HomeUncategorizedಸಿದ್ದರಾಮಯ್ಯ 75: ಹಳೇ ರಾಜಕಾರಣದ ಕಡೇ ವರಸೆ

ಸಿದ್ದರಾಮಯ್ಯ 75: ಹಳೇ ರಾಜಕಾರಣದ ಕಡೇ ವರಸೆ

- Advertisement -
- Advertisement -

ದಾವಣಗೆರೆಯಲ್ಲಿ ಆಗಸ್ಟ್ 3ರಂದು ನಡೆಯಲಿರುವ ಸಿದ್ದರಾಮಯ್ಯ75 ಕಾರ್ಯಕ್ರಮವು ನಿರೀಕ್ಷೆಯಂತೆ ಬಹಳ ಸುದ್ದಿಯಲ್ಲಿದೆ. ಕಾಂಗ್ರೆಸ್‌ನೊಳಗೂ, ಹೊರಗೂ. ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಕಾಣಬಯಸುವ ಕಾಂಗ್ರೆಸ್‌ನೊಳಗಿನ ಗುಂಪು, ಅದಕ್ಕಾಗಿಯೇ ಸಂಘಟಿಸುತ್ತಿರುವ ಕಾರ್ಯಕ್ರಮ ಅದು. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗದಿದ್ದರೆ ಒಳ್ಳೆಯದು ಎಂದು ಭಾವಿಸುವವರು ಕಾಂಗ್ರೆಸ್‌ನೊಳಗೂ, ಹೊರಗೂ ಇದ್ದಾರೆ. ಆದರೆ, ಅದನ್ನು ತಡೆಯಬಲ್ಲ ಶಕ್ತಿ ಅವರ್‍ಯಾರಿಗೂ ಇಲ್ಲ; ಸ್ವತಃ ಕಾಂಗ್ರೆಸ್ ಹೈಕಮಾಂಡ್‌ಗೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ಜಮಾವಣೆಯು ಜನನಾಯಕರನ್ನು ಚಲಾವಣೆಯಲ್ಲಿಡಲು, ಮೇಲೆತ್ತಲು ಎಂದೆಂದೂ ಬಹಳ ಮುಖ್ಯವಾದ ಸಾಧನ. ಅದನ್ನೇ ಸಿದ್ದರಾಮಯ್ಯನವರು ಮತ್ತು ಅವರ ಬೆಂಬಲಿಗ ಗುಂಪೂ ಮಾಡುತ್ತಿದೆ. ಆ ರೀತಿ ತನ್ನ ಹೆಸರಿನ ಬಲದ ಮೇಲೆಯೇ ಜನರನ್ನು ಒಂದೆಡೆ ಸೇರಿಸುವ ಶಕ್ತಿ ಕರ್ನಾಟಕದಲ್ಲಿ ಇಂದು ಹೆಚ್ಚೆಂದರೆ ಇನ್ನೊಂದಿಬ್ಬರು ನಾಯಕರಿಗಷ್ಟೇ ಇದೆ.

