ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ‘40% ಸರ್ಕಾರ- ಬಿಜೆಪಿ ಅಂದ್ರೆ ಭ್ರಷ್ಟಾಚಾರ’ ಅಭಿಯಾನವನ್ನು ಕಾಂಗ್ರೆಸ್ ಮಂಗಳವಾರ ಉದ್ಘಾಟನೆ ಮಾಡಿದೆ. ಬಿಜೆಪಿ ಸರ್ಕಾರದ 40% ಕಮಿಷನ್ ಸೇರಿದಂತೆ ಲಂಚದ ರೇಟ್ ಕಾರ್ಡ್ ಅನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರೀಶ್ ಕುಮಾರ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ್ದಾರೆ.
‘ಭ್ರಷ್ಟಾಚಾರ, ಭ್ರಷ್ಟಾಚಾರ ಇದು ನಲ್ವತ್ತು ಪರ್ಸೆಂಟ್‌ನ ಸರ್ಕಾರ’ ಎಂಬ ಹಾಡನ್ನು ಕಾಂಗ್ರೆಸ್ ಈಗಾಗಲೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದು ಜನರ ಗಮನ ಸೆಳೆದಿದೆ. ಕಳೆದ ಹಲವು ತಿಂಗಳಿನಿಂದ 40% ಕಮಿಷನ್ ವಿಚಾರವು ರಾಜ್ಯದ ಬಿಜೆಪಿ ಸರ್ಕಾರಕ್ಕೆ ಭಾರಿ ಹಿನ್ನೆಡೆ ಉಂಟು ಮಾಡುತ್ತಿದೆ. ಗುತ್ತಿಗೆದಾರರ ಸಂಘದ ಮುಖಂಡ ಕೆಂಪ್ಪಯ್ಯ ಅವರು ಪ್ರಧಾನ ಮಂತ್ರಿ ಮೋದಿಗೆ ಪತ್ರ ಬರೆದು ಈ ಬಗ್ಗೆ ದೂರು ಕೂಡಾ ನೀಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, “ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೂ ನಾವು ಭ್ರಷ್ಟಾಚಾರದ ವಿಚಾರವನ್ನು ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಿರುದೇಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅಧಿವೇಶನ 10 ದಿನಗಳ ಕಾಲ ನಡೆಯಲಿದ್ದು, ಇಂದು ಪ್ರಕೃತಿ ವಿಕೋಪದ ಚರ್ಚೆ ಆಗುತ್ತಿದೆ. ಅಧಿವೇಶನದಲ್ಲಿ ಭ್ರಷ್ಟಾಚಾರದ ವಿಚಾರವನ್ನು ವ್ಯಾಪಕವಾಗಿ ಚರ್ಚೆ ಮಾಡಬೇಕಿದ್ದು, ಕಾಂಗ್ರೆಸ್ ಈ ಜವಾಬ್ದಾರಿ ವಹಿಸಿಕೊಂಡಿದೆ. ನಮ್ಮ ಶಾಸಕರುಗಳಿಗೆ ಜವಾಬ್ದಾರಿ ನೀಡಿದ್ದು, ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲು ತಿಳಿಸಿದ್ದೇವೆ. ಅಧಿವೇಶನದಲ್ಲಿ ಹಾಗೂ ಹೊರಗೆ ರಾಜ್ಯದ ಇತರೆ ಭಾಗಗಳಲ್ಲಿ ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆ ಆಗಬೇಕಿದೆ” ಎಂದು ಹೇಳಿದ್ದಾರೆ.
‘ಬಾವುಟ ಮಾರಿ ಬದುಕುವ ನಿಮ್ಮದೊಂದು ಜನ್ಮನಾ?; ಭ್ರಷ್ಟಾಚಾರ, ಭ್ರಷ್ಟಾಚಾರ ಇದು ಫೋರ್ಟಿ ಪರ್ಸೆಂಟ್ ಸರ್ಕಾರ’: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ನಿಂದ ಹಾಡು ಬಿಡುಗಡೆ.#NaanuGauri #40PercentSarkara #BJP #Congress pic.twitter.com/PCJpNPT4Ij
— Naanu Gauri (@naanugauri) September 13, 2022
“ನಮ್ಮ ರಾಜ್ಯ ಹಾಗೂ ಬೆಂಗಳೂರು ನಗರ ಐಟಿ ಕ್ಯಾಪಿಟಲ್, ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಎಜುಕೇಶನ್ ಹಬ್ ಎಂದು ಖ್ಯಾತಿ ಪಡೆದಿದೆ. ಇದಕ್ಕೆ ಹಲವರ ಕೊಡುಗೆ ಇದೆ. ಆದರೆ ಈಗ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ‘ದೇಶದ ಭ್ರಷ್ಟಾಚಾರದ ರಾಜಧಾನಿ’ ಎಂದು ಕುಖ್ಯಾತಿ ಬಂದಿದೆ. ಭ್ರಷ್ಟಾಚಾರದ ವಿಚಾರದಲ್ಲಿ ಮಾಧ್ಯಮಗಳು ನಮಗಿಂತ ಹೆಚ್ಚಿನ ತನಿಖೆ ಮಾಡಿದ್ದು, ನಿಮಗೆ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಅವರು ಮಾಧ್ಯಮಗಳನ್ನು ಶ್ಲಾಘಿಸಿದರು.
ಇದನ್ನೂ ಓದಿ: 1% ಕಮಿಷನ್ ಲಂಚ ಆರೋಪ: ಆರೋಗ್ಯ ಸಚಿವನನ್ನು ವಜಾಗೊಳಿಸಿದ ಪಂಜಾಬ್ ಸಿಎಂ!
“ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದರು. ಆದರೆ ಈ ಡಬಲ್ ಇಂಜಿನ್ ಸರ್ಕಾರ ಬಂದ ನಂತರ ದೆಹಲಿಯಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂಬ ಪಟ್ಟಿಯನ್ನು ಸರ್ಕಾರ ನೀಡಲಿ. ಬೇರೆ ರಾಜ್ಯಗಳಲ್ಲಿ ಪ್ರವಾಹ ಬಂದಾಗ ಖುದ್ದು ವೀಕ್ಷಣೆ ಮಾಡುವ ಪ್ರಧಾನಿಗಳು ನಮ್ಮ ರಾಜ್ಯ ಸತತವಾಗಿ ಪ್ರವಾಹದಿಂದ ತತ್ತರಿಸುತ್ತಿದ್ದರೂ ಈ ಕಡೆ ತಿರುಗಿ ನೋಡಿಲ್ಲ. ನಮ್ಮ ರಾಜ್ಯಕ್ಕೆ ನೀಡಬೇಕಾಗಿದ್ದ ನ್ಯಾಯ ನೀಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ರಧಾನಮಂತ್ರಿಗಳು ಬೆಂಗಳೂರಿಗೆ ಬಂದು ಸಬ್ ಅರ್ಬನ್ ರೈಲು ಯೋಜನೆ ಉದ್ಘಾಟಿಸಿ ಹೋದರು. ಈ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಜಾಹೀರಾತಿನಲ್ಲೇ ಉಳಿದಿದೆಯೇ ಹೊರತು ಚಾಲ್ತಿ ಆಗಲಿಲ್ಲ. ಈ ಸರ್ಕಾರ ಬಂದ ನಂತರ ರಾಜ್ಯಕ್ಕೆ ಯಾವುದಾದರೂ ರಾಷ್ಟ್ರೀಯ ಯೋಜನೆ ನೀಡಿದ್ದೀರಾ? ಇಲ್ಲ. ಆದರೆ ಈ ಸರ್ಕಾರಕ್ಕೆ ಭ್ರಷ್ಟಾಚಾರದ ಹೆಸರು ಬಂದಿದೆ. ಪೊಲೀಸ್ ಇಲಾಖೆಯಲ್ಲಿ ಎಲ್ಲ ಹುದ್ದೆಗಳಿಗೂ ಒಂದೊಂದು ದರ ನಿಗದಿ ಮಾಡಿದ್ದೀರಿ. ಸರ್ಕಾರಿ ಇಲಾಖೆಗಳಲ್ಲಿನ ಹುದ್ದೆಗಳ ನೇಮಕಾತಿಯಲ್ಲಂತೂ ಭ್ರಷ್ಟಾಚಾರ ತಾಂಡವವಾಡುತ್ತಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 40% ಕಮಿಷನ್ ಬ್ಯಾನರ್ ಹಾಕಿ ಶಿವಾನಂದ ಮೇಲ್ಸೇತುವೆ ಉದ್ಘಾಟಿಸಿದ ಆಪ್ ಕಾರ್ಯಕರ್ತರ ಬಂಧನ
‘‘ಬಿಜೆಪಿ ಚುನಾವಣೆ ಪೂರ್ವದಲ್ಲಿ 600 ಭರವಸೆ ನೀಡಿತ್ತು. ಅದರಲ್ಲಿ 90%ದಷ್ಟು ಮಾತನ್ನು ಉಳಿಸಿಕೊಂಡಿಲ್ಲ. ಬಸವಣ್ಣನ ನಾಡಿನಲ್ಲಿ ನುಡಿದಂತೆ ನಡೆಯಬೇಕು. ಆದರೆ ನಿಮ್ಮಿಂದ ಅದು ಸಾಧ್ಯವಾಗಿಲ್ಲ. ನಾವು ದಿನನಿತ್ಯ ಪ್ರಶ್ನೆ ಕೇಳುತ್ತಿದ್ದು ಒಂದು ಪ್ರಶ್ನೆಗೂ ಉತ್ತರ ನೀಡಲು ನಿಮ್ಮಿಂದ ಸಾಧ್ಯವಾಗಿಲ್ಲ. ಬೆಂಗಳೂರು ವಿವಿಯ ರಿಜಿಸ್ಟಾರ್ ಪ್ರೊ. ಅಶೋಕ್ ಉಪಕುಲಪತಿ ಆಗಲು ಹೋಗಿ ಆತ್ಮಹತ್ಯೆ ಮಾಡಿಕೊಂಡರು. ಈ ಬಗ್ಗೆ ಸರ್ಕಾರ ತನಿಖೆ ಮಾಡಲಿಲ್ಲ ಯಾಕೆ? ಯಾವ ಕಾಲದಲ್ಲೂ ಈ ಮಟ್ಟದ ಭ್ರಷ್ಟಾಚಾರ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಸಹಾಯವಾಣಿಯನ್ನೂ ತೆರೆದಿದ್ದು, ಭ್ರಷ್ಟಾಚಾರ ಕಂಡಲ್ಲಿ 8447704040 ನಂಬರ್‌ಗೆ ಕರೆ ಅಥವಾ ವಾಟ್ಸಪ್ ಮೂಲಕ ತಿಳಿಸುವಂತೆ ಕೇಳಿದೆ. ಅಷ್ಟೆ ಅಲ್ಲದೆ www.40percentsarkaara.com ಎಂಬ ವೆಬ್ ಸೈಟ್‌ನಲ್ಲಿ ಕೂಡಾ ತಿಳಿಸಬಹುದು ಎಂದು ಹೇಳಿದ್ದು, ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡುತ್ತೇವೆ ಎಂದು ಭರವಸೆ ನೀಡಿದೆ.


