ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಸೇರಿದ ಮಂದಿ ತಮ್ಮ ರಾಜಕೀಯ ವಿರೋಧಿಗಳನ್ನು ಕಮ್ಯುನಿಸ್ಟರು ಎಂದು ಬ್ರಾಂಡ್ ಮಾಡುವ ಚಾಳಿ ಹಳೆಯದ್ದು. ಎಡಪಂಥೀಯರು ಎಂದು ಕೆಲವೊಮ್ಮೆ ಮತ್ತೆ ಕೆಲವು ಬಾರಿ ಎಡಚರು ಎಂದು ನಿಂದನಾತ್ಮಕವಾಗಿ ಹೇಳುವ ಪರಿಪಾಠ ಇದೆಯಾದರೂ ಹೆಚ್ಚು ಕ್ರಿಟಿಕಲ್ ಆದ ಸಮಯದಲ್ಲಿ ಸಾರಾಸಗಟಾಗಿ ಕಮ್ಯುನಿಸ್ಟರು ಪದ ಹೊರಹೊಮ್ಮುತ್ತದೆ. ಕಳೆದ ವಾರ ಪಠ್ಯ ಪರಿಷ್ಕರಣೆ ವಿರೋಧಕ್ಕೆ ಉತ್ತರಿಸಲು ಶಿಕ್ಷಣ ಸಚಿವರಿಗೆ ಪ್ರಾಕ್ಸಿಯಾಗಿ ಬಂದಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ಕೂಡ ಇದೇ ಚಾಳಿಗೆ ಮೊರೆಹೋದರು. ಈಗಿನ ಪಠ್ಯ ಪರಿಷ್ಕರಣೆಯ ಹಗರಣದ ಬಗ್ಗೆ ಹೆಚ್ಚು ಮಾತಾಡದೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಪಠ್ಯಪುಸ್ತಕ ಪರಿಷ್ಕರಣೆಯನ್ನು ಸಂಘ ಪರಿವಾರದ ಲೆನ್ಸ್‌ನಲ್ಲಿ ವಿಮರ್ಶೆ ಮಾಡುತ್ತಾ, ಸಿದ್ದರಾಮಯ್ಯನವರ ಸರ್ಕಾರದ ಸಮಯದಲ್ಲಿ, ಬರಗೂರು ರಾಮಚಂದ್ರಪ್ಪನವರ ಪಠ್ಯ ಪರಿಷ್ಕರಣೆ ಸಮಿತಿ ಸರ್ವಾಧ್ಯಕ್ಷತೆಯಲ್ಲಿ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ತುರುಕಿದ್ದಾರೆ ಎಂಬರ್ಥ ಬರುವಂತೆ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರು ಯಾವಾಗಲಿಂದ ಕಮ್ಯುನಿಸ್ಟ್ ಆದರು ಎಂಬ ಬಗ್ಗೆ ರಾಜಕೀಯ ವ್ಯವಸ್ಥೆಗಳ ಸ್ಪೆಕ್ಟ್ರಂನ ಪ್ರಾಥಮಿಕ ಪರಿಚಯ ಇರುವವರಿಗೆ ಗೊಂದಲವೆದ್ದು ಹೋಗಿದೆ.
ಭಾರತದ ಸಂವಿಧಾನದ ಪ್ರಕಾರ ನಮ್ಮದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ. ಸರಳವಾಗಿ ಹೇಳುವುದಾದರೆ ಸಾರ್ವತ್ರಿಕ ಮತದಾನ ವ್ಯವಸ್ಥೆಯಲ್ಲಿ ಜನರು ಮತ ಚಲಾಯಿಸಿ ಆಯ್ಕೆ ಮಾಡಿ ಕಳುಹಿಸುವ ಪ್ರತಿನಿಧಿಗಳ ವ್ಯವಸ್ಥೆ; ಅಂತಹ ಅಭ್ಯರ್ಥಿಗಳು ಪ್ರತಿನಿಧಿಸುವ ಪಕ್ಷ ಅಥವಾ ಪಕ್ಷಗಳ ಮೈತ್ರಿ ಬಹುಮತ ಪಡೆದು ಸರ್ಕಾರ ರಚಿಸಿ ಆಡಳಿತ ನಡೆಸುವ ವ್ಯವಸ್ಥೆ. ಇಲ್ಲಿ ಉದಾರವಾದವಾಗಲೀ, ಬಂಡವಾಳವಾದವಾಗಲೀ, ಸಮಾಜವಾದವಾಗಲೀ, ಎಡಪಂಥೀಯವಾದವಾಗಲೀ – ಇವುಗಳ ಮೂಲತತ್ವಗಳನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳು ಸಂಸದೀಯ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಬೇಕು. ಅದು ನರೇಂದ್ರ ಮೋದಿ, ಪಿಣರಾಯಿ ವಿಜಯನ್, ಮಮತಾ ಬ್ಯಾನರ್ಜಿ, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಯಾರಾದರೂ ಸರಿ. ಸರ್ವಾಧಿಕಾರವೊಂದು ಮಾತ್ರ ಸಾಧ್ಯವಾಗಬಾರದ ವ್ಯವಸ್ಥೆ ಇದಾಗಬೇಕು ಎಂದು ನಮ್ಮ ಸಂವಿಧಾನ ಶಿಲ್ಪಿಗಳು ಬಯಸಿದ್ದರು.