ಈಗ ಮಾತ್ರವಲ್ಲದೇ ಹಿಂದೆಯೂ ಸಿದ್ದರಾಮಯ್ಯನವರು ಇದನ್ನು ಮಾಡಿದ್ದಿದೆ. ಅಥವಾ ಸರಿಯಾಗಿ ಹೇಳಬೇಕೆಂದರೆ ಸಿದ್ದರಾಮಯ್ಯನವರ ಅಭಿಮಾನಿ ಹಿತೈಷಿಗಳು ಇದನ್ನು ಹಿಂದೆಯೂ ಮಾಡಿದ್ದಾರೆ. ಇದರ ಅರ್ಥ ಅಂತಹ ಸಮಾವೇಶಗಳ ಹಿಂದೆ ಸ್ವತಃ ಸಿದ್ದರಾಮಯ್ಯನವರ ಒತ್ತಾಸೆ ಇರಲಿಲ್ಲವೆಂದಲ್ಲ; ಆದರೆ ಹೇಗೆ ಯಡಿಯೂರಪ್ಪ, ಕುಮಾರಸ್ವಾಮಿಯಂಥವರು ತಾವೇ ಸ್ವತಃ ಅಂತಹ ಬೃಹತ್ ಸಮಾವೇಶಗಳನ್ನು ಸಂಘಟಿಸಲು ಕಣಕ್ಕಿಳಿಯುತ್ತಾರೋ, ಆ ರೀತಿಯ ಸಂಘಟನಾ ಗುಣ ಸಿದ್ದರಾಮಯ್ಯನವರಿಗೆ ಇಲ್ಲ; ಹಿಂದೆಯೂ ಇರಲಿಲ್ಲ. ಕೋಲಾರದಲ್ಲಿ ಕಳೆದ ಶತಮಾನದ ಕೊನೆಯ ಭಾಗದಲ್ಲಿ ನಡೆದ ಅಹಿಂದ ಸಮಾವೇಶದಿಂದಲೂ ಇದು ಸ್ಪಷ್ಟ. ಅಹಿಂದ ಚಳವಳಿಯ ಸೈದ್ಧಾಂತಿಕ ಹಾಗೂ ಸಂಘಟನಾತ್ಮಕ ಬುನಾದಿ ರೂಪಿಸಿದ್ದವರಲ್ಲಿ ಹಲವರಿದ್ದರೂ, ಅದಕ್ಕೆ ಬೇಕಾದ ಸಂಪನ್ಮೂಲ ಹಾಗೂ ಧೈರ್ಯ ತುಂಬಿದ್ದು ಆರ್.ಎಲ್.ಜಾಲಪ್ಪ. ಅವರಿಗೆ ಸಿದ್ದರಾಮಯ್ಯನವರನ್ನು ಅಹಿಂದದ ಮಧ್ಯೆ ಪ್ರತಿಷ್ಠಾಪಿಸುವುದು ಬೇಕಿತ್ತು. ಮತ್ತು ಎಲ್ಲ ರೀತಿಯಲ್ಲೂ ಅಹಿಂದ ಸಮುದಾಯಗಳ ಹಿತಾಸಕ್ತಿಯನ್ನು ಸಮಗ್ರವಾಗಿ ಪ್ರತಿನಿಧಿಸುವ ಮನೋಧರ್ಮ, ವೈಚಾರಿಕ ಸ್ಪಷ್ಟತೆ ಸಿದ್ದರಾಮಯ್ಯನವರಿಗೂ ಇತ್ತು.

ಆ ನಂತರ ಜೆಡಿಎಸ್ ಪಕ್ಷದಲ್ಲಿದ್ದೇ ಮುಂದಿನ ಹೆಜ್ಜೆಗೆ ದಾರಿ ಮಾಡಿಕೊಳ್ಳುವ ಕಡೆಗೆ ಸಿದ್ದರಾಮಯ್ಯನವರು ಹೊರಟಾಗ ಸಂಘಟಿಸಿದ್ದು ಕನಕ ಗೋಪುರ ಧ್ವಂಸ ವಿರೋಧಿ ಸಮಾವೇಶ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆ ಕಾರ್ಯಕ್ರಮದ ಹಿಂದೆಯೂ ಮುಕುಡಪ್ಪನವರೂ ಒಳಗೊಂಡಂತೆ ಹಲವರಿದ್ದರು. ಸಕಲ ಅಹಿಂದ ಸಮುದಾಯಗಳು ಮತ್ತು ಪ್ರಗತಿಪರ ಸಂಘಟನೆಗಳೆಲ್ಲದರ ಬೆಂಬಲವನ್ನು ಕೋರಲಾಗಿತ್ತಾದರೂ, ಅದು ಪ್ರಧಾನವಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಕ್ರಮವೇ ಆಗಿತ್ತು. ಇದು ಶೋಷಿತ ಸಮುದಾಯಗಳ ಸ್ವಾಭಿಮಾನದ ದನಿ ಎಂಬಿತ್ಯಾದಿ ಮಾತುಗಳನ್ನು ಮುಕುಡಪ್ಪನವರು ಪೂರ್ವಭಾವಿ ಸಭೆಗಳಲ್ಲಿ ಸ್ವಲ್ಪ ಹೆಚ್ಚೇ ಆಡಿದ್ದರು. ಆದರೆ, ಸಮಾವೇಶವು ತುಂಬಿ ತುಳುಕುವಾಗ ಸರ್ಕಾರೀ ಕಾರಿನಲ್ಲಿ ಬಂದಿಳಿದ ಸಿದ್ದರಾಮಯ್ಯನವರು ವೇದಿಕೆ ಏರುತ್ತಿದ್ದಂತೆ ಕನಕ ಗೋಪುರವೂ ಪಕ್ಕಕ್ಕೆ ಹೋಯಿತು; ಇತರೆಲ್ಲಾ ಸಂಗತಿಗಳೂ ಮರೆಯಾದವು. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ನೋಡುವುದೇ ನಮ್ಮ ಗುರಿ ಎಂದು ಸಂಘಟಕರು ಬಹುತೇಕ ಸ್ಪಷ್ಟಪಡಿಸಿದ್ದರು. ’ಯಾರ್‍ಯಾರನ್ನೋ ಹೊತ್ಕೊಂಡು ಮೆರೆಸಿದ್ದೀವಿ, ನಾವೀಗ ನಮ್ಮ ಸಿದ್ದರಾಮಯ್ಯನ ಪಲ್ಲಕ್ಕಿ ಹೊರಲಿಕ್ಕೆ ರೆಡಿ’ ಎಂದು ಸಿ.ಎಂ.ಇಬ್ರಾಹಿಂ ಘೋಷಿಸಿಯೂ ಬಿಟ್ಟಿದ್ದರು.

