(ದಲಿತ, ಆದಿವಾಸಿ, ಅಲೆಮಾರಿ ಮತ್ತು ರೈತ ಹೋರಾಟಗಳ ಮುಚ್ಚಿಟ್ಟ ಕಥನಗಳು: ಭಾಗ-1)
2022ರ ಅಗಸ್ಟ್ 15ಕ್ಕೆ ಸ್ವತಂತ್ರ ಭಾರತಕ್ಕೆ 75 ವರ್ಷಗಳು ತುಂಬುತ್ತವೆ. ಹಿಂತಿರುಗಿ ನೋಡುವುದಕ್ಕೆ ಮತ್ತು ತೀವ್ರ ಆತ್ಮಾವಲೋಕನಕ್ಕೆ ಇದು ಸೂಕ್ತ ಸಂದರ್ಭ. ನಮಗೆ ಸಿಕ್ಕ ಸ್ವಾತಂತ್ರ್ಯವು ಇಲ್ಲಿನ ಸಮುದಾಯಗಳನ್ನು ಹೇಗೆ ತಲುಪಿದೆ? ಯಾವಯಾವ ಹಂತದಲ್ಲಿ ನಮ್ಮ ವಿಮೋಚನೆ ಸಾಧ್ಯವಾಗಿದೆ ಎಂಬುದನ್ನು ಈಗ ಪುನರಾವಲೋಕಿಸಬೇಕಿದೆ. ಜೊತೆಗೆ ನಮಗೆ ಸಿಕ್ಕ ‘ಸ್ವಾತಂತ್ರ್ಯ’ವನ್ನು ವರ್ತಮಾನಕ್ಕೆ ಅನುಗುಣವಾಗಿ ಮತ್ತೆ ವ್ಯಾಖ್ಯಾನಿಸುವ ಅಗತ್ಯವೂ ಇದೆ. ಬ್ರಿಟಿಷ್ ವಸಾಹತುಶಾಹಿಯಿಂದ ಭಾರತವು ಸ್ವಾತಂತ್ರ್ಯ ಪಡೆಯಲು ನಡೆಸಿದ ಹೋರಾಟವನ್ನು ನಮ್ಮ ದೇಶದ ಇತಿಹಾಸಕಾರರು ಅನೇಕ ಬಗೆಗಳಲ್ಲಿ ವಿಶ್ಲೇಷಿಸಿದ್ದಾರೆ. ಹಲವು ಬೌದ್ಧಿಕ ವಲಯಗಳಲ್ಲಿ ನಡೆದ ಈ ವಿಶ್ಲೇಷಣೆಗಳು ಸ್ವಾತಂತ್ರ್ಯ ಹೋರಾಟದ ಪೂರ್ಣ ಚಿತ್ರಣವನ್ನು ಕೊಡುವಲ್ಲಿ ವಿಫಲವಾಗುತ್ತಲೇ ಬಂದಿವೆ. ವಸಾಹತುಶಾಹಿ ಆಕ್ರಮಣದ ಯಾವ ಕಾಲಘಟ್ಟದಲ್ಲಿ ಭಾರತವು ಒಂದು ಸಮುದಾಯವಾಗಿ ತಿರುಗಿಬಿದ್ದು ಹೋರಾಟವನ್ನು ಕಟ್ಟಿತು? ಎಂಬ ಪ್ರಶ್ನೆಗೆ ಸುಲಭ ಉತ್ತರಗಳು ಲಭ್ಯವಿಲ್ಲ. ಲಭ್ಯವಿರುವ ಸುಲಭ ಉತ್ತರಗಳೂ ಸಹ ಆಯಾ ಬಣಗಳ ರಾಜಕಾರಣದ ಫಲವಾಗಿ ಹುಟ್ಟಿ, ಅಸ್ತಿತ್ವದಲ್ಲಿವೆ. ‘ಸ್ವಾತಂತ್ರ್ಯ ಹೋರಾಟ’ ಎಂದರೇನು? ಎಂಬುದಕ್ಕೆ ಅನೇಕ ವ್ಯಾಖ್ಯಾನಗಳಿದ್ದರೂ, ವಿಶಾಲ ತಳಹದಿಯಲ್ಲಿ ಒಂದು ಸಮುದಾಯ ತನ್ನ ‘ವಿಮೋಚನೆಗಾಗಿ ನಡೆಸಿದ ಸಂಘರ್ಷ’ ಎಂಬ ಅರ್ಥದಲ್ಲಿ ಗ್ರಹಿಸಲಾಗುತ್ತದೆ. ಗುಲಾಮಗಿರಿ, ದಾಸ್ಯ, ಅಧೀನತೆಯನ್ನು ಮೀರಿ ನಿಲ್ಲಲು ಒಂದು ನಿರ್ದಿಷ್ಟ ಪ್ರದೇಶದ ಜನ ‘ವಿಮೋಚನೆ’ಗಾಗಿ ನಡೆಸಿದ ಹೋರಾಟವನ್ನು ಸ್ಥೂಲ ಅರ್ಥದಲ್ಲಿ ‘ಸ್ವಾತಂತ್ರ್ಯ ಹೋರಾಟ’ ಎನ್ನಬಹುದು.
ಭಾರತವು ಒಂದು ಸಮುದಾಯವಾಗಿ ತನ್ನ ರಾಜಕೀಯ ವಿಮೋಚನೆಗೆ ನಡೆಸಿದ ಸುದೀರ್ಘ ಸಂಘರ್ಷವು ಸಹ ಸ್ವಾತಂತ್ರ್ಯ ಹೋರಾಟವೇ ಆಗಿದೆ. ಆದರೆ ಈ ಹೋರಾಟವು ಇಂತಹ ನಿರ್ದಿಷ್ಟ ಇಸ್ವಿಯಿಂದ ಶುರುವಾಗಿ, 1947ರ ಅಗಸ್ಟ್ಟ್ 15ಕ್ಕೆ ನಾವು ಸ್ವಾತಂತ್ರ್ಯ ಪಡೆದ ನಂತರ ಕೊನೆಗೊಂಡಿತು ಎಂದು ಹೇಳಿಬಿಡುವಷ್ಟು ಸರಳ ರೇಖಾತ್ಮಕವಾಗಿದೆಯೇ? ಬ್ರಿಟಿಷ್ ವಸಾಹತುಶಾಹಿಯಿಂದ ‘ನಾವು’ ಪಡೆದದ್ದು ಯಾವ ಬಗೆಯ ಸ್ವಾತಂತ್ರ್ಯ? 1947ರ ನಂತರ ಭಾರತ ಒಂದು ಸಮುದಾಯವಾಗಿ ಪಡೆದ ಸ್ವಾತಂತ್ರ್ಯ ಅತ್ಯಂತಿಕವಾದದ್ದೆ? 1947ರ ಅಗಸ್ಟ್ 15ರಂದು ವಸಾಹತು ಯಜಮಾನಿಕೆ ಕೊನೆಗೊಂಡಿತೆ? ಅಂದು ವಸಾಹತುವಾಗಿದ್ದ ಭಾರತವು ಯಾವ ಬಗೆಯ ವಿಮೋಚನೆಯನ್ನು ಪಡೆಯಿತು? ಎಂಬ ಪ್ರಶ್ನೆಗಳು ಈ 75 ವರ್ಷಗಳಲ್ಲಿ ಹಲವರನ್ನು ಕಾಡಿರಬಹುದು. ಸರ್ವೇಸಾಮಾನ್ಯ ಸಂಗತಿ ಎಂದರೆ, ರಾಷ್ಟ್ರ ವಿಮೋಚನೆಗಾಗಿ ನಡೆದ ಹೋರಾಟವು 1857ರಲ್ಲಿ ಈ ದೇಶದ ದುಡಿವ ಜನರೆ ಸಂಘಟಿಸಿದ ವಸಾಹತು ವಿರೋಧಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಅಥವಾ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಯ ನಂತರ ಶುರುವಾಯಿತು ಎಂದು ನಮ್ಮನ್ನು ನಂಬಿಸಲಾಗಿದೆ. ದೇಶ ವಿಮೋಚನೆಯ ಹೋರಾಟಕ್ಕೆ 1917ರಲ್ಲಿ ಗಾಂಧೀಜಿ ಚಂಪಾರಣ್ ಮೂಲಕ ಕಾಲಿಟ್ಟ ದಿನದಿಂದ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು ಎಂದು ಕೆಲ ‘ರಾಷ್ಟ್ರೀಯವಾದಿ’ ಚರಿತ್ರೆಕಾರರು ಅಭಿಪ್ರಾಯಪಡುತ್ತಾರೆ.
