ಬೆಂಗಳೂರು ವಿಶ್ವವಿದ್ಯಾಲಯದ ಆವರಣವನ್ನು ಅತಿಕ್ರಮ ಪ್ರವೇಶ ಮಾಡಿ ಅನದೀಕೃತವಾಗಿ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದರ ವಿರುದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಧಾರ್ಮಿಕ ಕೇಂದ್ರ ಅಥವಾ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿಲ್ಲದಿದ್ದರೂ ಕಾನೂನು ಬಾಹಿರವಾಗಿ ಧಾರ್ಮಿಕ ಕೇಂದ್ರವನ್ನು ನಿರ್ಮಿಸುತ್ತಿರುವುದರ ವಿರುದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಹಿಂದೆ ವಿಶ್ವವಿದ್ಯಾಲಯದ ಆವರಣದ ಬೇರೆ ಕಡೆ ಇದ್ದ ಗಣೇಶ ದೇವಸ್ಥಾನವನ್ನು ಸ್ಥಳಾಂತರ ಮಾಡಿ ವಿದ್ಯಾಲಯದ ಆಡಳಿತ ಕಛೇರಿಯ ಹಿಂಬಾಗ ಅನದೀಕೃತವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕ್ಯಾಂಪಸ್ ಒಳಗೆ ನಿರ್ಮಾಣ ಮಾಡುತ್ತಿರುವ ದೇವಸ್ಥಾನಕ್ಕೆ ಉಪ ಕುಲಪತಿಗಳ ಸಮ್ಮತಿಯನ್ನು ಕೂಡಾ ಪಡೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಸ್ತೆ ವಿಸ್ತರಣೆ ನಡೆಯುತ್ತಿರುವುದರಿಂದ ಅಲ್ಲಿದ್ದ ಗಣೇಶ ದೇವಸ್ಥಾನ ತೆರವು ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅಲ್ಲಿದ್ದ ದೇವಸ್ಥಾನವನ್ನು ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಅವರಿಗೆ ಬಿಬಿಎಂಪಿ ಕೂಡಾ ಅನುಮತಿ ನೀಡಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರು ವಿವಿ: ಪ್ರವೇಶಾತಿ ಅನುಮೋದನೆ ನೀಡದೆ ಪ್ರಾಧ್ಯಾಪಕರಿಂದ ತೊಂದರೆ; ವಿದ್ಯಾರ್ಥಿಗಳ ಆರೋಪ
‘‘2000-ಯುಜಿಸಿ ಕಾಯ್ದೆ ಪ್ರಕಾರ, ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಸಂಸ್ಥೆ ಮತ್ತು ಕಟ್ಟಡಗಳಿಗೆ ಅವಕಾಶವಿಲ್ಲ. ಈ ನಿಯಮ ಇದ್ದರು ಕೂಡಾ ಅತಿಕ್ರಮಣ ಮಾಡಿ ದೇವಸ್ಥಾನವನ್ನು ಕಟ್ಟುತ್ತಿದ್ದಾರೆ. ಎರಡು ತಿಂಗಳ ಹಿಂದೆಯೆ ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದ್ದೆವು. ಆ ವೇಳೆ ಉಪ ಕುಲಪತಿ ಅದರ ಕಾಮಗಾರಿಯನ್ನು ನಿಲ್ಲಿಸಿದ್ದರು. ಆದರೆ ಇಂದು ಏಕಾಏಕಿ ತೀರ್ಮಾನಗಳನ್ನು ತೆಗೆದುಕೊಂಡು, ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ರಕ್ಷಣೆಯೊಂದಿಗೆ ಕಟ್ಟಡವನ್ನು ಕಟ್ಟುತ್ತಿದ್ದಾರೆ” ಎಂದು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮನೋಜ್ ಆಝಾದ್ ನಾನುಗೌರಿ.ಕಾಂಗೆ ಹೇಳಿದ್ದಾರೆ.