’ಮುಸ್ಲಿಮರು ಗೋಮಾಂಸ ತಿನ್ನಬೇಡಿ’ ಹೇಳಿಕೆಗೆ ಮಲಯಾಳಂನಲ್ಲಿ ಸ್ಪಷ್ಟನೆ ನೀಡಿದ ಸಿ.ಎಂ.ಇಬ್ರಾಹಿಂ!
PC: Prajavanai

ಅಲ್ಲಿಂದಾಚೆಗೆ ರಾಜ್ಯದ ಹಲವು ಕಡೆ ಅಹಿಂದ ಸಮಾವೇಶಗಳು ನಡೆದವು. ಅದರ ಕೇಂದ್ರದಲ್ಲಿದ್ದು ಸಿದ್ದರಾಮಯ್ಯನವರಾದರೂ, ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ ಸೇರಿದಂತೆ ಇನ್ನೂ ಹಲವರು ಆ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಇಂದೂ ಸಹಾ, ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತಲೆಮೇಲೆ ಹೊತ್ತುಕೊಂಡು ಮಾಡುತ್ತಿರುವವರು ಸಾಕಷ್ಟು ಜನರಿದ್ದಾರೆ. ಸಿದ್ದರಾಮಯ್ಯನವರು ಒಳ್ಳೆಯ ಆಡಳಿತಗಾರರು, ಸಾಮಾಜಿಕ ನ್ಯಾಯದ ಕುರಿತು ಪ್ರಾಮಾಣಿಕ ಕಳಕಳಿಯುಳ್ಳವರು, ಎಲ್ಲಾ ಸರ್ಕಾರಗಳಲ್ಲೂ ಇದ್ದಂತೆಯೇ ಅವರ ಆಡಳಿತದಲ್ಲೂ ಭ್ರಷ್ಟಾಚಾರವಿದ್ದರೂ ಸ್ವಂತ ಕುಟುಂಬದ ಸುತ್ತ ಭ್ರಷ್ಟ ಸಾಮ್ರಾಜ್ಯ ಕಟ್ಟದವರು, ಜನನಾಯಕರಾಗಿಯೂ ವೈಚಾರಿಕ ಸ್ಪಷ್ಟತೆ ಮತ್ತು ಬದ್ಧತೆಯುಳ್ಳವರು – ಇಂತಹ ಹಲವು ಗುಣಗಳಿರುವುದೆಲ್ಲಾ ನಿಜವಾದರೂ, ಅವರು ತಾವೇ ಸಂಘಟಕರಲ್ಲ. ಅದಕ್ಕೆ ಅಗತ್ಯವಿರುವ ಶ್ರಮವನ್ನು ಹಾಕುವುದೂ ಅವರಿಗೆ ಸಾಧ್ಯವಿಲ್ಲ; ನೂರಾರು ಜನರನ್ನು ನಿರಂತರವಾಗಿ ಮತ್ತು ಏಕಕಾಲದಲ್ಲಿ ನಿಭಾಯಿಸಲೂ ಶಕ್ತರಲ್ಲ. ವೇದಿಕೆಯ ಮೇಲಿಂದ ಲಕ್ಷೆಪಲಕ್ಷ ಜನರನ್ನು ಸೆಳೆಯಬಲ್ಲ, ವಿಧಾನಸೌಧದಲ್ಲಿ ಮುಖ್ಯಮಂತ್ರಿಯಾಗಿ ದಿನವಿಡೀ ಅಧಿಕಾರಿಗಳ ಸಭೆ ನಡೆಸಿ ಅವರ ಬೆವರಿಳಿಸಬಲ್ಲ ಸಿದ್ದರಾಮಯ್ಯ ಒಂದೇ ದಿನದಲ್ಲಿ ಭಿನ್ನ ಬಗೆಯ ಹದಿನೈದು ಸಭೆಗಳನ್ನು ಮಾಡುತ್ತಾ ಎಲ್ಲವನ್ನೂ ಮ್ಯಾನೇಜ್ ಮಾಡಲಾರರು. ಅವರ ಕುರಿತಂತೆ ಇರುವ ತಕರಾರುಗಳು, ಮುನಿಸು, ದೂರವಾದವರಿಗೆ ಇರುವ ಸಿಟ್ಟು, ಈಗಲೂ ಹತ್ತಿರವೇ ಇದ್ದವರಿಗೆ ಕೂಡ ಇರುವ ಅಸಹನೆ ಎಲ್ಲಕ್ಕೂ ಅವರ ಈ ಸೋಮಾರಿತನ, ಅಸಂಘಟಿತತೆಯೂ ಕಾರಣ. ಯಾರ ಬಗ್ಗೆಯೂ (ಬಹುಶಃ ವ್ಯಕ್ತಿಗತ ಕಾರಣಕ್ಕೆ ದೇವೇಗೌಡರ ಕುಟುಂಬ ಮತ್ತು ಸೈದ್ಧಾಂತಿಕ ಕಾರಣಕ್ಕೆ ಬಿಜೆಪಿಯೊಳಗಿನ ತೀವ್ರ ಬಲಪಂಥೀಯರನ್ನು ಹೊರತುಪಡಿಸಿ) ದ್ವೇಷವಿರದ ಅವರಿಗೆ, ಯಾರ ಬಗ್ಗೆಯೂ ತೀವ್ರ ಪ್ರೀತಿಯೂ ಇರುವಂತೆ ಕಾಣುವುದಿಲ್ಲ. ತನ್ನ ಅಧಿಕಾರ, ಅಧಿಕಾರಕ್ಕೆ ಬಂದರೆ ತಾನು ಮಾಡಬೇಕಾದ ಜನರ ಕೆಲಸದ ಕುರಿತ ಮಮಕಾರ ಮಾತ್ರ ತೀವ್ರವಾಗಿಯೇ ಇದೆ.