ಹಾಗಾದರೆ 1757ರಲ್ಲಿ ಪ್ಲಾಸಿ ಯುದ್ಧದ ನಂತರ ಬಂಗಾಳವನ್ನು ವಶಪಡಿಸಿಕೊಂಡ ಬ್ರಿಟಿಷರು ಹಂತಹಂತವಾಗಿ ದೇಶವನ್ನು ಕಬಳಿಸುತ್ತಾ ಬಂದಾಗ ಇಲ್ಲಿ ಸ್ವಾಭಿಮಾನಿ ಪ್ರತಿಭಟನೆಗಳು ನಡೆಯಲಿಲ್ಲವೆ? 1783ರಲ್ಲಿ ವಸಾಹತುಶಾಹಿಗಳು ಈ ದೇಶದ ನೆಲವನ್ನು ನುಂಗಿ ಹಾಕುವ ಕಾಯಂ ಜಮೀನ್ದಾರಿ (ಪರ್ಮನೆಂಟ್ ಸೆಟ್ಲಮೆಂಟ್ ಆಕ್ಟ್) ಕಾನೂನನ್ನು ತಂದ ಹೊಸತರಲ್ಲಿ ಅದನ್ನು ಯಾರೂ ಪ್ರತಿಭಟಿಸಲಿಲ್ಲವೆ? ಬ್ರಿಟಿಷರ ಈ ಆಕ್ರಮಣವನ್ನು ಅಂದು ವಿರೋಧಿಸಲು ನಮ್ಮ ದೇಶದಲ್ಲಿ ಒಂದು ಆತ್ಮಪ್ರತ್ಯಯದ ರಾಜಕೀಯ ಸಂಸ್ಕೃತಿ ಎಂಬುದೇ ಇರಲಿಲ್ಲ. ಆಗ ಇದ್ದದ್ದು ಅಧಿಕಾರಕ್ಕಾಗಿ ಬಾಯಿಬಿಟ್ಟು ದೈನೇಸಿಯಾಗಿ ನಿಂತಿದ್ದ ಚೌಕಾಸಿ ಪಾಳೇಗಾರಿ ಮತ್ತು ಸಾಮಂತಶಾಹಿ ರಾಜಕಾರಣ. ದೇಶ ಮತ್ತು ದೇಶದ ಜನ, ಈ ನೆಲದ ಸ್ವಾಭಿಮಾನಗಳು ಈ ದೈನೇಸಿ ರಾಜಕಾರಣದ ಮುಂದೆ ಯಕಶ್ಚಿತವಾಗಿದ್ದವು. ಯುರೋಪಿನ ವಸಾಹತುಶಾಹಿಗಳು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ರೂಪಿಸುತ್ತಿದ್ದ ತಂತ್ರ ಮತ್ತು ದುರಾಕ್ರಮಗಳನ್ನು ಅರ್ಥಮಾಡಿಕೊಳ್ಳಲಾಗದಷ್ಟು ಸ್ಥಳೀಯ ಊಳಿಗಮಾನ್ಯ ಪ್ರಭುಗಳ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿದ್ದವು. ಬ್ರಿಟಿಷ್ ವಸಾಹತುಶಾಹಿಯು ಆಕ್ರಮಣಕಾರಿ ಕಾನೂನುಗಳನ್ನು ರೂಪಿಸುತ್ತ ಇಲ್ಲಿನ ಕೃಷಿ ಭೂಮಿಯನ್ನು ಮತ್ತು ಕೃಷಿಕನನ್ನು, ಕಾಡನ್ನು, ಆದಿವಾಸಿಗಳನ್ನು, ಅಷ್ಟೇ ಅಲ್ಲದೆ, ಸ್ಥಳೀಯ ವ್ಯಾಪಾರ ವಹಿವಾಟುಗಳನ್ನು ನಿರ್ವಹಿಸುತ್ತಿದ್ದ ಅಲೆಮಾರಿಗಳನ್ನು ದಮನ ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಸ್ಥಳೀಯ ಪಾಳೇಪಟ್ಟುಗಳು ಮತ್ತು ರಾಜರುಗಳು ಬೀದಿ ತಮಾಷೆ ನೋಡುತ್ತ ಕುಳಿತಿದ್ದರು. ‘ಆ ಭೂಮಿ, ಕಾಡು, ಕಣಿವೆಗಳೆಲ್ಲ ನಮ್ಮವೇನಲ್ಲ, ಅವನ್ನು ಬೇಕಾದರೆ ಕಿತ್ತುಕೊಳ್ಳಲಿ, ಬದಲಿಗೆ ನಮ್ಮ ಕಿರೀಟಗಳುಳಿದರೆ ಸಾಕು’ ಎಂದು ಅವರು ಜಡವಾಗಿದ್ದರು.
ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಕಾಯಂ ಜಮೀನ್ದಾರಿ ಕಾನೂನನ್ನು ಮೊದಲಿಗೆ ವಿರೋಧಿಸಿದವರು ಅಲೆಮಾರಿ ಸಂತರು. 1770ರಿಂದ 1777ರವರೆಗೆ ಈ ಅಲೆಮಾರಿ ಸಂತರು ಸನ್ಯಾಸಿ ಮತ್ತು ಫಕ್ಕೀರರ ವೇಷದಲ್ಲಿಯೇ ಬಂಗಾಳದ ಗವರ್ನರ್ ವಿರುದ್ಧ ತಿರುಗಿಬಿದ್ದಿದ್ದರು.(Biswamoy Pati, Adivasis in Colonial India, Survival, Resistance and Negotiations, Indian Council of Historical Research, Orient BlackSwan, 2011) ಬಂಗಾಳದ ಜಲಪೈಗುರಿ, ಮುರ್ಷಿದಾಬಾದ್ ಮತ್ತು ಬೈಕುಂತಪುರ ಅರಣ್ಯ ಪ್ರದೇಶದಲ್ಲಿ ನಡೆದ ಈ ಹೋರಾಟವು ಅಂದಿನ ಕಂಪನಿ ಆಡಳಿತವನ್ನು ಅಲ್ಲಾಡಿಸಿಬಿಟ್ಟಿತು. ಯಾವ ಧರ್ಮಕ್ಕೂ ಸೇರದ ಅಲೆಮಾರಿ ಸೂಫಿಗಳು ಮತ್ತು ನಾಗಾ ಸಂತರು ಈ ಹೋರಾಟವನ್ನು ಏಳು ವರ್ಷಗಳ ಕಾಲ ನಡೆಸಿದರು. ಕಂಪನಿ ಆಡಳಿತ ಈ ಸನ್ಯಾಸಿಗಳ ತಿರುಗಾಟವನ್ನು ತಡೆದಿತ್ತು; ಇವರು ತಿರುಗಾಟ ಮಾಡುತ್ತಿದ್ದ ಪ್ರದೇಶಗಳಲ್ಲಿನ ರೈತರಿಗೆ ಹೆಚ್ಚು ಭೂಕಂದಾಯವನ್ನು ಹಾಕಿತ್ತು. ರೈತರು ಕಂದಾಯ ಕಟ್ಟಲಾಗದೆ ಸ್ಥಳೀಯ ಜಮೀನ್ದಾರರಿಗೆ ತಮ್ಮ ಕೃಷಿಭೂಮಿಯನ್ನು ಬಿಟ್ಟುಕೊಟ್ಟು ನಿರ್ಗತಿಕರಾಗಿದ್ದರು. ಈ ಅಲೆಮಾರಿ ಫಕ್ಕೀರರು ಕಂಪನಿ ಆಡಳಿತದ ರೈತ ಪೀಡಕ ದಬ್ಬಾಳಿಕೆಯ ವಿರುದ್ಧ ಬಂಡೆದ್ದಿದ್ದರು. ಇದೇ ಸಂದರ್ಭದಲ್ಲಿ ಚೌರಾ ಅರಣ್ಯ ಪ್ರದೇಶದ ಭೂಮಿಜ್ ಆದಿವಾಸಿಗಳು ಭೂಕಂದಾಯ ಹೆಚ್ಚಿಸಿ ಫಲವತ್ತಾದ ಕಣಿವೆಗಳನ್ನು ವಶಪಡಿಸಿಕೊಳ್ಳುತ್ತಿದ್ದ ಕಂಪನಿ ಆಡಳಿತದ ವಿರುದ್ಧ ತಿರುಗಿಬಿದ್ದರು. ಜಯಮಹಲ್ ಬೆಟ್ಟ ಪ್ರದೇಶದಿಂದ ಹಿಡಿದು ಬಂಗಾಳದವರೆಗೆ ಹಬ್ಬಿದ ಈ ಗೆರಿಲ್ಲಾ ಹೋರಾಟವು ಆರಂಭದಲ್ಲಿ ಯಶಸ್ಸನ್ನು ಕಂಡರೂ ಸುಧಾರಿತ ಆಯುಧಗಳನ್ನು ಹೊಂದಿದ್ದ ಕಂಪನಿ ಸೈನ್ಯದ ಮುಂದೆ ಕುಸಿದು ಹೋಯಿತು.
