Homeಮುಖಪುಟತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನ; ಭಾರತ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮದತ್ತ ಸಾಗುತ್ತಿದೆಯೇ?

ತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನ; ಭಾರತ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮದತ್ತ ಸಾಗುತ್ತಿದೆಯೇ?

- Advertisement -
- Advertisement -

ಹೇಗೆ ಗೌರಿ ಲಂಕೇಶರ ಕೊಲೆಯು ಈ ದೇಶದಲ್ಲಿ ಬಲಪಂಥೀಯ ಘಾತುಕ ರಾಜಕಾರಣಕ್ಕೆ ಪ್ರತಿರೋಧವನ್ನು ಕಡಿಮೆ ಮಾಡಲಿಲ್ಲವೋ, ಹಾಗೆಯೇ ತೀಸ್ತಾ ಸೆತಲ್ವಾಡ್, ಶ್ರೀಕುಮಾರ್ ಮತ್ತು ಜುಬೇರ್‌ರ ಬಂಧನವೂ ಈ ಪ್ರತಿರೋಧವನ್ನು ಇಲ್ಲವಾಗಿಸುವುದಿಲ್ಲ. ಹಾಗೆ ನೋಡಿದರೆ ತೀಸ್ತಾ ಮತ್ತು ಜುಬೇರ್‌ರಿಗೆ ಇಂತಹದೊಂದು ದಿನ ಬರುತ್ತದೆ ಎಂದು ಖಚಿತವಾಗಿ ಗೊತ್ತಿತ್ತು. ಏಕೆಂದರೆ ಅವರ ಕಣ್ಣೆದುರಿಗೆ ನಡೆದ ಇನ್ನೂ ಭೀಕರವಾದ ಸಂಗತಿಗಳನ್ನು ಅವರು ಧೈರ್ಯದಿಂದ ಎದುರಿಸಲು ದೃಢ ನಿಶ್ಚಯ ಮಾಡಿದಾಗಲೇ, ಇದರ ಪರಿಣಾಮವೇನೆಂದು ಊಹಿಸದಷ್ಟು ಭ್ರಮೆಯಲ್ಲಿ ಅವರಿರಲಿಲ್ಲ. ತೀಸ್ತಾ ಅವರ ತಾತ ಈ ದೇಶದ ಮೊಟ್ಟ ಮೊದಲ ಮತ್ತು ದೀರ್ಘ ಕಾಲದ ಅಟಾರ್ನಿ ಜನರಲ್ ಆಗಿದ್ದರೆಂಬುದೋ, ಅವರ ಮುತ್ತಾತ ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ವಿಚಾರಣೆ ನಡೆಸಿದ ಆಯೋಗದ ಸದಸ್ಯರಾಗಿದ್ದರೆಂಬುದೋ ಅವರ ನೆರವಿಗೆ ಬರುತ್ತದೆ ಎಂದವರು ಅಂದುಕೊಂಡಿರಲಿಲ್ಲ. ತೀಸ್ತಾ ಎಂದೂ ತಾನಿಂತಹ ಕುಟುಂಬಕ್ಕೆ ಸೇರಿದವಳು ಎಂಬುದನ್ನು ಹೇಳಿಕೊಂಡೂ ಇರಲಿಲ್ಲ. ಸ್ವತಃ ತೀಸ್ತಾ ಸೆತಲ್ವಾಡ್ ಸತತವಾಗಿ ಆರಿಸಿಕೊಂಡಿದ್ದು ನ್ಯಾಯಕ್ಕಾಗಿ ದೇಶದ ವಿವಿಧ ನ್ಯಾಯಾಲಯಗಳು ಹಾಗೂ ಸಂಬಂಧಿಸಿದ ಪ್ರಾಧಿಕಾರಗಳ ಬಾಗಿಲನ್ನು ನಿರಂತರವಾಗಿ ಎಡತಾಕುವುದನ್ನೇ. ಅದೂ ಸಹಾ ನ್ಯಾಯಾಲಯಗಳಿಂದ ತನಗೆ ರಕ್ಷಣೆ ತಂದುಕೊಟ್ಟುಬಿಡುತ್ತದೆ ಎಂದು ಭ್ರಮಿಸುವಷ್ಟು ಅಮಾಯಕರು ಅವರಲ್ಲವೇ ಅಲ್ಲ.

