Homeಮುಖಪುಟಅಂದು ಅಮಿತ್ ಶಾ ಕೊಟ್ಟ ಮಾತು ಉಳಿಸಿಕೊಂಡಿದ್ದರೆ, ಇಂದು ಮಹಾರಾಷ್ಟ್ರ ಬಿಜೆಪಿ ಸಿಎಂ ಹೊಂದಿರುತ್ತಿತ್ತು: ಉದ್ಧವ್...

ಅಂದು ಅಮಿತ್ ಶಾ ಕೊಟ್ಟ ಮಾತು ಉಳಿಸಿಕೊಂಡಿದ್ದರೆ, ಇಂದು ಮಹಾರಾಷ್ಟ್ರ ಬಿಜೆಪಿ ಸಿಎಂ ಹೊಂದಿರುತ್ತಿತ್ತು: ಉದ್ಧವ್ ಠಾಕ್ರೆ

- Advertisement -
- Advertisement -

ಅಂದು ಅಮಿತ್ ಶಾ ಕೊಟ್ಟ ಮಾತು ಉಳಿಸಿಕೊಂಡಿದ್ದರೆ, ಇಂದು ಮಹಾರಾಷ್ಟ್ರದಲ್ಲಿ ಬಿಜೆಪಿ ವ್ಯಕ್ತಿ ಸಿಎಂ ಆಗಿರುತ್ತಿದ್ದರು ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇಂದು ಬಿಜೆಪಿಯು ಹೊರಗಿನ ವ್ಯಕ್ತಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದೆ. 2019ರಲ್ಲಿಯೇ ಆ ಕೆಲಸ ಮಾಡಲು ಏಕೆ ಸಾಧ್ಯವಾಗಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.

2019ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಯೊಂದಿಗೆ ಚುನಾವಣೆ ಎದುರಿಸಿದ್ದವು. ಬಿಜೆಪಿ 106 ಸ್ಥಾನಗಳನ್ನು ಗೆದ್ದರೆ, ಶಿವಸೇನೆ 55 ಸ್ಥಾನಗಳಲ್ಲಿ ಜಯಗಳಿಸಿತ್ತು. ಆಗ ಸಿಎಂ ಯಾರಾಗಬೇಕು ಎಂಬ ದೊಡ್ಡ ಚರ್ಚೆ ನಡೆದಿತ್ತು. ತಲಾ 2.5 ವರ್ಷಗಳ ಅವಧಿಗೆ ಅಧಿಕಾರ ಹಂಚಿಕೊಳ್ಳಲು ಅಮಿತ್ ಶಾ ಮಾತು ಕೊಟ್ಟಿದ್ದಾರೆ. ಮೊದಲ ಎರಡೂವರೆ ವರ್ಷ ಶಿವಸೇನೆಯ ವ್ಯಕ್ತಿ ಸಿಎಂ ಆಗಲು ಒಪ್ಪಿದ್ದರು ಎಂದು ಉದ್ಧವ್ ಠಾಕ್ರೆ ವಾದಿಸಿದ್ದರು. ಆದರೆ ಆಗ ಬಿಜೆಪಿ ಅಂತಹ ಆಶ್ವಾಸನೆ ನೀಡಿಲ್ಲ ಎಂದು ವಾದಿಸಿತು. ಕೊನೆಗೆ ಬಿಜೆಪಿಯೊಂದಿಗೆ ಸುಧೀರ್ಘ ಮೈತ್ರಿ ಕಡಿದುಕೊಂಡ ಶಿವಸೇನೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಅಧಿಕಾರ ಹಿಡಿದಿತ್ತು. ಉದ್ಧವ್ ಠಾಕ್ರೆ ಸಿಎಂ ಆಗಿದ್ದರು.

ಈಗ ಅದನ್ನು ನೆನಪಿಸಿರುವ ಉದ್ಧವ್ ಠಾಕ್ರೆಯವರು, “ಅಂದು ಬಿಜೆಪಿ ಕೊಟ್ಟ ಮಾತು ಉಳಿಸಿಕೊಂಡಿದ್ದರೆ ಒಪ್ಪಂದದಂತೆ ಉಳಿದ ಎರಡೂವರೆ ವರ್ಷ ಬಿಜೆಪಿ ವ್ಯಕ್ತಿ ಸಿಎಂ ಆಗಬಹುದಿತ್ತು. ಆದರೆ ಹಾಗೆ ಮಾಡದ ಕಾರಣ ಈಗಲೂ ಅವರು ಶಿವಸೇನೆಯ ವ್ಯಕ್ತಿಗೆ ಸಿಎಂ ಹುದ್ದೆ ಬಿಟ್ಟುಕೊಟ್ಟಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.

2019ರಲ್ಲಿ ಉದ್ಧವ್ ಠಾಕ್ರೆಯವರು ಸಿಎಂ ಆದ ನಂತರ ಮುಂಬೈನ ಆರೇ ಅರಣ್ಯ ಪ್ರದೇಶದಲ್ಲಿ ಮೆಟ್ರೊ ಕಾರ್‌ ಶೆಡ್‌ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದರು. ಆ ಮೂಲಕ ಹಲವು ದಿನಗಳಿಂದ ಹೋರಾಡುತ್ತಿದ್ದ ಪರಿಸರ ಪ್ರೇಮಿಗಳ ಮನಗೆದ್ದಿದ್ದರು. ಈಗ ಏಕನಾಥ್ ಶಿಂಧೆಯವರು ಸಿಎಂ ಆದ ಕೂಡಲೆ ಆ ಆದೇಶವನ್ನು ಬದಲಿಸಿದ್ದಾರೆ. ಈ ಕುರಿತು ಸಹ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಮೇಲಿನ ಸೇಡನ್ನು ಸಾಮಾನ್ಯ ಮುಂಬೈ ಜನರ ಮೇಲೆ ತೋರಿಸಬೇಡಿ ಎಂದಿದ್ದಾರೆ.

