1993 ರ ಮುಂಬೈ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಕುರಿತು ನೀಡುವ ಮಾಹಿತಿಗೆ ಎನ್‌ಐಎ 25 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ. ಇಷ್ಟೆ ಅಲ್ಲದೆ ದಾವೂದ್‌ನ ಹೊಸ ಫೋಟೋವನ್ನು ಕೂಡ ಏಜೆನ್ಸಿ ಬಿಡುಗಡೆ ಮಾಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ದಾವೂದ್ ಮಾತ್ರವಲ್ಲದೆ, ಆತನ ಸಹಾಯಕ ಛೋಟಾ ಶಕೀಲ್‌ಗೆ 20 ಲಕ್ಷ ರೂಪಾಯಿ ಮತ್ತು ಇತರ ಸಹಚರರಾದ ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ ಮತ್ತು ಟೈಗರ್ ಮೆಮನ್‌ಗೆ ತಲಾ 15 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದೆ. ಇವರೆಲ್ಲರೂ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ದಾವೂದ್ ಇಬ್ರಾಹಿಂ ಮತ್ತು ಇತರರು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಅಲ್ ಖೈದಾದೊಂದಿಗೆ ಸಕ್ರಿಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಎನ್ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬಡ ಕಾರ್ಮಿಕರ ಪಿಎಫ್ ಹಣವನ್ನು ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ ಮಿರ್ಚಿಗೆ ಕೊಟ್ಟ ಯೋಗಿ ಸರ್ಕಾರ!
ಶಸ್ತ್ರಾಸ್ತ್ರ ಕಳ್ಳಸಾಗಣೆ, ನಾರ್ಕೋ-ಭಯೋತ್ಪಾದನೆ, ಭೂಗತ ಪಾತಕಿ ಸಿಂಡಿಕೇಟ್ ಮತ್ತು ಮನಿ ಲಾಂಡರಿಂಗ್, ನಕಲಿ ಕರೆನ್ಸಿ ಚಲಾವಣೆ ಮತ್ತು ನಿಧಿ ಸಂಗ್ರಹಿಸಲು ಪ್ರಮುಖ ಆಸ್ತಿಗಳನ್ನು ಅನಧಿಕೃತವಾಗಿ ಹೊಂದಿರುವಂತಹ ವಿವಿಧ ಭಯೋತ್ಪಾದನೆ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ದಾವೂದ್ ಮತ್ತು ಅವರ ಸಹಚರರು ತೊಡಗಿಸಿಕೊಂಡಿದ್ದಾರೆ ಎಂದು ಎನ್‌ಐಎ ಹೇಳಿದೆ.
ದಾವೂದ್‌ನನ್ನು ‘ವಿಶ್ವಸಂಸ್ಥೆ ಭದ್ರತಾ ನಿರ್ಣಯ-1267’ ರ ಅಡಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯಿಂದ ಗೊತ್ತುಪಡಿಸಲಾಗಿದೆ ಎಂದು ಎನ್‌ಐಎ ಹೇಳಿದ್ದು, “UAPA ಕಾಯಿದೆಯ ನಾಲ್ಕನೇ ವೇಳಾಪಟ್ಟಿಯ ಅಡಿಯಲ್ಲಿ ಆತನನ್ನು ಪಟ್ಟಿಮಾಡಲಾಗಿದೆ” ಎಂದು ಹೇಳಿದೆ.
ತನ್ನ ಸಹಚರರಾದ ಅನೀಸ್ ಇಬ್ರಾಹಿಂ, ಛೋಟಾ ಶಕೀಲ್, ಜಾವೇದ್ ಚಿಕ್ನಾ ಮತ್ತು ಟೈಗರ್ ಮೆಮನ್ ಸೇರಿದಂತೆ ಇತರರ ಸಹಾಯದಿಂದ ಅಂತರರಾಷ್ಟ್ರೀಯ ಭಯೋತ್ಪಾದನಾ ಜಾಲ ಡಿ ಕಂಪನಿಯನ್ನು ದಾವೂದ್ ಇಬ್ರಾಹಿಂ ನಡೆಸುತ್ತಿದ್ದಾನೆ ಎಂದು ಎನ್‌ಐಎ ಹೇಳಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನಟ ಅಮಿತಾಬ್ ಬಚ್ಚನ್ ದಾವೂದ್ ಇಬ್ರಾಹಿಂನನ್ನು ಭೇಟಿ ಆಗಿದ್ದು ನಿಜವೆ?
ದಾವೂದ್ ಇಬ್ರಾಹಿಂ 1993 ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಮುಂಬೈನ ವಿವಿಧ ಸ್ಥಳಗಳಲ್ಲಿ 12 ಬಾಂಬ್‌ಗಳು ಸ್ಫೋಟಗೊಂಡು, 257 ಜನರು ಸಾವನ್ನಪ್ಪಿದರು ಮತ್ತು 700 ಜನರು ಗಾಯಗೊಂಡರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯಿಂದ ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡಲಾದ ದಾವೂದ್ ಇಬ್ರಾಹಿಂ ತಲೆಮರೆಸಿಕೊಂಡಿದ್ದು ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾನೆ ಎಂದು ನಂಬಲಾಗಿದೆ.


