ಸಾಹಿತ್ಯ ಬೆಳವಣಿಗೆಯ ವಿವಿಧ ಕಾಲಘಟ್ಟಗಳು ನಾಡಿನ ಚರಿತ್ರೆಯಿಂದ ಪ್ರಭಾವಗೊಂಡಿವೆ ಮತ್ತು ಸಾಹಿತ್ಯ ಕೂಡ ನಾಡಿನ ರಾಜಕೀಯ ಹಾಗೂ ಸಾಮಾಜಿಕ ಚರಿತ್ರೆಗೆ ದಿಕ್ಕು ನೀಡಲು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸಿದೆ. ಈ ವಿವಿಧ ಕಾಲಘಟ್ಟಗಳಲ್ಲಿ ಪ್ರಧಾನವಾಗಿ ಮುನ್ನಲೆಗೆ ಬರುವ ಪ್ರಶ್ನೆಗಳು ಬದಲಾಗುವುದು ಸಹಜವೇ. ಸ್ವಾತಂತ್ರ್ಯದ ಹೊಸತರಲ್ಲಿ, ಭಾರತ, ರಾಜ್ಯಗಳ ಒಕ್ಕೂಟವಾಗಿ ಹೊರಹೊಮ್ಮುತ್ತಿದ್ದ ಸಮಯದಲ್ಲಿ ರಾಷ್ಟ್ರೀಯತೆಯ ಪ್ರಭಾವ, ವಿವಿಧ ಜಾತಿ, ಧರ್ಮ ಮತ್ತು ಭಾಷಿಕ ಸಮುದಾಯಗಳನ್ನು ಬೆಸೆದು ಆರೋಗ್ಯಕರ ನಾಗರಿಕ ಸಮಾಜವನ್ನು ಕಟ್ಟಿಕೊಳ್ಳುವ ದಾರಿಯಲ್ಲಿ ಇದ್ದ ತಿಳಿವಳಿಕೆ ಮತ್ತು ಪ್ರಶ್ನೆಗಳು ಇವತ್ತಿನ ದಿನಕ್ಕೆ ಹೋಲಿಸಿದರೆ ಭಿನ್ನವಾದವು. ಉದಾಹರಣೆಗೆ ಇಂದು ಅದೇ ರಾಷ್ಟ್ರೀಯತೆ ಅಪಾಯಕಾರಿಯಾಗಿ ಬೆಳೆದಿದೆ. ಒಕ್ಕೂಟ ತತ್ವವನ್ನು ಧಿಕ್ಕರಿಸುವ ಶಕ್ತಿಗಳು ಇಂದು ಬೆಳೆದು ದೈತ್ಯವಾಗಿವೆ. ಅಂದು ಆಗತಾನೆ ರೂಪುಗೊಂಡಿದ್ದ ಸಂವಿಧಾನ ನಮಗೆ ನೀಡಿದ್ದ ತಿಳಿವಳಿಕೆ ಕೂಡ ಪ್ರಾಥಮಿಕ ಹಂತದಲ್ಲಿತ್ತು. ಅಂದು ಘನತೆ ಮತ್ತು ಪ್ರಾತಿನಿಧ್ಯದ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳುವಾಗ ಹುಟ್ಟಿದ್ದ ಸಂವಾದ ಅಂಬೆಗಾಲಿಡುವ ಮಗುವಿನ ರೀತಿಯದ್ದಾಗಿತ್ತು. ಈಗ ಸ್ವಾತಂತ್ರ್ಯ ಬಂದು 75ನೇ ಅಮೃತ ಮಹೋತ್ಸವವನ್ನು ಆಚರಿಸುವ ಸಮಯಕ್ಕೆ ಸಾಕಷ್ಟು ನೀರು ಹರಿದಿದೆ.
