“ಒಂದು ಸಮಯದಲ್ಲಿ ಪಾರಿವಾಳಗಳನ್ನು ಬಿಡುತ್ತಿದ್ದರು. ಈಗ ನಾವು ಚೀತಾಗಳನ್ನು ಬಿಡುತ್ತಿದ್ದೇವೆ”- ಹೀಗೆ ಪ್ರಧಾನಿ ನರೇಂದ್ರ ಮೋದಿಯವರ ಅನುಯಾಯಿಯೊಬ್ಬರು ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪಾರಿವಾಳವನ್ನು ಹಾರಿಬಿಡುತ್ತಿರುವ ಫೋಟೋವನ್ನು, ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ನರೇಂದ್ರ ಮೋದಿಯವರು ಚೀತಾಗಳನ್ನು ಬಿಡುತ್ತಿರುವುದನ್ನು ವಿಡಿಯೊವನ್ನು ಸೇರಿಸಿ ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿದೆ. ಯಾವುದೇ ವಿದ್ಯಮಾನವನ್ನು ರಾಜಕೀಯಗೊಳಿಸುವ ವಿಚಿತ್ರ ಕಾಲಘಟ್ಟದಲ್ಲಿ ಭಾರತೀಯರು ಇರುವುದರಿಂದ ‘ಚೀತಾ’ ರಾಜಕಾರಣವೂ ನಡೆಯುತ್ತಿದೆ. ಈ ಚೀತಾಗಳನ್ನು ಭಾರತಕ್ಕೆ ತರುವಲ್ಲಿ ಕಾಂಗ್ರೆಸ್ ಕೂಡ ಯತ್ನಿಸಿತ್ತು. ಎರಡು ಪಕ್ಷಗಳೂ ‘ಚೀತಾ ರಾಜಕಾರಣ’ ಮಾಡುತ್ತಿವೆಯಾದರೂ ವನ್ಯಜೀವಿತಜ್ಞರು ಭಿನ್ನ ಅಭಿಪ್ರಾಯಗಳನ್ನು ತಾಳುತ್ತಿದ್ದಾರೆ.
ಒಂದು ಸಮಯದಲ್ಲಿ ಪಾರಿವಾಳಗಳನ್ನು ಬಿಡುತ್ತಿದ್ದರು..
ಈಗ ನಾವು ಚೀತಾಗಳನ್ನು ಬಿಡುತ್ತಿದ್ದೇವೆ :- @narendramodi ಜಿ .. pic.twitter.com/TwBMQfy1EO— ಶಕುಂತಲ/ Shakunthala (@ShakunthalaHS) September 18, 2022
“ನೂರಕ್ಕೆ ನೂರರಷ್ಟು ಈ ಚೀತಾ ಯೋಜನೆ ವಿಫಲವಾದದ್ದು. ರಾಜಕೀಯವಾಗಿ ಇವರಿಗೆ ಒಂದಿಷ್ಟು ಉಪಯೋಗವಾಗುವುದು ಬಿಟ್ಟರೆ ಚೀತಾಗಳಿಗಾಗಲೀ, ಕುನೋ ರಾಷ್ಟ್ರೀಯ ಉದ್ಯಾನಕ್ಕಾಗಲೀ ಯಾವುದೇ ಪ್ರಯೋಜನವಿಲ್ಲ” ಎನ್ನುತ್ತಾರೆ ವನ್ಯಜೀವಿತಜ್ಞರಾದ ಕೃಪಾಕರ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಅವರು, “ಈ ಯೋಜನೆಯಿಂದಾಗಿ ಸುಮಾರು ನೂರು ಕೋಟಿ ರೂಪಾಯಿಗಳನ್ನೂ ಗೊತ್ತಿದ್ದೂ ಕಳೆದುಕೊಳ್ಳುತ್ತಿದ್ದೇವೆ. ತಿಳಿವಳಿಕೆ ಇದ್ದವರು ಯಾರಾದರೂ ಇದನ್ನು ಒಪ್ಪುವುದಿಲ್ಲ” ಎಂದು ತಿಳಿಸಿದರು.
