ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿಸುವುದಾಗಿ ಹೇಳಿ ಬಿಜೆಪಿ ಶಾಸಕರೊಬ್ಬರಿಗೆ 100 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ್ದ ನಾಲ್ವರ ತಂಡವನ್ನು ಸುಲಿಗೆ ನಿಗ್ರಹ ದಳ ಬಂಧಿಸಿದೆ. ಆರೋಪಿಗಳನ್ನು ರಿಯಾಜ್ ಶೇಖ್ (41), ಯೋಗೇಶ್ ಕುಲಕರ್ಣಿ (57), ಸಾಗರ್ ಸಂಗ್ವಾಯ್ (37) ಮತ್ತು ಜಾಫರ್ ಅಹ್ಮದ್ ರಶೀದ್ ಅಹ್ಮದ್ ಉಸ್ಮಾನಿ (53) ಎಂದು ಗುರುತಿಸಲಾಗಿದೆ.
ದೌಂಡ್ ಕ್ಷೇತ್ರದ ಬಿಜೆಪಿ ಶಾಸಕ ರಾಹುಲ್ ಕುಲ್ ಅವರು, ತಮ್ಮ ಆಪ್ತ ಸಹಾಯಕನಿಗೆ ಜುಲೈ 16 ರಂದು ತನ್ನನ್ನು ರಿಯಾಜ್ ಶೇಖ್ ಎಂದು ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾರೆ ಎಂದು ಪೊಲೀಸ್ ದೂರು ನೀಡಿದ್ದರು. ಅವರು ದೂರು ನೀಡಿದ ನಂತರ ಈ ಬಂಧನಗಳನ್ನು ಮಾಡಲಾಗಿದೆ. ಸಚಿವ ಸ್ಥಾನ ನೀಡುವ ಬಗ್ಗೆಗಿನ ಪ್ರಸ್ತಾಪವನ್ನು ಚರ್ಚಿಸಲು ಕುಲ್ ಅವರನ್ನು ಭೇಟಿಯಾಗಲು ಬಯಸುವುದಾಗಿ ರಿಯಾಜ್ ಹೇಳಿದ್ದಾರೆ ಎಂದು ಅವರು ದೂರಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದರ ಬೆನ್ನಲ್ಲೇ ಮುಂಬೈನ ಹೋಟೆಲ್‌ವೊಂದರಲ್ಲಿ ಶಾಸಕ ರಾಹುಲ್ ಕುಲ್ ಆರೋಪಿಯನ್ನು ಭೇಟಿಯಾಗಿದ್ದಾರೆ. ಅಲ್ಲಿ ಆರೋಪಿಯು, ಸಚಿವ ಸ್ಥಾನ ನೀಡಲು ಹಿರಿಯ ರಾಜಕಾರಣಿಯೊಬ್ಬರು ಕೆಲಸ ಮಾಡಲಿದ್ದು, ಅದಕ್ಕಾಗಿ 100 ಕೋಟಿ ರೂ. ನೀಡುವಂತೆ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಆಟೋ ಡ್ರೈವರ್ ಆಗಿದ್ದ ಶಿಂಧೆ ಸಿಎಂ ಕುರ್ಚಿಯವರೆಗೆ…
ನಂತರ ಮಾತುಕತೆ ನಡೆಸಿದ ಶಾಸಕ ರಾಹುಲ್ ಅಂತಿಮವಾಗಿ 100 ಕೋಟಿಗಳ ಬದಲಿಗೆ 90 ಕೋಟಿ ರೂ.ಗಳು ಪಾವತಿಸುವುದಾಗಿ ಆರೋಪಿಗಳೊಂದಿಗೆ ಒಪ್ಪಿಕೊಂಡಿದ್ದಾರೆ. ಆದರೆ ಆರೋಪಿ ರಿಯಾಜ್ ಮುಂಗಡವಾಗಿ 20%ದಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ವೇಳೆ ಶಾಸಕ ಕೂಡ 20% ಹಣ ಮುಂಗಡವಾಗಿ ಕೊಡಲು ಒಪ್ಪಿಕೊಂಡು ಮತ್ತೊಮ್ಮೆ ಭೇಟಿಯಾಗುವುದಾಗಿ ಹೇಳಿದ್ದಾರೆ.
ಈ ಮಧ್ಯೆ ರಾಹುಲ್ ಕುಲ್ ಅವರು ಘಟನೆಯ ಬಗ್ಗೆ ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ತನಿಖೆಯ ಮೇಲ್ವಿಚಾರಣೆ ನಡೆಸಿ, ಪ್ರಕರಣವನ್ನು ನಗರ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದರು.
ಬಳಿಕ ನಗರ ಅಪರಾಧ ವಿಭಾಗದ ಪೊಲೀಸರು ಆರೋಪಿಗೆ ಬಲೆ ಬೀಸಿ, 18 ಕೋಟಿ ಮುಂಗಡವಾಗಿ ವಸೂಲಿ ಮಾಡಲು ಶಾಸಕರನ್ನು ಭೇಟಿ ಮಾಡಲು ಹೋಟೆಲ್‌ಗೆ ಬಂದಿದ್ದ ಆರೋಪಿ ಮತ್ತು ಆತನ ಸಹಚರನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಅವರನ್ನು ವಿಚಾರಣೆಗಾಗಿ ಪೊಲೀಸ್ ಪ್ರಧಾನ ಕಚೇರಿಗೆ ಕರೆತರಲಾಗಿದೆ. ನಾಲ್ವರನ್ನು ಜುಲೈ 26ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಗಳಿಂದ ಮೂರು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಂದು ಅಮಿತ್ ಶಾ ಕೊಟ್ಟ ಮಾತು ಉಳಿಸಿಕೊಂಡಿದ್ದರೆ, ಇಂದು ಮಹಾರಾಷ್ಟ್ರ ಬಿಜೆಪಿ ಸಿಎಂ ಹೊಂದಿರುತ್ತಿತ್ತು: ಉದ್ಧವ್ ಠಾಕ್ರೆ
“ಜಾಫರ್ ಉಸ್ಮಾನಿ ದೆಹಲಿಯಲ್ಲಿ ಯಾರೊಂದಿಗೊ ಸಂಪರ್ಕದಲ್ಲಿರುವ ಗ್ಯಾಂಗ್‌ನ ಕಿಂಗ್‌ಪಿನ್ ಎಂದು ತೋರುತ್ತದೆ” ಎಂದು ಪೊಲೀಸರು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಹೇಳಿದೆ. ಪ್ರಕರಣದಲ್ಲಿ ದೆಹಲಿ ಮೂಲದ ವ್ಯಕ್ತಿಯ ಪಾತ್ರವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಸುದ್ಧಿ ಸಂಸ್ಥೆ ಉಲ್ಲೇಖಿಸಿದೆ.


