ಆನ್‌ಲೈನ್ ಜೂಜಾಟ ಮತ್ತು ಹಲವು ಗೇಮ್ಸ್‌ಗಳನ್ನು ನಿಷೇಧಿಸುವುದಕ್ಕಾಗಿ ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದರಿಂದಾಗಿ ಇನ್ನು ಮುಂದೆ ತಮಿಳುನಾಡಿನಲ್ಲಿ ರಮ್ಮಿ, ಪೋಕರ್‌ನಂತಹ ಜೂಜಾಟಗಳು ಬಂದ್ ಆಗಲಿವೆ.
ಈ ಕುರಿತ ಮಹತ್ವದ ಸುಗ್ರೀವಾಜ್ಞೆಗೆ ತಮಿಳುನಾಡು ರಾಜ್ಯಾಪಾಲರಾದ ಆರ್.ಎನ್ ರವಿಯವರು ಅಕ್ಟೋಬರ್ 01 ರಂದು ಸಹಿ ಮಾಡಿದ್ದಾರೆ. ಆನ್‌ಲೈನ್ ಗೇಮಿಂಗ್ ಪ್ರಾಧಿಕಾರವನ್ನು ರಚಿಸಲಿದ್ದು ಕೆಲವೇ ದಿನಗಳಲ್ಲಿ ಈ ಆಟಗಳನ್ನು ನಿಷೇಧಿಸುವುದಾಗಿ ಸರ್ಕಾರ ಹೇಳಿದೆ.
ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಕೆ.ಚಂದ್ರು ನೇತೃತ್ವದ ಸಮಿತಿಯು ನೀಡಿದ ಶಿಫಾರಸಿನ ಆಧಾರದಲ್ಲಿ ಸೆಪ್ಟಂಬರ್ 26 ರಂದು ಸಿಎಂ ಎಂ.ಕೆ ಸ್ಟಾಲಿನ್‌ರವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಕಾಯ್ದೆ ಜಾರಿಗೆ ಬಂದ ನಂತರ ಆನ್‌ಲೈನ್ ಗೇಮ್ ಅಥವಾ ಜೂಜು ಆಡಿದವರಿಗೆ 3 ತಿಂಗಳ ಜೈಲು ಅಥವಾ 5000 ರೂ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು. ಈ ಗೇಮ್ ಗಳನ್ನು ಮಾಧ್ಯಮಗಳಲ್ಲಿ ಜಾಹೀರಾತು ನೀಡಿದವರಿಗೆ ಒಂದು ವರ್ಷ ಜೈಲು ಅಥವಾ 5 ಲಕ್ಷ ರೂ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು. ಆನ್‌ಲೈನ್ ಗೇಮ್, ಜೂಜು ಆಡಿಸುವವರೆಗೆ 5 ವರ್ಷ ಜೈಲು ಅಥವಾ 10 ಲಕ್ಷ ರೂ ದಂಡ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಆನ್‌ಲೈನ್ ಗೇಮ್‌ಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಸರ್ಕಾರ ನಡೆಸಿದ ಸರ್ವೆಯಲ್ಲಿ ಬಹಿರಂಗವಾಗಿದೆ. ಸುಮಾರು 2 ಲಕ್ಷ ಶಿಕ್ಷಕರನ್ನು ಒಳಗೊಂಡ ಸರ್ವೆಯಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಗೇಮ್‌ಗಳಿಂದ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ, ಕಣ್ಣಿನ ತೊಂದರೆಗೆ ಒಳಗಾಗಿದ್ದಾರೆ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದರೆ ಎಂಬ ಅಭಿಪ್ರಾಯ ಜೋರಾಗಿ ಕೇಳಿಬಂದಿದೆ.
ಇದನ್ನೂ ಓದಿ; ಹಿಂದಿಯೊಂದನ್ನೆ ರಾಷ್ಟ್ರಭಾಷೆ ಮಾಡಲು ಸಾಧ್ಯವಿಲ್ಲ: ಶಿಕ್ಷಣ ತಜ್ಞರೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿ


