Homeಕರ್ನಾಟಕಮುರುಘಾ ಶರಣರ ಪರ ಮಾತನಾಡುವ ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಬಹಿರಂಗ ಪತ್ರ

ಮುರುಘಾ ಶರಣರ ಪರ ಮಾತನಾಡುವ ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಬಹಿರಂಗ ಪತ್ರ

“ಸ್ವಾಮೀಜಿ, ಮಾದಿಗ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳು ಸಂತ್ರಸ್ತೆಯಾಗಿರುವುದನ್ನು ಮರೆತುಬಿಟ್ಟಿರೇಕೆ?”

- Advertisement -
- Advertisement -

ಪೋಕ್ಸೋ ಹಾಗೂ ಎಸ್‌.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರ ಪರವಾಗಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡುತ್ತಿದ್ದಾರೆಂಬ ಆರೋಪಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ನಿಕಟ ಪೂರ್ವ ಸದಸ್ಯರಾದ ಎನ್.ರವಿಕುಮಾರ್ ಅವರು ಬರೆದಿರುವ ಬಹಿರಂಗ ಪತ್ರ ಇಲ್ಲಿದೆ.

ಬಹಿರಂಗ ಪತ್ರ

ಶ್ರೀ ಮಾದಾರ ಚೆನ್ನಯ್ಯ ಶರಣರಿಗೆ.

ಶರಣರೇ..,

ಮುರುಘಾಬೃಹನ್ಮಠದ ಮುರುಘಾಶರಣರು ಮುನ್ನಡೆಸಿಕೊಂಡು ಬಂದಿದ್ದ ಪ್ರಗತಿಪರ, ಬಸವಾದಿಶರಣರ ಆಶಯಗಳ ಅನುಷ್ಠಾನದ ಪರಂಪರೆ ಬಗ್ಗೆ ನಾಡಿಗೆ ಗೊತ್ತಿದೆ. ಆದರೆ ಇಂತಹ ಮುರುಘಾಶರಣರು ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಪ್ರಕರಣ ಅವರ ಮೇಲೆ ದಾಖಲಾಗಿದೆ. ಇದಕ್ಕಷ್ಟೆ ಸೀಮಿತವಾಗಿ ಹೇಳುವುದಾದರೆ ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ನಾನು ಆಗ್ರಹಿಸುತ್ತೇನೆ. ಈ ನಾಗರಿಕ ಸಮಾಜ ಕೂಡ ಇದನ್ನೇ ಆಗ್ರಹಿಸಬೇಕು, ತನಿಖಾ ಸಂಸ್ಥೆಗಳು ಇದೇ ಹಾದಿಯಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕೂ ಕೂಡ. ಇದೊಂದು ’ನ್ಯಾಯಪ್ರಜ್ಞೆ’. ಆದರೆ ಈ ಸಮಾಜದೊಳಗೆ ಇರುವ ನೀವು ಸೇರಿದಂತೆ ಇತರೆ ಮಠಾಧೀಶರುಗಳು ಇಂತಹ ನ್ಯಾಯಪ್ರಜ್ಞೆಯನ್ನು ವ್ಯಕ್ತಪಡಿಸದೆ ಆರೋಪಿ ಸ್ಥಾನದಲ್ಲಿರುವ ಮುರುಘಾಶರಣರನ್ನು ಬೆಂಬಲಿಸ ಹೊರಟಿರುವುದು ದೌಭಾರ್ಗ್ಯದ ಸಂಗತಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುರುಘಾಶರಣರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿರುವ ಇಬ್ಬರು ಬಾಲಕಿಯರು ಹಿಂದುಳಿದ ಮತ್ತು ಮಾದಿಗ ಸಮುದಾಯಕ್ಕೆ ಸೇರಿದವರೆನ್ನಲಾಗಿದೆ. ಇಲ್ಲಿ ಜಾತಿ ಅಪ್ರಸ್ತುತ ನಿಜ, ಹೆಣ್ಣು ಜಾತ್ಯತೀತ ಮತ್ತು ಧರ್ಮಾತೀತವಾಗಿ ಸದಾ ಶೋಷಣೆಗೆ ಒಳಗಾಗುತ್ತಲೇ ಇರುತ್ತಾಳೆ. ಈ ಪ್ರಕರಣದಲ್ಲಿ ಈ ಇಬ್ಬರೂ ಹೆಣ್ಣುಮಕ್ಕಳು ಸಮಾನ ಸಂತ್ರಸ್ತರೇ ಆಗಿರುತ್ತಾರೆ. ಈ ಇಬ್ಬರಲ್ಲೂ ಜಾತಿ ಬಗೆದು ನೋಡಬೇಕಾಗಿಲ್ಲ. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಾದಿಗ ಸಮುದಾಯದ ಹೆಣ್ಣುಮಗಳೊಬ್ಬಳ ಮಾನ, ಪ್ರಾಣ, ಆತ್ಮಗೌರವ, ಸಾಮಾಜಿಕ ಗೌರವ ರಕ್ಷಣೆ ಕುರಿತು ನೀವು ’ಉತ್ತರದಾಯಿ’ಗಳು ಎಂಬುದನ್ನು ಸ್ಪಷ್ಟವಾಗಿ ಆಗ್ರಹಿಸುತ್ತೇನೆ.

