Homeಮುಖಪುಟಕೆಲವೊಮ್ಮೆ ನಿರಾಶವಾದಿಯಾಗುತ್ತೇನೆ ಮತ್ತು ಏಕಾಂಗಿ ಕೂಡಾ: ಜೈಲಿನಿಂದ ಉಮರ್ ಖಾಲಿದ್ ಪತ್ರ

ಕೆಲವೊಮ್ಮೆ ನಿರಾಶವಾದಿಯಾಗುತ್ತೇನೆ ಮತ್ತು ಏಕಾಂಗಿ ಕೂಡಾ: ಜೈಲಿನಿಂದ ಉಮರ್ ಖಾಲಿದ್ ಪತ್ರ

ಇತ್ತೀಚೆಗೆ ನಾನು ನನ್ನ ಸುತ್ತಲಿನ ಜನರಿಗೆ ವಾಸ್ತವವನ್ನು ಮನವರಿಕೆ ಮಾಡುವುದು ಬಿಟ್ಟಿದ್ದೇನೆ. ಕೊನೆಗೂ ನಾನು ಎಷ್ಟೊಂದು ಸುಳ್ಳುಗಳನ್ನು ಸುಳ್ಳೆಂದು ಸಾಬೀತು ಮಾಡಬೇಕು? ಅದೂ ಎಷ್ಟು ಜನರಿಗೆ?

- Advertisement -
- Advertisement -

ಆಗಸ್ಟ್ 15ರಂದು ಮಾನವಹಕ್ಕು ಕಾರ್ಯಕರ್ತ ಉಮರ್ ಖಾಲಿದ್ ಅವರಿಗೆ ರೋಹಿತ್ ಕುಮಾರ್ ಬಹಿರಂಗ ಪತ್ರವೊಂದನ್ನು ಬರೆದರು. ಸೆಪ್ಟೆಂಬರ್ 12ರಂದು ಅವರಿಗೆ ಖಾಲಿದ್‌ರಿಂದ ಉತ್ತರವೂ ಬಂತು. ಇಬ್ಬರ ಅನುಮತಿಯೊಂದಿಗೆ “ದಿ ವೈರ್” ಅದನ್ನು ಪ್ರಕಟಿಸಿದೆ. ಅದನ್ನು ನಿಖಿಲ್ ಕೋಲ್ಪೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ದಿಲ್ಲಿ ಪೊಲೀಸರು ಹೊರಿಸಿರುವ 2020ರ ದಿಲ್ಲಿ ಗಲಭೆಯಲ್ಲಿ ಶಾಮೀಲಾತಿಯ ಆರೋಪದ ಮೇಲೆ, ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ) ಅನ್ವಯ ಉಮರ್ ಖಾಲಿದ್ ಸೆಪ್ಟೆಂಬರ್ 13ಕ್ಕೆ ತಿಹಾರ್ ಜೈಲಿನಲ್ಲಿ ಎರಡು ವರ್ಷಗಳನ್ನು ಕಳೆದಂತಾಗಿದೆ. ಅವರ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಾಗಿದೆ.
***

ಪ್ರಿಯ ರೋಹಿತ್,
ಹುಟ್ಟಿದ ದಿನ ಮತ್ತು ಸ್ವಾತಂತ್ರ್ಯ ದಿನದ ಶುಭಾಶಯಕ್ಕಾಗಿ ಧನ್ಯವಾದಗಳು. ನನಗೆ ಪತ್ರ ಬರೆದುದಕ್ಕಾಗಿಯೂ ಧನ್ಯವಾದಗಳು. ನೀವು ಚೆನ್ನಾಗಿದ್ದೀರಿ ಎಂದು ಆಶಿಸುತ್ತೇನೆ. ಆ ಮುಚ್ಚಿದ ಗೋಡೆಗಳ ನಡುವೆಯೂ ನನಗೆ ನಿಮ್ಮ ಬಹಿರಂಗ ಪತ್ರ ಓದಲು ಸಾಧ್ಯವಾದುದಕ್ಕೆ ಸಂತಸಪಡುತ್ತೇನೆ.

ನಾನು ನಿಮಗೆ ಮಾರುತ್ತರ ಬರೆಯಲು ಕುಳಿರುವಂತೆ- ಇಂದು ರಾತ್ರಿ ಬಿಡುಗಡೆಯಾಗಲಿರುವ ಎಲ್ಲರ ಹೆಸರುಗಳನ್ನು ಧ್ವನಿವರ್ಧಕದಲ್ಲಿ ಸಾರಿಹೇಳುತ್ತಿರುವುದನ್ನು ಕೇಳುತ್ತಿದ್ದೇನೆ. ಸೂರ್ಯಾಸ್ತದ ನಂತರದ ಇದೇ ಸಮಯಕ್ಕೆ “ರಿಹಾಯಿ ಪರ್ಚಾ”ಗಳು (ರಿಲೀಸ್ ಆರ್ಡರ್-ಬಿಡುಗಡೆ ಆದೇಶ) ನ್ಯಾಯಾಲಯಗಳಿಂದ ಜೈಲು ಅಧಿಕಾರಿಗಳಿಗೆ ಮುಟ್ಟುವುದು. ಕತ್ತಲು ಕವಿದು ಜೈಲಿನ ಆವರಣವನ್ನು ಆವರಿಸುತ್ತಿರುವಂತೆಯೇ ಕೆಲವು ಕೈದಿಗಳು ಬಿಡುಗಡೆಯ ಬೆಳಕನ್ನು ಕಾಣಲಿದ್ದಾರೆ. ನಾನು ಅವರ ಮುಖಗಳಲ್ಲಿ ಆನಂದವನ್ನು, ಪರಮಾನಂದವನ್ನು ಕಾಣುತ್ತೇನೆ.

ಈಗ ಕಳೆದೆರಡು ವರ್ಷಗಳಿಂದಲೂ ಪ್ರತೀ ರಾತ್ರಿಯೂ ನಾನು ಈ ಘೋಷಣೆಗಳನ್ನು ಕೇಳುತ್ತಿದ್ದೇನೆ. “ನಾಮ್ ನೋಟ್ ಕರ್ಲೋಂ. ಇನ್ ಬಂಧಿಯೋಂ ಕೀ ರಿಹಾಯಿ ಹೈ” (ಹೆಸರು ಗುರುತು ಮಾಡಿಕೊಳ್ಳಿ. ಈ ಕೈದಿಗಳ ಬಿಡುಗಡೆ ಇದೆ). ಮತ್ತು ನಾನು ಕಾಯುತ್ತಿದ್ದೇನೆ ಮತ್ತು ನಾನು ನನ್ನ ಹೆಸರು ಕರೆಯಲಾಗುವ ದಿನಕ್ಕಾಗಿ ಆಶಿಸುತ್ತೇನೆ. ನಾನು ಆಗಾಗ ಯೋಚಿಸುತ್ತೇನೆ: ಈ ಕಗ್ಗತ್ತಲ ಸುರಂಗವು ಎಷ್ಟು ಉದ್ದವಿದೆ? ಈಗೇನಾದರೂ ಅಲ್ಲಿ ಬೆಳಕು ಕಾಣಬಹುದೇ? ನಾನು ಕೊನೆಗೆ ಹತ್ತಿರದಲ್ಲಿ ಇದ್ದೇನೆಯೇ, ಅಥವಾ ಕೇವಲ ಮಧ್ಯಕ್ಕಷ್ಟೇ ತಲುಪಿದ್ದೇನೆಯೇ? ಅಥವಾ ಈ ಅಗ್ನಿಪರೀಕ್ಷೆಯು ಈಗಷ್ಟೇ ಆರಂಭವಾಗಿದೆಯೇ?

