Homeಮುಖಪುಟ‘ಕಾಂತಾರ’ ವಿಮರ್ಶೆ: ಭೂತಾರಾಧನೆಯ ಆಚೆ-ಈಚೆ ಒಂದಿಷ್ಟು...

‘ಕಾಂತಾರ’ ವಿಮರ್ಶೆ: ಭೂತಾರಾಧನೆಯ ಆಚೆ-ಈಚೆ ಒಂದಿಷ್ಟು…

- Advertisement -
- Advertisement -

ತುಳುನಾಡಿನ ಸಾಂಸ್ಕೃತಿಕ ಪರಿಸರವನ್ನು ತೆರೆಗೆ ತರುವ ಮೂಲಕ ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚರ್ಚೆಯಲ್ಲಿದೆ. ತುಳುನಾಡಿನ ಅಸ್ಮಿತೆಗಳಾದ ದೈವಾರಾಧನೆ (ಭೂತಾರಾಧನೆ), ಕಂಬಳದಂತಹ ಸಾಂಸ್ಕೃತಿಕ ಸಂಗತಿಗಳನ್ನು ಚಿತ್ರಿಸಿರುವ ‘ಕಾಂತಾರ’ಕ್ಕೆ ನಿರೀಕ್ಷೆಗೂ ಮೀರಿ ಜನಮೆಚ್ಚುಗೆ ಸಿಗುತ್ತಿದೆ.

‘ಕಾಂತಾರ’- ಒಂದು ದಂತಕತೆ ಎಂದು ರಿಷಬ್‌ ಟ್ಯಾಗ್‌ಲೈನ್ ನೀಡಿರುವ ಕಾರಣ, ಇಲ್ಲಿ ಕಥೆಯೊಳಗೆ ವೈಜ್ಞಾನಿಕತೆಯನ್ನು ಹುಡುಕಲಾಗದು. ಆದರೆ ಜನಸಮೂಹವನ್ನು ಪ್ರಭಾವಿಸುತ್ತಿರುವ ಈ ಸಿನಿಮಾ ಪ್ರತಿನಿಧಿಸುತ್ತಿರುವ ಸಾಂಸ್ಕೃತಿಕ ಪರಿಸರದ ಚರಿತ್ರೆಯಂತೂ ಗಮನಾರ್ಹ.

ಕಾಂತಾರದಲ್ಲಿ ಕಾಡು, ಕಾಡಿನ ಅಧಿಕಾರಿಗಳು ಒಂದು ಕಡೆ ಇದ್ದರೆ, ಪ್ರಧಾನವಾಗಿ ಭೂತಾರಾಧನೆ ಸುತ್ತ ಹೆಣೆಯಲಾದ ಹೋರಾಟದ ಕಥನ ಮತ್ತೊಂದು ಕಡೆ ಇದೆ. ಈ ಎರಡೂ ಕೂಡ ಒಂದರೊಳಗೊಂದು ಬೆರೆತು ಸಾಗುತ್ತವೆ. ದೈವಾರಾಧನೆಯ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಇರುವುದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಚೆಯ ಸಾಂಸ್ಕೃತಿಕ ಜಗತ್ತು ಕುತೂಹಲಗೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತುಳುನಾಡಿನ ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪಗೌಡ, ಡಾ.ಬಿ.ಎ.ವಿವೇಕ್‌ ರೈ, ಪ್ರೊ.ಪುರುಷೋತ್ತಮ ಬಿಳಿಮಲೆ ಮೊದಲಾದವರ ಅಧ್ಯಯನಗಳು, ಬರಹಗಳು ಭೂತಾರಾಧನೆಯನ್ನು ತಿಳಿಯಲು ಸಹಕಾರಿಯಾಗಬಹುದು. ವಿದ್ವಾಂಸರ ಚಿಂತನೆ ಹಾಗೂ ಮಾತುಗಳಿಂದ ಆಯ್ದ ಕೆಲವು ಟಿಪ್ಪಣಿಗಳನ್ನು ಉಲ್ಲೇಖಿಸಿ, ‘ಕಾಂತಾರ’ದತ್ತ ನೋಡುವುದು ಸೂಕ್ತ. (ಇಲ್ಲಿನ ಟಿಪ್ಪಣಿಗಳನ್ನು ‘ಋತುಮಾನ’ದಲ್ಲಿ ಪ್ರಕಟಿಸಲಾದ ಸಂದರ್ಶನಗಳು ಹಾಗೂ ಕೆಲವು ಬಿಡಿಬರಹಗಳಿಂದ ಆಯ್ದುಕೊಳ್ಳಲಾಗಿದೆ)

  • ತುಳು ಸಂಸ್ಕೃತಿಯಲ್ಲಿ ನಾಗಾರಾಧನೆ, ಭೂತಾರಾಧನೆ, ಯಕ್ಷಗಾನಗಳು ಗಮನ ಸೆಳೆಯುತ್ತವೆ. ದೈವಗಳ ಹುಟ್ಟು, ಸಾಧನೆ ಮತ್ತು ಸಾವಿಗೆ ಸಂಬಂಧಿಸಿದ ಕಥನಗಳನ್ನು ಪಾಡ್ಡನಗಳೆಂದು ಕರೆಯುತ್ತಾರೆ. ಪಾಡ್ದನಗಳು ತುಳುವಿನ ಅತ್ಯಂತ ಶ್ರೀಮಂತವಾದ ಮೌಖಿಕ ಮಹಾಕಾವ್ಯಗಳು.
  • ಕರಾವಳಿಯಲ್ಲಿ ಮೂರು ಬಗೆಯ ಸಮಾಜಗಳು ಸಕ್ರಿಯವಾಗಿವೆ ಎಂದು ಬಿಳಿಮಲೆಯವರು ಗುರುತಿಸುತ್ತಾರೆ. 1) ದ್ವಿಜ ಸಮಾಜ. 2) ಜಾತಿ ಸಮಾಜ. 3) ಬಂಧು ಸಮಾಜ. ದ್ವಿಜ ಸಮಾಜದಲ್ಲಿ ಮಾಧ್ವರು, ವೈಷ್ಣವರು, ಸ್ಮಾರ್ತರು, ಗೌಡ ಸಾರಸ್ವತರು- ಈ ರೀತಿಯ ಸಮುದಾಯಗಳು ಬರುತ್ತವೆ. ಜಾತಿ ಸಮಾಜದಲ್ಲಿ ಬಿಲ್ಲವ, ಗೌಡ, ಬಂಟ ಮೊದಲಾದ ಸಮುದಾಯಗಳಿವೆ. ಮೂಲತಃ ಬಂಧು ಸಮಾಜದ ರೀತಿ ನೀತಿಗಳನ್ನು ಅನುಸರಿಸುತ್ತಿದ್ದ ಈ ಗುಂಪುಗಳು ಜಾತಿ ಸಮಾಜವಾಗಿ ಬದಲಾದವು. ಆದರೆ ಬಂಧು ಸಮಾಜವು ಈ ಎರಡು ಸಮಾಜಕ್ಕಿಂತ ಭಿನ್ನ. ನಿಜವಾದ ಅರ್ಥದಲ್ಲಿ ತಳಸ್ತರಕ್ಕೆ ಸೇರಿದ ಈ ಗುಂಪಿನಲ್ಲಿ ಕರಾವಳಿಯಲ್ಲಿರುವ ಸುಮಾರು 32 ಸಮುದಾಯಗಳು ಸೇರಿವೆ. ಆದಿ ದ್ರಾವಿಡ, ಅಜಿಲ, ನಲ್ಕೆ, ಮಾಯಿಲ, ಭೈರ, ಮೇರ, ಮಲೆಕುಡಿಯರು, ಕೊರಗ, ಹೊಲೆಯ, ಗೊಡ್ಡರು, ಮಾಲೆ, ಚಮ್ಮಾರ್‌, ಮೋಚಿ, ಮಾದಿಗ- ಹೀಗೆ ಪಟ್ಟಿ ಬೆಳೆಯುತ್ತದೆ. ಈ ಮೂರು ಸಮಾಜದೊಂದಿಗೆ ಇರುವ ಸಾಂಸ್ಕೃತಿಕ ಪರಿಸರವನ್ನು ನಾವು ಗಮನಿಸಬೇಕು.