ಹಾಗಾಗಿಯೇ ಅವರೆದುರು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸಂಘಟನೆಗೆ ಅತ್ಯಗತ್ಯ ವ್ಯಕ್ತಿಯಂತೆ ಕಾಣುತ್ತಾರೆ. ಸಿದ್ದರಾಮಯ್ಯನವರಲ್ಲಿನ ಮೇಲೆ ಹೆಸರಿಸಲಾದ ಯಾವ ಸದ್ಗುಣಗಳೂ ಇಲ್ಲದ ಡಿಕೆಶಿ ಕಾಂಗ್ರೆಸ್ ಹೈಕಮಾಂಡ್ ಯಾವ ಹೊತ್ತಿನಲ್ಲಿ ಬೇಕಾದರೂ ನೆಚ್ಚಿಕೊಳ್ಳಬಲ್ಲ ಸೇನಾಧಿಪತಿಯಂತೆ ಒದಗಿ ಬಂದಿದ್ದಾರೆ. ಅಂಥದ್ದು
ಸಿದ್ದರಾಮಯ್ಯನವರಿಗೆ ಅಸಾಧ್ಯ. ಅಷ್ಟೇ ಅಲ್ಲ; ಸಂಘಟನೆಯೊಂದಕ್ಕೆ ಎಂಥ ಸಂದರ್ಭದಲ್ಲೂ ತಮ್ಮನ್ನು ಕೈಬಿಟ್ಟು ಹೋಗಲಾರರು ಎಂಬ ನಿಷ್ಠಾವಂತ ಮುಂಚೂಣಿ ನಾಯಕರೂ ಬೇಕಾಗುತ್ತಾರೆ. ಮಲ್ಲಿಕಾರ್ಜುನ ಖರ್ಗೆಯವರಂತೆ. ಆದರೆ ಸಿದ್ದರಾಮಯ್ಯನವರು ಒಂದಲ್ಲಾ ಹಲವು ಬಾರಿ ತಾವಿದ್ದ ಪಕ್ಷ ಹಾಗೂ ಅದರ ನಾಯಕತ್ವಕ್ಕೆ ಸೆಡ್ಡು ಹೊಡೆದಿದ್ದಾರೆ. ಆಗಸ್ಟ್ 3ರ ಕಾರ್ಯಕ್ರಮವೂ ಅದರಲ್ಲಿ ಒಂದು ಎಂಬುದು ಪಕ್ಷದ ಮೇಲ್ಮಟ್ಟದ ನಾಯಕರೆಲ್ಲರಿಗೂ ಗೊತ್ತಿರುವ ಸಂಗತಿ.

ಸಂಘಟನಾ ಸಾಮರ್ಥ್ಯವಿರುವ ಡಿಕೆಶಿಯವರ ವಿಚಾರ ಪಕ್ಕಕ್ಕಿರಲಿ; ಮಲ್ಲಿಕಾರ್ಜುನ ಖರ್ಗೆಯವರ ಸೀನಿಯಾರಿಟಿ ಹಾಗೂ ಅವರಿಗಿರುವ ಮಹತ್ವವನ್ನು ಒಮ್ಮೆಯೂ ಬಹಿರಂಗವಾಗಿ ಮುಕ್ತ ಮನಸ್ಸಿನಿಂದ ಒಪ್ಪದೇ ಇರುವುದೂ ಸೇರಿದಂತೆ ಕೆಲವು ದೌರ್ಬಲ್ಯಗಳು