ನಾವು ಆಜಾದಿಯ ಅಮೃತಕಾಲವನ್ನು ಪ್ರವೇಶಿಸಿದ್ದೇವೆ ಎಂದು ಅವರು ಹೇಳುತ್ತಾರೆ. ಆದರೆ, ಸ್ವಾತಂತ್ರ್ಯವನ್ನು ರಕ್ಷಿಸುತ್ತಿರುವವರ ಈ ಅಗ್ನಿಪರೀಕ್ಷೆಯು- ನಾವು (ಬ್ರಿಟಿಷ್) ರಾಜ್ ದಿನಗಳಿಗೆ ಮರಳುತ್ತಿದ್ದೇವೆಯೋ ಎಂದು ಭಾವಿಸುವಂತೆ ಮಾಡುತ್ತದೆ. ಇತ್ತೀಚೆಗೆ ಗುಲಾಮಿಯ ವಸಾಹತುಶಾಹಿ ಸಂಕೇತಗಳನ್ನು ತೊಡೆದುಹಾಕುವ ಬಹಳಷ್ಟು ಮಾತುಗಳು ಕೇಳಿಬರುತ್ತಿವೆ. ವಸಾಹತುಶಾಹಿ ಕಾಲದ ನೆನಪುಗಳಾದ ಹಲವಾರು ಕರಾಳ ಕಾನೂನುಗಳನ್ನು ಕಾರ್ಯಕರ್ತರು, ವಿದ್ಯಾರ್ಥಿಗಳು, ಭಿನ್ನಮತೀಯರು ಮತ್ತು ರಾಜಕೀಯ ವಿರೋಧದ ವಿರುಧ್ಧದ ಆಯುಧಗಳನ್ನಾಗಿ ಮಾಡುವುದು ಮುಂದುವರಿಯುತ್ತಿರುವ ಹೊತ್ತಿನಲ್ಲಿ, ಇದು ನಡೆಯುತ್ತಿದೆ. ನಾವೀಗ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತಿರುವ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯಿದೆ ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬ್ರಿಟಿಷರು ಬಳಸಿದ ರೋಲ್ಯಾಟ್ ಆಕ್ಟ್ (Rowlatt Act) ನಡುವೆ ಯಾವುದೇ ಸಾಮ್ಯವನ್ನು ನಮ್ಮ ಜನರು ಕಾಣುತ್ತಿಲ್ಲವೆ?

ವಸಾಹತುಶಾಹಿ ಆಡಳಿತದ ಬಳುವಳಿಯಾಗಿ ಮುಂದುವರಿದಿರುವ – ಜನರ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಉಲ್ಲಂಘನೆಯನ್ನು ಸಾಧ್ಯಮಾಡಿರುವ ಈ ಶಿಕ್ಷೆಯ ಆಯುಧಗಳನ್ನು ನಾವು ತ್ಯಜಿಸಬೇಡವೆ? ನಾವು ಹಲವರು ಮತ್ತು ನಮ್ಮಂತ ಇನ್ನೂ‌ ಹಲವರನ್ನು ಯಾವುದೇ ವಿಚಾರಣೆ ಇಲ್ಲದೆ, ಅಥವಾ ನಮ್ಮ ವಿಚಾರಣೆಯು ಯಾವಾಗ ಆರಂಭವಾಗಬಹುದು ಎಂದೂ ಗೋಚರವಾಗದಂತೆ, ದೀರ್ಘ ಕಾಲದಿಂದ ಬಂಧಿಸಿ ಇಡಲಾಗಿದೆಯಲ್ಲಾ ಎಂಬುದರಿಂದ ನಾನು ವಿಶೇಷವಾಗಿ ದಿಗ್ಭ್ರಮೆಗೊಂಡಿದ್ದೇನೆ. ಸ್ವಾತಂತ್ರ್ಯ ದಿನದ ಸಂಜೆಯಲ್ಲಿ ನಾನು ಇತರ ಕೆಲವರ ಜೊತೆಗೆ ಜೈಲು ಕೋಣೆಯ ಹೊರಗೆ ಕುಳಿತೆ. ನಮ್ಮ ಜೈಲಿನ ಆವರಣದ ಮೇಲೆ ಎತ್ತರದಲ್ಲಿ ಗಾಳಿಪಟಗಳು ಹಾರುವುದನ್ನು ಕಂಡೆವು ಮತ್ತು ಮತ್ತು ನಮ್ಮ ಬಾಲ್ಯಕಾಲದ ಸ್ವಾತಂತ್ರ್ಯ ದಿನಾಚರಣೆಗಳನ್ನು ನೆನೆಪಿಸಿಕೊಂಡೆವು. ನಾವು ಇಲ್ಲಿಗೆ ತಲುಪಿದ್ದಾದರೂ ಹೇಗೆ? ಈ ದೇಶವು ಎಷ್ಟೊಂದು ಬದಲಾಗಿದೆ?!

ಯುಎಪಿಎಯನ್ನು ಬಳಸುವ ಮೂಲಕ, ನಮ್ಮನ್ನು ಇದರಲ್ಲಿ ಸಿಕ್ಕಿಸಿಹಾಕಿದವರು ಏನನ್ನೂ ಸಾಬೀತುಪಡಿಸುವ ಅಗತ್ಯವೇ ಇಲ್ಲದಂತೆ, ವರ್ಷಗಳ ಕಾಲ ನಮ್ಮನ್ನು ಜೈಲಿನಲ್ಲಿ ಇರಿಸಬಹುದು. ನಮ್ಮ ಮೇಲೆ ಅವರು ಮಾಡಿರುವ ಹಾಸ್ಯಾಸ್ಪದ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವ ಅವರ ಅಸಾಮರ್ಥ್ಯ ಕೂಡಾ, ಈ ಅವಧಿಯಲ್ಲಿ ಅವರು ನಮ್ಮ ವಿರುದ್ಧ ಕಟ್ಟುಕತೆಗಳನ್ನು ಕಟ್ಟುವುದನ್ನು ತಡೆಯುವುದಿಲ್ಲ.

ಒಂದು ಸಂಜೆ ಜೈಲಿನ ವಾರ್ಡನ್ ನನ್ನ ಕೇಸಿನ ಬಗ್ಗೆ ಹೀಗೆಯೇ ಮಾತುಕತೆ ಆರಂಭಿಸಿದರು. 2020ರಲ್ಲಿ ಅವರು ನನ್ನನ್ನು ಜೈಲಿನಲ್ಲಿ ಕಂಡಾಗ- ನನ್ನ ವಿರುದ್ಧ ಮಾಡಲಾದ ಆರೋಪಗಳನ್ನು ನಂಬಲು ತನಗೆ ಕಷ್ಟವಾಯಿತು ಎಂದು ಅವರು ಹೇಳಿದರು. ಇವೆಲ್ಲವೂ ರಾಜಕೀಯ ಎಂಬುದು ಅವರ ಯೋಚನೆಯಾಗಿತ್ತು. ನನ್ನ ಬಿಡುಗಡೆಯಾಗುವುದು ಕೇವಲ ಸ್ವಲ್ಪ ಕಾಲದ ಪ್ರಶ್ನೆ ಎಂದು ಅವರು ಯೋಚಿಸಿದ್ದರು. ಆದರೀಗ, 2022ರಲ್ಲಿ, ಆ ಧ್ವನಿವರ್ಧಕದಲ್ಲಿ ನನ್ನ ಹೆಸರನ್ನು ಕೇಳುವ ದಿನಕ್ಕಾಗಿ ನಾನು ಕಾಯುತ್ತಿರುವಾಗ, ಅವರಿಗೆ ಆ ಕುರಿತು ಸಂಶಯ ಕಾಡುತ್ತದೆ: “ಯಾಕೆ ನಿನಗೆ ಜಾಮೀನು ಸಿಗುತ್ತಿಲ್ಲ? ರೈತ ಆಂದೋಲನದವರಿಗೆ ಸಿಕ್ಕಿತ್ತು, ಕೆಲವೇ ದಿನಗಳಲ್ಲಿ.”

ನಾನು ಯುಎಪಿಎ ಬಗ್ಗೆ ಮತ್ತು ಐಪಿಸಿಗೆ ಹೋಲಿಸಿದಾಗ ಅದರ ಅಡಿಯಲ್ಲಿ ಜಾಮೀನು ಪಡೆಯುವ ಕಷ್ಟದ ಬಗ್ಗೆ ಅವರಿಗೆ ತಿಳಿಸಲು ಯತ್ನಿಸಿದೆ. ಆದರೆ ಅರ್ಧದಲ್ಲೇ ಅವರು ಆಸಕ್ತಿ ಕಳೆದುಕೊಂಡಿದ್ದಾರೆಂದು ನನಗೆ ಅರ್ಥವಾಯಿತು. ಆವರು ನನ್ನ ಮಾತಿಗೆ ಗಮನ ನೀಡುತ್ತಿರಲಿಲ್ಲ. ಈ ಕಾನೂನುಗಳ ಸೂಕ್ಷ್ಮ ವಿವರಗಳಲ್ಲಿ ಯಾರಿಗೆ ನಿಜವಾಗಿಯೂ ಆಸಕ್ತಿ ಇರುತ್ತದೆ? ಈ ಕಾಫ್ಕಾನ ಕತೆಗಳಲ್ಲಿ ಬರುವಂತ ದಿಗ್ಭ್ರಮೆ ಹುಟ್ಟಿಸುವ ಈ ಕಾನೂನನ್ನು ಕಾನೂನು ತಜ್ಞರು ಮತ್ತು ಅದರ ಬಲಿಪಶುಗಳ ಹೊರತಾಗಿ ಯಾರು ತಾನೆ ಅರ್ಥವನ್ನಾದರೂ ಮಾಡಿಕೊಳ್ಳಬಲ್ಲರು?

ಮಿಥ್ಯಾರೋಪದ ಹೊರೆ

ಸತ್ಯೋತ್ತರ ಜಗತ್ತಿನಲ್ಲಿ ವಾಸ್ತವಕ್ಕಿಂತ ಹೆಚ್ಚಾಗಿ ಗ್ರಹಿಕೆಯು ಮುಖ್ಯವಾಗುತ್ತದೆ. ನಿಮ್ಮ ಪತ್ರದಲ್ಲಿ ನೀವು, ನಾನು ನಿಮ್ಮ ಮೇಲೆ ಬಿಟ್ಟುಹೋದ ಛಾಪಿನ ಬಗ್ಗೆ ಉಜ್ವಲವಾಗಿ ಬರೆದಿದ್ದೀರಿ. ನಿಮ್ಮ ತುಂಬಾ ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳು. ಮುಂದುವರಿಯುತ್ತಾ ನೀವು, ಜೈಲಿನಲ್ಲಿ ದಿನನಿತ್ಯವೂ ಭೇಟಿಯಾಗುವ, ವ್ಯವಹರಿಸುವವರ ಮೇಲೆಯೂ ನಾನು ಅಂತದ್ದೇ ಛಾಪನ್ನು ಬೀರಬಹುದು ಮತ್ತು ಅವರು ಮಾಧ್ಯಮಗಳ ಮೂಲಕ ನನ್ನ ಬಗ್ಗೆ ಕೇಳಿರಬಹುದಾದ ಸುಳ್ಳುಗಳನ್ನು ನಂಬುವುದನ್ನು ಬಿಟ್ಟಿರಬಹುದು ಎಂದೂ ಬರೆದಿದ್ದೀರಿ. ಸರಿ, ನಿಮ್ಮನ್ನು ಮನವರಿಕೆ ಮಾಡುವುದು ಸುಲಭವಾಗಿತ್ತು; ಯಾಕೆಂದರೆ ನೀವು ಯಾವತ್ತೂ ಮಾಧ್ಯಮಗಳಲ್ಲಿ ಬಿಕರಿಯಾಗುವ ಸುಳ್ಳುಗಳನ್ನು ಕಾಣುತ್ತಿದ್ದಿರಿ. ಆದರೆ, ಅಪಪ್ರಚಾರದಿಂದ ದಾರಿತಪ್ಪಿದವರನ್ನು ಅದರಿಂದ ದೂರ ಎಳೆಯುವುದು ಬಹಳಷ್ಟು ಕಷ್ಟ; ಅದೂ, ಅಪಪ್ರಚಾರವು ನಿರಂತರವಾಗಿದ್ದಾಗ.

