Homeಅಂಕಣಗಳುಜಾತಿ-ಲೈಂಗಿಕತೆ-ಪ್ರೀತಿಗಳ ಬಗ್ಗೆ ದಿಟ್ಟ ಹೇಳಿಕೆ ನೀಡುವ ’ನಟ್ಚತಿರಮ್ ನಗರ್ಗಿರದು’

ಜಾತಿ-ಲೈಂಗಿಕತೆ-ಪ್ರೀತಿಗಳ ಬಗ್ಗೆ ದಿಟ್ಟ ಹೇಳಿಕೆ ನೀಡುವ ’ನಟ್ಚತಿರಮ್ ನಗರ್ಗಿರದು’

- Advertisement -
- Advertisement -

ತಮಿಳು ನಾಡಿನ ಖ್ಯಾತ ನಿರ್ದೇಶಕ ಪ ರಂಜಿತ ನಿರ್ದೇಶನದ ’ನಟ್ಚತಿರಮ್ ನಗರ್ಗಿರದು’ ಸಿನಿಮಾ ಚಿತ್ರಮಂದಿರಗಳಲ್ಲಿ ಕೆಲವು ವಾರಗಳ ಹಿಂದೆ ಬಿಡುಗಡೆ ಕಂಡಾಗಲೇ ನಾನುಗೌರಿ/ನ್ಯಾಯಪಥಲ್ಲಿ ಚರ್ಚೆ ಮಾಡಿದ್ದೆವು. ಈಗ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಸಮಯದಲ್ಲಿ ಮತ್ತೊಮ್ಮೆ ಚರ್ಚಿಸಬೇಕೇ ಎಂಬ ಪ್ರಶ್ನೆ ಕೇಳಿಕೊಂಡರೆ- ಬಾಕ್ಸ್ ಆಫೀಸ್ ಗಳಿಕೆ, ನಟ-ನಟಿಯರ ಬಟ್ಟೆ ಬರೆ, ಹೆಚ್ಚಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮುಂತಾದ ಅಸಂಗತ ಸಂಗತಿಗಳಿಂದಲೇ- ಅತಿ ಹೆಚ್ಚು ಮತ್ತು ವ್ಯಾಕರಿಕೆ ತರಿಸುವಷ್ಟು ಪ್ರಚಾರ ಪಡೆಯುವ ಸ್ಟಾರ್ ನಟರ ಸಿನಿಮಾಗಳ ಅಬ್ಬರದ ನಡುವೆ- ಚಿಂತನೆಗೆ ಹಚ್ಚುವ, ಬಹುಸಂಖ್ಯಾತವಾದದ ನಂಬಿಕೆಗಳನ್ನು ಪ್ರಶ್ನಿಸುವ ಸಿನಿಮಾವೊಂದರ ಬಗ್ಗೆ ಪದೇಪದೇ ಮಾತನಾಡುವ ಅಗತ್ಯವಂತೂ ಇದ್ದೇಇದೆ. ಅದಷ್ಟೇ ಕಾರಣವಲ್ಲ, ನಾವು ಬದುಕುತ್ತಿರುವ ಯುಗಧರ್ಮವೂ ಈ ಸಿನಿಮಾವನ್ನು ಚರ್ಚೆಯ ಕೇಂದ್ರವನ್ನಾಗಿಸಿ ಅಗಲಗಲ ಮಾತನಾಡಬೇಕಾದ ಔಚಿತ್ಯವನ್ನು ಹುಟ್ಟುಹಾಕಿದೆ. ಇವುಗಳ ಜತೆಗೆ ಇನ್ನೂ ಹತ್ತುಹಲವು ಕಾರಣಗಳಿವೆ. ಕೆಲವನ್ನು ಇಲ್ಲಿ ಚರ್ಚಿಸುವುದರ ಜೊತೆಗೆ ಸಿನಿಮಾ ನೀಡಿದ ತಿಳಿವಳಿಕೆಯ ಅನುಭೂತಿಯನ್ನು ಗ್ರಹಿಸಬಹುದು.