ಸಿದ್ದರಾಮಯ್ಯನವರಲ್ಲಿ ಎದ್ದು ಕಾಣುತ್ತವೆ. ಹಾಗೆ ನೋಡಿದರೆ ಸಿದ್ದರಾಮಯ್ಯನವರಲ್ಲಿ ಕಾಣಬರುವ ಹಲವಾರು ಸದ್ಗುಣಗಳು ಖರ್ಗೆಯವರಲ್ಲೂ ಇದೆ. ತನಗಿಂತ ಹಿಂದುಳಿದ ಸಮುದಾಯದ ಹಿನ್ನೆಲೆಯಿಂದ ಬಂದ ಖರ್ಗೆಯವರು ತನಗಿಂತ ಮುಂಚೆ ಈ ರಾಜ್ಯದ ಮುಖ್ಯಮಂತ್ರಿಯಾಗಿರಬೇಕಿತ್ತು ಎಂದು ಆತ್ಮಪೂರ್ವಕವಾಗಿ ಸಿದ್ದರಾಮಯ್ಯನವರು ಒಮ್ಮೆಯಾದರೂ ಹೇಳಬೇಕಿತ್ತು ಎಂದು ಭಾವಿಸುವ ಅವರ ನೈಜ ಹಿತೈಷಿಗಳು ಹಲವರಿದ್ದಾರೆ. ಮೂರು ದಿನಗಳ ಹಿಂದೆ ಸಿದ್ದರಾಮಯ್ಯನವರ ಸಾಧನೆಯನ್ನು ಹೇಳುವ ಪುಸ್ತಕವನ್ನು ಮೈಸೂರಿನಲ್ಲಿ ಖರ್ಗೆಯವರೇ ಬಿಡುಗಡೆ ಮಾಡಿದರು. ಖರ್ಗೆಯವರನ್ನು ಕರೆಯಬೇಡಿ ಎಂದು ಕರೆಯುವ ಸಣ್ಣತನವನ್ನು ಸಿದ್ದರಾಮಯ್ಯ ತೋರುವುದಿಲ್ಲ. ಅದೇ ರೀತಿಯಲ್ಲಿ ಹೆಚ್ಚಿನ ಉದಾರತೆಯನ್ನೂ ತೋರುವುದಿಲ್ಲ. ಅದೇ ಮೈಸೂರಿನಲ್ಲಿ ೨೦೦೬ರ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯನವರ ಪರ ಇದೇ ಖರ್ಗೆಯವರು ಕಾಂಗ್ರೆಸ್ ಪಕ್ಷದ ಆದೇಶದ ಮೇರೆಗೆ ಚುನಾವಣಾ ಪ್ರಚಾರಕ್ಕೆ ಬಂದು ದುಡಿದಿದ್ದುದನ್ನು, ೨೦೦೯ರಲ್ಲಿ ವಿಧಾನಸಭೆ ಬಿಟ್ಟು ಲೋಕಸಭೆಗೆ ಹೋಗಿ ತನಗೆ ಪೂರ್ಣ ಅವಕಾಶ ಮಾಡಿಕೊಟ್ಟಿದ್ದನ್ನು ಕೃತಜ್ಞತೆಯಿಂದ ನೆನೆಯುತ್ತಾರೆಯೇ ಇಲ್ಲವೇ ಯಾರಿಗೂ ಗೊತ್ತಿಲ್ಲ.

ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕ

ಸಿದ್ದರಾಮಯ್ಯನವರು ಮತ್ತು ಖರ್ಗೆಯವರು ಒಂದು ರೀತಿಯಲ್ಲಿ ಈ ರಾಜ್ಯ ಕಂಡ ಹಳೆಯ ರಾಜಕಾರಣದ ಕೊನೆಯ ಕೊಂಡಿಗಳು. ಬಿಜೆಪಿಯಲ್ಲಿ ಯಡಿಯೂರಪ್ಪನವರ ಮತ್ತು ಜೆಡಿಎಸ್‌ನಲ್ಲಿ ದೇವೇಗೌಡರ ಅವಧಿ ಮುಗಿಯುತ್ತಾ ಬಂದಿದೆ. ಇನ್ನೇನಾದರೂ ಒಳ್ಳೆ ದಾರಿಯಲ್ಲಿ ಅವಕಾಶವಿದ್ದರೆ ಅದು ಕಾಂಗ್ರೆಸ್‌ನಲ್ಲಿನ ಇವರಿಬ್ಬರಿಗೆ ಮಾತ್ರ. ಇದರ ನಂತರ ಬರುವವರೆಲ್ಲಾ ಹೊಸ ರೀತಿಯ ರಾಜಕಾರಣದವರು. ವಿಪರೀತ ಹಣ, ಅಪಾರ ಸಂಘಟನಾ ಚಾತುರ್ಯ, ಜಾತಿಬಲ, ಮಾಧ್ಯಮಗಳು – ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಿಸುವ ಕೌಶಲ್ಯ, ನಿರಂತರವಾಗಿ ಸಾಕಿಕೊಂಡು ಬರುವ ಒಂದು ದೊಡ್ಡ ಯಂತ್ರಾಂಗ ಇತ್ಯಾದಿಗಳಿಲ್ಲದೇ ಹೊಸ ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಂತ ಶಕ್ತಿಯಿಂದ ಏರುವುದು ಇನ್ನು ಕಷ್ಟ. ಹೆಚ್ಚೆಂದರೆ ಆಯಾ ಪಕ್ಷದ ಹೈಕಮಾಂಡ್‌ನ ಲಕೋಟೆ ನೇಮಕಾತಿಯ ಮೂಲಕ ಆಗಬೇಕಷ್ಟೇ.

