Homeಮುಖಪುಟಕೋಚಿಂಗ್ ಸೆಂಟರ್‌ಗಳ ದಂಧೆ; ನೀಟ್ ಟಾಪರ್ 3 ಸಂಸ್ಥೆಗಳಲ್ಲಿ ತರಬೇತಿ ಪಡೆದರೆಂದು ಸುಳ್ಳು ಹಂಚಿಕೆ

ಕೋಚಿಂಗ್ ಸೆಂಟರ್‌ಗಳ ದಂಧೆ; ನೀಟ್ ಟಾಪರ್ 3 ಸಂಸ್ಥೆಗಳಲ್ಲಿ ತರಬೇತಿ ಪಡೆದರೆಂದು ಸುಳ್ಳು ಹಂಚಿಕೆ

JEE ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ನಾವೇ ಕೋಚಿಂಗ್ ನೀಡಿದ್ದು ಎಂದು 5 ಕೋಚಿಂಗ್‌ ಸೆಂಟರ್‌ಗಳು ಜಾಹೀರಾತು ನೀಡಿವೆ!

- Advertisement -
- Advertisement -

2022ರ ಸಾಲಿನ ನೀಟ್ ಮತ್ತು JEE ಪರೀಕ್ಷೆಯಗಳ ಫಲಿತಾಂಶ ಹೊರಬಿದ್ದಿದೆ. ರಾಜಸ್ಥಾನದ ತನಿಷ್ಕ ಎಂಬ ವಿದ್ಯಾರ್ಥಿನಿ ನೀಟ್ ಪರೀಕ್ಷೆಯಲ್ಲಿ ಆಲ್‌ ಇಂಡಿಯಾ ಮೊದಲನೇ ರ್ಯಾಂಕ್ ಪಡೆದು ಟಾಪರ್ ಎನಿಸಿದ್ದಾರೆ. ಆಶ್ಚರ್ಯವೆಂದರೆ ಆ ವಿದ್ಯಾರ್ಥಿನಿಗೆ ಕೋಚಿಂಗ್ ನೀಡಿದ್ದು ನಾವೆ ಎಂದು ಮೂರು ಕೋಚಿಂಗ್ ಸೆಂಟರ್‌ಗಳು ಬಹುಮುಖ್ಯ ಪತ್ರಿಕೆಗಳಲ್ಲಿ ಮುಖಪುಟದ ಜಾಹೀರಾತು ಪ್ರಕಟಿಸಿದ್ದಾರೆ!

ಅದೇ ರೀತಿ JEE ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಪಡೆದ ದೀವ್ಯಾಂಶು ಮಾಲು ಎಂಬ ವಿದ್ಯಾರ್ಥಿಯ ಭಾವಚಿತ್ರವನ್ನು 5 ಕೋಚಿಂಗ್‌ ಸೆಂಟರ್‌ಗಳ ತಮ್ಮ ಜಾಹೀರಾತಿನಲ್ಲಿ ಪ್ರಕಟಿಸುವ ಮೂಲಕ ನಾವೇ ಕೋಚಿಂಗ್ ನೀಡಿದ್ದು ಎಂದು ಹೇಳಿಕೊಂಡಿದ್ದಾರೆ. ಇದು ನಿಜವೇ? ಒಬ್ಬ ವಿದ್ಯಾರ್ಥಿ 5 ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆಯಲು ಸಾಧ್ಯವೇ ಎಂಬುದುರ ಕುರಿತು ಚರ್ಚಿಸೋಣ.