ಇದನ್ನೂ ಓದಿರಿ: ‘ಸೀತಾರಾಮಂ’ ಸಿನಿಮಾ ಹಿಂದುತ್ವ ರಾಜಕಾರಣಕ್ಕೆ ಒಳೇಟು ನೀಡಿದ್ದು ಹೀಗೆ…

  • ಈ ತಳಸ್ತರದ ದಲಿತರು ಈಗಾಗಲೇ ಸತ್ತು ಹೋದ ಹಿರಿಯರನ್ನು ‘ಕಾರಣವರ್‌’ ಅಥವಾ ‘ಕಾರ್ನೂರು’ ಎಂದು ಕರೆಯುತ್ತಾರೆ. ಸತ್ತು ಹೋದ ಹಿರಿಯರೇ ದೈವಗಳು. ದಲಿತ ಸಮುದಾಯಗಳು ಭೂತಾರಾಧನೆಯನ್ನು ಆತುಕೊಳ್ಳಲು ಅದು ಕೂಡ ಮೂಲತಃ ಹಿರಿಯರ ಆರಾಧನೆಯೇ ಆಗಿರುವುದು ಮುಖ್ಯ ಕಾರಣ.
  • ದಲಿತರ ಸಾಂಸ್ಕೃತಿಕ ವೀರರಿಗೆ ಸಂಬಂಧಿಸಿದ ನಿರೂಪಣೆಗಳು ದುಃಖಾಂತ್ಯವಾಗಿರುತ್ತವೆ. ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ದಲಿತ ನಾಯಕರು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ ಸತ್ತು ಹೋಗುವುದನ್ನು ಕಾಣಬಹುದು. ದಲಿತ ನಾಯಕರ ಸಾವಿನ ಆನಂತರವೂ ನಿರೂಪಣೆಗಳು ಸಾಕಷ್ಟು ದೀರ್ಘವಾಗಿ ಬೆಳೆಯುತ್ತವೆ. ಅಕಾಲ ಮರಣವನ್ನುಪ್ಪುವ ನಾಯಕರು ಅತಿಮಾನುಷ ವಲಯದಲ್ಲಿ ಉಗ್ರರೂಪಿಯಾಗಿ ಪರಿವರ್ತನೆ ಹೊಂದುತ್ತಾರೆ. ತನ್ನ ಸಾವಿಗೆ ಕಾರಣವಾದ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಾರೆ, ಸೇಡು ತೀರಿಸಿಕೊಳ್ಳುತ್ತಾರೆ.
  • ತಳಸ್ತರದ ಪ್ರಮುಖ ಧಾರ್ಮಿಕ ಆಚರಣೆಗಳು ಮಧ್ಯಂತರ ಜಗತ್ತನ್ನು ಪ್ರತಿನಿಧಿಸುತ್ತವೆ. ಈ ಮಧ್ಯಂತರ ಜಗತ್ತು ತಾತ್ಕಾಲಿಕವಾದದ್ದು. ಅದರ ಒಂದೆಡೆಯಲ್ಲಿ ಅಲೌಕಿಕ ಜಗತ್ತಿದ್ದರೆ, ಇನ್ನೊಂದೆಡೆ ಲೌಕಿಕ ಜಗತ್ತು ಇರುತ್ತದೆ. ಅಲೌಕಿಕ ಜಗತ್ತಿಗೆ ಸೇರಿದ ವೀರರು ಅಥವಾ ಪುರಾಣ ವೀರರು ಮತಾಚರಣೆಯ ಸಂದರ್ಭದಲ್ಲಿ ಈ ಮಧ್ಯಂತರ ಜಗತ್ತಿಗೆ ಇಳಿದು ಬರುತ್ತಾರೆ. ಹಾಗೆ ಇಳಿದು ಬಂದವರನ್ನು ಆವಾಹಿಸಿಕೊಳ್ಳಲು ಲೌಕಿಕ ಜಗತ್ತಿನಿಂದ ವ್ಯಕ್ತಿಯೊಬ್ಬ ಮಧ್ಯಂತರ ಜಗತ್ತಿಗೆ ಏರಿ ಹೋಗುತ್ತಾರೆ. ಇವನೇ ದೈವದ ಪೂಜಾರಿ ಅಥವಾ ಪಾತ್ರಿ. ವ್ಯಕ್ತಿಯ ಮೇಲೆ ದೈವ ಆವಾಹನೆಯಾಗುವಾಗಲೂ ಹಲವಾರು ಅಂಶಗಳನ್ನು ಆತ ಪಾಲಿಸಬೇಕಾಗುತ್ತದೆ. ಇಡೀ ದೈವ ಕಾಣಿಸಿಕೊಳ್ಳುವುದೇ ಮಧ್ಯಂತರದಲ್ಲಿ. ವಾಸ್ತವ ಮತ್ತು ಅವಾಸ್ತವಗಳ ನಡುವಿನ ಜಗತ್ತದು. ಭೂತ ಎಲ್ಲಿ ನಡೆಯುತ್ತದೆ, ಅದರ ಸಿದ್ಧತೆ ಏನು? ಅದರ ಆವರಣ ಯಾವುದು?- ಇತ್ಯಾದಿಗಳು ನಿಗದಿಯಾಗಿರುತ್ತವೆ.
  • ಭೂತವನ್ನು ಆವಾಹಿಸಿಕೊಳ್ಳುವ ವ್ಯಕ್ತಿ ನಿರ್ದಿಷ್ಟ ವೇಷಭೂಷಣವನ್ನು ಹಾಕಬೇಕು. ನೀವು ಬೇಕೆಂದಲ್ಲಿ ದೈವ ಕಾಣಿಸಿಕೊಳ್ಳುವುದಿಲ್ಲ. ಯಾವುದೋ ವ್ಯಕ್ತಿಯ ಮೇಲೆ ದೈವ ಆವಾಹಿಸಿಕೊಳ್ಳುವುದಿಲ್ಲ. ಅದಕ್ಕೊಂದು ಸಿದ್ಧತೆ ಇರುತ್ತದೆ. ಒಬ್ಬ ವ್ಯಕ್ತಿ ದೈವದ ಮಾಧ್ಯಮವಾಗಿ ರೂಪಾಂತರಗೊಳ್ಳುವುದು ಮುಖ್ಯ. ಪಾಡ್ದನಗಳನ್ನು ಹಾಡುತ್ತಾರೆ. ಈ ಪಾಡ್ದನಗಳು ಒಂದು ರೀತಿಯ ಮಾನಸಿಕ ಸಿದ್ಧತೆಯನ್ನು ತಂದುಕೊಡುತ್ತವೆ. ವೇಷಭೂಷಣಗಳು ದೈಹಿಕ ಸ್ವರೂಪವನ್ನು ತಂದುಕೊಟ್ಟರೆ, ಪಾಡ್ದನಗಳು ಮಾನಸಿಕ ಸಿದ್ಧತೆಯನ್ನು ನೀಡುತ್ತವೆ.
  • ಅಲೌಕಿಕ ವ್ಯಕ್ತಿತ್ವವನ್ನು ಕಟ್ಟಿಕೊಡಲು ವೇಷ ಭೂಷಣ ಮುಖ್ಯವಾಗುತ್ತದೆ. ಇವತ್ತು ಯಕ್ಷಗಾನದ ಪ್ರಭಾವದಿಂದಾಗಿ ಚೆಂದವಾಗಿ ವೇಷ ಭೂಷಣ ಮಾಡುತ್ತಾರೆ. ಆದರೆ ವಾಸ್ತವಿಕವಾಗಿ ಭೂತರಾಧನೆಯನ್ನು ನೋಡಿದರೆ ಭೂತಗಳ ಸ್ವರೂಪ, ಬಹಳ ದೊರಗಾದ, ಸಿಟ್ಟು, ಅಸಹನೆಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಇರುತ್ತದೆ. ಸಿಟ್ಟು, ಅಸಹನೆಯನ್ನು ದೈವಗಳು ಪ್ರದರ್ಶಿಸುತ್ತವೆ. ಎತ್ತರದ ಸ್ತರದಲ್ಲಿ ಆರ್ಭಟಿಸುವುದು, ಬೆಂಕಿ ಹಿಡಿದುಕೊಳ್ಳುವುದು, ಬೆಂಕಿಯಲ್ಲಿ ನುಗ್ಗುವುದು, ಬೆಂಕಿಯ ಮೇಲೆ ಹಾರುವುದು, ಬೆಂಕಿಯನ್ನು ಎದೆಗೆ ಇಟ್ಟುಕೊಳ್ಳುವುದು, ಕತ್ತಿಯಿಂದ ಕಡಿದುಕೊಳ್ಳುವುದು, ರಕ್ತ ಭರಿಸುವುದು, ಕೋಳಿಯನ್ನು ತಿನ್ನುವುದು ಇತ್ಯಾದಿ ರೌದ್ರತೆಯನ್ನು ಭೂತಾರಾಧನೆ ವೇಳೆ ಕಾಣುತ್ತೇವೆ.

