Homeಮುಖಪುಟಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆ ಮತ್ತು ಮಲ್ಲಿಕಾರ್ಜುನ ಖರ್ಗೆ

- Advertisement -
- Advertisement -

ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಕಾಂಗ್ರೆಸ್ಸಿನ ಅಖಿಲ ಭಾರತ ಅಧ್ಯಕ್ಷರಾಗಲಿದ್ದಾರೆ. ಕಾಂಗ್ರೆಸ್ಸಿಗೊಂದು ಚುನಾಯಿತ ಅಧ್ಯಕ್ಷರಿಲ್ಲದ ಕೊರತೆಗೆ, ಮಲ್ಲಿಕಾರ್ಜುನ ಖರ್ಗೆಯವರು ಆ ಸ್ಥಾನವನ್ನು ತುಂಬುವುದರೊಂದಿಗೆ ತಾಂತ್ರಿಕವಾಗಿ ಪರಿಹಾರ ಸಿಗಬಹುದು. ಆದರೆ ಕಾಂಗ್ರೆಸ್ ಇಂದು ಎದುರಿಸುತ್ತಿರುವ ನಾಯಕತ್ವದ ಕೊರತೆ ಈ ಮೂಲಕ ನೀಗುತ್ತದೆ ಎಂದು ಯಾರಾದರೂ ಭಾವಿಸಿದರೆ ಅದು ಅತಿಯಾದ ಆಶಾವಾದ ಆದೀತು. ಅಂತಹ ಆಶಾವಾದವನ್ನು ಸ್ವತಃ ಕಾಂಗ್ರೆಸ್ಸಿನ ಕಾರ್ಯಕತ್ರರೂ ಇಟ್ಟುಕೊಂಡಿರಲಾರರು.

ಅಂತೂ ಕರ್ನಾಟಕದವರೊಬ್ಬರು ಅಖಿಲ ಭಾರತ ಮಟ್ಟದ ರಾಜಕೀಯ ಹುದ್ದೆಯೊಂದನ್ನು ಹೊಂದಲಿದ್ದಾರೆ ಎನ್ನುವುದು ಒಂದು ರೀತಿಯಲ್ಲಿ ಪಕ್ಷಾತೀತವಾಗಿ ಸಂತಸಪಡಬೇಕಾದ ವಿಚಾರವಾದರೆ, ಕಾಂಗ್ರೆಸ್ ಪಕ್ಷ ಚಾರಿತ್ರಿಕವಾಗಿ ಬಸವಳಿದು ನಿಂತಿರುವ ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾಗುತ್ತಿರುವುದರಲ್ಲಿ ಸವಾಲೆಷ್ಟು, ಸಂಭ್ರಮವೆಷ್ಟು ಎನ್ನುವುದು ಇನ್ನೊಂದು ಪ್ರಶ್ನೆ. ಅದ್ಯಾಕೋ ಕರ್ನಾಟಕದವರು ರಾಷ್ಟ್ರಮಟ್ಟದ ರಾಜಕೀಯ ಪದವಿ ಹೊಂದುವ ಅವಕಾಶಗಳು ಬಂದಾಗಲೆಲ್ಲಾ ಅದರೊಂದಿಗೆ ಏನೋ ಒಂದು ವಿಲಕ್ಷಣ ಬೆಳವಣಿಗೆ ತಳುಕುಹಾಕಿಕೊಂಡಿರುತ್ತದೆ. ಕಾಂಗ್ರೆಸ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಎಸ್. ನಿಜಲಿಂಗಪ್ಪನವರು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು. ಅವರ ಅವಧಿಯಲ್ಲಿ ಕಾಂಗ್ರೆಸ್ ಚಾರಿತ್ರಿಕವಾಗಿ ಹೋಳಾಯಿತು. ಕರ್ನಾಟಕದ ಎಸ್.ಆರ್ ಬೊಮ್ಮಾಯಿ ಅವರು ಜನತಾ ದಳದ ಅಧ್ಯಕ್ಷರಾದರು. ಅಷ್ಟೊತ್ತಿಗೆ ರಾಷ್ಟ್ರಮಟ್ಟದಲ್ಲಿ ಜನತಾದಳದ ಅವನತಿ ಆರಂಭವಾಗಿತ್ತು. ಈಗ ಖರ್ಗೆಯವರು ನಿತ್ರಾಣ ಸ್ಥಿತಿಯಲ್ಲಿರುವ ಸ್ಥಿತಿಯಲ್ಲೇ ಕಾಂಗ್ರೆಸ್ಸಿನ ಅಧಿಪತ್ಯ ವಹಿಸಿಕೊಳ್ಳಲಿದ್ದಾರೆ.

