು ನ್ಯಾಯಾಲಯವು ಬಂಡಾಯ ಸೇನಾ ಶಾಸಕರಿಗೆ ಜುಲೈ 12 ರವರೆಗೆ ಕಾಲಾವಕಾಶ ನೀಡಿದೆ. ಆದರೆ, ಬಂಡಾಯಗಾರರು ಪ್ರತಿಕ್ರಿಯಿಸುವ ದಿನಾಂಕಕ್ಕಿಂತ ಮುಂಚೆಯೇ ಬಹುಮತವನ್ನು ಸಾಬೀತುಪಡಿಸಲು ರಾಜ್ಯಪಾಲರು ಸೂಚಿಸಿದ್ದಾರೆ.
ಇದನ್ನೂ ಓದಿ: ‘ಯಾರಿಗೂ ಹೇಳಬೇಡಿ’: ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಬಂಧನಕ್ಕೆ ಕಾರಣ!


