Homeಮುಖಪುಟಮೂರು ತಾಸುಗಳ ರಾಜೀನಾಮೆ ರಾಜಕಾರಣ: ಪಿಚ್ಚರ್‍ಗೆ ಕಾದವರಿಗೆ ಸಿಕ್ಕಿದ್ದು ಟ್ರೈಲರ್ ಮಾತ್ರ

ಮೂರು ತಾಸುಗಳ ರಾಜೀನಾಮೆ ರಾಜಕಾರಣ: ಪಿಚ್ಚರ್‍ಗೆ ಕಾದವರಿಗೆ ಸಿಕ್ಕಿದ್ದು ಟ್ರೈಲರ್ ಮಾತ್ರ

- Advertisement -
- Advertisement -

ನಾಲ್ಕೈದು ತಾಸುಗಳ ಪೊಲಿಟಿಕಲ್ ಹೈಡ್ರಾಮಾ ನಡೆದಷ್ಟೇ ವೇಗವಾಗಿ ತಾತ್ಕಾಲಿಕವಾಗಿ ತಣ್ಣಗಾಗಿದೆ. ಒಂತರಾ ರಾಜ್ಯದ ಬಹುಭಾಗಗಳಲ್ಲಿ ರಪ್ ರಪ್ ಅಂತ ಹೊಡೆಯಲು ಶುರು ಮಾಡಿ, ಹತ್ತೇ ನಿಮಿಷದಲ್ಲಿ ಪಟ್ ಅಂತ ನಿಂತು ಹೋಗುತ್ತಿರುವ ಮಳೆಯಂತೆ…

ಈ ಐದಾರು ತಾಸುಗಳಲ್ಲಿ ಮೂರು ತಾಸಂತೂ ತಿರುವು ನೀಡುವಂತಹ ಪಿಚ್ಚರ್‍ನಂತೆ ಭಾಸವಾಗಿತು. ಸಿನಿಮಾದ ಪಾತ್ರಧಾರಿಗಳೆಲ್ಲ ಮೂಕನಾಯಕರು. ಅವರು ಸ್ಪೀಕರ್ ಕೊಠಡಿಯಲ್ಲಿ ಹೋಗಿ ಕೂತರು. ಕೆಲವರು (ಅಧಿಕೃತವಾಗಿ 11) ಸ್ಪೀಕರ್ ಕಾರ್ಯದರ್ಶಿಗೆ ರಾಜಿನಾಮೆ ನೀಡಿ ಸ್ವೀಕೃತಿ ಪಡೆದರು. ಅಲ್ಲಿ ಟ್ರಬಲ್‍ಶೂಟರ್ ಖ್ಯಾತಿಯ ಡಿ.ಕೆ ಶಿವಕುಮಾರ್ ಎಂಟ್ರಿ ಕೊಟ್ಟರು. ರಾಜಿನಾಮೆ ಕೊಡಲು ಬಂದಿದ್ದ ಶಾಸಕರ ಪೈಕಿ ಒಂದು ದೊಡ್ದ ಗುಂಪು ರಾಜ್ಯಪಾಲರ ಭವನ ತಲುಪಿತು. ನಾಲ್ವರು ಶಾಸಕರು ಡಿ.ಕೆ ಶಿವಕುಮಾರ್ ಜೊತೆ ಹೋದರು….

‘ಹೊಸ ಸರ್ಕಾರ’ ಎಂಬ ಪಿಚ್ಚರ್ ಹೀಗೆ ಟ್ರೈಲರ್‍ನಲ್ಲಿ ಸದ್ಯಕ್ಕೆ ಸ್ಟಾಪ್ ಆಗಿದೆ. ಇದರ ನಿರ್ದೇಶಕ ಯಾರು, ನಿರ್ಮಾಪಕ ಯಾರು ಎಂಬುದೇ ಇನ್ನೂ ಅಸ್ಪಷ್ಟವಾಗಿದೆ.