ನೀವು, ಈ ನಾಡಿನ ಸಮಸ್ತ ಮಾದಿಗ ಸಮುದಾಯದ ಪ್ರಾತಿನಿಧಿಕ ಧಾರ್ಮಿಕ ನಂಬುಗೆಯ ಶ್ರದ್ಧಾಕೇಂದ್ರವಾದ ಮಾದರಾ ಚನ್ನಯ್ಯಗುರುಪೀಠದ ಪೀಠಾಧ್ಯಕ್ಷರಾಗಿ ಇದೇ ಮುರುಘಾಶರಣರಿಂದ ’ಸದ್ಯೋನ್ಮುಕ್ತ’ ದೀಕ್ಷೆಯನ್ನು ಪಡೆದಿದ್ದೀರ. ಈ ಸಮಾಜದ ಕಟ್ಟಕಡೆಯ ದುರ್ಬಲ ಸಮುದಾಯವಾಗಿರುವ ಮಾದಿಗ ಸಮುದಾಯದ ಗುರುವಾಗಿ ಈ ಸಮುದಾಯವನ್ನು ಸಾಮಾಜಿಕ ಗೌರವ, ಶೈಕ್ಷಣಿಕ ಅಭ್ಯುದಯ, ವೈಚಾರಿಕ ಅರಿವಿನಡೆಗೆ ಕೊಂಡೊಯ್ಯುವ ಗುರಿ ನಿಮ್ಮದಾಗಬೇಕಿತ್ತು. ದುರಾದೃಷ್ಟವೆಂದರೆ ಮಾದಾರಚನ್ನಯ್ಯ ಗುರುಮಠ ಮನೋಲಯ ದೀಕ್ಷೆಯನ್ನೆ ಧಿಕ್ಕರಿಸಿದ ಲೌಕಿಕ ಭೋಗಗಳಲ್ಲೊಂದಾದ ರಾಜಕೀಯ ಮೋಹ ತುಂಬಿದ, ವಚನಸಂಹಿತೆ ಭ್ರಷ್ಟತೆಯ ಮೈದಾನವಾಗಿದೆ. “ನಡೆ ನುಡಿ ಶುದ್ದವಿಲ್ಲದಿದ್ದರೆ ಚಂದೇಶ್ವರಲಿಂಗವಾದರೂ ತಪ್ಪನೊಳಕೊಳ್ಳೆ” ಎಂಬ ಅರಿವನ್ನು ಮರೆತುಬಿಟ್ಟಂತಿದೆ. ಬಸವಣ್ಣ ಯಾವ ವೈದಿಕ ವಿಚಾರಧಾರೆಗಳ ವಿರುದ್ದ ಬಂಡೆದ್ದು ಹೋರಾಡಿದರೂ ಅಂತಹ ವಿಚಾರಧಾರೆಯ ಅನುಯಾಯಿಗಳಿಗಿಂತಲೂ ಮಿಗಿಲಾದ ನಿಮ್ಮ ಸಡಗರ ಬಸವಣ್ಣರಿಗೆ ಬಗೆಯುತ್ತಿರುವ ದ್ರೋಹವೆಂದೆ ಭಾವಿಸಬೇಕಾದ ನಿಷ್ಠುರಕ್ಕೆ ಮಾದಿಗ ಸಮುದಾಯವನ್ನು ದೂಡಿದ್ದೀರ.