ಕೆಲವು ದಿನಗಳ ಹಿಂದೆ ಇಬ್ಬರು ಯುವತಿಯರು ಸೇಮ್‌ಸೆಕ್ಸ್ ಮದುವೆಯಾದ ಬಗ್ಗೆ ವರದಿಯೊಂದು ಮೂಡಿತ್ತು. ಆದರೆ ವರದಿ ಓದುತ್ತಿದ್ದಂತೆ, ಆ ಮದುವೆ ತಮಿಳು ಬ್ರಾಹ್ಮಣರ ಶೈಲಿಯಲ್ಲಿ ನಡಿಯಿತೆಂದೂ ಮತ್ತು ಆ ಯುವತಿಯದಲ್ಲಿ ಒಬ್ಬರು ಅಂತಹ ಸಾಂಪ್ರದಾಯಿಕ ಮದುವೆಯನ್ನು ಅಪೇಕ್ಷಿಸಿದ್ದಾಗಿ ವರದಿಯಾಗಿತ್ತು. ಜಾತಿ ಬೇಲಿಯನ್ನು ಹೋಮೋಸೆಕ್ಷುಯಲ್ ಮದುವೆ ಕೂಡ ಮುರಿಯಲಾಗದಿದ್ದರೆ, ಜಾತಿವಿನಾಶ ಎಂದಿಗಾದರೂ ಸಾಧ್ಯವೇ ಎಂಬ ಪ್ರಶ್ನೆ ಒಮ್ಮೆ ಸುಳಿದು ಹೋಯಿತು. ನೀವು ಸೇಮ್ ಸೆಕ್ಸ್ ಮದುವೆಗಳ ಬಗ್ಗೆ ತುಸು ಹುಡುಕಾಡಿದರೆ, ಸನಾತನ ಸಂಪ್ರದಾಯಕ್ಕೆ ಜೋತುಬಿದ್ದ ಇಂತಹ ಹಲವು ಮದುವೆಗಳ ವಿವರಗಳನ್ನು ಕಾಣುವಿರಿ.

ಒಂದು ಮೇಲ್ಮಟ್ಟದ ಕಾಸ್ಮೋಪಾಲಿಟನಿಸಂಅನ್ನು ಸಾಧಿಸಿದ್ದ ಬಾಲಿವುಡ್‌ನ ಸಿನಿಮಾಗಳನ್ನು ನಿಷೇಧಿಸುವ ಕೂಗು ಸಂಘಟಿತ ರೂಪ ಪಡೆದುಕೊಳ್ಳುತ್ತಿದೆ. ಸಿನಿಮಾದ ಹೂರಣದಲ್ಲಿಯೂ ಮತ್ತು ಸಿನಿಮಾ ತಯಾರಿಕೆಯಲ್ಲಿನ ವಿವಿಧ ವಿಭಾಗಗಳಲ್ಲಿಯೂ ಒಂದು ಸಣ್ಣ ಮಟ್ಟದ ವೈವಿಧ್ಯತೆಯನ್ನು ರೂಪಿಸಿಕೊಂಡಿದ್ದ ಬಾಲಿವುಡ್ ಹಿಂದುತ್ವದ ಮತ್ತು ಸಂಘಪರಿವಾರದ ಮುಖಂಡರಿಗೆ ಅಪಾಯಕಾರಿಯಾಗಿ ಕಾಣುತ್ತಿದೆ. ಇನ್ನೂ ಹೆಚ್ಚು ವೈವಿಧ್ಯಮಯ ಆಗಬೇಕು ಅಥವಾ ಅವಕಾಶವಂಚಿತರಿಗೆ ಇನ್ನೂ ಹೆಚ್ಚು ಪ್ರಾತಿನಿಧ್ಯ ಅಲ್ಲಿ ಸಿಗಬೇಕೆಂಬ ಕೂಗಲ್ಲ ಅದು. ಇರುವ ಕಾಸ್ಮೋಪಾಲಿಟನ್ ಸ್ವರೂಪ ಕೂಡ ತೊಲಗಬೇಕೆಂಬ ಹುನ್ನಾರದಲ್ಲಿ ಸನಾತನವಾದದ ಎಳೆಹೊಂದಿರುವ ಆರ್‌ಆರ್‌ಆರ್‌ನಂತಹ ಸಿನಿಮಾಗಳನ್ನು ಎತ್ತಿಕಟ್ಟಿ ತೀವ್ರವಾಗಿ ಪ್ರಚಾರ ಮಾಡಲಾಗುತ್ತಿದೆ. ಏಕವ್ಯಕ್ತಿಯಿಂದ, ತೋಳುಬಲದಿಂದ, ವೈಭವದ ಹೀರೋಯಿಸಂನಿಂದ ಜನರನ್ನು ರಕ್ಷಿಸುವ ಕಥಾಹಂದರದ ಕೆಜಿಎಫ್‌ಅನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ.