ನನ್ನನ್ನು ಜೈಲುಪಾಲು ಮಾಡಲಾದ ಎರಡು ವರ್ಷಗಳಲ್ಲಿ ಸುದ್ದಿಪತ್ರಿಕೆಗಳು (ಇಲ್ಲಿ ಸುದ್ದಿಯ ಏಕೈಕ ಮೂಲ) ನಡುನಡುವೆ ನನ್ನ ಪ್ರಕರಣದ ಬಗ್ಗೆ ವರದಿಗಳನ್ನು ಪ್ರಕಟಿಸಿವೆ. ಇಂಗ್ಲಿಷ್ ಪತ್ರಿಕೆಗಳು ಕನಿಷ್ಟ ವಸ್ತುನಿಷ್ಟತೆಯ ತೋರಿಕೆಯನ್ನಾದರೂ ಕಾಯ್ದುಕೊಂಡಿವೆ. ಆದರೆ, ಜೈಲಿನಲ್ಲಿ 90 ಶೇಕಡಾಕ್ಕಿಂತಲೂ ಹೆಚ್ಚು ಕೈದಿಗಳು ತಮ್ಮ ನಿತ್ಯ ಸುದ್ದಿ ತುಣುಕುಗಳಿಗಾಗಿ ಅವಲಂಬಿಸಿರುವ ಹಿಂದಿ ಪತ್ರಿಕೆಗಳು ಪತ್ರಿಕೋದ್ಯಮದ ಎಲ್ಲಾ ನೈತಿಕತೆಯನ್ನು ಗಾಳಿಗೆ ತೂರಿವೆ. ಅವು ಕಾರ್ಕೋಟಕ ವಿಷ. ಅವು ನನ್ನ ಜಾಮೀನು ವಿಚಾರಣೆಗಳನ್ನು ತಮಗೆ ಬೇಕಾದಂತೆ ಆಯ್ದು ಪ್ರಕಟಿಸಿವೆ. ನನ್ನ ವಕೀಲರು ವಾದ ಮಂಡಿಸಿದಾಗ, ಅವು ಹೆಚ್ಚಾಗಿ ನಮ್ಮ ವಾದಗಳನ್ನು ಪ್ರಕಟಿಸಲೇ ಇಲ್ಲ. ಏನೋ ಬದಲಾವಣೆ ಎಂಬಂತೆ ನನ್ನ ಬಗ್ಗೆ ಏನಾದರೂ ಒಳ್ಳೆಯದನ್ನು ಬರೆದರೆ, ಅದನ್ನು ಅತ್ಯಂತ ನೀರಸ ತಲೆಬರಹದೊಂದಿಗೆ ಪುಟ 5-6ರ ಯಾವುದಾದರೂ ಕಣ್ಣಿಗೆ ಬೀಳದ ಕಾಲಂಗೆ ತಳ್ಳಿಬಿಡುತ್ತಿದ್ದಾರೆ. ಆದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ನನ್ನ ವಿರುದ್ಧ ಮಾಡಿದ ವಾದಗಳು- ಅದು ನ್ಯಾಯಾಲಯದ ಅಭಿಪ್ರಾಯವೇ ಎಂಬಂತೆ ಕಾಣಿಸುವ ರೀತಿಯಲ್ಲಿ ಮುಖಪುಟದ ಸುದ್ದಿಗಳಾಗುತ್ತಿದ್ದವು. ತಮ್ಮ ರೋಚಕ ತಲೆಬರಹಗಳಿಗೆ ಪೂರಕವಾಗಿ ಎಲ್ಲಿಂದಲೋ ನನ್ನ ಕರಾಳ ಚಿತ್ರಗಳನ್ನು ಅಗೆದುತೆಗೆಯುತ್ತಿದ್ದರು.

ಒಂದು ದಿನ ಹಿಂದಿ ಪತ್ರಿಕೆಯ ತಲೆಬರಹವೊಂದು ಕಿರುಚಿತ್ತು: “ಖಾಲಿದ್ ನೆ ಕಹಾ ತಾ ಭಾಷಣ್ ಸೆ ಕಾಮ್ ನಹೀಂ ಚಲೇಗ, ಖೂನ್ ಬಹಾನಾ ಪಡೇಗ”. (ಖಾಲಿದ್ ಹೇಳಿದ್ದ, ಭಾಷಣದಿಂದ ಕೆಲಸ ಸಾಗದು, ರಕ್ತ ಹರಿಸಬೇಕಾದೀತು). ಮುಖ್ಯ ವರದಿಯು ತಲೆಬರಹದಲ್ಲಿ ಮಾಡಲಾದ ಘನಘೋರ ದಾವೆಗೆ ಯಾವುದೇ ಆಧಾರ ಒದಗಿಸಲಿಲ್ಲ. ಮಾತ್ರವಿಲ್ಲದೇ ಇದೊಂದು ಸಾಬೀತಾಗದ, ಇನ್ನೂ ನ್ಯಾಯಾಲಯದ ಪರಿಶೀಲನೆಗೇ ತರಲಾಗಿರದ ಆರೋಪ ಮಾತ್ರ ಎಂಬ ಬಗ್ಗೆಯೂ ಯಾವುದೇ ಕಾಟಾಚಾರದ ಸಮಜಾಯಿಷಿ ನೀಡುವ ಕಷ್ಟವನ್ನೂ ಅವರು ತೆಗೆದುಕೊಳ್ಳಲಿಲ್ಲ. ಯಾವುದೇ ಉದ್ಧರಣ ಚಿಹ್ನೆಯಾಗಲೀ, ಒಂದು ಪ್ರಶ್ನಾರ್ಥಕ ಚಿಹ್ನೆ ಕೂಡಾ ಇರಲಿಲ್ಲ. ಎರಡು ದಿನಗಳ ನಂತರ ಅದೇ ಪತ್ರಿಕೆ ಹಿಂದಿನದ್ದಕ್ಕಿಂತಲೂ ರೋಚಕ ತಲೆಬರಹದೊಂದಿಗೆ ಬಂತು: “ಖಾಲಿದ್ ಚಾಹ್ತಾ ತಾ ಮುಸಲ್ಮಾನೋಂ ಕೇ ಲಿಯೇ ಅಲಗ್ ದೇಶ್”. (ಖಾಲಿದ್ ಬಯಸಿದ್ದ, ಮುಸಲ್ಮಾನರಿಗೆ ಪ್ರತ್ಯೇಕ ದೇಶ). ಅವರು ಹೇಳಬಯಸಿದ್ದು ಏನೆಂದರೆ, ಹೆಚ್ಚಾಗಿ ಮುಸ್ಲಿಮರೇ ಸಾವಿಗೀಡಾದ ದಿಲ್ಲಿಯ ಯಮುನಾ ತೀರ ಪ್ರದೇಶದಲ್ಲಿ ನಡೆದ ಗಲಭೆಗಳು ಮುಸ್ಲಿಮರಿಗೆ ಪ್ರತ್ಯೇಕ ದೇಶದ ಸ್ಥಾಪನೆಗೆ ಕಾರಣವಾಗುತ್ತಿದ್ದವು ಎಂಬುದೊಂದು ನಿಜವಾಗಿಯೂ ದುರಂತ ಹಾಸ್ಯ. ನನಗೆ ನಗಬೇಕೋ, ಅಳಬೇಕೋ, ಒಂದೂ ಗೊತ್ತಾಗಿರಲಿಲ್ಲ. ಪ್ರತೀದಿನ ಇದೇ ವಿಷವನ್ನು ಕುಡಿಯುತ್ತಿರುವವರ ಮನಸ್ಸುಗಳನ್ನು ನಾನು ಹೇಗೆ ಒಲಿಸಲಿ?

