Homeನ್ಯಾಯ ಪಥಹಿಂಗಿದ್ದ ನಮ್ಮ ರಾಮಣ್ಣ: ಭಾಗ-5; "ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ...

ಹಿಂಗಿದ್ದ ನಮ್ಮ ರಾಮಣ್ಣ: ಭಾಗ-5; “ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ ಅದ್ಕೂ ಕಲ್ಲಾಕಿದೆ”

- Advertisement -
- Advertisement -

ಸುಗ್ಗಿ ಕತಿಗೆ ಫಸ್ಟ್ ಪ್ರೈಜ್ ಬಂದಾಗ ಹಾಸ್ಟೆಲ್ ಹುಡುಗರ್‍ಯಲ್ಲ ಸೇರಿ ಹತ್ತತ್ತು ರೂಪಾಯಿ ಹಾಕಿ ಸನ್ಮಾನ ಮಾಡನ ಅಂತ ತೀರ್ಮಾನ ಮಾಡಿದೊ. ಸನ್ಮಾನ ಎಲ್ಲಿ ಮಾಡನ ಅಂತ ಚರ್ಚೆ ಮಾಡುವಾಗ ಹೋಟೆಲ್ ಡಿಲಕ್ಸೆ ಸರಿ ಅಂತ ಆಯ್ತು. ಡಾ. ಬಿ. ಶಿವಣ್ಣ ಎಂ.ಎಸ್.ಪಿ.ಜಿ ಇದ್ರು; ಅವರನ್ನ ಈ ಸನ್ಮಾನಕ್ಕೆ ಕರಿಯನ ಅಂತ ಹೋದೊ. ಅವುರೂ ಒಪ್ಪಿಗಂಡ್ರು. ಆಗ ಯಾರೂ ಕತೆ ಓದಿರಲಿಲ್ಲ. ಬರದೋನೆ ನಮ್ಮ ಜೊತೆ ಇರಬೇಕಾದ್ರೆ ಕತೆ ಕಟ್‌ಗಂಡೇನು ಅನ್ನಂಗಿದ್ರು. ಬಹುತೇಕ ಹುಡುಗ್ರು ಕುಸ್ತಿಗೆ ಪೈಲವಾನನ್ನ ಕರಕಂಡು ಬತ್ತರಲ್ಲ ಅಂಗೆ ರಾಮಣ್ಣನಿಗೆ ಹೂವಿನಾರ ಹಾಕಿ ಕರಕಂಡು ಬರಾನ ಅಂತ ತಯಾರಾದ್ರು. ಆದ್ರೆ ರಾಮಣ್ಣನೇ ಪತ್ತೇಯಿಲ್ಲ. ಅವುನು ಮಹಾರಾಣಿ ಕಾಲೇಜ್ ಬುಡೋ ಟೈಮಿಗೆ ಸರಿಯಾಗಿ ಹೋಗಿ ನಿಸರ್ಗ ನೋಡೋನಂಗೆ ನಿಂತಿದ್ದ. ಅವತ್ತಿನ ಅವನ ಸಂಭ್ರಮ ಮುಖದಲ್ಲೇ ಎದ್ದು ಕಾಣುತ್ತಿತ್ತು. ಆಗ ನಾನೋಗಿ “ರಾಮಣ್ಣ ನಿನ್ನ ಸನ್ಮಾನ ಕ್ಯಾನ್ಸಲ್ ಆಗ್ಯದೆ” ಅಂದೆ. “ಯಾಕ್ಲ” ಅಂದ. “ಆಸಾಮಿಯ ಹಿಡಕಂಡೋಗಿ ಸನುಮಾನ ಮಾಡನ ಅಂತ ಹುಡುಕಿ ಸಾಕಾಗಿ ಸುಮ್ಮಾನಾದ್ರು” ಅಂದೆ. “ಲ್ಯೇ ಎಲ್ಲುಡುಕಿದುರ್ಲ. ಇಲ್ಲೆ ಇವುನಿಕಲ, ನಾನೆಲ್ಲಿಗೋದೆನು ನಡಿಲ, ಜಲ್ದಿ ಹೊಗಮ” ಅಂತ ಬಂದ.