ಇದನ್ನೂ ಓದಿರಿ: ರಂಜನೆ, ಚಿಂತನೆ ಹದಬೆರೆತ ‘ಗುರು ಶಿಷ್ಯರು’

  • ಭೂತಗಳು ಪ್ರದರ್ಶಿಸುವ ಸಿಟ್ಟು- ಯಾರ ಸಿಟ್ಟು? ಅದು ಭೂತ ಕಟ್ಟುವ ವ್ಯಕ್ತಿಯ ಸಿಟ್ಟೋ? ಅಥವಾ ಆತ ಪ್ರತಿನಿಧಿಸುವ ಶೋಷಿತ ಸಮುದಾಯದ್ದೋ? “ಅದು ಭೂತ ಕಟ್ಟುವ ವ್ಯಕ್ತಿಯ ಸಿಟ್ಟಲ್ಲ, ಆತ ಪ್ರತಿನಿಧಿಸುವ ಸಮಾಜದ ಸಿಟ್ಟು. ಭೂತಾರಾಧನೆ ಇರುವಂತಹದ್ದೇ ಸಿಟ್ಟು ಮತ್ತು ಪ್ರತಿಭಟನೆಗಾಗಿ” ಎನ್ನುತ್ತಾರೆ ಡಾ.ಕೆ.ಚಿನ್ನಪ್ಪಗೌಡರು.
  • ನಮ್ಮ ಇತಿಹಾಸ ಸುಂದರವಾದ ಸೌಮ್ಯವಾದದ್ದಲ್ಲ. ಈ ಇತಿಹಾಸ ಎಲ್ಲರಿಗೂ ಒಳ್ಳೆಯದ್ದನ್ನು ಮಾಡಿಲ್ಲ. ಇಲ್ಲಿ ಅನೇಕ ಅನ್ಯಾಯಗಳಾಗಿವೆ ಎಂಬುದನ್ನು ಭೂತಗಳ ಇತಿಹಾಸ ಹೇಳುತ್ತದೆ. ಪರ್ಯಾಯವಾಗಿ ಹಾಗೂ ಸಮರ್ಥವಾಗಿ ಕರಾವಳಿಯ ಚರಿತ್ರೆಯನ್ನು ಕಟ್ಟುವುದಾದರೆ ಭೂತಾರಾಧನೆ ಸಮೃದ್ಧವಾದ ಆಕರ ಸಾಮಗ್ರಿ. ವಾಸ್ತವ ಬದುಕಿನಲ್ಲಿ ಸಾಧ್ಯವಾಗದ್ದನ್ನು ಸತ್ತ ಮೇಲೆ ಈ ನಾಯಕರು ತೀರಿಸಿಕೊಳ್ಳುತ್ತಾರೆ. ಇದೊಂದು ಮಾನಸಿಕ ಪರಿಕಲ್ಪನೆಯೂ ಹೌದು. ವಾಸ್ತವ ಎಂದು ತಿಳಿದುಕೊಳ್ಳಬಾರದು. ಆದರೆ ಈ ಕಥನಗಳ ಸಂದೇಶ ಏನೆಂದು ಅರಿಯಬೇಕು.
  • ಭೂತಗಳು ಮಾಯವಾಗುವುದೆಂದರೆ ಸವರ್ಣೀಯರು ಕೊಂದಿದ್ದಾರೆಂದು ಅರ್ಥ. ಕರಾವಳಿಯ ದೈವಗಳೆಲ್ಲ ಮಧ್ಯವಯಸ್ಸಿನಲ್ಲಿ ಮಾಯವಾಗುವುದನ್ನು ಕಾಣುತ್ತೇವೆ. ತಳ ಸಮುದಾಯದ ನಾಯಕರು ಒಂದು ಮಟ್ಟಿಗಿನ ಚಿಂತನೆಗಳು ಬೆಳೆದ ವಯಸ್ಸಿನಲ್ಲಿ ಸ್ಥಾಪಿಕ ಶಕ್ತಿಗಳನ್ನು ಮುಖಾಮುಖಿಯಾಗಿದ್ದಾರೆ. ಹಾಗೆ ಮುಖಾಮುಖಿಯಾದಾಗ ಹೋರಾಡಿ ಗೆಲ್ಲಲಾಗದೆ ಸಾಯುತ್ತಾರೆ. ಸಾಯುವಾಗ ಕೊನೆಯಲ್ಲಿ, “ಈಗ ಗೆಲ್ಲಲು ಆಗಲಿಲ್ಲ, ನಾವು ಸತ್ತ ಮೇಲೆ ನೋಡಿಕೊಳ್ಳುತ್ತೇವೆ” ಎನ್ನುತ್ತವೆ ಭೂತ. ಬದುಕಿದ್ದಾಗ ತೊಂದರೆ ಕೊಟ್ಟವನಿಗೆ ದೈವಗಳಾಗಿ ಬಂದು ಸಮಸ್ಯೆಗಳನ್ನು ಒಡ್ಡುತ್ತವೆ ಎಂಬ ನಂಬಿಕೆ ಬೆಳೆದಿದೆ. ಹೀಗಾಗಿ ತೊಂದರೆ ಕೊಟ್ಟ ಕುಲದವನು ದೈವದ ಆಶಯಗಳನ್ನು ಈಡೇರಿಸಬೇಕು. ಹೀಗೆ ದೈವಾರಾಧನೆ ಸಮುದಾಯಗಳನ್ನು ಬೆಸೆಯುತ್ತಿದೆ. ದೈವಾರಾಧನೆಯ ವೇಳೆ ತುಳುನಾಡಿದ ಎಲ್ಲ ಸಮುದಾಯಗಳು ಭಾಗಿಯಾಗುವುದನ್ನು ಕಾಣಬಹುದು. ಒಂದೊಂದು ಸಮುದಾಯ ಒಂದೊಂದು ಜವಾಬ್ದಾರಿ ಹೊತ್ತು ಮುನ್ನಡೆಯುತ್ತವೆ, ಆಚರಣೆಯಲ್ಲಿ ಭಾಗಿಯಾಗುತ್ತವೆ.

‘ಕಾಂತಾರ’ ಕತೆಯೊಳಗೆ…

ಭೂತಾರಾಧನೆ ಹಾಗೂ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸ್ಥೂಲವಾಗಿ ನೋಡಿದ ಬಳಿಕ ‘ಕಾಂತಾರ’ ಕಥೆಯನ್ನು ವಿಶ್ಲೇಷಿಸುವುದಾದರೆ ಎರಡು ಸ್ವರೂಪವಾಗಿ ವಿಭಾಗಿಸಿಕೊಳ್ಳಬಹುದು. 1. ದೈವ, ತಳ ಸಮುದಾಯ ಹಾಗೂ ಅರಸು ಕುಟುಂಬದ ಸಂಬಂಧ. 2. ತಳಸಮುದಾಯ ಹಾಗೂ ಅಧಿಕಾರಶಾಹಿ ವರ್ಗ.

ಸ್ವಾತಂತ್ರ್ಯ ಪೂರ್ವದಲ್ಲಿದ್ದ ಅರಸನಿಗೆ ನೆಮ್ಮದಿಯನ್ನು ದೈವ ಕರುಣಿಸಿದ ಕಾರಣ, ಆತ ಅರಣ್ಯ ಭೂಮಿಯನ್ನು ಅಸ್ಪಶ್ಯ ಸಮುದಾಯಕ್ಕೆ ನೀಡುತ್ತಾನೆ. ಆದರೆ ಅರಸನ ಮಗ, ಈ ಭೂಮಿಯನ್ನು ವಾಪಸ್ ಪಡೆಯಲು ಯತ್ನಿಸಿದಾಗ ದೈವ ಮಾಯವಾಗುತ್ತದೆ. ‘ಇಲ್ಲಿ ದೈವ ಮಾಯವಾದದ್ದಾ?’, ಅಥವಾ ‘ಕೊಲೆಯಾದದ್ದಾ?’ ಎಂಬ ಸಂಭಾಷಣೆ ಬರುತ್ತದೆ. ‘ಮಾಯವಾದದ್ದು’ ಎಂಬ ಆಲೋಚನೆಯನ್ನಷ್ಟೇ ಪ್ರೇಕ್ಷಕನಿಗೆ ದಾಟಿಸಲು ನಿರ್ದೇಶಕರು ಯತ್ನಿಸಿದ್ದಾರೆ. ಆ ನಂತರ ಅರಸನ ಮಗ ಸಾಯುತ್ತಾನೆ. ಸ್ವಾತಂತ್ರ್ಯ ನಂತರ, ಅಂದರೆ 90ರ ದಶಕಕ್ಕೆ ಕಥೆ ಜಂಪ್ ಆಗುತ್ತದೆ. ಅಸ್ಪೃಶ್ಯರು ಮತ್ತು ಗುತ್ತಿನ ಮನೆಯ ನಡುವೆ ಕದನವನ್ನು ಹೆಣೆಯಲಾಗಿದೆ. ಅಸ್ಪೃಶ್ಯರ ನಾಯಕ ‘ಶಿವ’ (ರಿಷಬ್ ಶೆಟ್ಟಿ) ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ದೈವ ಮೈದುಂಬುತ್ತದೆ. ಆತನ ರುದ್ರಾವತಾರ ತಾಳಿ ಎಲ್ಲರನ್ನೂ ಸದೆಬಡಿದು ಸಮುದಾಯವನ್ನು ಉಳಿಸುತ್ತಾನೆ. ಕೊನೆಗೆ ಆತನೂ ಮಾಯವಾಗುತ್ತಾನೆ. ‘ಮಾಯ’ವಾಗುವ ಪರಿಕಲ್ಪನೆಗೆ ಚಾರಿತ್ರಿಕ ಮಹತ್ವ ಇಲ್ಲದಂತಾಗಿದೆ. ಕೇವಲ ದಂತಕತೆ ಹಾಗೂ ನಂಬಿಕೆಯ ಅನುಭವವಾಗಿ ಇಲ್ಲಿ ಕಟ್ಟಿಕೊಟ್ಟಂತೆ ಭಾಸವಾಗುತ್ತದೆ.