ನೀಟ್ ಟಾಪರ್ ತನಿಷ್ಕ ನಮ್ಮ ಸಂಸ್ಥೆಯಲ್ಲಿ ಕೋಚಿಂಗ್ ಪಡೆದಿದ್ದಾರೆ ಎಂದು ಅಲೆನ್, ಆಕಾಶ್ ಮತ್ತು ನಾರಾಯಣ ಕೋಚಿಂಗ್ ಸೆಂಟರ್‌ಗಳು ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಿದ್ದಾರೆ. ಅದೇ ರೀತಿ JEE ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಪಡೆದ ದೀವ್ಯಾಂಶು ಮಾಲುರವರು ನಮ್ಮಲ್ಲಿ ಕೋಚಿಂಗ್ ಪಡೆದಿದ್ದು ಎಂದು ಅಲೆನ್, ರೆಸೊನ್ಯಾನ್ಸ್, ಮೋಷನ್, ವೇದಾಂತು ಮತ್ತು FIIT JEE ಕೋಚಿಂಗ್ ಸಂಸ್ಥೆಗಳು ಹೇಳಿಕೊಂಡಿವೆ. ಈ ಕುರಿತು ಟ್ವಿಟರ್‌ನಲ್ಲಿ ಚರ್ಚೆ ಆರಂಭವಾಗಿದ್ದು ಇದು ಸುಳ್ಳು, ನೀಟ್ ತರಬೇತಿ ಆಕಾಂಕ್ಷಿಗಳನ್ನು ಸೆಳೆಯುವುದಕ್ಕಾಗಿ ಈ ಕೋಚಿಂಗ್ ಸೆಂಟರ್‌ಗಳು ಸುಳ್ಳು ಜಾಹೀರಾತುಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ, ಕಳೆದ 19 ವರ್ಷಗಳಿಂದ ವಿದ್ಯಾರ್ಥಿಗಳಿಗೆ ‘ಕರಿಯರ್ ಗೈಡೆನ್ಸ್,’ ‘ಕಲಿಕಾ ಕೌಶಲ,’ ‘ಸಿಇಟಿ/ನೀಟ್ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಮಾಡುತ್ತಿರುವ, ಮಂಗಳೂರಿನ ಕರಿಯರ್ ಗೈಡೆನ್ಸ್ ಆ್ಯಂಡ್ ಇನ್ಫರ್‌ಮೇಶನ್ ಸೆಂಟರ್‌ನ ಸ್ಥಾಪಕರಾದ ಉಮರ್ ಯು.ಎಚ್‌ರವರು, “ನೀಟ್ ಆಗಲಿ ಅಥವಾ JEE ಆಗಲಿ ಒಬ್ಬ ವಿದ್ಯಾರ್ಥಿ ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆದಿರುವುದಿಲ್ಲ. ಅಲ್ಲದೆ ಒಂದೊಂದು ವಿಷಯಕ್ಕೆ ಒಂದೊಂದು ಕೋಚಿಂಗ್ ಸೆಂಟರ್‌ನಲ್ಲಿ ಕೋಚಿಂಗ್ ಪಡೆಯುವಷ್ಟು ಸಮಯಾವಕಾಶವು ಅವರಿಗೆ ಇರುವುದಿಲ್ಲ. ಬದಲಿಗೆ ಫಲಿತಾಂಶ ಪ್ರಕಟವಾದ ನಂತರ ಟಾಪರ್ ಆದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಹಣ ನೀಡುವ ಮೂಲಕ ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದವೆಂದು ಈ ಕೋಚಿಂಗ್ ಸೆಂಟರ್‌ಗಳು ಹೇಳಿಸುತ್ತಿವೆ. ತಮ್ಮದೇ ಸಂಸ್ಥೆಯ ಟೀ ಶರ್ಟ್ ಹಾಕಿಸಿ ಟಾಪರ್‌ಗಳ ಫೋಟೊ ತೆಗೆಸಿ ಜಾಹೀರಾತು ನೀಡುತ್ತಾರೆ. ಇದು ಮುಂದಿನ ವರ್ಷಕ್ಕೆ ವಿದ್ಯಾರ್ಥಿಗಳನ್ನು ಸೆಳೆಯುವ ಕುತಂತ್ರವಷ್ಟೇ” ಎಂದಿದ್ದಾರೆ.

ನಮ್ಮ ಕರ್ನಾಟಕದ ಉತ್ತಮ ಎನ್ನಬಹುದಾದ ಒಂದು ಕೋಚಿಂಗ್ ಸಂಸ್ಥೆಯ ಉದಾಹರಣೆ ಹೇಳುವುದಾದರೆ, ಎರಡು ವರ್ಷದ ಹಿಂದೆ ಆ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಯೊಬ್ಬ ಆಲ್ ಇಂಡಿಯಾ 9ನೇ ರ್ಯಾಂಕ್ ಪಡೆದ. ತಕ್ಷಣ ಬೇರೆ ಎರಡು ಕೋಚಿಂಗ್ ಸಂಸ್ಥೆಗಳು ಆತನಿಗೆ ಫೋನ್ ಮಾಡಿ ನಮ್ಮ ಸಂಸ್ಥೆಯಲ್ಲಿ ಕೋಚಿಂಗ್ ಪಡೆದ ಎಂದು ಹೇಳಿ, ಒಂದು ಫೋಟೊ ಕಳಿಸಿದರೆ 50 ಲಕ್ಷ ರೂ ನೀಡುವುದಾಗಿ ಆಮಿಷವೊಡ್ಡಿದರು. ಅದನ್ನು ತಡೆಯಲು ನಿಜವಾಗಿ ತರಬೇತಿ ನೀಡಿದ ಸಂಸ್ಥೆಯೇ ಕೊನೆಗೆ ಆ ವಿದ್ಯಾರ್ಥಿಗೆ 20 ಲಕ್ಷ ರೂ ಕೊಡಬೇಕಾಯಿತು ಎನ್ನುತ್ತಾರೆ ಉಮರ್.