ಅದಕ್ಕಿಂತಲೂ ಹಿಂದಿನ ಸಂದರ್ಭವೊಂದರಲ್ಲಿ ಇನ್ನೊಂದು ಹಿಂದಿ ದಿನಪತ್ರಿಕೆಯು, ದಿಲ್ಲಿ ಗಲಭೆಗಳಲ್ಲಿ ನನ್ನ ಶಾಮೀಲಾತಿ ಮತ್ತು ಪಾತ್ರದ ಬಗ್ಗೆ ನಾನು ದಿಲ್ಲಿ ಪೊಲೀಸರಿಗೆ “ತಪ್ಪೊಪ್ಪಿಗೆ” ನೀಡಿದ್ದೇನೆ ಎಂದು ವರದಿ ಪ್ರಕಟಿಸಿತು. ದಾಖಲೆ ಪ್ರಕಾರವೇ- ನಾನು ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಎರಡು ಬಾರಿ ನ್ಯಾಯಾಲಯದ ಮುಂದೆಯೇ- ನಾನು ಪೊಲೀಸರಿಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದೂ, ಅಥವಾ ನಾನು ಯಾವುದೇ ಕಾಗದಕ್ಕೆ ಸಹಿ ಹಾಕಿಲ್ಲ ಎಂದೂ ಹೇಳಿಕೆ ದಾಖಲಿಸಿದ್ದೇನೆ. ಹೀಗಿರುವಾಗ ಈ “ಸುದ್ದಿ”ಯ ಮೂಲ ಯಾವುದು? ಯಾವುದೇ ದೂರದ ಕಲ್ಪನೆಯಲ್ಲೂ ಇವರು ಮಾಡುತ್ತಿರುವುದು ವರದಿಗಾರಿಕೆ ಎಂದು ಹೇಳಲಾಗದು. ಅವರು ಮೊದಲೇ ನಿರ್ಧರಿಸಿರುವ ಕಥಾನಕಕ್ಕೆ ನೇರಾನೇರವಾಗಿ ಸುಳ್ಳುಗಳನ್ನು ಹೆಣೆಯುತ್ತಿದ್ದಾರೆ ಅಷ್ಟೇ. ಅವರು ನನ್ನನ್ನು ತಪ್ಪಿತಸ್ಥ ಎಂದು ಜನಾಭಿಪ್ರಾಯದ ನ್ಯಾಯಾಲಯದಲ್ಲಿ ಚಿತ್ರಿಸಲು ಹವಣಿಸುತ್ತಿದ್ದಾರೆ ಅಷ್ಟೇ. ಅದೂ ಕೂಡಾ, ಯಾವುದೇ ನ್ಯಾಯಾಲಯವು ನನ್ನ ಪ್ರಕರಣದ ಯಾವುದೇ ರೀತಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಮೊದಲೇ. ಹಾಗೆ ಮಾಡುವುದರ ಮೂಲಕ ಆವರು ಬಹುಸಂಖ್ಯಾತವಾದಿ ಸಾಮೂಹಿಕ ಆತ್ಮಸಾಕ್ಷಿಯನ್ನು ತಮಗೆ ಬೇಕಾದಂತೆ ರೂಪಿಸುತ್ತಿದ್ದಾರೆ.

ಕೆಲವು ಸಲ ಮಾಧ್ಯಮಗಳ ಸುಳ್ಳು, ಪೊಲೀಸರ ಸುಳ್ಳುಗಳನ್ನೂ ಬಹುವಾಗಿ ಮೀರಿಸುತ್ತವೆ. ಒಂದು ಪತ್ರಿಕಾ ವರದಿಯು (ಮತ್ತೊಮ್ಮೆ ಒಂದು ಪ್ರಮುಖ ಹಿಂದಿ ಪತ್ರಿಕೆಯಲ್ಲಿ) ಗಲಭೆಗಳನ್ನು ಎಬ್ಬಿಸಲು ಯಾವುದೇ ಪ್ರಯತ್ನಗಳನ್ನು ಕೈಚೆಲ್ಲದ ನಾನು, ಗಲಭೆ ನಡೆಯುವುದಕ್ಕೆ ಒಂದು ವಾರ ಮೊದಲು, ಅಂದರೆ ಫೆಬ್ರವರಿ 16, 2020ರಂದು ಹೊಸದಿಲ್ಲಿಯ ಝಾಕಿರ್ ನಗರದಲ್ಲಿ ಶಾರ್ಜೀಲ್ ಇಮಾಮ್ ಅವರನ್ನು ಗುಪ್ತವಾಗಿ ಭೇಟಿಯಾಗಿದ್ದೆ ಎಂದು ಬರೆದಿತ್ತು. ವಾಸ್ತವದಲ್ಲಿ ಫೆಬ್ರವರಿ 16, 2020ರಂದು ನಾನು-  ಪೊಲೀಸರೇ ಇದನ್ನು ದೃಢಪಡಿಸುತ್ತಾರೆ- ದಿಲ್ಲಿಯಿಂದ 1136 ಕಿ.ಮೀ. ದೂರದ ಮಹಾರಾಷ್ಟ್ರದ ಅಮರಾವತಿಯಲ್ಲಿದ್ದೆ. ಅದೇ ರಾತ್ರಿ ಯಾರೂ ನಿರಾಕರಿಸಲು ಸಾಧ್ಯವೇ ಇಲ್ಲದಂತೆ, ಸ್ವತಃ ಶಾರ್ಜಿಲ್ ಇಮಾಮ್ ಬೇರೊಂದು ಪ್ರಕರಣದಲ್ಲಿ 20 ದಿನಗಳಿಗೆ ಹಿಂದೆಯೇ ಬಂಧಿತರಾಗಿ ತಿಹಾರ್ ಜೈಲಿನಲ್ಲಿ ಇದ್ದರು. ಇವೆಲ್ಲವನ್ನು ಹುಟ್ಟುಹಾಕಿದ ಆ ಘನತೆವೆತ್ತ ಪತ್ರಕರ್ತ ಅತ್ಯಂತ ಮೂಲಭೂತವಾದ ವಾಸ್ತವಾಂಶಗಳನ್ನೂ ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ.

ಅದೆಲ್ಲಾ ಏನೇ ಇರಲಿ, ಇಂದಿನ ದಿನಗಳಲ್ಲಿ ಯಾರಿಗೆ ನಿಜವಾಗಿಯೂ ವಾಸ್ತವಾಂಶದಲ್ಲಿ ಆಸಕ್ತಿಯಿದೆ? ಇಂದು ಭಾರತದಲ್ಲಿ- ನಡೆದದ್ದು ಏನು ಎಂಬುದು ಸತ್ಯವಾಗಿ ಉಳಿದಿಲ್ಲ; ಏನು ಜನರನ್ನು ತಲುಪುತ್ತದೆಯೋ, ಅದುವೇ ಸತ್ಯ. ನಾನು ಅವರಿಗೆ ಏನನ್ನು ಹೇಳುತ್ತೇನೋ, ಅದಕ್ಕಿಂತಲೂ ಇಂತಾ ತಲೆಬರಹಗಳೇ ಜನರ ತಲೆಯೊಳಗೆ ಆಳವಾದ ಪರಿಣಾಮಗಳನ್ನು ಉಂಟುಮಾಡುತ್ತವೆ.

ಕಳೆದ ಎರಡು ವರ್ಷಗಳಲ್ಲಿ- ನಿಮ್ಮದೇ ಅಭಿವ್ಯಕ್ತಿಯನ್ನೇ ಉಪಯೋಗಿಸುವುದಾದರೆ,  “ನಿಮ್ಮ ಕಣ್ಣೇ ಹೇಳುವ ಸಾಕ್ಷ್ಯ”ಕ್ಕಿಂತ ಜನರು ಮುದ್ರಿತ ಪದಗಳ ಮೇಲೆ ಇಟ್ಟಿರುವ ಬಹುತೇಕ ಅತಾರ್ಕಿಕವಾದ ನಂಬಿಕೆಯನ್ನು ನಾನು ಗಮನಿಸಿದ್ದೇನೆ. ಪತ್ರಿಕೆಗಳಲ್ಲಿ ಬಂದಿರುವುದರಿಂದ ಇದು ನಿಜವಿರಬೇಕು. “ಕುಚ್ ತೋ ಕಿಯಾ ಹೋಗಾ. ಪೂರಾ ಝೂಟ್ ತೋಡೆ ಲಿಖ್ ದೇಂಗೆ” (ಏನಾದರೂ ಮಾಡಿರಬೇಕು. ಪೂರ್ತಿ ಸುಳ್ಳು ಬರೆಯಲಿಕ್ಕಿಲ್ಲ).