ಇನ್ನು 1855ರ ಸಂತಾಲ ಆದಿವಾಸಿಗಳ ಹೋರಾಟವು ಚಾರಿತ್ರಿಕವಾದದ್ದು. ಜಮೀನ್ದಾರರು ಹಾಕಿದ ವಿಪರೀತ ತೆರಿಗೆಗಳನ್ನು ಕಟ್ಟಲಾಗದೆ ಸಂತಾಲರು ತಮ್ಮ ಫಲವತ್ತಾದ ಕಣಿವೆ ಜಮೀನಗಳನ್ನು ಕಳೆದುಕೊಂಡು ಅಲ್ಲಿಯೇ ಅವರ ಗುಲಾಮರಾಗಿ ದುಡಿವ ದುಸ್ಥಿತಿಗೆ ತಲುಪುತ್ತಾರೆ. ಬ್ರಿಟಿಷರಿಗೆ ಮಧ್ಯವರ್ತಿಗಳಾಗಿದ್ದ ಸ್ಥಳೀಯ ಭೂಮಾಲಿಕರು ಸಂತಾಲರನ್ನು ರಾಜಮಹಲ್ ಬೆಟ್ಟ ಪ್ರದೇಶದಲ್ಲಿ ನಾಲ್ಕೈದು ಬಾರಿ ಒಕ್ಕಲೆಬ್ಬಿಸುತ್ತಾರೆ. ಸಂತಾಲರು ಕಾಡೊಳಕ್ಕೆ ಹೋಗಿ ಅಲ್ಲಿ ತಮಗೆ ಬೇಕಾದ ತುಂಡು ಭೂಮಿಯನ್ನು ಸಾಗುವಳಿ ಮಾಡಿಕೊಳ್ಳುತ್ತಿದ್ದಂತೆ, ಜಮೀನ್ದಾರರು ಮತ್ತೆ ಅಲ್ಲಿಗೆ ನುಗ್ಗಿ ತಮ್ಮ ಆಧಿಪತ್ಯ ಸ್ಥಾಪಿಸುತ್ತಿದ್ದರು. ಸಂತಾಲರು ಅನಿವಾರ್‍ಯವಾಗಿ ಈ ಭೂಮಾಲೀಕರಿಗೆ ಗೇಣಿದಾರರಾಗುವುದರಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ವಿಪರೀತವಾಗಿದ್ದ ಬ್ರಿಟಿಷ್ ಕಂದಾಯವು ಹಣದ ರೂಪದಲ್ಲಿಯೇ ಸಂದಾಯವಾಗಬೇಕಿದ್ದುದರಿಂದ ಈ ಆದಿವಾಸಿಗಳು ತಮ್ಮ ಬೆಳೆಗಳನ್ನು ಮಾರಲು ಮಾರುಕಟ್ಟೆಯನ್ನೇ ಅವಲಂಬಿಸಬೇಕಿತ್ತು. ಮಾರುಕಟ್ಟೆಯಲ್ಲಿ ಆದಿವಾಸಿಗಳ ಉತ್ಪನ್ನಗಳನ್ನು ವರ್ತಕರು ಬೇಕೆಂದೇ ಕನಿಷ್ಠ ಬೆಲೆಗೆ ಕೊಳ್ಳುತ್ತಿದ್ದರು.(Singh. K. S, Tribal Movements in India, Vol – 1, Manohar, New Delhi, 1982) ಜೀವನ ನಿರ್ವಹಣೆಗೆ ಇದೇ ವರ್ತಕರ ಬಳಿ ಸಾಲ ಮಾಡದೆ ಸಂತಾಲರಿಗೆ ಬೇರೆ ದಾರಿಯೇ ಇರಲಿಲ್ಲ. ಇದಕ್ಕೆಲ್ಲ ಕಾರಣ ವಸಾಹತು ಆಡಳಿತದ ಕಂದಾಯ ನೀತಿ. ಅಲೆಕ್ಜಾಂಡರ್ ರೀಡ್ ಮತ್ತು ಥಾಮಸ್ ಮನ್ರೋ ತಂದ ವಿವಿಧ ಬಗೆಯ ತೆರಿಗೆಗಳು ಸ್ಥಳೀಯ ಕೃಷಿಕರನ್ನು ಹೈರಾಣಾಗಿಸಿದ್ದವು. ಇದನ್ನು ಮಾರ್ಕ್ಸ್ ’ಭಾರತದಲ್ಲಿ ತೆರಿಗೆಗಳು ಜಗತ್ತಿನ ಬೇರಾವುದೇ ದೇಶದಲ್ಲಿರುವುದಕ್ಕಿಂತ ಹೆಚ್ಚು ದುರ್ಬರವಾಗಿವೆ, ಪೀಡಕವಾಗಿವೆ. ಬ್ರಿಟಿಷ್ ಆಡಳಿತದ ಅಡಿ ಬರುವ ಪ್ರಾಂತಗಳಲ್ಲಿ ಬೇಸಾಯಗಾರರು ಅಂದರೆ ಹೆಚ್ಚಿನ ಸಂಖ್ಯೆಯ ಭಾರತೀಯ ಜನರು ಕಡುಬಡತನ ಮತ್ತು ದೀನಸ್ಥಿತಿಯಲ್ಲಿದ್ದಾರೆ’ (ಮಾರ್ಕ್ಸ್ ಮತ್ತು ಎಂಗೆಲ್ಸ್, ಅನು: ಕೆ ಎಲ್ ಗೋಪಾಲಕೃಷ್ಣರಾವ್, ಪ್ರಥಮ ಭಾರತೀಯ ಸ್ವಾತಂತ್ರ್ಯಸಂಗ್ರಾಮ 1857-59, ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು, 1987) ಎಂದು ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್ ಪತ್ರಿಕೆಗೆ ಬರೆಯುತ್ತಾರೆ. ಸಂತಾಲ ಆದಿವಾಸಿಗಳು ಜಮೀನ್ದಾರ ಮತ್ತು ವರ್ತಕರ ಚಕ್ರಸುಳಿಯಿಂದ ತಪ್ಪಿಸಿಕೊಳ್ಳುವಂತಿರಲಿಲ್ಲ. ಸಂತಾಲರು ವರ್ತಕರು ಮತ್ತು ಜಮೀನ್ದಾರರ ಜೊತೆ ಮಾಡಿಕೊಂಡಿದ್ದ ಒಪ್ಪಂದ ಮತ್ತು ಸಾಲದ ಕಾರಣಗಳಿಗಾಗಿ ತಮ್ಮ ಜಮೀನುಗಳನ್ನು ಸುಲಭವಾಗಿ ಬಿಟ್ಟು ಓಡಿಹೋಗುವಂತಿರಲಿಲ್ಲ, ಇಲ್ಲವೇ ಜಮೀನುಗಳನ್ನು ರಕ್ಷಿಸಿಕೊಳ್ಳುವಂತಿರಲಿಲ್ಲ. ಪ್ರತಿಭಟಿಸಿದರೆ ಜಮೀನ್ದಾರರು ಮತ್ತು ವರ್ತಕರು ಕೋರ್ಟ್‌ನಿಂದ ಆಜ್ಞೆ ಹೊರಡಿಸಿ ಅವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರು. ರಾಜಮಹಲ್ ಬೆಟ್ಟ ಪ್ರದೇಶವು ಸಂಪೂರ್ಣವಾಗಿ ಭೂಮಾಲೀಕರಿಂದ ಆಕ್ರಮಿಸಲ್ಪಟ್ಟು, ಕಂಪನಿ ಆಡಳಿತವು ದಿಕ್ಕೆಟ್ಟ ಈ ಆದಿವಾಸಿಗಳನ್ನು ತಮ್ಮ ಎಸ್ಟೇಟುಗಳಲ್ಲಿ ಆಳುಗಳನ್ನಾಗಿಯೂ, ಪ್ರತಿಷ್ಠಿತ ಹಿಂದೂ ಬಂಗಾಳಿಗಳನ್ನು ಎಸ್ಟೇಟುಗಳ ಆಡಳಿತಗಾರರನ್ನಾಗಿಯೂ ನೇಮಿಸಿಕೊಳ್ಳುತ್ತದೆ. 1855ರ ವಿರೋಚಿತ ಹೋರಾಟದಲ್ಲಿ ಸಾವಿರಾರು ಸಂತಾಲ ಆದಿವಾಸಿಗಳು ಇನ್ನಿಲ್ಲವಾಗಿ, ಬದುಕುಳಿದವರು ಎಸ್ಟೇಟುಗಳಲ್ಲಿ ಜೀತದಾಳುಗಳಾಗುತ್ತಾರೆ. ಸಂತಾಲ ಪರಗಣದ ಮೇಲ್ಜಾತಿ ಬಂಗಾಳಿಗಳು ಜಮೀನ್ದಾರರಾಗಿ ವಿರಾಜಮಾನರಾದರೆ, ಸ್ವಾಯತ್ತತೆಗೆ ಹೋರಾಡಿದ ಸಾವಿರಾರು ಸಂತಾಲರು ಸತ್ತು ಮಣ್ಣು ಸೇರಿದರು. ಈ ವಿರೋಚಿತ ಹೋರಾಟಗಳೇ ಮುಂದೆ 1857ರ ಮಹಾನ್ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಡಿಗಲ್ಲಾದವು. (ಈ ಮೇಲೆ ಉಲ್ಲೇಖಿಸಿದ ತೆರಿಗೆ ಪದ್ಧತಿ ಮತ್ತು ಭೂಮಿ ಗುತ್ತಿಗೆಯ ಕಾನೂನುಗಳು 2021ರಲ್ಲಿ ಕೇಂದ್ರ ಸರಕಾರ ತರಲು ಹೊರಟ ಮೂರು ಕೃಷಿ ಕಾಯ್ದೆಗಳನ್ನು ನೆನಪಿಸುತ್ತವೆ.)