ದೈತ್ಯಾಕಾರವಾಗಿ ಬೆಳೆದು ನಿಂತಿರುವ ಕೋಚಿಂಗ್ ಮಾಫಿಯಾ

ಈ ಮೊದಲು ವೈದ್ಯಕೀಯ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ಇದ್ದಾಗ ಹೆಚ್ಚಿನ ತೊಂದರೆಯಿರುತ್ತಿರಲಿಲ್ಲ. ಆದರೆ ನೀಟ್ ಪರೀಕ್ಷೆ ಶುರುವಾದ ನಂತರ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಇಲ್ಲಿ ತಪ್ಪು ಉತ್ತರಕ್ಕೆ 1 ಅಂಕ ಕಳೆಯುವ ಮಾದರಿಯಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ಕೋಚಿಂಗ್ ಇಲ್ಲದೆ ಯಾವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೋಚಿಂಗ್ ಹೆಸರಿನಲ್ಲಿ ಹತ್ತಾರು ಸಂಸ್ಥೆಗಳು ಪ್ರತಿ ವಿದ್ಯಾರ್ಥಿಯಿಂದ ಲಕ್ಷಾಂತರ ಶುಲ್ಕ ವಸೂಲಿ ಮಾಡುತ್ತಿವೆ.

ಉಮರ್ ಯು.ಎಚ್

ಪರೀಕ್ಷೆಗೆ 2 ತಿಂಗಳು ಇರುವಾಗ ಕ್ರಾಷ್ ಕೋರ್ಸ್‌ ಹೆಸರಿನಲ್ಲಿ ಮತ್ತೆ ವಿದ್ಯಾರ್ಥಿಗಳಿಂದ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಈ ರೀತಿಯಲ್ಲಿ ದೊಡ್ಡ ದಂಧೆಯಲ್ಲಿ ಹಲುವು ಸಂಸ್ಥೆಗಳು ನಡೆಯುತ್ತಿವೆ. ಪಿ.ಯು ಕಾಲೇಜು ನಡೆಸುತ್ತೇವೆ ಎಂದು ಪರ್ಮಿಷನ್ ಪಡೆದು ಕೇವಲ ಕೋಚಿಂಗ್ ನಡೆಸುವ ನೂರಾರು ಸಂಸ್ಥೆಗಳಿವೆ. ಜೊತೆಗೆ ಬೈಜುಸ್‌ನಂತಹ ಆನ್‌ಲೈನ್ ಕೋಚಿಂಗ್ ನೀಡುವ ಸಂಸ್ಥೆಗಳು ನುರಾರು ಕೋಟಿ ರೂ ಕೊಟ್ಟು ಕ್ರಿಕೆಟ್‌ ಟೂರ್ನಿಮೆಂಟ್‌ಗಳಿಗೆ ಪ್ರಾಯೋಜಕತ್ವ ವಹಿಸುವ ಮಟ್ಟಿಗೆ ಬೆಳೆದು ನಿಂತಿವೆ ಎಂದರೆ ಅವು ವಿದ್ಯಾರ್ಥಿಗಳಿಂದ ಯಾವ ಮಟ್ಟಿಗೆ ಲೂಟಿ ಮಾಡುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ- ಬಡ ಮಧ್ಯಮ ವರ್ಗದ ಮಕ್ಕಳ ಮೇಲೆ ಹಾನಿ