ಬಸವಾದಿಶರಣರ ವಚನ ಸಂಹಿತೆಗಳಿಂದ ಮಾದಿಗ ಸಮುದಾಯದ ಹೊಸ ತಲೆಮಾರುಗಳನ್ನು ವೈಚಾರಿಕವಾಗಿ, ಜ್ಞಾನಪೂರ್ಣವಾಗಿ, ಶರಣಸಂಪನ್ನರನ್ನಾಗಿ ಸದೃಢಗೊಳಿಸಬೇಕಿದ್ದ ನಿಮ್ಮಲ್ಲಿ ಸಿದ್ದಾಂತ ವ್ಯತಿರಿಕ್ತವಾದ ವೈದ್ದಿಕತೆ, ಸನಾತನ ವಿಚಾರಧಾರೆಗಳ ಸಂಸ್ಥೆ ಮತ್ತು ರಾಜಕೀಯಪಕ್ಷಗಳ ಪರಿಚಾರಕರತನ ಎದ್ದು ಕಾಣುತ್ತಿದೆ. ಮಾದಿಗ ಸಮುದಾಯದ ಕಲ್ಯಾಣವೆಂದರೆ ತದ್ವಿರುದ್ದ ವಿಚಾರಧಾರೆಯ ಸಂಘಟನೆಗಳ ಮುಂದೆ ನಿಸ್ಸ್ವಾಭಿಮಾನಿಯಾಗಿ ಮಂಡಿಯೂರಿ ಸರ್ಕಾರದಿಂದ ದುಡ್ಡು, ಸೈಟು ಪಡೆದು ಕಟ್ಟಡಗಳನ್ನು ಕಟ್ಟುವುದು, ಇದಕ್ಕೆ ಋಣಸಮರ್ಪಣೆಯಂತೆ ಚುನಾವಣೆಗಳಲ್ಲಿ ಮಾದಿಗ ಸಮುದಾಯವನ್ನು ಒಂದು ರಾಜಕೀಯ ಪಕ್ಷಕ್ಕೆ ಪಕ್ಕಾಗಿಸುವುದು ಎಂದರ್ಥವೇ? “ಗುರುವಿಡಿದು ಕುರುಹ ಕಾಣಬೇಕು. ಗುರುವಿಡಿದು ಅರುಹ ಕಾಣಬೇಕು. ಗುರುವಿಡಿದು ಆಚಾರವ ಕಾಣಬೇಕು” ಎನ್ನುವಾಗ ಮಾದಿಗ ಸಮುದಾಯ ಶರಣಗುರು ದೀಕ್ಷೆಯ ವಿಮುಖರಂತೆ ಕಾಣುತ್ತಿರುವ ನಿಮ್ಮನ್ನು (ಗುರು)ಹಿಡಿದು ಏನು ಕಾಣಬೇಕು ಎಂಬ ಪ್ರಶ್ನೆ ನನ್ನ ಅಸಂಘಟಿತ ಮಾದಿಗ ಸಮುದಾಯದ ಮುಂದೆ ಇದೆ.

ಆರೋಪಿ ಸ್ಥಾನದಲ್ಲಿರುವ ಮುರುಘಾ ಶರಣರನ್ನು ಬೆಂಬಲಿಸುವ ಬಹಿರಂಗ ಹೇಳಿಕೆ ನೀಡುವ ನೀವು ತಮ್ಮದೆ ಆದ ಮಾದಿಗ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳು ಸಂತ್ರಸ್ತೆಯಾಗಿರುವುದನ್ನು ಮರೆತುಬಿಟ್ಟಿರೇಕೆ? ಆ ಹೆಣ್ಣು ಮಗು , ಮತ್ತವರ ಕುಟುಂಬ ಆರೋಪಿಯ ಬಲಿಷ್ಠ ಪ್ರಭಾವದ ಕಾವಿನಲ್ಲಿ ಹೇಗೆಲ್ಲಾ ನರಳಿ ನಲುಗುತ್ತಿರಬಹುದು ಎಂಬುದನ್ನು ನಿಸ್ಸಂಸಾರಿಯಾದ ನೀವು ಅರ್ಥಮಾಡಿಕೊಳ್ಳಲು ಸಾಧ್ಯವೆ?!