ಸನ್ಮಾನದ ಭರಾಟೆಲಿ ರಾಮಣ್ಣನ ಕತೆ ಬಗ್ಗೆ ಯಾರೂ ಕೇಳ್ಳಿಲ್ಲ. ರಾಮಣ್ಣನೂ ಹೇಳಲಿಲ್ಲ. ಯಲ್ಲ ಆಮ್ಲೆಟ್ ತಿನ್ನಕಂಡು ಅದು ಇದು ಮಾತಾಡಿಕೊಂಡು ಬಂದೂ. ಅವುನು ಒಕ್ಕಲಿಗರ ಹುಡುಗ್ರು ಸನ್ಮಾನ ಮಾಡಿದ್ರೆ ಹೋಯ್ತಿರಲಿಲ್ಲ. ಮದ್ಲಿಂದ ಜಾತಿ ಜನಗಳ ಗುಂಪಲ್ಲಿ ಸೇರತಿರಲಿಲ್ಲ. ನಾಕು ಜನ ಜಾತಿಯೋರು ಸೇರಿಕಂಡ್ರೆ ಇನ್ನೇನು ಮಾತಾಡ್ತರ್ಲ ಅಂತಿದ್ದ. ಆದ್ರೆ ತನ್ನಂಗೆ ಇದ್ದ ಸ್ವಜಾತಿ ಜನಗಳ ಜೊತೆ ಯಾವ ಅಳಕೂ ಇಲ್ದೆ ಬ್ಯರಿತಿದ್ದ. ಪರೀಕ್ಷೆ ಟೈಮಲ್ಲಿ ಜಾತಿ ಹುಡುಗರಿಗೆ ಸಬ್‌ಜೆಕ್ಟ್ ವಿಷಯದಲ್ಲಿ ಪ್ರಶ್ನೆ ಕೇಳಿ ಹೆದರಸತಿದ್ದ. ಸರಿಯಾಗಿ ಹೇಳದ ಹುಡುಗ್ರ ದುರುಗುಟ್ಟಿಗಂಡು ನೋಡಿ ನಿನ್ನಕತೆ ಮುಗಿತು ಅನ್ನಂಗೆ ಮಾಡನು, ಬಂದು ಅದೇಳಿಕಂಡು ನಗಾಡನು.