ವೀರಪ್ಪ ಮೊಯ್ಲಿಯವರು ಸಿಎಂ ಆಗಿದ್ದಾಗ ಸಿಇಟಿ ಪ್ರವೇಶ ಪರೀಕ್ಷೆ ಆರಂಭವಾಯಿತು. ಆಗ ಪ್ರತಿ ಖಾಸಗಿ ವೈದ್ಯಕೀಯ ಕಾಲೇಜುಗಳು ಸಹ ಶೇ.85 ರಷ್ಟು ಸರ್ಕಾರಿ ಕೋಟಾವನ್ನು ನೀಡಬೇಕಾಗಿತ್ತು. ಅದು ನಿಧಾನವಾಗಿ 70%, 50%ಗೆ ಇಳಿದು ಈಗ ಕೇವಲ 40% ಸರ್ಕಾರಿ ಕೋಟಾವನ್ನಷ್ಟೆ ನೀಡಲಾಗುತ್ತಿದೆ. ಉಳಿದ 60% ಮ್ಯಾನೇಜ್‌ಮೆಂಟ್‌ ಕೋಟಾವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಗಳು ಕೇವಲ 25% ಸರ್ಕಾರಿ ಕೋಟ ನಿಗಧಿ ಪಡಿಸುತ್ತಿವೆ. ಡೀಮ್ಡ್ ವಿವಿಗಳು ಕೇವಲ 08% ಸರ್ಕಾರಿ ಕೋಟಾ ನೀಡುತ್ತಿವೆ. ಈ ಮೂಲಕ ಮ್ಯಾನೇಜ್ ಮೆಂಟ್ ಕೋಟಾವನ್ನು ಸತತವಾಗಿ ಹೆಚ್ಚಿಸಿಕೊಂಡು ಅವುಗಳನ್ನು ಕೋಟಿ-ಕೋಟಿ ರೂಗಳಿಗೆ ಮಾರಿಕೊಳ್ಳಲಾಗುತ್ತಿದೆ.

ಇದರಿಂದಾಗಿ ಸರ್ಕಾರಿ ವೈದ್ಯಕೀಯ ಸೀಟುಗಳು ತೀರಾ ಕಡಿಮೆಯಾಗಿರುವುದರಿಂದ ಅವುಗಳಿಗೆ ಪೈಪೋಟಿ ತೀವ್ರವಾಗುತ್ತಿದೆ. ಕೆಲವೇ ಕೆಲವು ಸೀಟುಗಳಿಗಾಗಿ ಲಕ್ಷಾಂತರ ಮಕ್ಕಳು ಪೈಪೋಟಿ ನಡೆಸುತ್ತಿದ್ದು ನೀಟ್ ಪರೀಕ್ಷೆ ಮತ್ತಷ್ಟು ಮಗದಷ್ಟು ಕಠಿಣವಾಗುತ್ತಿದೆ. ದಕ್ಷಿಣ ಭಾರತದ ಮಕ್ಕಳಿಗೆ ನೀಟ್ ಪರೀಕ್ಷೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ನೀಟ್ ಪರೀಕ್ಷೆಯಲ್ಲಿ ಸರ್ಕಾರಿ ಸೀಟು ಸಿಗದೆ, ಕೋಟ್ಯಾಂತರ ದುಡ್ಡು ಕೊಟ್ಟು ಖಾಸಗಿ ಸೀಟು ಪಡೆಯಲಾಗದೆ ಅದೆಷ್ಟೊ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಆದರೂ ಸರ್ಕಾರ ಈ ಕೋಚಿಂಗ್ ಸೆಂಟರ್‌ಗಳಿಗೆ ಕಡಿವಾಣ ಹಾಕುತ್ತಿಲ್ಲ. ಏಕೆಂದರೆ ಸರ್ಕಾರ ತಮ್ಮ ಸರ್ಕಾರಿ ಕಾಲೇಜುಗಳಲ್ಲಿ ಸರಿಯಾದ ಶಿಕ್ಷಣ ಅಗತ್ಯ ಬಿದ್ದರೆ ಅತ್ಯುತ್ತಮ ಕೋಚಿಂಗ್ ನೀಡಿದರೆ ಈ ಹೊರಗಿನ ಕೋಚಿಂಗ್ ಅಗತ್ಯವಿಲ್ಲ. ಆದರೆ ಸರ್ಕಾರ ದಿನೇ ದಿನೇ ಶಿಕ್ಷಣ ನೀಡುವ ಜವಾಬ್ದಾರಿಯಿಂದ ಹಿಂದೆ ಸರಿದು ಖಾಸಗೀಯವರಿಗೆ ವಹಿಸುತ್ತಿದೆ. ದುಡ್ಡಿದ್ದವರಿಗೆ ಮಾತ್ರ ಶಿಕ್ಷಣ ಎಂದಾಗುತ್ತಿದೆ ಎನ್ನುತ್ತಾರೆ ಉಮರ್.