ಇವರಿಬ್ಬರಲ್ಲಿರುವ ಸಾಮ್ಯತೆ ಅಷ್ಟು ಮಾತ್ರವೇ ಅಲ್ಲ; ಅಥವಾ ಇಬ್ಬರೂ ಪಂಚೆ ಉಡುವ ಹಳೆ ತಲೆಮಾರಿನ ರಾಜಕಾರಣಿಗಳ ಕೊನೆ ಪೀಳಿಗೆ ಎಂಬುದೂ ಅಲ್ಲ. ಈ ಪಂಚೆಗಳು ಇನ್ನೂ ಒಂದನ್ನು ಸಂಕೇತಿಸುತ್ತವೆ. ಅತ್ಯಂತ ಸಾಧಾರಣ ಬಡ ಅಥವಾ ಕೆಳಮಧ್ಯಮ ಹಿನ್ನೆಲೆಯ ಕುಟುಂಬಗಳಿಂದ ಬಂದವರು ಇವರು.

ಸ್ವಂತ ಪರಿಶ್ರಮ ಹಾಗೂ ಸಾಂದರ್ಭಿಕ ಅನುಕೂಲಗಳಿಂದ ಹಂತಹಂತವಾಗಿ ಬೆಳೆದವರು. ಕಳೆದ ಶತಮಾನದ ’70ರ ದಶಕದ ನಂತರದ ಸಾಮಾಜಿಕ ಚಳವಳಿಗಳ ರಾಜಕೀಯ ಪ್ರಭಾವದ ಕಾರಣಕ್ಕೆ ಅವಕಾಶ ಹೆಚ್ಚಿಸಿಕೊಂಡವರು. ಹಾಗಾಗಿಯೇ ಮುಖ್ಯವಾಹಿನಿ ರಾಜಕಾರಣದಲ್ಲಿದ್ದೂ ಒಂದಲ್ಲಾ ಒಂದು ರೀತಿಯಲ್ಲಿ ಆ ಚಳವಳಿಗಳ ಆಶಯಗಳನ್ನೂ ಪ್ರತಿನಿಧಿಸುವವರು. ಖರ್ಗೆಯವರು ನೇರವಾಗಿ ಚಳವಳಿಗಳ ಸಂಪರ್ಕದಲ್ಲಿಲ್ಲದೇ ಇದ್ದರೂ, ಕಾಂಗ್ರೆಸ್  ಕುರಿತ ನಿಷ್ಠೆಯೇ ಅವರ ಪ್ರಧಾನ ಶಕ್ತಿಯಾಗಿದ್ದರೂ, ಇಂದಿನ ಮಂತ್ರವಾದ ’ಸಂವಿಧಾನಿಕ ಮೌಲ್ಯಗಳನ್ನು’ ಪ್ರತಿಪಾದಿಸುವವರಾಗಿದ್ದಾರೆ. ಇಬ್ಬರಲ್ಲೂ ಇರುವ ಇನ್ನೊಂದು ಸಾಮರ್ಥ್ಯವೆಂದರೆ, ಇಬ್ಬರೂ ಸಮರ್ಥ ಆಡಳಿತಗಾರರು ಎಂಬುದು. ದೊಡ್ಡದೊಡ್ಡ ಐಎಎಸ್ ಅಧಿಕಾರಿಗಳು ಇವರನ್ನು ಯಾಮಾರಿಸುವುದು ಸಾಧ್ಯವಿಲ್ಲ; ಅಂತಹ ಅಧಿಕಾರಿಗಳಿಗೆ ಇವರು ಕೇರೂ ಮಾಡುವುದಿಲ್ಲ.