“ಕಮಲಾಕ್ಷಣ್ಣ ರಾಮಣ್ಣನ ಆ ಟೈಮಲ್ಲಿ ನಾನು ನೋಡಿದ್ದೆ. ನಾನು ನೋಡಿದ ಮೊದಲ ಕತೆಗಾರ ರಾಮಣ್ಣನೆಯ. ನಾನಾಗ ಕಡಬಳ್ಳಿ ಹೈಸ್ಕೂಲಲ್ಲಿ ಓದ್ತಿದ್ದೆ. ಅಲ್ಲಿ ಹೆಡ್ ಮಾಸ್ಟರಾಗಿದ್ದ ಯಚಾಕನಳ್ಳಿ ಸತ್ಯನಾರಾಯಣ ಮೇಷ್ಟ್ರು, ದೊಡ್ಡದೊಡ್ಡ ಅಧಿಕಾರಿಗಳು ವಿದ್ವಾಂಸರನ್ಯಲ್ಲ ಕರೆಸಿ ಭಾಷಣ ಮಾಡಸೋರು. ರಾಜಕಾರಣಿಗಳ ಪೈಕಿ ಟಿ.ಎಂ ಮಾದಪ್ಪಗೌಡ್ರು, ಹೆಚ್.ಟಿ ಕೃಷ್ಣಪ್ಪ, ಎಂ.ಆರ್.ಎಂ ಶಾಸ್ತ್ರಿ ಇವುರ್‍ಯಲ್ಲ ಬತ್ತಿದ್ರು. ಅಂಗೆ ರಾಮಣ್ಣನ ಟೀಮು ಬಂದಿತ್ತು. ಆಗ ರಾಮಣ್ಣ ಕತೆಗಾರ್ರು. ಅವುರ ಕತೆಗಾಗ್ಲೆ ಬಹುಮಾನ ಬಂದದೆ ಅಂತ ಪರಿಚಯ ಮಾಡಿದ್ರು. ನಾವು ವಿಶೇಷವಾಗಿ ನೋಡಿದ್ದೊ. ಅಲ್ಲಿ ನಾಗ್ತಳ್ಳಿ ಚಂದ್ರುನೂ ಇದ್ದ. ರಾಮಣ್ಣ ವಳ್ಳೆ ಪ್ರಾಯದ ಹುಡುಗ. ಕೆಂಪು ಕಣ್ಣುಬ್ಯಾರೆ. ನಮಿಗ್ಯಲ್ಲ ವಿಶೇಷವಾಗಿ ಕಂಡಿದ್ದ. ಅವುನು ಭಾಷಣ ಮಾಡುವಾಗ ನಿಮ್ಮ ಓದಿನ ಜೊತೆಗೆ ಬ್ಯಾರೆ ಚಟುವಟಿಕೆನೂ ಇರ್ಲಿ ಅಂತ ಹೇಳಿದ್ದೂ ಇನ್ನೂ ನ್ಯನಪದೆ ಮುಂದಕೇಳು.”

ಅವುನ ಕತಿಗೆ ಬಹುಮಾನ ಬಂದಿದ್ಕೆ ನಾವು ಸರಿಯಾದ ಪಾರ್ಟಿ ಮಾಡಿರಲಿಲ್ಲ. ಅಂದ್ರೆ ಒಂದು ಹೊರ್ಸತೊಡಿಕಿನಂತ ಫಂಕ್ಷನ್ ಆಗಬೇಕಿತ್ತು. ಅಂಗಾಗಿ ರಾಮಣ್ಣನೂ ನಾನು ಮೀನ್ ತರದೊ ಇಲ್ಲ ಬಾಡ್ ತರೊದೊ ಅಂತ ಚರ್ಚೆ ಮಾಡಿಕಂಡು ಮೀನು ಮಾರುಕಟ್ಟೆಗೋದೊ. ರಾಮಣ್ಣ ಬಂದು ದಪ್ಪ ಮೀನಿನ ತುಟಿಯಳದು ಚೆಕ್ ಮಾಡಿದ. ಅಮ್ಯಾಲೆ “ಇದ್ನೆ ತಗಳ್ಳ ಪ್ರೆಸ್ ಮಾಲಿದು” ಅಂದ. “ಅದ್ಯಂಗೇಳತಿ” ಅಂದೆ. “ಬಾಯಿ ಇನ್ನ ಕ್ಯಂಪಗದೆ ಕಲ. ಇವತ್ತಿಡಕಂಡು ಬಂದವುರೆ ತಗೊ” ಅಂದ. ಮೂರ್ ರುಪಾಯಿ ಕೆಜಿಯಂಗೆ ತಗಂಡೊ. ಅಲ್ಲೆ ಕ್ಲೀನ್ ಮಾಡಿಸಿಗಂಡು, ಕಟ್ ಮಾಡಿಸಿಗಂಡು ಬಂದೊ. ಸರಿ ಈಗ ಅಡುಗೆ ಮಾಡಬೇಕಲ್ಲ ಅಂತ ಯೋಚನೆ ಮಾಡುದಾಗ, ಊರಲ್ಲಿ ಮಾಂಸದ ಅಡುಗೆ ಮಾಡದ ನೋಡಿದ್ದೆ ಸರಿ, ಅಂಗೆ ಮಾಡನ ಅಂತ ರೆಡಿಯಾದೆ. ರಾಮಣ್ಣ ಸಾಮಾನು ತಂದುಕೊಟ್ಟ. ಹಾಲು ಕಾಫಿ ಕಾಸಕ್ಕೆ ಅಂತ ತಂದು ಮಡಿಕಂಡಿದ್ದ ಸ್ಟವ್ವಿನ ಮೇಲೆ ಮಾಡಬೇಕಾಯ್ತು. “ಇದರಲ್ಯಂಗಪ್ಪ ಮಾಡದು” ಅಂತ ಅನುಮಾನ ಮಾಡಬೇಕಾದ್ರೆ ರಾಮಣ್ಣ “ಅದ್ರಲ್ಲೇ ಮಾಡ್ಲ, ಮೀನ ಜಾಸ್ತಿ ಬೇಸಂಗಿಲ್ಲ. ಮಧ್ಯಾನಿಕೆ ಉಣ್ಣುವ” ಅಂದ. ನಾನು ಭಾಳ ಮುತುವರ್ಜಿ ವಯಿಸಿ, ಮನೇಲಿ ಮಾಂಸದಡಗೆ ಮಾಡ್ತರಲ್ಲ ಅಂಗೆ ಮಾಡಿದೆ. ಬಗ್ಗಿ ನೋಡಿದ್ರೆ ಮೀನು ಪೀಸು ಆಕಾರ ಕಳಕಂಡಿದ್ದೊ. ಇದೇನಿಂಗಾಯ್ತಲ್ಲಾ ಅಂತ ನೋಡಿದ್ರೆ ಮೀನ್ಯಲ್ಲ ಕದರಿಕೊಂಡು ಸಾರು ಬಗ್ಗಡಾಗಿತ್ತು. “ಬೇಸಿದ್ದು ಸಾಕು ತಗಿಲ” ಅಂದ ರಾಮಣ್ಣ. ಮೀನಿನ ಪೀಸ ತಗದು ನೋಡಿದ. ಅವ್ಯಲ್ಲ ಚಿಂದಿಯಾಗಿದ್ದೊ. “ಥೂ ನಿನ್ನ ಯಂಥಾ ಅಡ್ಡಕಸಬಿನ್ಲ ನೀನು, ನಿನ್ನಂಥೊನ ಕೈಗೆ ತಂದುಕೊಟ್ನಲ್ಲ ಮೀನ. ಮಾಡಕ್ಕೆ ಬರದಿಲ್ಲ ಅಂತ ಮದ್ಲೆ ಹೇಳಬೇಕಾಗಿತ್ತು ಕಲ. ಭಾಳ ಗಂಭೀರವಾಗಿ ಮಾಡತಿದ್ದಲ್ಲ, ಹಿಂಗ ಮಾಡದು” ಅಂತ ಒಂದೇ ಸಮ ರೇಗಿದ.

“ಏ ಊರಲ್ಲಿ ಬಾಡ್ನೆಸರು ಮಾಡ್ತರಲ್ಲ, ಅಂಗೆ ಅಂತ ತಿಳಕಂಡು ಮಾಡಿದ್ನಪ್ಪ.”

“ಬಾಡು ಮೀನು ಒಂದೆ ಏನ್ಲ, ಮೀನು ಸಾರು ಮಾಡಕ್ಕೆ ಬರೊದಿಲ್ಲ ಅಂತ ಮದ್ಲೆ ಹೇಳಬೇಕಾಗಿತ್ತು. ಮಾಡೋರ್‌ನೆ ಕರಸತಿದ್ದೆ. ಕಾಕಾಹೋಟ್ಳು ಮೀನ ಬಟ್ಟನಂಗಾಗಿಬುಟ್ಟೆ. ಯಾವ ನನ್ನಮಗನಿಗೆ ಗೊತ್ಲ, ನೀನಿಂಗೆ ರಸ ತಗಂಬಂದಿ ಕಸ ಮಾಡಿ ಮಡಗ್ತಿ ಅಂತ” ಅಂದ.