ಇನ್ನೊಂದು ಕಡೆ ಏಕನಾಥ್ ಶಿಂಧೆ ಸಿಎಂ ಆಗಿರುವುದರಿಂದ ಮತ್ತು ಅವರ ಜೊತೆ 39 ಶಿವಸೇನೆ ಶಾಸಕರು ಇರುವುದರಿಂದ ನಿಜವಾದ ಶಿವಸೇನೆ ಪಕ್ಷ ಅವರಿಗೆ ಸೇರುತ್ತದೆ. ಇತ್ತ ಉದ್ಧವ್ ಠಾಕ್ರೆ ಅಧಿಕಾರದ ಆಸೆಯಿಂದ ಪಕ್ಷವನ್ನೇ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ವಾದಿಸಿದೆ.

ಫಡ್ನವೀಸ್ ಸದ್ಯ ಅತಂತ್ರ

ಮಹಾರಾಷ್ಟ್ರದ ಆಪರೇಷನ್ ಕಮಲದ ರೂವಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಮಾಜಿ ಸಿಎಂ, ಹಾಲಿ ಡಿಸಿಎಂ ದೇವೇಂದ್ರ ಫಡ್ನವೀಸ್ ಏಕಾಏಕಿ ಮೂಲೆಗೆ ತಳ್ಳಲ್ಪಟ್ಟರು. ಗುರವಾರದ ಬೆಳಿಗ್ಗೆಯವರೆಗೂ ತಾನೇ ಸಿಎಂ ಎಂದು ಬೀಗುತ್ತಿದ್ದ ಅವರು ಮಧ್ಯಾಹ್ನದ ವೇಳೆಗೆ ಸಿಹಿ ಹಂಚಿ ಸಂಭ್ರಮಿಸಿದ್ದರೂ ಕೂಡ. ಆದರೆ ಸಿಎಂ ಸ್ಥಾನ ಸಿಗುವುದಿಲ್ಲ ಎಂದು ಅರಿತ ನಂತರ ನನಗೆ ನೂತನ ಸರ್ಕಾರದಲ್ಲಿ ಯಾವುದೇ ಹುದ್ದೆ ಬೇಡ, ಸರ್ಕಾರ ಸುಗಮ ರೀತಿಯಲ್ಲಿ ನಡೆದುಕೊಂಡು ಹೋಗಲು ಸಹಕರಿಸುವುದಾಗಿ ಹೇಳಿದರು. ಒಂದು ರೀತಿಯಲ್ಲಿ ತಮ್ಮ ಮುನಿಸನ್ನು ಹೊರಹಾಕಿದರು. ಆದರೆ ಸಂಜೆ ವೇಳೆಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಅವರದ್ದಾಗಿತ್ತು.

ಇದನ್ನೂ ಓದಿ: ಫಡ್ನವೀಸ್‌ಗೆ ದಕ್ಕದ ಸಿಎಂ ಪಟ್ಟ: ಬಿಜೆಪಿ ಹೈಕಮಾಂಡ್ ಎದುರು ಮಂಡಿಯೂರಿದ್ದೇಕೆ?

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೇವಲ ಒಂದು ಕುರ್ಚಿ ಮಾತ್ರ ಹಾಕಲಾಗಿತ್ತು. ಅತ್ತ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, “ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ, ಫಡ್ನವೀಸ್ ಉಪಮುಖ್ಯಮಂತ್ರಿಯಾಗಬೇಕು. ನಾನು ಅವರನ್ನು ವೈಯಕ್ತಿಕವಾಗಿ ವಿನಂತಿಸುತ್ತೇನೆ” ಎಂದು ಟ್ವೀಟ್ ಮಾಡಿದರು. ಅದರ ಬೆನ್ನಲ್ಲೆ “ಬಿಜೆಪಿ ಅಧ್ಯಕ್ಷ ನಡ್ಡಾಜಿ ಅವರ ಆದೇಶದ ಮೇರೆಗೆ ಫಡ್ನವೀಸ್ ಅವರು ವಿಶಾಲ ಹೃದಯ ಮೆರೆದಿದ್ದಾರೆ ಮತ್ತು ಮಹಾರಾಷ್ಟ್ರದ ರಾಜ್ಯ ಮತ್ತು ಸಾರ್ವಜನಿಕರ ಹಿತಾಸಕ್ತಿಯಿಂದ ಸರ್ಕಾರಕ್ಕೆ ಸೇರಲು ನಿರ್ಧರಿಸಿದ್ದಾರೆ. ಈ ನಿರ್ಧಾರವು ಮಹಾರಾಷ್ಟ್ರದ ಬಗ್ಗೆ ಅವರ ನಿಜವಾದ ನಿಷ್ಠೆ ಮತ್ತು ಸೇವೆಯ ಸಂಕೇತವಾಗಿದೆ. ಇದಕ್ಕಾಗಿ ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ” ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದರು. ಆಗ ಆತುರಾತುರವಾಗಿ ವೇದಿಕೆಗೆ ಮತ್ತೊಂದು ಕುರ್ಚಿ ಹಾಕಿ ದೇವೇಂದ್ರ ಫಡ್ನವೀಸ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...