Homeಮುಖಪುಟಬಾಲಿವುಡ್ ಬಾಯ್ಕಾಟ್ ಮತ್ತು ಆಸ್ಕರ್ ನಾಮಿನೇಷನ್

ಬಾಲಿವುಡ್ ಬಾಯ್ಕಾಟ್ ಮತ್ತು ಆಸ್ಕರ್ ನಾಮಿನೇಷನ್

- Advertisement -
- Advertisement -

ಭಾರತದ ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಎರಡು ವಿಷಯಗಳ ಬಗ್ಗೆ ಬಹಳ ಕುತೂಹಲಕರವಾದ ಚರ್ಚೆಗಳು ನಡೆಯುತ್ತಿವೆ. ಒಂದು ಕೆಲವು ಹಿಂದಿ ಸಿನಿಮಾಗಳನ್ನ ಬಹಿಷ್ಕರಿಸಿ ಎಂದು ನಡೆದ ಟ್ವೀಟ್ ಅಭಿಯಾನ ಮತ್ತು ಹಾಲಿವುಡ್‌ನ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಆಸ್ಕರ್‌ಗೆ ಭಾರತದಿಂದ ಯಾವ ಸಿನಿಮಾ ನಾಮನಿರ್ದೇಶನ ಮಾಡಬೇಕು ಎಂಬುದರ ಬಗ್ಗೆ. ಈ ಎರಡು ಸಂಗತಿಗಳು ಬೇರೆಬೇರೆ ಎನಿಸಿದರೂ, ಅವು ಹುಟ್ಟಿಕೊಂಡ ಅಲೋಚನೆಯ ಮೂಲ ಒಂದೇ. ಇನ್ನೂ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಈ ಎರಡು ಬೆಳವಣಿಗೆಗಳನ್ನ ಈ ದೇಶದ ಹಲವು ವಲಯಗಳ ಸದ್ಯದ ಬೆಳವಣಿಗೆಗಳಿಂದ ಬೇರ್ಪಡಿಸಿ ನೋಡುವುದಕ್ಕೂ ಸಾಧ್ಯವಿಲ್ಲ. ಅದು ಪಠ್ಯ ಪರಿಷ್ಕರಣೆ ಆಗಿರಬಹುದು, ಹೊಸ ಶಿಕ್ಷಣ ನೀತಿ, ಹಿಂದಿ ದಿವಸದ ಆಚರಣೆ, ನಾಗರಿಕ ತಿದ್ದುಪಡಿ ಕಾಯ್ದೆ, ಶೂದ್ರ ಸಮುದಾಯದ ಆಹಾರಗಳ ನಿಷೇಧ, ಶಾಲಾ ಮಕ್ಕಳ ವಸ್ತ್ರಸಂಹಿತೆ ಅಥವಾ ಶಾಲೆಯಲ್ಲಿ ಮಕ್ಕಳಿಗೆ ವೇದ ಗಣಿತ ಮತ್ತು ಭಗವದ್ಗೀತೆ ಬೋಧನೆ ಆಗಿರಬಹುದು.

