ಆ ಕರಾವಳಿ ಕಡೆ ನಳಿನ ಕುಮಾರ್ ನಿರಂಜನ ಶೆಟ್ಟಿ ಉರುಫ್ ನಳಿನ ಕುಮಾರ್ ಕಟೀಲ್ ಅಂತ ಒಬ್ಬರು ಇದ್ದಾರೆ. ಇವರು ಫುಲ್ ಟೈಮ್ ರಾಜಕಾರಣಿ ಹಾಗೂ ಪಾರ್ಟ್ ಟೈಮ್ ಜ್ಯೋತಿಷಿ ಎಂದು ತಮ್ಮ ಊರಿನ ಸುತ್ತಮುತ್ತ ಜಗತ್‌ಪ್ರಸಿದ್ಧರಾಗಿದ್ದಾರೆ. ‘ನಮ್ಮ ಸರಕಾರ ಬಂದರೆ ಒಂದು ರೂಪಾಯಿ ಬೆಲೆ 40 ಡಾಲರ್ ಆಗಲಿದೆ’ ಎಂದು ಅವರು ಹಿಂದೊಮ್ಮೆ ಭವಿಷ್ಯ ನುಡಿದಿದ್ದರು. ತಾವು ಪ್ರಖರ ಹಿಂದುತ್ವವಾದಿ ಕಾರ್ಯಕರ್ತರು ಎಂದು ಗುರುತಿಸಿಕೊಂಡಿರುವುದರಿಂದ ಅವರನ್ನು ಅಲ್ಲಿನ ‘ಜನ್ ಸಾಧಾರಣ’ ಅವರನ್ನು ಮಂಗಳೂರಿನ ಸಂಸತ್ ಸದಸ್ಯರಾಗಿ ದೆಹಲಿಗೆ ಕಳಿಸಿದ್ದಾರೆ.
ವೃತ್ತಿಯಿಂದ ಗುತ್ತಿಗೆದಾರರಾಗಿರುವ ಇವರು ಕಳೆದ 20 ವರ್ಷಗಳಲ್ಲಿ ತಾವು ಮಾಡಿದ ಹಾಗೂ ಇತರರು ಮಾಡಿದ ಪಂಪ್ ವೆಲ್, ಟೋಲ್ ಗೇಟ್, ಹೆದ್ದಾರಿ, ರಾಜ್ಯಪಥ ಇತ್ಯಾದಿ ಸಿವಿಲ್ ಹಾಗೂ ಮತ್ತಿತರ ಕಾಮಗಾರಿಗಳ ಗುಣಮಟ್ಟದಿಂದಾಗಿ ಗುರುತಿಸಿಕೊಂಡವರು.

ಒಂದು ಕ್ಷಣಕ್ಕೆ ಅವರ ಜ್ಯೋತಿಷ್ಯ ವಿದ್ಯೆಯ ಪಾಂಡಿತ್ಯವನ್ನು ಮರೆತು ಅವರ ಇತ್ತೀಚಿನ ಒಂದು ಮಾತನ್ನು ನೆನಪಿಸಿಕೊಳ್ಳೋಣ. ಅವರು ಮೊನ್ನೆ ಒಂದು ಪ್ರಶ್ನೆ ಕೇಳಿದ್ದಾರೆ: “ಕಾಂಗ್ರೆಸ್‌ಗೆ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲಿಕ್ಕೆ ಆಗುತ್ತಿಲ್ಲ. ಇವರೇನು ದೇಶ ಆಳುತ್ತಾರೆ?” ಅಂತ. ಇದು ಅತ್ಯಂತ ಸಮಯೋಚಿತ ಪ್ರಶ್ನೆ.
“ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ, ಉಪಾಧ್ಯಕ್ಷರು ಯಾರು ಎಂದು ಕೇಳಿದರೆ ಅವರಲ್ಲಿ ಪ್ರಶ್ನೆ ಇಲ್ಲ. ಗಾಂಧಿ ಕುಟುಂಬದವರು ನಮಗೆ ಅಧಿಕಾರ ಬೇಡ ಎಂದು ದೂರ ಉಳಿದಂತೆ ಮಾಡುತ್ತಾರೆ. ಆದರೆ ನಿಜವಾದ ಅಧಿಕಾರ ಅವರ ಕುಟುಂಬದಲ್ಲಿಯೇ ಗಿರಕಿ ಹೊಡೆಯುತ್ತದೆ” ಎಂದು ಕಟೀಲ್ ಅವರು ಖರೆ ಮಾತು ಹೇಳಿದ್ದಾರೆ.