ಇದನ್ನೂ ಓದಿರಿ: ಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

“ಅರಸು ಮನೆತನ ಮತ್ತು ದೈವ, ಸಮುದಾಯದ ನಡುವಿನ ಕತೆ”ಯೇ ಇಲ್ಲಿ ಮುಖ್ಯವಾಗಿದ್ದು, ಇದನ್ನು ಎರಡೂವರೆ ತಾಸು ಮುಂದುವರಿಸಲು ಅಧಿಕಾರಶಾಹಿ ಹಾಗೂ ಸಮುದಾಯದ ನಡುವಿನ ಕತೆ ಪಾತ್ರ ವಹಿಸಿದೆ. ಒಡೆಯ ಹಾಗೂ ಅಸ್ಪೃಶ್ಯರ ಕದನವೇ ಮುಖ್ಯವಾದ ಕತೆಯಲ್ಲಿ ಅರಣ್ಯ ಕಾನೂನು, ಇಲ್ಲಿಯೇ ಹುಟ್ಟಿ ಬೆಳೆದ ಜನರಿಗೆ ಅರಣ್ಯಾಧಿಕಾರಿ ಒಡ್ಡುವ ತಕರಾರು, ಸರ್ಕಾರಿ ವ್ಯವಸ್ಥೆಗೆ ಪ್ರತಿರೋಧ ಒಡ್ಡಿ ತೊಂದರೆ ಸಿಲುಕುವ ಶಿವ ಹಾಗೂ ಆತನ ಸ್ನೇಹಿತರು- ಇತ್ಯಾದಿ ಎಳೆಗಳು ಕಥೆಯನ್ನು ಸಾಗಿಸುತ್ತವೆಯಾದರೂ ಕೊನೆಯಲ್ಲಿ ಇದ್ಯಾವುದೂ ಮಹತ್ವ ಪಡೆಯುವುದಿಲ್ಲ. ಆರಂಭದಿಂದಲೂ ಎಗರಾಡುವ ಅರಣ್ಯಾಧಿಕಾರಿ ಮುರುಳೀಧರ್‌ (ಕಿಶೋರ್‌) ಕೊನೆಯಲ್ಲಿ ಸಮುದಾಯದ ಪರ ನಿಲ್ಲುತ್ತಾನೆ. ‘ಶಿವ, ನನ್ನ ನಿನ್ನ ಆಶಯ ಒಂದೇ’ ಎನ್ನುತ್ತಾನೆ. ಒಂದು ಕ್ಷಮಾಪಣೆಯಲ್ಲಿ ಎಲ್ಲವೂ ಮುಗಿದು ಹೋಗುತ್ತದೆ. ಕಾಡಿನ ಜನರ ಹಿತಾಸಕ್ತಿಯನ್ನು ಚಿಂತಿಸುವ ಯಾವನೇ ವ್ಯಕ್ತಿ, ಅಲ್ಲಿನ ಜನರ ಬದುಕು ಹಾಗೂ ಬದುಕಿನ ರೀತಿಗೆ ಕಿಡಿಯಾಗುವುದಿಲ್ಲ. ಶಿವನ ಪ್ರೇಯಸಿ ‘ಲೀಲಾ’ಳನ್ನು ‘ಇನ್‌ಪ್ಲೂಯೆನ್ಸ್‌ ಮೇಲೆ ಕೆಲಸಕ್ಕೆ ಸೇರಿದವಳು’ ಎಂದು ಮುರುಳೀಧರ್‌ ಮೂದಲಿಸುತ್ತಾನೆ. ಮತ್ತೊಂದು ಸನ್ನಿವೇಶದಲ್ಲಿ, “ನೀನು ನೀಡಿದ ಸರ್ವಿಸ್‌ಗೆ ಪ್ರಮೋಷನ್‌ ಅಂತೂ ಕೊಡಲು ಆಗಲ್ಲ, ಸೆಸ್ಪೆಂಡ್‌ ಮಾಡಬಹುದು” ಎನ್ನುತ್ತಾನೆ. ಕೊನೆಯವರೆಗೂ ಖಳನಾಯಕನಂತೆ ಅಬ್ಬರಿಸಿದ ಅರಣ್ಯಾಧಿಕಾರಿ, ಕೊನೆಯಲ್ಲಿ ಒಮ್ಮೆಲೇ ಮೃದುವಾಗುವುದು ಅಸಹಜ ಎನಿಸಿದರೂ, ಅದು ಪ್ರೇಕ್ಷಕನಿಗೆ ಬಾಧಿಸುವುದಿಲ್ಲ. ದೈವದ ಮಾಯಕ ಎಲ್ಲವನ್ನೂ ಮರೆಸಿಬಿಡುತ್ತದೆ.

ದೈವವಾಗಿ ವೇಷ ಧರಿಸಿ ಕುಣಿಯುವಲ್ಲಿ ರಿಷಬ್ ನಿಜಕ್ಕೂ ಮನಸೂರೆಗೊಳ್ಳುತ್ತಾರೆ. ಭೂತ ಕಟ್ಟುವವರನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ, ಅದನ್ನು ಅನುಕರಿಸಿರುವುದು ಸ್ಪಷ್ಟವಾಗುತ್ತದೆ. ಜನಪ್ರಿಯ ಸಿನಿಮಾವೊಂದರಲ್ಲಿ ಸಾಂಸ್ಕೃತಿಕ ಪರಿಕರಗಳು ಪ್ರಶ್ನಾತೀತವಾಗಿ ನಿಲ್ಲಬಹುದು. ಉದಾಹರಣೆಗೆ ಭೂತವನ್ನು ಆವಾಹಿಸಿಕೊಳ್ಳುವಾಗ ಒಂದು ಪೂರ್ವ ಸಿದ್ಧತೆ, ಮಾನಸಿಕತೆ ಅಗತ್ಯ ಎಂದು ಹೇಳುವುದಾದರೆ, ಕ್ಲೈಮ್ಯಾಕ್ಸ್‌ನಲ್ಲಿ ಇದ್ದಕ್ಕಿದ್ದಂತೆ ಭೂತವು ಬಂದು ಶಿವನ ಮೈದುಂಬುವುದು ಪ್ರಶ್ನಾರ್ಹವಾಗುತ್ತದೆ. ಮತ್ತೊಂದು ಆಯಾಮದಲ್ಲೂ ಯೋಚಿಸಲು ಅವಕಾಶವಿದೆ. ಪದೇ ಪದೇ ಶಿವನನ್ನು ಕಾಡುತ್ತಿರುವ ಭೂತ, ಕೊನೆಯಲ್ಲಿ ಶಿವನಿಗೆ ದರ್ಶನವಾಗುತ್ತದೆ. ಆ ನಂತರ ಶಿವ ಕೆಲಕಾಲ ಮೌನಕ್ಕೆ ಒಳಗಾಗುತ್ತಾನೆ. ಇದನ್ನೇ ‘ಭೂತವನ್ನು ಆವಾಸಿಕೊಳ್ಳಲು ಇರುವ ಪೂರ್ವ ಮಾನಸಿಕ ಸ್ಥಿತಿ’ ಎನ್ನಬಹುದೋ?

