ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಗೀತಾಂಜಲಿ ಶ್ರೀ ಅವರನ್ನು ಗೌರವಿಸಲು ಆಗ್ರಾದಲ್ಲಿ ಶನಿವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ಅವರ ಬಹುಮಾನ ವಿಜೇತ ಕಾದಂಬರಿ ‘ರೆತ್ ಸಮಾಧಿ’ ವಿರುದ್ಧ ದೂರು ದಾಖಲಿಸಿದ ಕಾರಣ ರದ್ದುಗೊಳಿಸಲಾಗಿದೆ ಎಂದು ಸಂಘಟಕರು ತಿಳಿಸಿರುವುದಾಗಿ ‘ಸ್ಕ್ರಾಲ್.ಇನ್’ ವರದಿ ಮಾಡಿದೆ.
ಉತ್ತರ ಪ್ರದೇಶದ ಹತ್ರಾಸ್ ನಿವಾಸಿ ಸಂದೀಪ್ ಕುಮಾರ್ ಪಾಠಕ್ ಎಂಬವರು ನಗರದಲ್ಲಿ ದೂರು ದಾಖಲಿಸಿದ್ದು, ಪುಸ್ತಕದಲ್ಲಿ ಹಿಂದೂ ದೇವತೆಗಳಾದ ಶಿವ ಮತ್ತು ಪಾರ್ವತಿಯ ಬಗ್ಗೆ ಆಕ್ಷೇಪಾರ್ಹ ಅಭಿಪ್ರಾಯಗಳಿವೆ ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಕುರಿತು ಎಫ್‌ಐಆರ್ ದಾಖಲಾಗಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಅವರು ಟ್ವೀಟ್ ಮೂಲಕ ಒತ್ತಾಯಿಸಿರುವುದಾಗಿ ಕಾರ್ಯಕ್ರಮ ಸಂಘಟಕರು ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಿಸುವ ಬಗ್ಗೆ ನಿರ್ಧರಿಸುವ ಮೊದಲು ಪುಸ್ತಕವನ್ನು ಓದುತ್ತೇವೆ ಎಂದು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ.
ವಿಷಯ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಗೀತಾಂಜಲಿ ಶ್ರೀ, “ನನಗೆ ನೋವಾಗಿದ್ದು, ಸದ್ಯಕ್ಕೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಲು ಇಚ್ಛಿಸುವುದಿಲ್ಲ” ಎಂದು ಸಂಘಟಕರಿಗೆ ತಿಳಿಸಿದ್ದಾರೆ.
ಹತ್ರಾಸ್‌ನಲ್ಲಿ ದಾಖಲಾಗಿರುವ ದೂರಿನ ಕುರಿತು ಸ್ಥಳೀಯ ಮಾಧ್ಯಮಗಳು ಬುಧವಾರ ವರದಿ ಮಾಡಿದ ನಂತರ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮಕ್ಕೆ ಕೆಲವು ಸಮಾಜ ವಿರೋಧಿಗಳು ಅಡ್ಡಿಪಡಿಸಲು ಪ್ರಯತ್ನಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
“ನನ್ನ ಕಾದಂಬರಿಯನ್ನು ಬಲವಂತವಾಗಿ ರಾಜಕೀಯ ವಿವಾದಕ್ಕೆ ಎಳೆಯಲಾಗುತ್ತಿದೆ. ಕಾದಂಬರಿಯಲ್ಲಿ ಮಾಡಲಾದ ಉಲ್ಲೇಖಗಳು ಭಾರತೀಯ ಪುರಾಣಗಳ ಅವಿಭಾಜ್ಯ ಅಂಗವಾಗಿವೆ. ಈ ವಿವರಣೆಗಳ ಬಗ್ಗೆ ಆಕ್ಷೇಪವಿರುವವರು ಹಿಂದೂ ಪುರಾಣ ಗ್ರಂಥಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು” ಎಂದು ಗೀತಾಂಜಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗೀತಾಂಜಲಿಯವರ ‘ರೆತ್ ಸಮಾಧಿ’ ಕೃತಿಯನ್ನು ಡೈಸಿ ರಾಕ್‌ವೆಲ್ ಅವರು ‘ಟಾಂಬ್ ಆಫ್ ಸ್ಯಾಂಡ್’ ಎಂದು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇದು ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ 2022 ಅನ್ನು ಗೆದ್ದಿದೆ. ಅನುವಾದಗೊಂಡು ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಹಿಂದಿ ಕಾದಂಬರಿ, ಭಾರತ ಮತ್ತು ದಕ್ಷಿಣ ಏಷ್ಯಾದಿಂದ ಆಯ್ಕೆಯಾದ ಮೊದಲ ಕಾದಂಬರಿ ಎಂಬ ಹೆಗ್ಗಳಿಕೆಗೂ ಈ ಕೃತಿ ಪಾತ್ರವಾಗಿದೆ.
ಸಾಂಸ್ಕೃತಿಕ ಸಂಸ್ಥೆಗಳಾದ ರಂಗಲೀಲಾ ಮತ್ತು ಆಗ್ರಾ ಥಿಯೇಟರ್ ಕ್ಲಬ್ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಆಗ್ರಾದ ಕ್ಲಾರ್ಕ್ಸ್ ಶಿರಾಜ್ ಹೋಟೆಲ್‌ನಲ್ಲಿ ಶನಿವಾರ ಸಂಜೆ ಕಾರ್ಯಕ್ರಮ ನಡೆಯಬೇಕಿತ್ತು.
ಇದನ್ನೂ ಓದಿರಿ: ಡಬ್ ಸಿನಿಮಾ ‘ಡೊಳ್ಳು’ ಸಿಂಕ್‌ಸೌಂಡ್ ವಿಭಾಗದಲ್ಲಿ ಆಯ್ಕೆ: ‘ರಾಷ್ಟ್ರಪ್ರಶಸ್ತಿ ಲಾಬಿ’ ರಾಜಕಾರಣದ ಕಥೆ ಇದು!
ಬಹುದೊಡ್ಡ ಗೌರವಕ್ಕೆ ಪಾತ್ರರಾಗಿರುವ ಗೀತಾಂಜಲಿಯವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಆದರ್ಶಯುತವಾಗಿ ಗೌರವಿಸಬೇಕಿತ್ತು ಎಂದು ರಂಗಲೀಲಾ ವಕ್ತಾರ ರಾಮಭಾರತ್ ಉಪಾಧ್ಯಾಯ ಅವರು ಸ್ಕ್ರಾಲ್ ಜಾಲತಾಣಕ್ಕೆ ಪ್ರತಿಕ್ರಿಯಿಸಿದ್ದಾರೆ.
“ಉತ್ತರ ಪ್ರದೇಶ ಗೀತಾಂಜಲಿಯವರ ಜನ್ಮಸ್ಥಳ. ಸರ್ಕಾರ, ಮುಖ್ಯಮಂತ್ರಿಯವರು ಗೀತಾಂಜಲಿಯವರನ್ನು ಸನ್ಮಾನಿಸಬೇಕಿತ್ತು. ಬದಲಿಗೆ ನಾವು ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಗಿದೆ. ಇದು ನಾಚಿಕೆಗೇಡಿನ ವಿಷಯ” ಎಂದು ವಿಷಾದಿಸಿದ್ದಾರೆ.