ಎಸ್. ನಿಜಲಿಂಗಪ್ಪ

ಕಾಂಗ್ರೆಸ್ ಎದುರಿಸುತ್ತಿರುವ ಚಾರಿತ್ರಿಕ ನಾಯಕತ್ವ ಕೊರತೆಯ ಸಮಸ್ಯೆಗೆ ಹಲವಾರು ಆಯಾಮಗಳಿವೆ. ಆ ಪಕ್ಷದ ಉಳಿವಿಗೆ ನೆಹರು ಕುಟುಂಬದ ನಾಯಕತ್ವ ಅನಿವಾರ್ಯವೋ ಅಥವಾ ಆ ಪಕ್ಷದ ಕಾಯಕಲ್ಪಕ್ಕೆ ನೆಹರೂ ಕುಟುಂಬದ ಹೊರಗಿನವರೊಬ್ಬರು ಅಧ್ಯಕ್ಷರಾಗುವುದು ಅನಿವಾರ್ಯವೋ ಎಂಬ ಯಕ್ಷ ಪ್ರಶ್ನೆಗೆ ಯಾರ ಬಳಿಯೂ ಸರಿಯಾದ ಉತ್ತರವಿಲ್ಲ. ಸದ್ಯಕ್ಕೆ ನೆಹರೂ ಕುಟುಂಬದಲ್ಲಿ ಕಾಂಗ್ರೆಸ್ಸಿಗೆ ಅಧ್ಯಕ್ಷರಾಗುವ ಉಮೇದು ಯಾರಿಗೂ ಇಲ್ಲದೆ ಇರುವ ಕಾರಣವೋ ಏನೋ, ಪಕ್ಷಕ್ಕೊಬ್ಬರು ಚುನಾಯಿತ ಅಧ್ಯಕ್ಷರನ್ನು ತರುವ ನಿರ್ಧಾರವಾಗಿ ಪ್ರಕ್ರಿಯೆಗಳು ನಡೆಯುತ್ತಿವೆ. ಆದರೆ ಇದೀಗ ಚುನಾಯಿತರಾಗಲಿರುವ ಅಧ್ಯಕ್ಷರು ನಿಜಕ್ಕೂ ಚುನಾಯಿತ ಅಧ್ಯಕ್ಷರೇ? ಇಂತವರೇ ಅಧ್ಯಕ್ಷರಾಗಬೇಕು ಎಂದು ಕುಟುಂಬದವರು ನಿರ್ಧರಿಸಿ, ಅವರ ಕೈಯ್ಯಲ್ಲಿ ನಾಮಪತ್ರ ಹಾಕಿಸಿ, ಪಕ್ಷದ ಮತದಾರರಿಗೆ ಇಂತವರಿಗೆ ಮತ ಹಾಕಬೇಕು ಎನ್ನುವ ಸೂಚನೆಯನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ರವಾನಿಸಿ ಅಧ್ಯಕ್ಷರೊಬ್ಬರನ್ನು ಚುನಾಯಿಸಿದರೆ ಅದನ್ನು ಚುನಾವಣೆ ಅಂತ ಕರೆಯುವುದು ಸೂಕ್ತವಲ್ಲ. ಹಾಗೆಯೇ ಈ ರೀತಿ ಚುನಾಯಿತರಾಗುವ ಅಧ್ಯಕ್ಷರು ಪೂರ್ಣಾವಧಿ ಅಧ್ಯಕ್ಷರೇನೋ ಆಗಬಹುದು, ಆದರೆ ಚುನಾಯಿತ ಅಧ್ಯಕ್ಷರಿಗಿರುವ ಸ್ವಾಯತ್ತತೆ ಅವರಿಗೆ ಎಂದೂ ಇರುವುದಿಲ್ಲ. ಆದರೂ ಚುನಾವಣೆ ನಡೆಯುತ್ತಿದೆ, ಚುನಾಯಿತ ಅಧ್ಯಕ್ಷರು ಅಂತ ಒಬ್ಬರು ಪಕ್ಷದಲ್ಲಿರುತ್ತಾರೆ. ಸಂಪೂರ್ಣ ಸ್ವಾಯತ್ತತೆ ಇಲ್ಲದ ಸ್ಥಿತಿಯಲ್ಲೂ ದೊಡ್ಡ ಪಕ್ಷದ ಅಖಿಲ ಭಾರತ ಮಟ್ಟದ ಅಧ್ಯಕ್ಷಗಿರಿ ಎಂದರೆ ಅದು ದೊಡ್ಡ ರಾಜಕೀಯ ಜವಾಬ್ದಾರಿ. ಅಷ್ಟರಮಟ್ಟಿಗೆ ಖರ್ಗೆಯವರಿಗೆ ಅಭಿನಂದನೆ ಸಲ್ಲುತ್ತದೆ.