ಇದನ್ನೂ ಓದಿರಿ: ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?
“ಈ ಚೀತಾ ಕಾರ್ಯಕ್ರಮದಲ್ಲಿ ಯಾವುದೇ ಒಳನೋಟ ಕಾಣುತ್ತಿಲ್ಲ. ಈಗ ನಮೀಬಿಯಾದಿಂದ ತಂದಿರುವ ಚೀತಾಗಳು ಈ ನೆಲಕ್ಕೆ ಸಂಬಂಧಪಟ್ಟಿರುವ ಪ್ರಾಣಿಗಳು. ನಮ್ಮ ದೇಶದಲ್ಲಿ ಹಿಂದೆ ಇದ್ದದ್ದು ಏಷ್ಯಾ ಖಂಡದ ಚೀತಾಗಳು. ಈಗ ಪ್ರಧಾನಿಯವರು ಇಲ್ಲಿಗೆ ಆಫ್ರಿಕಾ ಚೀತಾಗಳನ್ನು ತಂದಿದ್ದಾರೆ. ಯಾವುದೇ ಒಂದು ಜೀವಿ ಬದುಕಲು ಒಂದು ಜೀವಪರಿಸರ ಮುಖ್ಯವಾಗುತ್ತದೆ. ವಿಜ್ಞಾನದ ಮೂಲ ತತ್ವವಿದು. ಇಲ್ಲವಾದರೆ ಇಂತಹ ಪ್ರಯೋಜನಗಳು ಹೆಚ್ಚು ಕಾಲ ಉಳಿಯುವುದಿಲ್ಲ” ಎಂದು ಭವಿಷ್ಯ ನುಡಿದರು.

“ಇಲ್ಲಿನ ಜೀವ ವೈವಿಧ್ಯತೆಯನ್ನು, ಘಟ್ಟ ಪ್ರದೇಶಗಳನ್ನು ಉಳಿಸುವುದು ಯಾವುದೇ ಸರ್ಕಾರದ ಮೂಲಭೂತ ಕಾಳಜಿಯಾಗಬೇಕು. ದುರಾದೃಷ್ಟವಶಾತ್ ಈ ಕೆಲಸ ಶೇ. 1ರಷ್ಟೂ ಆಗಿಲ್ಲ. ಆ ದಿಕ್ಕಿನಲ್ಲಿ ಯೋಚನೆಯನ್ನೂ ಮಾಡುತ್ತಿಲ್ಲ. ಘಟ್ಟ ಪ್ರದೇಶದಲ್ಲಿ ರೈಲು ಮಾರ್ಗ ನಿರ್ಮಾಣ, ಗಣಿಗಾರಿಕೆ ನಡೆಯುತ್ತಲೇ ಇದೆ. ಇದೆಲ್ಲವೂ ವನ್ಯಜೀವಿ ಉಳಿವಿಗೆ ಅಪಾಯಕಾರಿ ನಡೆ” ಎಂದು ಎಚ್ಚರಿಸಿದರು.
ನಮೀಬಿಯಾದಿಂದ ಚೀತಾಗಳನ್ನು ತಂದಿರುವ ಹಿನ್ನೆಲೆಯಲ್ಲಿ ಬರಹವೊಂದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಪರಸರತಜ್ಞ ನಾಗೇಶ ಹೆಗಡೆಯವರು, “ಭಾರತದ ವನ್ಯಜೀವಿ ಮಂಡಳಿಗೆ ಪ್ರಧಾನಿಯೇ ಅಧ್ಯಕ್ಷರು. ಆದರೆ ಮೋದಿಯವರು ಪ್ರಧಾನಿಯಾದ ಈ ಎಂಟು ವರ್ಷಗಳಿಂದ ಒಮ್ಮೆಯೂ ಈ ಮಂಡಳಿ ಸಭೆ ಸೇರಿಲ್ಲ” ಎಂದು ದೂರಿದ್ದಾರೆ.