“ರಾಜ್ಯ ಚುನಾವಣೆಯಲ್ಲಿ ಕಮ್ಮಿ ಸೀಟು ಗೆದ್ದ ಅವಮಾನದಲ್ಲಿ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಕೊಟ್ಟರು. ಆ ನಂತರ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರಾಗಲು ಅವರಲ್ಲಿ ಅಭ್ಯರ್ಥಿಗಳೇ ಇರಲಿಲ್ಲ. ಆರೇಳು ತಿಂಗಳ ನಂತರ ಡಿ.ಕೆ ಶಿವಕುಮಾರ್ ಅವರು ಬಂದರು. ಆದರೆ ಅವರಿಗೆ ತಮ್ಮ ಕಾರ್ಯಕಾರಿಣಿ ಸಮಿತಿ ನೇಮಿಸಲು ಎರಡು ವರ್ಷ ಬೇಕಾಯಿತು. ಅಷ್ಟು ಕಷ್ಟಪಟ್ಟು ನೇಮಿಸಿದ ಸಮಿತಿಯಲ್ಲಿ ಎಕ್ಸ್ಪ್ರೆಸ್ ಟ್ರೇನ್‌ಗಿಂತಲೂ ಹೆಚ್ಚು ಜನ ಇದ್ದಾರೆ” ಎಂದು ಕಟೀಲು ಅವರು ಕೀಟಲೆ ಮಾಡಿದರು.
ಇಂಗ್ಲೆಂಡ್ ಮೂಲದ ಪಕ್ಷಿವಿಜ್ಞಾನಿ ಹಾಗೂ ಐಸಿಎಸ್ ಅಧಿಕಾರಿ ಅಲ್ಲಾನ ಆಕಟೋವಿಯನ ಹ್ಯುಮ ಅವರು 1885ಲ್ಲಿ ಸ್ಥಾಪಿಸಿದ ಭಾರತೀಯ ಕಾಂಗ್ರೆಸ್ ಪಕ್ಷ ತನ್ನ ಅಧ್ಯಕ್ಷನನ್ನು ತಾನು ಆಯ್ದುಕೊಳ್ಳುವ ತಾಕತ್ತು ಕಳೆದುಕೊಂಡಿತೇ? ತನ್ನ 137 ವರ್ಷದ ಇತಿಹಾಸದಲ್ಲಿ 97 ಜನ ಅಧ್ಯಕ್ಷರನ್ನು ನೋಡಿದ ಪಕ್ಷದಲ್ಲಿ ಈಗ ಗಾದಿ-ದಿಂಬಿಗೆ ಆತುಕೊಂಡು ಮುನ್ನಡೆಸುವ ಹುದ್ದರಿಗಳೇ ಇಲ್ಲವಾದರೇ?
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ತಳಮಳಗಳನ್ನು ಅಂತಾರಾಷ್ಟ್ರೀಯ ಪತ್ರಿಕೆಗಳು ಚರನಿಂಗ್ (ಮಂಥನ) ಎಂದು ಬಣ್ಣಿಸಿವೆ. ಅದು ಸಮುದ್ರ ಮಂಥನವೇ ಆಗಿದ್ದರೆ ಅದರಲ್ಲಿ ವಿಷವೂ ಬರಲಿದೆ, ಅಮೃತವೂ ಬರಬಹುದು.
ಕಾಂಗ್ರೆಸ್ ಆಗಲಿ, ಇನ್ಯಾವುದೇ ಪಕ್ಷವಾಗಲಿ ಕೆಲಸ ಮಾಡುವುದು ಹೇಗೆ ಅನ್ನುವುದನ್ನು ತಿಳಿಯುವ ಮುನ್ನ ಪ್ರಜಾಪ್ರಭುತ್ವ ಎನ್ನುವುದರ ಬಗ್ಗೆ ತಿಳಿಯಬೇಕು. ‘ಎರಡು ತಲೆಗಳು ಒಂದು ತಲೆಗಿಂತ ಲೇಸು’. ಅರ್ಥಾತ್ ಒಬ್ಬನೇ ತೆಗೆದುಕೊಳ್ಳುವ ನಿರ್ಧಾರಕ್ಕಿಂತ ಅನೇಕರು ನಿರ್ಧಾರ ತೆಗೆದುಕೊಳ್ಳೋದು ಛಲೋ ಅಂತ.