ರಾಜ್ಯ ನಿರ್ದೇಶಿತ ತತ್ವಗಳನ್ನು ಸಂವಿಧಾನದಲ್ಲಿ ಪರಿಚಯಿಸಿದ ಗುರಿಯ ಬಗ್ಗೆ ಬಾಬಾಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಅವರ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಮುಖ್ಯ: “ನಾನು ಹೇಳಿದಂತೆ, ನಮ್ಮ ಸಂವಿಧಾನ ಸಂಸದೀಯ ಪ್ರಜಾಪ್ರಭುತ್ವವನ್ನು ಸಾಧಿಸುವ ವ್ಯವಸ್ಥೆ. ಸಂಸದೀಯ ಪ್ರಜಾಪ್ರಭುತ್ವವೆಂದರೆ, ಒಬ್ಬ ಮನುಷ್ಯ, ಒಂದು ಮತ. ಪ್ರತಿ ಸರ್ಕಾರ ತನ್ನ ದಿನನಿತ್ಯದ ಕಾರ್ಯಕಲಾಪಗಳಲ್ಲಾಗಲೀ ಮತ್ತು ಒಂದು ನಿಗದಿತ ಸಮಯದ ಕೊನೆಗಾಗಲೀ, ಮತದಾರರಿಗೆ ಮತ್ತು ಮತದ ಹಕ್ಕು ಹೊಂದಿರುವವರಿಗೆ ಸರ್ಕಾರವನ್ನು ಮೌಲ್ಯಮಾಪನ ಮಾಡಲು ಅವಕಾಶ ನೀಡಿದಾಗ ಪ್ರತಿ ಸರ್ಕಾರ ಸುತ್ತಿಗೆಯ ಕೆಳಗೆ ಇರಬೇಕಾಗಿರುತ್ತದೆ. ಸಂವಿಧಾನದಲ್ಲಿ ಸಂಸದೀಯ ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿರುವುದಕ್ಕೆ ಕಾರಣವೇನೆಂದರೆ, ಯಾವುದೇ ರೀತಿಯ ಜನರಿಂದ, ಮುಂದೊಂದು ದಿನ ಯಾವುದೇ ರೀತಿಯ ಸರ್ವಾಧಿಕಾರ ಪ್ರತಿಷ್ಠಾಪನೆಯಾಗಲು ಸಾಧ್ಯವಾಗಬಾರದೆಂದು. ರಾಜಕೀಯ ಪ್ರಜಾಪ್ರಭುತ್ವವನ್ನು ನಾವೀಗ ಅನುಷ್ಠಾನ ಮಾಡಿದ ಮೇಲೆ, ಆರ್ಥಿಕ ಪ್ರಜಾಪ್ರಭುತ್ವದ ತತ್ವಗಳನ್ನು ರೂಪಿಸುವುದು ಕೂಡ ನಮ್ಮಾಸೆಯಾಗಿದೆ.
“ಕೇವಲ ಅಧಿಕಾರ ಹಿಡಿಯಲು ಬರುವುದಕ್ಕೆ ಮಾತ್ರ ಯಂತ್ರಾಂಗ ರೂಪಿಸುವುದಷ್ಟೇ ನಮ್ಮ ಗುರಿಯಲ್ಲ. ಸರ್ಕಾರ ರಚಿಸುವವರ ಮುಂದೆ ಕೆಲವು ಆದರ್ಶ ತತ್ವವನ್ನು ಮಂಡಿಸಲು ಸಂವಿಧಾನ ಆಶಿಸುತ್ತದೆ. ಆ ಆದರ್ಶ ತತ್ವವೇ ಆರ್ಥಿಕ ಪ್ರಜಾಪ್ರಭುತ್ವ. ’ಒಬ್ಬ ಮನುಷ್ಯ, ಒಂದು ಮತ’ ಏನು ಹೇಳುತ್ತದೆ ಎಂದು ನನಗೇನೋ ತಿಳಿದಿದೆ. ಪ್ರಶ್ನೆಯಿರುವುದು: ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸಲು ಯಾವುದಾದರೂ ನಿಖರ ಕಲ್ಪನೆ ಇದೆಯೇ ಎಂಬುದು? ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸಲು ಹಲವು ಮಾರ್ಗಗಳಿವೆ ಎಂದು ಜನ ನಂಬಿದ್ದಾರೆ; ವ್ಯಕ್ತಿವಾದ ಆರ್ಥಿಕ ಪ್ರಜಾಪ್ರಭುತ್ವ ಸಾಧಿಸಲು ಅತ್ಯುತ್ತಮ ಮಾರ್ಗ ಎಂದು ನಂಬಿದವರಿದ್ದಾರೆ. ಸಮಾಜವಾದ ಆರ್ಥಿಕ ಪ್ರಜಾಪ್ರಭುತ್ವದ ಅತ್ಯುತ್ತಮ ರೂಪ ಎಂದು ನಂಬಿದವರಿದ್ದಾರೆ. ಕಮ್ಯುನಿಸ್ಟ್ ಐಡಿಯಾಗಳು ಆರ್ಥಿಕ ಪ್ರಜಾಪ್ರಭುತ್ವದ ಅತ್ಯುತ್ತಮ ರೂಪ ಎಂದು ನಂಬಿದವರಿದ್ದಾರೆ” ಎಂದು ಬಾಬಾಸಾಹೇಬರು ವಾದ ಮಂಡಿಸಿದ್ದರು. ಆದುದರಿಂದ ಆರ್ಥಿಕ ಪ್ರಜಾಪ್ರಭುತ್ವವನ್ನು ಸಾಧಿಸಿಕೊಳ್ಳಲು ಇವುಗಳಲ್ಲಿ ಅತ್ಯುತ್ತಮ ಮಾರ್ಗವನ್ನು ಮುಂದಿನ ದಿನಗಳಲ್ಲಿ ಸರ್ಕಾರ ರಚಿಸುವವರು ಕಂಡುಕೊಳ್ಳಲು ನಮ್ಮ ಸಂವಿಧಾನ ಶಿಲ್ಪಿಗಳು ಅವಕಾಶ ಕಲ್ಪಿಸಿದ್ದರು.