“ನಮೀಬಿಯಾದ ಸಿವಂಗಿಗಳು ʼನಮೋʼಬಿಯಾಕ್ಕೆ” ಎಂಬ ಶೀರ್ಷಿಕೆಯಲ್ಲಿ ಲೇಖನವನ್ನು ಅವರು ಪೋಸ್ಟ್ ಮಾಡಿದ್ದು, “ಅಳಿದುಹೋದ ವನ್ಯ ಸಂತತಿಯೊಂದಕ್ಕೆ ಮರುಜೀವ ಕೊಡುವ ಮಹಾಯತ್ನ ಇದೆಂದು ಮೋದಿಯವರು ಮಹಾ ಉತ್ಸಾಹದಿಂದ ಭಾಷಣ ಮಾಡಿದ್ದಾರೆ. ಮಾಧ್ಯಮಗಳು ಜೈಕಾರ ಹಾಕಿವೆ. ಹಾಕಲಿ. ಭಾರತದ ವನ್ಯಜೀವಿ ಮಂಡಳಿಗೆ ಪ್ರಧಾನಿಯೇ ಅಧ್ಯಕ್ಷರು. ಆದರೆ ಮೋದಿಯವರು ಪ್ರಧಾನಿಯಾದ ಈ ಎಂಟು ವರ್ಷಗಳಿಂದ ಒಮ್ಮೆಯೂ ಈ ಮಂಡಳಿ ಸಭೆ ಸೇರಿಲ್ಲ. ಈ ಅವಧಿಯಲ್ಲಿ ಭಾರತದ ವನ್ಯಜೀವಿಗಳ ಸ್ಥಿತಿಗತಿ ಇನ್ನಷ್ಟು ದಾರುಣವಾಗಿದೆ. ಉದ್ಯಮ ವಲಯದ ಬೆಳವಣಿಗೆಗೆ ಅರಣ್ಯ ರಕ್ಷಣಾ ಕಾನೂನುಗಳು ಅಡ್ಡಿ ಒಡ್ಡುತ್ತಿವೆ ಎಂದು ಹೇಳಿ ಪರಿಸರ ರಕ್ಷಣಾ ಕಾನೂನು(ಇಐಎ)ಗಳನ್ನು ಸಾಕಷ್ಟು ಸಡಿಲಗೊಳಿಸಲಾಗಿದೆ” ಎಂದಿದ್ದಾರೆ.
“ಅದು ಸಾಲದೆಂಬಂತೆ ವನ್ಯ ಸಂರಕ್ಷಣಾ ಸಂಸ್ಥೆಗಳಿಗೆ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ. ʼನಿಮಗೆ ಬೇಕಿದ್ದ ಹಣವನ್ನು ನೀವೇ ಹೊಂದಿಸಿಕೊಳ್ಳಿʼ ಎಂದು ಅವಕ್ಕೆ ತಾಕೀತು ಮಾಡಲಾಗುತ್ತಿದೆ. ಈ ಸಂಸ್ಥೆಗಳು ಪ್ರವಾಸೋದ್ಯಮ ಯೋಜನೆಗಳಿಗೆ, ಉದ್ಯಮಿಗಳ ಪ್ರಾಯೋಜಕತ್ವಕ್ಕೆ ಅಂತ ಅದೂ ಇದೂ ಏನೇನೋ ಕಸರತ್ತು ಮಾಡಿ ವನ್ಯ ಸಂರಕ್ಷಣೆಗೆ ಹಣವನ್ನು ಹೊಂದಿಸಬೇಕಾಗಿದೆ” ಎಂದು ವಿಷಾದಿಸಿದ್ದಾರೆ.
