‘40 ಪರ್ಸೆಂಟ್ ಬಿಜೆಪಿ ಸರ್ಕಾರ’ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದ್ದು, ಇದರ ಬೆನ್ನಲ್ಲೇ ಬಿಜೆಪಿಯು ಪ್ರತಿದಾಳಿ ಮಾಡಲು ಯತ್ನಿಸುತ್ತಿದೆ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರಗಳನ್ನು ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದೆ. ಇದಕ್ಕೆ ಸಿದ್ದರಾಮಯ್ಯನವರೂ ಸವಾಲು ಹಾಕಿದ್ದಾರೆ. ಕುತೂಹಲಕಾರಿ ಸಂಗತಿ ಏನೆಂದರೆ- ಈ ಹಿಂದೆಯೇ ಬಿಜೆಪಿ ಮಾಡಿದ್ದ ಸಾಲು ಸಾಲು ಆರೋಪಗಳಿಗೆ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂಬುದು ತಿಳಿದು ಬಂದಿದೆ.
“ಸಿದ್ದರಾಮಯ್ಯ ಅವರ ವಿರುದ್ಧ ನೀಡಿದ್ದ ರಾಜಕೀಯ ಜಾಹೀರಾತುಗಳಿಗೆ ಸೂಕ್ತ ಸಾಕ್ಷ್ಯಾಧಾರ ಮತ್ತು ಪುರಾವೆ ಮತ್ತು ಸಮರ್ಪಕ ದಾಖಲೆಗಳನ್ನು ಚುನಾವಣಾ ಆಯೋಗದ ಮಾಧ್ಯಮ ದೃಢೀಕರಣ, ಪ್ರಮಾಣೀಕರಣ ಸಮಿತಿಗೆ ಬಿಜೆಪಿಗೆ ಒದಗಿಸಿರಲಿಲ್ಲ. ಕೇವಲ ಪತ್ರಿಕಾ ವರದಿಗಳನ್ನಷ್ಟೇ ಸಲ್ಲಿಸಿತ್ತು. ಇವುಗಳನ್ನು ಸಾಕ್ಷ್ಯಗಳಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿತ್ತು” ಎಂದು ‘ದಿ ಫೈಲ್’ ತನಿಖಾ ಜಾಲತಾಣ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ದಾಖಲೆಗಳನ್ನು ಸಲ್ಲಿಸದೇ ಕೇವಲ ಪತ್ರಿಕಾ ತುಣುಕುಗಳನ್ನಷ್ಟೇ ಸಲ್ಲಿಸಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿತ್ತು” ಎಂದು ವರದಿ ಉಲ್ಲೇಖಿಸಿದೆ.
“2018ರ ಚುನಾವಣೆ ಘೋಷಣೆಗೂ ಮುನ್ನ ಸಿದ್ದರಾಮಯ್ಯ ಅವರ ವಿರುದ್ಧ ವಿಫಲ ಸರ್ಕಾರ, ಜನ ವಿರೋಧಿ ಸರ್ಕಾರ, ಮೂರು ಭಾಗ್ಯ ಹೆಸರಿನಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ್ದ ರಾಜಕೀಯ ಜಾಹೀರಾತುಗಳು ಟಿ ವಿ ಗಳಲ್ಲಿ ಪ್ರಸಾರವಾಗಿತ್ತು. ಆದರೆ, ಈ ಆರೋಪಗಳನ್ನು ಸಾಬೀತುಪಡಿಸುವಂತಹ ಯಾವುದೇ ಸಮರ್ಥನೆ, ದಾಖಲೆ, ಸಾಕ್ಷಾಧಾರ ಮತ್ತು ಪುರಾವೆಗಳನ್ನು ಚುನಾವಣಾ ಆಯೋಗದ ಮಾಧ್ಯಮ ದೃಢೀಕರಣ ಸಮಿತಿ ಮತ್ತು ಪ್ರಮಾಣೀಕೃತ ಸಮಿತಿಗೆ ಬಿಜೆಪಿ ಒದಗಿಸಿರಲಿಲ್ಲ. ಹೀಗಾಗಿ ರಾಜಕೀಯ ಆರೋಪಗಳನ್ನೊಳಗೊಂಡ ಜಾಹೀರಾತುಗಳ ಪ್ರಸಾರಕ್ಕೆ ಚುನಾವಣಾ ಆಯೋಗ ತಡೆ ಒಡ್ಡಿತ್ತು” ಎಂಬುದು ತಿಳಿದುಬಂದಿದೆ.