ಖಾಸಗಿ ಕಾಲೇಜುಗಳಿಗೆ ಸರ್ಕಾರದ ಅಭಯ

ಒಂದು ಜವಾಬ್ದಾರಿಯುತ ಸರ್ಕಾರವಾದರೆ ಹೆಚ್ಚು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆದು ಉಚಿತವಾಗಿ/ಅತಿ ಕಡಿಮೆ ವೆಚ್ಚದಲ್ಲಿ ಬಡ-ಮಧ್ಯಮ ವರ್ಗದ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ನೀಡಬೇಕು. ಹೀಗೆ ಶಿಕ್ಷಣ ಪಡೆದು ವೈದ್ಯರಾದವರು ನಿಜವಾಗಿಯೂ ಬಡವರ ಸೇವಾ ಮನೋಭಾವದಿಂದ ಕರ್ತವ್ಯ ಮಾಡಬಹುದು. ಆದರೆ ಇದಕ್ಕೆ ಸಂಪೂರ್ಣ ವ್ಯತಿರಿಕ್ತ ಪರಿಸ್ಥಿತಿಯಿದೆ. ದಿನೇ ದಿನೇ ಸರ್ಕಾರಿ ಕಾಲೇಜುಗಳು ಮತ್ತು ಸರ್ಕಾರಿ ವೈದ್ಯಕೀಯ ಸೀಟುಗಳು ಕಡಿಮೆಯಾಗುತ್ತಿವೆ. ಮ್ಯಾನೇಜ್‌ಮೆಂಟ್ ಕೋಟಾದ ಸೀಟುಗಳು ಹೆಚ್ಚಾಗುತ್ತಾ ಕೋಟ್ಯಾಂತರ ರೂಗಳಿಗೆ ಮಾರಾಟವಾಗುತ್ತಿವೆ. ಈ ರೀತಿ ಕೋಟಿ-ಕೋಟಿ ದುಡ್ಡು ಸುರಿದು ಕಲಿತು ವೈದ್ಯರಾದವರು ನಿಜವಾಗಿಯೂ ಬಡವರ ಸೇವೆ ಮಾಡುತ್ತಾರೆಯೇ? ಕಡಿಮೆ ಬೆಲೆ ಚಿಕಿತ್ಸೆ ಕೊಡುತ್ತಾರೆಯ? ಇಲ್ಲವೇ ಇಲ್ಲ. ಇದರಿಂದ ಆರೋಗ್ಯವೂ ವ್ಯಾಪಾರವಾಗುತ್ತಿದೆ. ದುಡ್ಡಿದ್ದವರಿಗೆ ಮಾತ್ರ ಉತ್ತಮ ಆರೋಗ್ಯ ಸಿಗುತ್ತಿದೆ.

ಈ ಪರಿಸ್ಥಿತಿಯನ್ನು ತಡೆಗಟ್ಟಬೇಕಾದ ಸರ್ಕಾರವೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಏಕೆಂದರೆ ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಎಲ್ಲಾ ಸರ್ಕಾರಗಳ ಪ್ರಭಾವಿ ವ್ಯಕ್ತಿಗಳು ಖಾಸಗಿ ಮೆಡಿಕಲ್ ಕಾಲೇಜುಗಳನ್ನು, ಡೀಮ್ಡ್‌ ವಿವಿಗಳನ್ನು ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಿಯಂತ್ರಣದ ಮಾತೆಲ್ಲಿ?

ಒಟ್ಟಿನಲ್ಲಿ ಇಂದು ಶಿಕ್ಷಣ ಮತ್ತು ಆರೋಗ್ಯ ಎರಡು ವ್ಯಾಪಾರೀಕರಣಗೊಂಡಿರುವ ಪರಿಸ್ಥಿತಿಯಲ್ಲಿ, ಕೋಚಿಂಗ್ ಸೆಂಟರ್‌ಗಳ ಅಬ್ಬರದಲ್ಲಿ ಬಡ-ಮಧ್ಯಮ ವರ್ಗದ, ತಳಸಮುದಾಯಗಳ ಮಕ್ಕಳು ವೈದ್ಯಕೀಯ ಶಿಕ್ಷಣದ ಕನಸು ಕಾಣುವುದು ದೂರದ ಮಾತಾಗಿದೆ. ಈ ಪರಿಸ್ಥಿತಿ ಬದಲಾವಣೆಗೆ ದೊಡ್ಡ ಜನಾಂದೋಲನದ ಅಗತ್ಯವಿದೆ.

ಇದನ್ನೂ ಓದಿ: ಪಠ್ಯಪರಿಷ್ಕರಣೆಯ ಬೇರಡಗಿರುವುದು ’ರಾಷ್ಟ್ರೀಯ ಶಿಕ್ಷಣ ನೀತಿ 2020’ರಲ್ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...