“ಈಗೇನೊ ಆಯ್ತಲ್ಲ ಹೋಗ್ಲಿ ಬುಡು” ಅಂದೆ.

“ಏಟು ಸಲೀಸಾಗೇಳ್ತಿಲ. ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ ಅದ್ಕೂ ಕಲ್ಲಾಕಿದೆ” ಅಂತ ಬೈಯ್ಯಕಂಡೆ ಚಿಂದಿ ಮೀನ ಪೀಸ ಗೋರಿಕಂಡು ತಿಂದ. “ನೀನು ತಿನ್ಲ ಅದ್ಯಾಕಂಗೆ ಕುಂತಿದ್ದಿ” ಅಂದ. ಅಮ್ಯಾಲೆ ನಾವು ಮೀನಿನ ಸವಾಸಕ್ಕೋಗಲಿಲ್ಲ.

ಆಗ ಆರ್ ರುಪಾಯಿ ಕೊಟ್ರೆ ಒಂದು ನಾಟಿಕೋಳಿ ಸಿಗದು. ಅದ್ನೆ ತಂದು ಕೂದು ಸೀದು ತರದು ಅಡುಗೆ ಮಾಡೊವಷ್ಟರಲ್ಲಿ ರಾಮಣ್ಣ ಹೋಗಿ ತ್ರಿಬಲ್ಲೆಕ್ಸ್ ರಂ ತರೋನು. ನಾಟಿಕೋಳಿ ರಂ ಪಾರ್ಟಿ ಚನ್ನಾಗಿ ನ್ಯಡಿಯದು. ಆಗಿನ ಖುಷಿ ಈಗ ಯಾವ ಪಾರ್ಟಿಲೂ ಸಿಗದಿಲ್ಲ. ಇಂತ ಪಾರ್ಟಿಗಳು ಸಾಂಗವಾಗಿ ನ್ಯಡಿದಾಗ ಕಾಲೇಜ್ ಯಲಕ್ಷನ್ ಬಂದು ನಮಿಗ್ಯಲ್ಲ ಒಂಥರ ಹುಮ್ಮಸ್ಸು ಬಂತು. ಆದ್ರೆ ರಾಮಣ್ಣನಿಗೆ ಯಾವ ಹುಮ್ಮಸ್ಸು ಸುಮ್ಮನಿದ್ದ. ಸಾಹಿತ್ಯ ಲೋಕದಲ್ಲಿ ಮುಳುಗಿದ್ದ ಅವುನಿಗೆ ನಮ್ಮ ಯಲಕ್ಷನ್ ವಿಷಯ ಹೇಳಿದಾಗ “ನಾವು ಇಂಟಲೆಕ್ಚುಯಲ್ ಕಲ, ನಿಮ್ಮ ಜುಜುಬಿ ಯಲಕ್ಷನ್ ಬಗೆ ತಲೆ ಕೆಡಿಸಿಗಳಂಗಿಲ್ಲ. ಅವ್ಯಲ್ಲ ನಿಮ್ಮಂಥೋರಿಗೆ ಸೈ. ನನ್ನ ಕರಿಯಕ್ಕೆ ಬರಬ್ಯಾಡ” ಅಂದ. “ಆಯ್ತಪ್ಪ ನಿನ್ನ ಕತೆಗೆ ಬಹುಮಾನ ಬಂದಾಗ ಅವುರ್ ಯಲ್ಲ ಓಡಾಡಿ ಸನ್ಮಾನ ಮಾಡಲಿಲ್ವೆ” ಅಂದೆ. “ಮಾಡಿ ಅಂತ ನಾನೇನು ಕೇಳಿದ್ನ? ಅಂಗಂತ ಬಾವುಟ ಹಿಡಕಂಡು ಜೈ ಅನ್ನಕಾದತ್ಲ? ಯಾವನಿಗೋ ನನಿಗಿಷ್ಟ ಬಂದೋನಿಗೆ ಓಟು ಮಾಡ್ತಿನಿ ಹೋಗು” ಅಂದ.