ಹಲ್ಲು ಉಬ್ಬು ಇರುವ ಮಹಿಳೆಯನ್ನು ಅಪಹಾಸ್ಯ ಮಾಡಿರುವುದು, ಆಕೆಯ ಹಲ್ಲನ್ನು ಕೋಣದ ಹಲ್ಲಿನೊಂದಿಗೆ ಸಮೀಕರಿಸಿ ತೋರಿಸುವುದು ಹಾಸ್ಯದ ನೆಪದಲ್ಲಿ ಇಣುಕಿದ ಅಸೂಕ್ಷ್ಮಗಳು. ಗಂಭೀರವಾದ ಸನ್ನಿವೇಶಗಳಲ್ಲೂ ಸಂಭಾಷಣೆಯ ಮೂಲಕ ಹಾಸ್ಯವನ್ನು ಹೊಮ್ಮಿಸಲು ಯತ್ನಿಸಿರುವುದು ಅನಗತ್ಯ ಮನರಂಜನೆ ಎನಿಸುತ್ತದೆ. ಅಥವಾ ಗಂಭೀರ ಕತೆಯ ಬಗ್ಗೆ ತೋರುವ ಅಸಡ್ಡೆಯೂ ಆಗುವ ಸಾಧ್ಯತೆ ಇದೆ. ಅಸ್ಪೃಶ್ಯತೆಯ ವಿಚಾರವಾಗಿ ರಿಷಬ್ ದಿಟ್ಟ ನಿಲುವು ಪ್ರದರ್ಶಿಸಿರುವುದು ಮೆಚ್ಚುಗೆಯಾಗುತ್ತದೆ.

ಭೂತಾರಾಧನೆಯ ಸಂದರ್ಭದಲ್ಲಿ ರೌದ್ರಾವತಾರ ತಾಳುವ ಭೂತಗಳಾಗಲೀ, ಭೂತ ಕಟ್ಟುವ ಜನರಾಗಲೀ ವಾಸ್ತವದಲ್ಲಿ ಇನ್ನ್ಯಾರಿಗೋ ಕಿರಿಕಿರಿ ಮಾಡುವವರಲ್ಲ. ಈ ನೆಲೆಯಲ್ಲಿ ತುಳುನಾಡಿನ ಪತ್ರಕರ್ತ ನವೀನ್ ಸೂರಿಂಜೆಯವರು ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಅವುಗಳು ಇಲ್ಲಿ ಉಲ್ಲೇಖಾರ್ಹ.

“ದೈವಗಳು ನಮ್ಮನ್ನು ಕಾಯುತ್ತದೆ ಎಂಬುದು ಕರಾವಳಿಗರ ನಂಬಿಕೆ. ಮೇಲ್ವರ್ಗದ ಯಜಮಾನರ ಎದುರು ಕೆಲ ದೈವಗಳು ಮಾತನಾಡುವುದೇ ಇಲ್ಲ. ಉದಾಹರಣೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಎದುರು ಪಂಜುರ್ಲಿ ದೈವವು ಕೇವಲ ‘ಉದೋ ಪೆರ್ಗಡೇ ಉಧೋ’ ಎಂದಷ್ಟೇ ಹೇಳುತ್ತದೆ. ಹಾಗಾಗಿ ಜನರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ದೈವದ ಮೊರೆ ಹೋಗಬೇಕು ಎಂಬುದನ್ನು ಜನರ ತಲೆಗೆ ತುಂಬುವುದೇ ಒಂದು ರಾಜಕೀಯ ಅಜೆಂಡಾ. ದೈವ ಭೂಮಿ ಬಿಟ್ಟು ಕೊಡಲು ಒಪ್ಪಿಲ್ಲ ಅಂದುಕೊಳ್ಳಿ. ‘ಮಾಯೆರ್ದು ಮದಿಪು ಮಲ್ಲೆ’ (ದೈವಕ್ಕಿಂತ ಊರ ಮಾತು ದೊಡ್ಡದು) ಎಂದು ಮಧ್ಯಸ್ಥನೋ, ಊರ ಮುಖ್ಯಸ್ಥನೋ ಹೇಳಿದರೆ ದೈವ ಮರು ಮಾತಾಡುವಂತಿಲ್ಲ. ಊರ ಮುಖ್ಯಸ್ಥನ ಬಾಯಿಯಿಂದಲೋ, ಮುಖ್ಯಸ್ಥನಿಂದ ಸಂಬಳ ಪಡೆಯುವ ಮಧ್ಯಸ್ಥನ ಬಾಯಿಯಿಂದಲೋ ಬರುವ ಮದಿಪು ಯಾರ ಪರವಾಗಿರುತ್ತದೆ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.”

“ಕರಾವಳಿಯ ದೈವವೆಂದರೆ ಕ್ರೌರ್ಯವಲ್ಲ. ಶೂದ್ರ-ದಲಿತರ ದೈವ ಸಂಸ್ಕೃತಿಯನ್ನು ಪರಿಚಯಿಸಲು ಅಷ್ಟೊಂದು ಕ್ರೌರ್ಯವನ್ನು ವಿಜೃಂಭಿಸಬೇಕಿರಲಿಲ್ಲ. ಕರಾವಳಿಯ ಕಾಡಂಚಿನಲ್ಲಿ ವಾಸ ಮಾಡುವ ದಲಿತ ಆದಿವಾಸಿ ಕುಟುಂಬಗಳು ಮರಗಳ್ಳತನ ಮಾಡಿದ ಉದಾಹರಣೆಯೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶೂದ್ರ ದಲಿತ ಸಂಸ್ಕೃತಿ, ಆಚರಣೆಗಳೆಂದರೆ ಕ್ರೌರ್ಯದ ಪರಮಾವಧಿ ಎಂದು ಬಿಂಬಿಸುವ ಮೂಲಕ ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ?”

