“ಇತರ ಹುಡುಗಿಯರು ಸಹ ಓದುತ್ತಿಲ್ಲವಾದ ಕಾರಣ, ನೀನು ಶಾಲೆಗೆ ಹೋಗಬಾರದು” ಎಂದು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಸ್ಥಳೀಯರ ಗುಂಪೊಂದು 16 ವರ್ಷದ ದಲಿತ ಬಾಲಕಿಗೆ ಬೆದರಿಕೆ ಹಾಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾವಲಿಯಖೇಡಿ ಗ್ರಾಮದಲ್ಲಿ ಬಾಲಕಿ ಮತ್ತು ಆರೋಪಿಗಳ ಕುಟುಂಬಗಳ ನಡುವೆ ಘರ್ಷಣೆ ನಡೆದು ಕೆಲವರಿಗೆ ಗಾಯಗಳಾಗಿದ್ದು, ಜುಲೈ 23ರ ಶನಿವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರೋಪಿಗಳು ತನ್ನ ಶಾಲಾ ಬ್ಯಾಗನ್ನು ಕಿತ್ತುಕೊಂಡು ತರಗತಿಗೆ ಹಾಜರಾಗಲು ಆಕ್ಷೇಪ ವ್ಯಕ್ತಪಡಿಸಿದ ವಿಡಿಯೋವನ್ನು ಬಾಲಕಿ ಬಿಡುಗಡೆ ಮಾಡಿದ್ದಾಳೆ. ಆರೋಪಿಗಳ ಅಭಿಪ್ರಾಯವನ್ನು ವಿರೋಧಿಸಿದಾಗ ನನ್ನ ಸಹೋದರನ ಮೇಲೆ ಹಲ್ಲೆ ನಡೆಸಿದರು. ಕುಟುಂಬದ ಇತರ ಸದಸ್ಯರನ್ನೂ ಥಳಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಪರಿಶಿಷ್ಟ ಜಾತಿ ಸಮುದಾಯದ ಅಪ್ರಾಪ್ತ ಬಾಲಕಿ ಶನಿವಾರ ಮಧ್ಯಾಹ್ನ ಸ್ಥಳೀಯ ಶಾಲೆಗೆ ತೆರಳಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರಿ ಅವಧೇಶ್ ಕುಮಾರ್ ಶೇಷಾ ಹೇಳಿದ್ದಾರೆ.
ಗ್ರಾಮದ ಇತರ ಹುಡುಗಿಯರು ಶಾಲೆಗೆ ಹೋಗದ ಕಾರಣ, ಕೆಲವು ವ್ಯಕ್ತಿಗಳು ದಲಿತ ಬಾಲಕಿಯ ಶಾಲಾ ಬ್ಯಾಗ್ ಕಸಿದುಕೊಂಡು ‘ನೀನು ಶಾಲೆಗೆ ಹೋಗಬೇಡ’ ಎಂದು ಗದರಿಸಿದ್ದಾರೆ. ನಂತರ, ಬಾಲಕಿಯ ಕುಟುಂಬ ಮತ್ತು ಆರೋಪಿಗಳ ಸಂಬಂಧಿಕರ ನಡುವೆ ಘರ್ಷಣೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ದೂರಿನ ಅನ್ವಯ ಕ್ರಮ ಜರುಗಿಸಿರುವ ಪೊಲೀಸರು, ಏಳು ಜನರನ್ನು ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದಾರೆ.
ಕೌಂಟರ್ ದೂರು ಕೂಡ ದಾಖಲಾಗಿದ್ದು, ಹುಡುಗಿಯ ಸಹೋದರ ಮತ್ತು ಇತರ ಮೂವರ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ.
ಘರ್ಷಣೆಯಲ್ಲಿ ಗಾಯಗೊಂಡವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, “ಘರ್ಷಣೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಲಾಠಿ ಬೀಸುವ ವ್ಯಕ್ತಿಗಳು ಬಾಲಕಿಯ ಕುಟುಂಬದ ಮೇಲೆ ಹಲ್ಲೆ ನಡೆಸುವುದು, ಅವರ ಮೇಲೆ ದೌರ್ಜನ್ಯ ಎಸಗುವುದು ವಿಡಿಯೋದಲ್ಲಿ ದಾಖಲಾಗಿದೆ.”
ಇದನ್ನೂ ಓದಿರಿ: ‘ನೀನು ಕೂಲಿ ಕೆಲಸ ಮಾಡಬೇಕು, ಶಾಲೆಯಲ್ಲಿ ಅಡುಗೆಯನ್ನಲ್ಲ’: 6 ತಿಂಗಳಾದರೂ ದಲಿತ ಮಹಿಳೆಗೆ ನಿಲ್ಲದ ಕಿರುಕುಳ
ಬಾಲಕಿ ಮನೆಗೆ ಹಿಂದಿರುಗುತ್ತಿದ್ದಾಗ ನಾಲ್ವರು ಯುವಕರು ಹಲ್ಲೆ ನಡೆಸಿದ್ದಾರೆ. “ನನ್ನ ಸೋದರಸಂಬಂಧಿ ಮಧ್ಯಪ್ರವೇಶಿಸಿದಾಗ, ಆತನನ್ನೂ ಹೊಡೆದರು. ಸುಮಾರು 15-20 ನಿಮಿಷಗಳ ನಂತರ ಯುವಕರ ಕುಟುಂಬಸ್ಥರು ನನ್ನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ” ಬಾಲಕಿ ದೂರು ನೀಡಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆದಾಗ್ಯೂ, ಜಿಲ್ಲಾಧಿಕಾರಿಯವರು ದಲಿತ ಕುಟುಂಬದ ಆರೋಪವನ್ನು ಅಲ್ಲಗಳೆದಿದ್ದಾರೆ. “ಹಿಂಸಾಚಾರವು ಜಾತಿ ಕಾರಣಕ್ಕಾಗಿ ನಡೆದಿದೆ ಅಥವಾ ಬಾಲಕಿ ಶಾಲೆಗೆ ಹೋಗುತ್ತಿರುವ ಕಾರಣಕ್ಕೆ ನಡೆದಿದೆ ಎಂಬುದು ಸುಳ್ಳು” ಎಂದಿದ್ದಾರೆ.
“ಹಳೇ ದ್ವೇಷದ ಹಿನ್ನೆಲೆಯಲ್ಲಿ ದಾಳಿ ನಡೆದಿರುವುದು ಸ್ಥಳೀಯ ತಹಸೀಲ್ದಾರ್ ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ” ಎಂದು ಜಿಲ್ಲಾಧಿಕಾರಿ ದಿನೇಶ್ ಜೈನ್ ಪ್ರತಿಕ್ರಿಯೆ ನೀಡಿದ್ದಾರೆ.