ಯಲಕ್ಷನ್ನು ಮುಗಿತು. ನಮ್ಮ ಹಾರಾಟನೂ ಮುಗಿತು. ಯಲ್ಲ ಮಾಮೂಲಿಯಂಗೆ ನ್ಯಡಕಂಡೊಯ್ತಾಯಿರುವಾಗ ನಮ್ಮ ಸಂತೋಷದಿಂದ ದೂರಯಿದ್ದ ರಾಮಣ್ಣ ನಮ್ಮಿಂದ ಇನ್ನ ದೂರವಾಗೊ ಒಂದು ಸುದ್ದಿ ಮದ್ದೂರು ಕಡಿಂದ ಬಂತು. ಅದೇನಪ್ಪ ಅಂದ್ರೆ ರಾಮಣ್ಣನಿಗೆ ಮದಿವಂತೆ ಅಂತ. ಅದು ಆಶ್ಚರ್ಯದ ಸುದ್ದಿ ಏನಾಗಿರಲಿಲ್ಲ. ಅವಾಗ ಯಲ್ಲ ಓದುವಾಗ್ಲೆ ಮದಿವಾಗೋರು. ಮದುವಿಗೆ ಬಂದ ಮಗನಿಗೆ ಮದುವೆ ಮಾಡೋದು ಈ ಸಮಾಜದ ಜವಾಬ್ದಾರಿ ಅನ್ನಂಗಿದ್ದ ಕಾಲ ಅದು. ನಮ್ಮಣ್ಣ ಹೆಚ್.ಟಿ ಕೃಷ್ಣಪ್ಪನಿಗೂ ಓದುವಾಗ್ಲೆ ಮದುವೆ ಮಾಡಿದ್ದೊ. ಓದುವಾಗ್ಲೆ ಮದಿವಾದೋರು ಏಕದಂ ಜವಾಬ್ದಾರಿ ಹೊತ್ತಂಗೆ ಕಾಣೋರು. ಹುಡುಗಾಟಿಕೆ ನಿಲ್ಲಸೋರು. ಏನೋ ನೋಡಿದೋರಂಗೆ ಕಾಣಸೋರು. ನನಿಗಂತೂ ಇನ್ನಿವುರ ಕತೆ ಮುಗಿತು. ಹುಡುಗಿರ ಮಾತಾಡ್ಸದಾಗ್ಲಿ ಕನಸು ಕಟ್ಟದಾಗ್ಲಿ ಇವುರಿಂದ ಸಾಧ್ಯವೇ ಯಿಲ್ಲ. ಏನಿದ್ರು ಹೆಡತಿ ಬಗ್ಗೆ ತಲೆಕೆಡಿಸಿಕೊಬೇಕಷ್ಟೆ ಅನ್ಸದು. ರಾಮಣ್ಣನ ಮದುವೆ ವಿಷಯ ಯಾರಿಂದ್ಲೋ ನನ್ನ ಕಿವಿಗೆ ಬಿದ್ದಾಗ ಅವುನ್ನೆ ಕೇಳಿದೆ.

ಅಗ್ರಹಾರ ಕೃಷ್ಣಮೂರ್ತಿಯವರೊಡನೆ

“ನಿನ್ನ ಮದುವೆ ಅಂತ ಸುದ್ದಿ ಹಬ್ಯದೆ ನಿಜವೆ” ಅಂದೆ.

“ಊ ಕಲ” ಅಂದ.