ಪುರೋಹಿತಶಾಹಿ ಮತ್ತು ಬಂಡವಾಳಿಗರ ಅನೈತಿಕ ಒಕ್ಕೂಟ
ವಸಾಹತುಶಾಹಿ ದುರಾಕ್ರಮಣಗಳಿಗೆ ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳು ಮೊದಲಿಗೆ ಸಂಘಟಿಸಿದ ಈ ವಿರೋಚಿತ ಹೋರಾಟಗಳು ನಮ್ಮ ಸ್ವಾತಂತ್ರ್ಯ ಚಳವಳಿಯ ಚರಿತ್ರೆಯ ಪುಟಗಳಲ್ಲಿ ಸೇರಲೇ ಇಲ್ಲ. ‘ರಾಷ್ಟ್ರವಾದಿ’ ಇತಿಹಾಸಕಾರರು ಇಂದಿಗೂ ಚರಿತ್ರೆಯ ಈ ಸುಡುವಾಸ್ತವಗಳನ್ನು ಮುಚ್ಚಿಟ್ಟು, ಸತ್ಯಗಳನ್ನೇ ಹುಸಿಗೊಳಿಸಿ ಪುರಾಣದ ಬಂಡಲ್ ಬಿಡುವಲ್ಲಿ ನಿರತರಾಗಿದ್ದಾರೆ. ನಮ್ಮ ಶೈಕ್ಷಣಿಕ ವಲಯದಲ್ಲಿ ದುಡಿವ ಜನರ ಹೋರಾಗಳನ್ನು ಲೆಕ್ಕಕ್ಕಿಡದ ಊಳಿಗಮಾನ್ಯ ತಾತ್ಸಾರ ಇಂದಿಗೂ ಜೀವಂತವಾಗಿದೆ. 1857ರ ಮಹಾನ್ ಜನಹೋರಾಟವನ್ನು ವರ್ಣಿಸುವಾಗ ಕೆಲ ಪಾಳೇಪಟ್ಟುಗಳ ನಾಯಕರ ಹೆಸರುಗಳು ಮುನ್ನೆಲೆಗೆ ಬರುತ್ತವೆ. ಈ ಹೋರಾಟಕ್ಕೆ ಆತ್ಮಪ್ರತ್ಯಯವನ್ನು ತಂದುಕೊಟ್ಟ ಆದಿವಾಸಿ, ಅಲೆಮಾರಿ, ಮಹಿಳೆ ಮತ್ತು ಸಣ್ಣ ಹಿಡುವಳಿದಾರ ರೈತ ಸಮುದಾಯಗಳು ಇತಿಹಾಸಕಾರರಿಗೆ ನೆನಪಾಗುವುದಿಲ್ಲ. ಇದಕ್ಕೆ ಮುಖ್ಯವಾದ ಕಾರಣ ಆದಿವಾಸಿ, ಅಲೆಮಾರಿ, ಮಹಿಳೆ ಮತ್ತು ಸಣ್ಣ ಹಿಡುವಳಿದಾರ ರೈತ ಸಮುದಾಯಗಳು ಕೇವಲ ಬ್ರಿಟಿಷ್ ವಸಾಹತುವಾದದ ವಿರುದ್ಧ ಮಾತ್ರವಲ್ಲದೆ, ಆಂತರಿಕ ವಸಾಹತುಶಾಹಿಯನ್ನು ಪೋಷಿಸುತ್ತಿದ್ದ ಸ್ಥಳೀಯ ಮೇಲ್ಜಾತಿ ಭೂಮಾಲಿಕರ ವಿರುದ್ಧವೂ ತಿರುಗಿಬಿದ್ದಿದ್ದುದು. ಪುರೋಹಿತಶಾಹಿ ಪ್ರಣೀತ ಜಾತಿ ಯಜಮಾನಿಕೆ ಮತ್ತು ಕ್ರೂರ ಭೂಮಾಲಿಕತ್ವದ ಭಾಗವಾಗಿ ರೂಪುಗೊಂಡ ಊಳಿಗಮಾನ್ಯತೆಯನ್ನೇ ಬಾಬಾ ಸಾಹೇಬರು ‘ಆಂತರಿಕ ವಸಾಹತುಶಾಹಿ’ ಎಂದು ಕರೆಯುತ್ತಾರೆ.(Dr. Babasaheb Ambedkar : Writings and Speeches Vol – 5, Compiled by Vasant Moon, Dr. Ambedkar Foundation, Ministry of Social Justice & Empowerment, Govt. of India, 15, Janpath, New Delhi – 110 001)
19ನೇ ಶತಮಾನದ ಮಧ್ಯೆ ಭಾಗದಲ್ಲಿ ಒರಿಸ್ಸಾದ ಅರಣ್ಯಗಳಲ್ಲಿನ ಆದಿವಾಸಿಗಳು ಕಂಪನಿ ಆಡಳಿತಕ್ಕೆ ದೊಡ್ಡ ಸವಾಲನ್ನೇ ಒಡ್ಡುತ್ತಾರೆ. ಒರಿಸ್ಸಾದ ಗುಡ್ಡಗಾಡುಗಳಲ್ಲಿ ಬಹುಸಂಖ್ಯಾತ ಸ್ಥಳೀಯ ಆದಿವಾಸಿಗಳ ಫಲವತ್ತಾದ ಕುಮ್ರಿ ಜಮೀನುಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ ಹೇರಿದ ವಿಪರೀತ ತೆರಿಗೆ ಮತ್ತು ಜಟಿಲ ಭೂಮಾಲಿಕತ್ವದ ವಿರುದ್ಧ ಇಲ್ಲಿನ ಆದಿವಾಸಿಗಳು ಬಂಡೆದ್ದಿದ್ದರು. ಇವರ ವಿರೋಚಿತ ಗೆರಿಲ್ಲಾ ಹೋರಾಟದ ಮುಂದೆ ನಿರುತ್ತರರಾದ ವಸಾಹತುಶಾಹಿಗಳು ಈ ಖೋಂಡ್ ಆದಿವಾಸಿಗಳನ್ನು ಸೋಲಿಸುವ ಮರ್ಮವನ್ನು ಅರಿತದ್ದು ಅಲ್ಲಿನ ಪುರೋಹಿತ ವರ್ಗದಿಂದ. ಖೋಂಡ್ ಆದಿವಾಸಿಗಳ ಗಣದ ಒಡೆಯನಾಗಿದ್ದ ಜಗನ್ನಾಥ ದೈವವನ್ನು ಅಪಹರಿಸಿದ ಬ್ರಾಹ್ಮಣ ಪುರೋಹಿತಶಾಹಿಯು, ಅವನ ಹೆಸರಲ್ಲಿ ತೆರಿಗೆ ವಸೂಲಿ ಮಾಡಲು ಕಂಪನಿ ಆಡಳಿತಕ್ಕೆ ಅನುವು ಮಾಡಿಕೊಡುತ್ತದೆ. ಮಡಿ ಮೈಲಿಗೆಗಳ ನೆಪವೊಡ್ಡಿ ತಳಸ್ತರದ ಆದಿವಾಸಿಗಳಿಗೆ ದೇವಳದ ಪ್ರವೇಶವನ್ನು ಪುರೋಹಿತಶಾಹಿಯು ನಿರಾಕರಿಸುತ್ತದೆ.