Homeರಂಜನೆಕ್ರೀಡೆ2015ರ ನಂತರ ಕರ್ನಾಟಕಕ್ಕೆ ಒಲಿಯದ ರಣಜಿ

2015ರ ನಂತರ ಕರ್ನಾಟಕಕ್ಕೆ ಒಲಿಯದ ರಣಜಿ

- Advertisement -
- Advertisement -

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಒಂದರಿಂದ ಐದನೇ ಡಿವಿಜ಼ನ್‌ವರೆಗೂ ಆಡುವ ಪ್ರತಿಯೊಬ್ಬ ಆಟಗಾರನಿಗೂ ರಣಜಿ ಟ್ರೋಫಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಬೇಕೆಂಬ ಮಹದಾಸೆ ಇರುತ್ತದೆ. ದೇಶದ ಇತರೆ ರಾಜ್ಯಗಳ ಕ್ರಿಕೆಟ್ ಆಟಗಾರರ ಕನಸು ಕೂಡ ಇದೇ. ಭಾರತದ ಮೊದಲ ಟೆಸ್ಟ್ ಕ್ರಿಕೆಟಿಗರಲ್ಲಿ ಒಬ್ಬರಾದ, ಭಾರತೀಯ ರಾಜಪ್ರಭುತ್ವದ ಆಡಳಿತಗಾರರಾಗಿದ್ದ ನವನಗರದ ರಂಜಿತ್‌ಸಿನ್ಹ್‌ಜಿ ವಿಭಾಜಿ ಜಡೇಜ ಅವರ ಗೌರವಾರ್ಥ ’ರಣಜಿ ಟ್ರೋಫಿ’ಗೆ ಆ ಹೆಸರನ್ನು ಇಡಲಾಯಿತು. ಅವರು 1896ರಿಂದ 1902ರ ನಡುವೆ ಇಂಗ್ಲೆಂಡ್‌ಗಾಗಿ 15 ಟೆಸ್ಟ್‌ಗಳನ್ನು ಆಡಿದ ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದರು. ಇವರು ಸಸೆಕ್ಸ್ ಕೌಂಟಿಯ ಪರವಾಗಿಯೂ ಆಡಿದ್ದಾರೆ. ರಣಜಿ ಟ್ರೋಫಿಯು ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಸರಣಿಯಾಗಿದ್ದು ವಿವಿಧ ಪ್ರಾದೇಶಿಕ ಹಾಗೂ ರಾಜ್ಯ ತಂಡಗಳು ಪರಸ್ಪರ ವಿರುದ್ಧವಾಗಿ ಸೆಣಸಾಡುತ್ತವೆ. ಮೊದಲ ಬಾರಿಗೆ ಈ ಸರಣಿಯನ್ನು 1934ರಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. 1934-35ರಲ್ಲಿ ಸರಣಿಯ ತಳುಕನ್ನು (fixture) ಹಾಕಲಾಯಿತು. 2020-21ರ ರಣಜಿ ಟ್ರೋಫಿ ಪಂದ್ಯಾವಳಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ರದ್ದುಗೊಳಿಸಿದ್ದು ಬಿಟ್ಟರೆ, ಇಲ್ಲಿಯವರೆಗೆ ಯಾವುದೇ ಕಾರಣಕ್ಕೂ ಇದು ನಿಂತಿಲ್ಲ.