ಈ ಸಮಾಜದಲ್ಲಿ ಬಲಿಷ್ಠ ಜಾತಿಗಳು ಭ್ರಷ್ಟಾಚಾರ, ಅತ್ಯಾಚಾರ ಏನೆಲ್ಲಾ ಮಾಡಿಯೂ ದಕ್ಕಿಸಿಕೊಂಡು ಬಿಡಬಲ್ಲವೂ, ಮತ್ತೆ ಸಮಾಜದ ಮುಖ್ಯವಾಹಿನಿಯಲ್ಲಿ ಆ ಸಮುದಾಯದ ಕಳಂಕಿತರು ಗಣ್ಯರಾಗಿ, ಮಾನ್ಯರಾಗಿ ಮೆರೆಯಬಲ್ಲವರು. ಅವರ ಬದುಕು ಒಂದು ಆದರ್ಶವೂ ಆಗಿಬಿಡಬಲ್ಲದು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಆದರೆ ತಲೆಗೆ ಬಟ್ಟೆ ಇಲ್ಲದ ಜಾತಿಗಳಿಗೆ ಇಂತಹ ಶಕ್ತಿ -ಯುಕ್ತಿ ಇಲ್ಲ. ಹಾಗೊಮ್ಮೆ ಇಂತಹುದ್ದೇ ಆರೋಪ ಈ ತಬ್ಬಲಿ ಜಾತಿಗಳ ಮಠಾಧಿಪತಿಗಳ ಮೇಲೆ ಬಂದಿದ್ದರೆ ಇಷ್ಟೊತ್ತಿಗೆ ಏನೆಲ್ಲಾ ಪರಿಣಾಮ ಆಗಿರುತ್ತಿತ್ತು ಎಂಬುದನ್ನು ನಿಮ್ಮ ಊಹೆಗೆ ಬಿಡುತ್ತೇನೆ.

ಸತ್ಯ ಮತ್ತು ನ್ಯಾಯದ ಪ್ರಶ್ನೆ ಬಂದಾಗ ಬಿಜ್ಜಳನ ಭಂಡಾರ ಪದವಿಯನ್ನೆ ಧಿಕ್ಕರಿಸಿ ಬಂದ ಬಸವಣ್ಣ, ತನ್ನ ಸಮುದಾಯದ ಸ್ವಾಭಿಮಾನಕ್ಕಾಗಿ ಬದುಕನ್ನೆ ತ್ಯಾಗ ಮಾಡಿದ ಬಾಬಾಸಾಹೇಬ್ ಅಂಬೇಡ್ಕರ್ ನಿಮಗೆ ಎಲ್ಲಾ ಕಾಲಕ್ಕೂ ಆದರ್ಶರು ಎನಿಸುವುದಿಲ್ಲವೆ? ಪ್ರಕರಣ ತನಿಖೆಯ ಆರಂಭಿಕ ಹಂತದಲ್ಲಿರುವಾಗ ಯಾರೇ ಆದರೋ ಪ್ರಭಾವಿ ಆರೋಪಿಗೆ ಬೆಂಬಲ ನೀಡುವುದು ಸತ್ಯದ ಮೇಲೆ, ಸಹಜ ನ್ಯಾಯದ ಮೇಲೆ ದುಷ್ಪರಿಣಾಮ ಬೀರುವ ಅಥವಾ ಸಂತ್ರಸ್ತೆಯನ್ನು ಅಸಹಾಯಕಳನ್ನಾಗಿ ಮಾಡುವ ಬೆದರಿಕೆಯೂ ಆಗಿರುತ್ತದೆ.

ಇದನ್ನೂ ಓದಿರಿ: ಮರುಘಾ ಶರಣರ ಬಂಧನಕ್ಕೆ ಆಗ್ರಹಿಸಿ ಸೆ.2ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ

ಮುರುಘಾಮಠಕ್ಕೆ ’ಲಿಂಗಾಯಿತ ಪರಂಪರೆ’ (ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬಲಿಷ್ಠವಾದ) ಇದೆ. ಅದು ತೀರ‍್ಮಾನ ಕೈಗೊಳ್ಳುತ್ತದೆ ಎಂದು ಹೆಮ್ಮೆಯಿಂದ ಹೇಳುವ ನೀವು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ದುರ್ಬಲವಾಗಿರುವ ಮಾದಿಗ ಸಮುದಾಯದ ಅಪ್ರಾಪ್ತ ಹೆಣ್ಣುಮಗಳೊಬ್ಬಳ ಮತ್ತು ಆಕೆಯ ಕುಟುಂಬದ ಆತ್ಮಗೌರವ, ಚಾರಿತ್ರ್ಯವನ್ನು ಕಾಪಾಡುವುದು, ದಿಟ್ಟದನಿಯಲ್ಲಿ ನ್ಯಾಯ ಕೇಳುವುದು ಮತ್ತು ತನ್ನ ದುರ್ಬಲ ಸಮುದಾಯದ ಜೊತೆ ನಿಲ್ಲುವುದು ಧರ್ಮ, ನ್ಯಾಯ ಮತ್ತು ಆತ್ಮಸಾಕ್ಷಿಯ ನಡೆಯಾಗುತ್ತದೆ.