ಸಮಾಜದಲ್ಲಿ ಸಮಾನತೆ, ಸಮಾನ ಅವಕಾಶ ಹಾಗೂ ಹಕ್ಕುಗಳು ಇರಬೇಕೆಂದರೆ ಆ ಸಮಾಜವು ಪ್ರಜಾಪ್ರಭುತ್ವದ ಬುನಾದಿಯ ಮೇಲೆ ನಿಂತಿರಬೇಕು. ಇದು ಸಾಧ್ಯವಾಗಬೇಕಾದರೆ ಸರಕಾರದಲ್ಲಿ ಪ್ರಜಾಪ್ರಭುತ್ವ ಇರಬೇಕು. ಅದಕ್ಕೂ ಮೊದಲು ಆ ತತ್ವ ರಾಜಕೀಯ ಪಕ್ಷದಲ್ಲಿ ಇಳಿದಿರಬೇಕು. ಸರಳವಾಗಿ ಹೇಳಬೇಕೆಂದರೆ ಯಾವುದೋ ಒಂದು ಪಕ್ಷ ಒಬ್ಬ ವ್ಯಕ್ತಿಯ, ಕುಟುಂಬದ, ಅಥವಾ ಒಂದು ಗುಂಪಿನ ಅಂಗುಷ್ಟದ ಅಡಿಯಲ್ಲಿ ನಡೆಯಬಾರದು. ಅದು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದರೆ ಆ ಪಕ್ಷದ ಸಕಲ ಸದಸ್ಯರ ಅಥವಾ ಬಹುಸಂಖ್ಯಾತ ಸದಸ್ಯರ ಅಭಿಪ್ರಾಯದ ಪ್ರಕಾರ ನಡೆಯಬೇಕು. ಅದರಲ್ಲಿನ ಆಂತರಿಕ ಆಡಳಿತ, ನೀತಿ ನಿರೂಪಣೆ ಹಾಗೂ ಜಾರಿ, ಅಧಿಕಾರ ಮತ್ತು ಅದರ ಬಳಕೆ ಸ್ಪಷ್ಟವಾಗಿ ನಿಷ್ಪಕ್ಷವಾಗಿರಬೇಕು ಹಾಗೂ ಶಿಸ್ತು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಪಾರದರ್ಶಕ ಆಗಿರಬೇಕು, ನಿಯಮಿತವಾಗಿ ಚುನಾವಣೆ ನಡೆಯಬೇಕು, ಅಧಿಕಾರದ ಅಥವಾ ಜವಾಬುದಾರಿಯ ಏಕಸ್ವಾಮ್ಯ ಇರಬಾರದು, ಕಾರ್ಯಕರ್ತರಿಗೆ ಮರ್ಯಾದೆ ಇರಬೇಕು, ಇತ್ಯಾದಿ ಇತ್ಯಾದಿ.
ಈ ಪರಿಸ್ಥಿತಿ ಭಾರತದ ಯಾವುದಾದರೂ ಪಕ್ಷದಲ್ಲಿ ಇದೆಯೇ? ಇಲ್ಲ. ಅದೊಂದು ಅದರ್ಶಮಯ ಗಮ್ಯ ಎಂತಾದರೆ ಆ ಕಡೆ ನಡೆಯುತ್ತಿರುವ ವಿವಿಧ ಪಕ್ಷಗಳು ಬೇರೆಬೇರೆ ದೂರ ಕ್ರಮಿಸಿವೆ. ಕೆಲವು ಕೊಂಚ ದೂರಕ್ಕೇ ಸರಿದು ಸವೆದು ನಿಂತಿವೆ, ಕೆಲವು ಇನ್ನೂ ನಡೆಯುತ್ತಿವೆ.
’ಕಾಂಗ್ರೆಸ್‌ನಲ್ಲಿ ಯಾರು ಅಧ್ಯಕ್ಷರಾದರೆ ಏನು? ಅಧಿಕಾರ ಕೊನೆಗೆ ಗಾಂಧಿ-ನೆಹರು (ಗಾನೇ) ಕುಟುಂಬದಲ್ಲಿ ಮಾತ್ರವೇ ಸ್ಥಿರ’, ಎನ್ನುವ ಮಾತನ್ನು ಅನೇಕರು ಹೇಳುತ್ತಾರೆ. ಇದೇ ಮಾತನ್ನು ಎಲ್ಲ ಪಕ್ಷಗಳ ಬಗ್ಗೆ ಹೇಳಬಹುದು. ಕೆಲವು ಪಕ್ಷಗಳಲ್ಲಿ ಇದು ಕಣ್ಣಿಗೆ ಕಾಣುತ್ತದೆ, ಆದರೆ ಕೆಲ ಕಡೆ ಕಾಣುವುದಿಲ್ಲ. ಇನ್ನು ಕೆಲ ಕಡೆ ಅಧಿಕಾರ ಒಬ್ಬರಿಂದ ಇನ್ನೊಬ್ಬರಿಗೆ ಸರಳವಾಗಿ ಹಸ್ತಾಂತರ ಆಗುತ್ತದೆ ಎಂದು ಕಂಡರೂ ಸಹ ನೈಜ ಅಧಿಕಾರ ಒಬ್ಬರ, ಇಬ್ಬರ, ಕುಟುಂಬಸ್ಥರ, ಕೆಲ ಸಿದ್ಧಾಂತಿಗಳ, ಅಥವಾ ಒಂದು ಶಕ್ತಿ ಸಂರಚನೆಯ ಗುಂಪಿನ ಸದಸ್ಯರ ಕೈಯಲ್ಲಿಯೇ ಇರುತ್ತದೆ.
