ಕೆಮ್ಮಿನ ಸಿರಪ್ ಸೇವನೆ ಕಾರಣಕ್ಕೆ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವನಪ್ಪಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 4 ಭಾರತೀಯ ಔಷಧ ತಯಾರಕ ಕಂಪನಿಗಳ ಮೇಲೆ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಸೆಪ್ಟಂಬರ್ 29 ರಂದು ಕೆಮ್ಮಿನ ಸಿರಪ್ ಸೇವಿಸಿದ ಗ್ಯಾಂಬಿಯಾದ 66 ಮಕ್ಕಳು ಸಾವನಪ್ಪಿದ್ದರು. ಈ ಕುರಿತು ಡಬ್ಲುಎಚ್‌ಓ ಭಾರತ ಸರ್ಕಾರದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು. ಹಾಗಾಗಿ ಹರಿಯಾಣ ಮೂಲಕ 4 ಔಷಧ ಕಂಪನಿಗಳ ಮೇಲೆ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಹರ್ಯಾಣದ ಸೋನಿಪತ್‌ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ಕಂಪನಿಯು ಕೆಮ್ಮಿನ ಸಿರಪ್ ಅನ್ನು ತಯಾರಿಸಿತ್ತು. ಅದನ್ನು ಸೇವಿಸಿದ ಗ್ಯಾಂಬಿಯಾದ ಮಕ್ಕಳು ಮೂತ್ರಪಿಂಡದ ಹಾನಿ ಸಮಸ್ಯೆಯಿಂದ ಪ್ರಾಣ ಬಿಟ್ಟಿದ್ದರು. ಈ ಸಿರಪ್‌ಗಳನ್ನು ಗ್ಯಾಂಬಿಯಾ ದೇಶಕ್ಕೆ ಮಾತ್ರ ರಫ್ತು ಮಾಡಲಾಗಿದೆಯೆ ಅಥವಾ ಇತರ ದೇಶಗಳಿಗೂ ಕಳುಹಿಸಲಾಗಿದೆಯೇ ಎಂಬುದರ ಕುರಿತು ಕಂಪನಿ ಇನ್ನು ಮಾಹಿತಿ ನೀಡಿಲ್ಲ. ಈ ಕುರಿತು ಎಚ್ಚರಿಕೆ ವಹಿಸುವಂತೆ ಇತರ ದೇಶಗಳಿಗೆ ಡಬ್ಲುಎಚ್‌ಓ ತಿಳಿಸಿದೆ.
WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಸುದ್ದಿಗಾರರೊಂದಿಗೆ ಮಾತನಾಡಿ, “ಪ್ರೋಮೆಥಾಜಿನ್ ಓರಲ್ ಸಲ್ಯೂಷನ್, ಕೋಫೆಕ್ಸ್‌ಮಾಲಿನ್ ಮಕ್ಕಳ ಕೆಮ್ಮಿನ ಸಿರಪ್, ಮ್ಯಾಕೋಫ್ ಮಕ್ಕಳ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಔಷಧಿಗಳಾಗಿವೆ” ಎಂದು ತಿಳಿಸಿದ್ದಾರೆ.
ಈ ನಾಲ್ಕೂ ಉತ್ಪನ್ನಗಳ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಅವುಗಳು ಅಧಿಕ ಪ್ರಮಾಣದ ಡೈಥಿಲೀನ್ ಸ್ಟೈಕೋಲ್ ಮತ್ತು ಎಥಿಲೀನ್ ಗೈಕೋಲ್ ಅನ್ನು ಒಳಗೊಂಡಿವೆ ಎಂಬುದು ಖಚಿತಪಟ್ಟಿದೆ. ಈ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಇದುವರೆಗೂ ಡಬ್ಲುಎಚ್‌ಓ ಗ್ಯಾರಂಟಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ; ಗುಜರಾತ್ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ!


