Homeಚಳವಳಿಹೊಸಪೇಟೆ: ಬಿಎಂಎಂ ಕಾರ್ಖಾನೆ ವಿಸ್ತರಣೆ, ಸಿಮೆಂಟ್ ಫ್ಯಾಕ್ಟರಿ ನಿರ್ಮಾಣಕ್ಕೆ ಭಾರೀ ವಿರೋಧ

ಹೊಸಪೇಟೆ: ಬಿಎಂಎಂ ಕಾರ್ಖಾನೆ ವಿಸ್ತರಣೆ, ಸಿಮೆಂಟ್ ಫ್ಯಾಕ್ಟರಿ ನಿರ್ಮಾಣಕ್ಕೆ ಭಾರೀ ವಿರೋಧ

ಕಾರ್ಖಾನೆಯಿಂದ ಹೊರಬರುವ ಕಲುಷಿತ ತ್ಯಾಜ್ಯವನ್ನು ತುಂಗಭದ್ರ ಅಣೆಕಟ್ಟೆಗೆ ಹರಿಸಲಾಗುತ್ತಿದೆ. ಕಾರ್ಖಾನೆಯಿಂದ ಹೊರಬೀಳುತ್ತಿರುವ ಧೂಳು ಮಿಶ್ರಿತ ಹೊಗೆ ಹಾನಿಕಾರಕವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

- Advertisement -
- Advertisement -

ಹೊಸಪೇಟೆಯ ಬಳಿಯ ಡಣಾಪುರ ಗ್ರಾಮ ವ್ಯಾಪ್ತಿಯಲ್ಲಿರುವ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬಿಎಂಎಂ ಇಸ್ಪಾತ್ ಸ್ಟೀಲ್ ತಯಾರಿಕಾ ಕಾರ್ಖಾನೆಯು 2.1 ಎಂಟಿಪಿಎ ಸಾಮರ್ಥ್ಯದ ಘಟಕದ ಯೋಜನೆ ವಿಸ್ತರಣೆಗೆ ಸಜ್ಜಾಗಿದೆ. ಅಲ್ಲದೆ ಸಿಮೆಂಟ್ ಕಾರ್ಖಾನೆಯನ್ನು ಸಹ ಆರಂಭಿಸಲು ಮುಂದಾಗಿದೆ. ಇದರಿಂದ ಈಗಾಗಲೇ ಹದಗೆಟ್ಟಿರುವ ಪರಿಸರ ಮತ್ತಷ್ಟು ಹಾಳಾಗಿ ನಮ್ಮ ಜೀವನ ದುಸ್ತರವಾಗುತ್ತದೆ ಎಂದು ಆರೋಪಿಸಿರುವ ಸ್ಥಳೀಯರು ಘಟಕ ವಿಸ್ತರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸೆಪ್ಟಂಬರ್ 16 ರಂದು ಡಣಾಪುರದಲ್ಲಿ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪರಿಸರ ಸಾರ್ವಜನಿಕ ಆಲಿಕೆ ಕಾರ್ಯಕ್ರಮದಲ್ಲಿ ಪರ-ವಿರೋಧದ ಜಟಾಪಟಿ ನಡೆದಿದೆ. ಕಾರ್ಖಾನೆ ವಿಸ್ತರಣೆಗೆ ಮತ್ತು ಹೊಸ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ರೈತರು ಸಹಮತ ಸೂಚಿಸಿ ಪತ್ರ ಬರೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದಾಗ ಅಲ್ಲಿ ನರೆದಿದ್ದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಮ್ಮೆಲೆ ವೇದಿಕೆಯ ಮುಂಭಾಗ ಬಂದು ಫ್ಯಾಕ್ಟರಿ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅಪರ ಜಿಲ್ಲಾಧಿಕಾರಿ ಮಹೇಶ್ ಬಾಬುರವರು, ಪರ ಮತ್ತು ವಿರೋಧದ ಎರಡು ಅಭಿಪ್ರಾಯಗಳನ್ನು ಗಮನಿಸಿದ್ದೇವೆ. ಬಂದಿರುವ ಅರ್ಜಿಗಳಲ್ಲಿಯೂ ಸಹ ಪರ-ವಿರೋಧವಿದೆ. ಈ ಕುರಿತು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಗುರುವಾರ ನಡೆದ ಪರಿಸರ ಸಾರ್ವಜನಿಕ ಆಲಿಕೆ ಸಭೆ

ಕೆಲವು ಜನರು ‘ಫ್ಯಾಕ್ಟರಿ ನಿರ್ಮಾಣವಾದರೆ ನಮ್ಮ ಮಕ್ಕಳಿಗೆ ಇಲ್ಲಿಯೇ ಉದ್ಯೋಗ ಸಿಗುತ್ತದೆ ಮತ್ತು ವಲಸೆ ಹೋಗುವುದು ತಪ್ಪುತ್ತದೆ. ಹಾಗಾಗಿ ಕಾರ್ಖಾನೆ ನಿರ್ಮಾಣವಾಗಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ‘ಉದ್ಯೋಗದ ಆಮಿಷ ತೋರಿಸಿ ಇಲ್ಲಿ ಬಂದಿರುವ ಕಾರ್ಖಾನೆಗಳು ಎಷ್ಟು ಜನರಿಗೆ ಉದ್ಯೋಗ ಕೊಟ್ಟಿವೆ? ಇಲ್ಲಿರುವ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತಿವೆ? ಕಂಪನಿಯ ತ್ಯಾಜ್ಯ ನೀರು ಮತ್ತು ಧೂಳು ಮಿಶ್ರಿತ ಹೊಗೆಯಿಂದಾಗಿ ನಮ್ಮ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಕಾರ್ಖಾನೆ ವಿಸ್ತರಣೆ ಬೇ’ಡ ಎಂದು ಬಹಳಷ್ಟು ಜನರು ವಾದಿಸಿದ್ದಾರೆ.