ಸಂವಿಧಾನ ನೀಡಿರುವ ತಿಳಿವಳಿಕೆ ಇಂದು ಬೃಹತ್ತಾಗಿ ಬೆಳೆದಿದೆ. ಈ ದೇಶದ್ದಷ್ಟೇ ಅಲ್ಲದೆ ವಿವಿಧ ದೇಶಗಳ ಮತ್ತು ಸಮುದಾಯಗಳ ಜ್ಞಾನ ಹರಿದು ಬಂದು, ಅದರಿಂದ ಹೊಸ ಚಿಂತನೆಗಳು ಹುಟ್ಟಿವೆ ಮತ್ತು ಅದರೆ ಜೊತೆಗೆ ಹೊಸ ಪ್ರಶ್ನೆಗಳು ಕೂಡ. ಪ್ರತಿ ಕಾಲಘಟ್ಟದಲ್ಲಿಯೂ ಸಾಹಿತ್ಯ, ಕಲೆ ಮತ್ತು ಅದರಲ್ಲಿ ತೊಡಗಿಕೊಂಡಿರುವವರು ಆ ಪ್ರಶ್ನೆಗಳಿಗೆ ಮುಖಾಮುಖಿಯಾಗಬೇಕಿರುವುದು ಅನಿವಾರ್ಯ.
ಕಳೆದ ವಾರದ ಕೊನೆಯಲ್ಲಿ ’ನುಡಿ ಸಡಗರ’ ಎಂಬ ಸಾಹಿತ್ಯ ಓದಿನ ಕಾರ್ಯಕ್ರಮದ ಪೋಸ್ಟರ್ ಒಂದು ಹರಿದಾಡಿತು. ಆ ಕಾರ್ಯಕ್ರಮದಲ್ಲಿದ್ದ 14 ಜನರಲ್ಲಿ ಬಹುತೇಕ ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದ್ದ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಆಕ್ರೋಶಕ್ಕೆ ಕಾರಣವಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಮೂಡಿದ ಭಾರಿ ಟೀಕೆಯ ಕಾರಣದಿಂದ ಕಾರ್ಯಕ್ರಮ ರದ್ದಾಗಿದೆ ಅಥವಾ ಮುಂದೂಡಲಾಗಿದೆ ಎಂಬ ಸುಳಿವು ಸಿಕ್ಕಿದೆ. ಆದರೆ ಅದರ ನಂತರ ಹಲವರು ಈ ಕಾರ್ಯಕ್ರಮದ ಆಯೋಜನೆಲ್ಲಿ ಪ್ರಾತಿನಿಧ್ಯ ಕಾಣೆಯಾಗಿದ್ದರ ಬಗ್ಗೆ ಬಂದ ಟೀಕೆಯನ್ನು ವಿರೋಧಿಸಲು ಪ್ರಾರಂಭಿಸಿದರು. ಆ ಸಂಪನ್ಮೂಲ ಸಾಹಿತಿಗಳು ಆ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ, ಅದನ್ನು ’ದ್ವೇಷಿಸಬೇಕೇ’ ಎಂಬಂತಹ ಪ್ರಶ್ನೆಗಳನ್ನು ತೂರಿಬಿಟ್ಟರು. ಅಲ್ಲಿದ್ದದ್ದು ದ್ವೇಷವಲ್ಲದಿದ್ದರೂ ಅವರಿಗೆ ಹಾಗೆ ಕಂಡಿತ್ತು! ಅಲ್ಲಿದ್ದ ಕವಿ-ಸಾಹಿತಿಗಳಲ್ಲಿ ಬಹುತೇಕರು ವೈಯಕ್ತಿಕವಾಗಿ ಜಾತಿವಾದಿಗಳಲ್ಲದೆ ಇರಬಹುದು ನಿಜ. ಆದರೆ ಜಗತ್ತಿನಲ್ಲಿ ಇಂದು ಎಚ್ಚೆತ್ತ ಪ್ರಜ್ಞೆ ವೈಯಕ್ತಿಕ ನೆಲೆಯಲ್ಲಿ ಮಾತ್ರವಲ್ಲದೆ, ಸಾಮುದಾಯಿಕವಾಗಿ, ನಾಗರಿಕ ಸಮಾಜದ ದೃಷ್ಟಿಯಿಂದ ಪ್ರಿವಿಲೆಜ್‌ಗಳನ್ನು ಪ್ರಶ್ನಿಸುವ, ಪ್ರಾತಿನಿಧ್ಯವನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ದನಿ ಎತ್ತಲು ನೆರವಾಗುತ್ತಿದೆ. ಆ ನೆಲೆಯಲ್ಲಿ ಬರುವ ಪ್ರಶ್ನೆಗಳನ್ನು ’ದ್ವೇಷ’, ’ಐಡೆಂಟಿಟಿ ರಾಜಕೀಯ’ ಎಂದು ತಳ್ಳಿಹಾಕುವುದು ಸೂಕ್ತವಲ್ಲ.