ಸಂಜಯದತ್ ಬಯೋಪಿಕ್ (ಜೀವನಾಧರಿತ ಚಲನಚಿತ್ರ) “ಸಂಜೂ”ದಲ್ಲಿ ಬೇರೆ ಕೊರತೆಗಳು ಇರಬಹುದು. ಆದರೆ, ಮಾಧ್ಯಮಗಳ ಸ್ವಭಾವವನ್ನು ಚಿತ್ರಿಸುವುದರಲ್ಲಿ ಅದು ನೂರಕ್ಕೆ ನೂರು ಗುರಿಮುಟ್ಟಿದೆ. ಇದು ಖಂಡಿತವಾಗಿಯೂ ಡ್ರಗ್. ಪ್ರತೀ ಬೆಳಿಗ್ಗೆ ಈ ಪತ್ರಿಕೆಗಳ ಹಾಳೆಗಳು ಹೇಗೆ ಜನರ ಮನಸ್ಸನ್ನು ಜಡಗೊಳಿಸುತ್ತವೆ ಮತ್ತು ಅವರನ್ನು ಬೇರೊಂದು ಬದಲಿ ವಾಸ್ತವಕ್ಕೆ ಕರೆದೊಯ್ಯುತ್ತವೆ ಎಂದು ನೋಡುತ್ತೇನೆ. ಸುಳ್ಳನ್ನು ಸಗಟು ಪ್ರಮಾಣದಲ್ಲಿ ಪ್ರತಿನಿತ್ಯವೆಂಬಂತೆ ಉತ್ಪಾದಿಸಲಾಗುತ್ತಿರುವಾಗ, ಜನರು ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವ ಸಾಮರ್ಥ್ಯವನ್ನು ಕೂಡಾ ಕಳೆದುಕೊಳ್ಳುತ್ತಾರೆ. ಅವರು ಈ ಹಂತವನ್ನು ಮುಟ್ಟಿದ ಬಳಿಕ ಜನರಿಗೆ ಒಳ್ಳೆಯ ಸುಳ್ಳುಗಳನ್ನು ಉಣಬಡಿಸುವ ಅಗತ್ಯವೂ ಇರುವುದಿಲ್ಲ. ಎಷ್ಟು ಅತಾರ್ಕಿಕವೇ ಆಗಿರಲಿ, ಅವರು ಏನನ್ನು ಬೇಕಾದರೂ ಯೋಚಿಸದೇ ನುಂಗುವಂತೆ ಮಾಡಬಹುದು.

ನಾವು ಈ ಸುಳ್ಳು ಮತ್ತು ಕಟ್ಟುಕತೆಗಳನ್ನು ಉತ್ಪಾದಿಸುವ ಈ ರಾಕ್ಷಸಾಕಾರದ ಯಂತ್ರದ ಜೊತೆಗೆ ಹೋರಾಡುವುದಾದರೂ ಹೇಗೆ? ದ್ವೇಷ ಮತ್ತು ಸುಳ್ಳುಗಳ ವಿತರಕರಿಗೆ ಎಷ್ಟೊಂದು ಸಂಪನ್ಮೂಲಗಳಿವೆ: ಹಣ, ನಡುಬಗ್ಗಿಸಿರುವ 24×7 ಸುದ್ದಿ ಚಾನೆಲುಗಳು- ಅವು ಕೂಡಾ ರಾಶಿರಾಶಿ; ಪತ್ರಿಕೆಗಳು, ಟ್ರೋಲ್ ಪಡೆಗಳು ಮತ್ತು ಪೊಲೀಸರು ಕೂಡಾ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ರೋಹಿತ್, ಇವೆಲ್ಲವೂ ಕೆಲವೊಮ್ಮೆ ನನ್ನನ್ನು ನಿರಾಶಾವಾದಕ್ಕೆ ದೂಡುತ್ತವೆ. ಕೆಲವೊಮ್ಮೆ ನಾನು ಒಂಟಿತನವನ್ನೂ ಅನುಭವಿಸುತ್ತೇನೆ. ಫ್ಯಾಸಿಸಂ, ಸಿಎಎ-ಎನ್‌ಆರ್‌ಸಿ/ಎನ್‌ಪಿಆರ್ ವಿರುದ್ಧದ ಚಳುವಳಿಗಳಲ್ಲಿ ಜೊತೆಗಿದ್ದವರಲ್ಲಿ ಬಹಳಷ್ಟು ಜನರು ನನಗಿಂತ ಹೆಚ್ಚು ಅನುಕೂಲದಲ್ಲಿದ್ದಾರಾದರೂ, ಈ ಸುಳ್ಳುಗಳು ನನ್ನನ್ನು ಮಾತ್ರವೇ ಪ್ರತ್ಯೇಕಿಸಿ ಗುರಿಯಾಗಿಸಿರುವಾಗಲೂ, ಅವರಿಂದು ಮೌನವಾಗಿ ಉಳಿಯಲು ಬಯಸಿದ್ದಾರೆ. ಇದು ನಾನು ಯಾರಿಗೂ ಬೇಡದವನು ಎಂಬ ಭಾವನೆ ಹುಟ್ಟಿಸುತ್ತದೆ. ಇದು ನಿಮ್ಮ ಸ್ವಂತ ನೆಲದಲ್ಲೇ ನೀವು ಅಪರಿಚಿತ ಪರಕೀಯ ಎಂಬ ಭಾವನೆ ನಿಮ್ಮಲ್ಲಿ ಹುಟ್ಟುವಂತೆ ಮಾಡುತ್ತದೆ. ಇಂತಾ ಗಳಿಗೆಗಳಲ್ಲಿ ನನಗೆ ಶಾಂತಿ, ಸಮಾಧಾನ ಕೊಡುವ ವಿಷಯವೆಂದರೆ, ಇದು ಯಾವುದೂ ನನ್ನ ವೈಯಕ್ತಿಕ ಅಲ್ಲ ಎಂಬ ಭಾಸ. ನನ್ನ ಪೀಡನೆ ಮತ್ತು ಒಂಟಿತನಗಳು ದೊಡ್ಡದಾದ ಏನೋ ಒಂದರ- ಈಗ ಭಾರತದಲ್ಲಿ ಭಾರತದಲ್ಲಿ ಮುಸ್ಲಿಮರ ಪೀಡನೆ ಮತ್ತು ಪ್ರತ್ಯೇಕೀಕರಣದ ಸಾಂಕೇತಿಕತೆ ಎಂಬ ಭಾಸ.