“ಒಂದು ವಾಚ್‌ನ ಕಥೆ, ಅನ್ನಭಾಗ್ಯ ಕನ್ನ ಭಾಗ್ಯ, ಕೆಪಿಸಿ ಕಲ್ಲಿದ್ದಲು ಟೆಂಡರ್‌ನಲ್ಲಿ ರೂಪಾಯಿ 400 ಕೋಟಿ ಗುಳುಂ, ಶೇ.10 ಕಮಿಷನ್ ವಾಚ್, ಇಂದಿರಾ ಕ್ಯಾಂಟೀನ್ ಕೋಟಿ ಕೋಟಿ ಲೂಟಿ, ಬಿಬಿಎಂಪಿ ಕಸ ವಿಲೇವಾರಿ ರೂಪಾಯಿ 400 ಕೋಟಿ ಗುಳುಂ, ಹ್ಯುಬ್ಲಾಟ್ ವಾಚ್: 40 ಲಕ್ಷ, ಸೋಲಾರ್ ಪವರ್ ಟೆಂಡರ್ ಕೆಪಿಸಿ ಕಲ್ಲಿದ್ದಲು ಟೆಂಡರ್, ಬಿಬಿಎಂಪಿ ಕಸ ವಿಲೇವಾರಿ ಟೆಂಡರ್ ರೂ 1,500 ಕೋಟಿ ಗುಳುಂ, ಗೂಂಡಾ ಸರ್ಕಾರ, ರೈತರನ್ನು ಬಲಿಕೊಟ್ಟ ಸರ್ಕಾರ, ನಗರಗಳನ್ನು ನರಕ ಮಾಡಿದ ಸರ್ಕಾರ, ದೇಶಭಕ್ತರ ಕೊಲೆಗಳನ್ನು ತಡೆಯದ ಸರ್ಕಾರ, ಸಮಾಜ ಒಡೆಯುವ ಸರ್ಕಾರ, ನಕಲಿ ಭಾಗ್ಯಗಳ ಭ್ರಷ್ಟ ಸರ್ಕಾರ, ಲೋಕಾಯುಕ್ತರಿಗೆ ರಕ್ಷಣೆ ಇಲ್ಲ” ಇತ್ಯಾದಿ ಆರೋಪಗಳನ್ನು ಒಳಗೊಂಡ ಜಾಹೀರಾತುಗಳನ್ನು ನೀಡಿದ್ದ ಬಿಜೆಪಿ, ಇದಕ್ಕೆ ಪುರಾವೆಗಳನ್ನೇ ಒದಗಿಸಿರಲಿಲ್ಲ.
ಬಿಜೆಪಿ ನೀಡಿದ್ದ ಈ ಜಾಹೀರಾತುಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಕ್ಷೇಪಣೆ ಎತ್ತಿತ್ತು. ಈ ಸಂಬಂಧ ಚುನಾವಣಾ ಆಯೋಗದ ಮಾಧ್ಯಮ ದೃಢೀಕರಣ ಸಮಿತಿ ಕಳಿಸಿದ್ದ ನೋಟೀಸ್‌ಗೆ ಉತ್ತರಿಸಿದ್ದ ಬಿಜೆಪಿ, ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸಮರ್ಪಕವಾದ ದಾಖಲೆಗಳನ್ನು ಒದಗಿಸಿರಲಿಲ್ಲ ಎಂಬ ಅಂಶ 2018ರ ಮೇ 5ರಂದು ಚುನಾವಣಾ ಆಯೋಗ ನಡೆಸಿದ್ದ ಸಭೆಯ ನಡವಳಿಯಿಂದ ತಿಳಿದು ಬಂದಿದೆ ಎಂದು ‘ದಿ ಫೈಲ್’ ವರದಿ ಮಾಡಿದೆ.
ಕಾಂಗ್ರೆಸ್‌ನಿಂದ ಡರ್ಟಿ ಪಾಲಿಟಿಕ್ಸ್: ಬೊಮ್ಮಾಯಿ ಆರೋಪ
“ಪೇ ಸಿಎಂ ಅಭಿಯಾನ ಮಾಡುತ್ತಿರುವ ಕಾಂಗ್ರೆಸ್ಸಿನದ್ದು ಡರ್ಟಿ ಪಾಲಿಟಿಕ್ಸ್” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಶನಿವಾರ ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಯಾವುದಾದರೂ ವಿಚಾರವಿದ್ದರೆ, ನೇರವಾಗಿ ಮಾತಾಡಬೇಕು, ದಾಖಲೆ ನೀಡಬೇಕು ಹಾಗೂ ತನಿಖೆಯಾಗಬೇಕು. ಯಾವುದೇ ವಿಚಾರವಿಲ್ಲದೆ, ಪೂರ್ಣಪ್ರಮಾಣದ ತಯಾರಿ ಇಲ್ಲದೆ ಸದನಕ್ಕೆ ಬರುತ್ತಾರೆ. ಇದು ಅವರ ನೈತಿಕತೆಯ ಅಧ:ಪತನ ತೋರುತ್ತದೆ. ನೈತಿಕತೆ ಇಲ್ಲದೆ ಹೆಸರು ಕೆಡಿಸುವ ಕಾರ್ಯಕ್ರಮವಿದು” ಎಂದು ದೂರಿದ್ದಾರೆ.
