Homeಮುಖಪುಟತಾಲಿಬಾನೀಕರಣ ಸಹಿಸುವುದಿಲ್ಲ: ಉದಯ್‌ಪುರ್‌ ಘಟನೆಗೆ ರಾಜಕಾರಣಿಗಳು, ಧಾರ್ಮಿಕ ಮುಖಂಡರ ತೀವ್ರ ವಿರೋಧ

ತಾಲಿಬಾನೀಕರಣ ಸಹಿಸುವುದಿಲ್ಲ: ಉದಯ್‌ಪುರ್‌ ಘಟನೆಗೆ ರಾಜಕಾರಣಿಗಳು, ಧಾರ್ಮಿಕ ಮುಖಂಡರ ತೀವ್ರ ವಿರೋಧ

- Advertisement -
- Advertisement -

ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸಿ ವಿವಾದ ಸೃಷ್ಟಿಸಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಟೈಲರ್‌ನ ಕ್ರೂರ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೇಶದ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಘಟನೆಯನ್ನು ಖಂಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಅಜ್ಮೀರ್ ದರ್ಗಾದ ದಿವಾನ್ ಝೈನುಲ್ ಅಬೆದಿನ್ ಅಲಿ ಖಾನ್ ಅವರು ಘಟನೆಯನ್ನು ವಿರೋಧಿಸಿದ್ದು, “ತಾಲಿಬಾನೀಕರಣ ಮನಸ್ಥಿತಿಗೆ ಭಾರತದ ಮುಸ್ಲಿಮರು ಎಂದಿಗೂ ಅವಕಾಶ ನೀಡುವುದಿಲ್ಲ” ಎಂದು ಹೇಳಿದರು.

“ಯಾವುದೇ ಧರ್ಮವು ಮಾನವೀಯತೆಯ ವಿರುದ್ಧ ಹಿಂಸೆಯನ್ನು ಉತ್ತೇಜಿಸುವುದಿಲ್ಲ. ವಿಶೇಷವಾಗಿ, ಇಸ್ಲಾಂ ಧರ್ಮದಲ್ಲಿ, ಎಲ್ಲಾ ಬೋಧನೆಗಳು ಶಾಂತಿಗಾಗಿ ಮೀಸಲಾಗಿವೆ” ಎಂದು ಅಲಿ ಖಾನ್‌ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹತ್ಯೆಯನ್ನು ಬಲವಾಗಿ ಖಂಡಿಸಿದ ಅವರು, “ಹಿಂಸಾಚಾರದ ಮಾರ್ಗದಲ್ಲಿ ಮಾತ್ರ ಪರಿಹಾರವನ್ನು ಕಂಡುಕೊಳ್ಳುವ ಕೆಲವು ಮೂಲಭೂತ ಗುಂಪುಗಳಲ್ಲಿ ಈ ಆರೋಪಿಗಳಿದ್ದಾರೆ” ಎಂದಿದ್ದಾರೆ.

“ವೈರಲ್‌ ಆಗಿರುವ ವಿಡಿಯೊ ಭೀಕರವಾಗಿದೆ. ಕೆಲವು ನೈತಿಕವಲ್ಲದ ಮನಸ್ಸುಗಳು ಬಡವನ ಮೇಲೆ ಕ್ರೂರವಾಗಿ ದಾಳಿ ಎಸಗಿವೆ. ಇದನ್ನು ಇಸ್ಲಾಮಿಕ್ ಜಗತ್ತಿನಲ್ಲಿ ಶಿಕ್ಷಾರ್ಹ ಪಾಪವೆಂದು ಸ್ವೀಕರಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಜಮೀಯತ್ ಉಲೇಮಾ-ಎ-ಹಿಂದ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಹಕೀಮುದ್ದೀನ್ ಖಾಸ್ಮಿ ಕೂಡ ಹತ್ಯೆಯನ್ನು ಖಂಡಿಸಿದ್ದಾರೆ.

“ಈ ಘಟನೆ ನಡೆಸಿದವರನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಇದು ದೇಶದ ಕಾನೂನು ಮತ್ತು ನಮ್ಮ ಧರ್ಮಕ್ಕೆ ವಿರುದ್ಧವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ನಮ್ಮ ದೇಶದಲ್ಲಿ ಕಾನೂನಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ” ಎಂದು ತಿಳಿಸಿದ್ದಾರೆ.