ಈಗ, ‘ಕಳೆದ 75 ವರ್ಷಗಳಲ್ಲಿ ಏನೂ ಆಗಿಲ್ಲ’ ಎನ್ನುವ ವಾಟ್ಸಪ್ ವಿಶ್ವವಿದ್ಯಾಲಯ (ವಾವಿವಿ) ಕೂಗಿನ ಹಿಂದಿನ ತಥ್ಯವನ್ನು ನೋಡೋಣ. ಗಾನೇ ಕುಟುಂಬದವರು ಪ್ರಧಾನಿಯಾಗಿ 33 ವರ್ಷಗಳಾದವು. ರಾಜೀವ್ ಗಾಂಧಿ ಅವರು ತೀರಿಹೋದ ನಂತರ ಕಾಂಗ್ರೆಸ್ ಮೂರು ಬಾರಿ ಅಧಿಕಾರಕ್ಕೆ ಬಂದಿದೆ. ಆಗ ಸೋನಿಯಾ ಗಾಂಧಿ ಆಗಲಿ, ರಾಹುಲ್ ಗಾಂಧಿ ಆಗಲಿ, ಪ್ರಿಯಾಂಕಾ ಗಾಂಧಿ ಆಗಲಿ ಮಂತ್ರಿಗಳಾಗಿಲ್ಲ. ರಾಜೀವ್ ಗಾಂಧಿ ಅವರ ನಂತರ ಎಂಟು ವರ್ಷ ಗಾನೇ ಕುಟುಂಬದ ಹೊರಗಿನವರು ಅಧ್ಯಕ್ಷ ರಾಗಿದ್ದಾರೆ. ಸೋನಿಯಾ ಗಾಂಧಿ 23 ವರ್ಷ ಆ ಜವಾಬುದಾರಿ ಸಂಭಾಳಿಸಿದರೆ, ಒಲ್ಲದ ಮನಸ್ಸಿನಿಂದ ರಾಹುಲ್ ಗಾಂಧಿ ಎರಡು ವರ್ಷ ಆ ಕೆಲಸ ಮಾಡಿದ್ದಾರೆ. ಇದನ್ನು ಗಮನಿಸಿದ ಕೆಲ ಇಂಗ್ಲಿಷ್ ಪತ್ರಕರ್ತರು ಅವರನ್ನು ‘ನಿರಾಸಕ್ತ ರಾಜಕುಮಾರ’ ಎಂದು ಬಣ್ಣಿಸಿದ್ದಾರೆ. ‘ಅಧಿಕಾರ ಎನ್ನುವುದು ವಿಷಕ್ಕೆ ಸಮಾನ ಎಂದು ನಮ್ಮ ತಾಯಿ ನಮಗೆ ಹೇಳಿದ್ದರು. ಅದನ್ನು ನಾನು ಎಂದಿಗೂ ಮರೆಯಲಾರೆ’, ಎಂದು ರಾಹುಲ್ ಗಾಂಧಿ ಆಗಾಗ ಹೇಳುತ್ತಿರುತ್ತಾರೆ. ಅದು ತೋರಿಕೆಯ ಮಾತು ಇರಲಾರದು.

ಆದರೆ ಬಹುಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಿಷ್ಠೆ ಇರುವುದು ಗಾನೇ ಕುಟುಂಬಕ್ಕೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ, ಎಂದು ನಂಬಿದ್ದಾರೆ. ಕೆಲ ಧೈರ್ಯಸ್ಥರು ಅದನ್ನು ಮುಲಾಜಿಲ್ಲದೆ ಹೇಳುತ್ತಾರೆ. ದೇವೇಂದು ಬರುವಾ ಅವರು ‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’ ಅಂತ ಖುಲ್ಲಂಖುಲ್ಲಾ ಹೇಳಿದ್ದರು. ಭಾರತದ ರಾಜಕೀಯ ಇತಿಹಾಸದಲ್ಲಿ ‘ಅಂಧ ಭಕ್ತ’ ಎನ್ನುವ ಪದ ಮೊದಮೊದಲು ಬಳಕೆ ಆದದ್ದು ಇವರನ್ನು ಬಣ್ಣಿಸಲು.
“ಗಾನೇ ಕುಟುಂಬವೇ ನಮ್ಮ ಶಕ್ತಿ ಕೇಂದ್ರ. ಅದು ಇಲ್ಲದೆ ನಮ್ಮ ಪಕ್ಷ ನಿಲ್ಲದು. ಆ ಕುಟುಂಬದ ಕೇಂದ್ರಾಪಗಾಮಿ ಶಕ್ತಿಗೆ ನಮ್ಮ ಜುಟ್ಟುಗಳನ್ನು ಕಟ್ಟಿಬಿಟ್ಟಿದ್ದೇವೆ. ಅದು ಹೋದರೆ, ನಾವೂ ಇಲ್ಲ, ನಮ್ಮ ಜುಟ್ಟೂ ಇಲ್ಲ” ಎಂದು ಕೆಲ ಕಾಂಗ್ರೆಸಿಗರು ತಮ್ಮ ಎದೆ ಬಗೆದು ತೋರಿಸುತ್ತಾರೆ. ಅದು ಸುಳ್ಳೇನಲ್ಲ. ಇದಕ್ಕೆ ಮೂಲಕಾರಣ ಇಂದಿರಾ ಗಾಂಧಿ ಅವರು ಪಕ್ಷವನ್ನು ಕಟ್ಟಿದ ರೀತಿ. ಅವರು ವ್ಯಕ್ತಿನಿಷ್ಠೆಯ ತಳಹದಿಯ ಮೇಲೆ ಇದನ್ನು ನಿರ್ಮಾಣ ಮಾಡಿದರು; ತತ್ವ ನಿಷ್ಠೆಯ ಮೇಲಲ್ಲ. ಅವರು ಮಾಡಿದ ತಪ್ಪಿಗೆ ಅವರ ಮುಂದಿನ ತಲೆಮಾರಿನವರು, ಹಿಂಬಾಲಕರು, ಮತದಾರರು, ಭಾರತೀಯ ನಾಗರಿಕರು ಶಿಕ್ಷೆ ಅನುಭವಿಸಿ ದಂಡ ತೆರಬೇಕಾಗಿ ಬಂದಿದೆ.
“ವಸ್ತುಸ್ಥಿತಿ ಹೀಗಿರುವಾಗ, ಕಾಂಗ್ರೆಸ್ ಪಕ್ಷದ ಚುನಾವಣೆ ಎನ್ನುವುದು ಕೇವಲ ತೋರಿಕೆಯ, ಬಾಯಿಮಾತಿನ ತಂತ್ರ. ಅದೆಲ್ಲಾ ‘ಶೋ ಅಂಡ್ ಟೆಲ್’. ಚುನಾಯಿತ ಅಧ್ಯಕ್ಷನಿಗೆ ಯಾವ ನಿಜವಾದ ಅಧಿಕಾರವೂ ಇರೋಲ್ಲ. ಆತ ಗಾನೇ ಕುಟುಂಬದ ಕಗ್ಗತ್ತಲ ಗುಹೆಯೊಳಗೆ ತೆಗೆದುಕೊಂಡ ನಿರ್ಧಾರಗಳನ್ನು ಚಾಚೂತಪ್ಪದೆ ಜಾರಿ ಮಾಡಬೇಕಾಗುತ್ತದೆ” ಅಂತ ಕೆಲವು ಕಾಲಂ ಬರಹಗಾರರು, ವಿರೋಧಿಗಳು, ಬೆಂಬಲಿಗರು, ವಾವಿವಿ ಸ್ನಾತಕೋತ್ತರ ಪದವೀಧರರು, ಆಳುವ ಪಕ್ಷದ ಆಳುಗಳು, ‘ನಿರ್ಲಿಪ್ತ ಕಣ್ಗಾವಲುಕಾರರು’, ಕಾಳಜಿ ಪೂರ್ವಕ ನಾಗರಿಕರು ಹಾಗೂ ಇತರರು ಹೇಳುತ್ತಿದ್ದಾರೆ. ಬೇರೆ ಪಕ್ಷದಲ್ಲಿ ಪರಿಸ್ಥಿತಿ ಏನೋ ಭಾರಿ ಭಿನ್ನವಾಗಿದೆ ಎನ್ನುವಂತೆ!
ಇತರ ಪಕ್ಷಗಳ, ಗಾನೇ ಕುಟುಂಬದವರ ವಿರುದ್ಧ ವಿಷ ಕಾರುವ ವಾವಿವಿ ಸ್ನಾತಕಿಗಳಿಗೆ ಒಂದೆರಡು ಪ್ರಶ್ನೆಗಳು:
‘ಕೇಂದ್ರ ಸರ್ಕಾರದಲ್ಲಿನ 75 ಮಂತ್ರಿಗಳಲ್ಲಿ ಎಷ್ಟು ಜನರ ಹೆಸರು ನಿಮಗೆ ಗೊತ್ತು?’ ಎಂದರೆ ಯಾರೂ ಕೈ ಎತ್ತುವುದಿಲ್ಲ. ‘ಬಿಜೆಪಿ ಪಕ್ಷದ ಕಾರ್ಯಕಾರಿಣಿಯಲ್ಲಿ ಎಷ್ಟು ಜನರನ್ನು ನೀವು ಗುರುತಿಸಬಲ್ಲಿರಿ?’ ಎಂದರೆ ಎಲ್ಲರೂ ಮ್ಲಾನ ವದನಿಗಳಾಗಿ ಬಿಡುತ್ತಾರೆ. ‘ಇತರ ಪಕ್ಷಗಳ ನಾಯಕರಾದ ಕೇಜರಿವಾಲ-ಶರದ್ ಪವಾರ್-ದೇವೇಗೌಡ-ನಿತೀಶ್-ಪಿನರಾಯಿ-ಸೋನಿಯಾ-ರಾಹುಲ್-ಖರ್ಗೆ ಇವರೆಲ್ಲ ಜನರಿಂದ ಚುನಾಯಿತರಾದವರು. ಚುನಾವಣಾ ರಾಜಕೀಯದಲ್ಲಿ ನೇರವಾಗಿ ಭಾಗವಹಿಸಿದವರು. ಪರದೆಯ ಹಿಂದಿನಿಂದ ಬೊಂಬೆಯಾಟ ಆಡಿಸುವ ಬ್ರಹ್ಮಗಿರಿ ಸಂತೋಷ ಅವರು ಯಾವ ಚುನಾವಣೆ ಎದುರಿಸಿದ್ದಾರೆ?’ ಎಂದು ಕೇಳಿದರೆ ‘ಈ ಪ್ರಶ್ನೆಯೇ ಸರಿಯಿಲ್ಲ’ ಎಂದು ಹೇಳಿ ಮಾತು ಮುಗಿಸುತ್ತಾರೆ.