ಈ ಮೇಲಿನ ಎಲ್ಲಾ ವಿದ್ಯಮಾನಗಳನ್ನು ಅವುಗಳ ಒಳಿತು-ಕೆಡಕುಗಳ ಆಧಾರದ ಮೇಲೆ ಪ್ರತ್ಯೇಕಗೊಳಿಸಿ ಬಿಡಿಬಿಡಿಯಾಗಿ ಚರ್ಚಿಸುವುದರಿಂದ ಈ ಇಡೀ ವಿನ್ಯಾಸದ ನಿಜ ಅಪಾಯದ ಬಗ್ಗೆ ನಮ್ಮನ್ನು ಕುರುಡಾಗಿಸಬಹುದು. ಅವುಗಳ ನಡುವೆ ಸ್ಟಷ್ಟವಾದ ಕೊಂಡಿ ಇದೆ. ಈ ದೇಶದ ವೈವಿಧ್ಯತೆ, ಸಂವಿಧಾನ, ಪ್ರಜಾಪ್ರಭುತ್ವ ಮೌಲ್ಯ, ವಿವಿಧ ಸಂಸ್ಕೃತಿ-ಭಾಷೆಗಳ ಜನಸಮುದಾಯಗಳು ತಮ್ಮ ಅಸ್ಮಿತೆ ಮತ್ತು ಘನತೆಗಳನ್ನ ತಕ್ಕ ಮಟ್ಟಿಗೆ ಉಳಿಸಿಕೊಂಡು ಬಂದಿರುವ ಬಹುತ್ವ-ಸಾಮರಸ್ಯದ ಬದುಕಿನ ಮೇಲೆ ನಡೆಯುತ್ತಿರುವ ದಾಳಿಯ ಭಾಗವಾಗಿಯೇ ಬಾಲಿವುಡ್ ಬಾಯ್ಕಾಟ್ ಮತ್ತು ಆಸ್ಕರ್ ನಾಮಿನೇಷನ್ ಚರ್ಚೆಯ ಹಿಂದಿನ ರಾಜಕಾರಣವನ್ನು ಗ್ರಹಿಸಬೇಕಿದೆ.

ಬಾಲಿವುಡ್ ಬಾಯ್ಕಾಟ್

ಬಾಲಿವುಡ್ ಸಿನಿಮಾ ಕ್ಷೇತ್ರ ಮೂಲತಃ ಕಾಸ್ಮೋಪಾಲಿಟನ್ ಸಂಸ್ಕೃತಿಯದ್ದು. ಈ ಕ್ಷೇತ್ರದ ಬೆಳವಣಿಗೆಯ ಪ್ರಾರಂಭದಿಂದಲೂ ಭಿನ್ನ ಪ್ರದೇಶದ, ಧರ್ಮ, ಭಾಷೆ, ಸಂಸ್ಕೃತಿ, ವರ್ಗದ ಜನರು ಅದರ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ, ದುಡಿದಿದ್ದಾರೆ, ಜೊತೆಗೆ ಹೆಸರು, ಹಣ, ಪ್ರಶಸ್ತಿ ಎಲ್ಲವನ್ನೂ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿದ ಬಹಳಷ್ಟು ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ತಮ್ಮ ಖಾಸಗಿ ಬದುಕಿನಲ್ಲೂ ಧರ್ಮ, ಭಾಷೆ, ಸಂಸ್ಕೃತಿ, ಆಚರಣೆಯ ಗೆರೆಗಳನ್ನು ದಾಟಿ ತಮ್ಮ ಸಂಬಂಧಗಳನ್ನು ಬೆಸೆದುಕೊಂಡಿದ್ದಾರೆ. ಆದರೆ ಕಳೆದ ದಶಕದಿಂದೀಚೆಗೆ, ಬಾಲಿವುಡ್‌ನಲ್ಲಿ, ಕಲಾವಿದರನ್ನ ಅವರ ಧರ್ಮದ ಹಿನ್ನೆಲೆಯಿಂದ ಅವರ ಕೆಲಸ ಮತ್ತು ಕಲೆಯನ್ನು ಗುರುತಿಸಿ-ಗ್ರಹಿಸಿ, ಟೀಕೆ, ಗೇಲಿ, ಟ್ರೋಲ್ ಮಾಡುವುದರ ಜೊತೆಗೆ ಅವರ ಸಿನಿಮಾಗಳನ್ನ ಬಹಿಷ್ಕರಿಸಲು ಕರೆ ಕೊಡುವುದನ್ನ ನೋಡುತ್ತಿದ್ದೇವೆ. ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಬೆಳವಣಿಗೆ ಮತ್ತು ಪಿತೂರಿಯೂ ಹೌದು.