ಜಾತಿ ಮತ್ತು ಪ್ರೀತಿಯ ಬಗ್ಗೆ ಕೆಲವು ಭಾರತೀಯ ಸಿನಿಮಾಗಳು ಇಲ್ಲಿಯವರೆಗೆ ಒಂದು ಸಣ್ಣ ಮಟ್ಟದ ಪ್ರಗತಿಪರ ಚಿಂತನೆಯನ್ನು ಒಳಗೊಂಡಿವೆಯೆನ್ನಬಹುದು. ಅಂತರ್ಜಾತೀಯ ಪ್ರೇಮ-ಮದುವೆಗಳನ್ನು ಒಳಗೊಂಡ, ಅಂತ ಪ್ರೇಮಕ್ಕೆ ಫ್ಯೂಡಲ್ ಮತ್ತು ಬ್ರಾಹ್ಮಿನಿಕಲ್ ಜಾತಿ ಸಮುದಾಯಗಳ ವಿರೋಧ, ಮರ್ಯಾದಾ ಹತ್ಯೆ ಇವುಗಳನ್ನು ಸಿನಿಮಾಗಳು ಚಿತ್ರಿಸಿವೆ. ಇನ್ನೂ ಕೆಲವು ಬೆರಳೆಣಿಕೆಯಷ್ಟು ಚಿತ್ರಗಳು ಸಮಾನ ಲಿಂಗದ ಪ್ರೀತಿಯನ್ನೂ ಚಿತ್ರಿಸಲು ಪ್ರಯತ್ನಿಸಿವೆ. ಅಲ್ಲೊಂದು ಇಲ್ಲೊಂದು ಎನ್ನುವಂತೆ ಟ್ರಾನ್ಸ್‌ಜೆಂಡರ್ ಸಮುದಾಯದ ಕತೆಗಳಿವೆ. ಆದರೆ, ಕೊನೆಗೆ ಸಂಪ್ರದಾಯದ ಚೌಕಟ್ಟಿನಲ್ಲಿಯೇ ಅಷ್ಟೋಇಷ್ಟೋ ಸ್ಪೇಸ್ ಹುಡುಕಿಕೊಳ್ಳುವ ಕಥಾವಸ್ತುಗಳೇ ಹೆಚ್ಚು. ಈ ನಿಟ್ಟಿನಲ್ಲಿ ಭಾರತೀಯ ಚಲನಚಿತ್ರ ಸಾಂಪ್ರದಾಯಿಕತೆಯನ್ನು ಮೀರಿ ಬೆಳೆಯಬೇಕಿರುವುದು ಅತ್ಯಗತ್ಯವಾಗಿದೆ.