ಮಧ್ಯಾಹ್ನ 2.30ರ ಸುಮಾರಿಗೆ ಸ್ಪೀಕರ್ ರಮೇಶಕುಮಾರ್ ಕಾಣಿಸಿಕೊಂಡ ಮೇಲಷ್ಟೇ ಒಂದು ಸ್ಪಷ್ಟ ಚಿತ್ರಣ ಸಿಕ್ಕಿದೆ. ಅವರು ಹೇಳಿದ ಪ್ರಕಾರ, 11 ಶಾಸಕರು ಅವರ ಕಾರ್ಯದರ್ಶಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ತಮಗೆ ಯಾವುದೇ ಮಾಹಿತಿ ನೀಡದೇ ಶಾಸಕರು ರಾಜಿನಾಮೆ ನೀಡಲು ಬಂದಿದ್ದಾರೆ, ಮೊದಲೆ ಗೊತ್ತಿದ್ದರೆ ನಾನು ನನ್ನ ವೈಯಕ್ತಿಕ ಕೆಲಸ ಬಿಟ್ಟು ಕಚೇರಿಗೆ ಬರುತ್ತಿದ್ದೆ. ನಾಳೆ ರವಿವಾರ ರಜೆ, ಸೋಮವಾರ ನನಗೆ ಪೂರ್ವನಿಗದಿತ ಕಾರ್ಯಕ್ರಮವಿದೆ. ಹೀಗಾಗಿ ನಾನು ಮಂಗಳವಾರ ಕಚೇರಿಗೆ ಬಂದು ಎಲ್ಲವನ್ನೂ ಪರಿಶೀಲಿಸುವೆ ಎನ್ನುವ ಮೂಲಕ ಶನಿವಾರದ ಈ ಹಗಲು ಹೈಡ್ರಾಮಾಕ್ಕೆ ತಕ್ಷಣದ ಬ್ರೇಕ್ ಹಾಕಿದ್ದಾರೆ. ಗಂಟಲು ಒಣಗಿಸಿಕೊಂಡ ಆ್ಯಂಕರ್‍ಗಳು ನೀರು ಕುಡಿದು ವಿಶ್ಲೇಷಣೆಗೆ ಇಳಿದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಕಮಲ: ಮಸ್ಕಿ ಶಾಸಕನ ಆಪರೇಷನ್ ಕಂಡಿಶನ್ ಕೇಳಿದರ ನೀವು ನಗುತ್ತೀರಿ..

ಹೈಡ್ರಾಮಾದ ಪಾತ್ರಧಾರಿಗಳು
ಇವತ್ತು ದಿಢೀರ್ ಎನಿಸುವಂತೆ ನಡೆದ ಈ ರಾಜಿನಾಮೆ ಪ್ರಸಂಗ ಪೂರ್ವ ನಿಯೋಜಿತವಾಗಿತ್ತು, ಪಕ್ಕಾ ವ್ಯವಸ್ಥಿತವಾಗಿತ್ತು. ಇಲ್ಲೆಲ್ಲೂ ಬಿಜೆಪಿ ಸೀನ್‍ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಈ ಸಾರಿ ಆಶ್ಚರ್ಯವೆಂದರೆ ಈ ಗುಂಪಿನಲ್ಲಿ ಜೆಡಿಎಸ್‍ನ ಮೂವರು ಶಾಸಕರು, ಸಿದ್ರಾಮಯ್ಯನವರ ಬೆಂಬಲಿಗರಾದ ಮೂವರು ಬೆಂಗಳೂರು ಶಾಸಕರು, ಇತ್ತೀಚೆಗೆ ಮುನಿಸಿಕೊಂಡಿರುವ ರಾಮಲಿಂಗಾರೆಡ್ಡಿ, ಅವರ ಪುತ್ರಿ ಸೌಮ್ಯರೆಡ್ಡಿ, ಅಂಜಲಿ ನಿಂಬಾಳ್ಕರ್ ಕೂಡ ಇದ್ದರು.