“ಅದೇನೇ ಆಗಲಿ ದಲಿತನೊಬ್ಬ ನಾಯಕನಾಗಿದ್ದಾನೆ ಎಂದು ಹೇಳಿಕೊಂಡು ಸಿನಿಮಾವನ್ನು ಅಪ್ಪಿಕೊಳ್ಳುವುದು ನಮ್ಮೊಳಗಿನ ರಾಜಕೀಯ ಅಪ್ರಭುದ್ದತೆಯಾಗುತ್ತದೆ. ಸಿನಿಮಾದಲ್ಲಿ ಹಿಡನ್ ಅಜೆಂಡಾವನ್ನು ಹೇಗೆ ತುರುಕಿಸಲಾಗುತ್ತೆ ಎಂಬುದಕ್ಕೆ ಇದೊಂದು ಉದಾಹರಣೆ. ದಕ್ಷಿಣ ಕನ್ನಡ ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಲೆಕುಡಿಯರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಪೊಲೀಸ್/ಅರಣ್ಯ/ ಕಂದಾಯ ಇಲಾಖೆ ಮಾಡುತ್ತೆ. ಮಲೆಕುಡಿಯರು ಕಾಡುತ್ಪತ್ತಿ ಸಂಗ್ರಹಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಲೆಕುಡಿಯರಿಗೆ ಕಿರುಕುಳ ನೀಡುತ್ತಾರೆ. ಮಲೆಕುಡಿಯರು ಡಿವೈಎಫ್ಐ ನೇತೃತ್ವದಲ್ಲಿ ಪೊಲೀಸರನ್ನೂ, ಅರಣ್ಯ ಇಲಾಖೆಯನ್ನು ಎದುರಿಸಿ ಯಶಸ್ವಿಯಾಗುತ್ತಾರೆ. ಇದು ವಾಸ್ತವ ಮತ್ತು ಹೀಗೆ ಮಾತ್ರ ಆಗಲು ಸಾಧ್ಯ.”

“ಇಂತಹ ಸಂದರ್ಭದಲ್ಲಿ ಊರಿನ ದೈವ/ಭೂತದ ಪಾತ್ರ ಏನಿರುತ್ತೆ? ಊರು ಉಳಿಸುವ ಹೋರಾಟದ ಮಧ್ಯೆ ಊರ ಜನಗಳ ನಡುವೆ ಮನಸ್ಥಾಪವಾಗಿದ್ದರೆ ಅವರನ್ನು ಒಂದುಗೂಡಿಸುವುದು ದೈವದ ಜವಾಬ್ದಾರಿ. ದೈವ ಪಾತ್ರಿ ಊರ ಜನಗಳ ಅಹವಾಲು ಕೇಳಿ ಆ ಬಳಿಕ ಎರಡೂ ಬಣಗಳ ಜನರ ಕೈ ಹಿಡಿದು ತನ್ನೆದೆಗೆ ಆತುಕೊಂಡು ಪ್ರೀತಿಯಿಂದ ಜನರನ್ನು ಒಟ್ಟುಗೂಡಿಸಬೇಕು. ಆದರೆ ಕಾಂತಾರದಲ್ಲಿ ಮಾಡಿದ್ದೇನು? ಭೂತ/ದೈವ ನೇಮದ ಒಂದು ಭಾವನಾತ್ಮಕ ದೃಶ್ಯವನ್ನು ಯಾರ ಪರ ವಕಾಲತ್ತು ಮಾಡಲು ಬಳಸಲಾಗಿದೆ? ತಲೆತಲಾಂತರಗಳಿಂದ ಕಾಡಂಚಿನಲ್ಲಿ ವಾಸವಾಗಿದ್ದ ದಲಿತರ ಭೂಮಿಯನ್ನು ಅತಿಕ್ರಮಿತ ಭೂಮಿ ಎಂದು ಅರಣ್ಯಾಧಿಕಾರಿ ಘೋಷಿಸುತ್ತಾನೆ. ಜನರ ಮಧ್ಯೆ ಘರ್ಷಣೆ ನಡೆಯುತ್ತದೆ. ಆಗ ದೈವ ತನ್ನ ಕೋಲ/ನೇಮದಲ್ಲಿ ಇಡೀ ಊರಿನ ಜನರ ಕೈ ಹಿಡಿದು ತನ್ನೆದೆಗೆ ಅಪ್ಪಿಕೊಂಡು ಒಟ್ಟುಗೂಡಿಸಬೇಕಿತ್ತು. ಆದರೆ ಕಾಂತಾರ ಸಿನೆಮಾದಲ್ಲಿ ದಲಿತರು ಮತ್ತು ಅವರನ್ನು ನಿತ್ಯ ಶೋಷಿಸುವ ಅರಣ್ಯಾಧಿಕಾರಿಗಳನ್ನು ಒಟ್ಟುಗೂಡಿಸುವ ದೃಶ್ಯವಿದೆ. ಇದು ದಲಿತರ ಭೂಮಿ ಹೋರಾಟದಿಂದ ಅವರನ್ನು ವಿಮುಖರನ್ನಾಗಿಸುವ ವ್ಯವಸ್ಥಿತ ಹುನ್ನಾರ.”

– ಈ ಮೇಲಿನ ಆಕ್ಷೇಪಗಳು ನಿಜಕ್ಕೂ ಚಿಂತನೆಗೆ ಹಚ್ಚಬೇಕು. ‘ಕಾಂತಾರ’ ದಂತಕತೆಯಾದರೂ ಈಗ ಪಡೆಯುತ್ತಿರುವ ಜನಪ್ರಿಯತೆ ಮುಖ್ಯವಾಗುತ್ತದೆ. ಒಂದು ಜನಪ್ರಿಯ ಕಲಾಪ್ರಕಾರ ಬೀರುವ ಪ್ರಭಾವವನ್ನು ಮರೆಯಲಾಗದು. ದೈವರಾಧನೆಯ ಎಲ್ಲ ಪರಿಕರಗಳನ್ನೂ ಒಂದು ಸಿನಿಮಾ ವ್ಯಾಪ್ತಿಯಲ್ಲಿ ತರಲಾಗದು ಎಂಬುದನ್ನೂ ಅಲ್ಲಗಳೆಯಲಾದು.

ಅಜನೀಶ್ ಲೋಕನಾಥ್ ಅವರ ಬಿಜಿಎಂ ಗುಂಗು ಹಿಡಿಸುತ್ತದೆ. ಮಲಯಾಳಂನ ‘ಅಯ್ಯಪ್ಪನುಂ ಕೋಶಿಯಂ’ ಸಿನಿಮಾದಲ್ಲಿನ ಬಿಜಿಎಂ ಛಾಯೆ ಅಲ್ಲಲ್ಲಿ ಕಂಡು ಬರುತ್ತದೆ. ಹಾಡುಗಳು ಚೆನ್ನಾಗಿವೆ. ಕೊನೆಯಲ್ಲಿ ಸಂಸ್ಕೃತ ಗೀತೆಯನ್ನು ಬಳಸುವ ಬದಲು ತುಳುವಿನ ಜಾನಪದೀಯ ಸೊಗಡಿಗೆ ಆದ್ಯತೆ ನೀಡಬಹುದಿತ್ತು.