ಜಾತಿಯ ಸಂಕೋಲೆಗಳಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳದೆ (ಅಂದರೆ ಕೇವಲ ಮರೆಮಾಚಿಕೊಳ್ಳುವುದಷ್ಟೇ ಅಲ್ಲ), ಪೂರ್ಣ ತಿಳಿವಳಿಕೆಯಿಂದ ಜಾತಿ ವ್ಯವಸ್ಥೆ ಹುಟ್ಟಿಸಿರುವ ಎಲ್ಲಾ ರೀತಿಯ ತಾರತಮ್ಯಗಳನ್ನು ಬಿಡಿಸಿಕೊಂಡು ಸಮಾನತೆಯೆಡೆಗೆ ಹೆಜ್ಜೆ ಇಡದೇ ವಿಭಿನ್ನ ಜಾತಿ ಸಮುದಾಯಗಳಿಗೆ ಸೇರಿದ ಇಬ್ಬರ ನಡುವೆ ಪ್ರೀತಿ ಸಾಧ್ಯವೇ ಎಂಬ ಪ್ರಶ್ನೆಯನ್ನು ಪ ರಂಜಿತ್ ತಮ್ಮ ಸಿನಿಮಾದಲ್ಲಿ ಎತ್ತುತ್ತಾರೆ. ಹೊಸ ಅರಿವಿನ ಬೆಳಕಿನಲ್ಲಿ, 20ನೇ ಶತಮಾನದ ಕೊನೆಯಲ್ಲಿ ಸಮಾನತೆಯ ಆಳಕ್ಕಿಳಿದು ಹುಟ್ಟಿರುವ ಪ್ರಶ್ನೆಗಳು ’ನಟ್ಚತಿರಮ್..’ ಸಿನಿಮಾದ ಪ್ರೇಮ ಕಥೆಯಲ್ಲಿ ಮುಖ್ಯವಾದ ಸಂಘರ್ಷದ ರೂಪ ತಳೆಯುತ್ತವೆ. ರೆನೆ ಮತ್ತು ಇನಿಯನ್ ಎಂಬ ಪ್ರೇಮಿಗಳ ನಡುವಿನ ಇಂತಹ ಸಂಘರ್ಷದಿಂದಲೇ ಸಿನಿಮಾ ಆರಂಭವಾಗುವುದು. ಇನಿಯನ್ ತಾನು ಜಾತಿ ತೊರೆದಿದ್ದೇನೆಂಬ ಭ್ರಮೆಯಲ್ಲಿ ಬದುಕುತ್ತಿರುವವನು. ವರ್ಗ ಸಮಸ್ಯೆ ನಿವಾರಿಸಿದರೆ ಜಾತಿಯನ್ನು ನಿರ್ಮೂಲ ಮಾಡಬಹುದು ಎಂದು ನಂಬಿರುವನು. ಆದರೆ ಶೋಷಿತ ಸಮುದಾಯದಿಂದ ಬಂದಿರುವ ರೆನೆಗೆ ಈ ವಿಷಯಗಳಲ್ಲಿ ಹೆಚ್ಚಿನ ಸ್ಪಷ್ಟನೆಯಿದೆ. ಇನಿಯನ್ ಚಿಂತನೆಗಳಲ್ಲಿ ಅಡಗಿರುವ ಪ್ರತಿಗಾಮಿ ಅಂಶಗಳನ್ನು ತೊರೆದು ಬದಲಾಗಲು ಆಹ್ವಾನಿಸುತ್ತಾಳೆ. ಹಾಗೆ ಸ್ಪಷ್ಟವಾಗಿ ಅರ್ಥ ಮಾಡಿಕೊಂಡರಷ್ಟೇ ತಮ್ಮ ನಡುವಿನ ಪ್ರೇಮಕ್ಕೂ ಅರ್ಥ ಬರುವುದೆಂದು ನಂಬಿ ವಿರಹದಲ್ಲಿ ತಾನೂ ನೋವು ಅನುಭವಿಸುತ್ತಾಳೆ.