ಚುನಾವಣಾ ಕಣದಲ್ಲಿ ಇನ್ನೊಬ್ಬ ಅಭ್ಯರ್ಥಿ ಶಶಿ ತರೂರ್ ಇದ್ದಾರೆ. ಖರ್ಗೆಯವರು ಕುಟುಂಬದ ಅಭ್ಯರ್ಥಿ ಎನ್ನುವ ಕಾರಣಕ್ಕೆ ಶಶಿ ತರೂರ್ ನಾಮಪತ್ರ ಹಿಂತೆಗೆದುಕೊಂಡಿಲ್ಲ ಮತ್ತು ಹಿಂತೆಗೆದುಕೊಳ್ಳುವುದಿಲ್ಲ ಅಂತ ಅವರು ಹೇಳಿದ್ದಾರೆ. ಕುಟುಂಬದ ಬಲ ಇಲ್ಲದೆ ಅವರು ಗೆಲ್ಲಲಾರರು ಎನ್ನುವುದು ಖಾತ್ರಿ. ಆದರೂ ಕಾಂಗ್ರೆಸ್ಸಿನ ಹಿರಿಯ ನಾಯಕರಲ್ಲೊಬ್ಬರಾದ ಪಿ.ಚಿದಂಬರಂ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತಾ ’ಶಶಿ ತರೂರ್ ಅವರು ಗೆದ್ದರೂ ಗೆಲ್ಲಬಹುದು ಸೋತರೂ ಸೋಲಬಹುದು, ಅದು ಕಾಂಗ್ರೆಸ್ಸಿನ ಎಲೆಕ್ಟೊರಲ್ ಕಾಲೇಜಿನ ಸದಸ್ಯರು ಹೇಗೆ ಮತ ಚಲಾಯಿಸುತ್ತಾರೆ ಎನ್ನುವುದರ ಮೇಲೆ ನಿರ್ಣಯ ಆಗುತ್ತದೆ’ ಅಂತ ಒಗಟಾಗಿ ಹೇಳಿದ್ದಾರೆ. ಹಾಗೆ ನೋಡಿದರೆ ಒಂದು ವೇಳೆ ಶಶಿ ತರೂರ್ ಅವರೇನಾದರೂ ಅಕಸ್ಮಾತ್ತಾಗಿ ಗೆದ್ದುಬಿಟ್ಟರೆ ಪಕ್ಷದ ಆಂತರಿಕ ಬೆಳವಣಿಗೆಯ ದೃಷ್ಟಿಯಿಂದ ಅದು ಸೂಕ್ತ ಆಯ್ಕೆ ಆಗುತ್ತದೆ. ಕೊನೆಗೂ ಪಕ್ಷ ನೆಹರೂ ಕುಟುಂಬದ ನೆರಳಿನಿಂದ ನಿಜಕ್ಕೂ ಹೊರಬಂದ ಸೂಚನೆ ಅದಾಗುತ್ತದೆ. ಅದೇ ರೀತಿಯಲ್ಲಿ ಪಕ್ಷಕ್ಕೊಂದು ಹೊಸ ಯೋಚನೆ ಮತ್ತು ಪಕ್ಷವನ್ನು ಹೊಸ ತಲೆಮಾರಿಗೆ ಪರಿಚಯಿಸುವ ದೃಷ್ಟಿಯಿಂದಲೂ ಶಶಿ ತರೂರ್ ಉತ್ತಮ ಆಯ್ಕೆ ಆಗಬಹುದಾಗಿತ್ತೋ ಏನೋ? ಆದರೆ ಕಾಂಗ್ರೆಸ್ಸಿನ ಮುಂದಿರುವ ದ್ವಂದ್ವ ಏನೆಂದರೆ, ಹೊಸ ತಲೆಮಾರನ್ನು ತಲುಪುವ ಮುನ್ನ ಅದಕ್ಕೆ ಹಳೆ ತಲೆಮಾರಿನ ಬೆಂಬಲವನ್ನು ಉಳಿಸಿಕೊಳ್ಳಬೇಕಾಗಿದೆ. ಅದಕ್ಕೆ ಖರ್ಗೆಯವರಂತಹ ಆಯ್ಕೆ ಅನಿವಾರ್ಯ. ಅದಕ್ಕಿಂತಲೂ ಮುಖ್ಯವಾಗಿ ಹೊಸ ತಲೆಮಾರು ಮತ್ತು ಹಳೆ ತಲೆಮಾರು ಎರಡನ್ನೂ ಸರಿತೂಗಿಸಿಕೊಂಡು ಹೋಗಬಲ್ಲ ಒಬ್ಬ ನಾಯಕ ಬಹುಶಃ ಕಾಂಗ್ರೆಸ್ಸಿನಲ್ಲಿ ಇಲ್ಲ. ಒಂದು ವೇಳೆ ಅಂತವರೊಬ್ಬರು ಇದ್ದರೂ ಅವರು ಕುಟುಂಬಕ್ಕೆ ಒಪ್ಪಿಗೆ ಆಗಲಾರದೆ ಇದ್ದರೆ ಅವರಿಗೆ ಅವಕಾಶ ಸಿಗಲಾರದು ಎನ್ನುವ ಸ್ಥಿತಿ ಕಾಂಗ್ರೆಸ್ಸಿನಲ್ಲಿ ಈಗಲೂ ಇದೆ. ಈ ಎಲ್ಲ ಕಾರಣಕ್ಕೆ ಕುಟುಂಬದ ನಿಷ್ಠಾವಂತ ಮತ್ತು ಹಳೆಯ ತಲೆಮಾರಿನವರಿಗೆ ಸ್ವೀಕೃತರಾಗುವ ಖರ್ಗೆ ಅಧ್ಯಕ್ಷಗಿರಿಯ ಹತ್ತಿರಬಂದು ನಿಂತಿದ್ದಾರೆ.