ಇಂತಹ ಹಳೆಯ ರಾಜಕಾರಣದ ವರಸೆಯ ಸಿದ್ದರಾಮಯ್ಯನವರು ತಮ್ಮ ಕಡೆಯ ಅವಧಿಯ ಆಟ ಆಡಲು ಪಂಚೆ ಗಟ್ಟಿಯಾಗಿ ಕಟ್ಟಿಕೊಂಡು ಇಳಿದಿದ್ದಾರೆ. ೨೦೨೩ರಲ್ಲಿ ಗೆಲ್ಲಬಹುದಾದ ಎಂಎಲ್‌ಎಗಳ ಪೈಕಿ ಅಥವಾ ೨೦೨೩ರಲ್ಲಿ ಗೆಲ್ಲಬೇಕಾದ ಎಂಎಲ್‌ಎಗಳ ಪೈಕಿ ಯಾರು ಅತ್ಯುತ್ತಮ ಸಿಎಂ ಆಗಬಹುದು ಎಂದು ಕೇಳಿದರೆ ಉತ್ತರಿಸುವುದು ಕಷ್ಟ ಅಥವಾ ಗೋಜಲಾಗಬಹುದು. ಏಕೆಂದರೆ ಯಾರನ್ನು ಆಯ್ದುಕೊಳ್ಳುವುದು? ಎಂಎಲ್‌ಎ ಸಹಾ ಆಗಲಾಗದ, ತಮ್ಮದೇ ಆದರ್ಶಗಳನ್ನಿಟ್ಟುಕೊಂಡ ಹೋರಾಟಗಾರರನ್ನಾ? ಅಥವಾ ಅಷ್ಟು ಕೈ ಬಾಯಿ ಕೆಡಿಸಿಕೊಳ್ಳದೇ ’ಮುಖ್ಯವಾಹಿನಿ’ ರಾಜಕೀಯ ಪಕ್ಷಗಳಲ್ಲೇ ಇರುವ ಸಮರ್ಥ, ಸೆಕ್ಯುಲರ್ ಆಡಳಿತಗಾರರನ್ನೇ ಎಂಬ ಗೊಂದಲ ಹುಟ್ಟುತ್ತದೆ. ಆದರೆ ಸಿಎಂ ಆಗುವ ಸಾಧ್ಯತೆಯುಳ್ಳ ನಾಯಕರಲ್ಲಿ ಯಾರು ಅತ್ಯುತ್ತಮ ಆಯ್ಕೆ ಎಂದರೆ ಅದು ಸಿದ್ದರಾಮಯ್ಯನವರಲ್ಲದೇ ಬೇರಾರೂ ಅಲ್ಲ. ಇದು ಸಿದ್ದರಾಮಯ್ಯನವರ ಕುರಿತು ಗಂಭೀರ ತಕರಾರುಳ್ಳ ಕಾಂಗ್ರೆಸ್‌ನೊಳಗಿನ ಹಲವರ ಆಯ್ಕೆಯೂ ಹೌದು. ಆದರೆ ಪಕ್ಷವೊಂದನ್ನು ಅಧಿಕಾರಕ್ಕೆ ತರಲು ಅಷ್ಟು ಮಾತ್ರ ಸಾಕಾಗದು. ಅದರಲ್ಲೂ ಇಂದಿನ ಪರಿಸ್ಥಿತಿಯಲ್ಲಿ ಅವರು ಎದುರಿಸಬೇಕಿರುವುದು ಹೊಸಕಾಲದ ಬಿಜೆಪಿಯನ್ನು. ಅದಕ್ಕೆ ಹಳೆಯ ಕಾಲದ ವರಸೆಗಳಷ್ಟೇ ಸಾಕಾಗವು ಎಂಬುದನ್ನು ಅವರಾಗಲೀ, ದಾವಣಗೆರೆ ಕಾರ್ಯಕ್ರಮದ ಇತರ ಸಂಘಟಕರಾಗಲೀ ಅರಿತಂತೆ ಕಾಣುವುದಿಲ್ಲ.

ಇದೂ ಓದಿ: ಸಿದ್ದರಾಮಯ್ಯ ಸುತ್ತ ಹೀಗೊಂದು ಜಿಜ್ಞಾಸೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಿದ್ದರಾಮಯ್ಯ 75: ಹಳೇ ರಾಜಕಾರಣದ ಕಡೇ ವರಸೆ…ಲೇಖನ ೮೦ ರ ದಶಕದ ಲಂಕೇಶ್ ಪತ್ಪಿಕೆ ನೆನಪು ತಂದಿತು .. ಇಂದಿನ ಬಿಜೆಪಿ ಎದುರಿಸಲು ಇದೆಲ್ಲ ಸಾಕಾಗುವುದಿಲ್ಲ ಎಂಬುದು ಸತ್ಯ.,
    ಚೆಂದಾದ ರಾಜಕೀಯ ಲೇಖನ ಕೊಟ್ಟ ನಿಮಗೆ ಧನ್ಯವಾದಗಳು…

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...