ಇನ್ನು ಇಂದಿನ ಟ್ರೆಂಡ್‌ಗೆ ಬರೋಣ. ಎನ್‌ಡಿಟಿವಿಯಿಂದ ಹಿಡಿದು ವವಿವಿ ಕರಪತ್ರಗಳವರೆಗೆ ‘ಮಲ್ಲಿಕಾರ್ಜುನ ಖರ್ಗೆ ಅವರು ಗಾನೇ ಕುಟುಂಬ ನಿಷ್ಠರು, ಹಳಬರು, ಆದರೆ ಶಶಿ ತರೂರು ಅವರು ದಾರ್ಶನಿಕ, ದೂರಗ್ರಾಹಿ’ ಎನ್ನುವ ವಿಶೇಷಣಗಳ ಬಳಕೆ ಆಗುತ್ತಿದೆ. “ನಮ್ಮ ಖರ್ಗೆ ಸಾಬ್ ಅವರು ಪಕ್ಷದ ಯಥಾಸ್ಥಿತಿವಾದಿಗಳನ್ನು ಪ್ರತಿನಿಧಿಸುತ್ತಾರೆ, ಆದರೆ ನಾನು ಪ್ರಗತಿಶೀಲರನ್ನು ಪ್ರತಿನಿಧಿಸುತ್ತೇನೆ” ಎಂದು ತರೂರು ಅವರು ಹೇಳಿಕೆ ಕೊಟ್ಟಿದ್ದಾರೆ. ಎನ್.ಕೆ ತ್ರಿಪಾಠಿ ಎನ್ನುವ ಮೂರನೆಯ ಹುದ್ದರಿ ಕೂಡ ಈ ಓಟದಲ್ಲಿ ಇದ್ದಾರೆ. ಆದರೆ ಅವರನ್ನು ಎಲ್ಲರೂ ಮರೆತಂತೆ ಕಾಣುತ್ತದೆ. ಅವರ ಅರ್ಜಿ ತಿರಸ್ಕೃತವಾಗಿ ರೇಸ್‌ನಲ್ಲಿ ಇಬ್ಬರೇ ಉಳಿದಿದ್ದಾರೆ ಎಂಬ ಸುದ್ದಿಯೂ ಬಂದಿದೆ.
ಇದನ್ನೆಲ್ಲ ನೋಡಿದಾಗ ಮುಲಾಯಂ ಸಿಂಗ್ ಯಾದವ್ ಅವರ ‘ಎಚ್.ಎಂ.ಟಿ – ಬಾಲ ಕಾಟಿ’ ಮಾತು ನೆನಪಾಗುತ್ತದೆ. “ನಮ್ಮಂಥ ಹಳ್ಳಿಯಿಂದ ಬಂದ ಬೇರುಮಟ್ಟದ ನಾಯಕರಿಗೆ ದೆಹಲಿಯಲ್ಲಿ ಮರ್ಯಾದೆ ಇಲ್ಲ. ನಾವು ಎಚ್.ಎಂ.ಟಿ – ‘ಹಿಂದಿ ಮೀಡಿಯಂ ಟೈಪ್ಸ್’, ಆದರೆ ಅವರು ಬಾಲ ಕಾಟಿ- ಅಂದರೆ ಬ್ಯೂಟಿ ಪಾರಲರ್‌ಗೆ ಹೋಗುವವರು. ಅವರು ವಿದೇಶದಲ್ಲಿ ಓದಿದವರು, ಇಂಗ್ಲಿಷು ಮಾತಾಡುವವರು, ಭಾರತದ ರಾಜಕೀಯ, ಚುನಾವಣೆ, ಅರ್ಥ ವ್ಯವಸ್ಥೆ, ವಿಕೇಂದ್ರೀಕೃತ ಆಡಳಿತ ಇತ್ಯಾದಿಗಳ ಬಗ್ಗೆ ಪುಸ್ತಕದಲ್ಲಿ ಓದಿಕೊಂಡವರು. ಆದರೆ ನಮ್ಮ ದೇಶಕ್ಕೆ ಬೇಕಾಗಿದ್ದು, ನಮ್ಮಂತವರು, ಅವರಲ್ಲ” ಎಂದು ಅವರು ಮತ್ತೆಮತ್ತೆ ಹೇಳುತ್ತಿದ್ದರು. ಯಾದವ್ ಹಾಗೂ ಇತರ ಎಚ್.ಎಂ.ಟಿ ಗಳನ್ನು ದೆಹಲಿ ಮಾಧ್ಯಮ ‘ಹಳ್ಳಿಯ ಗಮಾರರು’ ಎಂತಲೂ, ಠಸ-ಪುಸ್ ಇಂಗ್ಲಿಷ್‌ನವರನ್ನು ‘ಈ ಭೂಮಂಡಲವನ್ನು ಉದ್ಧರಿಸಲು ಬಂದ ಅವತಾರ ಪುರುಷರು’ ಅಂತ ಚಿತ್ರಿಸುವುದು ಅವರ ನೋವಿನ ಮೂಲ.