ಚಿದಂಬರಂ

ಚಿದಂಬರಂ ಅವರು ಇನ್ನೊಂದು ವಿಷಯ ಹೇಳಿದ್ದಾರೆ. ಖರ್ಗೆಯವರ ಬದಲಿಗೆ (ಮತ್ತು ತರೂರ್ ಅವರ ಬದಲಿಗೂ) ಯಾರಾದರೂ ಹಿಂದಿ ಮಾತೃಭಾಷೆಯ ಬಲ್ಲ, ಉತ್ತರ ಭಾರತದ ರಾಜ್ಯದವರು ಕಾಂಗ್ರೆಸ್ಸ್ ಅಧ್ಯಕ್ಷರಾಗಿದ್ದರೆ ಚೆನ್ನಾಗಿತ್ತೆಂದು. ಇದು ವಿಚಿತ್ರವಾಗಿದೆ. ಇನ್ನೂ ನಮ್ಮ ರಾಷ್ಟ್ರೀಯ ಪಕ್ಷದವರ ಮನಸ್ಥಿತಿ ಹೇಗಿದೆ ಎಂದರೆ, ರಾಷ್ಟ್ರಮಟ್ಟದ ರಾಜಕೀಯ ಪದವಿಗಳೇನಿದ್ದರೂ ಅದಕ್ಕೆ ಉತ್ತರದವರೇ ಆಗಬೇಕು. ಅಂದರೆ, ಉತ್ತರದವರ ಆಧಿಪತ್ಯವನ್ನು ಅರ್ಥಾತ್ ಹಿಂದಿಯವರ ಆಧಿಪತ್ಯ ಅಥವಾ ನಾಯಕತ್ವವನ್ನು ದಕ್ಷಿಣದವರು ಯಾ ಹಿಂದಿಯೇತರ ಭಾಷೆಯವರು ಒಪ್ಪಿಕೊಳ್ಳಬೇಕು; ಆದರೆ ದಕ್ಷಿಣದವರ ನಾಯಕತ್ವವನ್ನು ಉತ್ತರದವರು ಒಪ್ಪಿಕೊಳ್ಳುವುದಿಲ್ಲ ಎನ್ನುವುದು. ಈ ಮಾತ್ರನ್ನು ಹೇಳಿದ ಚಿದಂಬರಂ ದಕ್ಷಿಣವರೇ, ಅದರಲ್ಲೂ ತಮಿಳುನಾಡಿನವರು ಎನ್ನುವುದು ಇನ್ನೊಂದು ವಿಶೇಷ.