ಈಗ ಆರ್. ಅಶೋಕ್ ಅವರು ಕಮ್ಯುನಿಸ್ಟ್ ಅಂದರೆ ಯಾವುದೋ ನಿಷೇಧಿತ ಸಿದ್ಧಾಂತ ಎಂಬಂತೆ ತಪ್ಪುತಪ್ಪಾಗಿ ಮಾತನಾಡಿರುವುದಲ್ಲದೆ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ರಾಜಕೀಯ ಮಾಡದವರನ್ನೂ ಅದರೊಳಗೆ ಈಗ ತುರುಕುತ್ತಿರುವುದೇಕೆ? ಈಗ ಸಿದ್ದರಾಮಯ್ಯನವರನ್ನೇ ತೆಗೆದುಕೊಳ್ಳೋಣ. ಅವರು ಸಮಾಜವಾದ ರಾಜಕೀತ ಸಿದ್ಧಾಂತದ ಹಿನ್ನೆಲೆಯಿಂದ ಬಂದವರು. ಹಿಂದೆ ಜನತಾ ದಳ ಏನಿತ್ತು ಅದು ಸಮಾಜವಾದ ಅಥವಾ ಸೋಷಿಯಲಿಸಂಅನ್ನು ಪ್ರತಿಪಾದಿಸುತ್ತಿತ್ತು ಮತ್ತು ಪ್ರತಿನಿಧಿಸುತ್ತಿತ್ತು. ಈ ಸಮಾಜವಾದದ ಹಿನ್ನೆಲೆಯಿಂದಲೇ ಆರ್‌ಜೆಡಿ, ಎಸ್‌ಪಿ, ಬಿಜು ಜನತಾದಳ ಮುಂತಾದವು ಜನತಾ ಪರಿವಾರದಿಂದ ಛಿದ್ರಗೊಂಡು ಹುಟ್ಟಿದ್ದು. ಸೋಗು ಹಾಕಿಕೊಂಡು ಜನಸಂಘ ಕೆಲಕಾಲ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿತ್ತಾದರೂ, ಅದರ ಮೂಲತತ್ವಗಳು ಬೇರೆಯಾಗಿದ್ದರಿಂದ ಅದು ಬಿಜೆಪಿಯಾಗಿ ಬೇರೆ ದಾರಿ ಹಿಡಿಯಿತು. ಸಮಾಜವಾದದ ಹಿನ್ನೆಲೆಯಿಂದ ಹುಟ್ಟಿದ ಪಕ್ಷಗಳು ಮೂಲತತ್ವಗಳನ್ನು ಎಷ್ಟು ಅನುಸರಿಸುತ್ತವೋ ಇಲ್ಲವೋ ಅದು ಬೇರೆ ಮಾತು. ಸಂಪತ್ತು ಮತ್ತು ಸಂಪನ್ಮೂಲಗಳು ಎಲ್ಲ ನಾಗರಿಕರಲ್ಲಿ ಸಮಾನ ಹಂಚಿಕೆಯಾಗಬೇಕು ಎಂದು ನಂಬಿರುವ ತತ್ವವಿದು ಎಂದು ಸಾಮಾನ್ಯವಾಗಿ ಹೇಳಬಹುದಾದರೂ ಅದನ್ನು ಸಾಧಿಸಿಕೊಳ್ಳುವಲ್ಲಿ ಹಲವು ದಾರಿಗಳನ್ನು ತುಳಿಯುವ ಸಾಧ್ಯತೆಯಿದೆ.
ಅದರಲ್ಲಿ ಕಮ್ಯುನಿಸಮ್ ಕೂಡ ಒಂದು. ಖಾಸಗಿ ಆಸ್ತಿಯನ್ನೇ ಅಬಾಲಿಷ್ ಮಾಡಿ, ಖಾಸಗಿ ಬಂಡವಾಳವನ್ನು ನಿಷೇಧಿಸಿ, ಪ್ರಭುತ್ವ ನಿರ್ದೇಶಿತ ಸಮುದಾಯ ವ್ಯವಹಾರ, ಸಮುದಾಯ ಕೃಷಿ ಮುಂತಾದವುಗಳನ್ನು ಉತ್ತೇಜಿಸುವ ಮಾರ್ಗ ಕಮ್ಯುನಿಸಂ ತತ್ವದಡಿಯಲ್ಲಿ ಬರುತ್ತದೆ. ಇದಕ್ಕೆ ಮಾರ್ಕ್ಸ್ ಮತ್ತು ಎಂಗೆಲ್ಸ್ ರಚಿಸಿದ ’ಕಮ್ಯುನಿಸ್ಟ್ ಮ್ಯಾನಿಫೆಸ್ಟೋ’ ಆಧಾರ ಗ್ರಂಥ. ಆದರೆ ನಮ್ಮದು ಸಂಸದೀಯ ಪ್ರಜಾಪ್ರಭುತ್ವವೆಂದು ಒಪ್ಪಿಕೊಂಡಿರುವಾಗ, ಮತ್ತು ಎಲ್ಲವನ್ನೂ ಪ್ರಭುತ್ವವೇ ನಿಯಂತ್ರಿಸಬೇಕು ಎಂಬುದು ಸಂವಿಧಾನದ ಪ್ರಕಾರ ಸಾಧ್ಯವಿರದೇ ಇರುವಾಗ, ಪ್ರಜಾಸತ್ತಾತ್ಮಕ ಸಮಾಜವಾದ ಮಾತ್ರ ಸಾಧ್ಯವಾಗುತ್ತದೆ. ಅಂದರೆ ಸರ್ಕಾರದ ಹಸ್ತಕ್ಷೇಪದಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಾನತೆಯನ್ನು ಸಾಧಿಸಲು ಪ್ರಯತ್ನಿಸುವುದು; ಶಿಕ್ಷಣ, ಆರೋಗ್ಯ ಇಂತಹ ಜನರನ್ನು ಅತಿ ಹೆಚ್ಚು ಬಾಧಿಸುವ ವಲಯಗಳಲ್ಲಿ ಸರ್ಕಾರ ಹೆಚ್ಚು ಭಾಗಿಯಾಗಿ ಖಾಸಗಿಯನ್ನು ನಿಯಂತ್ರಿಸುವುದು; ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಸಿದ್ದರಾಮಯ್ಯನವರು ವೈಯಕ್ತಿಕವಾಗಿ ಅಂತಹ ಸಿದ್ಧಾಂತದಿಂದ ಪ್ರಭಾವಗೊಂಡವರು ಮತ್ತು ಅಂತಹ ರಾಜಕೀಯ ಪಡಸಾಲೆಯಲ್ಲಿ ಪಳಗಿದವರು ಅನ್ನಬಹುದೇನೋ! ಕಾಂಗ್ರೆಸ್ ಪಕ್ಷದಲ್ಲಿ ಕೂಡ ಅವರು ಈ ಅರ್ಥದಲ್ಲಿ ಸಮಾಜವಾದವನ್ನು ಒಳಗೊಳ್ಳಲು ಪ್ರಯತ್ನಿಸಿದವರು. ಕಾಂಗ್ರೆಸ್ ಪಕ್ಷ ಉದಾರವಾದಿ ಬಂಡವಾಳವಾದ ಮತ್ತು ಸಮಾಜವಾದದ ಮಿಕ್ಸ್ಚರ್‌ಅನ್ನು ಹಲವು ಕಾಲಘಟ್ಟಗಳಲ್ಲಿ ಪ್ರಯತ್ನಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿರುವವರನ್ನು ಕಮ್ಯುನಿಸ್ಟ್‌ಗಳು ಎನ್ನಲು ಬಹುಶಃ ಬರುವುದಿಲ್ಲ. ಡೆಮಾಕ್ರಟಿಕ್
ಸೋಷಿಯಲಿಸಂ ಅನ್ನು ಕಾಂಗ್ರೆಸ್ ಕೆಲವೊಮ್ಮೆ ಅನುಸರಿಸಲು ಪ್ರಯತ್ನಿಸಿದೆ.
ಸಿಪಿಐ, ಸಿಪಿಐ (ಎಂ), ಎಲ್ ಡಿ ಎಫ್ ಮೈತ್ರಿಕೂಟ ಹೀಗೆ ಭಾರತದಲ್ಲಿರುವ ಕಮ್ಯುನಿಸ್ಟ್ ಪಕ್ಷಗಳು ಕೂಡ ಎಡಪಂಥದ ಚಿಂತನೆಗಳನ್ನು ಪ್ರತಿನಿಧಿಸಿದರೂ, ಅವು ಕೂಡ ಸಂಸದೀಯ ಪ್ರಜಸತ್ತಾತ್ಮಕ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಪಕ್ಷಗಳೇ. ಕಮ್ಯುನಿಸ್ಟ್ ತತ್ವಗಳನ್ನು ಸಾಧಿಸಲು, ಈ ಪಕ್ಷಗಳು ರಚಿಸುವ ಸರ್ಕಾರ ಹಲವು ವಲಯಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡಬಹುದಾದ ಅವಕಾಶ ಕಲ್ಪಿಸಿಕೊಳ್ಳಬಹುದು. ಭಾರತ ಸಂವಿಧಾನ ಹೀಗೆ ಉದಾತ್ತವಾದ ಒಂದು ವ್ಯವಸ್ಥೆಯನ್ನು ಕಲ್ಪಿಸಿದೆ. ಅದನ್ನು ಗೌರವಿಸುವುದು ಪ್ರತಿ ನಾಗರಿಕನ ಮತ್ತು ಪ್ರತಿ ರಾಜಕಾರಣಿಯ ಕರ್ತವ್ಯ.

ಇದೂ ಅಲ್ಲದೆ ಸೋಷಿಯಲ್ ಡೆಮಾಕ್ರಟ್‌ಗಳು ಕೂಡ ಇದ್ದಾರೆ. ಯೂರೋಪಿನ ಹಲವು ರಾಷ್ಟ್ರಗಳಲ್ಲಿರುವ ಸೋಷಿಯಲ್ ಡೆಮಾಕ್ರಟ್ ಪಕ್ಷಗಳು ಬಂಡವಾಳಶಾಹಿಯನ್ನು ನಿಯಂತ್ರಣದಲ್ಲಿಡುವುದರಿಂದ ಸಮಾಜವಾದವನ್ನು ಸ್ಥಾಪಿಸಬಹುದು ಎಂದು ನಂಬಿರುವಂತಹವು. ಈ ಪಕ್ಷಗಳು ಪ್ರತಿಪಾದಿಸುವ ಅಂತಹ ಸುಧಾರಣೆಯಲ್ಲಿ ಒಂದು ಅತಿ ದೊಡ್ಡ ಶ್ರೀಮಂತರಿಗೆ ವೆಲ್ತ್ ಟ್ಯಾಕ್ಸ್ (ಸಂಪತ್ತಿನ ತೆರಿಗೆ) ವಿಧಿಸಬೇಕೆಂಬುದು. ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ವ್ಯಯಕ್ತಿಕವಾಗಿ ಆಸ್ತಿ ಸಂಗ್ರಹಣೆಗೆ ಅವಕಾಶವಿಲ್ಲ. ಆದರೆ ಕಮ್ಯುನಿಸ್ಟ್ ಆಡಳಿತದ ಎಷ್ಟೋ ದೇಶಗಳಲ್ಲಿ ವೈವಹಾರಗಳಿಂದ ಆಸ್ತಿ ವೃದ್ಧಿ ಮಾಡಿಕೊಂಡ ಹಲವು ಆಲಿಗಾರ್ಕ್‌ಗಳು ಇದ್ದಾರೆ. ಅದೂಅಲ್ಲದೆ ಚೀನಾದಂತಹ ದೇಶ ಕಮ್ಯುನಿಸ್ಟ್ ಎಂದು ಹೇಳಿಕೊಂಡರೂ ಪ್ರಭುತ್ವ ನಿಯಂತ್ರಿತ ಕ್ಯಾಪಿಟಲಿಸಂಅನ್ನು ಅನುಸರಿಸುತ್ತಿರುವುದು ತಿಳಿದ ವಿಷಯವೇ.
ಇನ್ನೂ ಬಿಜೆಪಿ ಪಕ್ಷ ಕೂಡ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡದ್ದಿದೆ. ಆದರೆ ಅದು ಬಹಳ ಸೀಮಿತವಾದದ್ದು ಮತ್ತು ಪಾಪ್ಯುಲಿಸ್ಟ್ ಕಾರಣಗಳಿಗಾಗಿ, ಪ್ರಚಾರ ತಂತ್ರಕ್ಕಾಗಿಯೇ ಅದು ಯೋಜನೆಗಳನ್ನು ರೂಪಿಸಿದ್ದು ಹೆಚ್ಚು. ಬಿಜೆಪಿ ಪಕ್ಷ ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೇ ಇನ್ನೊಂದು ಹೆಜ್ಜೆ ಮುಂದೆಹೋಗಿ ನವಉದಾರವಾದಿ ಬಂಡವಾಳವಾದವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದೆ. ಅದು ಮೋದಿ ಆಳ್ವಿಕೆಯ ಸರ್ಕಾರದಲ್ಲಿ ಇನ್ನಷ್ಟು ಬೆಳೆದಿದೆ. ಬಂಡವಾಳಶಾಹಿ ಅಂದರೇ ಸಂಪೂರ್ಣ ಉದಾರವಾದ. ವ್ಯವಹಾರದಲ್ಲಾಗಲೀ, ಪ್ರಭುತ್ವದ ಮತ್ತು ಸಮಾಜದ ಜೊತೆಗಿನ ವ್ಯಕ್ತಿಗಳ ಸಂಬಂಧದಲ್ಲಾಗಲೀ ಪ್ರಭುತ್ವದ-ಸರ್ಕಾರದ ಪಾತ್ರ ಕ್ಷೀಣವಾಗಿರಬೇಕು, ವ್ಯಕ್ತಿನಿಷ್ಠವಾದವೇ ಅಂತಿಮ ಎಂದು ನಂಬುವ ಸಿದ್ಧಾಂತ. ಪ್ರಭುತ್ವದ ಮತ್ತು ಪ್ರಭುತ್ವದ ಸಂಸ್ಥೆಗಳ ನಿಯಂತ್ರಣವನ್ನು ಇಲ್ಲವಾಗಿಸಿ ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ವಲಯಗಳನ್ನು ಮುಕ್ತ ಮಾರುಕಟ್ಟೆ ಮತ್ತು ಖಾಸಗಿಗೆ ಒಪ್ಪಿಸುವುದು ನವೌದಾರವಾದಿ ಅಥವಾ ನಿಯೋ ಲಿಬರಲಿಸಂ.
ಸಾಮಾನ್ಯವಾಗಿ ಉದಾರವಾದ ಅಥವಾ ಲಿಬರಲಿಸಂ ಸಾಮಾಜಿಕ ವ್ಯವಸ್ಥೆ ಮತ್ತು ಆರ್ಥಿಕ ವ್ಯವಸ್ಥೆ ಎರಡರಲ್ಲಿಯೂ ಪ್ರಭುತ್ವದ ನಿಯಂತ್ರಣವನ್ನು ವಿರೋಧಿಸುತ್ತದೆ. ಬಿಜೆಪಿ ಪಕ್ಷ ಇಲ್ಲಿ ಇಬ್ಬಗೆಯ ನೀತಿಯನ್ನು ಅನುಸರಿಸುತ್ತದೆ. ಅಂದರೆ ಸಾಮಾಜಿಕವಾಗಿ ಲಿಬರಲ್‌ವಾದ ಮುಂದೂಡುವ ಫ್ರೀ ಸ್ಪೀಚ್, ಫ್ರೀಡಂ ಆಫ್ ಎಕ್ಸ್‌ಪ್ರೆಷನ್ ಮತ್ತು ಮುಕ್ತ ಮಾಧ್ಯಮವನ್ನು ಅದು ಸಹಿಸುವುದಿಲ್ಲ. ಅಲ್ಲಿ ಅದು ಇಲ್ಲಿಬರಲ್ ಮತ್ತು ಕನ್ಸರ್ವೇಟಿವ್ (ಸಂಪ್ರದಾಯವಾದಿ), ಆದರೆ ಸಂಪತ್ತಿನ ಕ್ರೋಢೀಕರಣ ಮತ್ತು ಸಂಪನ್ಮೂಲಗಳ ಬಳಕೆಯಲ್ಲಿ ಮಾರುಕಟ್ಟೆಯನ್ನು ಮಾತ್ರ ನಂಬುವ ನವಉದಾರವಾದಿತನವನ್ನು ಮೈಗೂಡಿಸಿಕೊಂಡಿದೆ. ಇದರಿಂದ ಸಂಪತ್ತಿನ ಅಸಮಾನತೆ ಇಂದು ಎಂದೂ ಕಂಡಿರದ ರೀತಿಯಲ್ಲಿ ಬೆಳೆದಿದೆ. ತೀವ್ರಬಂಡವಾಳಶಾಹಿಯನ್ನು ನಂಬಿ ಆಚರಿಸಿ, ಸಾಮಾಜಿಕವಾಗಿ ಕೂಡ ಲಿಬರಲಿಸಂ ಧೋರಣೆಯನ್ನು ಅನುಸರಿಸುವ ಸರ್ಕಾರಗಳೂ ಇವೆ. ಜರ್ಮನಿಯ ಹಿಂದಿನ ಚಾನ್ಸೆಲರ್ ಅಂಜೆಲಾ ಮರ್ಕೆಲ್ ಅಧಿಕಾರಾವಧಿಯನ್ನು ಆ ಪರಿಧಿಯೊಳಗೆ ತರಬಹುದು. ಅಂಜೆಲಾ ಮರ್ಕೆಲ್ ಅವರ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷ ಎಂಬ ಹೆಸರಿನಲ್ಲಿ ಕನ್ಸರ್ವೇಟಿವ್ ಎನಿಸುವಂತಹ ’ಕ್ರಿಶ್ಚಿಯನ್’ ಇದ್ದರೂ ನಿರಾಶ್ರಿತರನ್ನು ಕುರಿತಂತೆ ಅವರ ಆಡಳಿತದ ಕೆಲವು ನಿರ್ಧಾರಗಳು ಸಾಮಾಜಿಕ ಲಿಬರಲಿಸಂ ಪರಿಧಿಗೆ ಸೇರುವಂತಿದ್ದವು.
ಹೀಗಿದ್ದ ಮೇಲೆ ಬಿಜೆಪಿ ರಾಜಕಾರಣಿಗಳನ್ನು ಮತ್ತು ರಾಜಕೀಯವನ್ನು ಫ್ಯಾಸಿಸ್ಟ್‌ಗಳು ಎಂದು ಬೀಡುಬೀಸಾಗಿ ಕರೆದುಬಿಡುವುದಿಲ್ಲವೇ ಎಂಬ ಪ್ರಶ್ನೆ ಹುಟ್ಟಬಹುದು. ಬಾಬಾಸಾಹೇಬರ ಮಾತುಗಳಲ್ಲಿ ಮೊದಲೇ ಹೇಳಿದಂತೆ ಸಂವಿಧಾನದಲ್ಲಿ ಯಾವುದೇ ರೀತಿಯ ಸರ್ವಾಧಿಕಾರ ಅಥವಾ ಫ್ಯಾಸಿಸ್ಟ್ ಸರ್ಕಾರ ಅಧಿಕಾರ ಹಿಡಿಯದಂತೆ ತಡೆಯಲು ಸಂಸದೀಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಆರ್‌ಎಸ್‌ಎಸ್ ಮತ್ತು ಸಂಘಪರಿವಾರ ಮೊದಲಿನಿಂದಲೂ ಮುಸಲೋನಿ ಮತ್ತು ಹಿಟ್ಲರ್‌ನಂತರ ಸರ್ವಾಧಿಕಾರಿಗಳನ್ನು ಆರಾಧಿಸಿಕೊಂಡು ಬಂದಿದೆ. ಇಂದು ಅಧಿಕಾರ ಹಿಡಿದಿರುವ ಅವರು ಪ್ರಜಾಪ್ರಭುತ್ವವನ್ನು ಯಾಮಾರಿಸಿ ಅಂತಹ ಸರ್ವಾಧಿಕಾರಿ ಮತ್ತು ಫ್ಯಾಸಿಸಂ ಮಿಶ್ರಣವನ್ನು ತರಲು ಹವಣಿಸುತ್ತಿರುವುದು ಕಳೆದ ಏಳೆಂಟು ವರ್ಷಗಳಿಂದ ನಿಚ್ಚಳವಾಗುತ್ತಿದೆ. ಜರ್ಮನ್ ಫ್ಯಾಸಿಸಂನ ಮುಖ್ಯ ಲಕ್ಷಣ ಯಹೂದಿಗಳ ಅಪರಾಧೀಕರಣ. ಜನಾಂಗೀಯ ತಾರತಮ್ಯ. ಇಂದು ಅದರ ಪ್ರತಿರೂಪವಾಗಿ ಇಲ್ಲಿ ಮುಸ್ಲಿಂ ಸಮುದಾಯದ ಅಪರಾಧೀಕರಣ ಪ್ರಕ್ರಿಯೆ ಎಗ್ಗಿಲ್ಲದೆ ಸಾಗಿದೆ. ಸರ್ವಾಧಿಕಾರದ ಮುಖ್ಯ ಸ್ವರೂಪಗಳು ಪ್ರಭುತ್ವದ ಸಂಸ್ಥೆಗಳನ್ನು ನಿಸ್ತೇಜಗೊಳಿಸುವುದು, ಮಾಧ್ಯಮಗಳ ಮೇಲೆ ಹಿಡಿತ ಸಾಧಿಸುವುದು, ಜನರ ಮನಸ್ಸನ್ನು ಹ್ಯಾಕ್ ಮಾಡಲು ಪ್ರೊಪೋಗಾಂಡಾವನ್ನು ಬಳಸುವುದು. ಇವೆಲ್ಲವೂ ಇಂದು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವುದನ್ನು ನಾವು ಕಾಣಬಹುದು. ಹಿಂದೆ ಎಮರ್ಜೆನ್ಸಿ ಹೇರಿದ ಸಮಯದಲ್ಲಿ ಇಂತಹ ಒಂದು ಸರ್ವಾಧಿಕಾರಿ ನಡೆಗೆ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಅದು ಅಲ್ಪ ಸಮಯದಲ್ಲಿ ಕೊನೆಗೊಂಡಿತ್ತು. ಆದರೆ ಇಂದು ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಎಷ್ಟೋ ಸಾಮಾನ್ಯ ನಾಗರಿಕರು ಆತಂಕಿತರಾಗಿರುವುದನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಗಳು ಯಾವುದು ಈ ದೇಶಕ್ಕೆ ನುಸುಳಬಾರದು ಎಂದು ಎಚ್ಚರ ವಹಿಸಿದ್ದರೋ ಅದು ಹಲವು ರೀತಿಗಳಲ್ಲಿ ಇಂದು ಮುನ್ನುಗ್ಗಲು ಪ್ರಯತ್ನಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ಹೆಡಗೇವಾರ್‌ನಂತಹವರ ಪಾಠ ಇಡುವ ಮೂಲಕ ಪಠ್ಯಪುಸ್ತಕದಲ್ಲಿಯೂ ಅದು ನುಸುಳಿದೆ. ಇದು ಸಂವಿಧಾನವಿರೋಧಿ ಎಂಬುದನ್ನು ಆರ್. ಅಶೋಕ್ ಸೇರಿದಂತೆ ಎಲ್ಲ ಬಿಜೆಪಿ ರಾಜಕಾರಣಿಗಳು ಅರ್ಥ ಮಾಡಿಕೊಳ್ಳುವುದು ಮುಖ್ಯವಾದೀತು. (ಇದೇ ರೀತಿ ಗಲ್ಫ್ ದೇಶಗಳಲ್ಲಿ ಮುಸ್ಲಿಂ ಬಹುಸಂಖ್ಯಾತ ಆಡಳಿತದ ಸರ್ವಾಧಿಕಾರಿ ದೇಶಗಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.)
ಈ ಪೊಲಿಟಿಕಲ್ ಸ್ಪೆಕ್ಟ್ರಂನಲ್ಲಿ ಇವಿಷ್ಟೇ ಅಲ್ಲದೆ ಇನ್ನೂ ಹಲವು ಸೈದ್ಧಾಂತಿಕ ವ್ಯವಸ್ಥೆಗಳಿವೆ. ಲೆಫ್ಟ್‌ನಲ್ಲಿಯೇ ಸಂಪೂರ್ಣ ಕಮ್ಯುನಿಸ್ಟ್ ಅಲ್ಲದ ಪ್ರತಿಯೊಬ್ಬರ ಹಕ್ಕುಗಳ ಜೊತೆಗೆ ಸಮಾನತೆ ಸಾಧಿಸುವ ನ್ಯೂ ಲೆಫ್ಟ್ ಇದೆ. ಹೀಗೇ ಎಡಪಂಥದಲ್ಲಿ ಸಮಾನತೆ, ಭ್ರಾತೃತ್ವ, ಸಂಪತ್ತಿನ ಹಂಚಿಕೆ, ಪರಿಸರ ಕಾಳಜಿ ಕುರಿತು ವಿವಿಧ ಚಿಂತನೆಗಳುಳ್ಳ ಹಲವು ಧಾರೆಗಳಿವೆ. ಆದರೆ ಬಲಪಂಥದಲ್ಲಿ ಅದರಲ್ಲೂ ಭಾರತೀಯ ಮಟ್ಟದಲ್ಲಿ ಅದು ಆರ್ಥಿಕ ಬಂಡವಾಳವಾದ ಮತ್ತು ಅದರ ಜೊತೆಗೆ ಲಿಬರಲ್ ಧೋರಣೆಯನ್ನು ನಾಶಪಡಿಸುವ ಕನ್ಸರ್ವೇಟಿಸಂ ಸೇರಿಕೊಂಡು, ಒಂದು ಜನಾಂಗವನ್ನು ಅಥವಾ ಅಲ್ಪಸಂಖ್ಯಾತ ಸಮುದಾಯಗಳನ್ನು ದ್ವೇಷಿಸುವ, ಎಲ್ಲವನ್ನೂ ಸಣ್ಣ ಗುಂಪೊಂದು ಅಥವಾ ಒಬ್ಬ ನಿಯಂತ್ರಿಸುವ ಸರ್ವಾಧಿಕಾರಿ ಧೋರಣೆಯ ಫ್ಯಾಸಿಸಂ ಆಗಿ ಬೆಳೆದಿದೆ. ಆದುದರಿಂದ ಬಲಪಂಥದ ಬದಿಯಲ್ಲಿ ನಿಂತವರಿಗೆ ಅನ್ಯ ರಾಜಕೀಯ ಸಿದ್ಧಾಂತದವರೆಲ್ಲಾ ಕಮ್ಯುನಿಸ್ಟ್ ಎಂದು ಕಾಣುತ್ತದೆ. ಅದು ಕೂಡ ನಿಜಾರ್ಥದಲ್ಲಿ ಅಲ್ಲ, ಸಂಘ ಪರಿವಾರದ ಲೆನ್ಸ್‌ನಲ್ಲಿ, ಅಲ್ಲಿ ಹೇಳಿಕೊಟ್ಟಿರುವ ಪಾಠದಂತೆ ಕಲಿತಿರುವ ತಪ್ಪು ವ್ಯಾಖ್ಯಾನದ ಕಮ್ಯುನಿಸಂ ಅದು. ಯಾರೋ ರಾಜಕೀಯ ಅಜ್ಞಾನಿಗಳು ಇಂತಹ ಮಾತುಗಳನ್ನು ಉದುರಿಸಿದರೆ ಮರುಕಪಟ್ಟು ಬಿಟ್ಟುಬಿಡಬಹದು, ಆದರೆ ಹಲವು ಬಾರಿ ಶಾಸಕರಾಗಿರುವ, ಒಂದಕ್ಕೂ ಹೆಚ್ಚು ಬಾರಿ ಮಂತ್ರಿಯಾಗಿರುವ ಆರ್ ಅಶೋಕ್ ಅವರು ವಿವಿಧ ರಾಜಕೀಯ ಸಿದ್ಧಾಂತಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆಯುವುದು ಅತ್ಯವಶ್ಯಕ. ಕನಿಷ್ಟ ಪ್ರಾಥಮಿಕ ಜ್ಞಾನವನ್ನಾದರೂ ಒಳಗೆ ಇಳಿಸಿಕೊಳ್ಳುವುದು ನಾಡಿನ ದೃಷ್ಟಿಯಿಂದ ಹಿತವಾದದ್ದು.
ಇದನ್ನೂ ಓದಿ: ತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನ; ಭಾರತ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮದತ್ತ ಸಾಗುತ್ತಿದೆಯೇ?