ಪಾಟಿಯಾಲದ ಮಹಾರಾಜರಾದ ಭೂಪಿಂದರ್ ಸಿಂಗ್ ಅವರು ಮೊದಲ ಟ್ರೋಫಿಯನ್ನು ಕೊಡುಗೆಯಾಗಿ ಕೊಟ್ಟರು. ಈ ಟ್ರೋಫಿಯ ಮೊದಲ ಪಂದ್ಯವು 1934ರ ನವೆಂಬರ್ 4ರಂದು ನಡೆಯಿತು. ಅಂದು ಮದ್ರಾಸ್‌ನ ಚಪಕ್ ಮೈದಾನದಲ್ಲಿ ಮೈಸೂರು ವಿರುದ್ಧವಾಗಿ ಮದ್ರಾಸ್ ತಂಡ ಸೆಣೆಸಿತು. ಮುಂಬೈ ತಂಡವು ಅತಿಹೆಚ್ಚು ಬಾರಿ ಅಂದರೆ 41 ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ 15 ಬಾರಿ (19587-59ಸಾಲಿನಿಂದ 1972-73ರವರೆಗೆ) ಸತತವಾಗಿದ್ದು ಇತಿಹಾಸ ನಿರ್ಮಿಸಿದೆ. ಪ್ರಸ್ತುತ 38 ತಂಡಗಳು ಈ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದು, ಎಲ್ಲಾ 28 ರಾಜ್ಯಗಳು, ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಲ್ಕನ್ನು ಪ್ರತಿನಿಧಿಸುವ ದೆಹಲಿ, ಚಂಡಿಗಢ, ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಂಡಿಚೇರಿಯ ನಾಲ್ಕು ತಂಡಗಳು ಸ್ಪರ್ಧೆಯ ಕಣದಲ್ಲಿರುವುದರ ಜೊತೆಗೆ, ಸರ್ವೀಸಸ್, ವಿದರ್ಭ, ಮುಂಬೈ, ಸೌರಾಷ್ಟ್ರ, ರೈಲ್ವೆಸ್, ಬರೋಡ ಈ ಆರು ತಂಡಗಳು ಟ್ರೋಫಿಗಾಗಿ ಸೆಣೆಸಾಡುತ್ತವೆ.

ರಂಜಿತ್‌ಸಿನ್ಹ್‌ಜಿ ವಿಭಾಜಿ ಜಡೇಜ-

ಕ್ರಿಕೆಟ್ ಆಟಗಾರರ 14, 16, 19 ವರ್ಷ ಒಳಗಿನವರ ವಲಯ ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಆಟಗಾರರ ಪ್ರದರ್ಶನ ಹಾಗೂ ಮುಖ್ಯವಾಗಿ ರಾಜ್ಯ ಸಂಸ್ಥೆಗಳು ನಡೆಸುವ ಲೀಗ್ ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಒಂದರಿಂದ ಐದನೇ ಡಿವಿಜ಼ನ್‌ವರೆಗೂ ಲೀಗ್ ಪಂದ್ಯಗಳನ್ನು ನಡೆಸಿದರೂ ಆದ್ಯತೆ ಸಿಗುವುದು ಕೇವಲ ಒಂದು ಮತ್ತು ಎರಡನೆಯ ಡಿವಿಜ಼ನ್ ಆಟಗಾರರಿಗೆ ಮಾತ್ರ. ಆಯ್ಕೆಗಾರರ ಗಮನ ಹೋಗುವುದು ಈ ಆಟಗಾರರ ಮೇಲೆಯೇ. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಶಿಫಾರಸ್ಸು, ಹಣದ ಪ್ರಭಾವ ಕೆಲಸ ಮಾಡುವುದೂ ಇದೆ. ಎಷ್ಟೋ ಬಾರಿ ಕೆಲವು ಅಸಾಧಾರಣ ಪ್ರತಿಭೆಯುಳ್ಳ ಆಟಗಾರರಿಗೆ ಅನ್ಯಾಯವಾಗಿದೆ. ಕನಸುಗಳನ್ನು ಕಟ್ಟಿಕೊಂಡು ಬರುವ ಅನೇಕ ಆಟಗಾರರು ವ್ಯವಸ್ಥೆಯ ರಾಜಕಾರಣಕ್ಕೆ ಬಲಿಯಾಗಿರುವುದಿದೆ. ಇತ್ತೀಚಿನ ದಿನಗಳಲ್ಲಿ ಸ್ಕೋರ್ ವಿವರಗಳೆಲ್ಲವೂ ಆನ್‌ಲೈನ್‌ನಲ್ಲಿ ಲಭ್ಯವಿರುವುದರಿಂದ ಪ್ರತಿಭಾವಂತ ಆಟಗಾರರಿಗೆ ಮನ್ನಣೆ ಸಿಗುವ ಸಾಧ್ಯತೆ ತುಸು ಹೆಚ್ಚಿದೆ.

ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಲೀಗ್ ಪಂದ್ಯಗಳನ್ನು ಆಡುವ ಒಂದು ಕ್ಲಬ್‌ನ ಬೆಲೆ ಐವತ್ತು ಲಕ್ಷದಿಂದ ಅರವತ್ತು ಲಕ್ಷದವರೆಗೆ ಇದೆ. ಕ್ಲಬ್ಬನ್ನು ಖರೀದಿಸಬಯಸುವ ಆಸಕ್ತರು ಮಾರಬಯಸುವ ಮಾಲೀಕರ ಬಳಿ ಮಾತಾಡಿ ಕೊಂಡುಕೊಳ್ಳುವ ಪರಿಪಾಠವಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹೊಸ ತಂಡಗಳ ಸೇರ್ಪಡೆಗೆ ಅವಕಾಶವನ್ನು ಕೊಡುತ್ತಿಲ್ಲ. ಇರುವ ತಂಡಗಳನ್ನೇ ಒಬ್ಬರಿಂದ ಮತ್ತೊಬ್ಬರು ಹಸ್ತಾಂತರಿಸಿಕೊಳ್ಳಬಹುದಾಗಿದೆ. ಹೆಚ್ಚೇನೂ ಆದಾಯವಿಲ್ಲದಿದ್ದರೂ, ಕೆ.ಎಸ್.ಸಿ.ಎ. ಚುನಾವಣೆಯಲ್ಲಿ ಮತ ಚಲಾಯಿಸಲು ಸಿಗುವ ಅವಕಾಶಕ್ಕಾಗಿ ಹಾಗೂ ತಮ್ಮ ತಂಡದಲ್ಲಿ ತಮಗೆ ಬೇಕಾದವರನ್ನು ಆಡಿಸಬಹುದು ಎಂಬ ಕಾರಣಕ್ಕಾಗಿ ಈ ಕ್ಲಬ್‌ಗಳನ್ನು ಖರೀದಿಸುತ್ತಾರೆ. ಕ್ಲಬ್‌ನ ಪರವಾಗಿ ಆಡುವ ಆಟಗಾರರಿಗೆ ಆರ್ಥಿಕವಾಗಿ ಹೆಚ್ಚಿನ ಯಾವ ಸಹಾಯವೂ ಸಿಗುವುದಿಲ್ಲ. ಕೆ.ಎಸ್.ಸಿ.ಎ ಲೀಗ್ ಪಂದ್ಯಗಳನ್ನು ಆಡಿದರೆ ಭವಿಷ್ಯವಿದೆ ಎನ್ನುವುದು ಬಿಟ್ಟರೆ ಬೇರೆ ಯಾವ ಅನುಕೂಲವೂ ಇಲ್ಲ. ಕೆ.ಎಸ್.ಸಿ.ಎ ಲೀಗ್‌ನಲ್ಲಿ ಸುಮಾರು ಇನ್ನೂರು ತಂಡಗಳು ಬೇರೆಬೇರೆ ಡಿವಿಜ಼ನ್‌ಗಳಲ್ಲಿ ಭಾಗವಹಿಸುತ್ತವೆ. ಅದರಲ್ಲಿ ಮೊದಲ ಗುಂಪಿನಲ್ಲಿ ಐದು ಡಿವಿಜ಼ನ್‌ವರೆಗೆ ಇದ್ದರೆ, ಎರಡನೇ ಗುಂಪಿನಲ್ಲಿ (corporate) ಒಂದರಿಂದ ಮೂರನೇ ಡಿವಿಜ಼ನ್‌ವರೆಗೂ ತಂಡಗಳು ಆಡಬಹುದಾಗಿದೆ. ಪ್ರತಿ ವರ್ಷ ಸುಮಾರು ಎಂಟು ಸಾವಿರಕ್ಕಿಂತ ಹೆಚ್ಚು ಆಟಗಾರರು ಅಧಿಕೃತವಾದ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾರೆ. ಅವರಲ್ಲಿ ರಣಜಿ ತಂಡಕ್ಕೆ ಹೈಯರ್ ಡಿವಿಜ಼ನ್‌ನಲ್ಲಿ (higher division) ಆಡಿದ ಆಟಗಾರರನ್ನು ಮಾತ್ರ ಪರಿಗಣಿಸುತ್ತಾರೆ.