ಈಗ ಕಣದಲ್ಲಿ ಇರುವ ಈ ಇಬ್ಬರು, ಕಾಂಗ್ರೆಸ್ ಪಾಲಿಗೆ ದೇಸೀ ಹಾಗೂ ಮಾರ್ಗಕಾರರಂತೆ ಕಾಣುತ್ತಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿಯ ಬೀದರ್ ಜಿಲ್ಲೆಯ ವರವಟ್ಟಿ ಎಂಬ ಕುಗ್ರಾಮದಲ್ಲಿ ಆಸ್ಪೃಶ್ಯ ಮಹಾರ್ ಕುಟುಂಬದಲ್ಲಿ ಹುಟ್ಟಿ, ಹುಟ್ಟುತ್ತಲೇ ಗಲಭೆಯೊಂದರಲ್ಲಿ ತಾಯಿಯನ್ನು ಕಳೆದುಕೊಂಡು, ಕೂಲಿ ಮಾಡಿ ಕಾಲೇಜು ಓದಿ, ಮಿಲ್ ಕಾರ್ಮಿಕರ ಸಂಘಟನೆ ಕಟ್ಟಿದ, ಆರಪಿಐ ಪಕ್ಷದಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಓಡಾಡಿ, ಕಾಂಗ್ರೆಸ್ ಸೇರಿ ಒಂಬತ್ತು ಸಲ ಶಾಸಕ, ಎರಡು ಸಲ ಸಂಸದ, ಒಂದು ಸಲ ಕೇಂದ್ರ ಸಚಿವರಾದ ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ದೇಸೀ ಮುಖ. ಜೋ ಬೈಡೆನ್ ಅವರು ಉಪರಾಷ್ಟ್ರಪತಿ ಆದಾಗ ಒಬಾಮಾ ಅವರನ್ನು ‘ಎವ್ರಿಮ್ಯಾನ್ ಆವರೇಜ್ ಜೋ’ ಎಂದು ವರ್ಣಿಸಿದ್ದರು. ಆ ಇಮೇಜ್‌ಗೆ ಹೊಂದುವವರು ಖರ್ಗೆ.
ಬೆಂಗಳೂರು ಎಂಬೋ ಓಯಸಿಸನಲ್ಲಿ ಹುಟ್ಟಿ, ಓದಿ, ಕೆಲಸ ಮಾಡಿ ನಿವೃತ್ತರಾದ ಇಂಗ್ಲಿಷ್ ಪತ್ರಿಕಾ ಸಂಪಾದಕರು ಒಬ್ಬರು ತಮ್ಮ ಕಿರಿಯರಿಗೆ ಈ ಕಿವಿಮಾತು ಹೇಳುತ್ತಿದ್ದರು: “ನಮಗೆ ಬಡವರು, ಅಸಹಾಯಕರು, ಈ ಎಸ್ಸಿ ಎಸ್ಟಿಗಳು, ರೈತರು, ಮಹಿಳಾವಾದಿಗಳು, ಹೋರಾಟಗಾರರು ಇತ್ಯಾದಿ ಗಳ ಬಗ್ಗೆ ಸುದ್ದಿ ಬೇಡ. ನಾವು ಪತ್ರಿಕೆ ಮಾಡುತ್ತಿರುವುದು ಮಹತ್ವಾಕಾಂಕ್ಷಿ ಭಾರತೀಯರಿಗೆ. ನಮ್ಮ ಪತ್ರಿಕೆ ಓದುವವರು ತಮ್ಮ ಮಾತೃಭಾಷೆ ಮರೆತುಹೋಗಿರುವವರು, ನಿದ್ದೆಯಲ್ಲೂ ಇಂಗ್ಲಿಷು ಮಾತಾಡುವವರು, ಐಟಿ ಬಿಟಿಯವರು, ಡಾಕ್ಟರ್, ಇಂಜಿನಿಯರ್‌ಗಳು, ದೊಡ್ಡ ಹುದ್ದೆಯಲ್ಲಿ ಇರುವ ಅಧಿಕಾರಿಗಳು, ವ್ಯಾಪಾರಸ್ಥರು, ಆಕಾಂಕ್ಷಾವಾದಿಗಳು, ಇತ್ಯಾದಿ. ಅವರು ಓದದಿದ್ದರೂ, ಓದುವಂತೆ ಬಲವಂತ ಮಾಡಬೇಕು”. ತರೂರು ಅವರಂತಹ ಮಾರ್ಗಕಾರರು ಈ ಆಕಾಂಕ್ಷಾವಾದಿಗಳ ಪಟ್ಟಿಗೆ ಸೇರುತ್ತಾರೆ.