“ಅದೆಷ್ಟೊ ಬಗೆಯ ಪ್ರಾಣಿಪಕ್ಷಿಗಳು ಅವಸಾನದ ಅಂಚಿಗೆ ಬಂದಿವೆ. ನಮ್ಮ ಸಿಂಹಬಾಲದ ಲಂಗೂರಗಳು, ಬಸ್ಟಾರ್ಡ್ ಪಕ್ಷಿಗಳು (ದೊರೆವಾಯನ ಹಕ್ಕಿ), ಕಾಝಿರಂಗಾದ ಒಂಟಿಕೊಂಬಿನ ಘೇಂಡಾಗಳು, ಬೆಂಗಾಲ್ ಫ್ಲೋರಿಕನ್ ಪಕ್ಷಿ ಇವೆಲ್ಲವುಗಳ ಸಂತತಿ ಕ್ಷೀಣಿಸುತ್ತಿದೆ. ಅವುಗಳ ವಾಸಸ್ಥಾನ ಕಿರಿದಾಗುತ್ತಿದೆ. ಇಂಥ ಸಂಗತಿಗಳತ್ತ ಪ್ರಧಾನಿಯವರ ಗಮನ ಸೆಳೆಯುವ ಬದಲು ಅವರನ್ನು ವನ್ಯರಕ್ಷಣಾ ಧುರಂಧರ ಎಂದು ಬಿಂಬಿಸಿದ್ದು ಸರಿಯೆ?” ಎಂದು ಪ್ರಶ್ನಿಸಿದ್ದಾರೆ.
“ಸಿವಂಗಿಗಳಿಗೆ (ಚೀತಾಗಳಿಗೆ) ವಿಶಾಲ ಹುಲ್ಲುಗಾವಲು ಬೇಕು. ಅಲ್ಲಿ ಚಿರತೆ, ಕಿರುಬ (ಹೈನಾ)ದಂಥ ಪ್ರಾಣಿಗಳು ಜಾಸ್ತಿ ಇರಬಾರದು. ಕುನೋದಲ್ಲಿನ ಕುರುಚಲು ಕಾಡನ್ನು ಹುಲ್ಲುಗಾವಲನ್ನಾಗಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಅಥವಾ ಚಿರತೆ, ಹೈನಾಗಳನ್ನು ದೂರ ಸಾಗಿಸಲೂ ಅವಕಾಶ ಇಲ್ಲ. ಇಲ್ಲಿ ಸಿವಂಗಿಗಳಿಗೆ ಬೇಕಾದ ಚುಕ್ಕಿಜಿಂಕೆ, ಚಿಂಕಾರಾ/ ಕೃಷ್ಣ ಮೃಗ, ಸಾಂಬಾರ್ ಜಿಂಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಂದು ಸಾಕೋಣವೆಂದರೆ, ಅವಕ್ಕೂ ಹುಲ್ಲುಗಾವಲು ಬೇಕಲ್ಲ? ಈಗಿರುವ ಕುರುಚಲು ಅರಣ್ಯದಲ್ಲೇ ಅವು ಬದುಕಲು ಕಲಿತರೂ ಅವು ಸಿವಂಗಿ ದಾಳಿಯ ಸೂಕ್ಷ್ಮ ಅರಿತು ಪೊದೆಯೊಳಗೆ ಅವಿತು ಕಣ್ಮರೆಯಾದರೆ ಅವನ್ನು ಸಿವಂಗಿ ಅಟ್ಟಾಡಿಸಿ ಹಿಡಿಯಲಾರದು. ಹಾಗಾಗಿ ಇಂಥ ಗೊರಸು ಪ್ರಾಣಿಗಳೆಲ್ಲ ಚಿರತೆಗಳ ಪಾಲಾಗಿ, ಚಿರತೆ ಸಂತತಿ ಬಲುಶೀಘ್ರ ಜಾಸ್ತಿಯಾಗಬಹುದು. ಅವುಗಳ ಜೊತೆ ಸಿವಂಗಿಗಳು ಹೋರಾಡಿ ಗೆಲ್ಲುವುದು ಕಷ್ಟ. ಚಿರತೆ ಮತ್ತು ಕಿರುಬಗಳು ಸೇರಿ ಸಿವಂಗಿಗಳನ್ನು ಹಿಡಿದು ಕೊಂದೇ ಹಾಕಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: ಕುನೋ: ಚೀತಾಗಳು ಒಳಗೆ, ಆದಿವಾಸಿಗಳು ಹೊರಕ್ಕೆ- ‘ಪರಿ’ ವರದಿ