ಏಕೆಂದರೆ ಅವರ ಕಣ್ಣೆದುರಿಗೇ ಅದೇ ಮಹಾರಾಷ್ಟ್ರದಲ್ಲಿ ಡಾ.ಆನಂದ್ ತೇಲ್ತುಂಬ್ಡೆಯವರೂ ಒಳಗೊಂಡಂತೆ ಹಲವಾರು ಮೇಧಾವಿಗಳನ್ನು ಒಂದು ಹಸೀ ಸುಳ್ಳು ಕೇಸಾದ ಭೀಮಾ ಕೊರೆಗಾಂವ್ ಕೇಸಿನಲ್ಲಿ ಸಿಲುಕಿಸಿ ವರ್ಷಗಳು ಕಳೆದುಹೋದವು. ಆ ಕೇಸಿನ ವಿವರವು ತೀರಾ ಸಾಮಾನ್ಯ ಜ್ಞಾನವಿದ್ದವರಲ್ಲೂ ಆಶ್ಚರ್ಯ ಮೂಡಿಸುತ್ತದೆ. ಸುಳ್ಳಿಗೆ ಮತ್ತೊಂದು ಹೆಸರೇ ಭೀಮಾ ಕೊರೆಗಾಂವ್ ಕೇಸು. ತೀರಾತೀರಾ ಕಡಿಮೆ ಸೃಜನಶೀಲ ಆಲೋಚನೆಯಿದ್ದವರಷ್ಟೇ ಅಂತಹ ಅಪದ್ಧ ಹೆಣೆಯಲು ಸಾಧ್ಯ. ಆದರೂ ಸುಧಾ ಭಾರದ್ವಾಜ್ ಮತ್ತು ವರವರರಾವ್ (ಅವರಿಗೆ ಸಿಕ್ಕಿರುವುದು ಪೂರ್ಣ ಜಾಮೀನೂ ಅಲ್ಲ) ಅವರನ್ನು ಹೊರತುಪಡಿಸಿ ಮಿಕ್ಕವರೆಲ್ಲರೂ ಇನ್ನೂ ಜೈಲಿನಲ್ಲಿಯೇ ಇದ್ದಾರೆ.

ಇವೆಲ್ಲಾ ಗೊತ್ತಿದ್ದೂ ತೀಸ್ತಾ ಅವರು ಏಕೆ ಗುದ್ದಾಡುತ್ತಲೇ ಇದ್ದರು? ತನ್ನ ಕುಟುಂಬಕ್ಕೆ ಅತ್ಯಂತ ಹತ್ತಿರದಿಂದ ಗೊತ್ತಿರುವ ನ್ಯಾಯಾಂಗದ ಒಂದೊಂದೇ ಕಂಬವು ಯಾರದ್ದೋ ಪದತಲದಲ್ಲಿ ಉರುಳಲಾರಂಭಿಸಿಯಾಗಿದೆ ಎಂದು ಗೊತ್ತಿದ್ದೂ ಅಲ್ಲಿ ನ್ಯಾಯ ಕೇಳುವುದನ್ನು ಅವರು ಬಿಟ್ಟಿರಲಿಲ್ಲ. ಸದರಿ ನ್ಯಾಯಾಂಗದ ಒಂದೊಂದು ಸಣ್ಣ ಸೂಕ್ಷ್ಮವೂ ಅವರಿಗೆ ಕರತಲಾಮಲಕ. ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಗೌರಿ ಲಂಕೇಶರ ಹತ್ಯೆಯ ಮೊಕದ್ದಮೆಯ ವಿಚಾರಣೆಯು ಆರಂಭವಾಗುವುದಿತ್ತು. ಆ ವಿಚಾರಣೆಯ ಪ್ರಥಮ ಸಾಕ್ಷಿಯಾಗಿ ಗೌರಿಯವರ ಸೋದರಿ ಕವಿತಾ ಹೋಗಬೇಕಿತ್ತು. ಅದು ಕವಿತಾ ಎದುರಿಸಬೇಕಿದ್ದ ಮೊಟ್ಟಮೊದಲ ಕೋರ್ಟ್ ವಿಚಾರಣೆ. ಅಲ್ಲಿ ಅವರೆದುರಿಗೆ ನಿಲ್ಲುವುದು, ಅವರ ಪ್ರಿಯ ಸಹೋದರಿಯನ್ನು ಕೊಂದ ಮತ್ತು ಕೊಲೆಯ ಸಂಚಿನಲ್ಲಿ ಭಾಗಿಯಾದ ಆರೋಪ ಹೊತ್ತ ವ್ಯಕ್ತಿಗಳು. ಕಾಕತಾಳೀಯವಾಗಿ ಸಾಮಾನ್ಯವಾಗಿ ಆ ಕೇಸಿಗೆ ನಿರಂತರವಾಗಿ ಹಾಜರಾಗುತ್ತಿದ್ದ ಕೆಲವು ಗೆಳೆಯರು ಅಂದು ಇದ್ದಿರಲಿಲ್ಲ. ಇದನ್ನು ಒಂದು ದಿನ ಮುಂಚೆ ತಿಳಿದುಕೊಂಡ ತೀಸ್ತಾ ಕೂಡಲೇ ಕರ್ನಾಟಕದ ಹಲವು ಸ್ನೇಹಿತರಿಗೆ ಫೋನ್ ಮಾಡಿ, ’ನೀವು ನಾಳೆ ಕವಿತಾ ಜೊತೆಗೆ ಕೋರ್ಟಿನಲ್ಲಿ ಇರಲೇಬೇಕು. ಕೋರ್ಟಿನ ಆ ಕಟಕಟೆಯಲ್ಲಿ ನಿಂತಾಗ ತೀರಾ ಹತ್ತಿರದಿಂದ ಪರಿಚಿತವಿರುವ ಹಲವು ಮುಖಗಳು ಕಾಣದಿದ್ದರೆ ಕಷ್ಟವಾಗುತ್ತದೆ’ ಎಂದು ಒತ್ತಾಯಿಸಿದ್ದರು.