“ಬಿಬಿಎಂಪಿಯಿಂದ ನಮಗೆ ಆದೇಶ ಬಂದಿದೆ, ಹಾಗಾಗಿ ನಾವು ರಕ್ಷಣೆ ಕೊಡುತ್ತಿದ್ದೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಇಲ್ಲಿ ಹೋರಾಟ ಮಾಡುವ ಹಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅವರಿಗೆ ವಿದ್ಯಾಲಯದ ಆವರಣದಲ್ಲಿ ದೇವಸ್ಥಾನ ಕಟ್ಟಲು ಅನುಮತಿ ಕೊಟ್ಟವರು ಯಾರು? ಹೇಗೆ ಕೊಟ್ಟಿದ್ದಾರೆ?. ಒಂದು ವೇಳೆ ಇದು ಸರಿಯಾಗಿ ಇತ್ಯರ್ಥವಾಗಿಲ್ಲ ಎಂದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯುತ್ತದೆ” ಎಂದು ಮನೋಜ್ ಎಚ್ಚರಿಸಿದ್ದಾರೆ.
ವಿವಿಯ ಹಳೆಯ ಉಪ ಕುಲಪತಿ ವೇಣುಗೋಪಾಲ್ ಅವರು ಈ ಹಿಂದೆಯೆ ದೇವಸ್ಥಾನ ನಿರ್ಮಿಸಲು ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ ಅಧಿಕಾರಿಗಳು ಯಾವುದೆ ದಾಖಲಾತಿಯನ್ನು ತೋರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿವಿ: ಅಂಬೇಡ್ಕರ್ ಫೋಟೋ ತೆರವು ಖಂಡಿಸಿ ಪ್ರತಿಭಟಿಸುವಾಗ ಎಬಿವಿಪಿ ಹಸ್ತಕ್ಷೇಪ; ಲಾಠಿಚಾರ್ಜ್
ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಚಂದ್ರು ಪೆರಿಯಾರ್ ಮಾತನಾಡಿ, “ಈ ಗಣೇಶ ದೇವಸ್ಥಾನದ ಬಗ್ಗೆ ನಾವು ಹಿಂದೆಯೆ ಆರ್‌ಟಿಐ ಹಾಕಿ ಪ್ರಶ್ನಿಸಿದ್ದೆವು. ಅದರಂತೆ ಈ ದೇವಸ್ಥಾನವನ್ನು ವಿಶ್ವವಿದ್ಯಾಲಯ ಕಟ್ಟಿದ್ದಲ್ಲ. ಅದಕ್ಕೆ ಯಾವ ಅನುದಾನವನ್ನೂ ವಿವಿ ಕೊಡಲ್ಲ. ಅದನ್ನು ಸ್ಥಳೀಯರು ಪ್ರಾರಂಭಿಸಿದ್ದರು. ಕಳೆದ ಹತ್ತಿಪ್ಪತ್ತು ವರ್ಷಗಳಿಂದಲೂ ಅಲ್ಲಿ ಸಂಗ್ರಹವಾಗುವ ಹಣವನ್ನು ದೇವಸ್ಥಾನದ ಟ್ರಸ್ಟ್‌ನವರೇ ಬಳಕೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ವಿಶ್ವವಿದ್ಯಾಲಯದೊಂದಿಗೆ ಸಾಮರಸ್ಯವನ್ನು ಸಾಧಿಸಿ ಕಟ್ಟಡವನ್ನು ಕಟ್ಟಿ ಎಂದು ಸರ್ಕಾರದ ಆದೇಶದಲ್ಲಿದೆ. ಆದರೆ ವಿಶ್ವವಿದ್ಯಾಲಯದ ಒಳಗಡೆ ಪ್ರವೇಶ ಮಾಡಬೇಕೆಂದರೆ ಈಗಿನ ಉಪ ಕುಲಪತಿಗಳ ಅನುಮತಿ ಪಡೆಯುವುದು ಬೇಡವೆ? ಈ ಹಿಂದಿನ ಉಪ ಕುಲಪತಿ ವೇಣುಗೋಪಾಲ್ ಅವರ ನಂತರ ಬಂದ ಉಪಕುಲಪತಿಗಳು ಈ ಕಾಮಗಾರಿಗೆ ತಡೆ ಒಡ್ಡಿದ್ದರು. ಆದರೂ ಈ ಹಿಂದಿನ ಉಪ ಕುಲಪತಿ ಆದೇಶ ನೀಡಿದ್ದಾರೆ ಎಂದು ಹೇಳಿ ಏಕಾಏಕಿ ಮುನ್ನುಗ್ಗುತ್ತಾರೆ ಎಂದರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಯಾಕೆ? ಉಪ ಕುಲಪತಿ ಯಾಕೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಬೆಳಿಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ನಂತರ ವಿಶ್ವವಿದ್ಯಾಲಯದಲ್ಲಿ ತುರ್ತು ಸಭೆ ನಡೆದಿದ್ದು, ಕುಲಪತಿ ಕೂಡಾ ದೇವಸ್ಥಾನದ ನಿರ್ಮಾಣದ ಕುರಿತು ಯಾರೂ ನನ್ನ ಬಳಿ ಬಂದು ಅನುಮತಿ ಪಡೆದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆ: ಬೆಂಗಳೂರು ವಿವಿಯ 40,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ವಾಪಸ್!