ಇತ್ತೀಚೆಗೆ ತೆರೆಕಂಡ ಅಮೀರ್ ಖಾನ್ ನಟನೆಯ ’ಲಾಲ್ ಸಿಂಗ್ ಚಡ್ಡ’ ಸಿನಿಮಾವನ್ನು ಸಾಮಾಜಿಕ ಮಾಧ್ಯಮಗಳಲ್ಲಿ #BoycottLalSinghChaddha ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಬಹಿಷ್ಕರಿಸುವಂತೆ ಪ್ರೇರೇಪಿಸಲಾಯಿತು. 2015ರಲ್ಲಿ ಜನಪ್ರಿಯ ನಟ ಅಮೀರ್ ಖಾನ್ ದೇಶದ ಆ ಹೊತ್ತಿನ ಬೆಳವಣಿಗೆಯನ್ನು ಗಮನಿಸಿ ಮಾರ್ಮಿಕವಾಗಿ ಕೆಲವು ಮಾತುಗಳನ್ನಾಡಿದ್ದರು: ’ಇತ್ತೀಚಿನ ದಿನಗಳಲ್ಲಿ ದೇಶ ಬಿಡುವಷ್ಟು ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ’ ಎಂದಿದ್ದರು. 2015ರ ಈ ಹೇಳಿಕೆಯನ್ನ ದೇಶದ್ರೋಹದ ಮಾತುಗಳೆಂದು ಬಿಂಬಿಸಿ ಇವತ್ತು ಅವರ ಸಿನಿಮಾವನ್ನ ಬಹಿಷ್ಕರಿಸಲು ಸಂಘಪರಿವಾರದವರು ಕರೆಕೊಡುತ್ತಿದ್ದಾರೆ. ಅಮೀರ್ ಖಾನ್‌ಗೆ ಈ ಅನುಭವ ಮೊದಲನೆಯದೇನಲ್ಲ. ನರ್ಮಾದ ನದಿಗೆ ಕಟ್ಟಲಾಗುತ್ತಿದ ಸರ್ದಾರ್ ಸರೋವರ್ ಅಣೆಕಟ್ಟೆಯ ಎತ್ತರವನ್ನು ಹೆಚ್ಚಿಸಲು 2006ರಲ್ಲಿ ಗುಜರಾತ್ ಸರ್ಕಾರ ನಿರ್ಧರಿಸಿದಾಗ ’ನರ್ಮದಾ ಬಚಾವ್ ಆಂದೋಲನ’ದ ಮೂಲಕ ಇದನ್ನು ವಿರೋಧಿಸಿ ದೊಡ್ಡ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಂದೋಲನದ ಭಾಗವಾಗಿದ್ದ ಮೇದ ಪಾಟ್ಕರ್ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗುವ ಅಮೀರ್ ಖಾನ್ ’ಅಣೆಕಟ್ಟು ಎತ್ತರವನ್ನು ಹೆಚ್ಚಿಸಿರುವುದರಿಂದ ಸುಮಾರು 35,000 ಕುಟುಂಬಗಳು ಮುಳುಗಡೆಯಾಗುವುದರಿಂದ, ಮೊದಲು ಅವರಿಗೆ ಪುನರ್ವಸತಿ ಒದಗಿಸಬೇಕು’ ಎಂದು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ಅಮೀರ್ ಖಾನ್ ನಟನೆಯ ’ಫನಾ’ ಸಿನಿಮಾ ಬಿಡುಗಡೆಗೊಂಡಿರುತ್ತದೆ. ಅಮಿರ್ ಖಾನ್ ಹೇಳಿಕೆಯನ್ನು ವಿರೋಧಿಸಿ ಗುಜರಾತ್‌ನ ಬಿಜೆಪಿ ಯುವ ಮೊರ್ಚಾ ಸದಸ್ಯರು ಫನಾ ಸಿನಿಮಾದ ಪ್ರದರ್ಶನ ವಿರೋಧಿಸುತ್ತಾರೆ; ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತಾರೆ. ಅಮೀರ್ ಖಾನ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸುತ್ತಾರೆ. ಈ ಬಹಿಷ್ಕಾರ ಕೂಗು ಅಂದು ಗುಜರಾತ್ ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದುದು ಈಗ ದೇಶದ ತುಂಬಾ ವ್ಯಾಪಿಸಿದೆ. ಕಾರಣ ಇಷ್ಟೆ: ಆಗ ಗುಜರಾತ್‌ನಲ್ಲಿ ಅಧಿಕಾರದ ಚುಕ್ಕಾಣೆ ಹಿಡಿದವರೇ ಈಗ ದೇಶವನ್ನು ಸರ್ವಾಧಿಕಾರಿಗಳ ರೀತಿಯಲ್ಲಿ ಆಳಲು ಹೊರಟಿದ್ದಾರೆ.