“ಅದ್ಯಾಕಿಷ್ಟು ಬೇಗ ಆಯ್ತೀ”

“ನಾನಾಗಕೋಗಿದ್ದನೆ, ಮನಿಯೋರು ಮಾಡ್ತ ಅವುರೆ ಕಲ”

“ಈಗ್ಲೆ ಬ್ಯಾಡ, ಎಂಬಿಬಿಎಸ್ ಮುಗಿಲಿ ಅನ್ನಬೇಕಾಗಿತ್ತು”

“ಅಂದೆ, ಅದರ ಪಾಡಿಗದು ಇದರ ಪಾಡಿಗಿದು” ಅಂದ್ರು.

“ಹುಡುಗಿ ದೂರದ ಸಂಮಧನೊ”

“ನಮ್ಮತ್ತಗೆ ತಂಗಿನೆ ಕಲ. ನಮ್ಮಣ್ಣ ತೀರಕಬುಟ್ಟ ಅತ್ತಿಗೆಗೆ ಒಂದು ರಕ್ಷಣೆಬೇಕು ಅಂತ ಅವುಳ ತಂಗಿನ ಮಾಡ್ತ ಅವುರೆ, ಒಪ್ಪಗಂಡಿದ್ದನಿ”

“ನಿನ್ನೊಪ್ಪಿಗೆಯಿಲ್ದೆ ಅವುರೆಲ್ಲಿ ಮಾಡ್ಯಾರೂ. ನಿನಿಗೂ ಜಲ್ದಿ ಮದಿವಾಗಬೇಕು ಅನ್ನ ಆಸಿತ್ತೇನೊ” ಅಂದೆ. ಅದಕ್ಕೇನು ಅವುನು ಉತ್ತರಕೊಡಲಿಲ್ಲ.

“ಬರ್ರಲ ಯಲ್ಲಾರು ಮದುವೆಗೆ” ಅಂದ.

“ಬರದೆ ಇರಕ್ಕಾದತೆ, ಯಲ್ಲಾರಿಗೂ ಹೇಳು ಬತ್ತಿವಿ” ಅಂದೆ.

ರಾಮಣ್ಣನ ಮದುವೆ ದಿನ ಹತ್ರಾದಂಗೂ ನಮಿಗೊಂಥರ ಸಂಭ್ರಮಾಯ್ತು. ಆಗ ಮದುವೆ ಅನ್ನ ಪದವೆ ಸಂಭ್ರಮವುಂಟು ಮಾಡತ್ತಿತ್ತು. ಅವುನ ಜೊತೆ ಓತ್ತಾಯಿದ್ದ ಹುಡುಗರ್‍ಯಲ್ಲ ತಯಾರಾಗಿ ಅಲಗೂರು ಪುಟ್ಟಸ್ವಾಮಿಗೌಡನ ಲೀಡರ್‌ಸಿಪ್ಪಲ್ಲಿ ಹೊಂಟೊ. ಪುಟ್ಟಸ್ವಾಮಿಗೌಡನಿಗೆ ರಾಮಣ್ಣ ಒಂಚೂರು ಹೆದರೋನು. ಅವನ ಮುಂದಾಳತ್ವದಲ್ಲಿ ಮೈಸೂರಿಂದ ಯಲ್ಲ ಹ್ವಂಟು ಮದ್ದೂರಲ್ಲಿಳದೊ, ಅಲ್ಲಿ ಯರಡು ಜಟಕಾ ಮಾಡಿಕೊಂಡು ದೇಶಿಹಳ್ಳಿಗೋದೊ. ಅಗ್ಯಲ್ಲ ಹೆಣ್ಣಿನ ಮನೆಬಾಗ್ಲಲ್ಲೆ ಮದುವೆ. ಅಂಗಾಗಿ ದೇಶಿಹಳ್ಳಿ ತಲುಪಿದೊ. ನಾವೇ ಮಾಡ್ಳು ಗಂಡಾಗಬೇಕಾಯ್ತು.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ: ಭಾಗ-3; ನಿನ್ನ ಕತೆ ಕಾದಂಬರಿ, ಇವೇನು ಎಗ್ಸಾಮಿಗೆ ಬಂದವಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...