Homeಅಂಕಣಗಳುಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

ಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

- Advertisement -
- Advertisement -

ಅದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿನ ಕಾರಂಚೇಡು ಎಂಬ ಊರು. ಈ ಊರಿನ ಹೆಸರು ಕೇಳಿದರೆ ಸಾಕು ಇಡೀ ಆಂಧ್ರಪ್ರದೇಶದ ದಲಿತರು ಹಾಗೂ ಮೇಲ್ಜಾತಿ ಭೂಮಾಲೀಕರು ಇಬ್ಬರೂ ಬೆಚ್ಚಿ ಬೀಳುತ್ತಾರೆ. ಅದಕ್ಕೆ ಕಾರಣ ಜುಲೈ 17, 1985ರಲ್ಲಿ ಕಾರಂಚೇಡುವಿನಲ್ಲಿ ನಡೆದಿದ್ದ ಭೀಕರ ನರಮೇಧ ಹಾಗೂ ನಂತರದ ಬೆಳವಣಿಗೆಗಳು.

ಈ ಘಟನೆ ನಡೆದು 23 ವರ್ಷಗಳ ನಂತರ ಸುಪ್ರೀಂಕೋರ್ಟ್ ಈ ನರಮೇಧಕ್ಕೆ ಕಾರಣರಾದ ಹಲವರಲ್ಲಿ ಒಬ್ಬನಿಗೆ ಜೀವಾವಧಿ ಶಿಕ್ಷೆ ನೀಡಿ, ಉಳಿದಂತೆ 30 ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತು. ದಲಿತ ಭಾರತದ ಇತಿಹಾಸದಲ್ಲಿ ಕಾರಂಚೇಡು ಅಚ್ಚಳಿಯದಂತೆ ನಿಲ್ಲಲು ಮುಖ್ಯ ಕಾರಣವೇ ಕನಿಷ್ಟಪಕ್ಷ ದಲಿತರನ್ನು ಕೊಂದ ಕೆಲವರಿಗಾದರೂ ಶಿಕ್ಷೆಯಾದದ್ದಾಗಿದೆ.

1960ರ ದಶಕದಲ್ಲಿ ಆಂಧ್ರಪ್ರದೇಶದ ಪ್ರಮುಖ ರೈತಾಪಿ ಜಾತಿಯವರಾದ ಕಮ್ಮಾಗಳು ಕೃಷಿ ಗೇಣಿದಾರರಾಗಿದ್ದರು. ಜೊತೆಗೆ ಕೃಷಿ ಕೂಲಿಗಳೂ ಆಗಿದ್ದರು. ಈ ಕಾರಣದಿಂದ ಸಹಜವಾಗಿ ಕೂಲಿಗಳ ಪರವಾಗಿ ವರ್ಗ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಮ್ಯುನಿಸ್ಟ್ ಪಕ್ಷದೊಂದಿಗೆ ಈ ಕಮ್ಮಾಗಳು ಗುರುತಿಸಿಕೊಂಡಿದ್ದರು. ಮತ್ತೊಂದು ಕಡೆ ರೆಡ್ಡಿಗಳು ಆಡಳಿತ ಪಕ್ಷವಾದ ಕಾಂಗ್ರೆಸ್ಸಿನೊಂದಿಗೆ ಗುರುತಿಸಿಕೊಂಡಿದ್ದರು. ಇಲ್ಲಿನ ಪ್ರಮುಖ ದಲಿತ ಜಾತಿಗಳಾದ ಮಾಲ ಮತ್ತು ಮಾದಿಗರೂ ಸಹ ರಾಜಕೀಯವಾಗಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ಸಿನಲ್ಲಿ ಹಂಚಿಹೋಗಿದ್ದರು. ಆದರೆ 70-80ರ ದಶಕದ ಭೂಸುಧಾರಣೆ ಹಾಗೂ ಇನ್ನಿತರ ಆರ್ಥಿಕ ಪಲ್ಲಟಗಳ ಕಾರಣವಾಗಿ ಕಮ್ಮಾ ಜಾತಿಗಳ ಕೈಗೆ ಭೂಮಿ ದಕ್ಕಿತು. ಸದಾ ಮೇಲ್ಮುಖ ಚಲನೆಗೆ ಹಾತೊರೆಯುತ್ತಿದ್ದ ಕಮ್ಮಾ ಕೃಷಿಕರು ಕೊನೆಗೂ ಜಮೀನುಗಳನ್ನು ಪಡೆದುಕೊಂಡರು. ಇದು ಅವರನ್ನು ಭೂಮಾಲೀಕ ಜಾತಿಯನ್ನಾಗಿ ಮಾಡಿತು. ಇದೇ ಕಾರಣದಿಂದ 80ರ ದಶಕದಲ್ಲಿ ಪ್ರಮುಖವಾಗಿ ಕಮ್ಮಾ ಮುಂಚೂಣಿ ನಾಯಕರೆಲ್ಲ ಸೇರಿ ’ತೆಲುಗು ದೇಶಂ’ ಪಕ್ಷವನ್ನು ಸ್ಥಾಪಿಸುವಂತಾಯಿತು. ತೆಲುಗು ನಾಡಿನ ಪ್ರಖ್ಯಾತ ನಟ ಎನ್.ಟಿ.ರಾಮರಾವ್ ಇದರ ಮುಖ್ಯಸ್ಥ. ಇವರೇ 1983ರಲ್ಲಿ ಮುಖ್ಯಮಂತ್ರಿಯೂ ಆದರು. ಈ ರಾಮರಾವ್‌ರವರ ಮಗಳಿಗೆ ಕಾರಂಚೇಡುವಿನ ಕಮ್ಮಾ ಭೂಮಾಲೀಕ ದಗ್ಗುಬಾಟಿ ಚೆಂಚುರಾಮಯ್ಯನ ಮಗ ದಗ್ಗುಬಾಟಿ ಚೆಂಚು ವೆಂಕಟೇಶ್ವರರಾವ್ ಜೊತೆ ವಿವಾಹವಾದಾಗಿನಿಂದ ಕಾರಂಚೇಡುವಿನ ಕಮ್ಮಾ ಭೂಮಾಲೀಕರ ಕಾಲುಗಳು ನೆಲದ ಮೇಲೆ ನಿಲ್ಲಲಿಲ್ಲ. ಇದರ ಜೊತೆಗೆ ದಗ್ಗುಬಾಟಿ ಚೆಂಚು ವೆಂಕಟೇಶ್ವರ ರಾವ್ 1983ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿಬಿಟ್ಟ. ಇದರಿಂದ ಅಲ್ಲಿನ ಕಮ್ಮಾ ಭೂಮಾಲೀಕರ ಆಟಾಟೋಪಗಳಿಗೆ ತಡೆ ಇಲ್ಲದಂತಾಯಿತು. ಅವರ ಹೊಲಗಳಲ್ಲಿ ಕೃಷಿಕೂಲಿಗಳಾಗಿ ಕೆಲಸ ಮಾಡುತ್ತಿದ್ದ ದಲಿತರಿಗೆ ಅದರಲ್ಲೂ ಮಾದಿಗರಿಗೆ ಕಿರುಕುಳ ನೀಡಲು ಆರಂಭಿಸಿದರು. ಕೂಲಿಯನ್ನೂ ಕಡಿಮೆ ಮಾಡಿದರು. ಇದರ ಜೊತೆಗೆ ಆ ಕಾಲದ ಹಿಂದಿನ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದ್ದನ್ನು ಕಂಡಿದ್ದ ಕಮ್ಮಾ ಭೂಮಾಲೀಕರು ಚೆಂಚುರಾಮಯ್ಯನ ಮುಖಂಡತ್ವದಲ್ಲಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಆ ದಿನ ಬಂದೇಬಿಟ್ಟಿತು.

ಅಂದು ಜುಲೈ 16, 1985ರ ಸಂಜೆಯ ಸಮಯ. ಕಾರಂಚೇಡುವಿನ ದಲಿತರ ನೀರಿನ ತೊಟ್ಟಿಯ ಬಳಿ ಕಮ್ಮಾ ಜಾತಿಯ ರೈತನೊಬ್ಬ ತನ್ನ ಎಮ್ಮೆಗಳನ್ನು ತೊಳೆಯುತ್ತಿದ್ದ. ಆ ಕೊಳಕು ನೀರು ನೇರವಾಗಿ ದಲಿತರ ನೀರಿನ ತೊಟ್ಟಿಗೆ ಹರಿಯುತ್ತಿತ್ತು. ಇದನ್ನು ಕಂಡ ದಲಿತನೊಬ್ಬ ಪ್ರಶ್ನಿಸಿದನು. ಇದನ್ನೇ ನೆಪ ಮಾಡಿಕೊಂಡು ಕಮ್ಮಾ ರೈತ ಕೈಲಿದ್ದ ಹಗ್ಗದಿಂದಲೇ ದಲಿತ ಯುವಕನನ್ನು ಹೊಡೆಯಲು ಆರಂಭಿಸಿದನು. ಇದನ್ನು ಕಂಡ ದಲಿತೆ ಮುನ್ನಂಗಿ ಸುವಾರ್ತ ತನ್ನ ಕೈಯಲ್ಲಿದ್ದ ಬಿಂದಿಗೆಯಿಂದಲೇ ಆ ಕಮ್ಮಾ ರೈತನನ್ನು ಹೊಡೆದು ಓಡಿಸಿದಳು. ಆ ಕಮ್ಮಾ ರೈತನೊಬ್ಬನಿಗಾದ ಶಾಸ್ತಿಯನ್ನು ಇಡೀ ಕಮ್ಮಾ ಜಾತಿ ತನಗಾದ ಅವಮಾನವೆಂದು ಭಾವಿಸಿತು. ಈ ಹಿಂದಿನ ಚುನಾವಣೆಯ ಘಟನೆಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದವರಿಗೆ ತತ್‌ಕ್ಷಣದ ಕಾರಣ ದೊರಕಿತು.

ನೀರಿನ ತೊಟ್ಟಿಯ ಬಳಿ ನಡೆದಿದ್ದ ಗಲಾಟೆ ಸಂಬಂಧಿಸಿ ರಾಜಿ ಸಂಧಾನ ಮಾಡಿಕೊಳ್ಳೋಣವೆಂದು ದಲಿತ ಹಿರಿಯರನ್ನು ಕಮ್ಮಾ ಭೂಮಾಲೀಕರು ಒಪ್ಪಿಸಿದರು. ಜುಲೈ 17ರಂದು ಎರಡೂ ಕಡೆಯವರು ಪಂಚಾಯಿತಿ ಕಟ್ಟೆಯ ಬಳಿ ನೆರೆದರು. ಇದೇ ಸಮಯಕ್ಕೆ ಕಾಯುತ್ತಿದ್ದ ಕಮ್ಮಾ ಭೂಮಾಲೀಕರ ತಂಡ ಹಾಗೂ ಸುತ್ತಮುತ್ತಲಿದ್ದ ಅವರ ಸಂಬಂಧಿಕರು ಕತ್ತಿ, ಪಿಕಾಸಿ, ದೊಣ್ಣೆ, ಚೂರಿ, ಕುಡುಗೋಲುಗಳನ್ನು ಹಿಡಿದು ದಲಿತರ ಮೇಲೆರಗಿದರು. ನಿರಾಯುಧರಾದ ದಲಿತರು ಜೀವ ಉಳಿಸಿಕೊಳ್ಳಲು ಹೊಲಗದ್ದೆಗಳ ಹಾದಿಯನ್ನು ಹಿಡಿದರು. ಆದರೆ ಅವರನ್ನು ಬಿಡದಂತೆ ಹಿಂಬಾಲಿಸಿದ ಕಮ್ಮಾ ಸಮುದಾಯದ ಜಾತಿವಾದಿ ಕ್ರೂರಿಗಳು ಬೈಕು, ಟ್ರ್ಯಾಕ್ಟರ್, ಸೈಕಲ್ಲುಗಳ ಮೇಲೆ ಹತ್ತಿ ಬೆನ್ನತ್ತಿ ಒಬ್ಬೊಬ್ಬರನ್ನು ಪತ್ತೆ ಹಚ್ಚಿ ಕೊಲ್ಲುತ್ತಾ ಹೋದರು. ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡಿದರು. ಈ ನರಮೇಧದಲ್ಲಿ ಕಮ್ಮಾಗಳು 6 ಜನ ಮಾದಿಗ ಯುವಕರನ್ನು ಕೊಂದುಹಾಕಿದರು. ಮೂವರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದರು. ಗರ್ಭಿಣಿಯರನ್ನೂ ಬಿಡದೆ ದೊಣ್ಣೆಯಿಂದ ಥಳಿಸಿದರು. ಹಲವರು ಪ್ರಾಣವನ್ನು ಉಳಿಸಿಕೊಳ್ಳಲು ಪಕ್ಕದ ಚಿರಾಲ ಪಟ್ಟಣಕ್ಕೆ ಓಡಿಹೋದರು. ಅಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಯುವಕರೂ ತೀರಿಕೊಂಡರು. ಈ ಸಮಯದಲ್ಲಿ ದಲಿತರನ್ನು ಕಾಪಾಡಿದ್ದು ಚಿರಾಲ ಪಟ್ಟಣದ ಒಂದು ಕ್ರೈಸ್ತ ಚರ್ಚ್. ವಾರವಿಡೀ ಅನ್ನವಿಟ್ಟು ಅವರನ್ನು ಪ್ರಾಣ ಭಯದಿಂದ ದೂರ ಮಾಡಿತು. ಆದರೆ ಈ ವಿಷಯ ತಿಳಿದ ಪೊಲೀಸರು ಚರ್ಚಿನಲ್ಲಿ ಪ್ರಾಣ ಭಯದಿಂದ ಬದುಕುತ್ತಿದ್ದ ದಲಿತರನ್ನೇ ಬಂಧಿಸಿತು. ಅಷ್ಟೊತ್ತಿಗೆ ಈ ನರಮೇಧ ಇಡೀ ಭಾರತದಾದ್ಯಂತ ಮನೆಮಾತಾಗಿತ್ತು. ಆಂಧ್ರಪ್ರದೇಶದ ದಕ್ಷ ಹೋರಾಟಗಾರರಾದ ಬೊಜ್ಜಾ ತಾರಕಂ ಮತ್ತು ಕಟ್ಟಿ ಪದ್ಮರಾವ್ ಇಬ್ಬರೂ ಸ್ಥಳೀಯವಾಗಿ ಎಚ್ಚೆತ್ತ ದಲಿತರನ್ನು ಸಂಘಟಿಸಿ ಕಾರಂಚೇಡು ದಲಿತರಿಗೆ ನ್ಯಾಯ ಕೊಡಿಸಲೋಸುಗ ಆಂಧ್ರಪ್ರದೇಶ ದಲಿತ ಮಹಾಸಭಾ ಸಂಘಟನೆ ಕಟ್ಟಿದರು. ಅದರ ಮೂಲಕ ದಲಿತರಿಗೆ ಧೈರ್ಯ ತುಂಬಲು ನೂರಾರು ಕಾರ್ಯಕ್ರಮ ರೂಪಿಸಿದರು. ಪ್ರಕಾಶಂ ಜಿಲ್ಲೆಯಲ್ಲಿ ಜಾಥಾ ಹಮ್ಮಿಕೊಂಡರು.

ಈ ಮೇಲಿನ ಹೋರಾಟದಿಂದಾಗಿ ಸೆಷನ್ ನ್ಯಾಯಾಲಯವು 159 ಕಮ್ಮಾ ಜಾತಿಯ ಜಾತಿವಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆದರೆ ಪ್ರಮುಖ ಸಾಕ್ಷಿಯಾಗಿದ್ದ ದಲಿತ ಮಹಿಳೆಯ ಕೊಲೆಯೊಡನೆ ಪ್ರಕರಣ ಬೇರೆಯದೇ ಜಾಡು ಹಿಡಿಯಿತು. ಆಂಧ್ರಪ್ರದೇಶ ಹೈಕೋರ್ಟ್ ಅನುಮಾನಾಸ್ಪದ ವಿಚಾರಣೆ ಎಂಬ ನೆಪವೊಡ್ಡಿ ಅಪರಾಧಿಗಳಿಗೆ ಶಿಕ್ಷೆಯನ್ನು ತಡೆಹಿಡಿಯಿತು. ಆದರೆ ಬೊಜ್ಜಾ ತಾರಕಂರವರ ಸತತ ಪ್ರಯತ್ನದಿಂದ 2008ರಲ್ಲಿ ಸುಪ್ರೀಂ ಕೋರ್ಟ್, ಪ್ರಕರಣದ ಆರೋಪಿ ಒಬ್ಬನಿಗೆ ಜೀವಾವಧಿ ಶಿಕ್ಷೆಯನ್ನೂ ಉಳಿದ 30 ಮಂದಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಉಳಿದವರನ್ನು ಖುಲಾಸೆಗೊಳಿಸಿತು. ಈ ಪ್ರಕರಣದ ಮುಖ್ಯ ರೂವಾರಿ ಚೆಂಚುರಾಮಯ್ಯ ನ್ಯಾಯಾಲಯದ ಕಣ್ಣುಗಳಿಂದ ತಪ್ಪಿಸಿಕೊಂಡನು. ಆದರೆ ಪೀಪಲ್ಸ್ ವಾರ್ ತಂಡವು ಕಾರಂಚೇಡುವಿನ ಮನೆಗೆ ನುಗ್ಗಿ ಚೆಂಚುರಾಮಯ್ಯನನ್ನು ಹಾಡುಹಗಲೇ ಕೊಂದುಹಾಕಿತು. ಈ ನಡೆಯನ್ನು ದಲಿತ ಮಹಾಸಭಾ ಖಂಡಿಸಿತು. ನಿಜವೆಂದರೆ ಅಲ್ಲಿಂದ ಇಲ್ಲಿಯವರೆಗೂ ಪ್ರಕಾಶಂ ಜಿಲ್ಲೆಯಲ್ಲಿ ಇಂತಹ ಭೀಕರ ಘಟನೆ ಮತ್ತೊಂದು ನಡೆದಿಲ್ಲ.