(ಫಣೀಂದಂ ದೇವ್, ಅನು: ರಾಜಶೇಖರ್ ಜಿ., ದಾರು ಪ್ರತಿಮಾ ನ ಪೂಜಿವೆ, ಅಕ್ಷರ ಪ್ರಕಾಶನ, ಹೆಗ್ಗೋಡು, 1993.) ವಸಾಹತು ಆಡಳಿತವು ಭೂಕಂದಾಯ ಹೆಚ್ಚಿಸಲು ಜಗನ್ನಾಥನನ್ನು ಬಳಸಿಕೊಳ್ಳುತ್ತದೆ. ವಿಪರೀತದ ಕಂದಾಯ ಕಟ್ಟಲು ಸೋತ ಆದಿವಾಸಿಗಳ ಕುಮ್ರಿ ಜಮೀನುಗಳು ಕಂಪನಿ ಆಡಳಿತದ ವಶವಾದವು. ಪುರೋಹಿತಶಾಹಿಯು ವಸಾಹತು ಬಂಡವಾಳಿಗರಿಗೆ ಅನುಕೂಲ ಮಾಡಿಕೊಡಲು, ಆದಿವಾಸಿಗಳ ಜಮೀನುಗಳನ್ನು ಫಲವತ್ತಾದ ಕಣಿವೆಗಳನ್ನು ವಶಪಡಿಸಿಕೊಳ್ಳಲು ಜಗನ್ನಾಥನನ್ನು ಒಂದು ಆಯುಧದಂತೆ ಬಳಸಿತು. ಶತಮಾನಗಳ ಕಾಲ ಆದಿವಾಸಿಗಳಿಂದ ಆರಾಧಿಸಲ್ಪಟ್ಟ ಜಗನ್ನಾಥ ತನ್ನದೇ ಒಕ್ಕಲಿನ ಭೂಮಿಯನ್ನು ಮತ್ತು ಅವರ ವಾಸದ ನೆಲೆಗಳನ್ನು ಕಿತ್ತುಕೊಳ್ಳುವ ಶೋಷಕನೂ ಆಗಿ ರೂಪಾಂತರಗೊಂಡಿದ್ದ. ಜಗನ್ನಾಥ, ಪುರೋಹಿತಶಾಹಿ ಮತ್ತು ವಸಾಹತು ಬಂಡವಾಳಿಗರ ಕೈಗೊಂಬೆಯಾಗಿದ್ದ. ತಮ್ಮನ್ನು ಸಾಮಾಜಿಕವಾಗಿ ಅಸ್ಪೃಶ್ಯರನ್ನಾಗಿಸಿದ ಮತ್ತು ಆರ್ಥಿಕ ಮೂಲಗಳನ್ನೇ ಕಿತ್ತುಕೊಂಡು ಬೀದಿಗೆ ತಳ್ಳಲು ಕಾರಣನಾದ ಜಗನ್ನಾಥನನ್ನೇ ಸುಡಲು ಒರಿಸ್ಸಾದ ಖೋಂಡ್ ಆದಿವಾಸಿಗಳು ಪುರಿಯ ದೇಗುಲಕ್ಕೆ ನುಗ್ಗುತ್ತಾರೆ.(Ishita Banerjee-Dubeand Sarvani Gooptu, Ed: On Modern Indian Sensibilities, Culture, Politics, History, Routledge,Taylor & Francis, Landon and New york,2018) ದೇವಾಲಯದ ಪುರೋಹಿತರು ಮತ್ತು ಪೊಲೀಸರು ಒಂದಾಗಿ ಒಳನುಗ್ಗಿದ ಆದಿವಾಸಿಗಳನ್ನು ಕೊಂದು ಕೆಲವರನ್ನು ಸೆರೆ ಹಿಡಿಯುತ್ತಾರೆ.
ಸ್ಥಳೀಯ ನ್ಯಾಯಾಲಯವು ಜಗನ್ನಾಥನ ದೇವಾಲಯಕ್ಕೆ ಅಸ್ಪೃಶ್ಯ ಆದಿವಾಸಿಗಳ ಪ್ರವೇಶವನ್ನು ನಿಷೇಧಿಸಿ ತೀರ್ಪು ನೀಡುತ್ತದೆ. ಒರಿಸ್ಸಾದ ಆದಿವಾಸಿಗಳು ಕಾಯಮ್ಮಾಗಿ ಜಗನ್ನಾಥನನ್ನು ತೊರೆಯತ್ತಾರೆ. ತಾವೇ ಪೂಜಿಸುತ್ತಿದ್ದ ಕಟ್ಟಿಗೆ ದೇವರು ಜಗನ್ನಾಥನನ್ನು ಆದಿವಾಸಿಗಳು ಕೇವಲ ಭೌತಿಕವಾಗಿ ಮಾತ್ರವಲ್ಲ, ತಮ್ಮ ವೈಚಾರಿಕ ಆವರಣದಿಂದಲೂ ಹೊರಹಾಕುತ್ತಾರೆ. ಬದುಕಿನ ಜೊತೆಗೆ ಸಂವಾದಿಸಲು, ನಿಸರ್ಗದ ಅನನ್ಯತೆಯನ್ನು ಅರಿಯಲು ಸದಾ ತವಕಿಸುವ ಅರಣ್ಯವಾಸಿ ಶ್ರಮಿಕರು ತಾವೇ ಒಂದು ಹೊಸ ವೈಚಾರಿಕ ಆಕೃತಿಯನ್ನು ಸೃಷ್ಟಿಸಿಕೊಳ್ಳುತ್ತಾರೆ. ಈ ಖೋಂಡ್ ಅಸ್ಪೃಶ್ಯ ಸಮುದಾಯವು ತನ್ನ ಬದುಕಿನ ಅಂತಃಸ್ಸತ್ವದಿಂದಲೇ ಒಂದು ಪರ್ಯಾಯ ಆಧ್ಯಾತ್ಮಿಕ ಪಂಥವನ್ನೇ ಸೃಷ್ಟಿಸಿಕೊಳ್ಳುತ್ತದೆ. ಭೀಮಾ ಬೋಯಿಯು ತನ್ನ ಸಮುದಾಯದ ಅನುಭಾವವನ್ನು ಬಳಸಿಯೇ ‘ಮಹಿಮಾ ಪಂಥ’ಕ್ಕೆ ತಾತ್ವಿಕ ತಳಹದಿಯನ್ನು ರೂಪಿಸುತ್ತಾನೆ.(Ishita Banerjee-Dube, A History Of Modern India, Cambridge University Press, New York, 2014) ‘ಮಹಿಮಾ ಪಂಥ’ವು ಭಾರತದ ಸಾಂಸ್ಥಿಕ ಧರ್ಮಕ್ಕೆ ಪರ್ಯಾಯವಾಗಿ ರೂಪುಗೊಳ್ಳುತ್ತದೆ. ಇದೇ ರೀತಿ ಛತ್ತೀಸ್‌ಗಡದ ಆದಿವಾಸಿಗಳಲ್ಲಿ ಸತ್ನಾಮ್ ಆಧ್ಯಾತ್ಮಿಕತೆಯು ಸಹ ಆದಿವಾಸಿಗಳ ಸಹಜ ಸಮಾಜವಾದಿ ವೈಚಾರಿಕತೆಯ ಭಾಗವಾಗಿ ಮೈದಾಳುತ್ತದೆ. ಈ ಎರಡೂ ಆಧ್ಯಾತ್ಮಿಕ ಧಾರೆಗಳು ‘ಮುಖ್ಯವಾಹಿನಿ’ಯ ಭಾರತದ ಧಾರ್ಮಿಕ ಪರಂಪರೆಯಲ್ಲಿನ ಕರ್ಮಠತೆಯನ್ನು ಉಗ್ರವಾಗಿ ವಿರೋಧಿಸುತ್ತವೆ. ಛತ್ತೀಸ್‌ಗಡ ಮತ್ತು ಒರಿಸ್ಸಾದ ಈ ಆದಿವಾಸಿಗಳ ಸಾಮುದಾಯಿಕ ಹೋರಾಟಗಳು ಕೇವಲ ಯುರೋಪಿನ ವಸಾಹತುಶಾಹಿ ವಿರುದ್ಧ ಮಾತ್ರವಾಗಿರದೆ, ಭಾರತದ ಆಂತರಿಕ ವಸಾಹತುಶಾಹಿಗಳಾದ ಧಾರ್ಮಿಕ ಮತ್ತು ಊಳಿಗಮಾನ್ಯ ಪ್ರಭುತ್ವಗಳ ವಿರುದ್ಧವೂ ಸಂಘಟಿತವಾಗಿದ್ದವು ಎಂಬುದಕ್ಕೆ ಮೇಲಿನ ಎರಡು ಉದಾಹರಣೆಗಳೇ ಸಾಕು ಎನ್ನಿಸುತ್ತದೆ.