ಬಾಲಿವುಡ್‌ನ ಪ್ರಸಿದ್ಧ ಹಿನ್ನೆಲೆ ಗಾಯಕ ಅತಿಫ್ ಅಸ್ಲಮ್ ಮತ್ತು ನಟ ಹಾಗು ನಿರ್ಮಾಪಕ ಫವಾದ್ ಖಾನ್‌ರನ್ನು ಅವರ ಧರ್ಮ ಮತ್ತು ರಾಷ್ಟ್ರೀಯತೆ ಕಾರಣವಾಗಿ ಬಾಲಿವುಡ್‌ನಿಂದ ಬಹಿಷ್ಕರಿಸಲು ಪ್ರಯತ್ನಿಸಲಾಯಿತು. ಹೀಗೇಕೆ? ಕಳೆದ ಕೆಲ ವರ್ಷಗಳಲ್ಲಿ ಈ ರೀತಿಯ ಪ್ರಯತ್ನಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಲೇ ಇವೆ. ದೇಶದಲ್ಲಿ ಏಕ ಸಂಸ್ಕೃತಿ, ಏಕ ಭಾಷೆ, ಏಕ ದೈವ, ಏಕ ಆಹಾರ ಎಂಬಂತಹ ಘೋಷಣೆಗಳ ನಡುವೆ ಬಲಪಂಥದ, ಪ್ರತಿಗಾಮಿ ಧೋರಣೆಯ, ಸನಾತನ ಮತ್ತು ಮನುಧರ್ಮದ ಅಲೋಚನೆಗಳು ಮುನ್ನಲೆಗೆ ಬರುತ್ತಿದ್ದಾವೆ. ಪಠ್ಯ ಪುಸ್ತಕಗಳಲ್ಲಿ ಈ ದೇಶದ ವೈವಿಧ್ಯತೆ, ಸಾಮರಸ್ಯ, ಸರ್ವಧರ್ಮ ಸಮನ್ವಯತೆಯನ್ನ ಬೋಧಿಸಿವ ಪಾಠಗಳನ್ನು ತೆಗೆದು, ಅಸಮಾನತೆ, ಕೋಮುದ್ವೇಷ, ಧರ್ಮಾಂಧತೆ, ತರತಮಗಳನ್ನು ಪ್ರತಿಪಾದಿಸುವ ವಿಚಾರಗಳನ್ನು ಸೇರಿಸಲಾಗುತ್ತದೆ. ಒಂದು ಧರ್ಮವನ್ನು ಆಚರಿಸುವ ಜನರನ್ನು ವ್ಯವಸ್ಥಿತವಾಗಿ ಈ ದೇಶದ ನಾಗರಿಕತ್ವದಿಂದ ದೂರ ಇಡಲು ಅಥವಾ ಎರಡನೇ ದರ್ಜೆಯ ನಾಗರಿಕರನ್ನಾಗಿಸಲು ’ನಾಗರಿಕ ತಿದ್ದುಪಡಿ ಕಾಯ್ದೆ’ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ, ಜಾನುವಾರು ಕಾಯ್ದೆ ಹೆಸರಲ್ಲಿ ತಳ ಸಮುದಾಯದ ಮತ್ತು ಅಲ್ಪ ಸಮುದಾಯಗಳ ಊಟದ ತಟ್ಟೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಶಾಲಾ ಮಕ್ಕಳ ವಸ್ತ್ರ ಸಂಹಿತೆಯನ್ನು ಮುಂದಿಟ್ಟುಕೊಂಡು ಸಾಂವಿಧಾನಿಕವಾಗಿ ಇರುವ ಹಕ್ಕುಗಳನ್ನು ತಪ್ಪಾಗಿ ವಿಶ್ಲೇಷಿಸುವುದರ ಮುಖಾಂತರ ಕೋಮುದ್ವೇಷವನ್ನು ಹರಡಿ ಮುಗ್ಧ ಶಾಲಾ ಮಕ್ಕಳಲ್ಲಿ ಕೋಮು ವಿಷಬೀಜವನ್ನು ಬಿತ್ತಲಾಗುತ್ತಿದೆ. ಖಾಸಗಿ ಜಗಳ-ಕೊಲೆಗಳನ್ನು ಧರ್ಮಕ್ಕೆ ತಳುಕು ಹಾಕಿ ಸಾಮರಸ್ಯದಿಂದ ಬದುಕುತ್ತಿರುವ ಭಿನ್ನ ಧರ್ಮೀಯರ ನಡುವಿನ ದ್ವೇಷಕ್ಕೆ ಮತ್ತು ಹಿಂಸೆಗೆ ಪ್ರೂತ್ಸಾಹಿಸಲಾಗುತ್ತಿದೆ. ಮತಾಂತರ ತಡೆಯುತ್ತೇವೆಂದುಕೊಂಡು ತಳ ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಬಾಲಿವುಡ್ ಬಾಯ್ಕಾಟ್ ಕೂಡ, ಸಾಧ್ಯವಾದಷ್ಟು ವೈವಿಧ್ಯತೆಯನ್ನು ಒಳಗೊಳ್ಳುತ್ತಿದ್ದ ಅದರ ಕಾಸ್ಮೊಪಾಲಿಟನ್ ಸ್ವಭಾವದ ಮೇಲೆ ನಡೆಯುತ್ತಿರುವ ದಾಳಿ.