ಸುಳ್ಳು ಕೇಸುಗಳಲ್ಲಿ ಬಲಿಯಾಗುವ ಎಷ್ಟೋ ಆರೋಪಿಗಳ ಪರವಾಗಿ, ಅಪಾಯಕಾರಿ ಕೊಲೆಗಡುಕರ ವಿರುದ್ಧ ಕೇಸುಗಳನ್ನು ಕೊಟ್ಟು ವಿಚಾರಣೆಗೆ ಹಾಜರಾಗುವ ದೂರುದಾರರ ಪರವಾಗಿ ತೀಸ್ತಾ (ಮತ್ತು ಅವರ ಸಿಜೆಪಿ) ನಿರಂತರವಾಗಿ ಕೆಲಸ ಮಾಡಿದ್ದರು. ಹಾಗಾಗಿ ಅದರ ಸೂಕ್ಷ್ಮವನ್ನು ಅರಿತು ಕವಿತಾರ ಮನಸ್ಸಿನಲ್ಲಿ ಅಂದು ಸುಳಿಯಬಹುದಾದ ಸಣ್ಣ ಚಡಪಡಿಕೆಯ ಹೊತ್ತಿನಲ್ಲೂ, ಆತುಕೊಳ್ಳುವ ಪರಿಚಿತ ಮುಖಗಳು ಇರಬೇಕೆಂದು ಒಬ್ಬರಾದ ಮೇಲೆ ಒಬ್ಬರಿಗೆ ಫೋನ್ ಮಾಡಿ ಒತ್ತಾಯಿಸಿದ್ದರು. ಅದು ತೀಸ್ತಾ.

ತೀಸ್ತಾ ಎಂಬುದು ಭಾರತದ ಪೂರ್ವಭಾಗದಲ್ಲಿ ಹರಿವ ನದಿ. ಭಾರತದ ಪಶ್ಚಿಮದ ಗುಜರಾತ್‌ನಲ್ಲಿ ನಡೆದ ನರಮೇಧದ ಸಂದರ್ಭದಲ್ಲಿ ತೀಸ್ತಾ ಸೆತಲ್ವಾಡ್ ನಿಭಾಯಿಸಿದ ಪಾತ್ರದ ಕಾರಣಕ್ಕೆ ದೇಶಾದ್ಯಂತ ಪ್ರಜ್ಞಾವಂತರೆಲ್ಲರಿಗೂ ಅವರು ಪರಿಚಿತ. ಅವರ ಸಿಜೆಪಿ (ಸಿಟಿಜನ್ಸ್ ಫಾರ್ ಜಸ್ಟೀಸ್ & ಪೀಸ್), ಸಬ್‌ರಂಗ್ ಎನ್‌ಜಿಓ, ಕಮ್ಯುನಲಿಸಂ ಕಂಬ್ಯಾಟ್ ಪತ್ರಿಕೆಗಳೂ ಸಹಾ ಹಾಗೆಯೇ ಪರಿಚಿತ. ಆದರೆ ತಳಮಟ್ಟದಲ್ಲಿ ಅವರು ಕೈಗೊಂಡ ಕೆಲಸಗಳು ಅಸಂಖ್ಯ. ಅಸ್ಸಾಂನಲ್ಲಿ ಸಿಜೆಪಿಯ ವಾಲಂಟಿಯರ್‌ಗಳು ತುಂಬಿದ ಎನ್‌ಆರ್‌ಸಿ ಅರ್ಜಿಗಳ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚು. ಇಂತಹ ಹತ್ತಾರು ಬಗೆಯ ಕೆಲಸಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸುವುದರಲ್ಲಿ ತೀಸ್ತಾ ಎತ್ತಿದ ಕೈ. ’ನ್ಯಾಯ’ ಎನ್ನುವುದು ಅವರ ಪಾಲಿಗೆ ಅತ್ಯಂತ ಪವಿತ್ರವಾದುದಾಗಿತ್ತು. ಅದು ಮುಸ್ಲಿಮರು, ದಲಿತರು, ಆದಿವಾಸಿಗಳು, ಮಹಿಳೆಯರು, ಬಡವರೆಲ್ಲರ ವಿಚಾರದಲ್ಲೂ.

ತೀಸ್ತಾ ಅವರು ಕಾಂಗ್ರೆಸ್ಸಿನಿಂದ ಉಪಕೃತರೆಂದೂ, ಅವರಿಗಾಗಿ ಕೆಲಸ ಮಾಡುತ್ತಿದ್ದರೆಂದೂ ಐಟಿ ಸೆಲ್ ಆರೋಪಗಳು ಅಲ್ಲಲ್ಲಿ ಕಂಡಿವೆ. ತೀಸ್ತಾರಂತಹ ಒಬ್ಬ ದಿಟ್ಟ ಮತ್ತು ಸಮರ್ಥ ಮಹಿಳೆಯ ಸಾಮರ್ಥ್ಯ ಹಾಗೂ ಬದ್ಧತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಆಲೋಚನೆ ಈ ಕಾಂಗ್ರೆಸ್ಸಿಗೆ ಇದ್ದಿದ್ದರೆ ದೇಶ ಇನ್ನೂ ಉತ್ತಮ ಸ್ಥಿತಿಯಲ್ಲಿರುತ್ತಿತ್ತು ಎಂದಷ್ಟೇ ಹೇಳಬಹುದು. ದೇಶದ ಯಾವುದೇ ನಾಗರಿಕರಿಗೆ ಲಭ್ಯವಿರುವ ಸಾಂವಿಧಾನಿಕ, ನ್ಯಾಯಿಕ ಸೌಲಭ್ಯಗಳನ್ನಷ್ಟೇ ಬಳಸಿ ತೀಸ್ತಾ ಮಾಡಿದ ಕೆಲಸವೇ ನೂರಾರು ದಾಳಿಕೋರರಿಗೆ, ಕೊಲೆಗಡುಕರಿಗೆ ಶಿಕ್ಷೆ ಆಗುವಂತೆ ಮಾಡಿತು ಎಂಬುದನ್ನಿಲ್ಲಿ ದಾಖಲಿಸಬೇಕು.