ದಕ್ಷಿಣ ಭಾರತದಲ್ಲಿ ಆದಿವಾಸಿಗಳ ಹೋರಾಟಗಳು
ಉತ್ತರದಲ್ಲಿ, ಅದರಲ್ಲೂ ಗಂಗಾ ನದಿ ಬಯಲು, ರಾಜಮಹಲ್ ಬೆಟ್ಟ ಮತ್ತು ಈಶಾನ್ಯಪೂರ್ವದ ವಿಂಧ್ಯಾ ಪರ್ವತಶ್ರೇಣಿಯಲ್ಲಿ ಕೇಂದ್ರೀಕೃತವಾಗಿದ್ದ ಈ ಹೋರಾಟಗಳು ದಕ್ಷಿಣ ಭಾರತಕ್ಕೆ ತುಸು ತಡವಾಗಿ ವಿಸ್ತರಿಸಿಕೊಂಡವು. ಅದರಲ್ಲೂ ಕರ್ನಾಟಕದ ಸಹ್ಯಾದ್ರಿ ಮತ್ತು ಊಳಿಗಮಾನ್ಯತೆ ಪ್ರಬಲವಾಗಿದ್ದ ಉತ್ತರ ಕರ್ನಾಟಕದಲ್ಲಿ ವಸಾಹತು ವಿರೋಧಿ ಹೋರಾಟಗಳು ನಡೆದಿವೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಪಶ್ಚಿಮಘಟ್ಟಗಳ ಕಣಿವೆಗಳಲ್ಲಿನ ಫಲವತ್ತಾದ ಕುಮ್ರಿ ಜಮೀನುಗಳು ವಿದೇಶಿ ಮತ್ತು ಸ್ಥಳೀಯ ಭೂಮಾಲೀಕರ ವಶವಾದವು.
ಇಲ್ಲಿನ ಕೊರಗರು, ಹಲಸರು, ಭೈರರು, ಗೊಂಡರು, ಕುಣಬಿಗಳು, ಹಾಲಕ್ಕಿಗಳು ತಮ್ಮ ಜಮೀನುಗಳನ್ನು ಕಳೆದುಕೊಂಡು ಕೃಷಿಕೂಲಿಗಳಾಗಿ ಜೀವಿಸಲಾರಂಭಿಸಿದರು. ಇದರಿಂದಾಗಿ ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ಯಾವ ಸಂಘರ್ಷಗಳು ಸಂಭವಿಸಲಿಲ್ಲವೆಂದಲ್ಲ. ಆದರೆ ಉತ್ತರ ಮತ್ತು ಈಶಾನ್ಯ ಭಾರತದ ಆದಿವಾಸಿಗಳಂತೆ ದೊಡ್ಡ ಮಟ್ಟದ ಹೋರಾಟಗಳಲ್ಲಿ ಇಲ್ಲಿನ ಆದಿವಾಸಿಗಳು ತೊಡಗಿಸಿಕೊಳ್ಳಲಾಗಲಿಲ್ಲ.
1857ರಲ್ಲಿ ಈಗಿನ ಮುಧೋಳ್ ತಾಲೂಕಿನ ಹಲಗಲಿ ಗ್ರಾಮದ ಬೇಡ ಸಮುದಾಯದ ಜನ ಮಾಡಿದ ವಸಾಹತು ವಿರೋಧಿ ಹೋರಾಟ ಚಾರಿತ್ರಿಕವಾಗಿ ಅತ್ಯಂತ ಮಹತ್ವದ್ದು. ಹೊರಜಗತ್ತಿಗೆ ಅನಾಮಿಕವಾಗಿದ್ದ ಆ ಪುಟ್ಟ ಹಳ್ಳಿಯ ಜನ ವಸಾಹತುಶಾಹಿ ಜಾರಿಗೆ ತಂದಿದ್ದ ನಿಶಸ್ತ್ರೀಕರಣ ಕಾಯ್ದೆಯ (1857) ವಿರುದ್ಧ ಸಂಘಟಿತ ಹೋರಾಟವನ್ನು ಮಾಡಿದ್ದರು. ಪಿಂಡಾರಿ, ಮರಾಠ ಮತ್ತು ಮೈಸೂರು ಯುದ್ಧಗಳ ಹೊಡೆತಗಳಿಂದ ಕಂಗೆಟ್ಟಿದ್ದ ಕಂಪನಿ ಆಡಳಿತ ಜನರ ಕೈಲಿದ್ದ ಆಯುಧಗಳನ್ನು ಕಿತ್ತುಕೊಳ್ಳುವುದಕ್ಕಾಗಿಯೇ ಈ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಹಲಗಲಿಯ ನಾಯಕರನ್ನೂ ಒಳಗೊಂಡಂತೆ ಸ್ಥಳೀಯ ದುಡಿವ ಸಮುದಾಯದ ಜನ ಸಂಘಟಿತ ಹೋರಾಟವನ್ನು ಕೈಗೊಂಡರು. ಮೊದಲ ಹಂತದಲ್ಲಿ ವಸಾಹತು ಸೈನ್ಯ ಹಿಮ್ಮೆಟ್ಟಿತು. ಆದರೆ ಮಾರಣಾಂತಿಕ ಆಯುಧಗಳನ್ನು ಹೊಂದಿದ್ದ ಬ್ರಿಟಿಷ್ ಸೈನ್ಯ ಹಲಗಲಿಯ ಗ್ರಾಮಕ್ಕೆ ಬೆಂಕಿ ಹಚ್ಚಿ ಅಸಹಾಯಕ ವೃದ್ಧರನ್ನು, ಮಕ್ಕಳನ್ನು ಮತ್ತು ಹೆಂಗಸರನ್ನು ನಿರ್ದಯವಾಗಿ ಕೊಂದುಹಾಕಿತು. ಇಡೀ ಹಲಗಲಿ ಗ್ರಾಮ ವಸಾಹತು ಸೈನ್ಯ ನಡೆಸಿದ ಸಾಮೂಹಿಕ ಕೊಲೆಗಳಿಂದ ನಿರ್ಮಾನುಷವಾಗಿತ್ತು. (ಮಂಜುನಾಥ ಬೇವಿನಕಟ್ಟಿ, ಸಾಂಸ್ಕೃತಿಕ ಅನನ್ಯತೆ ಮತ್ತು ಹಲಗಲಿಯ ಬಂಡಾಯ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2009) ನಾಲ್ಕನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸಂಘಟಿಸಿದ್ದ ವಿರೋಚಿತ ಹೋರಾಟದ ನಂತರ, ಆಗಿನ ಕನ್ನಡ ದೇಶದ ಗ್ರಾಮೀಣ ಬುಡಕಟ್ಟು ವೀರರು ಒಗ್ಗೂಡಿ ನಡೆಸಿದ ವಸಾಹತು ವಿರೋಧಿ ವಿರೋಚಿತ ದಂಗೆ ಇದಾಗಿತ್ತು. ಇದಾದ ನಂತರ ಅಮರ ಸೂಳ್ಯ ಮತ್ತು ಕೊಡಗು ಪ್ರದೇಶದಲ್ಲಿ ರೈತ ಹೋರಾಟಗಳು ನಡೆದವು. ಆದರೆ ವಸಾಹತುಶಾಹಿ ಆಡಳಿತದ ವಿರುದ್ಧ ತೀವ್ರ ಪರಿಣಾಮ ಉಂಟು ಮಾಡುವಲ್ಲಿ ವಿಫಲವಾದವು.