ಅಮೆರಿಕದ ರಾಬರ್ಟ್ ಫ್ರಾಸ್ಟ್, ಜವಾಹರ್ ಲಾಲ್ ನೆಹರು ಅವರ ನೆಚ್ಚಿನ ಲೇಖಕ. ಅವರ ‘ರೋಡ್ ನಾಟ್ ಟೇಕನ್’ ಕವನವನ್ನು ಕಂಠಪಾಠ ಮಾಡಿ ಹೇಳುತ್ತಿದ್ದರು.
ಅದರ ಸ್ಥೂಲ ಭಾಷಾಂತರ ಹೀಗಿದೆ.
“ಸಾಕಾಗಿ ಅಡವಿಯಲ್ಲಿ ನಿಂತಾಗ
ನನ್ನೆದುರಿಗೆ ಇದ್ದವು ಎರಡು ದಾರಿಗಳು.
ಒಂದು ಅನೇಕರು ನಡೆದು ಸವೆದು ಹೋದದ್ದು.
ಇನ್ನೊಂದು ಬಹುತೇಕರು ಬಿಟ್ಟುಕೊಟ್ಟು,
ಹುಲ್ಲು ಬೆಳೆದ ಕಾಲುದಾರಿ
ನಾನು ಜಗ ಮರೆತ ಕಾಲುದಾರಿಯನ್ನೇ ಆಯ್ದುಕೊಂಡೆ
ನನ್ನ ಬದುಕು ಬದಲಾಗಿದ್ದು ಅದರಿಂದಲೇ”
ಒಂದೂವರೆ ಶತಮಾನ ಪೂರೈಸುತ್ತಿರುವ ಕಾಂಗ್ರೆಸ್ ಪಕ್ಷದ ಎದುರು ಈಗ ಎರಡು ಹಾದಿಗಳು ಇವೆ. ನೆಹರೂರವರ ಆಶಯಗಳ ಪಳಿಯುಳಿಕೆಗಳು ಏನಾದರೂ ಆ ಪಕ್ಷದಲ್ಲಿ ಇದ್ದರೆ ಅವರು ದೇಸೀ ಮಾರ್ಗವನ್ನು ಆಯ್ದುಕೊಳ್ಳುವುದು ಒಳಿತು. ಅದರಿಂದ ಪಕ್ಷಕ್ಕೂ ಕ್ಷೇಮ, ದುರಿತ ಕಾಲದ ನಳಿಕೆಯಲ್ಲಿ ಸಿಕ್ಕಂತೆ ಕಾಣುತ್ತಿರುವ ರಾಷ್ಟ್ರಕ್ಕೂ ಕ್ಷೇಮ.
ಸಾವಿರ ವರ್ಷದ ಹಿಂದೆ ಆದಿ ಕವಿ ಪಂಪ ಒಂದು ಮಾತು ಹೇಳಿದ:
“ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು, ತಳ್ತೊಡೆ ಕಾವ್ಯ ಬಂಧಂ ಒಪ್ಪುಗುಂ”
(ದೇಸಿಯಲ್ಲಿ ಹೋಗುವುದು, ನಂತರ ಮಾರ್ಗದಲ್ಲಿ ಸೇರುವುದು, ಹಾಗಾದಾಗ ಕಾವ್ಯ ಬಂಧವು ಸಾಧ್ಯವಾಗುವುದು)
ದೇಸೀ ಮಾರ್ಗದವರು ಅಧ್ಯಕ್ಷರಾಗಿ ಬುಡಮಟ್ಟದ ಕೆಲಸ ಮಾಡಬಹುದು. ಇನ್ನು ಪಕ್ಷದ ಇಮೇಜ್ ಹೆಚ್ಚಿಸಲು, ಅರ್ಥ ವ್ಯವಸ್ಥೆ, ವಿದೇಶಾಂಗ ನೀತಿ, ರಕ್ಷಣಾ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ನೀತಿ ನಿರೂಪಣೆ ಮಾಡಲು, ಪಕ್ಷದ ಪರವಾಗಿ ಮಾತಾಡಲು, ಅಂತಾರಾಷ್ಟ್ರೀಯ ಮಟ್ಟದ ಸಂವಹನಕಾರರಾಗಲು, ನಾಳೆ ಸರಕಾರ ಬಂದರೆ ಸಚಿವರಾಗಲು ಸುಮಾರು ಜನ ಬೇಕಲ್ಲವೇ? ಅಲ್ಲಿ ಮಾರ್ಗದವರು ಬರಲಿ. ಅವೆರಡೂ ಸೇರಿ ಕಾವ್ಯಬಂಧ ಸಸಾರವಾಗಲಿ.
ಅಲ್ಲವೇ ಶುಕಭಾಷಿಣಿ?
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಮಲ್ಲಿಕಾರ್ಜುನ ಖರ್ಗೆ


