ಗುರುವಾರ ಬೆಳಿಗ್ಗೆ ಹಲವು ರಾಜ್ಯಗಳಲ್ಲಿನ PFI ಸಂಘಟನೆಗೆ ಸಂಬಂಧಿಸಿದ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ (NIA), ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ್ದು ನೂರಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ದೇಶಾದ್ಯಂತ ಕೇರಳ, ಕರ್ನಾಟಕ, ಮಹಾರಾಷ್ಟ್ರ ಉತ್ತರ ಪ್ರದೇಶ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಭಯೋತ್ಪಾದನ ನಿಗ್ರಹ ದಳದಿಂದ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆದಿದೆ. ಹೆಚ್ಚಿನ ಮುಖಂಡರನ್ನು ಕೇರಳ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ನೀಡುವುದು, ತರಬೇತಿ ಶಿಬಿರಗಳನ್ನು ಆಯೋಜಿಸಿ ಉಗ್ರ ಗುಂಪುಗಳೊಂದಿಗೆ ಸೇರಲು ಪಿಎಫ್‌ಐ ಪ್ರಚೋದಿಸುತ್ತಿವೆ ಎಂಬ ಆರೋಪಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದಷ್ಟೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪಿಎಫ್‌ಐ ಮುಖಂಡರ ಮೇಲೆ ಯುಎಪಿಎ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಅದನ್ನು ಖಂಡಿಸಿ ಪ್ರತಿಭಟನೆಗಳು ಸಹ ವ್ಯಕ್ತವಾಗಿದ್ದವು.
“ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪಿಎಫ್‌ಐ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ನಮ್ಮ ಭಿನ್ನಮತವನ್ನು ಹತ್ತಿಕ್ಕಲು ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ಫ್ಯಾಸಿಸ್ಟ್ ಆಳ್ವಿಕೆಯನ್ನು ಖಂಡಿಸುತ್ತೇವೆ” ಎಂದು ಪಿಎಫ್‌ಐ ಹೇಳಿಕೆಯಲ್ಲಿ ತಿಳಿಸಿದೆ.
ಇದು NIA ನಡೆಸಿದ ಅತಿ ದೊಡ್ಡ ಕಾರ್ಯಾಚಾರಣೆ-ದಾಳಿ ಎಂದು ಹೇಳಲಾಗುತ್ತಿದೆ. ಗುಪ್ತಚರ ಇಲಾಖೆಗಳ ಮಾಹಿತಿ ಆಧರಿಸಿ ಬೆಳಿಗ್ಗಿನ ಜಾವ 3.30ಕ್ಕೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ದ್ವೇಷ ಭಾಷಣ ತಡೆಯುವಲ್ಲಿ ಟಿ.ವಿ. ಆಂಕರ್‌ಗಳ ಪಾತ್ರ ಮುಖ್ಯವಾಗಿದೆ: ಸುಪ್ರೀಂ ಕೋರ್ಟ್