ಕರ್ನಾಟಕದ ಜೊತೆಗೂ ತೀಸ್ತಾ ನಂಟು ಬಹಳ ಹತ್ತಿರದ್ದು. ಇಲ್ಲಿ ಅವರಿಗೆ ಹಲವಾರು ಸ್ನೇಹಿತರಿದ್ದಾರೆ. ಅಂತಹ ಒಬ್ಬ ಪ್ರಿಯ ಸ್ನೇಹಿತೆ ಗೌರಿ ಲಂಕೇಶ್ ಹತ್ಯೆಯ ನಂತರ ತೀಸ್ತಾ ಕರ್ನಾಟಕಕ್ಕೆ ಇನ್ನೂ ಹತ್ತಿರವಾದರು. ಇನ್ನೂ ಹೆಚ್ಚು ಧೈರ್ಯವಾಗಿ, ವ್ಯವಸ್ಥಿತವಾಗಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದರು. ಆ ನಂತರ ತೀಸ್ತಾ ಅವರಿಗೆ ಒಬ್ಬ ಗನ್‌ಮ್ಯಾನ್‌ಅನ್ನು ಸರ್ಕಾರ ನೀಡಿತ್ತಾದರೂ, ಆ ಗನ್‌ಮ್ಯಾನ್ ಯಾರಿಂದ ರಕ್ಷಣೆ ಒದಗಿಸಬಹುದು ಎಂಬ ಅರಿವು ಅವರಿಗಿದ್ದೇ ಇತ್ತು. ಆ ಗನ್‌ಮ್ಯಾನ್‌ಅನ್ನು ನಿಯೋಜಿಸಿದವರೇ ದಂಡು ಕಟ್ಟಿಕೊಂಡು ಬಂದು ತನ್ನನ್ನೊಂದು ದಿನ ಹೊತ್ತೊಯ್ಯುತ್ತಾರೆ ಎಂದು ಗೊತ್ತಿದ್ದೂ, ನಿರಂತರವಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಅವರು ಬಡಿದಾಡುತ್ತಾ ಬಂದರು. ಈಗ ತೀಸ್ತಾಗೆ ನ್ಯಾಯ ಸಿಗಬೇಕೆಂದು ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ.

ಇದೇ ಕರ್ನಾಟಕ ಮೂಲದ ಜುಬೇರ್ ಸಹಾ ಬಂಧಿತರಾಗಿದ್ದಾರೆ. ಜರ್ನಲಿಸಂ ಕಾಲಕಾಲಕ್ಕೆ ಅಪ್‌ಡೇಟ್ ಆಗಬೇಕಾದ ರೀತಿ ಏನು ಎಂದು ತೋರಿಸಬಹುದಾದ ಅತ್ಯುತ್ತಮ ಉದಾಹರಣೆಗಳಲ್ಲಿ ಆಲ್ಟ್ ನ್ಯೂಸ್ ಸಹಾ ಒಂದು. ಜುಬೇರ್ ಅದರ ಸ್ಥಾಪಕರಲ್ಲಿ ಒಂದು. ನೋಕಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಇಂಜಿನಿಯರ್, ಇನ್ನೊಬ್ಬ ಇಂಜಿನಿಯರ್ ಪ್ರತೀಕ್ ಸಿನ್ಹಾ ಜೊತೆ ಸೇರಿ ಆಲ್ಟ್ ನ್ಯೂಸ್‌ಅನ್ನು ಸ್ಥಾಪಿಸಿದರು. ಪ್ರತೀಕ್ ಅವರಿಗೆ ಮುಕುಲ್ ಸಿನ್ಹಾ ಎಂಬ ಕಾರ್ಮಿಕ ಮುಖಂಡನಾಗಿ ಬದಲಾದ ವಿಜ್ಞಾನಿ ತಂದೆಯ ಪರಂಪರೆಯಿತ್ತು. ಜುಬೇರ್‌ರಲ್ಲಿ ಇದ್ದದ್ದು ಹೊಸಕಾಲಕ್ಕೆ ಅಗತ್ಯವಿದ್ದ- ದ್ವೇಷ ಹಾಗೂ ಸುಳ್ಳುಗಳನ್ನು ನಿರಂತರ ಬಯಲುಗೊಳಿಸುವ- ಜರ್ನಲಿಸಂನ ಕುರಿತ ಪ್ಯಾಷನ್. ಅವರು ಹೊರತಂದ ಸಂಗತಿಗಳು ಅಷ್ಟಿಷ್ಟಲ್ಲ.

ಅಂತಹ ಜುಬೇರ್‌ಗೂ ದೇಶವೆತ್ತ ಸಾಗುತ್ತಿದೆ, ತಮಗೇನು ಕಾದಿದೆ ಎಂದು ಗೊತ್ತಿದ್ದೇ ಕೆಲವು ವಿಚಾರಗಳ ಸುತ್ತ ಎಡಬಿಡದೇ ಕೆಲಸ ಮಾಡಿದರು. ಪ್ರತೀಕ್‌ಗಿಂತ ಹೆಚ್ಚು ಇಂಟೆನ್ಸ್ ಆಗಿ ದುಡಿಯುತ್ತಾ ಹೋದರು. ’ಮುಸ್ಲಿಮನಾಗಿಯೂ’ ಇದನ್ನು ಮಾಡುವಾಗ ಇರುವ ರಿಸ್ಕ್ ಹೆಚ್ಚು ಎಂಬುದು ಗೊತ್ತಿದ್ದೂ ಬಹಳ ದೊಡ್ಡ ಸಂಗತಿಗಳನ್ನು ಬಯಲುಗೊಳಿಸಿದರು.