ಇಂತಹ ಚಿಂತನೆಯನ್ನು ಸಿನಿಮಾದಲ್ಲಿ ಅಳವಡಿಸುವ ಅಪಾಯವೆಂದರೆ, ಚೂರು ಎಚ್ಚರ ತಪ್ಪಿದರೂ ಅದು ವಾಚ್ಯವಾಗುತ್ತದೆಂಬುದು. ಆದರೆ ಸಿನಿಮಾದಲ್ಲಿ ನಾಟಕವೊಂದರ ತಾಲೀಮು ನಡೆಸುವ ಪರಿಕರ ಬಳಸಿ ಮುಖ್ಯಕಥೆಯ ಹಾಗೂ ನಾಟಕದ ವಸ್ತುಗಳನ್ನು ಬೆಸೆಯುವ ಕ್ರಾಫ್ಟ್ ಮನಮುಟ್ಟುವಂತೆ ಚಿತ್ರಿತವಾಗಿದೆ. ನಾಟಕದ ಪಾತ್ರಗಳು ಮತ್ತು ತಾಂತ್ರಿಕ ವರ್ಗದಲ್ಲಿ ವಿಭಿನ್ನ ಜಾತಿ ಸಮುದಾಯಕ್ಕೆ ಸೇರಿದವರಿದ್ದಾರೆ. ಗೇ ಪ್ರೇಮಿಗಳಿದ್ದಾರೆ. ಟ್ರಾನ್ಸ್‌ಜೆಂಡರ ಪ್ರೇಮಿಗಳಿದ್ದಾರೆ. ಹೀಗೆ ಆಧುನಿಕ ಸಮಾಜ ನಿರೀಕ್ಷಿಸುವ ಕಾಸ್ಮೋಪಾಲಿಟನಿಸಂನ ಕನ್ನಡಿಯಾಗಿ ಈ ನಾಟಕ ತಂಡದ ಟ್ರೂಪ್ ಕಾಣಿಸುತ್ತದೆ. ನಾಟಕದ ವಸ್ತು ಕೂಡ ಪ್ರೇಮವನ್ನು ಶೋಧಿಸುತ್ತಿರುವ ಕಥಾವಸ್ತು. ಸಿನಿಮಾದ ಕಥಾವಸ್ತು ಚೂರು ಆಧುನಿಕಗೊಂಡಿರುವ ಸಮಾಜದ ಪ್ರೀತಿಯ ಸಂಘರ್ಷವನ್ನು ಹಿಡಿಯಲು ಹೊರಟಿದ್ದರೆ, ಸಿನಿಮಾದ ನಾಟಕ ವಸ್ತು ತುಸು ಹಳೆಯದು. ಅದು ಫ್ಯೂಡಲ್ ಮತ್ತು ತಳಸಮುದಾಯದ ವ್ಯಕ್ತಿಗಳ ಪ್ರೇಮದಲ್ಲಿ, ಫ್ಯೂಡಲ್ ಕುಟುಂಬ ನಡೆಸುವ ದೌರ್ಜನ್ಯದ ಸುತ್ತ ಸುತ್ತುವ ಸಂಘರ್ಷದ ವಸ್ತು. ಈ ಹಳೆಯ ಸಂಘರ್ಷ ಇಂದಿಗೂ ಇತ್ಯರ್ಥವಾಗಿಲ್ಲ. ಅಲ್ಲಿನ ಪಾತ್ರಧಾರಿ ಅರ್ಜುನ್ ಆ ಹಳೆಯ ಜಡ ಮೌಲ್ಯಗಳ ಮತ್ತು ನಾಟಕದಲ್ಲಿ ಜೊತೆಯಾಗಿರುವ ಸಹೋದ್ಯೋಗಿಗಳ ಆಧುನಿಕ ಸಮ ಮೌಲ್ಯಗಳ ನಡುವೆ ಸಿಲುಕಿ ನಲುಗುತ್ತಿರುವವನು. ಆತನ ವ್ಯಕ್ತಿತ್ವ ನಾಟಕದ ನಟನೆಯಿಂದ, ಸಿನಿಮಾದಲ್ಲಿ ನಿರೂಪಿತವಾಗುತ್ತಿರುವ ಕಥೆಗೂ ಚೆಲ್ಲುತ್ತದೆ. ಟ್ರಾನ್ಸ್‌ಜೆಂಡರ್ ಪ್ರೇಮಿಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಆತನ ಪ್ರತಿಗಾಮಿ ಮನಸ್ಥಿತಿ ಅನಾವರಣಗೊಳ್ಳುತ್ತದೆ. ರೆನೆ ಜತೆಗೆ ಅನುಚಿತವಾಗಿ ವರ್ತಿಸುತ್ತಾನೆ. ರೆನೆ ದಿಟ್ಟವಾಗಿ ಪ್ರತಿರೋಧಿಸಿದರೂ, ತಂಡದಲ್ಲಿ ಸಿಟ್ಟು ಕುದಿಯುತ್ತದೆ. ಅರ್ಜುನ್ ನಾಟಕ ತಂಡದಿಂದ ಹೊರಗೆ ನಡೆಯಬೇಕಾದರೆ, ರೆನೆ ಆತನಿಗೆ ಹಿಂದಿರುಗಲು ಹೇಳುತ್ತಾಳೆ. ಹೊಣೆಗಾರಿಕೆಯನ್ನು ಹೊತ್ತು ಬದಲಾಗಲು ಆಹ್ವಾನ ನೀಡುತ್ತಾಳೆ. ಇದು ಮತ್ತೆ ಶೋಷಕನೂ ಕೂಡ ತನ್ನ ಕೃತ್ಯಗಳಿಂದ ತನಗೇ ಅರಿವಿಲ್ಲದೆ ಸಮಸ್ಯೆಯಲ್ಲಿರುತ್ತಾನೆ; ಅವನ ಬದಲಾವಣೆಗೆ ಅವಕಾಶ ಕೊಟ್ಟರೆ ಅವನ ವೈಯಕ್ತಿಕ ಸಮಸ್ಯೆಯ ಪರಿಹಾರದ ಜೊತೆಗೆ ಸಮಾಜವೂ ಉತ್ತಮವಾಗಬಲ್ಲದು ಎಂಬ ಎವಾಲ್ವ್ ಆದ ಗ್ರಹಿಕೆಯನ್ನು ಪ್ರತಿನಿಧಿಸುತ್ತಿರುವಂತೆ ಕಾಣುತ್ತದೆ.

ಒಂದು ಕಡೆಗೆ ಸೇಮ್ ಸೆಕ್ಸ್ ಮದುವೆಗಳಲ್ಲಿಯೂ ಜಾತಿ ಗಟ್ಟಿಕೊಳ್ಳುತ್ತಿರುವ ವಾಸ್ತವದ ಎದುರಿಗೆ ರಂಜಿತ್ ಅವರ ಸಿನಿಮಾ ಸಮಾಜಕ್ಕೆ ಚಿಕಿತ್ಸೆಯಂತೆ ತೋರುತ್ತದೆ. ನಿಜ ಕಾಸ್ಮೋಪಾಲಿಟನ್ ಸ್ವರೂಪದ ಆಶಯ ಹೊತ್ತ ಕಥೆ, ಅಂತಹ ವೈವಿಧ್ಯತೆಯಲ್ಲಿ ಮೇಲು-ಕೀಳುಗಳ ಪಳೆಯುಳಿಕೆಯೂ ಉಳಿಯಬಾರದೆಂಬ ಮತ್ತು ಹಾಗಿದ್ದಾಗ ಮಾತ್ರವೇ ಪ್ರೇಮಕ್ಕೆ ನಿಜ ಅರ್ಥ ದೊರಕುತ್ತದೆ ಎನ್ನುತ್ತದೆ. ಇಂದು ಬಾಲಿವುಡ್‌ಗೆ ದಾರಿ ತೋರಿಸಬೇಕಿದ್ದುದು ಇಂತಹ ಕಥಾವಸ್ತುವನ್ನು ಚರ್ಚಿಸುವ ’ನಟ್ಚತಿರಮ್ ನಗರ್ಗಿರದು’ನಂತಹ ಸಿನಿಮಾಗಳೇ ಹೊರತು, ಆರ್‌ಆರ್‌ಆರ್, ಕೆಜಿಎಫ್‌ಗಳಲ್ಲ. ಈಗ ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕಿರುವವರು ಪ್ರೇಕ್ಷಕರು ಹಾಗೂ ಸಿನಿಮಾಗಳ ಬಗ್ಗೆ ಚರ್ಚೆಯನ್ನು ವಿಸ್ತರಿಸಬಲ್ಲ ವಿಮರ್ಶಕರು ಮತ್ತು ಮಾಧ್ಯಮಗಳು. ರಂಜಿತ್ ಆ ಸವಾಲನ್ನು ನಮ್ಮ ಮುಂದೆ ಎಸೆದಿದ್ದಾರೆ.