“ಕುನೋ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ, ಗಿರಿಜನರ ಸುಮಾರು 150 ಹಳ್ಳಿಗಳಿವೆ. ಮೋದಿಯವರ ಈ ಯೋಜನೆಗೆ ಭರ್ಜರಿ ಜಯ ಸಿಗಬೇಕೆಂಬ ಉದ್ದೇಶದಿಂದ ಸಿವಂಗಿಗಳ ಓಡಾಟಕ್ಕೆ ಜಾಗ ಮಾಡಬೇಕೆಂಬ ರಣೋತ್ಸಾಹದಲ್ಲಿ ಅವರನ್ನೆಲ್ಲ ಅವಸರದಲ್ಲಿ ಎತ್ತಂಗಡಿ ಮಾಡಲು ಹೋದರೆ ಪ್ರತಿಭಟನೆ, ಹೋರಾಟ ಎಲ್ಲ ಹೆಚ್ಚಾಗಬಹುದು. ಮರುವಸತಿಗೆ ಒಪ್ಪಿದರೆ ನಿಮ್ಮ ಬದುಕು ಈಗಿಗಿಂತ ಒಳ್ಳೆಯದಾಗುತ್ತದೆಂದು ಅವರನ್ನು ನಂಬಿಸಬೇಕು. ಅಂಥ ಮಾದರಿಯನ್ನು ಅವರಿಗೆ ತೋರಿಸಬೇಕು. ಎಲ್ಲಿದೆ ಅಂಥ ಮಾದರಿ?” ಎಂದು ಕೇಳಿದ್ದಾರೆ.
“ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಸಿವಂಗಿಗಳು ಬರಲಿವೆ. ಹೀಗೆ ಈ ಯೋಜನೆ ಇನ್ನೂ 13 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಪ್ರಶ್ನೆ ಏನೆಂದರೆ, ನಮ್ಮಲ್ಲಿ ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿ-ಪಕ್ಷಿಗಳು ಸರಕಾರಿ ನೆರವಿಗೆ ಕಾದು ಕೂತಿವೆ. ಗಣಿಗಾರಿಕೆಯ ಅಬ್ಬರ, ನದಿಮೂಲಗಳ ನಾಶ, ಹೆದ್ದಾರಿಗಳ ವಿಸ್ತರಣೆ, ದಟ್ಟ ಅರಣ್ಯವನ್ನು ಸೀಳಿ ಹುಬ್ಬಳ್ಳಿ- ಅಂಕೋಲಾದಂಥ ನಿಷ್ಪ್ರಯೋಜಕ ರೈಲುಮಾರ್ಗ ಯೋಜನೆಗೆ ಸಿದ್ಧತೆ ಎಗ್ಗಿಲ್ಲದೆ ನಡೆಯುತ್ತಿವೆ. ಪ್ರಧಾನಿ ಮೋದಿಯವರಿಗೆ ವನ್ಯಜೀವಿ ಮಂಡಳಿಯ ಸಭೆ ಕರೆಯಲು ಪುರುಸೊತ್ತೇ ಆಗಿಲ್ಲ” ಎಂದು ಟೀಕಿಸಿದ್ದಾರೆ.



Isn’t it is a shame to India?,while Limpi Virus has killed our cattles and daily death rate are at hike. Farmers and dairy farmers are loosing thier income. Getting 8 cheethas will solve the issue? Modi should start eating rice than Chinese mashroom, so he understands Indian Problems.
It’s we citizens keeping quite at prime ministers baseless investment out of Tax Payers. Only poor pay tax, big high rich ppl are exempted from paying tax.”Sala manna”( karza Maaf)..
Don’t waste public tax money on unimportant things.