‘‘ಸಧ್ಯಕ್ಕೆ ಕೆಲಸವನ್ನು ನಿಲ್ಲಿಸುವಂತೆ ಕುಲಪತಿ ಹೇಳಿದ್ದಾರೆ. ಸಭೆಯೊಂದನ್ನು ನಡೆಸಿ ನಂತರ ತೀರ್ಮಾನಕ್ಕೆ ಬರುವ ಬಗ್ಗೆ ತಿಳಿಸಿದ್ದಾರೆ. ಆದರೆ ಅವರ ಮಾತಿಗೆ ಯಾವುದೆ ಬೆಲೆ ಇಲ್ಲ. ಮತ್ತಷ್ಟು ಪೊಲೀಸರನ್ನು ನಿಯೋಜಿಸಿ ದೇವಸ್ಥಾನದ ಕೆಲಸವನ್ನು ಮುಂದುವರೆಸಲಾಗಿದೆ” ಎಂದು ಚಂದ್ರು ಪೆರಿಯಾರ್ ಹೇಳಿದ್ದಾರೆ.
“ಇಂದು ಹಿಂದೂಗಳು ಬಂದು ದೇವಸ್ಥಾನ ಕಟ್ಟುತ್ತೇವೆ ಅನ್ನುತ್ತಾರೆ. ನಾಳೆ ದಿನ ಚರ್ಚು ಮತ್ತು ಮಸೀದಿ ಕಟ್ಟುತ್ತೇವೆ ಎಂದು ಎನ್ನುತ್ತಾರೆ. ಹೀಗೆ ಆದರೆ ಇದು ವಿಶ್ವವಿದ್ಯಾಲಯ ಆಗಿ ಉಳಿಯುತ್ತದೆಯೆ. ಈಗಾಗಲೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸುಮಾರು 15 ದೇವಸ್ಥಾನಗಳು ಇವೆ” ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಇಂದು ಸಂಜೆಯ ಒಳಗೆ ಸರಿಯಾದ ನಿರ್ಧಾರವನ್ನು ಮಾಡಿ ಕೆಲಸವನ್ನು ನಿಲ್ಲಿಸದೆ ಹೋದರೆ ಬೆಂಗಳೂರು ವಿಶ್ವವಿದ್ಯಾಲಯ ಬಂದ್‌ಗೆ ಕರೆ ಕೊಡುತ್ತೇವೆ ಎಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಕೆ ನೀಡಿವೆ.



ದೇವಸ್ಥಾನ ಕಟ್ಟಿದರೆ ಬ್ರಾಹ್ಮಣ್ಯ ಭಿಕ್ಷುಕರ ಸಂಖ್ಯೆ ಜಾಸ್ತಿ ಆಗುತ್ತೆ ಅವರಿಗೆ ಒಂದು ಉದ್ಯೋಗ ಸಿಕ್ಕಿದಂತೆ ಲೈಬ್ರೆರಿ ಕಟ್ಟಿದರೆ ಬೇರೆ ಯಾರಾದ್ರೂ ಬಂದು ಉದ್ಯೋಗ ಪಡೆಯುತ್ತಾರಲ್ಲ ಅದಕ್ಕೆ
ವಿಶ್ವವಿದ್ಯಾಲಯವನ್ನು ತಟ್ಟೆ ಕಾಸಿನ ಕೇಂದ್ರಗಳನ್ನಾಗಿ ಮಾಡುತ್ತಿರುವ ಮನುವಾದಿಗಳ ಹುನ್ನಾರಕ್ಕೆ, ಪ್ರಜ್ಞಾವಂತರು ತಿರುಗೇಟು ನೀಡಬೇಕು.
Request the students not to allow for temple construction, it’s RSS job , pl don’t allow it to happen 👍🙏