ಖರ್ಗೆ ಕರ್ನಾಟಕದವರಾಗಿರುವುದರಿಂದ ಈಗ ಎಲ್ಲರೂ ಕೇಳುತ್ತಿರುವ ಇನ್ನೊಂದು ಪ್ರಶ್ನೆಯೆಂದರೆ ಅವರು ಅಖಿಲ ಭಾರತ ಮಟ್ಟದಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನ ಪಡೆಯುತ್ತಿರುವುದು ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ 2023ರ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಸಹಾಯಕವಾಗಬಹುದೆಂದು. ಹೌದು ಸಹಾಯಕವಾಗುತ್ತದೆ ಅಂತ ಒಂದೇ ಪಟ್ಟಿಗೆ ಹೇಳಿ ಬಿಡಬಹುದು. ಆದರೆ, ಹೇಗೆ ಸಹಾಯಕವಾಗುತ್ತದೆ ಅಂತ ಕೇಳಿದರೆ ಬಿಡಿಸಿ ಹೇಳಲು ಕಷ್ಟ. ಏನೇ ಹೇಳುವುದಾದರೂ ಮೊದಲಿಗೆ ಇಲ್ಲಿ ಖರ್ಗೆಯವರ ಜಾತಿಯನ್ನು ಪ್ರಸ್ತಾಪಿಸಬೇಕಾಗುತ್ತದೆ. ಖರ್ಗೆಯವರು ಜಾತಿಯಿಂದ ದಲಿತರು ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ಸಿನಲ್ಲಿ ಇವರಿಗೆ ನೀಡಿದ ಉನ್ನತ ಸ್ಥಾನ ಕರ್ನಾಟಕದಲ್ಲಿ ದಲಿತರ ಮತಗಳನ್ನು ಸೆಳೆಯಲು ಕಾಂಗ್ರೆಸಿಗೆ ಎಷ್ಟು ನೆರವಾಗಬಹುದು ಎನ್ನುವುದು ಇಲ್ಲಿರುವ ನಿಜವಾದ ಪ್ರಶ್ನೆ. ಕರ್ನಾಟಕದಲ್ಲಿ ಕಾಂಗೆಸ್ಸಿಗೆ ದಲಿತರ ಬೆಂಬಲ ಒಂದು ಸಂಕ್ರಮಣ ಸ್ಥಿತಿಯಲ್ಲಿದೆ. ರಾಜ್ಯದ ದಲಿತ ಮತದಾರರ ಪೈಕಿ ಎಡಗೈ ಪಂಗಡದ ದಲಿತರನ್ನು ಬಿಜೆಪಿ ದೊಡ್ಡಮಟ್ಟದಲ್ಲಿ ಸೆಳೆದಿದೆ. ಕಾಂಗ್ರೆಸ್ಸಿನಲ್ಲಿ ಈ ಪಂಗಡದ ದಲಿತ ನಾಯಕರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎನ್ನುವ ಅತೃಪ್ತಿಯನ್ನು ಬಳಸಿಕೊಂಡ ಬಿಜೆಪಿ ಆ ಪಂಗಡದ ಕೆಲ ನಾಯಕರಿಗೆ ಅಧಿಕಾರದಲ್ಲಿ ವಿವಿಧ ಸ್ಥಾನಮಾನಗಳನ್ನು ನೀಡಿ ಅವರ ಬೆಂಬಲವನ್ನು ಭದ್ರಪಡಿಸಿಕೊಂಡಿದೆ.