ಸಾಹಿತಿ, ಕಲಾವಿದ, ಪತ್ರಕರ್ತ, ಬುದ್ಧಿಜೀವಿಯ ಜವಾಬ್ದಾರಿ ಈ ಪ್ರಶ್ನೆಗಳನ್ನು ಒಳಗೊಳ್ಳುವುದರಲ್ಲಿ ಇರುತ್ತದೆ. ತಮ್ಮ ಪೂರ್ವಜರು ಪ್ರತಿನಿಧಿಸುತ್ತಿದ್ದ ಶೋಷಣೆಯ ಪರಂಪರೆಯಿಂದ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ಬಿಡಿಸಿಕೊಳ್ಳುವ ಹಾದಿಯಲ್ಲಿ ಒಂದು ಮಟ್ಟದ ಚಲನೆ ಕಂಡಾಗಲೂ, ಅದು ತಳಸಮುದಾಯದವರಗೆ, ಶೋಷಿತರಿಗೆ ಹೆಚ್ಚುಗಾರಿಕೆಯಾಗಿ ಕಾಣಬೇಕಿಲ್ಲ. ಅಷ್ಟು ಮಾತ್ರ ಸಾಲದೆಂದು ಇನ್ನಷ್ಟು ಪ್ರಶ್ನೆಗಳು, ಅನುಮಾನಗಳು ತಮ್ಮೆಡೆಗೆ ತೂರಿ ಬಂದಾಗ ಮೈಮರೆತವರು, ತಾನು ಇಷ್ಟು ಚಲನೆ ಕಂಡಿದ್ದೇ ದೊಡ್ಡದು ಎಂದುಕೊಂಡವರು ವೈರುಧ್ಯದಲ್ಲಿ ಮುಳುಗುವುದು ಸಹಜ. ಆ ವೈರುಧ್ಯವನ್ನು ಎದುರುಗೊಂಡು ಇನ್ನೂ ಸುಧಾರಿಸಿಕೊಳ್ಳುವ ಹಾದಿಯನ್ನು ತುಳಿಯುವುದು ಈ ದಿನಕ್ಕೆ ಮುಖ್ಯವಾದೀತು. ಎಲ್ಲಾ ರಂಗಗಳಲ್ಲೂ ಪಾರಂಪರಿಕವಾಗಿ ಹೆಚ್ಚೆಚ್ಚು ಪ್ರಿವಿಲೆಜ್ ಹೊಂದಿದ್ದ ಸಮುದಾಯದವರೇ ದೊಡ್ಡ ಮಟ್ಟದ ಪ್ರಾತಿನಧ್ಯ ಪಡೆದಿರುವಾಗ, ಅದನ್ನು ಬದಲಾಯಿಸಿ ಇನ್ನೂ ಹೆಚ್ಚಿನ ಸಮಾನತೆಯೆಡೆಗೆ ಸಾಗೋಣ ಎಂಬ ಕೂಗು ಜಗತ್ತಿನಾದ್ಯಂತ ಎದ್ದಿರುವಂಥದ್ದು. ಇದು ಭಾರತದ ಜನಮಾನಸಕ್ಕೆ ತುಸು ತಡವಾಗಿ ಬಂದಿರಬಹುದು. ಹಾಲಿವುಡ್‌ನಲ್ಲಿ ಬ್ಲಾಕ್ ಪ್ರಾತಿನಿಧ್ಯ ಏಕಿಲ್ಲ ಎಂಬುದರಿಂದ ಹಿಡಿದು, ಸುಪ್ರೀಂ ಕೋರ್ಟ್‌ನಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಹೆಚ್ಚು ನ್ಯಾಯಾಧೀಶರಾಗಿಲ್ಲ ಏಕೆ ಎಂಬಂತಹ ಪ್ರಶ್ನೆಗಳನ್ನು ಇಂದು ದೊಡ್ಡ ದನಿಯಲ್ಲಿ ಕೇಳಲಾಗುತ್ತಿದೆ. ಇದು ಕರ್ನಾಟಕದ ಸಿನಿಮಾ ಮತ್ತು ಸಾಹಿತ್ಯಕ್ಕೂ ಅನ್ವಯವಾಗುವ ಪ್ರಶ್ನೆ. ನುಡಿ ಸಡಗರದ ಆಹ್ವಾನ ಪತ್ರಿಕೆ ಕಂಡಾಕ್ಷಣ ಅಂತಹ ಪ್ರಶ್ನೆ ಅಲ್ಲಿ ಭಾಗವಹಿಸಲು ಒಪ್ಪಿದವರಿಗೆ ಏಕೆ ಏಳಲಿಲ್ಲ? ಪ್ರಶ್ನಿಸಿದ ಮೇಲಾದರೂ ಅದನ್ನು ಸರಿಪಡಿಸಿಕೊಳ್ಳಬಹುದಿತ್ತಲ್ಲಾ? (ಆಕ್ರೋಶ ವ್ಯಕ್ತವಾದ ಮೇಲೆ ಒಂದಿಬ್ಬರು ಸಡಗರದಿಂದ ದೂರ ಸರಿದದ್ದೂ ಇದೆ)
ಸ್ವಾತಂತ್ರ್ಯದ ಹೊಸ್ತಿಲಿನಲ್ಲಿ ಬರೆಯುತ್ತಿದ್ದ ಸಾಹಿತಿಗಳ ಬರೆಹಗಳನ್ನು ನವೋದಯ ಸಾಹಿತ್ಯ ಎಂದು ಗುರುತಿಸಲಾಗಿದೆ. ಅದರ ನಂತರ ಬಂಡಾಯ, ಪ್ರಗತಿಶೀಲ ಮತ್ತು ನವ್ಯ ಸಾಹಿತ್ಯವೂ ಪ್ರಭಾವ ಬೀರಿತು. ಈ ಎಲ್ಲ ಕಾಲಘಟ್ಟಗಳಲ್ಲೂ ಜನರನ್ನು ಪ್ರಭಾವಿಸಿದ ಸಾಹಿತಿಗಳು ಒಂದಲ್ಲ ಒಂದು ರೀತಿಯಲ್ಲಿ ಜಾತಿಗಳನ್ನು ಮೀರುವುದಕ್ಕೆ, ಸಮ ಸಮಾಜದ ಸ್ಥಾಪನೆಗೆ ತಮ್ಮ ಬರಹಗಳ ಮೂಲಕ ಚಿಂತಿಸಿದರು. ನವೋದಯದಲ್ಲಿ ಹೆಚ್ಚಿನ ಸಾಹಿತಿಗಳು ಸಂಪ್ರದಾಯಕ್ಕೆ ಶರಣಾದರು. ಕೆಲವರು ಪ್ರಗತಿ ರಥವನ್ನು ಹಿಂದಕ್ಕೆ ಕಳುಹಿಸುವುದಕ್ಕೂ ಹವಣಿಸಿದರು. ಸಂಪ್ರದಾಯವಾದಿಗಳಾಗಿದ್ದೂ ಪುತಿನ, ಕೆಎಸ್‌ನರಂತಹವರು ಜಾತ್ಯತೀತತೆಯ ಒಂದಂಶವನ್ನು ಒಳಗೊಂಡಿದ್ದವರೇ. ಕುವೆಂಪು ಅದನ್ನೂ ಮೀರಿ ಹುಸಿ ಸಂಪ್ರದಾಯ ವ್ಯವಸ್ಥೆಯನ್ನು ಬುಡಮೇಲು ಮಾಡಬಲ್ಲ, ಇಲ್ಲಿನ ಜಾತಿ ದೌರ್ಜನ್ಯ ಶೋಷಣೆಗಳನ್ನು ಬುಡಸಮೇತ ಕಿತ್ತುಹಾಕಬೇಕೆಂಬ ಹಂಬಲದ ಸಾಹಿತ್ಯ ರಚಿಸಿದವರು. ಪ್ರಗತಿಶೀಲ ಸಾಹಿತಿಗಳು ಕಮ್ಯುನಿಸಂನಿಂದ ಪ್ರಭಾವ ಹೊಂದಿ ವರ್ಗಸಂಘರ್ಷದ ಬಗ್ಗೆ ಹೆಚ್ಚು ಗಮನ ವಹಿಸಿದರು. ಇದ್ದುದರಲ್ಲಿ ಡಿಎಸ್‌ಎಸ್‌ನಂತಹ ಸಂಘಟನೆಯ ತಿಳಿವಳಿಕೆಯನ್ನು, ಜಾತಿರಹಿತ ಸಮಾಜದ ಪ್ರಶ್ನೆಯನ್ನು ಮುನ್ನಲೆಗೆ ತಂದದ್ದು ಬಂಡಾಯ ಸಾಹಿತಿಗಳು. 80ರ ದಶಕದಲ್ಲಿ ಇದು ಸದ್ದುಮಾಡಿತ್ತು. ನವ್ಯ ಸಾಹಿತ್ಯ ಚಳವಳಿ ಹೆಚ್ಚು ’ಪೋಸ್ಟ್‌ಮಾಡರ್ನ್’ ಚಿಂತನೆಗಳನ್ನು ತನ್ನ ಸಾಹಿತ್ಯದ ವಸ್ತುವನ್ನಾಗಿಸಿಕೊಂಡು, ಇಲ್ಲಿನ ಪರಂಪರೆಯಲ್ಲಿಯೇ ತನ್ನ ಶೋಧನೆಯನ್ನು ತೊಡಗಿಸಿಕೊಂಡಿತು. ಬಂಡಾಯದ ಸಾಹಿತಿಗಳು ನವ್ಯದವರ ಜೊತೆಗೆ ಹೆಚ್ಚು ಗುದ್ದಾಡಿದ್ದು ಸಂಕ್ರಮಣ, ಜನಪ್ರಗತಿಯಂತಹ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ತಿಳಿದೀತು.

ಒಟ್ಟಿನಲ್ಲಿ ಯಾವುದೋ ಒಂದು ರೀತಿಯಲ್ಲಿ ಅಂದು ಸಮಾಜವನ್ನು ಬಾಧಿಸುತ್ತಿದ್ದ ಪ್ರಶ್ನೆಗಳನ್ನು ಒಳಗೊಳ್ಳಲು ಅಂದಿನ ಬಹುತೇಕ ಸಾಹಿತಿಗಳು ಪ್ರಯತ್ನಿಸುತ್ತಿದ್ದರು. ಉಳಿದೆಲ್ಲಾ ಸಾಹಿತ್ಯ ಚಳವಳಿಗಳಿಗಿಂತ ಪ್ರಾತಿನಿಧ್ಯದ ಪ್ರಶ್ನೆಯನ್ನು ಬಂಡಾಯದ ಸಾಹಿತಿಗಳು ಸ್ವಲ್ಪ ಒಳಗೊಂಡರಾದರೂ ಅದು ದೊಡ್ಡ ಮಟ್ಟದಲ್ಲಿ ಮಾರ್ದನಿಸಲಿಲ್ಲ. ಆದರೆ 21ನೇ ಶತಮಾನ ಕಣ್ಣುಬಿಟ್ಟಿರುವುದೇ ವಿವಿಧ ದಮನಿತ ಸಮುದಾಯಗಳು ತಮ್ಮ ಘನತೆಯನ್ನು ಪ್ರತಿಪಾದಿಸುವುದರೊಂದಿಗೆ ಹಾಗೂ ಎಲ್ಲಾ ರಂಗಗಳಲ್ಲಿ ಆ ಸಮುದಾಯಗಳ ಪ್ರಾತಿನಿಧ್ಯವನ್ನು ಸರಿಪಡಿಸಬೇಕು ಎಂಬ ಕೂಗಿನೊಂದಿಗೆ. ವಿಪರ್ಯಾಸ ಎಂದರೆ, ಇದೇ 21ನೇ ಶತಮಾನದ ಎರಡನೇ ದಶಕದಲ್ಲಿ ಅಂತಹ ಪ್ರಶ್ನೆಗಳನ್ನು ನೆಲಸಮ ಮಾಡುವ ಪ್ರಭುತ್ವ ನಮ್ಮೆದುರಿಗೆ ಬೆಳೆದಿದೆ ಮತ್ತು ಆ ಪ್ರಶ್ನೆಗಳನ್ನು ಒಳಗೊಳ್ಳಲು ನಿರಾಕರಿಸುವ ಸಾಹಿತಿಗಳು ಕರ್ನಾಟಕದಲ್ಲಿ ಜನಪ್ರಿಯರಾಗಿ, ದೊಡ್ಡದೊಡ್ಡ ವೇದಿಕೆಗಳನ್ನು ಪಡೆದು ರಾರಾಜಿಸುತ್ತಿದ್ದಾರೆ. ಅವರು ಸಾಮಾನ್ಯವಾಗಿ ಕೊಡುವ ಸಬೂಬು ತಾವು ರಾಜಕೀಯದಿಂದ ದೂರ ಎಂಬುದು. ಯಾವ ರಾಜಕೀಯದಿಂದ ದೂರ ಎಂದು ಅವರು ಪ್ರತಿಪಾದಿಸುತ್ತಾರೋ ಅದೇ ರಾಜಕೀಯ
ಅವರ ಪ್ರಿವಿಲೆಜ್‌ಅನ್ನು ಹೆಚ್ಚಿಸುತ್ತಿದೆ ಮತ್ತು ತಲೆತಲಾಂತರದಿಂದ ಶೋಷಣೆಗೆ ಒಳಗಾದವರ ಪ್ರಾತಿನಿಧ್ಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಮನಗಾಣದವರು, ಅಥವಾ ಜಾಣ ಕಿವುಡಿನಿಂದ ವರ್ತಿಸುವವರು ರಚಿಸಿದ ಸಾಹಿತ್ಯ-ಕಲೆ ಎಂಥದ್ದಾಗಿರಬಹುದು?
ಇಂದು ಜಗತ್ತಿನಾದ್ಯಂತ ನಾಗರಿಕ ಸಮಾಜಗಳು, ವಿವಿಧ ಜನಪರ ಸಂಸ್ಥೆಗಳು ಪ್ರಾತಿನಿಧ್ಯದ ಪ್ರಶ್ನೆಯನ್ನು ತಮ್ಮದಾಗಿಸಿಕೊಂಡು ಕೆಲಸ ಮಾಡುತ್ತಿವೆ. ಕನ್ನಡದ ಸಾಹಿತ್ಯ, ಸಿನಿಮಾ ಮತ್ತು ಅದರಲ್ಲಿ ತೊಡಗಿಸಿಕೊಂಡಿರುವವರು ಕೂಡ ಎಲ್ಲಾ ಹಂತದಲ್ಲಿಯೂ ಈ ಬಿಕ್ಕಟ್ಟನ್ನು ಎದುರುಗೊಂಡು, ಸುಧಾರಣೆಗೊಂಡು ಮುಂದುವರಿಯುವುದು ಸೂಕ್ತ.
ಇದನ್ನೂ ಓದಿ: ದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’ದಿಂದ ಆಯ್ದ ಅಧ್ಯಾಯ; ಇಂದು, ವರ್ತಮಾನದಲ್ಲಿ…