ಆಸ್ಕರ್ ನಾಮಿನೇಷನ್

ಪ್ರತಿ ವರ್ಷ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಒಂದು ಸಿನಿಮಾವನ್ನು ನಾಮನಿರ್ದೇಶನ ಮಾಡಿ ’ಫಾರಿನ್ ಕೆಟಗರಿ’ಯಲ್ಲಿ ಪ್ರಶಸ್ತಿಗೆ ಸ್ಪರ್ಧಿಸಲು ಕಳುಹಿಸಿಕೊಡುವುದು ವಾಡಿಕೆ. ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಿನಿಮಾಗಳ ಇತಿಹಾಸ ನೋಡಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ; ಮನರಂಜನೆಯನ್ನೇ ಮೂಲ ಆಶಯವನ್ನಾಗಿಟ್ಟುಕೊಂಡ, ಬಹಳ ಜನಪ್ರಿಯಗೊಂಡ ಮತ್ತು ವ್ಯವಹಾರಿಕವಾಗಿ ಭಾರಿ ಯಶಸ್ಸು ಸಾಧಿಸಿದ ಸಿನಿಮಾಗಳು ನಾಮ ನಿರ್ದೇಶನಗೊಂಡಿದ್ದು ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ವಸ್ತುವಿನಲ್ಲಿ ಬಹಳ ಸೂಕ್ಷ್ಮವಾದ ಮತ್ತು ಸಂವೇದನೆಯುಳ್ಳ, ಸಮಕಾಲಿನ ಸಂದರ್ಭದ ಯಾವುದಾದರು ಗಂಭೀರ ಸಮಸ್ಯೆಯನ್ನು ಅಭಿವ್ಯಕ್ತಿಸಿದ್ದ ನಿಯಮಗಳನ್ನು ಬಹುತೇಕ ಬಾರಿ ಆಯ್ಕೆ ಮಾಡಿರುವುದನ್ನು ಗುರುತಿಸಬಹುದು. ಅಂತಹ ಸಿನಿಮಾಗಳ ನಿರ್ಮಾಣ ವೆಚ್ಚವು ಕೂಡ ಮಿನಮಲ್ ಆಗಿರುತಿತ್ತು. ಆದರೆ ಈ ಬಾರಿ ಭಾರತದಿಂದ ಯಾವ ಸಿನಿಮಾ ಆಸ್ಕರ್‌ಗೆ ನಾಮ ನಿರ್ದೇಶನವಾಗುತ್ತದೆ ಎಂಬ ಚರ್ಚೆ ಬಹಳ ಹಿಂದೆಯೇ ಹುಟ್ಟಿಕೊಂಡಿತು. ಚರ್ಚೆಗೆ ಬಂದ ಎರಡು ಸಿನಿಮಾಗಳಲ್ಲಿ ಅಭಿವ್ಯಕ್ತಿಗೊಂಡ ಅಲೋಚನೆ ಮತ್ತು ಅಭಿವ್ಯಕ್ತಿಗೊಳಿಸಿದ ಕ್ರಮ ಎರಡೂ ಗಾಬರಿ ಹುಟ್ಟಿಸುವಂತದ್ದು. ರಾಜಮೌಳಿ ಎಂಬ ನಿರ್ದೇಶಕ ನಿರ್ದೇಶಿಸಿದ ಸುಮಾರು 550 ಕೋಟಿ ಬೃಹತ್ ಬಜೆಟ್ಟಿನ ತೆಲುಗಿನ ’ಆರ್‌ಆರ್‌ಆರ್’ ಎಂಬ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರನ ಕಥೆ ಹೇಳುವ ನೆಪದಲ್ಲಿ ಪ್ರತಿಗಾಮಿ ಸನಾತನ ಧರ್ಮದ ಅಲೋಚನೆಗಳನ್ನೆ ಬಹಳ ಫ್ಯಾಂಟಸಿಯಾಗಿ ತೋರಿಸಿದ್ದೆ ಹೆಚ್ಚು. ಇನ್ನು ಮರೆಮಾಚಿದ ಸತ್ಯದ ಇತಿಹಾಸವನ್ನು ಶೋಧಿಸಿದ್ದೇವೆ ಎಂದು ಹೇಳಿಕೊಂಡು ಬಂದ ವಿವೇಕ್ ಅಗ್ನಿಹೋತ್ರಿ ಎಂಬ ನಿರ್ದೇಶಕ ನಿರ್ದೇಶಿಸಿದ ’ಕಾಶ್ಮೀರ್ ಫೈಲ್ಸ್’ ಸಿನಿಮಾ ಮುಸ್ಲಿಂ ಸಮುದಾಯದ ಮೇಲೆ ಜನಮಾನಸದಲ್ಲಿ ದ್ವೇಷ ಹುಟ್ಟಿಹಾಕಲು ಮಾಡಿದ ಪ್ರಪೋಗಾಂಡ ಸಿನಿಮಾ ಎಂದು ನಿಸ್ಸಂಶಯವಾಗಿ ಹೇಳಬಹುದು. ಈ ಸಿನಿಮಾದಲ್ಲಿ ಯಾರನ್ನು ವಿಕ್ಟಿಮ್‌ಗಳೆಂದು ಚಿತ್ರಿಸಲಾಗಿದೆಯೋ, ಆ ಸಮುದಾಯದ ಜನ ಹಾಗೂ ಚಿತ್ರಿಸಲಾಗಿರುವ ಘಟನೆಯ ಪ್ರತ್ಯಕ್ಷದರ್ಶಿಗಳು ’ಈ ಸಿನಿಮಾದಲ್ಲಿ ಸತ್ಯವನ್ನು ಮುಚ್ಚಿಟ್ಟು ಕೇವಲ ದ್ವೇಷದ ಸಲುವಾಗಿ ಇಲ್ಲಸಲ್ಲದ ಹಲವು ಕಥೆಗಳನ್ನ ಹೆಣೆಯಲಾಗಿದೆ’ ಎಂದು ಹೇಳಿಕೊಂಡಿದ್ದಾರೆ.

ಮೇಲಿನ ಎರಡು ಸಿನಿಮಾಗಳ ಕಮರ್ಷಿಯಲ್ ಸಕ್ಸಸ್ ನಿಜವಾಗಿಯೂ ಒಳ್ಳೆಯ ಬೆಳವಣಿಗೆಯಲ್ಲ. ಇದೆರೆಲ್ಲದರ ನಡುವೆ ತಮಾಷೆಯ ಸಂಗತಿಗಳು ನಡೆದುಹೋದವು. ಆರ್ ಮಾಧವನ್ ಎಂಬ ತಮಿಳು ಮೂಲದ ಹಿಂದಿ ಮತ್ತು ತಮಿಳು ಸಿನಿಮಾ ನಟ ತಾನೆ ಬರೆದು ನಿರ್ದೇಶಿಸಿ ನಟಿಸಿದ Rocketry: The Nambi Effect ಎಂಬ ಹಿಂದಿ ಭಾಷೆಯ ಸಿನಿಮಾವನ್ನು ನಾಮನಿರ್ದೇಶನ ಮಾಡುವಂತೆ ಸೂಚಿಸಿದರು. ಈ ಸಿನಿಮಾದಲ್ಲಿ ಕೆಲವು ಸಂಗತಿಗಳನ್ನು ತಿರುಚಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಸದ್ಯ ನಿರಾಳ ಎಂಬಂತೆ ಈಗ ಗುಜಾರಾತಿಯ ಪಾನ್ ನಳಿನ್ ಎಂಬ ನಿರ್ದೇಶಕನ ’ಚೆಲ್ಲೊ ಷೊ’ ಸಿನಿಮಾ, ಆಸ್ಕರ್‌ಗೆ ನಾಮ ನಿರ್ದೇಶನ ಗೊಂಡಿದೆ. ಇದುವರೆಗೂ ಭಾರತದಿಂದ ನಾಮನಿರ್ದೇಶನಗೊಂಡ ಸಿನಿಮಾಗಳಲ್ಲಿ ಕೇವಲ ಮೂರು [ಮದರ್ ಇಂಡಿಯಾ (1957), ಸಲಾಂ ಬಾಂಬೆ (1988) ಮತ್ತು ಲಗಾನ್ (2001)] ಸಿನಿಮಾಗಳು ಮಾತ್ರ ಸ್ಪರ್ಧೆಯ ಅಂತಿಮ ಹಂತವನ್ನು ತಲುಪಿವೆ. 95ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಾರಂಭ 12 ಮಾರ್ಚ್ 2023ರಂದು ಲಾಸ್ ಏಂಜಲ್ಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತದೆ.

ಕೊನೆಯದಾಗಿ:

            ಬಾಲಿವುಡ್ ನಲ್ಲಿ ಕೆಲ ವರ್ಷಗಳಿಂದ ಬದಲಾಗುತ್ತಿರುವ ಮನಸ್ಥಿತಿಯನ್ನು, ಅಲ್ಲಿನ ಕೆಲ ಕಲಾವಿದರ ವೈರುಧ್ಯದ ನಿಲುವುಗಳಿಂದ ಗ್ರಹಿಸಬಹುದೇನೊ. 2014ಕ್ಕಿಂತ ಮುಂಚೆ ಬೆಲೆ ಏರಿಕೆ ಮುಂತಾದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಬಹಳ ಮಾರ್ಮಿಕವಾಗಿ ಟೀಕಿಸುತ್ತಿದ್ದ ಕೆಲ ಕಲಾವಿದರು, 2014ರ ನಂತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿಂದೆದಿಗಿಂತಲೂ ತೀವ್ರಗತಿಯಲ್ಲಿದ್ದಾಗ ಮತ್ತು ಕೇಂದ್ರ ಸರ್ಕಾರದ ಹೊಸ ನೀತಿಗಳಿಂದ ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾಗ ಮೌನಕ್ಕೆ ಜಾರಿದರು. ಅಮಿತಾಭ್ ಬಚ್ಚನ್ ಅಂತ ಖ್ಯಾತ ಕಲಾವಿದರು ಕೂಡ ದಿವ್ಯ ಮೌನದಲ್ಲಿದ್ದರು. ಅನುಪಮ್ ಖೇರ್, ಪರೇಶ್ ರಾವಲ್, ಮಧುರ್ ಬಂಡಾರ್ ಕರ್, ಕಂಗನಾ ರನೌತ್, ವಿವೇಕ್ ಒಬೇರಾಯ್ ರಂತಹ ಮತ್ತಷ್ಟು ಕಲಾವಿದರು ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುತ್ತಾ, ಸರ್ಕಾರವನ್ನು ಟೀಕಿಸುತ್ತಿದ್ದವರನ್ನೆಲ್ಲಾ ‘ತುಕಡೆ ಗ್ಯಾಂಗ್’, ‘ದೇಶ ದ್ರೋಹಿ’ ಎಂದು ಹೀಗಳಿಯುವುದಕ್ಕೆ ಶುರು ಮಾಡಿದರು. ಅಕ್ಷಯ್ ಕುಮಾರ್ ರಂಥ ನಟ ತಮ್ಮ ಟ್ವೀಟ್, ಜಾಹಿರಾತು, ಸಿನಿಮಾಗಳ ಆಯ್ಕೆ ಮುಖಾಂತರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿಬಿಟ್ಟರು. 01 ಫೆಬ್ರವರಿ 2021ರಲ್ಲಿ ‘ದ ಕಾರವಾನ್’ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡ ‘ಭವ್ಯ ದೊರೈ’ ಅವರ ‘Akshay Kumar’s role as Hindutva’s Poster Boy’ ಲೇಖನದಲ್ಲಿ,  ಆಕ್ಷ್ಯನ್ ಹಿರೋ ಆಗಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಅಕ್ಷಯ್ ಕುಮಾರ್ ಮುಂದೆ ಕಾಮಿಡಿಯನ್ ಪಾತ್ರಗಳಲ್ಲಿ ಮಿಂಚಿ, ಈಗ ‘ಮಿಸ್ಟರ್ ಇಂಡಿಯಾ’ ಪಾತ್ರಗಳ ಮುಖಾಂತರ ಹಿಂದುತ್ವದ ಬ್ರಾಂಡ್ ಅಂಬಾಸಿಡರ್ ಆದ ಬೆಳವಣಿಗೆಯನ್ನ ಸವಿವರವಾಗಿ ಚಿತ್ರಿಸಿದ್ದಾರೆ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ


ಇದನ್ನೂ ಓದಿ: ಜಾತಿ-ಲೈಂಗಿಕತೆ-ಪ್ರೀತಿಗಳ ಬಗ್ಗೆ ದಿಟ್ಟ ಹೇಳಿಕೆ ನೀಡುವ ’ನಟ್ಚತಿರಮ್ ನಗರ್ಗಿರದು’

ಇದನ್ನೂ ಓದಿ: ಸೇತುಮಾನ್: ಫ್ಯೂಡಲ್ ಸಮುದಾಯದ ಒಣ ಪ್ರತಿಷ್ಠೆ, ಹೇಡಿತನ, ಕ್ರೌರ್ಯದ ಅನಾವರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...