ರಂಜಿತ್ ಸಿನಿಮಾಗಳು ಒಂದು ಕಡೆಗೆ ವ್ಯಕ್ತಿ-ವ್ಯಕ್ತಿಗಳ ಸಂಬಂಧದ ನಡುವಿನ ಮೈಕ್ರೋ ರಾಜಕೀಯದ ಜೊತೆಗೆ ಇಡೀ ವ್ಯವಸ್ಥೆಯ ರಾಜಕೀಯವನ್ನು ಕೂಡ ಒಳಗೊಳ್ಳುವಂತಹವೇ. ’ಕಾಲ’ ಆಗಿರಲಿ, ’ಸರ್‌ಪಟ್ಟೈ ಪರಂಪರೈ’ ಆಗಿರಲಿ, ನಾಗರಿಕರನ್ನು ದಮನಿಸುವ ಸರ್ವಾಧಿಕಾರಿ ಮತ್ತು ಕನ್ಸರ್ವೇಟಿವ್ ಪಾಲಿಟಿಕ್ಸ್‌ಅನ್ನು ವಿರೋಧಿಸುವ ಎಳೆ ಇದ್ದೇ ಇರುತ್ತದೆ. ’ನಟ್ಚತಿರಮ್..’ ಸಿನಿಮಾದಲ್ಲಿ ಅದು ನೇರವಾಗಿಯೇ ಕಾಣಿಸಿಕೊಂಡಿದೆ. ಮತ್ತೆ ಇದು ಇಂದಿನ ಪರಿಸ್ಥಿ ತಿಯನ್ನು ಎದುರಿಸುವ ತುರ್ತು ಕೂಡ. ಹಲವು ಭಿನ್ನಾಭಿಪ್ರಾಯಗಳನ್ನು ಎದುರಿಸಿ, ಚರ್ಚಿಸಿ, ಕೊನೆಗೂ ನಾಟಕವನ್ನು ಪ್ರದರ್ಶಿಸಲು ಮುಂದಾದಾಗ, ಹೆಸರಿಲ್ಲದ ಗಧಾಧಾರಿ ದಾಂಡಿಗ, ’ಭವ್ಯ ಪರಂಪರೆ’ಯನ್ನು ಉಳಿಸುವ ನೆಪದಲ್ಲಿ ಪ್ರದರ್ಶನಕ್ಕೆ ಹಿಂಸಾತ್ಮಕವಾಗಿ ಅಡ್ಡಿಪಡಿಸುತ್ತಾನೆ. ಆ ದಾಂಢಿಗನಿಗೆ ಪ್ರೇಕ್ಷಕ ಯಾವ ಹೆಸರನ್ನಾದರೂ ಕೊಡಬಹುದು: ಹಿಂದುತ್ವವಾದಿ ಎನ್ನಬಹುದು, ಫ್ಯಾಸಿಸ್ಟ್, ಸರ್ವಾಧಿಕಾರಿ ಹೀಗೆ. ಮೊದಲಿಗೆ ನಾಟಕ ತಂಡ ಪೆಟ್ಟುತಿಂದು ಕುಸಿದುಬೀಳುತ್ತದೆ; ಆದರೆ ರೆನೆಯೂ ಸೇರಿದಂತೆ ಚೇತರಿಸಿಕೊಂಡ ತಂಡ ಆ ದಾಂಡಿಗನನ್ನು ಹೊರದಬ್ಬುತ್ತದೆ. ಮೊದಲು ಫ್ಯಾಸಿಸ್ಟ್‌ಗಳ ವಿರುದ್ಧ ಹೋರಾಡಿ ನಂತರ ನಮ್ಮನಮ್ಮ ನಡುವೆ ಇರುವ ತಾರತಮ್ಯಗಳನ್ನು ಸರಿಪಡಿಸಿಕೊಳ್ಳೋಣ ಎನ್ನುವ- ಸಮಾನತೆಯ ಹೋರಾಟಕ್ಕೆ ಯಾವಾಗಲು ಬರುವ ಟೀಕೆಯ ಮಾತಿಗೆ- ಇಲ್ಲ, ಎಲ್ಲ ಹೋರಾಟಗಳೂ ಒಂದಕ್ಕೊಂದು ಸಂಬಂಧಿಸಿದವೇ ಮತ್ತು ಏಕಕಾಲಕ್ಕೆ ನಡೆಯಬೇಕೆನ್ನುವಂತಿದೆ ಚಿತ್ರದ ಆಶಯ.