ಮೌನ ಮತ್ತು ಏಕಾಂತದಲ್ಲಿ ಸಾಂತ್ವನ

ಇತ್ತೀಚೆಗೆ ನಾನು ನನ್ನ ಸುತ್ತಲಿನ ಜನರಿಗೆ ವಾಸ್ತವವನ್ನು ಮನವರಿಕೆ ಮಾಡುವುದು ಬಿಟ್ಟಿದ್ದೇನೆ. ಕೊನೆಗೂ ನಾನು ಎಷ್ಟೊಂದು ಸುಳ್ಳುಗಳನ್ನು ಸುಳ್ಳೆಂದು ಸಾಬೀತು ಮಾಡಬೇಕು? ಅದೂ ಎಷ್ಟು ಜನರಿಗೆ? ಇದು ನನ್ನನ್ನು ಒಂದು ಹೆಜ್ಜೆ ಮುಂದಿಟ್ಟು ಕೇಳುವಂತೆ ಮಾಡುತ್ತದೆ: ಇದು ನಿಜಕ್ಕೂ ಜನರನ್ನು ತಪ್ಪು ದಾರಿಗೆಳೆದ, ಅಥವಾ ಅಪಪ್ರಚಾರದಿಂದ ದಾರಿತಪ್ಪಿಸಲಾದ ಪ್ರಕರಣವೇ ಅಥವಾ ಜನರು ಆಳದಲ್ಲಿ ಅದು ತಮ್ಮ ಸುಪ್ತಮನಸ್ಸಿನಲ್ಲಿರುವ ಕೆಲವು ಪೂರ್ವಗ್ರಹಗಳನ್ನು ತೃಪ್ತಿಪಡಿಸುವುದರಿಂದಾಗಿ ಈ ಸುಳ್ಳುಗಳನ್ನು ನಂಬಲು ಬಯಸುತ್ತಾರೆಯೆ?

ನನ್ನ ತಲೆಯನ್ನು ಗೋಡೆಗೆ ಬಡಿದುಕೊಳ್ಳುವ ಬದಲು ನಾನು ಜೈಲಿನಲ್ಲಿ ನನ್ನ ಸಮಯವನ್ನು ಒಂಟಿಯಾಗಿ ಕಳೆಯುತ್ತೇನೆ. ಕೆಲವೊಮ್ಮೆ ಇದೆಷ್ಟು ಅಸ್ವಸ್ಥಗೊಳಿಸುವಂತದ್ದಾಗಿದ್ದರೂ, ವಾಸ್ತವದಲ್ಲಿ ಕಳೆದೆರಡು ವರ್ಷಗಳಲ್ಲಿ ನನ್ನಲ್ಲಾದ ಬದಲಾವಣೆ ಎಂದರೆ ಇದೇ. ನನ್ನ ಪರಿಸ್ಥಿತಿಗಳು ಮೌನ ಮತ್ತು ಏಕಾಂತದಲ್ಲಿ ಸಾಂತ್ವನ, ನೆಮ್ಮದಿ ಪಡೆಯುವುದನ್ನು ಅನಿವಾರ್ಯಗೊಳಿಸಿವೆ. ನನ್ನ ಬಂಧನದ ಮೊದಲ ದಿನಗಳಿಗೆ ಹೋಲಿಸಿದಾಗ ಗಂಟೆಗಟ್ಟಲೆ ನನ್ನ ಚಿಕ್ಕ ಸೆಲ್ಲಿನಲ್ಲಿ ಒಂಟಿಯಾಗಿ ಕೂಡಿಹಾಕಿದಾಗ ಕಿಕ್ಕಿರಿತದ ಕಿರಿಕಿರಿ, ಒದ್ದಾಟ ಅನುಭವಿಸುವುದನ್ನು ಈಗ ನಿಲ್ಲಿಸಿಬಿಟ್ಟಿದ್ದೇನೆ. ಈಗ ನನ್ನ ನ್ಯಾಯಾಲಯ ಭೇಟಿಯ ವೇಳೆ ಜನರು ಮತ್ತು ವಾಹನ ಓಡಾಟದ ದೃಶ್ಯ ಮತ್ತು ಸದ್ದು ನನ್ನಲ್ಲಿ ಕಿರಿಕಿರಿ ಮತ್ತು ಆತಂಕ ಉಂಟುಮಾಡುತ್ತವೆ. ಹುಚ್ಚು ಹಿಡಿಸುವ ಜನಸಂದಣಿಗಿಂತ ದೂರ, ಜೈಲಿನ ಶಾಂತತೆಯು ನನಗೆ ಸಾಮಾನ್ಯ ಎನಿಸಿಬಿಟ್ಟಿದೆ. ನಾನು ಯೋಚಿಸುತ್ತೇನೆ: ನಾನು ಬಂಧನಕ್ಕೆ ಒಗ್ಗಿಬಿಡುತ್ತಿದ್ದೇನೆಯೆ?

ಇತ್ತೀಚೆಗೆ ಸುಳ್ಳು ಆರೋಪದ ಮೇಲೆ ಹದಿನಾಲ್ಕು ವರ್ಷಗಳನ್ನು ಜೈಲಿನಲ್ಲಿ ಕಳೆದ ಒಬ್ಬ ವ್ಯಕ್ತಿ ಬರೆದ ಆತ್ಮಕತೆಯನ್ನು ನಾನು ಓದಿದೆ. ಈ ಪುಸ್ತಕದಲ್ಲಿ ತಾನು ಜೈಲಿನಲ್ಲಿ ಕಳೆದ ಸಮಯವನ್ನು ವಿವರಿಸಿದ ಮೇಲೆ ಅವರು, “ಸಾಮಾನ್ಯ ಜೀವನ”ಕ್ಕೆ ಮರಳುವಲ್ಲಿ ತಾನು ಎದುರಿಸಿದ ಸಂಕಷ್ಟಗಳ ಕುರಿತು ಬರೆಯುತ್ತಾ ಹೋಗುತ್ತಾರೆ. ವರ್ಷಗಳ ಕಾಲ ಅವರು ಸ್ವತಂತ್ರರಾಗಲು ಬಯಸಿದ್ದರು. ಕೊನೆಗೂ ಅವರು ಸ್ವತಂತ್ರರಾದಾಗ ಈ ಸ್ವಾತಂತ್ರ್ಯವನ್ನು ಏನು ಮಾಡುವುದು ಎಂದು ಅವರಿಗೆ ಗೊತ್ತಿರಲಿಲ್ಲ ಅಥವಾ ಮರೆತುಹೋಗಿತ್ತು. ವರ್ಷಗಳ ಕಾಲ ತನ್ನ ಗೆಳೆಯರನ್ನು ಭೇಟಿ ಮಾಡಬೇಕು ಎಂದು ಅವರು ಹಾತೊರೆದಿದ್ದರು. ಆದರೆ, ಬಿಡುಗಡೆಯಾದ ಬಳಿಕ ತನ್ನ ಹೆಚ್ಚಿನ ಸಮಯವನ್ನು ಜನರು ಮತ್ತು ಜನಸಂದಣಿಯನ್ನು ತಪ್ಪಿಸಿಕೊಳ್ಳುತ್ತಾ ಮನೆಯಲ್ಲಿ ಒಂಟಿಯಾಗಿ ಕಳೆಯುತ್ತಿದ್ದರು. ನಾನು ಆಗಾಗ ಯೋಚಿಸುತ್ತೇನೆ ರೋಹಿತ್, ಸಾಮಾನ್ಯಕ್ಕೆ ಮರಳಲು ನನಗೆ ಎಷ್ಟು ಸಮಯ ಬೇಕಾಗಬಹುದು?