ಇದಕ್ಕೆ ಭಿನ್ನ ಹಾದಿ ನಿಮ್ಮದಾದರೆ ನಿಮಗೆ ಮಾದಿಗ ಸಮುದಾಯವನ್ನು ಪ್ರತಿನಿಧಿಸುವ ಯಾವ ನೈತಿಕ ಹಕ್ಕಿಲ್ಲ. ನಿಮ್ಮನ್ನು ಗುರುವೆಂದು ಮಾದಿಗ ಸಮುದಾಯ ಭಾವಿಸಬೇಕಾಗಿಲ್ಲ ಎಂದೆನಿಸುತ್ತದೆ.

  • ಎನ್.ರವಿಕುಮಾರ್ ,
    ಪತ್ರಕರ್ತ, ಲೇಖಕ
    30/8/2022
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ಸ್ವಾಮಿಗಳು ಅನೈತಿಕತೆಗೆ ಸಪೋರ್ಟ್ ಮಾಡಿದ್ರೆ ಅವುಗಳನ್ನು ಸ್ವಾಮಿಗಳು ಅನ್ನೋಕೆ ನಾಚಿಕೆ ಯಾಗುತ್ತೆ ಅವರು ಹೇಸಿಗೆಗಿಂತ ಕಡೆಯಾಗುತ್ತಾರೆ ದೇವರ ಮೇಲೆ ಭಕ್ತಿ ಇಲ್ಲದ ಈ ಕಾಲದಲ್ಲಿ ಸ್ವಾಮಿ ಗಳಿಗೆ ಇನ್ಯಾವ ಮರ್ಯಾದೆ ಕೊಡಬೇಕು ಹೇಳಿ. ಅದರಲ್ಲೂ ಇಂಥ ನೀಚ ಕೆಲಸ ಮಾಡಿರುವ ಸ್ವಾಮಿಗಳಿಗೆ

  2. What is the contribution of Madara Channaiah Swamy to his community people. Has he helped any one from his community. Instead he is making fortune using name of community.oppressed communities can’t expect to good from such psudo swamies. Lower class swamies act as Chelas to powerful Mutts.

  3. ಇವರು ಮತ್ತು ಇಂತವರು ತಮ್ಮನ್ನು ತಾವೇ “ಮಾರಾಟ ಮಾಡಿಕೊಂಡ” ಸ್ವಾಮೀಜಿಗಳು. ಇವರು ಜನಾಂಗಕ್ಕೆ ದಾರಿ ದೀಪ ಎಂಬುದು ಬ್ರಮೆ.

  4. ಮಂಗಮೂತಿ ಕಾಯಿ ಹುಟ್ಟಿ ವನವೆಲ್ಲ ನಾಶವಾಯಿತು ಎಂಬ ಗಾದೆ ಗ್ರಾಮೀಣರಲ್ಲಿದೆ. ಹಾಗೆಯೇ ಇಂಥವರು ಮಂಗಮೂತಿ ಕಾಯಿ ಆಗುವರೇ ಹೊರತು ನೊಂದ ಸಮುದಾಯಗಳಿಗೆ ಫಲ ಆಗಲಾರರು.

  5. ಸಮಾಜದ ಜನರನ್ನ ರಕ್ಷಣೆ ಮಾಡದ ಅನ್ಯಾಯವನ್ನು ಪ್ರತಿಭಟಿಸಿದ ಇಂತಹ ಸ್ವಾಮಿ ನಮಗೆ ಏತಕ್ಕೆ ಬೇಕು ?ಇವರ ವರ್ತನೆ ನೋಡಿದರೆ ತಾವೊಬ್ಬ ಮುಂದುವರೆದ ಸಮಾಜದ ಸ್ವಾಮಿಯ ರೀತಿಯಲ್ಲಿ ಇದೆ.
    ಸಮಾಜದ ಹೆಣ್ಣು ಮಗಳ ಪರವಾಗಿದ್ದರೆ ಸರಿ ಇಲ್ಲದಿದ್ದರೆ ಸ್ವಾಮಿಗಳನ್ನು ಸ್ಥಾನಪಲ್ಲಟ ಮಾಡುವುದೇ ಒಳ್ಳೆಯದು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...