ವಿಧಾನಸೌಧದದ ಕಾರಿಡಾರಿನಲ್ಲಿ ಗುಂಪಾಗಿ ಹೋದ 12-14 ಜನರ ಶಾಸಕರ ತಂಡ ರಾಜಿನಾಮೆ ನೀಡಿಯೇ ಸಿದ್ದ ಎಂಬ ಧಾವಂತದಲ್ಲಿ ಸ್ಪೀಕರ್ ಕಚೇರಿ ತಲುಪಿ ಅಲ್ಲಿ ಆಸೀನರಾದರು. ಅಲ್ಲಿ ಕಾಣಿಸಿಕೊಂಡವರು ಮತ್ತು ಕೇಳಲ್ಪಟ್ಟ ಹೆಸರುಗಳು:
ಕಾಂಗ್ರೆಸ್: ರಾಮಲಿಂಗಾರೆಡ್ಡಿ, ಎಸ್. ಟಿ. ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನಂ, ಸೌಮ್ಯರೆಡ್ಡಿ, ರೋಶನ್ ಬೇಗ್, ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ಪ್ರತಾಪಗೌಡ ಪಾಟೀಲ, ಬಿ.ಸಿ ಪಾಟೀಲ, ನಾಗೇಂದ್ರ, ಸುಧಾಕರರೆಡ್ಡಿ, ಸುಬ್ಬಾರೆಡ್ಡಿ, ಬಸನಗೌಡ ದದ್ದಲ್, ಮಹೇಶ ಕುಮಟಳ್ಳಿ, ಆನೇಕಲ್ ಶಿವಣ್ಣ, ಆನಂದ್‍ಸಿಂಗ್, ಶಿವರಾಮ್ ಹೆಬ್ಬಾರ್…

ಜೆಡಿಎಸ್: ಎಚ್ ವಿಶ್ವನಾಥ್, ಕೆ. ಗೋಪಾಲಯ್ಯ, ಕೆ.ಆರ್ ಪೇಟೆಯ ನಾರಾಯಣಗೌಡ..

ಇಷ್ಟರಲ್ಲಿ ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದವರು

ರಾಮಲಿಂಗಾರೆಡ್ಡಿ, ಎಚ್ ವಿಶ್ವನಾಥ್, ಪ್ರತಾಪಗೌಡ ಪಾಟೀಲ, ಬಿ.ಸಿ ಪಾಟೀಲ್, ಬೈರತಿ ಬಸವರಾಜ, ನಾರಾಯಂಗೌಡ, ಶಿವರಾಮ್ ಹೆಬ್ಬಾರ್, ಮಹೇಶ ಕುಮಟಳ್ಳಿ, ಕೆ. ಗೋಪಾಲಯ್ಯ, ಜಾರಕಿಹೊಳಿ, ಆನಂದಸಿಂಗ್ ( ಕೊನೆಯ ಇಬ್ಬರು ಮೊನ್ನೆಯೇ ಸಲ್ಲಿಸಿದ್ದರು)..

ಈಗ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿದೆ. ಇನ್ನೊಂದು ಕಡೆ ಡಿ.ಕೆ. ಶಿವಕುಮಾರ್ ರಾಮಲಿಂಗಾರೆಡ್ಡಿಯವರನ್ನು ಕರೆದುಕೊಂಡು ಹೋಗಿ ಮಾತುಕತೆ ನಡೆಸುತ್ತಿದ್ದಾರೆ. ಇದಿಷ್ಟು ಹೊರನೋಟಕ್ಕೆ ಕಾಣುತ್ತಿರುವ ಬೆಳವಣಿಗೆ. ರಾಜಿನಾಮೆ ನೀಡಿದವರು ಮುಂಬೈ ಅಥವಾ ಇನ್ನಾವುದೋ ರೆಸಾರ್ಟಿಗೆ ಹೋಗುವ ಸಾಧ್ಯತೆಗಳಿವೆ.

ಸರ್ಕಾರ ಆತಂಕದಲ್ಲಿರುವುದೂ ಗೊತ್ತಿದ್ದೂ ಸಿಎಂ ಕುಮಾರಸ್ವಾಮಿ ವಿದೇಶದಲ್ಲಿರುವುದು, ದಿನೇಶ ಗುಂಡುರಾವ್ ಕೂಡ ವಿದೇಶದಲ್ಲಿರುವುದು ವಿಚಿತ್ರವಾಗಿದೆ. ಮಂಗಳವಾರದವರೆಗೂ ಟೈಮ್ ಸಿಕ್ಕಿರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಶಾಸಕರನ್ನು ಉಳಿಸಿಕೊಳ್ಳಲು ಅವಕಾಶ ಸಿಕ್ಕಿದೆ. ರಾಮಲಿಂಗಾರೆಡ್ಡಿಯ ನಿರ್ಧಾರ ಈಗ ಮುಖ್ಯವಾಗಿದೆ. ಈಗಿರುವ ಕಾಂಗ್ರೆಸ್ ಸಚಿವರಿಂದ ಸಚಿವ ಸ್ಥಾನ ಹಿಂಪಡೆದು, ಅತೃಪ್ತರಿಗೆ ಸಚಿವ ಪಟ್ಟು ನೀಡಬಹುದು.

ಆದರೆ, ಇವತ್ತಿನ ಒಟ್ಟು ಬೆಳವಣಿಗೆಗಳು ಮಾತ್ರ ಅಸಹ್ಯಕರವೇ ಆಗಿದ್ದವು. ಸ್ಪೀಕರ್‍ಗೆ ಸಂದೇಶ ಕೊಡದೇ, ಮಾಧ್ಯಮದವರನ್ನು ಕರೆದುಕೊಂಡು ಹೋಗಿ ಸ್ಪೀಕರ್ ಕಚೇರಿಯಲ್ಲಿ ಟೆಂಟು ಹಾಕಿದ್ದು, ಅಲ್ಲಿಗೆ ಡಿಕೆ ಶಿವಕುಮಾರ್ ನುಗ್ಗಿದ್ದು, ಚಾನೆಲ್‍ಗಳು ಬಿದ್ದೇ ಹೋಯ್ತು ಎಂದು ಅರಚಿ ಸುಸ್ತಾಗಿದ್ದು… ಇಲ್ಲಿ ಯಾರಿಗೂ ತಾಳ್ಮೆಯಿಲ್ಲ. ಯಾವ ನಿಯಮ ಪಾಲನೆಯೂ ಬೇಕಾಗಿಲ್ಲ. ಒಟ್ಟಿನಲ್ಲಿ ಒಂದು ಟ್ರೈಲರ್ ಅನ್ನು ರಾಜ್ಯದ ಜನತೆ ವೀಕ್ಷಿಸಿ ಮನರಂಜನೆ ಪಡೆದಿದ್ದಾರೆ.

ಹೊಸ ಸರ್ಕಾರ ಬರುತ್ತೋ, ರಾಷ್ಟ್ರಪತಿ ಆಡಳಿತವೋ, ಮೈತ್ರಿ ಸರ್ಕಾರಕ್ಕೆ ಹೊಸ ಮುಖ್ಯಮಂತ್ರಿಯೋ? ಎಲ್ಲ ಸಾಧ್ಯತೆಗಳೂ ಇವೆ. ರೆಸಾರ್ಟ್ ರಾಜಕಾರಣ ಮತ್ತೆ ಗರಿಗೆದರುತ್ತಿದೆ ಎಂಬುದಂತೂ ಸ್ಪಷ್ಟ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...