ಎಲ್ಲಾ ಸಂಕಷ್ಟಗಳಿಗೆ ಹೊರತಾಗಿಯೂ ಜೈಲು- ನನ್ನ ಜೀವನದಲ್ಲಿ ಹಲವಾರು “ಧನಾತ್ಮಕ” ಬದಲಾವಣೆಗಳಿಗೆ ದಾರಿಮಾಡಿದೆ. ನಾನು ಧೂಮಪಾನ ಬಿಟ್ಟಿದ್ದೇನೆ. ನಾನು ಎರಡು ವರ್ಷಗಳಿಂದ ಮೊಬೈಲ್ ಇಲ್ಲದೇ ಬದುಕಿದ್ದೇನೆ ಎಂಬುದರ ಅರ್ಥ: ನಾನು ಸಾಮಾಜಿಕ ಮಾಧ್ಯಮ ಎಂಬ ಡ್ರಗ್ಗಿನಿಂದಲೂ ದೂರವಾಗಿದ್ದೇನೆ. ನಾನು ಟ್ವೀಟ್ ಸರಣಿಗಳಲ್ಲಿ ಮುಳುಗಿದ್ದಲ್ಲಿಂದ ಇಲ್ಲಿಗೆ ಬಂದಿದ್ದೆ. ಆದರೀಗ ಪ್ರತೀ ತಿಂಗಳು ಹಲವಾರು ಕಾದಂಬರಿಗಳನ್ನು ಓದುತ್ತೇನೆ. ಕೊನೆಗೂ, ಹಲವಾರು ವರ್ಷಗಳ ಪ್ರಯತ್ನದ ನಂತರ ನನ್ನ ನಿದ್ದೆಯ ಚಕ್ರ ಸಾಮಾನ್ಯ ಸ್ಥಿತಿಗೆ ಬಂದಿದೆ. (ನನ್ನ ತಾಯಿಗೆ ಇದನ್ನು ಕೇಳಿ ಸಂತೋಷವಾಗಬಹುದು). ಮುಂಜಾವಿನ ಹೊತ್ತಿಗೆ ಮಲಗಲು ಹೋಗುವ ಬದಲು, ಈಗ ನಾನು ಸೂರ್ಯೋದಯದ ಹೊತ್ತಿಗೆ ಏಳುತ್ತೇನೆ. ಮುಂಜಾನೆಗಳನ್ನು ಸುಂದರ ಎಂದು ಕರೆಯಬಹುದು. ದೇಶದಾದ್ಯಂತದ ಜೈಲುಗಳಲ್ಲಿ ರಾಜಕೀಯ ಕೈದಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಪತ್ರವನ್ನು ಕೊನೆಗೊಳಿಸುವ ಮೊದಲು ಇವುಗಳನ್ನು ಹೇಳುವುದು ಮುಖ್ಯ ಎಂದು ಭಾವಿಸಿದೆ. ತಮ್ಮ ಸ್ವಂತಕ್ಕೆ ಭಾರೀ ಅಪಾಯಗಳನ್ನು ಎದುರಿಸಿಯೂ ಪ್ರಜಾಪ್ರಭುತ್ವ, ಜಾತ್ಯತೀತತೆಗಾಗಿ, ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರಿಸುತ್ತಿರುವ ಆ ಎಲ್ಲಾ ಜನರು ಜೈಲಿನ ಕುರಿತು ಚಿಂತಿಸುವುದನ್ನು ಬಿಡಬೇಕು. ಜೈಲು ನಿಮ್ಮ ಕೆಲವು ದುರಭ್ಯಾಸಗಳನ್ನು ಬಿಡಲು ನಿಮಗೆ ನೆರವಾಗಬಹುದು. ಆದು ನಿಮ್ಮನ್ನು ಶಾಂತ, ತಾಳ್ಮೆಯ, ಸ್ವಾವಲಂಬಿ ಮನುಷ್ಯನನ್ನಾಗಿಯೂ ಮಾಡಬಹುದು.- ಅದು ನನ್ನನ್ನು ಮಾಡಿರುವಂತೆಯೇ.

ಕೊನೆಯದಾಗಿ, ಕೈದಿಗಳ ನಡುವೆ ಆಪ್ತಸಮಾಲೋಚಕರಾಗಿ ನಿಮ್ಮ ಕೆಲಸದ ಬಗ್ಗೆಯೂ ನನಗೆ ಅರಿವಿದೆ ಎಂದು ನಾನಿಲ್ಲಿ ಹೇಳಬೇಕು. ಎರಡು ತಿಂಗಳುಗಳ ಹಿಂದೆ ನಾನು ನಿಮ್ಮ “ಕ್ರಿಸ್ಮಸ್ ಇನ್ ತಿಹಾರ್ ಎಂಡ್ ಅದರ್ ಸ್ಟೋರೀಸ್” (ತಿಹಾರಿನಲ್ಲಿ ಕ್ರಿಸ್ಮಸ್ ಮತ್ತಿತರ ಕತೆಗಳು) ಪುಸ್ತಕ ಓದಿದೆ. ಎಂತಾ ಒಂದು ಸವಿಯಾದ ಕಿರುಪುಸ್ತಕವನ್ನು ನೀವು ಬರೆದಿದ್ದೀರಿ.  ಈ ಬಂಧೀಖಾನೆಯಲ್ಲಿ ಬರ ಇಲ್ಲದವುಗಳು ಎಂದರೆ ಕತೆಗಳು. ಎಲ್ಲಾ ರೀತಿಯ ಕತೆಗಳು- ಸಂಘರ್ಷದ, ಪರಿಶ್ರಮ ಮತ್ತು ದೃಢ ಸಂಕಲ್ಪದ, ತಹತಹಿಕೆಯ, ಕೊನೆಯಿಲ್ಲದ ನಿರೀಕ್ಷೆಯ ಕತೆಗಳು, ಬಡತನ ಮತ್ತು ಹೃದಯ ಹಿಂಡುವ ಅನ್ಯಾಯದ ಕತೆಗಳು, ಸ್ವಾತಂತ್ರ್ಯಕ್ಕಾಗಿ ಮಾನವನ ಹಂಬಲದ ಕತೆಗಳು,  ಜೊತೆಗೆಯೇ ಮಾನವನ ದುಷ್ಟತೆಯ ಅತ್ಯಂತ ಕರಾಳವಾದ ಕತೆಗಳು. ನಾನು ಬೇಗನೇ ಒಬ್ಬ ಸ್ವತಂತ್ರ ಮನುಷ್ಯನಾಗಿ ಕಾಫಿ ಕುಡಿಯುತ್ತಾ, ಅವುಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬಹುದು ಎಂದು ಆಶಿಸುತ್ತೇನೆ.

ಅಲ್ಲಿಯ ವರೆಗೆ ಕಾಳಜಿ ವಹಿಸಿ ಮತ್ತು ಬರೆಯುತ್ತಾ ಇರಿ.
ನಿಮ್ಮವ,
ಉಮರ್ ಖಾಲಿದ್

ಕನ್ನಡಕ್ಕೆ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಭಾಷಾತೀತವಾಗಿ ಏಕಭಾಷೆಯಾಗುತ್ತಿರುವ “Hate Speech” – ದ್ವೇಷದ ಭಾಷೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...