ಇಂತಹ ಹೇಯ ಕೃತ್ಯಗಳು ಸಾಮರಸ್ಯದ ಬದುಕನ್ನು ಕೆಡಿಸುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.

ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ಕುರಿತು ಮಾತನಾಡಿದ್ದು, “ನಾನು (ಉದಯಪುರ) ಘಟನೆಯನ್ನು ಖಂಡಿಸುತ್ತೇನೆ. ಯಾರನ್ನಾದರೂ ಕೊಲ್ಲಲು ಕಾನೂನಿನಲ್ಲಿ ಅವಕಾಶವಿಲ್ಲ. ಯಾರೂ ಇತರರನ್ನು ಕೊಲ್ಲಲು ಸಾಧ್ಯವಿಲ್ಲ. ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ. ಇದೊಂದು ಅಪರಾಧ. ಆದರೆ ನೂಪುರ್ ಶರ್ಮಾ ಅವರನ್ನೂ ಬಂಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದಿದ್ದಾರೆ.

“ಭೀಕರ ಹತ್ಯೆಯಿಂದ ತೀವ್ರ ಆಘಾತವಾಗಿದೆ” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

“ಉದಯಪುರದಲ್ಲಿ ನಡೆದ ಘೋರ ಹತ್ಯೆಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಕ್ರೌರ್ಯದ ಮೂಲಕ ಭಯೋತ್ಪಾದನೆಯನ್ನು ಹರಡುವವರನ್ನು ತಕ್ಷಣವೇ ಶಿಕ್ಷಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ನಾವೆಲ್ಲರೂ ಒಟ್ಟಾಗಿ ದ್ವೇಷವನ್ನು ಸೋಲಿಸಬೇಕು. ದಯವಿಟ್ಟು ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

“ಉದಯಪುರದಲ್ಲಿ ನಡೆದ ಹಿಂಸಾತ್ಮಕ ಘಟನೆಯನ್ನು ಖಂಡಿಸಬೇಕು” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

“ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಧರ್ಮದ ಹೆಸರಿನಲ್ಲಿ ದ್ವೇಷ ಮತ್ತು ಹಿಂಸೆಯನ್ನು ಹರಡುವುದು ನಮ್ಮ ದೇಶ ಮತ್ತು ಸಮಾಜಕ್ಕೆ ಮಾರಕ. ನಾವು ಒಟ್ಟಾಗಿ ಶಾಂತಿ ಮತ್ತು ಅಹಿಂಸೆಯ ಮಾರ್ಗಗಳನ್ನು ಬಲಪಡಿಸಬೇಕಾಗಿದೆ” ಎಂದು ಒತ್ತಾಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, “ಉದಯಪುರದಲ್ಲಿ ಧರ್ಮಾಂಧನೊಬ್ಬ ನಡೆಸಿರುವ ಬರ್ಬರ ಹತ್ಯೆ ಖಂಡನೀಯ. ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ. ಕುರುಡು ಹಿಂಸೆಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ನನ್ನ ಸಂತಾಪಗಳು. ಅಲ್ಲಿನ ರಾಜ್ಯ ಸರ್ಕಾರ ಕಾನೂನು ಕ್ರಮದ ಮೂಲಕ ಕೊಲೆಗಡುಕನಿಗೆ ಅತ್ಯುಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಘಟನೆಯ ವಿರುದ್ಧ ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಮತ್ತು ಶಶಿ ತರೂರ್ ಕೂಡ ಟ್ವೀಟ್ ಮಾಡಿದ್ದಾರೆ. “ಸಮಾಜದಲ್ಲಿ ಇಂತಹ ವಿವಾದಗಳನ್ನು ಹುಟ್ಟುಹಾಕುತ್ತಿರುವವರು ಯಾರು? ಅದರಿಂದ ರಾಜಕೀಯವಾಗಿ ಲಾಭ ಮಾಡಿಕೊಳ್ಳುವವರು ಯಾರು?” ಎಂದು ಖೇರಾ ಪ್ರಶ್ನಿಸಿದರು.