ಭಾರತದ ದೇಶೀಯ ಕ್ರಿಕೆಟ್ ಸ್ಪರ್ಧೆಗಳಲ್ಲಿ ಕರ್ನಾಟಕ ಕ್ರಿಕೆಟ್ ತಂಡವು ಕರ್ನಾಟಕ ರಾಜ್ಯದ ಆಟಗಾರರನ್ನು ಒಳಗೊಳ್ಳುತ್ತದೆ. ಇದು ದೇಶೀಯ ತಂಡಗಳಲ್ಲಿ ಒಂದು ಪ್ರಬಲ ತಂಡವಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ಅನೇಕ ಅಪ್ರತಿಮ ಆಟಗಾರರನ್ನು ಕೊಟ್ಟಿದೆ. ಎರ್ರಪಳ್ಳಿ ಪ್ರಸನ್ನ, ಬಿ.ಚಂದ್ರಶೇಖರ್, ವೆಂಕಟರಾಮ್ ಸುಬ್ರಮಣ್ಯ, ಗುಂಡಪ್ಪ ವಿಶ್ವನಾಥ್, ಬ್ರಿಜೇಶ್ ಪಟೇಲ್, ಸಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ, ಸದಾನಂದ ವಿಶ್ವನಾಥ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಡೇವಿಡ್ ಜಾನ್‌ಸನ್, ದೊಡ್ಡ ಗಣೇಶ್, ವಿಜಯ್ ಭಾರಧ್ವಾಜ್, ಅಭಿಮನ್ಯು ಮಿಥುನ್, ವಿನಯ್ ಕುಮಾರ್, ಸ್ಟುವರ್ಟ್ ಬಿನ್ನಿ ಇತ್ತೀಚೆಗೆ ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಮನೀಶ್ ಪಾಂಡೆ, ಪ್ರಸಿದ್ಧ ಕೃಷ್ಣ, ಕೃಷ್ಣಪ್ಪ ಗೌತಮ್ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ.

1973ರಲ್ಲಿ ಮೈಸೂರು ರಾಜ್ಯವನ್ನು ಅಧಿಕೃತವಾಗಿ ಕರ್ನಾಟಕ ಎಂದು ಮರುನಾಮಕರಣ ಮಾಡುವ ಮೊದಲು ಇದನ್ನು ಮೈಸೂರು ಕ್ರಿಕೆಟ್ ತಂಡ ಎಂದು ಕರೆಯಲಾಗುತ್ತಿತ್ತು. ಒಟ್ಟು ಎಂಟು ಬಾರಿ ರಣಜಿ ಟ್ರೋಫಿಯನ್ನು ಗೆದ್ದಿರುವ ರಾಜ್ಯ ತಂಡವು ಆರು ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಗಿ ಬಂದಿದೆ. (ಹಿಂದಿನ ಮೈಸೂರು ತಂಡಕ್ಕೆ ಎರಡು ರನ್ನರ್-ಅಪ್ ಸ್ಥಾನಗಳು ಸಿಕ್ಕಿದ್ದೂ ಸೇರಿದಂತೆ). 90ರ ದಶಕದಲ್ಲಿ ವಿರೋಧಿ ತಂಡಗಳಿಗೆ ನಡುಕ ಹುಟ್ಟಿಸಬಲ್ಲ, ಕನಸಿನಲ್ಲೂ ಕಾಡಬಲ್ಲ ಆಟಗಾರರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಬೌಲಿಂಗ್ ವಿಭಾಗದಲ್ಲಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್, ಅನಿಲ್ ಕುಂಬ್ಳೆ, ಸುನಿಲ್ ಜೋಶಿ ಇದ್ದರೆ, ಬ್ಯಾಟಿಂಗ್‌ನಲ್ಲಿ ರಾಹುಲ್ ದ್ರಾವಿಡ್, ವಿಜಯ್ ಭಾರದ್ವಾಜ್‌ರಂತಹ ಆಟಗಾರರಿದ್ದರು. ಹೀಗಾಗಿ ಮೂರು ಋತುಗಳಲ್ಲಿ 1995-96, 1997-98, 1998-99, ರಣಜಿ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು. ಮುಂಬೈ ಯಶಸ್ಸಿನ ತುತ್ತತುದಿಯಲ್ಲಿದ್ದ ಕಾಲದಲ್ಲಿ ಈ ಸಾಧನೆಯನ್ನು ಮಾಡಿದ್ದು, ಭಾರತೀಯ ಕ್ರಿಕೆಟ್ ಜಗತ್ತು ನಮ್ಮ ರಾಜ್ಯ ತಂಡದ ಕಡೆ ಕಣ್ಣೆತ್ತಿ ನೋಡುವಂತೆ ಮಾಡಿತು. ಈ ಪ್ರದರ್ಶನ 2010-19ರ ದಶಕದಲ್ಲೂ ಕಂಡುಬಂದು, ಈ ಅವಧಿಯಲ್ಲಿ ಎರಡು ರಣಜಿ ಟ್ರೋಫಿ, ಎರಡು ಇರಾನಿ ಟ್ರೋಫಿ, ನಾಲ್ಕು ವಿಜಯ್ ಹಜಾರೆ ಟ್ರೋಫಿ, ಎರಡು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಗಳನ್ನು ಗೆಲ್ಲುವುದರ ಜೊತೆಗೆ ಕೆ.ಎಲ್.ರಾಹುಲ್, ಮನೀಷ್ ಪಾಂಡೆ, ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಅಂತಹ ಪ್ರತಿಭಾವಂತ ಆಟಗಾರರು ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಟ್ಟಿತು. ಈ ಪ್ರದರ್ಶನ ವಿನಯ್‌ಕುಮಾರ್ ನಾಯಕರಾದ ಕಾಲದಲ್ಲಿಯೂ ಕಂಡುಬಂತು. 2013-14, 2014-15ರಲ್ಲಿ ರಣಜಿ ಟ್ರೋಫಿ ಗೆಲ್ಲುವುದರ ಮೂಲಕ ದೇಶೀಯ ಕ್ರಿಕೆಟ್‌ನ ಮೇಲೆ ಪ್ರಭುತ್ವ ಸಾಧಿಸಿದ್ದು ಬಿಟ್ಟರೆ, ಅಲ್ಲಿಂದ ಇಲ್ಲಿಯವರೆಗೆ ರಣಜಿ ಟ್ರೋಫಿಯನ್ನು ಕರ್ನಾಟಕ ತಂಡ ಗೆದ್ದಿಲ್ಲ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇದರ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸಬೇಕಾಗಿದೆ. 2015-16ರಿಂದ 2021-22ರವರೆಗೆ ಆರು ಋತುಗಳನ್ನು ಆಡಿರುವ ಕರ್ನಾಟಕ ರಾಜ್ಯ ತಂಡ, ಮೈದಾನದಲ್ಲಿ ವಿರೋಧಿ ತಂಡದ ಬೆವರಿಳಿಯುವಂತೆ ಮಾಡಲು ವಿಫಲವಾಗಿದೆ. ಮನೀಷ್ ಪಾಂಡೆ ನೇತೃತ್ವದ ಪ್ರಸಕ್ತ ಸಾಲಿನ ರಾಜ್ಯ ತಂಡವು ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಸ್ವತಃ ನಾಯಕ ಫಾರ್ಮ್ ಕಳೆದುಕೊಂಡಿರುವುದರಿಂದ ತಂಡದ ಆತ್ಮಬಲವನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ಆಲೂರು ಮೈದಾನದಲ್ಲಿ ಉತ್ತರ ಪ್ರದೇಶದ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಸೆಣೆಸಿದ ಕರ್ನಾಟಕ ಹೀನಾಯ ಸೋಲನ್ನು ಅನುಭವಿಸಿತು. ಮೊದಲ ಇನ್ನಿಂಗ್ಸ್‌ನ ಬೌಲಿಂಗ್‌ನ ಉತ್ತಮ ಪ್ರದರ್ಶನ ಬಿಟ್ಟರೆ, ಪಂದ್ಯದುದ್ದಕ್ಕೂ ಗೆಲ್ಲುವ ಯಾವ ಲಕ್ಷಣಗಳು ಕಾಣಿಸಲಿಲ್ಲ. ಮೈದಾನದ ಒಳಗೆ ನಾಯಕನ ತಂತ್ರಗಾರಿಕೆ ಪ್ರಶ್ನಾರ್ಥಕವಾಗಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ 253 ರನ್‌ಗಳನ್ನು ಕಲೆಹಾಕಿ, ಯು.ಪಿ.ಯನ್ನು 155 ರನ್‌ಗಳಿಗೆ ಕಟ್ಟಿಹಾಕಿದಾಗ, ಕರ್ನಾಟಕ ಗೆಲ್ಲುವ ಆಶಾಭಾವನೆ ಮೂಡಿಸಿತು. ಆದರೆ ಎರಡನೆ ಇನ್ನಿಂಗ್ಸ್‌ನಲ್ಲಿ ಕೇವಲ 114 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕುಸಿತ ಕಂಡ ಸ್ಥಳೀಯ ತಂಡ ಆತ್ಮವಿಶ್ವಾಸದ ಕೊರತೆಯನ್ನು ಎದುರಿಸಿತು. ಪರಿಣಾಮವಾಗಿ ಉತ್ತರ ಪ್ರದೇಶದ ನಾಯಕ ಕರಣ್ ಶರ್ಮ (93) ಹಾಗೂ ಪ್ರಿಯಮ್ ಗಾರ್ಗ್ (52) ತಂಡವನ್ನು ಗೆಲುವಿನ ಕಡೆಗೆ ಸುಲಭವಾಗಿ ಕೊಂಡೊಯ್ದರು. ಕೇವಲ ಮೂರು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಕರಣ್ ಶರ್ಮ ಸಮಯೋಚಿತ ಆಟದ ಮೂಲಕ ಗೆಲುವನ್ನು ದಾಖಲಿಸಿ ಗಮನ ಸೆಳೆದರು. ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಆರ್.ಸಮರ್ಥ್, ಕೆ.ವಿ.ಸಿದ್ದಾರ್ಥ್ ಅಂತಹ ಅನುಭವಿ ಆಟಗಾರರ ಉಪಸ್ಥಿತಿಯಲ್ಲಿಯೂ ಈ ಹೀನಾಯ ಪ್ರದರ್ಶನಕ್ಕೆ ಯಾರು ಕಾರಣ? ಆಡಳಿತಮಂಡಳಿ ಕಾರಣವೋ? ನಾಯಕನ ಕೆಟ್ಟ ನಿರ್ಣಯಗಳು ಕಾರಣವೋ? ಬ್ಯಾಟ್ಸ್‌ಮನ್‌ಗಳ ವೈಫಲ್ಯವೋ? ಐ.ಪಿ.ಎಲ್.ನಲ್ಲಿ ವಿಪರೀತವಾಗಿ ಟಿ20 ಪಂದ್ಯಗಳನ್ನು ಆಡಿದ್ದು ಕಾರಣವೋ? ಎಂದು ಪ್ರಶ್ನೆ ಹಾಕಿಕೊಂಡಾಗ ಇವೆಲ್ಲವೂ ಕಾರಣ ಎನ್ನುವುದು ಆಟಗಾರರ ನಿರಾಶಾದಾಯಕ ಪ್ರದರ್ಶನದಿಂದ ಗೊತ್ತಾಗುತ್ತದೆ. ಆದ್ದರಿಂದ ಇನ್ನು ಮುಂದಾದರೂ ಆಟಗಾರರು ಕೆ.ಪಿ.ಎಲ್ ಹಾಗೂ ಐ.ಪಿ.ಎಲ್‌ಗೆ ಕೊಡುವ ಮಹತ್ವಕ್ಕಿಂತ ಹೆಚ್ಚಾಗಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ತಮ್ಮನ್ನು ಅರ್ಪಿಸಿಕೊಳ್ಳಲಿ ಎನ್ನುವುದೇ ಕ್ರಿಕೆಟ್ ಅಭಿಮಾನಿಗಳ ಆಶಯ.

ಡಾ. ರಿಯಾಜ್ ಪಾಷ

ಡಾ. ರಿಯಾಜ್ ಪಾಷ
ರಿಯಾಜ್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ.


ಇದನ್ನೂ ಓದಿ: 16 ಲಕ್ಷ ರೂ ಪಾವತಿಸಿ ತಂಡಕ್ಕೆ ಜ್ಯೋತಿಷಿಯನ್ನು ನೇಮಿಸಿದ ಭಾರತೀಯ ಫುಟ್ಬಾಲ್‌‌ ಫೆಡೆರೇಷನ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...