ಇದನ್ನೂ ಓದಿರಿ: ಯುಪಿ: ದಲಿತ ಬಾಲಕಿಗೆ ಶಿಕ್ಷಣ ನೀಡಲು ನಿರಾಕರಿಸಿದ ಶಿಕ್ಷಕಿ
“ಜನಪರ ಕಾಳಜಿ ಇಲ್ಲದೆ ಡರ್ಟಿ ಪಾಲಿಟಿಕ್ಸ್ ಮಾಡಿಕೊಂಡು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಇದೆಲ್ಲಾ ಕರ್ನಾಟಕದಲ್ಲಿ ಸಾಧ್ಯವಿಲ್ಲ. ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ” ಎಂದಿದ್ದಾರೆ.
ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳನ್ನು ಗುರಿಯಾಗಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ, “ನಾನು ಅದರ ಭಾಗವಲ್ಲ. ಹಾಗಾಗಿ ಏನೋ ಹೇಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.



Paycm ಸರಿಯಿದೆ! ಬೊಮ್ಮಣ್ಣ ನಿಮ್ಮದೇ ಸರ್ಕಾರ ಅಧಿಕಾರದಲ್ಲಿ ಇದೆಯಲ್ಲ, ನೀವು ಕಂಡುಹಿಡಿದಿರುವ ಕಾಂಗ್ರೆಸ್ಸ್ ನವರ ಎಲ್ಲಾ ಭ್ರಷ್ಟಾಚಾರಗಳನ್ನು ತನಿಖೆಗೆ ಆದೇಶಿಸಿ ಎಲ್ಲಾ ಕಾಂಗ್ರೆಸ್ಸಿನ ಭ್ರಷ್ಟರನ್ನು ಜೈಲಿಗೆ ಹಾಕಿಸಿ. ಆಗ ಕರ್ನಾಟಕದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿದ ಕೀರ್ತಿ ತಮಗೆ ಬರುತ್ತದೆಯಲ್ಲ. ಹಾಗೆಯೇ ದೇಶದಲ್ಲಿ ಭ್ರಷ್ಟ ಕಾಂಗ್ರೆಸ್ ಮುಕ್ತವಾಗಿ. ಕೇವಲ 40% ಬಿಜೆಪಿ ಸರ್ಕಾರ ಮಾತ್ರ ಉಳಿಸಿಕೊಳ್ಳಬಹುದು! ಮುಂದಿನ ಚುನಾವಣೆಗಳಲ್ಲಿ ಜನರ ಬಳಿ ಹೋಗಿ ನೀವೇ ಹೇಳಿ ನಾವು ಕೇವಲ 40% ಮಾತ್ರ ಕಮಿಷನ್ ತೆಗೊಳ್ಳುತ್ತೀವಿ ಆದ್ರೆ ಕಾಂಗ್ರೇಸ್ ನವರು 100% ತೆಗೊಂಡು ಎಲ್ಲವನ್ನೂ ಗುಳುಂ ಮಾಡ್ತಿದ್ರು ಅದಕ್ಕೆ ಈಗ ಅವರನ್ನೆಲ್ಲ ಜೈಲಿಗೆ ಕಳುಹಿಸಿದ್ದೇವೆ. ನಮ್ದು ಕೇವಲ 40% ಸರ್ಕಾರ ಅಂತ ಎದೆ ತಟ್ಟಿ ಹೇಳಿ. ಮುಂದೆ ನೀವೆಲ್ಲಾ ನಮ್ಮ ಪಕ್ಷಕ್ಕೆ ಓಟ್ ಹಾಕಬೇಕು ಇಲ್ದಿದ್ರೆ ನಿಮ್ಗೂ ಜೈಲೇ ಗತಿ ಅಂತ ಗಟ್ಟಿಯಾಗಿ ಎದೆತಟ್ಟಿ ಧಮ್ ಇದ್ರೆ ಹೇಳಿ ಬೊಮ್ಮಣ್ಣ!