ಸಿನಿಮಾದ ಒಂದು ಭಾಗದಲ್ಲಿ ಇನಿಯನ್ ಜೊತೆಗೆ ಇರಬೇಕಾದರೆ ರೆನೆ ಆಕಾಶವನ್ನು ವೀಕ್ಷಿಸುತ್ತಾ ’ಬೀಳುವ ನಕ್ಷತ್ರ’ಗಳ ಬಗ್ಗೆ ಮಾತನಾಡುತ್ತಾ, ಈ ಬೃಹತ್ ವಿಶ್ವದಲ್ಲಿ ನಾವೆಲ್ಲಾ ಬಿಂದುಗಳಂತೆ, ಎಷ್ಟು ಕಿತ್ತಾಡುತ್ತೇವೆ, ಮನುಷ್ಯರು ತಾವೆಷ್ಟು ನಗಣ್ಯ ಎಂಬುದನ್ನು ಅರಿತುಕೊಂಡರೆ ಎಷ್ಟು ಒಳ್ಳೆಯದಲ್ಲವೇ ಎಂಬ ಮಾತುಗಳನ್ನಾಡುತ್ತಾಳೆ. ರೆನೆಯ ಆತ್ಮವಿಶ್ವಾಸದ, ತಾನೇ ಶೋಷಣೆಗೆ ಒಳಗಾಗಿದ್ದರೂ ಶೋಷಕರ ಬದಲಾವಣೆಗೆ ಅವಕಾಶ ನೀಡುವ ಸೌಂದರ್ಯದ, ಕೂಡಿ ಹೋರಾಡುವ ಧೈರ್ಯದ, ಎಲ್ಲರೊಟ್ಟಿಗೆ ಕಲೆತು ಬೀಚಿನಲ್ಲಿ ಕುಳಿತು ಶೂಟಿಂಗ್ ಸ್ಟಾರ್ ನೋಡುತ್ತಾ ಸಂಭ್ರಮಿಸುವ- ಈ ಇವೆಲ್ಲವಕ್ಕೂ ಬಹುಶಃ ತನ್ನ ಕೇವಲತೆಯನ್ನು ಅರ್ಥ ಮಾಡಿಕೊಳ್ಳುವ ಚೆಲುವು ಮುಖ್ಯವೆನಿಸುತ್ತದೆ. ಬುದ್ಧ-ಬಾಬಾಸಾಹೇಬ ಕರುಣಿಸಿದ ಮಾರ್ಗವದು ಎಂದು ಸಿನಿಮಾ ತನ್ನ ಸಂಭಾಷಣೆಯಲ್ಲಿಯೂ ಮತ್ತು ಸಂಕೇತಗಳಲ್ಲಿಯೂ ತುಂಬಿಕೊಂಡಿದೆ.


ಇದನ್ನೂ ಓದಿ: ನಟ್ಚತಿರಮ್ ನಗರ್ಗಿರದು: ಸೋಕಾಲ್ಡ್ ಮೇಲ್ವರ್ಗದವರಿಗೆ ಪ.ರಂಜಿತ್ ಕರುಣಿಸಿದ ಹೊಸ ಅರಿವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...