ಇದನ್ನೂ ಓದಿರಿ: ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ಈ ಮಿತಿಗಳ ನಡುವೆ ಸಿನಿಮಾ ಯಶಸ್ವಿಯಾಗುತ್ತಿದೆ. ಮೊದಲಿನಿಂದ ಕೊನೆಯವರೆಗೂ ನೋಡಿಸಿಕೊಳ್ಳುವ ಗುಣವನ್ನು ಹೊಂದಿದೆ. ನಗು ತರಿಸುವ ಸಂಭಾಷಣೆ ಇದೆ. ತುಳುನಾಡಿನ ಸಾಂಸ್ಕೃತಿಕ ಪರಿಸರವನ್ನು ಢಾಳಾಗಿ ತೆರೆಗೆ ತರಲಾಗಿದೆ. ರಿಷಬ್ ಅವರ ಅಭಿನಯವಂತೂ ಮನಸೋರೆಗೊಳ್ಳುತ್ತದೆ. ಬಹುತೇಕ ಕರಾವಳಿ ಭಾಗದ ಕಲಾವಿದರೇ ಸಿನಿಮಾದಲ್ಲಿ ರಾರಾಜಿಸಿದ್ದಾರೆ. ಒಟ್ಟಾರೆಯಾಗಿ ಕರಾವಳಿಯ ಸಾಂಸ್ಕೃತಿಕ ಚರಿತ್ರೆಯನ್ನು ಅವಲೋಕನ ಮಾಡಲು ಹಾಗೂ ಈ ನೆಲದ ಕತೆಗಳಿಗೆ ಆದ್ಯತೆ ನೀಡಬೇಕೆಂದು ತಂತ್ರಜ್ಞರನ್ನು ಪ್ರೋತ್ಸಾಹಿಸಲು ಕಾಂತಾರ ಅವಕಾಶ ನೀಡಿದೆ.

ಕೊನೆಯ ಮಾತು…

ಇದು ಸಿನಿಮಾಕ್ಕೆ ಹೊರತಾದ ಮಾತಾಗಬಹುದು. ಆದರೆ ಹೇಳದಿದ್ದರೆ ಅಪೂರ್ಣವೆನಿಸುತ್ತದೆ. ದೈವಾರಾಧನೆಯು ಜನರನ್ನು ಒಗ್ಗೂಡಿಸುವ ಸಾಧನವಾಗಿ ಕರಾವಳಿಯ ಸಂಸ್ಕೃತಿ ರೂಪುಗೊಂಡಿದೆ. ಆದರೆ ಈ ನೆಲಮೂಲ ದೈವ ಪರಂಪರೆಯನ್ನು ವೈದೀಕರಿಸುವ ಅಥವಾ ಕೋಮುವಾದಿ ಅಜೆಂಡಾಗಳಿಗೆ ಬಳಸುವ ಕೆಲಸಗಳು ಆಗುತ್ತಿವೆ. ಕರಾವಳಿಯ ಜಾನಪದ ಚರಿತ್ರೆಯಲ್ಲಿ ಜೈನ ದೈವಗಳು ಇವೆ, ಮುಸ್ಲಿಂ ದೈವಗಳೂ ಇವೆ. ಆದರೆ ಈ ವೈವಿಧ್ಯತೆಗೆ ಪೆಟ್ಟು ನೀಡುವ ಕೆಲಸಗಳು ಇತ್ತೀಚಿನ ವರ್ಷಗಳಲ್ಲಿ ಬಿರುಸಾಗಿ ಸಾಗುತ್ತಿವೆ.

“ದೈವಸ್ಥಾನಗಳು ದೇವಸ್ಥಾನಗಳಾಗುತ್ತಿವೆ. ಭೂತಾರಾಧನೆಯ ಸ್ಥಳಗಳಲ್ಲಿ ಬ್ರಹ್ಮ ಕಳಸಗಳು ನಡೆಯುತ್ತಿವೆ. ಸುಲಕಲ್ಲ ಮುರವ ಬ್ಯಾರಿ ಮತ್ತು ಫಾತಿಮಾರ ಮಗ ಬಬ್ಬರ್ಯನು ಬಬ್ರುವಾಹನನ ಅವತಾರವೆಂದು ನಿರೂಪಿಸುವ ಕಥೆಗಳನ್ನು ಜನರು ಸುಲಭವಾಗಿ ನಂಬುತ್ತಿದ್ದಾರೆ. ದಲಿತ ಕೊರಗ ತನಿಯನನ್ನು ಸಪ್ತ ಮಾತೃಕೆಯರು ಸತ್ತುವರಿದಿದ್ದಾರೆ” ಎನ್ನುತ್ತಾರೆ ಪ್ರೊ.ಪುರುಷೋತ್ತಮ ಬಿಳಿಮಲೆ. ಇಂದಿನ ರಕ್ತಸಿಕ್ತ ರಾಜಕೀಯಕ್ಕೆ, ಹಿಂದುತ್ವ ಅಜೆಂಡಾಗಳಿಗೆ ‘ಕಾಂತಾರ’ವನ್ನು ಬಳಸಿಕೊಳ್ಳುವವರ ಕುರಿತು ಎಚ್ಚರಿಕೆ ವಹಿಸಬೇಕಾಗುತ್ತದೆ. ಎಲ್ಲ ಜನಪ್ರಿಯ, ಬಹುಸಂಖ್ಯಾತ ಪರಂಪರೆಗಳನ್ನು ತಮ್ಮವೆಂದು ಬಿಂಬಿಸಿಕೊಳ್ಳುವ ಸಂಘಪರಿವಾರದ ಆಟೋಪಗಳು ಅಷ್ಟು ಸುಲಭವಾಗಿ ಮುಗ್ಧ ಜನರಿಗೆ ಅರ್ಥವಾಗುವುದಿಲ್ಲ. ಈ ಸಿನಿಮಾದ ಹೊರತಾಗಿ ಹೇಳುವುದಾದರೆ ರಿಷಬ್‌, ಈಗಾಗಲೇ ತನ್ನ ಬಲಪಂಥೀಯತೆಯನ್ನು ಪ್ರದರ್ಶಿಸಿದ ನಿದರ್ಶನಗಳು ಇರುವುದರಿಂದ ಹಾಗೂ ಕಾಂತಾರಕ್ಕೆ ಬರುತ್ತಿರುವ ಅತಿಯಾದ ಜನಪ್ರಿಯತೆಯ ಕಾರಣ ಎಚ್ಚರ ವಹಿಸುವುದು ಅಗತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Nimage cinema dalli baruva comedy arta agilla ansutte. Alli baruva comedy dialogue galu namma oora kadeya bhashe… Nimge arta agilla antaadare nimma article na stop madi. Innu aa naveen surinje, aa vyakti modalindaloo mosaralli kallu hudukuva jaathi ge seridava. Eega neevu kooda avna jaathige serabedi….cinemavanna cinema tharane nododanna kaliyiri..

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...