ಬ್ರಿಟಿಷರ ಕಟ್ಟುನಿಟ್ಟಿನ ಕಂದಾಯ ನೀತಿ, ಗೇಣಿ ರೈತರಿಗೆ ಮತ್ತು ಆದಿವಾಸಿ ಸಣ್ಣ ಹಿಡುವಳಿದಾರಿಗೆ ಮಾತ್ರ ಅನ್ವಯಿಸುತ್ತಿತ್ತು. ಕಾಫಿ, ಚಹ ತೋಟಗಳಾಗಲೀ, ನೀರು, ರಬ್ಬರ್ ಬೆಳೆವ ಶ್ರೀಮಂತ ವಾಣಿಜ್ಯ ಬೆಳೆಗಾರರಾಗಲಿ ಕಂದಾಯವನ್ನು ಕಟ್ಟಬೇಕಿರಲಿಲ್ಲ. ವಿದೇಶಿ ಮತ್ತು ಸ್ಥಳೀಯ ಪ್ಲಾಂಟರ್‌ಗಳು ಮತ್ತು ಭೂಮಾಲೀಕರು ಭೂ ಕಂದಾಯ ಕಟ್ಟಲೇಬೇಕೆಂದು ಹೇಳುವ ಸ್ಪಷ್ಟ ಕಾನೂನುಗಳೇ ಇರಲಿಲ್ಲ. ಇದಲ್ಲದೇ ವಸಾಹತುಶಾಹಿ ಆಶ್ರಯದಲ್ಲಿ ಸ್ಥಳೀಯ ರಾಜರು ಬಿಟ್ಟಿಯಾಗಿ ಕೊಡುತ್ತಿದ್ದ ಬ್ರಾಹ್ಮಣ, ಪುರೋಹಿತರ ಜಮೀನುಗಳು ಸಹ ಈ ಭೂಕಂದಾಯ ಪದ್ಧತಿಯಿಂದ ವಿನಾಯಿತಿ ಪಡೆದಿದ್ದವು. ಹೀಗಾಗಿ ಕೆಳಹಂತದ ರೈತವರ್ಗದ ಭೂಒಡೆತನವೆಂಬುದು ಹೆಸರಿಗೆ ಮಾತ್ರವಾಗಿತ್ತು. ವಾಸ್ತವವಾಗಿ ಅವರ ಆದಾಯ ಒಬ್ಬ ಕೃಷಿಕೂಲಿಗಿಂತ ಹೆಚ್ಚಾಗಿರಲಿಲ್ಲ, ಆದರೆ ಭೂಕಂದಾಯವನ್ನು ಮಾತ್ರ ನಿಶ್ಚಿತವಾಗಿ ಸಲ್ಲಿಸಲೇಬೇಕಿತ್ತು. ಈ ಕಾಲಘಟ್ಟದಲ್ಲಿ ಮೈಸೂರು ಪ್ರಾಂತ್ಯದಲ್ಲಿನ ನಗರ ಡಿವಿಷನ್ ರೈತ ದಂಗೆ ಗಮನಾರ್ಹವಾದದ್ದು. 1830-31ರಲ್ಲಿ ಮೂರನೇ ಕೃಷ್ಣರಾಜ ಒಡೆಯರು ಶಿರ್ತಿ ಕಂದಾಯ ವ್ಯವಸ್ಥೆಯನ್ನು ಜಾರಿಗೆ ತರುತ್ತಾರೆ. ’ಇದರ ಪ್ರಕಾರ ಪ್ರತಿಯೊಬ್ಬ ಅಮಲುದಾರನೂ ಪ್ರತಿವರ್ಷ ನಿರ್ದಿಷ್ಟ ಮೊತ್ತದ ಕಂದಾಯ ವಸೂಲಿ ಮಾಡಲೇಬೇಕಿತ್ತು’. (ಸುಬ್ರಮಣ್ಯ ಭಟ್, ಕರ್ನಾಟಕ ಚರಿತ್ರೆ ಸಂಪುಟ ೬, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1999) ಇದೇ ಕಾರಣಕ್ಕಾಗಿ ’ಶಿರ್ತಿ ಅಮಲುದಾರರು’ ಕ್ರೂರ ವಿಧಾನಗಳ ಮೂಲಕ ಕಂದಾಯ ವಸೂಲಿ ಮಾಡಲಾರಂಭಿಸಿದರು. ಬೇಡರು, ಕುರುಬರು, ಪಂಚಮರು ಮುಂತಾದ ಕೆಳಜಾತಿಯ ರೈತರು ಗುಲಾಮರಾಗಿ, ಬಿಟ್ಟಿ ಕೂಲಿಗಳಾಗಿ, ಗೇಣಿ ರೈತರಾಗಿ, ಪಟೇಲರ, ಭೂಮಾಲೀಕರ ಮನೆಗಳಲ್ಲಿ ದುಡಿಯುತ್ತಿದ್ದರು. 1830ರಲ್ಲಿ ಇವರ ಅತೃಪ್ತಿ ಹೋರಾಟದಲ್ಲಿ ಪರ್ಯವಸಾನಗೊಂಡಿತು. ಚನ್ನಗಿರಿ, ಶಿವಮೊಗ್ಗ, ಹೊಳೆಹೊನ್ನೂರು, ತರೀಕೆರೆಗಳಲ್ಲಿ ರೈತರು ಹೋರಾಟದಲ್ಲಿ ಪಾಲ್ಗೊಂಡರು. ನಾಯಕತ್ವದ ಕೊರತೆಯಿಂದ ಹೋರಾಟ ಸ್ಪಷ್ಟ ಉದ್ದೇಶಗಳನ್ನು ಈಡೇರಿಸಿಕೊಳ್ಳಲಾಗಲಿಲ್ಲ. ಮೈಸೂರು ಅರಸರು ಈ ಹೋರಾಟವನ್ನು ಬ್ರಿಟಿಷರ ಸೈನ್ಯದಿಂದ ಹತೋಟಿಗೆ ತಂದರು.
1930ರಲ್ಲಿ ದಿನಕರ ದೇಸಾಯಿಯವರು ಕರನಿರಾಕರಣೆ ಚಳುವಳಿಯ ಸಂದರ್ಭದಲ್ಲಿ ಹಾಲಕ್ಕಿ ಒಕ್ಕಲಿಗರನ್ನು ಸಂಘಟಿಸಿ, ವರ್ಗ ಹೋರಾಟಕ್ಕೆ ಅವರನ್ನು ಅಣಿಗೊಳಿಸುತ್ತಾರೆ.(ವಿಷ್ಣುನಾಯ್ಕ, ದುಡಿವ ಕೈಗಳ ಹೋರಾಟದ ಕಥೆ, ರಾಘವೇಂದ್ರ ಪ್ರಕಾಶನ, ಅಂಬರಕೋಡ್ಲು, ಅಂಕೋಲ, 2003) ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡದ ಕೃಷಿಕ ಆದಿವಾಸಿ ಸಮುದಾಯ. ಸಮಾಜವಾದಿ ಚಿಂತಕ ದಿನಕರ ದೇಸಾಯಿ 1930ರಲ್ಲಿ ಈ ಆದಿವಾಸಿಗಳನ್ನು ನಾಡವರ ಜೊತೆ ಸಂಘಟಿಸಿ ರಾಷ್ಟ್ರೀಯ ಚಳುವಳಿಯ ಜೊತೆಗೆ, ಒಂದು ಭೂಹೀನ ಕೃಷಿ ಕೂಲಿಗಳ ಹೋರಾಟವನ್ನು ರೂಪಿಸುತ್ತಾರೆ. ಆದರೆ ಈ ಹೋರಾಟ ಕೇವಲ ಗೇಣಿ ಪ್ರಮಾಣವನ್ನು ಕಡಿಮೆ ಮಾಡಿ, ಹಂತಹಂತವಾಗಿ ಭೂಮಿಯನ್ನು ಗೇಣಿದಾರರಿಗೆ ಬಿಟ್ಟು ಕೊಡಬೇಕು ಎಂಬ ಉದಾರವಾದಿ ನಿಲುವನ್ನು ಪ್ರದರ್ಶಿಸಿದಂತೆ ಕಾಣುತ್ತದೆ. 1/3 ಅಂಶ ಗೇಣಿಯನ್ನು 1/10ರ ಪ್ರಮಾಣಕ್ಕೆ ಇಳಿಸುವ ಬೇಡಿಕೆಯೇ ತೀವ್ರವಾಗಿ ಈ ಹೋರಾಟದ ಉದ್ದಕ್ಕೂ ಕೇಳಿಬರುತ್ತದೆ.