ಶಶಿ ತರೂರ್

ದಲಿತರ ಬಲಗೈ ಪಂಗಡಕ್ಕೆ ಸೇರಿದ ಬಹಳಷ್ಟು ನಾಯಕರು ಕಾಂಗ್ರೆಸ್ಸಿನಲ್ಲಿ ಇದ್ದಾರೆ. ಹಾಗೆಂದು ಬಲಗೈ ಪಂಗಡಕ್ಕೆ ಸೇರಿದ ಎಲ್ಲಾ ದಲಿತ ಮತದಾರರು ಕಾಂಗ್ರೆಸ್ಸಿನೊಂದಿಗೆ ಹಿಂದಿನಂತೆ ಗಟ್ಟಿಯಾಗಿ ಇದ್ದಾರೆ ಎನ್ನುವ ಸ್ಥಿತಿ ಈಗ ಇಲ್ಲ. ಖರ್ಗೆಯವರ ಅಧ್ಯಕ್ಷ ಸ್ಥಾನ ದಲಿತ ಮತದಾರರಿಗೆ ಕಾಂಗ್ರೆಸ್ ಕುರಿತಂತೆ ಒಂದು ಸಕಾರಾತ್ಮಕವಾದ ಸಂದೇಶವನ್ನೇನೋ ರವಾನಿಸಬಹುದು. ಆದರೆ, ಬಿಜೆಪಿಯವರೊಂದಿಗೆ ಹೊಂದಿಕೊಂಡಿರುವ ಎಡಗೈ ದಲಿತ ಸಮುದಾಯವನ್ನು ಕಾಂಗ್ರೆಸ್ಸಿನತ್ತ ಒಲಿಸಿಕೊಳ್ಳಲು ಖರ್ಗೆಯವರಿಗೆ ಸಾಧ್ಯವೇ? ಅದೇ ರೀತಿ ಕಾಂಗ್ರೆಸ್ಸಿನೊಂದಿಗಿನ ಭಾವನಾತ್ಮಕ ಕಳಚಿಕೊಳ್ಳುತ್ತಿರುವ ಬಲಗೈ ಪಂಗಡದ ದಲಿತ ಮತದಾರರನ್ನು ಮತ್ತೊಮ್ಮೆ ಕಾಂಗ್ರೆಸ್ಸಿನ ಮತಬ್ಯಾಂಕ್ ಆಗಿ ಪರಿವರ್ತಿಸಬಲ್ಲ ಚಾಕಚಕ್ಯತೆಯನ್ನು ಖರ್ಗೆ ಪ್ರದರ್ಶಿಸಬಲ್ಲರೇ? ದಲಿತ ಮತದಾರರ ಆಶೋತ್ತರಗಳೂ ಬದಲಾಗಿವೆ. ಹೊಸ ತಲೆಮಾರಿನ ದಲಿತ ಮತದಾರರನ್ನು ಅಧಿಕಾರವಿಲ್ಲದ ಸ್ಥಿತಿಯಲ್ಲಿ ಒಲಿಸಿಕೊಳ್ಳಬೇಕಾದರೆ ಅಪಾರವಾದ ರಾಜಕೀಯ ಚಾಕಚಕ್ಯತೆಯ ಜತೆಗೆ ದಣಿವರಿಯದ ದುಡಿಮೆಯೂ ಬೇಕಾಗುತ್ತದೆ. ಬದಲಾವಣೆಗೆ ಒಗ್ಗಿಕೊಳ್ಳದ, ಹೊಸ ರಾಜಕೀಯ ನುಡಿಗಟ್ಟು ಅರ್ಥವಾಗದ ಹಳೆಯ ತಲೆಗಳನ್ನು ಸಂಭಾಳಿಸಿಕೊಂಡೆ ಕೆಲಸಮಾಡಬೇಕಾದ ಎಂಬತ್ತರ ಪ್ರಾಯದ ಖರ್ಗೆಯವರಿಗೆ ಈ ಚಾಕಚಕ್ಯತೆಯನ್ನು ಪ್ರದರ್ಶಿಸಲು ಸಾಧ್ಯ ಎಂದಾದಲ್ಲಿ, ದಣಿವರಿಯದೆ ದುಡಿದು ಯೋಚನೆಗಳನ್ನು ಯೋಜನೆಗಳಾಗಿ ಪರಿವರ್ತಿಸಿ ಅನುಷ್ಠಾನಗೊಳಿಸಬಲ್ಲ ಚೈತನ್ಯ ಇರುವುದಾದರೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲೂ ಕಾಂಗೆಸ್ಸಿಗೆ ಅವರ ಅಧ್ಯಕ್ಷಗಿರಿಯಿಂದ ಅನುಕೂಲ ಆಗುತ್ತದೆ. ಇಲ್ಲವಾದರೆ? ಇಲ್ಲವಾದರೆ ಏನೂ ಇಲ್ಲ. ಯಥಾಸ್ಥಿತಿಗಂತೂ ಅವರಿಂದ ಯಾವುದೇ ತೊಂದರೆ ಆಗುವುದಿಲ್ಲ.

 


ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಶಶಿ ತರೂರು v/s ಮಲ್ಲಿಕಾರ್ಜುನ ಖರ್ಗೆ; ದಿಗ್ವಿಜಯ್ ಸಿಂಗ್ ಕಣದಿಂದ ಹೊರಕ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....