“ಕನ್ಹಯ್ಯಾ ಕುಮಾರ್, ಅಖ್ಲಾಕ್, ಪೆಹ್ಲು ಖಾನ್– ಎಲ್ಲರೂ ದ್ವೇಷಕ್ಕೆ ಬಲಿಯಾದರು. ದೇಶದಲ್ಲಿ ಮತಾಂಧತೆಯ ವಾತಾವರಣ ಸೃಷ್ಟಿಸುತ್ತಿರುವವರು ಯಾರು? ಸಮಾಜದಲ್ಲಿ ವಿವಾದ ಸೃಷ್ಟಿಸುತ್ತಿರುವವರು ಯಾರು? ದ್ವೇಷ ಹರಡುವ ಮೂಲಕ ರಾಜಕೀಯ ಮೈಲೇಜ್ ಪಡೆಯುತ್ತಿರುವವರು ಯಾರು? ಆತ ಯಾರೆಂದು ಎಲ್ಲರಿಗೂ ಗೊತ್ತು. ಎಲ್ಲರೂ ನೋಡುತ್ತಿದ್ದಾರೆ, ಆದರೆ ಅವರು ಮೌನವಾಗಿದ್ದಾರೆ” ಎಂದಿದ್ದಾರೆ ಖೇರಾ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, “ಉದಯ್‌ಪುರದಲ್ಲಿ ನಡೆದ ಹತ್ಯೆಯನ್ನು ಕಟು ಪದಗಳಲ್ಲಿ ಖಂಡಿಸಬೇಕು. ದೇಶದ ಭಾತೃತ್ವವನ್ನು ಉಳಿಸಲು ಸಮಾಜದ ಪ್ರತಿಯೊಬ್ಬರು ಮುಂದಾಗಬೇಕು. ಅಂತಹ ಕ್ರಿಮಿನಲ್ ಅಂಶಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿರಿ: ಬೆಂಗಳೂರು: ಪತ್ರಕರ್ತ ಜುಬೇರ್‌ ಬಂಧನ ಖಂಡಿಸಿ ವಿವಿಧೆಡೆ ಮೋಂಬತ್ತಿ ಹಿಡಿದು ಪ್ರತಿಭಟನೆ

ಬಿಎಸ್‌ಪಿ ವರಿಷ್ಠೆ ಮಾಯಾವತಿ ಕೂಡ ಹಲ್ಲೆಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. “ಇಂದು ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ನ ಬರ್ಬರ ಹತ್ಯೆ ಅತ್ಯಂತ ದುಃಖಕರವಾಗಿದೆ. ಇದನ್ನು ಖಂಡಿಸಬೇಕು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು, ಸಂಯಮವನ್ನು ಕಾಪಾಡಿಕೊಳ್ಳಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದಿದ್ದಾರೆ.

“ಅಪರಾಧಿಗಳಿಗೆ ಕಠಿಣ ಕಾನೂನು ಶಿಕ್ಷೆಯಾಗುವುದನ್ನು ಖಚಿತಪಡಿಸಿಕೊಳ್ಳಲು ರಾಜಸ್ಥಾನ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಹಜ ವಾತಾವರಣ ಮರಳಬೇಕು” ಎಂದು ಮನವಿ ಮಾಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಹತ್ಯೆಯನ್ನು ಭಯಾನಕ ಎಂದು ಕರೆದಿದ್ದಾರೆ. “ಉದಯಪುರ ಘಟನೆಯು ಅತ್ಯಂತ ಭಯಾನಕವಾದದ್ದು. ಇಂತಹ ಹೀನ ಕೃತ್ಯಗಳಿಗೆ ಸುಸಂಸ್ಕೃತ ಸಮಾಜದಲ್ಲಿ ಸ್ಥಾನವಿಲ್ಲ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅದೇ ರೀತಿ ಗೋರಕ್ಷಕರೆಂಬ ವ್ಯಾಘ್ರರು ನಡೆಸಿದ ಮುಸ್ಲಿಂ ಧರ್ಮದ ಬಡಪಾಯಿಗಳನ್ನು ನಿರ್ದಯವಾಗಿ ಕೊಂದ ಕ್ರಿಮಿಗಳ ವಿರುದ್ಧ ವಿರೋಧ ವ್ಯಕ್ತಪಡಿಸುವ ಧೈರ್ಯ ನಿಮಗಿದೆಯೇ?

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...