ಉತ್ತರ ಭಾರತದಲ್ಲಿದ್ದಂತೆ ಕರ್ನಾಟಕದ ವ್ಯವಸಾಯೀ ಸಂರಚನೆಯಲ್ಲಿ ಆದಿವಾಸಿಗಳು ಭೂಹೀನ ಕೃಷಿ ಕೂಲಿಗಳಾಗಿ, ಗೇಣಿದಾರರಾಗಿ, ಗುಲಾಮರಾಗಿ ಕೃಷಿ ಉತ್ಪಾದನೆಯ ವಿವಿಧ ಹಂತದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಉತ್ತರ ಭಾರತದಲ್ಲಿ ಆದಿವಾಸಿಗಳಂತೆ, ಕರ್ನಾಟಕದ ಆದಿವಾಸಿ ಸಮುದಾಯಗಳು ವರ್ಗಸಂಘರ್ಷಕ್ಕೆ ಮುಖಾಮುಖಿಯಾದದ್ದು ಕಡಿಮೆ. ಕರ್ನಾಟಕದಲ್ಲಿ ರಾಜಕೀಯ ಚೌಕಟ್ಟಿನ ಹೊರಗೆ ರೈತರು ತಮ್ಮ ಪ್ರಜ್ಞೆ ಅಥವಾ ಅತೃಪ್ತಿಯನ್ನು ವ್ಯಕ್ತಪಡಿಸುವಲ್ಲಿ ದೀರ್ಘಕಾಲ ತೆಗೆದುಕೊಂಡರು. ಇದಕ್ಕೆ ಕಾರಣಗಳು ಸ್ಪಷ್ಟವಾಗಿವೆ. ಮೊದಲನೆಯದಾಗಿ, ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬಂಡವಾಳಶಾಹಿ ಬೆಳವಣಿಗೆ ಅಥವಾ ಬಂಡವಾಳಶಾಹಿ ಉತ್ಪಾದನಾ ಪದ್ಧತಿ ಅಸಮರ್ಪಕ ಮತ್ತು ಅಸಮಾನವಾಗಿ ಬೆಳೆದಿತ್ತಲ್ಲದೆ, ಹರಡಿತ್ತು.’ (ಸೆಬಾಸ್ಟಿಯನ್ ಜೋಸೆಫ್ ಎಂ., ಯತಿಶ್ ಕುಮಾರ್, ಕರ್ನಾಟಕ ಚರಿತ್ರೆ ಸಂಪುಟ ೬, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1999) ಇದಲ್ಲದೆ, ಉತ್ತರ ಭಾರತದಲ್ಲಿ ವಸಾಹತು ಆಡಳಿತ ತಂದ ಕೃಷಿ ಮತ್ತು ಅರಣ್ಯ ನೀತಿಗಳ ಪರಿಣಾಮಗಳು ಘೋರವಾಗಿದ್ದವು. 18ನೇ ಶತಮಾನದ ಕೊನೆಯವರೆಗೂ ಮೈಸೂರಿನ ಆಡಳಿತವು ಜನಪೀಡಕವಾಗಿರಲಿಲ್ಲ. ಹೈದರ್, ಟಿಪ್ಪು ನಂತರ ನಾಲ್ವಡಿಯವರು ಶೋಷಿತ ಸಮುದಾಯಗಳಿಗೆ ನೀಡಿದ ಮನ್ನಣೆ ಚಾರಿತ್ರಿಕವಾದದ್ದು. ಇದಕ್ಕೆ ಕರ್ನಾಟಕದ ರೈತ ಹೋರಾಟಗಳ ಚರಿತ್ರೆಯಲ್ಲಿ ಪುರಾವೆಗಳು ಸಿಗುತ್ತವೆ. ಹೀಗಾಗಿ ಸ್ವಾತಂತ್ರ್ಯಪೂರ್ವ ಕರ್ನಾಟಕದ ಚರಿತ್ರೆಯಲ್ಲಿ ಅಲೆಮಾರಿ, ಆದಿವಾಸಿ ಸಮುದಾಯಗಳು ಹೆಚ್ಚಾಗಿ ಆಂತರಿಕ ವಸಾಹತುಶಾಹಿಯಾಗಿದ್ದ ಊಳಿಗಮಾನ್ಯ ಯಜಮಾನಿಕೆಯ ವಿರುದ್ಧ ಹೋರಾಡಿದ್ದೇ ಹೆಚ್ಚು.
ಆದರೆ ಉತ್ತರ ಭಾರತ, ಅದರಲ್ಲೂ ಈಶಾನ್ಯಪೂರ್ವ ಅರಣ್ಯ ಪ್ರದೇಶಗಳ ಆದಿವಾಸಿ ಮತ್ತು ಅಲೆಮಾರಿಗಳು ವಸಾಹತುಶಾಹಿ ಮತ್ತು ಆಂತರಿಕ ವಸಾಹತುಶಾಹಿಗಳ ವಿರುದ್ಧ ಏಕಕಾಲಕ್ಕೆ ಹೋರಾಟಗಳಲ್ಲಿ ತೊಡಗಿಕೊಂಡಿರುವದನ್ನು ನೋಡಬಹುದು. ವಸಾಹತುಶಾಹಿಗಳು ಈ ಸಮುದಾಯಗಳ ವಿರುದ್ಧ ಒಂದೋ ಸೈನ್ಯವನ್ನು ಬಳಸಿದರು; ಸೈನ್ಯದ ಬಲ ನಡೆಯದಿದ್ದ ಕಡೆ ಬ್ರಿಟಿಷರು ಅಮಾನವೀಯ ಕಾನೂನುಗಳನ್ನು ಹೇರಿ ತಮ್ಮ ಆಡಳಿತವನ್ನು ಸುಗಮಗೊಳಿಸಿಕೊಳ್ಳುತ್ತಿದ್ದರು. ಭಾರತದಲ್ಲಿ ಅರಣ್ಯ, ಕೃಷಿಭೂಮಿ ಮತ್ತು ವ್ಯಾಪರ ವಹಿವಾಟುಗಳಿಗೆ ರಚಿಸಿದ ಕಾನೂನುಗಳು ಇದೇ ನೆಲೆಯಲ್ಲಿ ರೂಪಗೊಂಡವು. ತಮ್ಮ ಕಾಫಿ ಎಸ್ಟೇಟುಗಳನ್ನು ಬೆಳೆಸಲು, ರೈಲು ಮಾರ್ಗ ಹಾಕಲು, ಎಲ್ಲಕಿಂತ ಮುಖ್ಯವಾಗಿ ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ವಸಾಹತು ಆಡಳಿತವನ್ನು ಇನ್ನಿಲ್ಲದಂತೆ ಸೋಲಿಸಿಬಿಟ್ಟಿದ್ದ ಆದಿವಾಸಿಗಳನ್ನು ಮಟ್ಟಹಾಕಲು ಕಂಪನಿ ಆಡಳಿತ ತಮಗೆ ಅನುಕೂಲವಾದ ಅರಣ್ಯನೀತಿಯನ್ನು ಜಾರಿಗೆ ತರಲೇಬೇಕಿತ್ತು. ಅರಣ್ಯ ಯಾರದು? ಯಾರು ಅದನ್ನು ಬಳಸಬೇಕು? ಅರಣ್ಯದಲ್ಲಿ ಯಾರಿರಬೇಕು? ಯಾರಿರಬಾರದು? ಎಂಬೆಲ್ಲ ಸಂಗತಿಗಳು ಈ ಅರಣ್ಯ ನೀತಿಯಿಂದ ಸ್ಪಷ್ಟಗೊಂಡವು. ಇವತ್ತಿನ ಸಂರಕ್ಷಿತ ಅರಣ್ಯ, ಅಭಯಾರಣ್ಯ, ವನ್ಯಮೃಗ ಸಂರಕ್ಷಣೆ, ರಾಷ್ಟ್ರೀಯ ಉದ್ಯಾನ ಎಂಬ ಆಧುನಿಕ ಕಲ್ಪನೆಗಳೆಲ್ಲ ಈ ಪುರಾತನ ಕಾಯ್ದೆಯಲ್ಲಿಯೇ ತಮ್ಮ ಬೇರುಗಳನ್ನು ಬಿಟ್ಟುಕೊಂಡಿವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಲ್ಲಿನ ಅರಣ್ಯನೀತಿ, ಬ್ರಿಟಿಷ್ ಸರ್ಕಾರದ ಅರಣ್ಯನೀತಿಯ ಯಥಾವತ್ತು ನಕಲಾಗಿಯೇ ಉಳಿದುಕೊಂಡಿದೆ.
(ಮುಂದುವರೆಯುವುದು..)

ಡಾ. ಎ ಎಸ್ ಪ್ರಭಾಕರ
ಹಂಪಿ ವಿವಿಯ ಬುಡಕಟ್ಟು ವಿಭಾಗದ ಅಧ್ಯಾಪಕರಾದ ಡಾ.ಎ.ಎಸ್.ಪ್ರಭಾಕರ, ಮೂಲತಃ ಹರಪನಹಳ್ಳಿಯವರು. ಕರ್ನಾಟಕದ ಜನಪರ ಚಳವಳಿಗಳ ಸಂಗಾತಿಯೂ ಆಗಿರುವ ಅವರ ಹೊಸ ಪುಸ್ತಕ ‘ಚಹರೆಗಳೆಂದರೆ ಗಾಯಗಳೂ ಹೌದು’.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಯಲ್ಲಿ ಮೀಸಲಾತಿಯ ಬಗ್ಗೆ..