ಮರಿಯಪ್ಪನಹಳ್ಳಿಯ ರಂಗಭೂಮಿ ಕಲಾವಿದ ಸರ್ದಾರ್ ನಾನುಗೌರಿ.ಕಾಂ ಜೊತೆ ಮಾತನಾಡಿ, “ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸರ್ಕಾರದ ನಿಯಮಗಳ ಪ್ರಕಾರ ಸಂಬಳ ಕೊಡದೆ ಕಾಂಟ್ರಾಕ್ಟರ್‌ಗಳು ಮೋಸ ಮಾಡುತ್ತಿದ್ದಾರೆ. ಅಲ್ಲದೆ ಕಾರ್ಖಾನೆಯಿಂದ ಹೊರಬರುವ ಕಲುಷಿತ ತ್ಯಾಜ್ಯವನ್ನು ತುಂಗಭದ್ರ ಅಣೆಕಟ್ಟೆಗೆ ಹರಿಸಲಾಗುತ್ತಿದೆ. ಕಾರ್ಖಾನೆಯಿಂದ ಹೊರಬೀಳುತ್ತಿರುವ ಧೂಳು ಮಿಶ್ರಿತ ಹೊಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಾರ್ವಜನಿಕರ ಆರೋಗ್ಯ ಕೆಟ್ಟಿದ್ದು, ಇಲ್ಲಿನ ಜನರಿಗೆ ಶ್ವಾಸಕೋಶದ ಸಮಸ್ಯೆಗಳು ಉಂಟಾಗಿವೆ. ರೈತರ ಬೆಳೆಗಳು ನಾಶವಾಗುತ್ತಿವೆ. ಪ್ರಾಣಿ ಪಕ್ಷಗಳು ಸಂಕುಲ ನಶಿಸುತ್ತಿದೆ. ಈ ಸಣ್ಣ ಪ್ರಮಾಣದ ಘಟಕದಿಂದ ಇಷ್ಟೊಂದು ಅನಾಹುತ ನಡೆಯುತ್ತಿದೆ. ಇನ್ನು ಇದರ ಎರಡು ಪಟ್ಟು ದೊಡ್ಡದಾದ ಸ್ಟೀಲ್ ಪ್ಲಾಂಟ್ ಮತ್ತು ಸಿಮೆಂಟ್ ಕಾರ್ಖಾನೆ ಆರಂಭವಾದರೆ ನಾವು ನೆಮ್ಮದಿಯಿಂದ ಬದುಕಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ.

ಈಗಿರುವ ಕಾರ್ಖಾನೆ ಸಾಕು. ಹೊಸದಾಗಿ ಕಾರ್ಖಾನೆ ಆರಂಭವಾಗುವುದಕ್ಕೆ ನಮ್ಮ ವಿರೋಧವಿದೆ. ಸದ್ಯಕ್ಕೆ ಕಾರ್ಖನೆ ಬಳಿಯಿರುವ ಜಾಗದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಲು, ಕಾಡು ಬೆಳೆಸಿ ಪರಿಸರ ಹಾನಿ ತಡೆಗಟ್ಟಲು ಬಳಸಬೇಕು ಎಂದು ಸರ್ದಾರ್ ಒತ್ತಾಯಿಸಿದ್ದಾರೆ.

ಇದುವರೆಗೂ ಕಾರ್ಖಾನೆ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡ ಸ್ಥಳೀಯರೊಬ್ಬರು ಪರಿಸರ ಸಾರ್ವಜನಿಕ ಆಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. “ಭೂಮಿ ನೀಡುವ ಮುನ್ನ ನಮಗೆ ಉದ್ಯೋಗ ಕೊಡುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ನಮಗೆ ಯಾವುದೇ ಉದ್ಯೋಗ ಸಿಕ್ಕಿಲ್ಲ. ಕಾರ್ಖಾನೆಯವರು ಆಗ ಬನ್ನಿ, ಈಗ ಬನ್ನಿ ಎಂದು ಅಲೆದಾಡಿಸುತ್ತಿದ್ದಾರೆ. ಇನ್ನೊಂದೆಡೆ ಫ್ಯಾಕ್ಟರಿ ದೂಳಿನಿಂದಾಗಿ ಸುತ್ತಲಿನ 90 ಜನರಿಗೆ ಕ್ಷಯ ರೋಗಿ ಬಂದಿದೆ ಎಂದು ವಿಮುಕ್ತಿ ಎನ್‌ಜಿಓದವರು ವರದಿ ಮಾಡಿದ್ದಾರೆ. ಹಾಗಾಗಿ ಇಲ್ಲಿ ಹೊಸ ಫ್ಯಾಕ್ಟರಿ ಬೇಡವೇ ಬೇಡ” ಎಂದು ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ ಡಣಾಪುರದಲ್ಲಿನ ಬಿಎಂಎಂ ಇಸ್ಪಾತ್ ಸ್ಟೀಲ್ ಕಾರ್ಖಾನೆಯ ಹೊಸ ಘಟಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಿಮೆಂಟ್ ಫ್ಯಾಕ್ಟರಿ ಆರಂಭವಾದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಹಾಗಾಗಿ ಬಳ್ಳಾರಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಎಲ್ಲಾ ಆಯಾಮಗಳಿಂದ ಪರೀಶಿಲಿಸಿ ಹೆಜ್ಜೆ ಇಡಬೇಕಾಗಿದೆ.

ಇದನ್ನೂ ಓದಿ: ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...