ಆದರೂ ಇಂದಿಗೂ ಕಾರಂಚೇಡು ಗ್ರಾಮವನ್ನು ತೊರೆದು ಬಂದಿರುವ ಮಾದಿಗ ಕುಟುಂಬಗಳು ಮತ್ತೆ ಅಲ್ಲಿಗೆ ಹೋಗುವ ಮನಸ್ಸು ಮಾಡಿಲ್ಲವೆಂದರೆ ಅವರ ಮನಸ್ಸಲ್ಲಿ ಆ ಭೀಕರ ಹತ್ಯಾಕಾಂಡ ಮೂಡಿಸಿರುವ ಭಯವನ್ನು
ಅಂದಾಜಿಸಬಹುದಾಗಿದೆ. ಕಾರಂಚೇಡುವಿನಿಂದ ಓಡಿಬಂದ ಸುಮಾರು 500ಕ್ಕೂ ಹೆಚ್ಚು ಮಾದಿಗರು ಇಂದಿಗೂ ಪ್ರಕಾಶಂ ಜಿಲ್ಲೆಯಾದ್ಯಂತ ಅಲ್ಲಲ್ಲಿ ಬದುಕುಕಟ್ಟಿಕೊಂಡು ಜೀವಿಸುತ್ತಿದ್ದಾರೆ.

ಒಟ್ಟಾರೆ ಜಾತಿ ಅಸಮಾನತೆ ಹಾಗೂ ಜಾತಿಯ ದರ್ಪ ಶೂದ್ರ ಜಾತಿಗಳನ್ನೂ ಬಿಟ್ಟಿಲ್ಲ. ಮೇಲ್ಜಾತಿಗಳು ಶೂದ್ರರನ್ನು ಹಿಂದೆ ಹೇಗೆ ನಡೆಸಿಕೊಂಡು ಶೋಷಿಸಿದವೋ ಹಾಗೆಯೇ ಇಂದು ಶೂದ್ರ ಜಾತಿಗಳು ದಲಿತರನ್ನು ನಡೆಸಿಕೊಳ್ಳುತ್ತಿವೆ. ಜಾತಿ ವೈರಸ್ ಭಾರತೀಯರನ್ನೇ ಬಲಿ ತೆಗೆದುಕೊಂಡಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೆಲವೇ ಕೆಲವರು ನಡೆಸುವ ಇಂಥಾ ಕೃತ್ಯಗಳಿಗೆ ಇಡೀ ಶೂದ್ರರೇ ಹೀಗೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಸುಳ್ಳು ದಲಿತ ದೌರ್ಜನ್ಯ ಕೇಸುಗಳಲ್ಲಿ ಅತೀ ಹೆಚ್ಚು ಕಷ್ಟನಷ್ಟಗಳನ್ನು ಅನುಭವಿಸಿದವರು ನಾವು ಶೂದ್ರರೇ…

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...