ಗೊತ್ತಿರಲಿ, ಇಂತಹ ನೂರಾರು ಜನರು ಈ ದೇಶದಲ್ಲಿ ಇದ್ದಾರೆ. ಸಾಕೇತ್ ಗೋಖಲೆ ಅಂತಹ ಇನ್ನೊಂದು ಉದಾಹರಣೆ. ತೀಸ್ತಾರ ಗಂಡ ಜಾವೆದ್ ಆನಂದ್ ಮತ್ತೊಂದು ಉದಾಹರಣೆ. ದೇಶದ ವಿವಿಧ ಭಾಗಗಳ ಸಂಘರ್ಷನಿರತ ಜನರನ್ನು ಒಗ್ಗೂಡಿಸುವ ಯೋಗೇಂದ್ರ ಯಾದವ್ ಮಗದೊಂದು ಉದಾಹರಣೆ. ಇವರ್‍ಯಾರೂ ಈ ಬಂಧನಗಳಿಂದ ಧೃತಿಗೆಟ್ಟಿಲ್ಲ; ಧೃತಿಗೆಡುವುದೂ ಇಲ್ಲ. ಈ ಸರ್ಕಾರವಿರುವಾಗ ಬಂಧನಕ್ಕೊಳಗಾಗುತ್ತಿರುವುದು ಎಂದರೆ, ಅದೊಂದು ದೊಡ್ಡ ಪ್ರಶಸ್ತಿ ಎಂದು ಜುಬೇರ್ ಬಂಧನದ ನಂತರ ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದೇ ಅದಕ್ಕೆ ಸಾಕ್ಷಿ.

ಹೋರಾಟ, ಪ್ರತಿರೋಧ, ಸಂಘರ್ಷ, ನ್ಯಾಯ ಇತ್ಯಾದಿಗಳು ಪ್ರಗತಿಪರ ಕಾಲಕ್ಷೇಪದ ಸಂಗತಿಯಾಗುಳಿದಿಲ್ಲ. ಅದು ಗಂಭೀರ ಪರಿಣಾಮಗಳನ್ನು ತಂದೊಡ್ಡುತ್ತಿದೆ ಮತ್ತು ಅಂತಹ ಪರಿಣಾಮಗಳ ಅರಿವಿದ್ದೇ ನ್ಯಾಯಕ್ಕಾಗಿ ದನಿಯೆತ್ತುವವರ ಸಂಖ್ಯೆಯೂ ಹೆಚ್ಚುತ್ತಿದೆ. ತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನದ ನಂತರ ಈ ದೇಶ ಅಂತಹ ಸಾವಿರಾರು ಜನರನ್ನು ನೋಡಲಿದೆ.


ಇದನ್ನೂ ಓದಿ: ತೀಸ್ತಾ, ಜುಬೇರ್‌‌ ಬಂಧನ ಆತಂಕಕಾರಿ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಮಾರಿಯಾ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಇವರನ್ನೆಲ್ಲಾ ಬಂದಿಸಿದ್ದು ತಪ್ಪು, ಒಂದೇ ಬಾರಿ ಗಲ್ಲಿಗೆ ಹಾಕಿದರೆ ಸರಕಾರದ ಬೊಕ್ಕಸದ ಹಣ ಉಳಿಯೋದು

  2. ತೀಸ್ತಾ, ಜುಬೇರ್ ಮತ್ತು ಶ್ರೀಕುಮಾರ್, ಇವರುಗಳ ದೈರ್ಯ ಮತ್ತು ಬದ್ಧತೆಯನ್ನು ನಾವು ಮುಚ್ಚಬೇಕು ಹಾಗೂ ಅನುಸರಿಸಬೇಕು. ಇದು ಮಾತ್ರ ನಾವು ಈ ದೇಶಕ್ಕೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನೀಡುವ ನಿಜವಾದ ಕೊಡುಗೆ.

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...